Tuesday, June 24, 2008

ಏಕಾಂತ

ಅಂತ್ಯರಿವಿಲ್ಲದ ಏಕಾಂತ
ಹನಿ ಹನಿದು ಸುರಿದ ಮಳೆ ನಿಂತ ಹೊತ್ತು
ಬೆಳಗೋ ಬೈಗೋ ಅರಿವಿಲ್ಲವಿನಿತೂ
ಕಾರ್ಮುಗಿಲ ಮುಸುಕು ಹೊದ್ದು
ಆಗಸವು
ಮಲಗಿರಲು
ಸಪ್ತ ಸ್ವರಗಳ, ರಾಗ-ತಾಳಗಳ
ನೆನಪಿನ ಮೇಳ ಮನದ ಅಂಗಳದಲ್ಲಿ.
"ನಿ ರೆ ಸಾ"
ತುಟಿಯ ಮೇಲೆ ಸ್ವರಗಳು
ಲಾಸ್ಯವಾಡುತಿರೆ
ಮನದಲ್ಲಿ ಮತ್ತ್ಯಾವುದೋ ರಾಗದಾ ನೆನಹು.
"ಸಾ ರೆ ನಿ ಸಾ"
ಸ್ವರವುಕ್ಕಿ ಬರಲು
ತಾನ ಗಾನದ ಲಹರಿ
ಹರಿವ ನದಿಯಂತೆ ಮನದಿ.
ಕಿಟಕಿಯಾಚೆಯಿಂದ ಬಂದ
ತಿಳಿಬಿಸಿಲ
ಕೋಲು
ಚಿನ್ನದೆಳೆಯಂತೆ ಹೊಳೆಹೊಳೆದು
ಕಣ್ಣೆವೆಗಳ ಸೋಕಿದಾಗ
ಹೊಸತಾಗಿ ಕಂಡಿತ್ತು
ರಾಗಲಹರಿಯಲಿ
ಮಿಂದ
ಸುತ್ತಲಿನ ಏಕಾಂತದ ಲೋಕ.
ಮತ್ತೆ ಹನಿ ಹನಿದು ಮಳೆ ಜಿಮುರಿ ಬರಲು
ಕಾರ್ಮುಗಿಲು ಕರಗಿ ಆಗಸವು ತಿಳಿಯಾಗಿ
ಅಲ್ಲೇ ಅಂಚಲ್ಲಿ ನಗುತಿತ್ತು ಕಾಮನಬಿಲ್ಲು.
ಇನಿದನಿಯ ಹಕ್ಕಿ ಹಿಂಡು
ಬಾನಿನಾಚೆ ಹಾರುತಿರೆ,
ತುಂಬಿ ಬಂದ ಮನವು ಉಲಿಯಿತು ಮೆಲ್ಲನೆ
ಏಕಾಂತದಲೂ ಇದೆಯೇ ಪರಿಯ ಚೆಲುವು?


Monday, June 9, 2008

ಹಳೆಯ ಹಾಡೊಂದು ನೆನಪಾಗಿ

ಬೆಳಿಗ್ಗೆ ಎದ್ದಾಗ ಯಾವುದಾದರೂ ಹಾಡು ನೆನಪಾಗಿ ತುಟಿಯ ಮೇಲೆ ನಲಿಯತೊಡಗಿದರೆ ಸಾಕು ಅವತ್ತು ದಿನವಿಡೀ ಅದೇ ಹಾಡೇ ಗುನುಗುತ್ತಿರುತ್ತೇನೆ. ಒಮ್ಮೊಮ್ಮೆ ಇಷ್ಟವಿಲ್ಲದ ಯಾವುದಾದರೂ ಹಾಡೊಂದು ಹತ್ತಿಕೊಂಡು ದಿನವಿಡೀ ಒದ್ದಾಡುತ್ತೇನೆ. ಒಮ್ಮೊಮ್ಮೆ ಬಹಳ ಇಷ್ಟವಾದ ಹಾಡುಗಳು ಹತ್ತಿಕೊಂಡು ಉಲ್ಲಸಿತಳಾಗಿರುತ್ತೇನೆ.

ಇವತ್ತೂ ಹಾಗೇ ಆಯ್ತು. ಬೆಳಿಗ್ಗೆ ಎದ್ದಾಗಲಿಂದ ನನ್ನಿಷ್ಟದ ಹಾಡೊಂದು ತುಟಿಯ ಮೇಲೆ ನಲಿಯುತ್ತಲಿದೆ. ಹಾಡು ಯಾವುದೆಂದರೆ, ಬಹಳ ವರ್ಷಗಳ ಹಿಂದೆ ನಾಟಕವೊಂದಕ್ಕೆ (ಚಂದ್ರಗುಪ್ತ ಮೌರ್ಯ) ನನ್ನ ಅಪ್ಪ ಬರೆದಿದ್ದ ಹಾಡು. ಬಹಳ ಸುಂದರವಾಗಿ ರಾಗ ಸಂಯೋಜಿಸಿ ಹಾಡಿದ್ದರು ಅಪ್ಪ ಆಗ. ಆಗ ನಾನೂ, ಅಕ್ಕನೂ ತುಂಬ ಚಿಕ್ಕವರು. ಆಗೆಲ್ಲ ನಾವು ಹಾಡನ್ನು ತುಂಬ ಮೆಚ್ಚಿಕೊಂಡು, ಕಲಿತುಕೊಂಡು ಯಾವಾಗಲೂ ಅಪ್ಪನೆದುರಿಗೆ ಹಾಡುತ್ತಿದ್ದೆವು. ನಾಟಕವನ್ನು ನೋಡಿದ ನೆನಪನ್ನು ಹಂಚಿಕೊಳ್ಳ ಹೋದರೆ ಅದೊಂದು ದೊಡ್ಡ ಕಥೆಯೇ ಆದೀತು, ಅದೆಲ್ಲ ಇಲ್ಲಿ ಅಮುಖ್ಯ. ಸುಂದರ ಹಾಡನ್ನು ಎಲ್ಲರೊಡನೆ ಹಂಚಿಕೊಳ್ಳುವ ಮನಸ್ಸಾಯಿತು. ಮನಸು ರಾಗವಾಗಿ ಹಾಡನ್ನು ಇನ್ನೂ ಗುನುಗುತ್ತಲೇ ಇದೆ, ಹಳೆಯ ದಿನಗಳಲ್ಲೆಲ್ಲೋ ಕಳೆದುಹೋಗಿದ್ದೇನೆ ಅನ್ನಿಸುತ್ತಿದೆ. :)

ಇಲ್ಲಿದೆ ಹಾಡು.
** ಚಂದ್ರಗುಪ್ತ ಮೌರ್ಯ **
ಪಾಟಲಿಪುತ್ರದ ಅಧಿಪತಿಯಾಗಿ
ಸರ್ವಾರ್ಥಸಿದ್ದಿಯು ಆಳುತಲಿರಲು
ಪಟ್ಟದರಸಿಯಲಿ ನಂದನರುದಯಿಸಿ
ಇಷ್ಟದರಸಿಯಲಿ ಮೌರ್ಯರು ಜನಿಸಿ

ಶೂರ ಮೌರ್ಯನಿಗೆ ನೂರು ತನುಜರು
ಅವರ ಶೌರ್ಯವನು ಸಹಿಸದ ನಂದರು
ಸಮಯ ಸಾಧಿಸಿ ಸೆರೆಯಲಿ ಇರಿಸಿ
ತುತ್ತು ಅನ್ನವನು ಮಾತ್ರವೇ ಒದಗಿಸಿ
ಕೊಲ್ಲಲವರನು ಹವಣಿಸಿದ||

ಸೇಡು ತೀರಿಸೆ ಮೌರ್ಯರು ಚಿಂತಿಸಿ
ತಮ್ಮಾಹಾರವ ಒಬ್ಬನಿಗುಣಿಸಿ
ಚತುರ ಚಂದ್ರನನು ಉಳಿಸಿದರು
ನಂದರ ನಾಶಕೆ ಅಸುನೀಗಿದರು||

ಕಪಟ ಶಿಲ್ಪವನು ಭೇದಿಸಿ ಚಂದ್ರನು
ಬಿಡುಗಡೆಯಾಗಿ ಹೊರಗೆ ಬಂದನು
ಅನ್ನ ಸತ್ರದ ಆ ಹೊರ ಮನೆಯಲಿ
ಬಂಧಿಯಾದನು ಬೇರೆ ರೂಪದಲಿ ||

ಯೋಗಿಯೊಬ್ಬನು ಸತ್ರಕೆ ಬಂದನು
ನಂದರಿಂದ ಅಪಮಾನಿತನಾದನು
ಕುಪಿತನಾಗಿ ಆ ಚಾಣಕ್ಯ
ಶಪಥಗೈದನು ನಂದರಂತ್ಯಕೆ ||

ಚಂದ್ರಗುಪ್ತನನು ಸಖನನಾಗಿಸಿ
ಪರ್ವತರಾಜನ ಸಖ್ಯವ ಬೆಳೆಸಿ
ನಂದಾರಾಳ್ವಿಕೆ ಅಂತ್ಯವಗೊಳಿಸಿ
ಚಂದ್ರಗುಪ್ತನನು ದೊರೆಯಾಗಿಸಿದ||