Tuesday, April 1, 2008

ನನ್ನ ಸುತ್ತ- ನನಗೆ ಗೊತ್ತಿಲ್ಲದ್ದು

ನನ್ನ ಸುತ್ತಲೂ ನಾನೇ ಹಾಕಿದ ಬೇಲಿ
ಬೇಲಿ ದಾಟಿ ಎಂದೂ ಹೊರಹೋಗಬಾರದೆಂದು
ನನಗೆ ನಾನೇ ಹಾಕಿದ ಬೇಲಿಯೋ
ಅಥವಾ ಬೇಲಿ ದಾಟಿ ಯಾರೂ ಒಳಬರಬಾರದೆಂದು
ನಾನು ಹಾಕಿದ ಬೇಲಿಯೋ ಗೊತ್ತಿಲ್ಲ.
ಅಂತೂ ನಾನೂ ಬೇಲಿ ದಾಟಿ ಹೊರ ಹೋಗಲಿಲ್ಲ
ಬೇಲಿ ದಾಟಿ ಯಾರೂ ಒಳ ಬರಲೂ ಇಲ್ಲ.

ನನ್ನ ಸುತ್ತಲೂ ಮಾತು-ಮೌನಗಳ ಯುದ್ಧ
ಮಾತು ಹೊರಬಂದು ಅರ್ಥಕಳೆದುಕೊಳ್ಳಬಾರದೆಂದು
ಮೌನವನ್ನು ಬಯಸಿದೆನೋ

ಅಥವಾ ಅರ್ಥವಿಲ್ಲದ ಮಾತಾಡಿ ನನ್ನೊಳಗಿನ ನಾನು ಕಳೆದುಹೋಗಬಾರದೆಂದು
ಮಾತುಗಳನ್ನು ಆಡದೇ ಬಚ್ಚಿಟ್ಟೆನೋ ಗೊತ್ತಿಲ್ಲ.
ಅಂತೂ ಮಾತು ಸೋತು ಒಳಗೇ ಸತ್ತಿತು
ಮೌನ ಗೆದ್ದೂ ಸೋತು ಶರಣಾಯಿತು.

ನನ್ನ ಸುತ್ತಲೂ ಅರ್ಧ ಹಾಡಿದ ಹಾಡಿನ ಸಾಲುಗಳು
ರಾಗ ಮರೆತುಹೋಗಿ ಹಾಡಿನ ಭಾವ ಬದಲಾಗಬಾರದೆಂದು
ಅರ್ಧ ಹಾಡಿ ನಿಲ್ಲಿಸಿದ ಹಾಡೋ
ಅಥವಾ ನನ್ನೊಳಗಿನ ಭಾವ ಬತ್ತಿಹೋಗಿ,ಮತ್ತೆ ಭಾವನೆಗಳ ಸುಳಿಗೆ ಸಿಲುಕಬಾರದೆಂದು
ಅರ್ಧ ಹಾಡಿದ ಹಾಡೋ ಗೊತ್ತಿಲ್ಲ.
ಅಂತೂ ಹಾಡಿನ ಭಾವವೂ ಬದಲಾಗಲಿಲ್ಲ
ಅರ್ಧ ಹಾಡಿನ ಸಾಲುಗಳು ಬತ್ತಿದ ಭಾವನೆಗಳ ಅಣಕಿಸುವುದೂ ನಿಲ್ಲಲಿಲ್ಲ.

10 comments:

Sandeepa said...

ಇದು ಯಾವ್ ಫಾಂಟು, ಯಾವ್ ಭಾಷೆ?
ನಂಗಂತು ಪೂರ್ತಿ ಅನ್ರೀಡಬಲ್ಲು!!

ವಿ.ರಾ.ಹೆ. said...

ನಂಗೂವ !!

Sree said...

ಹಾಯ್ ಶ್ಯಾಮಾ,
ಬ್ಲಾಗರ್ಸ್ ಮೀಟ್‌ನಲ್ಲಿ ನಾವು ಭೇಟಿಯಾಗಿದ್ವಿ, ಆಗ ನಾನು ಈ ಬ್ಲಾಗ್ ಇನ್ನೂ ನೋಡಿರ್ಲಿಲ್ಲ. ಈಗ ಹಳೆಯ ಪೋಸ್ಟ್‌ಗಳನ್ನೆಲ್ಲಾ ಒಂದೊಂದಾಗಿ ಓದ್ತಿದ್ದೀನಿ, ನಂಗೆ ’ನಕ್ಷತ್ರಮೀನು’ ತುಂಬಾ ಇಷ್ಟ ಆಯ್ತು! ಈ ಪೋಸ್ಟಿನಲ್ಲಿ junk characters ಬರ್ತಿದೆ...ಏನು ಸಮಸ್ಯೆ ಗೊತ್ತಿಲ್ಲ...

ರಂಜನಾ ಹೆಗ್ಡೆ said...

ನಂಗೂ ಗೊತ್ತಿಲ್ಲದ್ದು? ಎನ್ ಸಮಸ್ಯೆ ಕೂಸೆ?

ಶ್ಯಾಮಾ said...

ಎಲ್ಲರಿಗೂ,

:) :) ಏನೋ ತರಲೆಮಾಡಕ್ಕೆ ಹೋಗಿ ಅಥವಾ ತಲೆ ಉಪಯೋಗಿಸಕ್ಕೆ ಹೋಗಿ ಏನೋ ಮಾಡ್ಬಿಟ್ಟಿದ್ದೆ.:) ನಂಗೆ ಮಾತ್ರ ಅಕ್ಷರಗಳು ಸರಿಯಾಗಿ ಕಾಣ್ತಾ ಇದ್ವು. ಈಗ ಎಲ್ಲರಿಗೂ ಕಾಣೋ ಹಂಗೆ ಮಾಡಿದ್ದೀನಿ.

Thanks

Sree

ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಬ್ಲಾಗ್ ಸುಮಾರು ಸಲ ಓದಿದ್ದೆ ನಾನು. ಚೆನ್ನಾಗಿ ಬರಿತೀರ ನೀವು. Thanks ’ನಕ್ಷತ್ರಮೀನು’ ಮೆಚ್ಚುಕೊಂಡಿದ್ದಕ್ಕೆ, ತುಂಬ ಇಷ್ಟಪಟ್ಟು ಬರ್ದಿದ್ದು ಅದು.
ಹೀಗೆ ಬರ್ತಾ ಇರಿ ಈ ಕಡೆ.

Jagali bhaagavata said...

ರಜೆ ಇಷ್ಟು ಬೇಗ ಮುಗೀತಾ? :-(

ಕಂಡಾಪಟ್ಟೆ ಸ್ಪೆಲ್ಲಿಂಗ್ ಮಿಸ್ಟೀಕುಗಳು. ಮಸಾಲೆ ದೋಸೆ ಲೆಕ್ಕ ಆರಕ್ಕೆ ಹೋಯ್ತೀಗ :-)

ಶ್ಯಾಮಾ said...

ಯಾರಪ್ಪಾ ಅದು ಸ್ಪೆಲಿಂಗ್ ಮಿಸ್ಟೇಕ್ಸ್ ಅಂದವ್ರು. ಏನೂ ಮಿಸ್ಟೇಕ್ ಇಲ್ಲಾ ಈಗ. :)

ಹೌದು ಮತ್ತೆ ಸ್ಕೂಲ್ ಮಕ್ಳ ತರ ಎರಡು ತಿಂಗಳು ರಜೆ ಕೊಡಕ್ಕೆ ಆಗಲ್ವಲ್ಲ
:)

ಸ್ಮಿತಾ said...

ನನ್ನ ಸುತ್ತಲೂ ಮಾತು-ಮೌನಗಳ ಯುದ್ಧ
ಮಾತು ಹೊರಬಂದು ಅರ್ಥಕಳೆದುಕೊಳ್ಳಬಾರದೆಂದು
ಮೌನವನ್ನು ಬಯಸಿದೆನೋ
ಅಥವಾ ಅರ್ಥವಿಲ್ಲದ ಮಾತಾಡಿ ನನ್ನೊಳಗಿನ ನಾನು ಕಳೆದುಹೋಗಬಾರದೆಂದು
ಮಾತುಗಳನ್ನು ಆಡದೇ ಬಚ್ಚಿಟ್ಟೆನೋ ಗೊತ್ತಿಲ್ಲ.
ಅಂತೂ ಮಾತು ಸೋತು ಒಳಗೇ ಸತ್ತಿತು
ಮೌನ ಗೆದ್ದೂ ಸೋತು ಶರಣಾಯಿತು.

Idu nange tumba ishta aythu shyami.

Sree said...

ಥ್ಯಾಂಕ್ಯೂ:) ತುಂಬಾ ಇಷ್ಟಪಟ್ಟು ಬರ್ದಿದ್ದು ಅನ್ನೋದು ಬರಹದಲ್ಲೇ ಗೊತ್ತಾಗ್ತಿದೆ:)
ಈ ಕವನವೂ ಇಷ್ಟವಾಯ್ತು, ಅವತ್ತು ನಾನು ಮೀಟ್ ಮಾಡಿದ ಪುಟು-ಪುಟು ಪುಟ್ಟ ಹುಡುಗಿಯಲ್ಲಿ ನಿರೀಕ್ಷಿಸದ ಮೆಚ್ಯೂರಿಟಿ ಭಾವದಲ್ಲಿ ಇದೆ ಅನ್ನಿಸ್ತು:)
ಮೊದಲ stanza ಇನ್ನೂ ಸ್ವಲ್ಪ ಕಾವ್ಯಕ್ಕೆ ಒಗ್ಗಿಸಬಹುದಿತ್ತೇನೋ ಅನ್ನಿಸ್ತು, ಮುಂದಿನೆರಡು ಚರಣಗಳಲ್ಲಿ ಕಾವ್ಯದ ಲಾಲಿತ್ಯ ಇನ್ನೂ ಚೆನ್ನಾಗಿ ಬಂದಿದೆ ಅನ್ನಿಸ್ತು - ofcourse ಇದು ಅವಿತೆ ಬರ್ದು ಅಭ್ಯಾಸವಿಲ್ಲದ ನನ್ನ ಅನಿಸಿಕೆಯಷ್ಟೆ...

ಶ್ಯಾಮಾ said...

ಸ್ಮಿತಾ,

ಹೌದು. ಅದು ಎಷ್ಟೋ ವಿಷ್ಯಗಳಲ್ಲಿ ಎಷ್ಟು ಸತ್ಯ ಅಲ್ವ್ವ.

ಥ್ಯಾಂಕ್ಸ್ ಕಣೆ.

Sree,

:).
ಪುಟಾಣಿ ಪುಟ್ಟಿ ತಲೆಯಲ್ಲಿ ಹೀಗೇ ಏನೇನೋ ಆಲೋಚನೆ ಯಾವಾಗ್ಲಾದ್ರು ಬರ್ತಿರುತ್ತೆ :).

ನೀವು ಹೇಳಿದ್ದು ಸರಿನೇ. ಆದರೆ ಮನಸಲ್ಲಿ ಒಂದು ಸಲ 4 ಸಾಲು ನೆಟ್ಟಿಬಿಟ್ರೆ ಆಮೆಲೆ ಎಷ್ಟು ಯೋಚ್ನೆ ಮಾಡಿದ್ರೂ ಬೇರೆ ಸಾಲು ಮೂಡೋದು ಕಷ್ಟ. ಅದೇ ಅದೇ ಸಾಲೇ ಬರುತ್ತೆ ತಲೆ ಒಳಗೆ. ಮನಸಲ್ಲಿ ಮೊದಲು ಮೂಡಿದ್ದು ಆ ಮೋದಲ stanza. ಆಮೇಲೆ ಬದಲಾಯಿಸಕ್ಕೆ ಪ್ರಯತ್ನ ಮಾಡಿದ್ರೂ ಆಗಲಿಲ್ಲ.

ಧನ್ಯವಾದಗಳು ಅಭಿಪ್ರಾಯಕ್ಕೆ :)