Thursday, July 5, 2007

ಆ ಕಥೆ ಅಂದ್ರೆ ನಂಗೆ ಸಿಟ್ಟು

ರಾತ್ರಿ 9 ಆಸುಪಾಸು .ನಾವೆಲ್ಲ ಊಟ ಮಾಡುತ್ತಾ ಇದ್ದೆವು. ಯಾರೋ ಬಾಗಿಲು ಬಡಿದ ಸದ್ದಾಯಿತು. ಯಾರೋ ಎದ್ದು ಹೋಗಿ ಬಾಗಿಲು ತೆರೆದರು. ಬಂದಿದ್ದು ಯಾರು ಇಷ್ಟು ಹೊತ್ತಲ್ಲಿ ಅಂತ ನಾವೆಲ್ಲ ಬಗ್ಗಿ ನೋಡಿದರೆ ಎದುರಿಗೆ ನಿಂತಿದ್ದು ದೀಕ್ಷಾ. ಮೂರೂವರೆ ವರ್ಷದ ಪುಟಾಣಿ. ಅವಳಮ್ಮ ಕೆಲಸಕ್ಕೆ ಹೋಗುವುದರಿಂದ ದಿನಾ ಬೆಳಿಗ್ಗೆ ಇಂದ ಸಂಜೆವರೆಗೆ ಅವಳು ಅವಳ ಅಜ್ಜಿ ಮನೆಯಲ್ಲೇ ಇರುವುದು. ಸಂಜೆ 7-8 ಗಂಟೆಗೆಲ್ಲ ಮನೆಗೆ ಹೋಗುತ್ತಾಳೆ.ಆದ್ರೆ ಇವತ್ತು ಇದೇನು ರಾತ್ರಿ 9 ಗಂಟೆ ಹೊತ್ತಿಗೆ ಇಲ್ಲಿ? ಅಂದುಕೊಂಡು ಅವಳನ್ನು ಕೇಳಿದರೆ ಅಪ್ಪ ಅಮ್ಮ ಸಿನೆಮಾಗೆ ಹೋದ್ರು ಅದ್ಕೆ ನಾನು ಇಲ್ಲಿ ಬಂದೆ ಅಂದಳು. ಯಾಕೆ ನೀನು ಹೋಗಬೇಕಾಗಿತ್ತು ಚೆನ್ನಾಗಿರುತ್ತೆ ಸಿನೆಮಾ ಅಂದ್ರೆ "ನಂಗೆ ಇಷ್ಟ ಇಲ್ಲ .ಬೇಜಾರಾಗುತ್ತೆ ಅಲ್ಲಿ .ಅದಕ್ಕೆ ನಾನೇ ಬರಲ್ಲ ಅಂತ ಅಂದೆ "ಅಂದಳು.

ಹೋಗ್ಲಿ ಬಿಡು ಅಂತ ನಾವೆಲ್ಲ ಅವಳ ಜೊತೆ ಅದು ಇದು ಮಾತಡುತ್ತಾ ಊಟ ಮಾಡಿದೆವು ನಮ್ಮ ಜೊತೆ ಅವಳಿಗೂ ಒಂದೊಂದು ತುತ್ತನ್ನಿಡುತ್ತಾ. ಊಟ ಮುಗಿಸಿ ಮೇಲುಗಡೆ ರೂಮಿಗೆ ಹೊರಟರೆ ಬಾಲದಂತೆ ನಮ್ಮ ಹಿಂದೆಯೇ ಬಂದಳು ಪುಟ್ಟಿ. ಅವಳ ಅಜ್ಜಿ ಕರೆಯುತ್ತಿದ್ದರು "ಅವರೆಲ್ಲ ಮಲಗುತ್ತಾರೆ ಈಗ ನೀನು ಅಲ್ಲಿ ಹೋಗಿ ಗಲಾಟೆ ಮಾಡೋದು ಬೇಡ ಬಾರೆ ಕೆಳಗೆ.." ಅದೆಲ್ಲ ಎಲ್ಲಿ ಕೇಳಬೇಕು ದೀಕ್ಷಾಗೆ ಆವಾಗಲೇ ನಮಗಿಂತ ಮುಂದೆ ಓಡಿ ಹೋಗಿಯಾಗಿತ್ತು.

ಮೇಲೆ ಬಂದವಳೇ ಮಂಗನಂತೆ ಅಲ್ಲೆಲ್ಲ ಹತ್ತುವುದು ಹಾರುವುದು ಒಂದೇ ಎರಡೇ ಅವಳ ತುಂಟಾಟಗಳು. ನಾವೂ ಸುಮ್ಮನಿರದೇ ಅವಳನ್ನು ರೇಗಿಸುತ್ತಿದ್ದೆವು. ಅವಳಿನ್ನೂ ಆಡುತ್ತಲೇ ಇದ್ದಳು. ನಾನು ಮಲಗಲೆಂದು ನನ್ನ ರೂಮಿಗೆ ಹೋಗಿ ಯಾವುದೋ ಪುಸ್ತಕ ಓದುತ್ತಾ ಮಲಗಿದ್ದೆ..

ಸ್ವಲ್ಪ ಹೊತ್ತಿಗೆ ದೀಕ್ಷ ಒಳಗೆ ಬಂದಳು. ಅವಳತ್ತ ನೋಡಿದರೆ ತುಂಬಾ ಬೇಜಾರಾದವಳಂತೆ ಕಂಡಳು. ಹತ್ತಿರ ಬಂದವಳೇ ಅಂದಳು "ನಂಗೆ ಅಮ್ಮನ ಆಸೆ ಆಗ್ತಿದೆ, ಏನು ಮಾಡಲಿ ನಂಗೆ ಅಮ್ಮನ ಆಸೆ ಆಗ್ತಿದೆ". ಅಂದರೆ ಅವಳಿಗೆ ಅಮ್ಮ ಬೇಕು ಅಂತ ಆಸೆ ಆಗ್ತಿದೆ ಅಂತ. ಪಾಪ ಅನ್ನಿಸ್ತು. "ಯಾಕೆ ಅಷ್ಟು ಬೇಜಾರು ಪುಟ್ಟ ?ಅಮ್ಮ ಬಂದು ಬಿಡ್ತಾಳೆ ಬೇಗ ನೀನು ಸುಮ್ನೇ ಮಲಗು ಸ್ವಲ್ಪ ಹೊತ್ತು. ಅಷ್ಟೊತ್ತಿಗೆ ಅಮ್ಮ ಬರ್ತಾಳೆ "ಅಂದೆ. 3 ವರ್ಷದ ಪೋರಿಗೆ ನಾನು ಇನ್ನೇನು ತಾನೆ ಸಮಾಧಾನ ಹೇಳಲು ಸಾಧ್ಯ. ಆದರೂ ಅವಳಿಗೆ ಸಮಾಧಾನ ಆಗಲಿಲ್ಲ. ಮತ್ತೆ ಹೇಳುತ್ತಲೇ ಇದ್ದಳು "ನಂಗೆ ಅಮ್ಮನ ಆಸೆ ಆಗ್ತಿದೆ" ಅಂತ . ಬಾ ಇಲ್ಲಿ ನನ್ನ ಜೊತೆ ಮಲಗು ನಿಂಗೆ ಕಥೆ ಹೇಳ್ತೀನಿ ಅಂತ ಅವಳನ್ನು ಎತ್ತಿಕೊಂಡು ಪಕ್ಕದಲ್ಲಿ ಮಲಗಿಸಿಕೊಂಡೆ.

ಪಿಳಿ ಪಿಳಿ ಕಣ್ಣು ಬಿಡುತ್ತಾ ನನ್ನ ಪಕ್ಕ 2 ನಿಮಿಷ ಸುಮ್ಮನೇ ಮಲಗಿದ್ದಳು. ನಾನು ನನ್ನಷ್ಟಕ್ಕೆ ಪುಸ್ತಕ ಓದುತ್ತಿದ್ದೆ. 2 ನಿಮಿಷ ಆಗಿರಲಿಲ್ಲ "ಕಥೆ ಹೇಳ್ತೀನಿ ಅಂದೇ ಹೇಳು ಮತ್ತೆ "ಅಂದಳು. ಹೌದಾಲ್ವಾ ಅಂತ ಅಂದುಕೊಂಡು ನಾನು ಏನು ಕಥೆ ಹೇಳಲಿ ಇವಳಿಗೆ ಅಂತ ಯೋಚನೆ ಮಾಡುತ್ತಿದ್ದೆ. ಯಾಕೋ ಪುಣ್ಯಕೋಟಿ ಕಥೆ ನೆನಪಾಯಿತು. ಅದನ್ನೇ ಹೇಳೋಣವೆಂದುಕೊಂಡು "ನಿಂಗೆ ಪುಣ್ಯಕೋಟಿ ಕಥೆ ಹೇಳ್ತೀನಿ ಆಯ್ತಾ" ಅಂದೆ ತಕ್ಷಣ ಅವಳು ಕೂಗಿದಳು"ಬೇಡ ಬೇಡ ನಂಗೆ ಕಥೆ ಅಂದರೆ ಸಿಟ್ಟು ಅದನ್ನ ಹೇಳೋದು ಬೇಡ". ಅರೆ ಇದೇನಿದು ಹೀಗೆ ಹೇಳುತ್ತಿದ್ದಾಳಲ್ಲ ಇಷ್ಟೊಳ್ಳೆ ಕಥೆಗೆ ಅಂದುಕೊಂಡೆ. ಅವಳಿಗೆ ಒಂದು ಸಲ ಯಾವಾಗಾದರೂ ಕಥೆ ಹೇಳಿದರೆ ಮರೆಯೋದೇ ಇಲ್ಲ ಅಷ್ಟು ಚೆನ್ನಾಗಿ ನೆನಪಿಟ್ಟುಕೊಳ್ಳುತ್ತಾಳೆ. ಹಾಗೆ ನಾನೇ ಯಾವಾಗಾದ್ರೂ ಹೇಳಿರಬಹುದು ಕಥೇನ ಅಂದುಕೊಂಡೆ. ಆದರೆ ಕಥೆ ಬಗ್ಗೆ ಸಿಟ್ಟು ಯಾಕೆ ಅಂತ ಅರ್ಥ ಆಗಲಿಲ್ಲ. ಇರಲಿ ಎಂದುಕೊಂಡು "ಇಲ್ವೆ ಚೆನ್ನಾಗಿದೆ ಕಥೆ ಹೇಳ್ತಿ ಕೇಳು" ಅಂದೆ. ಮತ್ತೆ ಕೂಗಿದಳು "ಬೇಡ ನಂಗೆ ಕಥೆ ಅಂದ್ರೆ ಸಿಟ್ಟು". ಇದೊಳ್ಳೇ ಕಥೆ ಆಯ್ತಲ್ಲ ಅಂದುಕೊಂಡು ಸರಿ ಹಾಗಾದ್ರೆ ಕಥೆ ಬೇಡ ಹಾಡು ಹೇಳಿಕೊಡ್ತೀನಿ ಅಂತ ಶುರುಮಾಡಿದೆ "ಧರಣಿ ಮಂಡಲ ಮಧ್ಯದೊಳಗೆ" ಅಂತ .

ನಾನು ಹೇಳಿಕೊಟ್ಟ ಹಾಗೆ ಹೇಳುತ್ತಾ ಹೋದಳು. 7-8 ಸಾಲುಗಳು ಮುಗಿದಿರಲಿಲ್ಲ ಮತ್ತೆ ನನ್ನತ್ತ ತಿರುಗಿ ಹೇಳಿದಳು " ನಾನು ಆಗಲೇ ಹೇಳಿದ್ನಲ್ಲ ನಂಗೆ ಕಥೆ ಅಂದ್ರ ಸಿಟ್ಟು ಅಂತ ಅದಕ್ಕೆ ಬೇಡ ಹಾಡೂ ಬೇಡ". ನಾನು ಯೋಚನೆ ಮಾಡಿದೆ ಇವಳಿಗೆ ಇಷ್ಟೆಲ್ಲಾ ಸಿಟ್ಟಿರಬೇಕಾದರೆ ಆ ಕಥೆ ಬಗ್ಗೆ ಏನಾದರೂ ಕಾರಣ ಇರಲೇಬೇಕು ಅಂತ "ಯಾಕೆ ಗುಂಡಿ ಯಾಕೆ ಸಿಟ್ಟು ನಿಂಗೆ ಕಥೆ ಮೇಲೆ" ಅಂತ ಕೇಳಿಯೇಬಿಟ್ಟೆ. ಅದಕ್ಕೆ ಅವಳಂದಳು "ಮತ್ತೆ ಕಥೆಯಲ್ಲಿ ಪುಟ್ಟ ಕರುವನ್ನು ಅದರ ಅಮ್ಮ ಬಿಟ್ಟು ಹೋಗುತ್ತಲ್ಲ , ಆಗ ಆ ಕರುಗೆ ಎಷ್ಟು ಬೇಜಾರಗುತ್ತಲ್ಲ ಪಾಪ. ಅದನ್ನು ಕೇಳಿದರೆ ನಂಗೂ ಅಮ್ಮನ ಆಸೆ ಆಗಲ್ವಾ ಮತ್ತೆ. ಅದಕ್ಕೆ ನಂಗೆ ಸಿಟ್ಟು ". ಎಷ್ಟು ಯೋಚನೆ ಮಾಡುತ್ತಾಳಪ್ಪಾ ಈ ಪುಟ್ಟ ಹುಡುಗಿ ಅನ್ನಿಸಿಬಿಡ್ತು. ನಂಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಇಷ್ಟು ಚಿಕ್ಕ ಮಗು ಇಷ್ಟೆಲ್ಲಾ ಯೋಚನೆ ಮಾಡುತ್ತಾ ಅನ್ನಿಸಿತು. ಕೆಲಸಕ್ಕೆ ಹೋಗುವ ಮಹಿಳೆಯರು ಮಕ್ಕಳನ್ನು ಅಜ್ಜಿ ಮನೆಯಲ್ಲೋ ಪ್ಲೆ ಹೋಮ್ ಅಲ್ಲೋ ಬಿಡುವುದು ಈಗ
ಸಾಮಾನ್ಯ. ಆದರೆ ಮಕ್ಕಳ ಮನಸ್ಥಿತಿ ಏನು ಅಂತ ಯಾರು ಅರಿಯುವವರು?

ಏನೇನೋ ಯೋಚನೆಗಳು ನನ್ನ ತಲೆಯಲ್ಲಿ ಸುತ್ತಲು ಆರಂಭಿಸುವಷ್ಟರಲ್ಲಿ ದೀಕ್ಷ ನನ್ನ ಕರೆಯುತ್ತಿದ್ದಳು "ನಂಗೆ ಬೇರೆ ಕಥೆ ಹೇಳು ಮಂಗನ ಕಥೆ ". ನಗು ಬಂತು. "ಸರಿ ನಿಂಗೆ ಮಂಗನ ಕಥೆನೆ ಹೇಳ್ತೀನಿ" ಅಂತ ಮಂಗಗಳ ಉಪವಾಸ ಕಥೆ ಹೇಳಿದೆ. ಅವಳಿಗಂತೂ ಖುಷಿಯೋ ಖುಷಿ.

ಮರುದಿನ ಅವಳು ಬಂದಾಗ ತಿನ್ನಲು ಒಂದು ಬಾಳೆಹಣ್ಣು ಕೊಟ್ಟರೆ ನಾ ಹೇಳಿದ ಮಂಗನ ಕಥೆಯನ್ನು ಮತ್ತೆ ನನಗೇ
ಹೇಳುತ್ತಾ ಬಾಳೆಹಣ್ಣು ಗುಳುಂ ಮಾಡಿ ನಗುತ್ತಿದ್ದಳು. ನಾನು ಅವಳ ನಗುವಿನಲ್ಲಿ ಕರಗಿ ಹೋದೆ.

5 comments:

ಸಿಂಧು sindhu said...

ಶ್ಯಾಮಾ,

ಚೆನಾಗಿದೆ..
ನಿಮ್ ನೆನಪಿನಂಗಳದಲ್ಲಿ ಆಡಿ ಖುಶಿಯಾಯ್ತು.

Sushrutha Dodderi said...

Very nicely written!

Anonymous said...

ಶ್ಯಾಮ,
ತುಂಬಾ ಚನ್ನಾಗಿ ಬರದ್ದೆ. ಅಲ್ದೆ ಕೂಸಕ್ಕ ದೀಕ್ಷಾಂಗೆ ಒಂದು ಸಾರಿ ತಬ್ಬಿಕೊಂಡು, ಪಪ್ಪಿಕೊಟ್ಟು, ಮುದ್ದು ಮಾಡಿ ಮಲಗಸಲೇ try ಮಾಡಕಾಗಿತ್ತು. ಇನ್ನೊಂದು ಸಾರಿ ಅವಳು ಹಂಗೆ ಬಂದ್ರೆ ನನ್ನ ಹತ್ರ ಕಳ್ಸು. ನಂಗೆ ಮಕ್ಕಳಿಗೆ ಆ ತರ ಪ್ರೀತಿ ತೋರ್ಸದು ಅಂದ್ರೆ ತುಂಬಾ ಇಷ್ಟ. ನಾನು ಮಲಗಸ್ತಿ.
ಈಗಿನ ನಮ್ಮ ಕಂದಮ್ಮಗಳ ಪಾಡು ನೆನೆಸಿಕೊಂದರೆ ನಿಜಕ್ಕೂ ಬೇಜಾರು ಆಕ್ತು. ನಮಗೆಲ್ಲಾ ಸಿಕ್ಕಷ್ಟು ಅಪ್ಪ ಅಮ್ಮನ ಪ್ರೀತಿ,security ಈಗಿನ ಮಕ್ಕಳಿಗೆ ಸಿಕ್ತಾ ಇಲ್ಲೆ. ಬೆಂಗಳೂರಿನಂತಾ ನಗರದಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿಯುವುದು ಅನಿವಾರ್ಯತೆ ಒಂದಾದರೆ, ಈಗಿನ ಹುಡುಗೀಯರು ಓದಿಕೊಂದಿರ್ತ ಗಂಡನ ಹತ್ತಿರ ದುಡ್ಡು ಇಸ್ಕಂಬಲೇ ಸ್ವಾಭಿಮಾನ ಅಡ್ಡ ಬತ್ತು.
ಗಂಡಂಗೆ ಒಳ್ಳೆ ಸಂಬಳ ಬಂದರೂ ಮನೇಲಿ ಕೂತು ಎನ್ ಮಾಡಲಿ ಎನ್ನುವ ಸಮಸ್ಯೆ ಈಗಿನ ಹುಡುಗೀರಿಗೆ.
ಇದರೆಲ್ಲರ ಒಟ್ಟು ಪರಿಣಾಮ ಮಕ್ಕಳು ದಾರಿ ತಪ್ಪುವುದು. ಸಂಸಾರದ ಮದ್ಯೆ ಒಂದು attachment ಇರ್ತಿಲ್ಲೆ.

ಶ್ಯಾಮಾ said...

@ sindhu

ಥ್ಯಾಂಕ್ಸ್.. ಹೀಗೆ ಆಗಾಗ ಬರ್ತ ಇರಿ ಈ ಅಂಗಳಕ್ಕೆ

@ sushrutha

thanks :)

@ Ranju

ತುಂಬಾ ಚೆನ್ನಾಗಿ ಕಾಮೆಂಟ್ ಬರದ್ದೇ... ನನ್ನ blog ನ ಸಾರಾಂಶ ನೀನೆ ನನಗಿಂತ ಚೆನ್ನಾಗಿ explain ಮಾಡಿದ್ದೆ. ಓದಿ ಖುಷಿ ಆತು.

Ganesha Lingadahalli said...

ಪುಟ್ಟ ಮಕ್ಕಳ ಮುಗ್ಧ ಆಲೊಚನೆಗಳು ಒಮ್ಮೊಮ್ಮೆ ನಮ್ಮನ್ನು ತೀವ್ರವಾಗಿ ತಟ್ಟುತ್ತವೆ ಅಲ್ವೇ?....
ಚನ್ನಾಗಿದ್ದು.... expecting more like this from you...