Monday, December 31, 2007

ಹೊಸ ವರುಷ

ಬೆಳ್ಳನೆ ಬೆಳಗಾಯಿತು
ನವ ವರುಷದ ಹೊಸ ಗಾಳಿಗೆ
ಇದೀಗ ಅರಳಿದ ಹೊಸ ಹೂಗಳ ಲಾಸ್ಯ
ಮುಗಿಲಿನ ಮೂಲೆಯಲ್ಲಿ ಹಾರುತಿರುವ
ಹಕ್ಕಿ ಹಿಂಡು ಬರೆಯ ಹೊರಟಿದೆ
ಹೊಸ ವರುಷಕೆ ಹೊಸ ಭಾಷ್ಯ
ಇರುಳ ಕತ್ತಲೆಯ ಕಳೆದು
ನಿನ್ನೆಗಳ ಹಳೆ ಕೊಳೆಯ ತೊಳೆದು
ಎಳೆ ಹುಲ್ಲ ಮೇಲೆ ಇಬ್ಬನಿಯ ಮುತ್ತು ಹಾಸಿ
ನಡೆಯಿರೆನ್ನುತಿದೆ ಹೊಸತೊಂದು ದಾರಿ
ಹೊಸ ವರುಷದ ನವ ಕಿರಣ
ನೆಲಕೆ ಮುತ್ತಿಟ್ಟು
ಬೆಳ್ಳನೆ ಬೆಳಗಾಯಿತು .

*********

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು .

Friday, December 7, 2007

ದೀಪ ಹಚ್ಚಬೇಕು

ಸೂರ್ಯ ಜಾರುತಿರುವನು
ಪಡುವಣದ ಬಾನಿನಂಚಲ್ಲಿ
ಹಕ್ಕಿ ಗೂಡು ಸೇರುವ ಹೊತ್ತು
ಬಾನಲ್ಲೂ ಅದೆಂಥದೋ ಮೌನದ ಛಾಪಿನೊತ್ತು
ಸೂರ್ಯ ಮರೆಯಾದಂತೆ ಮಂದವಾಗುತ್ತಿದೆ
ಒಳಗೆ ತೂರಿ ಬರುತಿದ್ದ ಬೆಳಕೂ.
ದೇವರ ಮನೆಯಲ್ಲೂ ಏಕೋ ಎಣ್ಣೆಯಿಲ್ಲದ ಪ್ರಣತಿ
ಮತ್ತಲ್ಲಿ ನಾ ಕುಳಿತು ಹಾಡಬೇಕಿದೆ ಭಕ್ತಿ ಭಾವದ ಹಾಡು.
ಸಂಜೆಯಾಗುತ್ತಲಿದೆ
ದೀಪ ಹಚ್ಚಬೇಕು
ಮನೆಯೊಳಗೆ
ಕತ್ತಲಾವರಿಸುವ ಮುನ್ನ.

ಚುಕ್ಕಿ ಚಂದ್ರಮರಿಲ್ಲದ ಬಾನು
ಮಸುಕಾಗುತಿದೆ ನೀಲಿಯೂ ತಾನು
ಸುತ್ತಲೂ ಮುಸುಕುತ್ತಿದೆ ಮಬ್ಬು
ನೋಟಕ್ಕೆ ಎಳೆಯುತ್ತ ಮಿತಿಯೆಂಬ ಗೆರೆಯ.
ಕಣ್ಣಿಗೋ ಕನಸಿಗೆ ಬಣ್ಣ ತುಂಬುವ ತವಕ
ಮತ್ತಲ್ಲಿ ನಾ ಹುಡುಕಿ ಒಟ್ಟುಗೂಡಿಸಬೇಕಿದೆ
ಚೆಲ್ಲಿ ಚದುರಿದ ಕನಸುಗಳನು.
ಸಂಜೆಯಾಗುತ್ತಲಿದೆ
ದೀಪ ಹಚ್ಚಬೇಕು
ಕಣ್ಣೊಳಗೆ
ಕತ್ತಲಾವರಿಸುವ ಮುನ್ನ.

ಮನಕಿಲ್ಲ ದಣಿವಿನ ಇರುವಿನರಿವು
ಅಲ್ಲೆಂತದೋ ಯೋಚನೆಗಳ ಝರಿ
ಕಣ್ಣ ಮುಂದೆ ಕವಲೊಡೆದು ಮಲಗಿರಲು ಈ ದಾರಿ ಆ ದಾರಿ
ಸಾಗುವುದೆಲ್ಲೆಂದು ತಿಳಿಯದೇ
ಬೆಳಕು ಕತ್ತಲೆಯಾಟದಲ್ಲಿ ಕಳೆದುಹೋಗುವೆನೆಂಬ ದಿಗಿಲು.
ಎತ್ತ ಸಾಗುಬೇಕೆನ್ನುವುದನರಿತು
ಮತ್ತಲ್ಲಿ ನಾ ಮುನ್ನಡೆದು ಮುಟ್ಟಬೇಕಿದೆ ಗುರಿಯ
ಸಂಜೆಯಾಗುತ್ತಲಿದೆ
ದೀಪ ಹಚ್ಚಬೇಕು
ಮನದೊಳಗೆ
ಕತ್ತಲಾವರಿಸುವ ಮುನ್ನ.

Wednesday, December 5, 2007

ಹಳೇ ದಾರಿ - ಹೊಸ ಭಾವ

ದಿನವೂ ಸಾಗುವುದು ಅದೇ
ಹಳೇ ದಾರಿಯಲ್ಲಿ ,
ಅಲ್ಲಿ ಎಲ್ಲವೂ ಹಳತು
ಮನಸಿಗೆ ಬರುವ ಭಾವನೆಯೂ ನಿತ್ಯ ಅದೇ ಹಳತು,
ಮತ್ತದೇ ದಾರಿ ಮತ್ತದೇ ನಿಶ್ಚಲ ನಿರ್ಜೀವ ರಾಶಿಯೆಂದು.

ಇಂದೂ ನಡೆದು ಬಂದಿದ್ದು ಮತ್ತದೇ ಹಳೇ ದಾರಿಯಲ್ಲಿ,
ಆದರಿಂದು ಅನ್ನಿಸಿದ್ದು ಎಲ್ಲವೂ ಹೊಸ ಹೊಸದು,
ನವ್ಯ ಭಾವನೆಗಳ ಪುಳಕ ಮನದಲ್ಲಿ
ಹೊಸತೊಂದು ನೋಟ ನನ್ನ ಕಣ್ಣಲ್ಲಿ
ಸುತ್ತಲಿನ ಗಾಳಿ ಹಳತಲ್ಲ ಹೊಚ್ಚ ಹೊಸದು
ನೀಲಿ ನಭದಲ್ಲಿ ತೇಲುತಿರುವ
ಬೆಳ್ಳಿ ಮೋಡವೂ ಹಳತಲ್ಲ, ಎಂಥ ನವ್ಯ ಸೊಗಸು
ಆಚೆ ಮನೆಯ ಗಿಡದಲ್ಲಿ
ಇಂದು ಅರಳಿದೆಯಲ್ಲ ಹೊಸ ಹೂವೊಂದು
ದಾರಿ ಪಕ್ಕದ ಮರದೆಡೆಯಿಂದ
ಕೇಳಿತಲ್ಲ ಹೊಸತೊಂದು ಹಕ್ಕಿಯ ಚಿಲಿಪಿಲಿ
ಆ ಮೂಲೆ ಮನೆಯ ಚಾವಣಿಯಲ್ಲೊಂದು ಜೇನು ಗೂಡು
ಎಲ್ಲಿಂದ ಬಂತು ನಿನ್ನೆ ಕಂಡಿರಲಿಲ್ಲವಲ್ಲ ಅದನಲ್ಲಿ ?

ಏನಿಂದು ಎಲ್ಲವೂ ಹೊಸ ಹೊಸತು
ಹಳೆಯದರಲ್ಲಿ ಹೊಸತನವ ಕಾಣುವ
ನನ್ನ ಮನಸ್ಸಿನ ಪ್ರೀತಿ ಹೊಸತು
ಅದೇ ಹಳೆಯ ದಾರಿಯಲ್ಲಿ
ನನ್ನ ಕಣ್ಣಲ್ಲಿನ ನೋಟ ಹೊಸತೇ ?
ನನ್ನೊಳಗಿನ ನನಗೆ ಹೊಸತನವೇ ?
ಮನದಲ್ಲಿ ನಿನ್ನೆಗಳ ನೆನಪಿನ ಹಂಗಿಲ್ಲವಿಂದು
ನಡೆದು ಬಂದರೂ ಮತ್ತದೇ ಹಳೇ ದಾರಿಯಲ್ಲಿ.
ಮನದಲ್ಲಿ ನಾಳೆಗಳ ಅರಿವಿಲ್ಲ ದಿಗಿಲಿಲ್ಲವಿಂದು
ನಾಳೆ ನಡೆಯುವುದಾದರೂ ಅದೇ ದಾರಿಯಲ್ಲಿ.

ಮತ್ತದೇ ಹಳೆಯ ದಾರಿಯೆಂಬ ಹಳೇ ಭಾವವಿರಲಿಲ್ಲ
ಇಂದು ದಾರಿಯಲ್ಲಿ ಸಾಗಿ ಬಂದಾಗ
ನಿಶ್ಚಲ ದಾರಿಗೂ ಜೀವಕಳೆಯಿತ್ತು
ಎಲ್ಲವೂ ನಿತ್ಯ ನೂತನವೆನಿಸಿತ್ತು ನನ್ನಲ್ಲಿ ನಾ ಹೊಸತನವ ಕಂಡಾಗ
ತುಟಿಯಂಚಿನಲ್ಲಿ ಹೊಸದೊಂದು ಹೂ ನಗೆಯಿತ್ತು
ಮನದೊಳಗೊಂದಿಷ್ಟು ಪ್ರೀತಿ ..