Thursday, January 24, 2008

ಕಡಲಾಚೆಯ ಗೆಳತಿಗೊಂದು ಪ್ರೀತಿಯ ಪತ್ರ














ರೆಕ್ಕೆ ಇಲ್ದೇ ಹಾರೋದು ಅಂದ್ರೆ ಹಿಂಗೇನಾ?

ಬರೀ ಹಕ್ಕಿಗಳಿಗಷ್ಟೇ ಹಾರುವುದಕ್ಕೆ ಬರುತ್ತೆ ಅಂದವರ್ಯಾರು ? ನಾವೂ ಹಾರ್ತಿದೀವಿ ನೋಡಿ, ಅಂತ ಅನ್ನುತ್ತಿದ್ದೀವೇನೆ ನಾವು? ಎಷ್ಟು ಚಂದ ಅಲ್ವಾ ಹಾಗೆ ಹಕ್ಕಿ ತರಹ ಹಾರಾಡೋ ಕಲ್ಪನೆ . ಬರೀ ಕಲ್ಪನೆ ಅನ್ನಿಸುತಿದ್ಯಾ ನಿನಗೆ ಇದು? ನಾವೆಲ್ಲ ಒಟ್ಟಿಗೆ ಒಂಥರಾ ಹಕ್ಕಿಗಳ ತರಹವೇ ಇದ್ದಿದ್ದು ಅಲ್ಲವಾ ? ಒಟ್ಟಿಗೆ ಇದ್ದ ಬೆಚ್ಚನೆಯ ಪುಟ್ಟ ಗೂಡು , ಒಬ್ಬರಿಗೊಬ್ಬರು ನೀಡುತ್ತಿದ್ದ ಪ್ರೀತಿಯೆಂಬ ಗುಟುಕು , ಸ್ವಚ್ಚಂದ ಹಾರಾಟ , ನೀಲಿ ಬಾನೆಲ್ಲ ನಮ್ಮದೇ ಆಗಿತ್ತು ಅಲ್ಲವೇನೆ ?

ಮೊನ್ನೆ ನೀ ಹೊರಟೆಯಲ್ಲ ಕಡಲಾಚೆಯ ದೂರದ ದೇಶಕ್ಕೆ ಅವತ್ತು ನಾನು ಇದೇ ಫೋಟೋ ನೋಡುತ್ತಿದ್ದೆ. ನೀ ಹೋದೆ ಅಂತ ಹೇಳಲಾ ? ಅಥವಾ ಹಾರಿ ಹೋದೆ ಅಂತ ಹೇಳಲಾ?

ಮಾತು ಮಾತಿನಲ್ಲಿ ವಿಚಾರ ಹೇಳುವುದನ್ನೇ ಮರೆತೆ ನೋಡು, ಎಷ್ಟೊಂದು ಮಾತು ಹೇಳುವುದಕ್ಕಿತ್ತು ನೋಡು. ಎಲ್ಲ ಹೇಳಲಾಗಲಿಲ್ಲ . ಮತ್ತೆ ನೀ ಹೋಗಿ 3 ದಿನಗಳಾಯ್ತು. ನಾನು ನಿನಗೆ ಒಂದೂ ಪತ್ರ ಬರೆಯದಿದ್ದರೆ ಹೇಗೆ? ನೀ ಕಾಯ್ತಾ ಇರ್ತೀಯ ಅಂತ ಗೊತ್ತು ನಂಗೆ . ಅದಕ್ಕೆ ಬರೆಯುತ್ತಾ ಇರೋದು ನಿನಗೆ ಈ ಪ್ರೀತಿಯ ಪತ್ರವನ್ನು.

ನಿನ್ನನ್ನು ನಾವೆಲ್ಲ ತುಂಬಾ ಮಿಸ್ ಮಾಡ್ಕೊಳ್ತಾ ಇದ್ದೀವಿ ಅಂತ ಹೇಳಿದರೆ ನಿಂಗೆ ತುಂಬ ಜಂಭ ಬಂದುಬಿದುತ್ತೇನೋ ಅಲ್ವೇನೆ ? ಅದಕ್ಕೆ ನಾನು ಹಂಗೆ ಹೇಳೋದೇ ಇಲ್ಲ ನೋಡು. ಆದರೆ ನಿನ್ನೆ ರಾತ್ರಿ ಆಕಾಶ ನೋಡುತ್ತಿದ್ದೆ, ಯಾಕೋ ಹಾರಾಡಬೇಕೇನಿಸಲಿಲ್ಲ ನೀನಿರಲಿಲ್ಲವಲ್ಲ ಜೊತೆಗೆ ಅದಕ್ಕೆ. ರೆಕ್ಕೆ ಮುದುರಿಕೊಂಡು ಮರದ ರೆಂಬೆ ಮೇಲೆ ಕುಳಿತ ಹಕ್ಕಿ ತರಹ ಸುಮಾರು ಹೊತ್ತು ಸುಮ್ಮನೆ ನಿಂತಿದ್ದೆ ನೋಡು ನಾನು.

ಮತ್ತೆ ಮಳೆ ಬರುವಾಗಲೂ ಐಸ್ ಕ್ರೀಮ್ ತಿನ್ನುತ್ತಿದ್ದ ನನ್ನನ್ನು ನೀ ಕೆಣಕಿದ್ದು ಯಾಕೋ ನೆನಪಾಯ್ತು . ತಣ್ಣನೆ ಗಾಳಿ ಬೀಸುತ್ತಿತ್ತಲ್ಲ ಆ ತಂಪಿಗೆ ಐಸ್ಕ್ರೀಮ್ ನೆನಪಾಗಿದ್ದಿರಬೇಕು ಅಷ್ಟೆ. ಮೊನ್ನೆ ಆ ಕಡೆಯಿಂದ ಬರ್ತಾ ನಮ್ಮಿಬ್ಬರ ಮೆಚ್ಚಿನ ಆ ಪುಟ್ಟ ಕಪ್ಪಿನ ಕಾಫಿ ಕುಡಿಯಬೇಕೆನಿಸಿತು , ಕಾಫಿ ಕುಡಿಯುತ್ತ ನೇರ ದಾರಿಯಲ್ಲೇ ಮನೆಗೆ ಬಂದೆ , ನೀ ಇದ್ದಾಗ ಕಾಫಿ ಕುಡಿಯುತ್ತ ಆಚೆಕಡೆಯ ದಾರಿಯಿಂದ ಬೇಕಂತಲೇ ಅಷ್ಟು ದೂರ ನಡೆದು ಮನೆಗೆ ಹೋಗೋಣ ಅಂತಿದ್ದೆನಲ್ಲ ( ಅಥವಾ ಹಟ ಮಾಡುತ್ತಿದ್ದೆನಾ? ) ಹಾಗೆ ಹೋಗುವ ಮನಸ್ಸಾಗಲಿಲ್ಲ ಯಾಕೋ.

ಅದೇ ಹುಡುಗಾಟ ನನ್ನ ನಗು ತಮಾಷೆ ಮಾತುಗಳೆಲ್ಲ ನನ್ನೊಳಗೇ ಇವೆ ಕಣೆ . ನಿದ್ದೆಗೆಟ್ಟು ರಾತ್ರಿಯಿಡೀ ಮಾತಾಡುವುದಕ್ಕೆ , ನನ್ನ ನಗುವಿಗೆ ನಗುವಾಗುವುದಕ್ಕೆ , ನನ್ನ ಹುಡುಗಾಟಕ್ಕೆಲ್ಲ ಬಯ್ಯುವುದಕ್ಕೆ ನೀ ಬಳಿಯಿಲ್ಲ ಅಷ್ಟೆ.

ನೀ ಹೋದಮೇಲೆ ನನ್ನ ಕಣ್ಣಿಂದ ನೀರು ಬರಲೇ ಇಲ್ಲ ಅಂತೇನು ನಾನು ಹೇಳೋದೇ ಇಲ್ಲ. ಅತ್ತು ಎಷ್ಟೋ ಹೊತ್ತಾದ ಮೇಲೂ ನನ್ನ ಮುಖ ನೋಡಿಯೇ "ಅತ್ತಿದ್ದೆ ಅಲ್ವೇನೆ" ಅಂತ ಕೇಳೋದಕ್ಕೆ ನೀನಿರಲಿಲ್ಲ ಅಷ್ಟೆ.

ಮತ್ತೆ ಇದನ್ನೆಲ್ಲಾ ಓದಿ ನಿನ್ನ ಕಣ್ಣಲ್ಲಿ ನೀರು ಬರಿಸೋ ಉದ್ದೇಶ ನಂಗಿಲ್ಲವೇ ಇಲ್ಲ ಕಣೆ, ಆದ್ರೆ ನೀನು ಹೇಗಂತ ನಂಗೆ ಗೊತ್ತು. ಅದಕ್ಕೆ ಒಂದೆರಡು ಹನಿಗಳು ಕಣ್ಣಿಂದ ಹೊರ ಬರುವುದಕ್ಕೆ ನಾನು ಅನುಮತಿ ಕೊಡ್ತಾ ಇದ್ದೇನೆ :) . ಅದಕ್ಕಿಂತ ಜಾಸ್ತಿ ಅಂದ್ರೆ ನಂಗೆ ಸಿಟ್ಟು ಬರುತ್ತೆ ನೋಡು. ಸುಮ್ಮನೆ ಒಂದು ಸಲ ನಾವ್ ಮಾಡ್ತಿದ್ದ ಕೀಟಲೆಗಳನ್ನು ನೆನಪಿಸಿಕೋ ಸಾಕು ನಗು ತಂತಾನೇ ನಿನ್ನ ತುಟಿಯ ಮೇಲೆ ಬರದಿದ್ದರೆ ಕೇಳು .

ಇನ್ನೂ ಏನೇನೋ ಹೇಳೋದಕ್ಕಿದೆ , ಇವತ್ತಿಗಿಷ್ಟು ಸಾಕು ಅಲ್ಲವಾ? ನೀ ಆಚೆಯ ದೇಶದಲ್ಲಿ ನಾವೀಚೆಯ ದೇಶದಲ್ಲಿ ಇದ್ದರೆ ಏನಾಯ್ತೆ? ಆ ನೆನಪುಗಳ ಘಮ ಘಮ ಕಂಪು , ಪ್ರೀತಿಯ ಬೆಚ್ಚನೆಯ ಸ್ನೇಹ ಸಂಬಂಧ ನಮ್ಮ ಜೊತೆಯೇ ಇದೆಯಲ್ಲವೇನೆ ? ಮತ್ಯಾಕೆ ಬೇಸರಿಸಿಕೊಳಬೇಕು ನಾವು?

ಮತ್ತೆ ಕೊನೆಯಲ್ಲಿ ಒಂದು ಮಾತು, ಇವತ್ತೂ ಮತ್ತೆ ಹೊರ ಹೋದರೆ ಆ ನೀಲಿ ಬಾನು ಕಂಡೇ ಕಾಣುತ್ತದೆ. ನೀ ಇಲ್ಲದೇ ನಾ ಹಾರೋದೆ ಇಲ್ಲ ಅಂತೇನು ಇಲ್ಲ. ನಿನ್ನೆ ಹಾರಬೇಕೆನಿಸಲಿಲ್ಲ , ಇವತ್ತೂ ಬೇಡ ಅನ್ನಿಸಬಹುದು . ಆದರೆ ನಾಳೆಯಾದರೂ ಹಾರಲೇಬೇಕು. ನೀ ಹಾರೋ ದಿಕ್ಕಿನಲ್ಲದಿದ್ದರೂ ಬೇರೊಂದು ದಿಕ್ಕಿನಲ್ಲಿಯಾದರೂ. ಹಾರುತ್ತ ಹಾರುತ್ತ ಮತ್ತೆಲ್ಲೋ ಒಂದು ಕಡೆ ಯಾವತ್ತೋ ಒಂದಿನ ಭೇಟಿಯಾಗ್ತಿವಲ್ಲವಾ ?

ಪ್ರೀತಿಯಿಂದ
ನಿನ್ನ ಪ್ರೀತಿಯ ಗೆಳತಿ

5 comments:

ಸ್ಮಿತಾ said...

Shyama thank you kane thank you very much, Alsbittya konegu :-( .....Miss u a lot shyama... Nam gelethana yawaglu hasragiye huliyutte navu eshte doora idru... Dewrali onde ondu prarthane bega navellaru matte agasadalli jothege haro age madu antha..Miss u a lot

ಸುಪ್ತದೀಪ್ತಿ suptadeepti said...

ಶ್ಯಾಮಾ, ಈ ಪತ್ರಕ್ಕೂ ಮೊನ್ನೆಯ ಕನಸುಗಳಿಗೂ ಸಂಬಂಧ ಇದ್ಯಲ್ಲ!

jomon varghese said...

ನಮಸ್ತೆ,

ಮೊದಲ ಬಾರಿಗೆ ನಿಮ್ಮ ಬ್ಲಾಗ್‌ಗೆ ಭೇಟಿ ಕೊಡ್ತಾ ಇದೀನಿ. ತುಂಬಾ ಚೆನ್ನಾಗಿದೆ. ಒಳ್ಳೆಯ ಬರವಣಿಗೆ. ಕಡಲಾಚೆಯ ಗೆಳತಿಗೆ ಬರೆದಿರುವ ಪತ್ರ ನವಿರಾಗಿದೆ. ಆಗಾಗ್ಗ ನೆನಪಿನಂಗಳದಿಂದ ಒಂದಿಷ್ಟು.. ಬರೀತಾ ಇರಿ. ಬರುತ್ತಿರುತೇವೆ.

ಧನ್ಯವಾದಗಳು.
ಜೋಮನ್.

ಶ್ರೀನಿಧಿ.ಡಿ.ಎಸ್ said...

ahaa.. super!:) sumar dinadana nantra kootu ninna ella baaki uLida baraha odide!

ಶ್ಯಾಮಾ said...

@ smitha

Miss u too kane

ಬೇಜಾರಾಗಬೇಡ. ಬೇಗ ಬರುತ್ತೆ ಮತ್ತೆ ಎಲ್ಲರೂ ಒಟ್ಟಿಗೇ ಹಾರಡೋ ದಿನ :)

@suptadeepti

ಹಾಗನಿಸುತ್ತಿದ್ಯಾ? ಇದ್ರೂ ಇರಬಹುದು. :)

@ ಜೋಮನ್
ಸ್ವಾಗತ ನಿಮಗೆ ನನ್ನ ಬ್ಲಾಗಿನ ಅಂಗಳಕ್ಕೆ. ಹೀಗೆ ಆಗಾಗ ಭೇಟಿಕೊಟ್ಟು ಪ್ರತಿಕ್ರಿಯಿಸುತ್ತಿರಿ.
ಧನ್ಯವಾದಗಳು.

@ ಶ್ರೀನಿಧಿ

Thanks :)