ತಗ್ಗಿನಂಚಿನಲ್ಲಿ
ನಾ ನೆಟ್ಟ ಹೂ ಬಳ್ಳಿ
ಹೂ ಬಿಟ್ಟಿದೆಯಂತೆ,
ಹಳದಿ ಬಣ್ಣದ ಹೂವು
ತಿಳಿಯಾದ ಪರಿಮಳ ಬೀರುತ್ತಾ
ಕಣ್ಣಿಗೆ ಹಬ್ಬವಾಗಿದೆಯಂತೆ
ಮತ್ತೆ ನಾ ಕೇಳಿದೆ ಬಿಟ್ಟ
ಹೂಗಳೆಷ್ಟು?
ಬಣ್ಣ ಬರೀ ಹಳದಿಯೆ
ಅಂಚಿಗೆ ಕೆಂಪಿಲ್ಲವೇ?
ಬಳ್ಳಿಯಲ್ಲಿ ಮತ್ತಿರುವ
ಮೊಗ್ಗುಗಳೆಷ್ಟು?
ಎಂಥ ಸೊಬಗದು ಆ
ಬಳ್ಳಿಗಂಟಿದ ಪುಟ್ಟ ಹೂವಿನದು?
ಬಿಟ್ಟಿದ್ದು ಒಂದೇ ಒಂದು
ಪುಟ್ಟ ಹೂವಂತೆ
ಬಣ್ಣ ಬರಿಯ ಹಳದಿಯಂತೆ
ಮತ್ತೆ ಬಳ್ಳಿಗಂಟಿ
ಮೊಗ್ಗಿಲ್ಲವಂತೆ
ಎಲ್ಲ ಒಂದೇ ಹೂವಿನ ಮೋಡಿಯಂತೆ
ಮತ್ತೆ ನಾ ಕೇಳಿದೆ ಹೂವಿಗೆ
ಮುತ್ತಿದ್ದ ದುಂಬಿಗಳೆಷ್ಟು?
ಅಷ್ಟು ಚೆಲುವೆ ನಾ ನೆಟ್ಟ
ಬಳ್ಳಿಯಲ್ಲಿ ಬಿಟ್ಟ ಒಂಟಿ
ಹೂವಿನದು?
ಹೂವ ಹೊತ್ತು ಬಳ್ಳಿಯೂ
ನಗುತಿರಬಹುದಲ್ಲ
ಬಳ್ಳಿ ಚಿಗುರಿದೆಯೆ ಸೊಂಪಾಗಿ?
ಹೂವಿನ ಸುತ್ತೆಲ್ಲ ದುಂಬಿಗಳ
ಹಿಂಡಂತೆ,
ಹೂವಿನ ದಳದ ಮೇಲೆ ಬಿದ್ದ
ಹನಿಗಳೆರಡು ಮುತ್ತಂತೆ
ಹೊಳೆಯುತ್ತಿದೆಯಂತೆ,
ಹೂವೆಲ್ಲಿ ಬಾಡುವುದೋ ಎಂದು
ಸೂರ್ಯನೂ ಮೋಡಗಳ ಹಿಂದೆಲ್ಲೋ
ಮರೆಯಾದನಂತೆ.
ಹೆಸರರಿಯದ ಆ ಹೂ
ಬಳ್ಳಿಯನ್ನು ನಾ ನೆಟ್ಟಾಗ
ಬಲು ಹಿಂದೆ ಪ್ರಶ್ನೆ
ನೂರಿತ್ತು ಮನದಲ್ಲಿ
ಬಾಡಿ ಬಳಲಿರುವ ಬಳ್ಳಿ ನಿಲ್ಲುವುದೇ ಈ ನೆಲದಲ್ಲಿ
ಚಿಗುರಿ ಅಲ್ಲೆಲ್ಲ ಹಬ್ಬಿ
ಹೂ ಬಿಡುವುದೇ ಈ ಬಳ್ಳಿ,
ಮೊಗ್ಗು ಬಿರಿದು ಅರಳಿದಾಗ
ದಿನ ದಿನವೂ ನೀರೆರೆವಾಗ
ಮುಟ್ಟಿ ಸವರುತ್ತಿದ್ದೆ
ಬಳ್ಳಿಯನ್ನು,
ಬಗ್ಗಿ ನೋಡುತ್ತಿದ್ದೆ
ಮನದಲ್ಲೇ ನಾನಂದುಕೊಂಡು
ಮೊಗ್ಗಾಗಿದೆಯೇ
ಬಳ್ಳಿಯಂಚಿನಲ್ಲೊಂದು..
ವರುಷಗಳಷ್ಟು ಹಳೆಯದಾದ
ಹೂ ಬಳ್ಳಿಇನ್ನು ಹೂ
ಬಿಡುವುದಿಲ್ಲವೆಂದು
ನಾ ಮರೆತೇ ಬಿಟ್ಟಿರುವಾಗ,
ಅಷಾಢವೆರಗಿ ಎಲ್ಲ
ಹೂಗಿಡಗಳು ಹೂವಿಲ್ಲದೇ
ಬರಿದೆ ನಿಂತಿರುವಾಗ
ಅಂಗಳದಂಚಿನಲ್ಲಿ ನಾನೆಟ್ಟ
ಹೂ ಬಳ್ಳಿ
ಹೂ ಬಿಟ್ಟಿದೆಯಂತೆ
ನಾನಿಲ್ಲದ ಹೊತ್ತಿನಲ್ಲಿ
ಹೂವನ್ನು ನೋಡಿ ಚೆಲುವ ಕಣ್ಣಲ್ಲಿ
ಸೆರೆಹಿಡಿಯದಿದ್ದರೇನಾಯಿತು,
ಹೂವಿನ ಚಿತ್ತಾರವನ್ನು
ಮನದಲ್ಲೇ ಚಿತ್ರಿಸಿಕೊಂಡು
ಮೆಲು ನಕ್ಕೆ,
ಗಾಳಿ ಬೀಸಿ ಬಳ್ಳಿ ತೂಗಿ
ನನ್ನ ನೆನಪಾಗಿ ಹೂವು
ನಕ್ಕಿರಬಹುದೆಂದು
ಮುಂದಿದ್ದ ಹೂವಿನ
ಚಿತ್ರಕ್ಕೊಂದು ಮುತ್ತಿಟ್ಟೆ.