Thursday, September 27, 2007

ಮಾಸದಿರಲಿ...

ಬಿಳಿ ಹಾಳೆಯ ಮೇಲೆ ನಾ ಬರೆದ
ನಾಲ್ಕು ಸಾಲು ಸುಂದರ ಕವನವಾಯ್ತು..
ಬಣ್ಣ ಚೆಲ್ಲಿದರೆ ಹಾಳೆಯ ಮೇಲೆಲ್ಲ
ರಂಗು ರಂಗಿನ ಚಿತ್ತಾರವಾಯ್ತು,
ಅಂಗೈ ಅರಳಿಸಿ
ನೋಡಿದರೆ ಅಲ್ಲೂ ರಂಗು ರಂಗು..
ಒದ್ದೆಯಂಗಳದಲ್ಲಿ ಚುಕ್ಕಿಯೂ ಇಡದೆ
ಎಳೆದ ಎಳೆಗಳೆಲ್ಲ ಸೇರಿ
ಚಂದದ ರಂಗೋಲಿ ಯಾಯ್ತು,
ಒಂದೇ ಒಂದು ಹೂವಿಲ್ಲ ಅಂಗಳದ
ಮೊಲ್ಲೆ ಮಲ್ಲಿಗೆ ಗಿಡದಲ್ಲಿ
ನಾ ಹುಡುಕುತಿರಲು ಹೂವೆಲ್ಲ ಎಲ್ಲಿಎಲ್ಲಿ
ಎಂದು, ನನ್ನ ಮುಡಿಯೇರಿ ಘಮವ ಬೀರಿ
ನಗುತ್ತಿದ್ದವು ಹೂಗಳು ನಾವಿಲ್ಲಿ ಇಲ್ಲಿ ಎಂದು,
ಹೂ ಬಿರಿದಂತ ನಗೆಯೊಂದು
ನನ್ನ ತುಟಿಯಂಚಿನಲ್ಲೂ..
ಈಗಷ್ಟೇ ಈ ಹೂವಿನ ಮೇಲಿದ್ದ
ಕಣ್ಣಿಗೆ ಹಬ್ಬವಾಗಿದ್ದ ಚಿಟ್ಟೆ ತಿರುಗಿ
ನೋಡುವಷ್ಟರಲ್ಲಿ ಹಾರಿ ಹೋದಾಗ,
ಕಳೆದು ಹೋದ ಕನಸುಗಳ ನೆನಪಾಗಿ
ನೀಳವಾದ ಒಂದು ನಿಟ್ಟುಸಿರು..
ಮತ್ತೆಲ್ಲಿಂದಲೋ ಹಾರಿ ಬಂದ
ಗುಬ್ಬಚ್ಚಿ ಚಿಲಿಪಿಲಿಗೆ ಒಲಿದು
ಮಗುವಾಯಿತೆನ್ನ ಮನಸು..
ರಾತ್ರಿ ಬಿಚ್ಚಿದಾಗಸದಲ್ಲಿ ಚುಕ್ಕಿಗಳನ್ನೆಣಿಸುವಾಗ
ಲೆಕ್ಕ ತಪ್ಪಿ ಹೋಗಿ ಕಂಗೆಟ್ಟಾಗ ನನ್ನ ನೋಡಿ
ಮರೆಯಲ್ಲೆಲ್ಲೋ ನಿಂತು ಮುಸಿ ಮುಸಿ ನಕ್ಕ
ಚಂದಿರನಿಗೆ ಮನಸೋತು ,ಮತ್ತೆ ಮತ್ತೆ
ಆ ನಗೆಯ ಕಾಣಲು ಚುಕ್ಕಿ
ಎಣಿಸಲು ಹೋಗಿ ಲೆಕ್ಕ ತಪ್ಪಿದೆನೇ ನಾನು?
ಮೋಡಗಳ ಗೂಡೊಳಗೆ ಆ ಚಂದ್ರ ಮರೆಯಾಗೆ
ಕಣ್ಣಲ್ಲಿ ಏನೋ ಹುಡುಕಾಟವಿತ್ತು,
ಮನದಲ್ಲಿ ಒಲವು ದೂರಾದ ನೋವಿನೆಳೆಯಿತ್ತು.
ಸೂರ್ಯನ ಎಳೆಯ ಕಿರಣಗಳು
ಸೋಕಿ ಕಣ್ಣೆವೆಗಳು ತೆರೆದುಕೊಂಡಾಗ
ಹೊಸ ಬೆಳಗು,ಹೊಸ ಕಿರಣ ,ಹೊಸ ಹಕ್ಕಿ ಹಾಡು
ಮನವು ಮುದಗೊಂಡು
ದಿನ ದಿನವೂ ಹೊಸ ಬದುಕು,
ಹೊಸ ಖುಷಿಯೂ, ನಗೆ ನಲಿವು
ಇರೆ ಬಾಳು ಸುಂದರವು ಎಂದು
ಮುನ್ನಡೆಯಲಣಿಯಾಗೆ
ಮನದಲ್ಲಿ ಉಳಿದಿತ್ತು, ಮಾತೊಂದೇ ಒಂದು
ಹೊಸತನದ ಸಂಭ್ರಮದಲಿ
ಹಳೆ ನೋವ ಹೊರ ತಳ್ಳಿ
ನಗೆ ಚೆಲ್ಲಿ ಸಾಗುವಾಗ
ನನ್ನ ಮನಸಿಂದ ಮಾಸದಿರಲಿ ಒಲವ ನೆನಪು..

Tuesday, September 18, 2007

ರಾಧೆ


ಇನ್ನೂ ಸಂಜೆಯಾ ಹೊತ್ತು
ಸೂರ್ಯ ಕಿರಣವ ಹೊದ್ದು
ಹೊಳೆಯುತ್ತ ಜುಳು ಜುಳು ಹರಿಯುತಿದೆ
ಯಮುನೆ ಇಂದೂ ಎಂದಿನಂತೆ

ಹರಿವ ನೀರಲ್ಲಿ ಅಲ್ಲೇ ಕಾಲಿಳಿಬಿಟ್ಟು
ಕೂತವಳು ಅವಳೇ ಮೀನು
ಕಂಗಳ ಚೆಲುವೆ, "ಇಂದು
ಬರುವನೆ ಕೃಷ್ಣನು"? ಎಂದು
ಕಾಯುತಿರುವ ರಾಧೆಯು

ನೀಲಿ ಅಗಸವ ನೋಡಿದಾಗಲೆಲ್ಲ ಅವಳಿಗೆ
ನೀಲ ಮೇಘ ಶ್ಯಾಮ ನದೇ ನೆನಪು
ಬೀಸುತಿರುವ ತಿಳಿಗಾಳಿಯಲ್ಲೂ
ಅವನ ಪ್ರೇಮದ ಕಂಪು

ಹರಿವ ನೀರಿನ ಕಲರವದಲ್ಲೂ ಕೇಳುತಿದೆ
ಅವಳಿಗೆ ಮೋಹನ ಮುರಳಿಯ ಗಾನ
ಹೃದಯ ಹಾಡುತಿರುವ
ಹಾಡಿಗೂ ಅವನ ಪ್ರೀತಿಯದೇ ಸ್ವರ

ಸಂಜೆ ಜಾರುವ ಹೊತ್ತು
ಆವರಿಸುತ್ತಿರುವ ಕತ್ತಲಿನಲ್ಲೂ
ಹುಡುಕುತಿರುವಳು ಕೃಷ್ಣನ ರೂಪವನ್ನೇ
ಮತ್ತೆ ಕೃಷ್ಣ ಕಾಣದಾದಾಗ
ಗಂಟಲುಬ್ಬಿ ದುಃಖ ಉಮ್ಮಳಿಸಿದಾಗ
ಕಣ್ಣಿಂದ ಜಾರಿದ್ದು ಅವನ ನೆನಪಿನ ಬಿಂದು

ಇರುಳಿನ ನಿಶ್ಶಬ್ದ ನೀರವತೆಯಲ್ಲೂ ಕೇಳುತಿದೆ
ಅವಳ ಉಸಿರಿನಲ್ಲೂ ಕೃಷ್ಣನದೇ
ಹೆಸರು, ಮತ್ತೆ ಮತ್ತೆ ಹಲುಬುವಳು
"ನಾಳೆ ಬಂದೆ ಬರುವನು ನನ್ನ ದೇವನು
ನನ್ನ ಸೇರಲೆಂದು..."

ಹರಿಯುತ್ತಲೇ ಇರುವ ಯಮುನೆಯು
ನಿಡುಸುಯ್ಯುವಳು ತನ್ನಷ್ಟಕ್ಕೆ ತಾನು
ಕಾಣುವುದೇ ಮತ್ತೆ ನಾಳೆಯೆಂಬ ಬೆಳಕು?
ಬರುವನೆ ರಾಧೆಯ ಕೃಷ್ಣ?
ಕೊನೆಯಾಗುವುದೇ ರಾಧೆಯ ಕಾಯುವಿಕೆಯು?

Thursday, September 13, 2007

ಹೀಗಿತ್ತು ಚೌತಿ ಹಬ್ಬ

"ಅಮ್ಮ ಏನು ಮಾಡ್ತಾ ಇದ್ದೇ? "ಫೋನಿನಲ್ಲಿ ಅಮ್ಮನನ್ನು ವಿಚಾರಿಸಿದರೆ ಅಮ್ಮ ಚಕ್ಲಿ ಮಾಡುತ್ತಾ ಇದ್ದೆ ಅಂತ ಉತ್ತರ ಕೊಟ್ಟಳು. ಮತ್ತೆ ಅದು ಇದು ಹಬ್ಬದ ತಯಾರಿ ಬಗ್ಗೆ ಮಾತಾಡಿ ಮಾತು ಮುಗಿಸಿ ಫೋನ್ ಇಡುವಾಗ ನಾನು ಹಬ್ಬಕ್ಕೆ ಮನೆಗೆ ಬರುವುದಿಲ್ಲವೆಂಬುದಕ್ಕೆ ಅಮ್ಮನ ದುಃಖ ವ್ಯಕ್ತವಾಗಿತ್ತು.

ಹಾಗೆಯೇ ಹಬ್ಬದ ಬಗ್ಗೆ ವಿಚಾರ ಮಾಡುತ್ತಿದ್ದಾಗ ಮನಸ್ಸು ವರುಷಗಳಷ್ಟು ಹಿಂದೆ ಹೋಗಿ ಆ ಹಬ್ಬದ ಸಂಭ್ರಮಗಳೆಲ್ಲ ಕಣ್ಮುಂದೆ ಬಂದವು.

ಒಟ್ಟು ಕುಟುಂಬಗಳಲ್ಲಿನ ಹಬ್ಬದ ಆಚರಣೆಯ ಸಂಭ್ರಮವೇ ಬೇರೆ. ಚೌತಿ ಹಬ್ಬ ಬಂತೆಂದರೆ ಮೊದಲು ಹೊಸ ಬಟ್ಟೆ ಕೊಡಿಸಲೇ ಬೇಕಿತ್ತು ನಮಗೆ. ಹಬ್ಬಕ್ಕೆ 15 ದಿನಗಳಿರುವಾಗಲೇ ನಾವು ಹಬ್ಬದ ಬಗ್ಗೆ ಕನಸು
ಕಟ್ಟಲು ಶುರುವಿಡುತಿದ್ದೆವು. ಇನ್ನು 12 ಡೇ ದಿನ 10 ಎ ದಿನ ಅಂತೆಲ್ಲಾ. ದೊಡ್ಡಪ್ಪ ಬಂದಾಗ ಯಾವ ಯಾವ ಪಟಾಕಿ ತಂದಿಟ್ಟಿದ್ದಾರೆ ಈ ಸಲ ಅಂತ ವಿಚಾರಿಸಿಟ್ಟುಕೊಳ್ಳುತ್ತಿದ್ದೆವು. ಹಬ್ಬದ ಮುಂಚಿನ ದಿನವೇ ಊರಿಗೆ ಹೋಗಿ ಎಲ್ಲ ಒಟ್ಟಾಗಿ ಬಿಡುತ್ತಿದ್ದೆವು.

ಸಂಜೆ ಹೊತ್ತಿಗೆ ದೊಡ್ಡಪ್ಪ ಗಣಪತಿ ಮೂರ್ತಿಯನ್ನು ತರುವುದಕ್ಕೆ ಹೋದರೆ ನಾವೆಲ್ಲ ಅವರು ಬರುವುದನ್ನೇ ಕಾಯುತ್ತಿದ್ದೆವು. ಒಂದು ಬುಟ್ಟಿಯಲ್ಲಿ ಗಣಪತಿಯನ್ನಿಟ್ಟು ಮೇಲಿಂದ ಒಂದು ಕಾಗದ ಮುಚ್ಚಿಕೊಂಡು ತಂದು ದೇವರ ಮುಂದೆ ಇಟ್ಟರೆ ನಾವೆಲ್ಲ ಕದ್ದು ಕದ್ದು ಹೋಗಿ ಆ ಕಾಗದ ಸರಿಸಿ ಗಣಪತಿಯನ್ನು ನೋಡುತ್ತಿದ್ದೆವು. ಯಾರಾದರೂ ನಮ್ಮನ್ನು ನೋಡಿ ಬಯ್ದಾಗ ಅಲ್ಲಿಂದ ಓಡುವುದು ಒಂದು ರೀತಿಯ ಮಜವಾಗಿತ್ತು.

ಮತ್ತೆ ಸ್ವಲ್ಪ ಹೊತ್ತಿಗೆಲ್ಲಾ ದೊಡ್ಡಪ್ಪ, ಕಾಕ ಅಣ್ಣಂದಿರೆಲ್ಲ ಸೇರಿ ಮಂಟಪ
ಕಟ್ಟಲು ಶುರು ಮಾಡಿದರೆ ನಾವೆಲ್ಲ ಅಲ್ಲಿ ಹಾಜರ್. ನಮ್ಮನೆಯಲ್ಲಿ ಪ್ರತಿ ಸಲ ಒಂದೇ ತರಹದ ಮಂಟಪ. ಏನೇನೂ ಬದಲಾವಣೆಯಿಲ್ಲ. ಹೆಚ್ಚೆಂದರೆ ಹಚ್ಚುತ್ತಿದ್ದ ಕಾಗದದ ಬಣ್ಣ ಬೇರೆ ಬೇರೆ ಆಗಿರ್ತಿತ್ತೆನೊ ಅಷ್ಟೇ. ಪ್ರತಿ ಸಲ ಬೇರೆಯವರ ಮನೆಯಲ್ಲಿ ನಾನಾ ತರಹದ ಮಂಟಪಗಳನ್ನು ನೋಡಿ ಬರುತ್ತಿದ್ದ ನಾವು ನಮ್ಮನೆಯಲ್ಲೂ ಆ ತರಹದ ಮಂಟಪ ಮಾಡಿರೆಂದು ಹಟ ಹಿಡಿಯುತ್ತಿದ್ದೆವು. ಪ್ರತಿಸಲ ಈ ವರ್ಷ ಟೈಮ್ ಇಲ್ಲ ಮುಂದಿನ ಸಲ ನಾವು ಹಂಗೆ ಮಾಡೋಣ ಹಿಂಗೆ ಮಾಡೋಣ ಎಲ್ಲರ ಮನೆಗಿಂತ ನಮ್ಮನೆದೇ ಚಂದವಾಗಬೇಕು ಹಂಗೆ ಮಾಡೋಣ ಸುಮ್ನಿರಿ ಅಂತ ನಂಬಿಸುತ್ತಿದ್ದರು. ಪ್ರತಿಸಲ ನಾವು ಅವರ ಮಾತನ್ನು ನಂಬಿ ಆ ಮುಂದಿನ ಸಲ ಹೆನ್ಗಿರಬಹುದೆನ್ದು ಬಾಯಿ ಕಳೆದುಕೊಂಡು ಕನಸು ಕಾಣುತ್ತಿದ್ದೆವು.

ಇಷ್ಟೆಲ್ಲಾ ಆಗುವ ಹೊತ್ತಿಗೆ ಪಟಾಕಿ ಹಂಚಿಕೆ ಶುರುವಾಗುತ್ತಿತ್ತು. ಯಾರ್ಯಾರಿಗೆ ಯಾವ ಯಾವ ಪಟಾಕಿ ಅಂತ ಎಲ್ಲ ಹಂಚಿಬಿಡುತ್ತಿದ್ದರು. ದೊಡ್ಡ ದೊಡ್ಡ ಪಟಾಕಿ ಹೊಡೆಯಲು ಧೈರ್ಯವಿರದಿದ್ದರೂ ಎಲ್ಲ ಪಟಾಕಿಯ ಸ್ಯಾಂಪಲ್ ಒಂದೊಂದು ಕೊಡಲೇ ಬೇಕಾಗಿತ್ತು ನಮಗೆ. ಇಲ್ಲ ಅಂದ್ರೆ ಕೇಳುತ್ತಲೇ ಇರ್ಲಿಲ್ಲ. ವಾಲೆಗರಿ ಪಟಾಕಿ ಅಂದ್ರೆ ನಮಗೆಲ್ಲ ಅಚ್ಚುಮೆಚ್ಚು. ಯಾವುದೇ ಭಯವಿಲ್ಲದೇ ಹಚ್ಚುತ್ತಿದ್ದ ಪಟಾಕಿ ಅಂದರೆ ಅದೊಂದೇ ಇರಬೇಕು!!

ಇನ್ನು ಹಬ್ಬದ ದಿನ ಬೆಳಗ್ಗೆ ಎಲ್ಲ ಮಕ್ಕಳಿಗೆ ಶೇಷತ್ತೆಯಿಂದ ಸಾಮೂಹಿಕ ಸ್ನಾನ ಆಗುತ್ತಿತ್ತು. ಅತ್ತೆ ಎಂದರೆ ಸ್ವಲ್ಪ ಭಯಪಡುತ್ತಿದ್ದ ನಾವೆಲ್ಲ ಬಾಯ್ಮುಚ್ಚಿಕೊಂಡು ಅವರು ಎಬ್ಬಿಸಿದಾಗ ಎದ್ದು ಸಮೂಹಿಕ ಸ್ನಾನ ಮುಗಿಸುತ್ತಿದ್ದೆವು
ಒಲ್ಲದ ಮನಸ್ಸಿಂದಲೇ. ಬೆಳಿಗ್ಗೆ 7.30-8 ರ ಹೊತ್ತಿಗೆಲ್ಲಾ ಪೂಜೆ ಮುಗಿದುಬಿಡುತ್ತಿತ್ತು. ಹೊಸ ಅಂಗಿ ಹಾಕಿಕೊಂಡು ಓಡಾಡೋಡೇ ಓಡಾಡೋದು. ಪ್ರತಿ ಹಬ್ಬಕ್ಕೂ ಹೊಸ ಹಾಡು ಕಲಿತು ದೇವರ ಮುಂದೆ ಹಾಡಿ ಎಲ್ಲರಿಂದ ಮೆಚ್ಚಿಗೆ ಪಡೆಯೋದೂ ಒಂದು ಖುಷಿಯಾಗಿತ್ತು.

ಮತ್ತೆ ಮನೆ ಪಕ್ಕದ
ಹಿತ್ತಲಿಗೆ ಹೋಗಿ ದೂರ್ವೆ ಕೊಯ್ಯೋಕೆ ಹೋದ್ರೆ ಸುಮಾರು ಹೊತ್ತು ಹಿಡ್ಸುತ್ತಿತ್ತು. ಒಂದು ಸಲ ಅಜ್ಜಿ ಹೆಳಿದ್ದನ್ನು ಚೆನ್ನಾಗಿ ನೆನಪಿಟ್ಟುಕೊಂಡಿದ್ದೆವು. ಜಾಸ್ತಿ ದೂರ್ವೆ ಕೊಯ್ದಷ್ಟೂ ಜಾಸ್ತಿ ಪುಣ್ಯ ಸಿಗುತ್ತಂತ. ಹಾಗಾಗಿ ನಾ ಮುಂದು ತಾ ಮುಂದು ಅಂತ ರಾಶಿ ರಾಶಿ ದೂರ್ವೆ ಕೊಯ್ದು ದೇವರಿಗೆ ಏರಿಸುತ್ತಿದ್ದೆವು.

ಇನ್ನು ಪಟಾಕಿ ಹೊಡೆಯುವ ಹೊತ್ತು ಬಂತೆಂದರೆ ಅಮ್ಮನ ಆಜ್ಞೆಯಂತೆ ಹೊಸ ಬಟ್ಟೆ ತೆಗೆದಿಟ್ಟು ಬೇರೆ ಬಟ್ಟೆ ಹಾಕಿಕೊಂಡು ಹೋಗಬೇಕಿತ್ತು. ಚಿಕ್ಕ ಪುಟ್ಟ ಗಲಾಟೆ ಜಗಳಗಳಿಲ್ಲದೆ ಯಾವತ್ತೂ ಪಟಾಕಿ ಹಚ್ಚೋ ಕಾರ್ಯ ಸಂಪೂರ್ಣವಾಗುತ್ತಲೇ ಇರ್ಲಿಲ್ಲ. ಬೇಕಂತಲೇ ನಮ್ಮನ್ನು ಹೆದರಿಸಲು ನಮ್ಮ ಕಾಲ ಬಳಿಯಲ್ಲೆಲ್ಲ ಪಟಾಕಿ ಇಟ್ಟು ಹೆದರಿಸುತ್ತಿದ್ದ ಅಣ್ಣ , ಆಮೇಲೆ ನಾವು ದೊಡ್ಡವರಿಗೆ ದೂರು ಕೊಟ್ಟು... ಹೀಗೆ ಮಜಾವಾಗಿ ಸಾಗುತ್ತಿತ್ತು.

ನೆಲಚಕ್ರ ಹಚ್ಚುತ್ತಿದ್ದಿದ್ದು ಯಾವಾಗಲೂ ದೊಡ್ಡಪ್ಪ. ನೆಲಚಕ್ರ ತಿರುಗಲು ಶುರುವಾದಕೂಡಲೆ ನಾವು ಅತ್ತ ಇತ್ತ ಒಡುತ್ತಿದ್ದೆವು. ನಮ್ಮ ಕಾಲ ಬಳಿ ಬಂದ ಕೂಡಲೇ ಕಿಟಕಿಯ ಮೇಲೆ ಹತ್ತಿ ನಿಲ್ಲುವುದು. ಕೂಗುವುದು.. ಆಹಾ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ ಆ ದೃಶ್ಯ.

ಕಡುಬು ಕಜ್ಜಾಯಗಳಿಂದ ಕೂಡಿದ ಮಧ್ಯಾಹ್ನದೂಟ ಮುಗಿಸಿ, ಆಟಾಡಿಕೊಂಡು ಸಮಯ ಹೋದದ್ದೇ ತಿಳಿಯುತ್ತಿರಲಿಲ್ಲ. ನಾಲ್ಕು ಐದು ಗಂಟೆಗೆಲ್ಲ ಮತ್ತೆ ರೆಡಿ ಆಗಿ ಅಮ್ಮ ದೊಡ್ಡಮ್ಮರೊಡನೆ ಗಣಪತಿ ನೋಡಲು ಎಲ್ಲರ ಮನೆಗೆ ಹೋಗುತ್ತಿದ್ದೆವು. ಯಾರ ಮನೆ ಗಣಪತಿ, ಮಂಟಪ ಚೆನ್ನಾಗಿದೆ
ಅಂತ ಒಂದು ಚರ್ಚೆಯಾದರೆ, ಯಾರ ಮನೆ ಚಕ್ಕುಲಿ , ಪಂಚಕಜ್ಜಾಯ ಚೆನ್ನಾಗಿತ್ತೆಂದು ಇನ್ನೊಂದು ಚರ್ಚೆ.

ಎಲ್ಲ ಮುಗಿಸಿ ಮನೆಗೆ ಬರುವಷ್ಟರಲ್ಲಿ ಸಂಜೆಯಾಗಿರುತ್ತಿತ್ತು. ಮತ್ತೆ ಕೈ ಕಾಲು ತೊಳೆದು ದೇವರಿಗೆ ಕೈ ಮುಗಿದು ಆರತಿ ಪೂಜೆ ಎಲ್ಲ ಮುಗಿಸಿ ಊಟಕ್ಕೆ ಹೋಗುತ್ತಿದ್ದೆವು. ರಾತ್ರಿ ಊಟ ಮಾಡುವಾಗ ಬಹಳ ಗಡಿಬಿಡಿ ನಮಗೆಲ್ಲ ಯಾಕೆಂದರೆ ಮತ್ತೆ ಪಟಾಕಿ ಹಚ್ಚಲು ಹೋಗಬೇಕು. ಸುರ್ ಸುರ್ ಬತ್ತಿ, ಸುರ್ ಬಾಣ ಇವೆಲ್ಲಾ ಕಣ್ಮುಂದೆ ಕುಣಿಯುತ್ತಿರುತ್ತಿತ್ತು.

ಆಕಾಶಕ್ಕೆ ನೆಗೆಯುತ್ತಿದ್ದ ಆ ಬಾಣದ ಪಟಾಕಿ, ಕಣ್ಮುಂದೆ ಅರಳುತ್ತಿದ್ದ ಹೂಕುನ್ಡ ಇವೆಲ್ಲಾ ನೋಡುತ್ತಾ ಕುಣಿಯುವಾಗ ಎಲ್ಲೋ ಒಮ್ಮೆ ತಪ್ಪಿ ಚಂದ್ರನನ್ನು ನೋಡಿಬಿಟ್ಟೆವೆಂದರೆ ಮುಗೀತು ಮನಸ್ಸಲ್ಲೆಲ್ಲ ಭಯ ಆವರಿಸಿಕೊಂಡುಬಿಡುತ್ತಿತ್ತು. ಚೌತಿಯ ಚಂದ್ರನನ್ನು ನೋಡಿದರೆ ಏನಾದರೂ ಅಪವಾದ ಬರುತ್ತದೆಂದು ದೊಡ್ಡವರು ಹೇಳಿದ್ದು ಗಟ್ಟಿಯಾಗಿ ಮನಸ್ಸಲ್ಲಿರುತ್ತಿತ್ತು. ಎಷ್ಟು ನೋಡಬಾರದು ಎಂದುಕೊಂಡಿದ್ದರೂ ಅದು ಹೇಗೋ ಚಂದ್ರ ಕಂಡುಬಿಡುತ್ತಿದ್ದ. ಆಗೆಲ್ಲ ಅಜ್ಜಿ ಒಂದು ಉಪಾಯ ಹೇಳಿಕೊಟ್ಟಿದ್ದಳು 21 ದೂರ್ವೆ ಕೊಯ್ದು ಹಾಕಿಬಿಟ್ರೆ ಏನೂ ಅಪವಾದ ಬರುವುದಿಲ್ಲ ಅಂತ. ಹಾಗಾಗಿ ಮರುದಿನ ಬೆಳ್ಬೆಳಿಗ್ಗೆ 21 ದೂರ್ವೆ ಏಕೆ ಇನ್ನೊಂದಿಷ್ಟು ಜಾಸ್ತಿನೆ ಕೊಯ್ದು ದೇವರಿಗೆ ಹಾಕೋ ವರೆಗೆ ಸಮಾಧಾನವೇ ಇರ್ತಿರಲಿಲ್ಲ.

ಇಂಥ ಸಂಬ್ರಮ, ಮಾತು ತಮಾಷೆಗಳ ನಡುವೆ 3 ದಿನ ಹೇಗೆ ಕಳೆಯುತ್ತಿತ್ತೋ ಗೊತ್ತಾಗುತ್ತಿರಲಿಲ್ಲ. ಕೊನೆಯ ದಿನ ಪೂಜೆ ಮಾಡಿ ಗಣಪತಿಯನ್ನು ತೋಟದ ಹೊಂಡ ದಲ್ಲಿ ಮುಳುಗಿಸುತ್ತಿದ್ದರೆ ನಮಗೆಲ್ಲ ಅಳು ಬಂದ ಹಾಗಾಗುತ್ತಿತ್ತು. ಎಷ್ಟು ಚಂದದ ಗಣಪತಿಯನ್ನು ಮುಳುಗಿಸುತ್ತಿದ್ದಾರಲ್ಲ ಎಂಬ ದುಃಖ ಒಂದು ಕಡೆ, ಹಬ್ಬ ಮುಗೀತು ಮರಳಿ ಹೋಗಬೇಕು, ನಾಳೆಯಿಂದ ಮತ್ತೆ ಶಾಲೆ ಶುರು ಎನ್ನುವುದೆಲ್ಲಾ ನೆನಪಾಗಿ ದುಃಖ ಇನ್ನೊಂದು ಕಡೆ.

ಇಷ್ಟೆಲ್ಲಾ
ಸುಂದರ ನೆನಪುಗಳ ಮೂಟೆ ಹೊತ್ತು, ಮತ್ತೆ ಮುಂದಿನವರ್ಷದ ಹಬ್ಬದ ಕನಸುಗಳ ಮೂಟೆ ಹೊತ್ತು ವಾಪಾಸಾಗುತ್ತಿದ್ದೆವು.

ಎಷ್ಟು ಸುಂದರ ದಿನಗಳು, ಎಲ್ಲ ನೆನಪಾಗಿ ಇಷ್ಟು ಬರೆಯುವ ಹೊತ್ತಿಗೆ ಮನಸ್ಸೆಲ್ಲ ಭಾರವಾಗುತ್ತಿದೆ..
ಏನೇನೋ ಕಾರಣಗಳಿಂದ ಹೋದ ವರ್ಷವೂ ಹಬ್ಬಕ್ಕೆ ಮನೆಗೆ ಹೊಗಲಾಗಲಿಲ್ಲ, ಈ ವರ್ಷವೂ ಅಷ್ಟೇ. ಮತ್ತೆ ಈಗ ಬಿಚ್ಚಿಟ್ಟ ನೆನಪಿನ ದಿನಗಳಂತೆ ಹಬ್ಬ ಆಚರಿಸಿ ಎಷ್ಟೋ ವರ್ಷಗಳಾದವು. ಅವೆಲ್ಲ ಕಳೆದು ಹೋದ ಅಮೂಲ್ಯ ದಿನಗಳು. ಈಗ ಬರೀ ನೆನಪುಗಳು.

ಪ್ರತಿ ಚೌತಿ ಹಬ್ಬದಲ್ಲೂ
ಇವಿಷ್ಟನ್ನೂ ನೆನಪು ಮಾಡಿಕೊಂಡು "ಹೀಗಿತ್ತು ಚೌತಿ ಹಬ್ಬ "ಎಂದು ಸಂಭ್ರಮಿಸುತ್ತೇನೆ, ಈಗಿಲ್ಲವಲ್ಲ ಆ ಕ್ಷಣಗಳು ಎಂಬ ದುಃಖವನ್ನು ಒಳಗೇ ಬಚ್ಚಿಡುತ್ತೇನೆ.

Tuesday, September 4, 2007

ಮಂತ್ರ್ಯಪ್ಪ


"ನಿಂಗಕ್ಕೆ ಎಷ್ಟು ಹೇಳಿದ್ರೂ ಅಷ್ಟೇ. ಹಂಗೆ ಮಾಡಡಿ ಅಂತ ನಿಂಗಕ್ಕೆ ಹೇಳಿ ಹೇಳಿ ನಾನೇ ಒಂದಿನ ಮಂತ್ರ್ಯಪ್ಪ ಆಗ್ತ್ನೇನ" ಇದು ನನ್ನ ಅಮ್ಮ ಯಾವಾಗಲೂ ಹೇಳೋ ಮಾತು. ಅಮ್ಮ ಅದನ್ನು ತುಂಬಾ ಸರಿ ಹೇಳುತ್ತಿದ್ದರೂ ಅದರ ಅರ್ಥ ಏನು ಅಂತ ನಮಗೆ ಗೊತ್ತೇ ಇರ್ಲಿಲ್ಲ. ಒಂದು ದಿನ ಕೇಳಿ ಕೇಳಿ ಸಾಕಾಗಿ ಅಮ್ಮನನ್ನು ಕೇಳಿಯೇಬಿಟ್ಟೆವು. ಏನಮ್ಮಾ ಅದು "ಮಂತ್ರ್ಯಪ್ಪ ಆಗದು " ಅಂದ್ರೆ? ಅಂತ. ಆಗ ಅಮ್ಮ ಹೆಳಿದ ಆ ಮಂತ್ರ್ಯಪ್ಪನ ಕಥೆ ನಿಜಕ್ಕೂ ಸ್ವಾರಸ್ಯಕರವಾಗಿತ್ತು.

ಅಮ್ಮ ಹಲವು ವಿಷಯಗಳಲ್ಲಿ ನಮ್ಮೊಂದಿಗೆ ಸೇರಿ ಮಂತ್ರ್ಯಪ್ಪ ಆಗಿದ್ದೂ ಹೌದು ಅನ್ನಿಸಿ ಜೋರಾಗಿ ನಕ್ಕಿದ್ದೆವು.
ಮೊನ್ನೆ ಯಾವುದೋ ವಿಷಯ ಮಾತಾಡುವಾಗ ಮಂತ್ರ್ಯಪ್ಪನ ಕಥೆ ನೆನಪಾಯಿತು. ಕಥೆ ಹೀಗಿದೆ....
ಒಂದು ಊರಿನಲ್ಲಿ ಒಬ್ಬ ರಾಜ ಇದ್ದ. ಅವನ ರಾಜ್ಯದ ಒಂದು ಊರಲ್ಲಿ ಯಾವುದೋ ಕಾರಣದಿಂದ ಅಶಾಂತಿ ಉಂಟಾಗಿತ್ತು. ಊರಿನ ಜನರೆಲ್ಲ ತುಂಬಾ ಹಿಂದುಳಿದವರೂ ಅನಾಗರಿಕರೂ ಆಗಿಬಿಟ್ಟಿದ್ದರು. ಹೀಗಿರುವಾಗ ಒಂದು ದಿನ ರಾಜ ತನ್ನ ಮಂತ್ರಿಯನ್ನು ಕರೆದು ಈ ಬಗ್ಗೆ ಸಮಾಲೋಚಿಸಿದ. ಆ ಊರಿನ ಜನರನ್ನು ಸರಿ ಮಾಡುವುದು ಹೇಗೆ ಅಂತ. ಕೊನೆಗೆ ಮಂತ್ರಿಯೇ ಆ ಊರಿಗೆ ಹೋಗಿ ಸ್ವಲ್ಪ ದಿನ ಅಲ್ಲೇ ಇದ್ದು ಜನರನ್ನು ಸರಿಮಾಡಬೇಕೆಂದು ನಿರ್ಧಾರವಾಯಿತು. ಅದರಂತೆ ಮಂತ್ರಿ ಆ ಊರಿಗೆ ತೆರಳಿದ.

ಮಂತ್ರಿ ಹೋಗಿ ಅದೆಷ್ಟೋ ದಿನಗಳೂ ತಿಂಗಳುಗಳೋ ಕಳೆದರೂ ಆ ಕಡೆಯಿಂದ ಏನು ಸುದ್ದಿಯೂ ಬರದೇ ಅಥವಾ ಮಂತ್ರಿಯೂ ಮರಳಿ ಬಾರದಿದ್ದಾಗ ರಾಜ ಕಂಗಾಲಾಗಿ ತಾನೇ ಆ ಊರಿಗೆ ಹೋದ. ಎಲ್ಲಿ ಹುಡುಕಿದರೂ ಮಂತ್ರಿಯ ಸುಳಿವಿಲ್ಲ. ಸರಿ ಯಾರನ್ನಾದರೂ ವಿಚಾರಿಸೋಣವೆಂದು ಅಲ್ಲೇ ಮರದ ಕೆಳಗೆ ಕುಳಿತಿದ್ದ ಕೊಳಕು ಕೊಳಕಾದ ವೇಷ ಧರಿಸಿದ್ದ ಒಬ್ಬ ಮುದುಕನ ಬಳಿ ಹೋಗಿ "ಏನಪ್ಪಾ ನನ್ನ ಮಂತ್ರಿಯನ್ನೇನಾದರೂ ನೋಡಿದ್ದೀಯ" ಅಂತ ಕೇಳಿದ ರಾಜ. ಅದಕ್ಕೆ ಆ ಮುದುಕ "ಯಾಕಂಗಂತೀರಿ? ಗೊತ್ತಾಗ್ನಿಲ್ಲೇ? ನಾನ್ರೀss ಯಪ್ಪಾss ನಿಮ್ಮ ಮಂತ್ರ್ಯಪ್ಪ" ಅನ್ನಬೇಕೆ??!!

ಜನರನ್ನು ಸರಿ ಮಾಡಲು ಹೋದ ಮಂತ್ರಿ ಅಂತ ಜನರ ಮಧ್ಯದಲ್ಲಿದ್ದು ಅವನೂ ಆ ಜನರಂತೆ ಬದಲಾಗಿಬಿಟ್ಟಿದ್ದ.

ಈ ಕಥೆಯಿದ 2 ವಿಷಯ ಸ್ಪಷ್ಟವಾಗುತ್ತದೆ. ಒಂದು ಬಹಳಷ್ಟು ಜನ ಯಾವುದನ್ನು ಹೇಳುತ್ತಿದ್ದಾರೋ ಅದೇ ಸರಿ ಅಂದುಕೊಂಡು ನಾವೂ ಅವರಲ್ಲೊಬ್ಬರಾಗಿಬಿಡುವುದು. ಇನ್ನೊಂದು ಸರಿ ತಪ್ಪುಗಳು ಗೊತ್ತಿದ್ದರೂ ಎಲ್ಲರೂ ಅದನ್ನೇ ಮಾಡುತ್ತಿರುವಾಗ ನಾನೂ ಅದನ್ನೇ ಮಾಡಿದರೆ ಏನು ತಪ್ಪು ಅಂದುಕೊಂಡು ನಾವೂ ಅದನ್ನೇ ಮಾಡುವುದು. ಅಥವಾ ಒಳ್ಳೇ ಕೆಲಸವೆಂದು ಗೊತ್ತಿದ್ದೂ ಯಾರೂ ಮಾಡುತ್ತಿಲ್ಲ ನಾನ್ಯಾಕೆ ಮಾಡಬೇಕು ಎಂಬ ಧೋರಣೆಯೂ ಇದೆ ಜಾತಿಗೆ ಸೇರಿದ್ದು.

ಎಷ್ಟು ವಿಷಯಗಳಲ್ಲಿ ಇದು ಸತ್ಯ ಅಲ್ಲವೇ. ಸೂಕ್ಷ್ಮವಾಗಿ ವಿಚಾರ ಮಾಡುತ್ತಾ ಹೋದರೆ ಎಷ್ಟೊಂದು ವಿಷ್ಯಗಳಲ್ಲಿ ನಾವು ಮಂತ್ರ್ಯಪ್ಪಗಳಾಗುತ್ತಿದ್ದೇವೆ ಎನ್ನಿಸದಿರದು.

ಮೊನ್ನೆ ಪರಿಚಯದವರೊಬ್ಬರು ತಮ್ಮ ಮಗುವನ್ನು ಕೊಂಡಾಡುತ್ತಿದ್ದರು. ನನ್ನ ಮಗು (ನಾಲ್ಕೋ ಐದೊ ವರ್ಷದ್ದು) ಎಷ್ಟು ಚೆನ್ನಾಗಿ ಇಂಗ್ಲೀಶ್ ಅಲ್ಲಿ ಪ್ರೇಯರ್ ಹೇಳುತ್ತೆ ಗೊತ್ತಾ ಅಂತ. ನಾನು ಆ ಮಗುವನ್ನ "ನಿಂಗೆ ಯಾವುದಾದರೂ ಶ್ಲೋಕವೊ ಕನ್ನಡದ ಪದ್ಯವೊ ಬರುತ್ತದೆಯ" ಅಂತ ಕೇಳಿದರೆ ಆ ಮಗುವಿಗೆ ಉತ್ತರ ಹೇಳಲು ಬಿಡದೆ ಅದರಮ್ಮನೇ ಉತ್ತರಿಸಿದ್ದು ಹೀಗಿತ್ತು "ಈಗಿನ ಕಾಲದಲ್ಲೆಲ್ಲ ಯಾರು ಅಂಥದ್ದು ಹೇಳಿ ಕೊಡ್ತಾರೆ ಮಕ್ಕಳಿಗೆ. ಈಗೇನಿದ್ದರೂ ಇಂಗ್ಲೀಶ್ ಕಲ್ಸೋದೆ ಟ್ರೆಂಡ್. ಎಲ್ಲರೂ ಮಕ್ಕಳಿಗೆ ಇಂಥದೆ ಹೇಳಿಕೊಡುವಾಗ ನಾವು ನಮ್ಮ ಮಕ್ಕಳಿಗೆ ಭಜನೆ ಬಾಯಿಪಾಟ ಪದ್ಯ ಹೆಳಿಕೊಡ್ತಾ ಇದ್ರೆ ನಮ್ಮ ಮಗು ಹಿಂದೆ ಉಳಿದುಬಿಡುತ್ತೆ" .

ತುಂಬಾ ದಿನಗಳ ಬಳಿಕ ಸಿಕ್ಕ ಗೆಳತಿಯೊಬ್ಬಳು ವೇಷಭೂಷಣಗಳಿಂದ ಹಿಡಿದು ವಿಚಿತ್ರವಾಗಿ ಸಂಪೂರ್ಣವಾಗಿ ಬದಲಾಗಿದ್ದಳು. ನಾನು ಬಾಯ್ಬಿಟ್ತು ಅಂಥದ್ದೆಲ್ಲ ಕೇಳುವವಳಲ್ಲದಿದ್ದರೂ ನನ್ನ ಕಣ್ಣಲ್ಲಿದ್ದ ಆಶ್ಚರ್ಯವನ್ನು ಗ್ರಹಿಸಿ ಅವಳೇ ಹೇಳಿದ್ದಳು. ನಾನು ಕೆಲ್ಸಾ ಮಾಡುವ ಜಾಗದಲ್ಲಿ ಎಲ್ಲರೂ ಹೀಗೆ ಬರುವುದು ನಾನೊಬ್ಬಳೇ ಸಿಂಪಲ್ ಆಗಿ ಹೋದರೆ ಹಳ್ಳಿ ಗುಗ್ಗು ಅಂತ ಅಂದುಕೊಳ್ತಾರೆ. ಇನ್ನು ಹಣೆಗೆ ಕುಂಕುಮ ಕೈಗೆ ಬಳೆ ಇವೆಲ್ಲಾ ಓಲ್ಡ್ ಫ್ಯಾಶನ್. ಹಂಗೆ ಹಿಂಗೆ ಅಂತೆಲ್ಲಾ ಏನೇನೋ ಹೇಳಿದಳು. ನಾನು ಇನ್ನೂ ಯಾವ್ದೋ ಬೇರೆ ಯುಗದಲ್ಲಿ ಇದ್ದೇನೆ ಅಂತನಿಸಿ ಸುಮ್ಮನೇ ನಕ್ಕು ಅಲ್ಲಿಂದ ಬಂದೆ.

ಇನ್ನೂ ಕೆಲವು ವಿಷ್ಯಗಳಲ್ಲಿ ಜನ ಹೀಗೆ ಯೋಚಿಸುವುದಿದೆ. ಅನ್ಯಾಯ ಆಗ್ತಿರೋದು ನೋಡಿಯೂ ನಾನೊಬ್ಬನೇ ಹೋಗಿ ಅದನ್ನ ಬದಲಿಸಿ ದೇಶ ಉಧ್ಧಾರ ಮಾಡೋಕಾಗುತ್ತಾ? ಯಾರಿಗೂ ಬೇಡವಾಗಿದ್ದು ನಂಗ್ಯಾಕೆ ಅಂತ ಸುಮ್ಮನಾಗಿಬಿಡುತ್ತಾರೆ.

ಜನ ಬದಲಾಗುವುದು ತಪ್ಪ ಹಾಗಾದ್ರೆ? ಖಂಡಿತ ತಪ್ಪಲ್ಲ. ಬದಲಾವಣೆ ಜಗದ ನಿಯಮ. ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕಾದರೆ ನಾವು ಹಲವು ವಿಷ್ಯಗಳಲ್ಲಿ ಬದಲಾಗಲೇಬೇಕು. ಆದರೆ ಆ ಬದಲಾವಣೆ "ನಮ್ಮತನ"ವನ್ನೇ ಬದಲಿಸುವಂತಿರಬಾರದು ಅಲ್ಲವೇ. ಯಾರೋ ಮಾಡುತ್ತಿದ್ದಾರೆಂದು ನಾವೂ ಮಾಡಲು ಹೋಗಿ ನಮ್ಮಲ್ಲಿರುವ ನಮ್ಮನ್ನು ನಾವು ಕಳೆದುಕೊಳ್ಳುವುದು ಎಷ್ಟು ಸರಿ?

ಇನ್ನು ಹೊಸ ಹೊಸತನ್ನು ಕಲಿಯುವುದು ತಪ್ಪ? ಖಂಡಿತ ತಪ್ಪಲ್ಲವೇ ಅಲ್ಲ. ಆದರೆ ಹೊಸತನ್ನು ಕಲಿಯುವ ಹುರುಪಿನಲ್ಲಿ ಹಳೆಯವುಗಳಲ್ಲಿನ ಎಷ್ಟೋ ಒಳ್ಳೆಯ ತಿರುಳನ್ನು ಮರೆಯುವುದು ಖಂಡಿತ ತಪ್ಪು. ಹಳೆಯ ವಿಚಾರಗಳೆಲ್ಲವೂ ಸರಿ ಎಂದು ವಾದಿಸುವುದಿಲ್ಲ. ಎಲ್ಲದರಲ್ಲೂ ನ್ಯೂನ್ಯತೆ ಇದ್ದೇ ಇದೆ. ಆದರೆ ಕಲಿಯಬೇಕಾದ್ದು ಹಳೆಯದರಲ್ಲೂ ಬೇಕಾದಷ್ಟಿದೆ. "ಹಳೆ ಬೇರು ಹೊಸ ಚಿಗುರು ಸೇರಿದರೆ ಮರ ಸೊಬಗು " ಅಲ್ಲ್ವೆ?

ಯಾಕೆ ಎಲ್ಲರೂ ಮಂತ್ರ್ಯಪ್ಪಗಳಾಗುತ್ತಿದ್ದಾರೆ? ಎನ್ನುವುದು ಇನ್ನೂ ನನಗೆ ಪ್ರಶ್ನೆಯಾಗೇ ಇದೆ.

ಕೊನೆಯಲ್ಲಿ ಒಂದು ತಪ್ಪೊಪ್ಪಿಗೆ. "ಮುಂಚೆಯೆಲ್ಲ ಬೆಳಗ್ಗೆ ಬೇಗ ಎದ್ದು ಚುರುಕಾಗಿ ಓಡಾಡಿಕೊಂಡಿರುತ್ತಿದ್ದ ನಾನು ಲೇಟಾಗಿ ಏಳುತ್ತಿರುವವರ ಮಧ್ಯೆ ಸೇರಿ ಮಂತ್ರ್ಯಪ್ಪನಾಗಿರುವುದು ಸುಳ್ಳಲ್ಲವೇ ಅಲ್ಲ :-) "