Tuesday, May 27, 2008

ಅಲೆಬಂದು ಹೋದಮೇಲೆ ..

ನೀಲಿ ಕಡಲಿನ ಅಲೆಗಳು ಎಂದಿಗಿಂತಲೂ ಅಂದು ಹೆಚ್ಚಾಗಿಯೇ ಹುಚ್ಚೆದ್ದಿದ್ದವು. ಇಳಿಸಂಜೆಯ ಬಿಸಿಲೊಡನೆ ಕಡಲ ತೀರದಲ್ಲಿ ಬೆಚ್ಚನೆಯ ಕಾವಿತ್ತು. ಗಾಳಿ ತುಸು ಜೋರಾಗಿಯೇ ಬೀಸುತ್ತಿತ್ತು. ಜಡೆ ಕಟ್ಟದೆ ಹಾಗೆಯೇ ಬಿಟ್ಟಿದ್ದ ನನ್ನ ನೀಳ ಕೂದಲು ಗಾಳಿಗೆ ಹಾರುತ್ತಿತ್ತು. ಸೀರೆಯ ಉದ್ದನೆಯ ಸೆರಗು ಗಾಳಿಯೊಡನೆ ತೇಲುತ್ತಾ ನನ್ನ ನಿನ್ನ ನಡುವೆ ಪರದೆಯಂತೆ ಅನ್ನಿಸುತ್ತಿತ್ತು. ನಮ್ಮೊಡನೆ ಬಂದವರೆಲ್ಲ ಆಚೆಯೆಲ್ಲೋ ನೀರಲ್ಲಿ ಆಡುತ್ತಿದ್ದರು ಅನ್ನಿಸುತ್ತದೆ. ನಂಗೆ ಅದ್ಯಾವುದರ ಪರಿವೆಯಿರಲಿಲ್ಲ. ಅಲ್ಲಿದ್ದಿದ್ದು ನಾವಿಬ್ಬರೇ ಅನ್ನಿಸುತ್ತಿತ್ತು ನನಗೆ. ಪರದೆಯಂತೆ ನಡುವೆ ಹಾರುತ್ತಿದ್ದ ನೀಲಿ ಸೆರಗಿನಾಚೆ ನೀನು ಕಾಣುತ್ತಿದ್ದೆ. ತುಂಬ ಖುಷಿಯಾಗಿದ್ದೆ ನೀನು, ಬಂದು ಹೋಗುತ್ತಿದ್ದ ಅಲೆಗಳೊಡನೆ ಆಡುತ್ತ ನಿನ್ನ ಯಾವತ್ತಿನ ಪ್ರಸನ್ನ ಮುಖಭಾವದಲ್ಲಿ. ನನ್ನಮನವೋ ಯಾವತ್ತಿನಂತೆ ಅಂದೂ ಕೂಡ ದ್ವಂದ್ವ ತುಂಬಿದ ಗೂಡು. ಏನೋ ಕಳವಳ. ಏನನ್ನೋ ನಿರ್ಧರಿಸಬೇಕಾದ ತೀವ್ರತೆ ನನ್ನಲ್ಲಿ.

ಒಮ್ಮೆಕಣ್ಣ ಮುಂದೆ ಹರವಿಕೊಂಡಿದ್ದ ಅಗಾಧ ಜಲರಾಶಿಯನ್ನು ನೋಡಿದೆ. ಏನೋ ಒಂದು ಧನ್ಯತಾ ಭಾವ, ಶರಣಾಗತ ಭಾವ ಮನದಲ್ಲಿ ಉಕ್ಕಿ ಬಂತು. ಸವಿಸ್ತಾರದೆದುರು ತೃಣಮಾತ್ರಳು ನಾನು ಎನ್ನುವ ಭಾವ, ಇದಲ್ಲದೇ ಮತ್ತೆಲ್ಲವೂ ಶೂನ್ಯ ಎನ್ನುವ ಭಾವ ಮನದ ಕಡಲಲ್ಲಿ ಉಕ್ಕಿ ಉಕ್ಕಿ ಬಂತು . ತಿರುಗಿ ನಿನ್ನತ್ತನೋಡಿದೆ. ಮತ್ತದೇ ಭಾವ, ಕಡಲನ್ನು ನೋಡಿದಾಗ ಮನದಲ್ಲಿ ಉಕ್ಕಿದ ಭಾವವೇ ಮತ್ತೊಮ್ಮೆ ಬಂತು. ಹೌದು ಮೊದಲೆಲ್ಲ ನನಗೆ ಕಡಲನ್ನು ಕಣ್ಣುಹಾಯುವಷ್ಟು ದೂರ ನೋಡಿದಾಗ ಮಾತ್ರ ಶರಣಾಗತ ಭಾವ,ಸೋತ ಭಾವ ಬರುತ್ತಿದ್ದಿದ್ದು . ಆಗೊಮ್ಮೆ ನಿನ್ನ ಕಂಡಾಗಿನಿಂದ ನಿನ್ನ ನೋಡಿದಾಗಲೂ ಅದೇ ಭಾವ ಮನದಲ್ಲಿ ಮೂಡುತ್ತದೆ ಯಾಕೋ ಗೊತ್ತಿಲ್ಲ.

ಅಲೆಗಳ ನೀರಿನಿಂದ ಒದ್ದೆಯಾದ ಮರಳಿನ ತೀರದ ಮೇಲೆ ಹೆಜ್ಜೆ ಗುರುತನ್ನು ಇಡುತ್ತಾ ಹಾಗೆಯೇ ಅದೆಷ್ಟೋ ದೂರ ಮೌನವಾಗಿ ನಡೆದು ಹೋಗುವ ಮನಸ್ಸಾಯಿತು ನನಗೆ. ನೀನೂ ನನ್ನೊಡನೆ ಬಂದು ಇಬ್ಬರೂ ಜೊತೆಯಾಗಿ ಹೆಜ್ಜೆ ಹಾಕಬೇಕೆಂಬ ಹಂಬಲ ಮನದಲ್ಲಿತ್ತು. ನೀನೋ ನೀರಲ್ಲಿ ಮುಳುಗೇಳುತ್ತ ಅಲೆಗಳೊಡನೆ ಆಡುತ್ತಿದ್ದೆ. ನನಗೋ ಮಳೆಹನಿಗಳು ಬೀಳುವಾಗಷ್ಟೇ ನೀರಲ್ಲಿ ಆಡಬೇಕೆನಿಸುವುದು. ಅದು ಬಿಟ್ಟರೆ ಕಡಲ ನೀರಲ್ಲಿ ಇಳಿದು ಆಡಬೇಕೆಂದು ಅನ್ನಿಸುವುದೇ ಇಲ್ಲ. ನಾನು ನೀನಿದ್ದ ಕಡೆಗೆ ಬೆನ್ನು ಹಾಕಿ ಹೆಜ್ಜೆ ಮುಂದಿಡಲು ಶುರುವಿಟ್ಟೆ. ನಾನೊಂದಿಷ್ಟು ದೂರ ನಡೆದ ಮೇಲೆ ನೀನು ಓಡೋಡುತ್ತ ಬಂದು ನನ್ನ ಜೊತೆಯಾಗುವೆಯೇನೋ ಅಂದುಕೊಂಡೇ ನಡೆಯಲಾರಂಭಿಸಿದೆ.

ಮರಳಿನ ಮೇಲೆ ಮೂಡುತ್ತಿದ ಅದೆಷ್ಟೋ ಹೆಜ್ಜೆಗುರುತುಗಳನ್ನು ಹಿಂದೆ ಹಾಕುತ್ತ ನಾನು ಅದೆಷ್ಟು ದೂರ ನಡೆದುಬಿಟ್ಟೆನೋ. ಕಾಲನ್ನು ಸೋಕಿ ಹೋದ ಅಲೆಗಳ ಲೆಕ್ಕವಿಡಲಾಗಲಿಲ್ಲ ನನಗೆ. ದೂರ ದೂರದವರೆಗೂ ನೋಡಿದಷ್ಟೂ ಮುಗಿಯದ ನೀಲಿ ಕಡಲು. ನಡೆದಷ್ಟೂ ದೂರವಾದಂತೆ ಕಾಣುವ ಕೈಗೆಟುಕದ ನೀಲಿ ಆಗಸ. ಎಲ್ಲ ನೋಡುತ್ತ ನೀಲಿ ಸೀರೆಯುಟ್ಟಿದ್ದ ನಾನೂ ನೀಲಿ ಅನಂತದಲ್ಲಿ ಲೀನವಾಗುತ್ತಿರುವೆನೇನೋ ಅನ್ನಿಸಿತು.

ಅಷ್ಟು ದೂರ ನಡೆದ ಮೇಲೆ ನೀನೂ ನನ್ನೊಡನೆ ಮೌನವಾಗಿ ನಡೆದುಬರುತ್ತಿರಬಹುದಾ ಅನ್ನಿಸಿ ಹಿಂತಿರುಗಿ ನೋಡಿದೆ. ಇಲ್ಲ ಅಲ್ಲಿ ನೀನಿರಲಿಲ್ಲ. ಅದೆಷ್ಟೋ ದೂರದಲ್ಲಿ ನಾ ಬಿಟ್ಟು ಬಂದ ನೀನು ಇನ್ನೂ ಅಲ್ಲೇನಿಂತಿದ್ದೆ. ದೂರದ ಒಂದು ಅಕೃತಿಯಂತೆ ಕಾಣುತ್ತಿದ್ದೆ. ಒಂದೆರಡು ನಿಮಿಷಗಳ ನಂತರ ನೀನು ನನ್ನತ್ತ ಕೈ ಬೀಸುತ್ತಿರುವುದು ಕಂಡಿತು. ಕ್ಷಣ ನನ್ನ ನೋಟ ಕೊಂಚ ಮಸುಕಾಯಿತು. ಮತ್ತೆ ಮತ್ತೆ ನಿನ್ನತ್ತ ನೋಡಿದೆ. ಇಲ್ಲ, ಆಗ ಅದೇ ಕಡಲಿನ ಮುಂದೆ ಬರುತ್ತಿದ್ದ ಸೋತ ಭಾವ ಧನ್ಯತಾ ಭಾವ ನನ್ನಲ್ಯಾಕೋ ಮೂಡಲಿಲ್ಲ.

ನಾ ನಡೆದು ಬಂದ ದಾರಿಯನ್ನೇನೋಡಿದೆ. ಅಚ್ಚೊತ್ತಿದ್ದ ಹೆಜ್ಜೆ ಗುರುತೊಂದೂ ಕಾಣಲಿಲ್ಲ. ಬಂದು ಹೋದ ಅಲೆಗಳು ಅವುಗಳನ್ನೆಲ್ಲ ಕಡಲ ಮಡಿಲೊಳಗೆಲ್ಲೋ ಸೇರಿಸಿಯಾಗಿತ್ತು. ನಿನ್ನಿಂದ ಬಹಳ ದೂರ ನಡೆದು ಬಂದುಬಿಟ್ಟಿದ್ದೇನೆಂದು ದೃಢವಾಗಿದ್ದು ಆಗಲೇ. ಮರಳಿ ನಿನ್ನೆಡೆಗೆ ಬರಲಾರದಷ್ಟು ದಣಿವಾಗಿದೆಯೆನಿಸಿತು. ಏನೋ ನಿರ್ಧಾರವಾದಂತಾಗಿ ಮನಸ್ಸು ಭಾರವಾದ ನಿಟ್ಟುಸಿರನ್ನು ಹೊರಹಾಕಿತು. ಅಲೆಬಂದು ಹೋದಮೇಲೆ ನಿಶ್ಶಬ್ದವಾದ ದಡದಂತಾಗಿತ್ತು ಮನ.

ಮತ್ತೆ ನಮ್ಮೊಡನೆ ಬಂದವರೆಲ್ಲ ಹೊರಡುವ ಸಮಯವಾಯಿತೆಂದು ಕೂಗುತ್ತಿದ್ದರು. ಕಡಲಿನೆಡೆಗೆ ಬೆನ್ನು ಹಾಕಿ ಎಲ್ಲರೂ ಹೊರಟರು, ನೀನೂ , ನಾನೂ . ಅಷ್ಟು ಹೊತ್ತು ಬೆಳಗುತ್ತಿದ್ದ ಸೂರ್ಯ ನಮ್ಮ ಹಿಂದೆ ಅದೇ ಕಡಲಿನಾಳದಲ್ಲಿ ಮುಳುಗುತ್ತಿದ್ದ.

Tuesday, May 13, 2008

ಹೀಗೊಂದು ಕಥೆ

ಹಿಂದೆ ಒಮ್ಮೆ ಅಮ್ಮ ಹೇಳುವ ಮಂತ್ರ್ಯಪ್ಪನ ಕಥೆ ಹೇಳಿದ್ದೆ. ನಾಕಾರು ದಿನಗಳಿಂದ ಯಾವುದೋ ಒಂದು ಕಾರಣಕ್ಕಾಗಿ ಅಮ್ಮ ಹೇಳುವ ಇನ್ನೊಂದು ಕಥೆ ಪದೇ ಪದೇ ನೆನಪಾಗುತ್ತಿದೆ. ಕಥೆಯನ್ನು ಇಲ್ಲೂ ಯಾಕೆ ಹೇಳಬಾರದು ಅಂತ ಅನ್ನಿಸಿದ್ದಕ್ಕೆ ಈ ಬರಹ.
ಕಥೆ ಹೀಗಿದೆ :
ಒಂದು ಊರು. ಆ ಊರಲ್ಲಿನ ಹಲವು ಜನರಲ್ಲಿ ಒಬ್ಬ ಈ ಕಥೆಯ ನಾಯಕ. ಹೆಸರು ಏನೋ ಗೊತ್ತಿಲ್ಲ. ಈ ಕ್ಷಣಕ್ಕೆ ತಿಮ್ಮ ಅನ್ನೋ ಹೆಸರು ನೆನಪಾಗಿದ್ದಕ್ಕೆ ಅವನ ಹೆಸರು ತಿಮ್ಮ ಎಂದೇ ಇರಲಿ. ತಿಮ್ಮನು ತುಂಬ ವಿಶಾಲವಾದ ಹಣ್ಣಿನ ತೋಟದ ಮಾಲಿಕನಾಗಿದ್ದ. ಅವನ ತೋಟದಲ್ಲಿ ಯಾವಾಗಲೂ ಒಂದಲ್ಲ ಒಂದು ಜಾತಿಯ ಹಣ್ಣುಗಳು ತುಂಬಿಯೇ ಇರುತ್ತಿದ್ದವು. ಬಲು ಸಮೃದ್ಧ ತೋಟ. ಆದರೆ ತಿಮ್ಮ ಬಲು ಜುಗ್ಗ. ಹಣ್ಣನ್ನು ಸುಮ್ಮನೆ ಬೇರೆಯವರಿಗೆ ಕೊಡುವುದಿರಲಿ ಯಾರೊಬ್ಬರೂ ಅವನ ತೋಟದ ಹಣ್ಣುಗಳ ಕಡೆ ಕಣ್ಣೆತ್ತಿ ನೋಡುವುದೂ ಅವನಿಗೆ ಸಹ್ಯವಾಗುತ್ತಿರಲಿಲ್ಲ. ಕೆಲಸದವರ ಮೇಲೂ ಅವನಿಗೆ ಗುಮಾನಿ ಜಾಸ್ತಿ. ಅದಕ್ಕಾಗೇ ಅವನು ಸ್ವತಃ ತಾನೇ ತೋಟದ ಅಂಚಿನಲ್ಲಿದ್ದ ಮಣ್ಣು ದಿಬ್ಬವನ್ನು ಹತ್ತಿ ಕುಳಿತು ತೋಟವನ್ನು ಕಾಯುತ್ತಿದ್ದ.

ತಿಮ್ಮನ ಗುಣದ ಅರಿವಿದ್ದ ಆ ಊರಿನ ಜನ ಅವನ ತೋಟದ ಕಾಲುದಾರಿಯಲ್ಲಿ ನಡೆದು ಹೋಗುವಾಗ ಅಪ್ಪಿತಪ್ಪಿಯೂ ಹಣ್ಣುಗಳನ್ನು ಆಸೆಗಣ್ಣಿನಿಂದ ನೋಡದೆ ಸುಮ್ಮನೆ ತಲೆ ತಗ್ಗಿಸಿಕೊಂಡು ಮುಂದೆ ಹೋಗುತ್ತಿದ್ದರು.

ಜನರು ಕಾಲುದಾರಿಯಲ್ಲಿ ನಡೆದುಹೋಗುವಾಗಲೆಲ್ಲ್ಲ ಮಣ್ಣಿನ ದಿಬ್ಬವನ್ನೇರಿ ಕುಳಿತ ತಿಮ್ಮನು "ಅಯ್ಯ ಯಾಕೆ ಹಂಗೆ ಬಿರ ಬಿರನೆ ಸಾಗುತ್ತಿದ್ದೀರಿ? ಬಿಸಿಲಲ್ಲಿ ನಡೆದು ಬಂದು ದಣಿವಾಗಿರಬಹುದು, ನಮ್ಮ ತೋಟದ ಹಣ್ಣುಗಳನ್ನು ತಿಂದು ಅಲ್ಲೇ ಕೊಳದ ನೀರು ಕುಡಿದು ದಾಹವಾರಿಸಿಕೊಂಡು ಸ್ವಲ್ಪ ಹೊತ್ತು ನೆರಳಿನಲ್ಲಿ ವಿಶ್ರಮಿಸಿಕೊಂಡು ಆಮೇಲೆ ಮುಂದೆ ಹೋಗಿ " ಎನ್ನುತ್ತಿದ್ದ. ದಾರಿಹೋಕರು ಇಲ್ಲವೆಂದು ಎಷ್ಟು ನಿರಾಕರಿಸಿದರೂ ಒತ್ತಾಯಪೂರ್ವಕವಾಗಿ ಅವರನ್ನು ನಿಲ್ಲಿಸುತ್ತಿದ್ದ. "ಸಂಕೋಚಪಡಬೇಡಿ ಹಣ್ಣನ್ನು ಕಿತ್ತುಕೊಳ್ಳಿ" ಅನ್ನುತ್ತಾ ದಿಬ್ಬವನ್ನಿಳಿದು ಬರುತ್ತಿದ್ದ. ತಿಮ್ಮನ ಒತ್ತಾಯಕ್ಕೆ ಮಣಿದು ಆ ದಾರಿಹೋಕನೇನಾದರೂ ಅಲ್ಲಿ ನಿಂತು ಹಣ್ಣನ್ನು ಕೊಯ್ಯಲು ಮುಂದಾದನೋ ಅಲ್ಲಿಗೆ ಅವನ ಕಥೆ ಮುಗಿದಂತೆಯೇ. ಕೆಳಗಿಳಿದು ಬಂದ ತಿಮ್ಮ ದಾರಿಹೋಕನಿಗೆ ಚೆನ್ನಾಗಿ ಬಯ್ಯುತ್ತಿದ್ದ. "ಯಾರು ಹೇಳಿದ್ದು ನಿನಗೆ ? ನನ್ನ ತೋಟದ ಹಣ್ಣನು ಕದ್ದು ತಿನ್ನಲು ಎಷ್ಟು ಧೈರ್ಯ ನಿನಗೆ ? ಇನ್ನೊಂದ್ಸಲ ಈ ಕಡೆ ತಲೆ ಹಾಕಿದ್ರೆ ನೋಡು ಏನು ಮಾಡ್ತೀನಂತ " . ಇನ್ನೂ ಏನೇನೋ ಬೈಗುಳಗಳು.

ಈ ರೀತಿಯ ಅನುಭವ ಊರವರಿಗೆಲ್ಲ ಒಂದಲ್ಲ ಹಲವು ಸಲ ಆಗಿಯೇ ಆಗಿತ್ತು. ಅವರೆಲ್ಲ ಬೇಸತ್ತು ಹೋಗಿದ್ದರು ತಿಮ್ಮನ ಈ ವರ್ತನೆಗೆ. "ಅಲ್ಲ ಅವನೇ ನಾವು ಎಷ್ಟು ಬೇಡವೆಂದು ನಿರಾಕರಿಸಿದರೂ ನಮ್ಮನ್ನು ನಿಲ್ಲಿಸಿ ನಂತರ ಬಂದು ಬಯ್ಯುತ್ತಾನಲ್ಲ. ಏನಾಗಿದೆ ಈ ಮನುಷ್ಯನಿಗೆ? ಒಂದು ಕ್ಷಣದಲ್ಲಿ ಅವನಾಡಿದ್ದೇ ಮಾತು ಅವನಿಗೆ ಮರೆತು ಹೋಗುತ್ತದಾ ? ಮನಸ್ಸು ಬದಲಾಗಿ ಬಿಡುತ್ತದಾ ? ಯಾಕೆ ಹೀಗೆ ?" ಜನರೆಲ್ಲ ಮಾತಾಡಿಕೊಂಡರು.

ಹೀಗೆ ಯೋಚಿಸಿದಾಗ ಅವರೆಲ್ಲರ ಗಮನಕ್ಕೆ ಬಂದಿದ್ದು ತಿಮ್ಮನು ಅವರನ್ನು ಅಕ್ಕರೆಯಿಂದ ಮಾತಾಡಿಸಿ ಹಣ್ಣು ನೀರಿನ ಆತಿಥ್ಯಕ್ಕೆ ಆಮಂತ್ರಿಸುವಾಗ ಅವನು ಮಣ್ಣಿನ ದಿಬ್ಬದ ಮೇಲೆ ಕುಳಿತಿರುತ್ತಿದ್ದ. ಅವನು ಅಲ್ಲಿಂದ ಕೆಳಗಿಳಿದು ಬಂದ ಮೇಲೆ ಬಯ್ಯಲು ಶುರು ಹಚ್ಚುತ್ತಿದ್ದ. ಅಂದರೆ ಆ ಮಣ್ಣಿನ ದಿಬ್ಬದಲ್ಲೇ ಏನೋ ಗುಟ್ಟಿದೆ.

ಸರಿ ಅವರೆಲ್ಲ ದಿಬ್ಬವನ್ನು ಅಗೆದು ಅದರಡಿಯಲ್ಲಿ ಏನಿದೆಯೆಂದು ನೋಡುವ ನಿಶ್ಚಯ ಮಾಡಿಯೇ ಬಿಟ್ಟರು. ತಿಮ್ಮನು ಇಲ್ಲದಿರುವ ಸಮಯಕ್ಕೆ ಕಾದು ಜನರೆಲ್ಲ ದಿಬ್ಬದ ಸುತ್ತ ಜಮಾಯಿಸಿದರು. ದಿಬ್ಬವನ್ನು ಅಗೆಯಲಾಗಿ ಅದರಡಿಯಲ್ಲಿ ವಿಕ್ರಮಾದಿತ್ಯನ ಸಿಂಹಾಸನವಿತ್ತು. ಜನರ ಪ್ರಶ್ನೆಗಳಿಗೆ ಉತ್ತರವೂ ಸಿಕ್ಕಿತು. ವಿಕ್ರಮಾದಿತ್ಯನ ಸಿಂಹಾಸನದ ಮೇಲೆ ಯಾರೇ ಕುಳಿತರೂ ಸಹೃದಯತೆ ಅವರದಾಗುತ್ತದೆಯಂತೆ. ಅದಕ್ಕೇವಿಕ್ರಮಾದಿತ್ಯ ಅಷ್ಟು ಜನಾನುರಾಗಿ ಪ್ರಭುವಾಗಿದ್ದನಂತೆ. ಅಂತೆಯೇ ತಿಮ್ಮನೂ ದಿಬ್ಬದ ಮೇಲೆ ಕುಳಿತಾಗ ಸಹೃದಯನಾಗಿದ್ದು ಕೆಳಗಿಳಿದು ಬಂದ ಮೇಲೆ ಅವನ ಒರಿಜಿನಲ್ ಗುಣ ಅವನದಾಗುತ್ತಿದ್ದಿದ್ದರಿಂದ ಅವನ ವರ್ತನೆ ಹಾಗಿತ್ತು.

ಕೆಲವು ಜನ ನಮ್ಮನ್ನು ಕಂಡಾಗ ಒಮ್ಮೊಮ್ಮೆ ಬಹಳ ಆಪ್ತವಾಗಿ ಮಾತಾಡುತ್ತಾರೆ, ಮತ್ತಿನ್ನೆಲ್ಲೋ ಸಿಕ್ಕಾಗ ಅಪರಿಚಿತರಂತೆ ವರ್ತಿಸುತ್ತಾರೆ, ನಮ್ಮನೆಗೆ ಬಂದಾಗ ತುಂಬ ಆತ್ಮೀಯವಾಗಿ ವರ್ತಿಸುವವರು ಅವರ ಮನೆಗೆ ನಾವು ಹೋದಾಗ ಬೇರೆಯೇ ರೀತಿಯ ವರ್ತನೆ ತೋರಿಸುವುದೂ ಒಮ್ಮೊಮ್ಮೆ ಅನುಭವವಾಗುತ್ತದೆ. ಒಮ್ಮೊಮ್ಮೆ ಏನೇನೋ ಆಶ್ವಾಸನೆ ಇತ್ತವರು, ಆಮೇಲೆ ತಾವು ಹಾಗೆ ಹೇಳಿಯೇ ಇರಲಿಲ್ಲವೆಂಬಂತೆ ವರ್ತಿಸುತ್ತಾರೆ. ಇಂಥ ಸಂದರ್ಭಗಳಲ್ಲೆಲ್ಲ ಅಮ್ಮ "ವಿಕ್ರಮಾದಿತ್ಯನ ಸಿಂಹಾಸನ " ದ ಕಥೆ ಹೇಳಿಯೇ ಇರುತ್ತಾಳೆ.

ಮೊನ್ನೆ ಹೀಗೇ ಯಾವುದೋ ಘಟನೆಯ ಬಗ್ಗೆ ಬಹಳ ಯೋಚನೆ ಮಾಡುತ್ತ ಗೆಳತಿಯೊಬ್ಬಳೊಡನೆ ಮಾತಾಡುತ್ತಿದ್ದಾಗಲಿಂದ ಈ ಕಥೆ ನೆನಪಾಗುತ್ತಿದೆ. ಎಷ್ಟು ಸಂದರ್ಭೋಚಿತ ಕಥೆ ಅಲ್ಲವೇನೆ ಗೆಳತಿ? :)