Tuesday, June 24, 2008

ಏಕಾಂತ

ಅಂತ್ಯರಿವಿಲ್ಲದ ಏಕಾಂತ
ಹನಿ ಹನಿದು ಸುರಿದ ಮಳೆ ನಿಂತ ಹೊತ್ತು
ಬೆಳಗೋ ಬೈಗೋ ಅರಿವಿಲ್ಲವಿನಿತೂ
ಕಾರ್ಮುಗಿಲ ಮುಸುಕು ಹೊದ್ದು
ಆಗಸವು
ಮಲಗಿರಲು
ಸಪ್ತ ಸ್ವರಗಳ, ರಾಗ-ತಾಳಗಳ
ನೆನಪಿನ ಮೇಳ ಮನದ ಅಂಗಳದಲ್ಲಿ.
"ನಿ ರೆ ಸಾ"
ತುಟಿಯ ಮೇಲೆ ಸ್ವರಗಳು
ಲಾಸ್ಯವಾಡುತಿರೆ
ಮನದಲ್ಲಿ ಮತ್ತ್ಯಾವುದೋ ರಾಗದಾ ನೆನಹು.
"ಸಾ ರೆ ನಿ ಸಾ"
ಸ್ವರವುಕ್ಕಿ ಬರಲು
ತಾನ ಗಾನದ ಲಹರಿ
ಹರಿವ ನದಿಯಂತೆ ಮನದಿ.
ಕಿಟಕಿಯಾಚೆಯಿಂದ ಬಂದ
ತಿಳಿಬಿಸಿಲ
ಕೋಲು
ಚಿನ್ನದೆಳೆಯಂತೆ ಹೊಳೆಹೊಳೆದು
ಕಣ್ಣೆವೆಗಳ ಸೋಕಿದಾಗ
ಹೊಸತಾಗಿ ಕಂಡಿತ್ತು
ರಾಗಲಹರಿಯಲಿ
ಮಿಂದ
ಸುತ್ತಲಿನ ಏಕಾಂತದ ಲೋಕ.
ಮತ್ತೆ ಹನಿ ಹನಿದು ಮಳೆ ಜಿಮುರಿ ಬರಲು
ಕಾರ್ಮುಗಿಲು ಕರಗಿ ಆಗಸವು ತಿಳಿಯಾಗಿ
ಅಲ್ಲೇ ಅಂಚಲ್ಲಿ ನಗುತಿತ್ತು ಕಾಮನಬಿಲ್ಲು.
ಇನಿದನಿಯ ಹಕ್ಕಿ ಹಿಂಡು
ಬಾನಿನಾಚೆ ಹಾರುತಿರೆ,
ತುಂಬಿ ಬಂದ ಮನವು ಉಲಿಯಿತು ಮೆಲ್ಲನೆ
ಏಕಾಂತದಲೂ ಇದೆಯೇ ಪರಿಯ ಚೆಲುವು?


7 comments:

ತೇಜಸ್ವಿನಿ ಹೆಗಡೆ said...

ಶ್ಯಾಮಾ,

"ಏಕಾಂತದಲೂ ಇದೆಯೇ ಈ ಪರಿಯ ಚೆಲುವು?"

ನಿಜ. ಕೆಲವೊಮ್ಮೆ ಏಕಾಂತ ಕೊಡುವ ಶಾಂತಿ, ನೆಮ್ಮದಿ ಯಾವುದರಿಂದಲೂ ಸಿಗದು. ಹಾಗಾಗಿಯೇ ಏಕಾಂತವೂ ಚೆಲುವೆನಿಸುವುದು.

Sushrutha Dodderi said...

ಏಕಾಂತದಲ್ಲೇ ಏಮೂ ಇರೋದು ಚೆಲುವು, ಒಲವು, ಗೆಲುವು, ನಲಿವು ಎಲ್ಲ.

ಚಂದ ಶಬ್ದಗಳನ್ನು ಧರಿಸಿದ ಸುಂದರ ಕವಿತೆ.

ಮನಸ್ವಿ said...

ತುಂಬಾ ಚನ್ನಾಗಿ ಕವಿತೆ ಮೂಡಿ ಬಂದಿದೆ

ಶಾಂತಿ,ನೆಮ್ಮದಿ,ನಲಿವು ಅಲ್ಲದೆ
ದುಃಖ-ದುಮ್ಮಾನ,
ಕೋಪ-ತಾಪ ಮರೆಸುವ ದಿವ್ಯ ಔಷದ ಏಕಾಂತದಲ್ಲೇ ಇದೆ ಅನಿಸುತ್ತದೆ.

Sree said...

ಅಂತ್ಯದರಿವಿಲ್ಲದ ಏಕಾಂತಕ್ಕೆ ಹನಿ ಹನಿದು ಸುರಿವ ಮಳೆ ನಿಂತ ಹೊತ್ತಿನ ಚಿತ್ರ perfect! ಚೆನ್ನಾಗಿದೆ:)

ಸ್ಮಿತಾ said...

Chanagide shyami :)

Jagali bhaagavata said...

ಏಮೂ,

’ಏ’ ’ಕಾಂತ’ ಅಂತ ಯಾರನ್ನ ಕರೀತಾ ಇದೀಯಾ?:-)

ಮನಸ್ವಿನಿ said...

ಚಂದದ ಕವನ. ಪದಗಳ ನೇಯ್ಗೆ ಇಷ್ಟವಾಯಿತು.