Thursday, July 24, 2008

ಹೀಗೇ ಒಂದಿಷ್ಟು ಮಾತುಕತೆ

ಅವತ್ತೊಂದು ದಿನ ಹೀಗೇ ಏನೋ ಓದುತ್ತ ಕುಳಿತಿದ್ದೆ. ದೀಕ್ಷಾ ಪುಟಾಣಿ ಅಲ್ಲೇ ಆಡುತ್ತ ಏನೋ ಮಾಡುತ್ತಿದ್ದಳು. ಇದ್ದಕ್ಕಿದ್ದಂತೆ ಹೊರಗಡೆ ಏನೋ ಸದ್ದಾಯ್ತು. ಗುಂಯ್ ಗುಂಯ್ ಎಂದು ಸದ್ದು ಇನ್ನೂ ಜೋರಾಯಿತು. ಹೊರಗೆ ಸಮೀಪದಲ್ಲಿ ವಿಮಾನವೊಂದು ಹಾರುತ್ತಿತು ಅದರದ್ದೇ ಗಲಾಟೆ. ನನ್ನ ಯಾವತ್ತಿನ ಅಭ್ಯಾಸದಂತೆ "ಹೇಯ್ ಬಾರೆ ದೀಕ್ಷಾ ಹೊರಗೆ ನೋಡು ಏನೋ ಶಬ್ದ. ಏನೋ ತೋರ್ಸ್ತಿ ಬಾ " ನಾನು ಕೂಗಿದೆ. ಅವಳಿಗೆ ವಿಮಾನ ತೋರಿಸಬೇಕು ಅಂತ ನಾನು ಬಹಳ ಉತ್ಸಾಹದಲ್ಲಿದ್ದೆ. ಆದರೆ ನನ್ನಆಶ್ಚರ್ಯಕ್ಕೆ ಅವಳು ಯಾವುದೇ ಉತ್ಸಾಹ ತೋರದೆ ಬಹಳ ಉದಾಸೀನ ಭಾವದಲ್ಲಿ " ಅದು ಬೇರೆ ಏನೂ ಅಲ್ಲ. ವಿಮಾನಹೋಗ್ತಾ ಇದೆ ಅದರದ್ದೇ ಶಬ್ದ ಅಷ್ಟೆ." ಅಂದಳು ನನಗೆ ಅಷ್ಟೂ ಗೊತ್ತಿಲ್ಲ ಎಂಬಂತೆ.

ಅಷ್ಟು ಪುಟಾಣಿ ಹುಡುಗಿಯ ಕೈಯಲ್ಲಿ ನಂಗೆ ಮಂಗಳಾರತಿ ಆಗಿತ್ತು. ನನ್ನ ಉತ್ಸಾಹವೆಲ್ಲ ಠುಸ್ ಪಟಾಕಿಯಂತೆ ಆರಿ ಹೋಗಿತ್ತು. ಈಗಿನ ಮಕ್ಕಳನ್ನು ನಮ್ಮ ಬಾಲ್ಯ ಕಾಲದ ಮಕ್ಕಳಂತೆ ಹೋಲಿಸಿಕೊಂಡು ನಾನು ಅವಳನ್ನು ಕೂಗಿದ್ದು ನನ್ನ ತಪ್ಪೇ ಆಗಿತ್ತು.

ಈಗಿನ ಮಕ್ಕಳಿಗೆ ಆಶ್ಚರ್ಯ ಎನ್ನುವುದು ಯಾವುದೂ ಉಳಿದಿಲ್ಲ ಅಂತ ನನ್ನ ಭಾವನೆ. ಉದಾಹರಣೆಗೆ ವಿಮಾನವೇ. ನಾವೆಲ್ಲ ಚಿಕ್ಕವರಾಗಿದ್ದಾಗ ಆಕಾಶದಲ್ಲಿ ಒಂಚೂರು ಶಬ್ದವಾದರೂ ಸಾಕು ಪಿಳ್ಳೆಯಂತೆ ಕಾಣುತ್ತಿದ್ದ ವಿಮಾನವನ್ನು ನೋಡಲು ಎಲ್ಲಿದ್ದರೂ ಓಡಿ ಹೊರಗೆ ಬಂದು ಮೇಲೆ ನೋಡುತ್ತಿದ್ದೆವು. ಎಲ್ಲಾದರೂ ನಮಗೆ ಅದು ಕಾಣದೇ ಬೇರೆಯವರಿಗೆ ಮಾತ್ರ ಕಂಡುಬಿಟ್ಟಿದ್ದರೆ ಬೇಜಾರಾಗುತ್ತಿತ್ತು. ಈಗಿನ ಮಕ್ಕಳು ವಿಮಾನವನ್ನು ಆಕಾಶದಲ್ಲಿ ನೋಡುವುದೇನು ಎಷ್ಟೋ ಸಲ ವಿಮಾನದಲ್ಲಿ ಕೂತು ಹಾರಾಡಿಯೂ ಇರುತ್ತಾರೆ. ಬೆಂಗಳೂರಿನಂತ ಊರಲ್ಲಿ ದಿನಾ ಬೆಳಗಾದರೆ ಆಕಾಶದಲ್ಲಿ ಎಷ್ಟೋ ವಿಮಾನ ಹಾರುತ್ತಿರುವುದು ಬೇಡಅಂದರೂ ಕಣ್ಣಿಗೆ ಬಿದ್ದೇ ಬೀಳುತ್ತದೆ. ಅದಕ್ಕೇ ಅವರಿಗೆ ನಮ್ಮಂತೆ ಅದರಲ್ಲಿ ಯಾವುದೇ ವಿಶೇಷತೆ ಕಾಣುವುದಿಲ್ಲ.

ಈಗಿನ ಮಕ್ಕಳಿಗೆ ಇಂಥದ್ದು
ಬೇ.. ಅನ್ನುವುದಕ್ಕಿಂತ ಮೊದಲೇ ತಂದುಕೊಟ್ಟುಬಿಡುತ್ತೇವೆ. ಅದೇ ಕಾರಣಕ್ಕೆ ಮಕ್ಕಳಿಗೆ ನಮ್ಮಂತೆ ನಾನು ದೊಡ್ಡವಳಾದ ಮೇಲೆ ದುಡಿಯುವಂತವಳಾದ ಮೇಲೆ ಇಂಥದ್ದನ್ನು ನಾನೇ ತಗೋಬೇಕು" ಅನ್ನುವ ಆಸೆ, ಭಾವನೆಬರುವುದೇ ಇಲ್ಲವೇನೋ ಬಹುಷಃ .

ಇದು ಒಂದು ಉದಾಹರಣೆಯಷ್ಟೇ. ಎಲ್ಲವೂ ಕೈಗೆಟುಕುವುದರಿಂದ ಇನ್ನೂ ಎಷ್ಟೋ ವಿಷಯಗಳಲ್ಲಿ ಮಕ್ಕಳಿಗೆ ಕುತೂಹಲವೆ ಉಳಿದಿಲ್ಲ. ಮಕ್ಕಳಿಗೆ ಆಶ್ಚರ್ಯ ಎನ್ನುವುದಕ್ಕೆ ಏನೂ ಉಳಿದಿಲ್ಲವೇನೋ! ವಯಸ್ಸಿಗೆ ಮೀರಿ ಎಲ್ಲವೂ ಈಗಿನ ಮಕ್ಕಳಿಗೆ ಗೊತ್ತಿರುತ್ತದೆ. ನಮ್ಮಂತೆ ಆಕಾಶ ನೋಡಿ ಚಂದ್ರ ನಕ್ಷತ್ರಗಳನ್ನು ನೋಡಿ ಆನಂದಿಸೋ ಮನಸ್ಥಿತಿ ಯಾರಿಗೂ ಇಲ್ಲ. ಅದರಲ್ಲೇನಿದೆ ಅನ್ನುವ ನಿರ್ಭಾವುಕ ಮನೋಭಾವ. ನೀತಿ ಕಥೆಗಳು, ಪದ್ಯಗಳು ಯಾರಿಗೆ ಬೇಕಾಗಿದೆ ಈಗ ? ಅವು ಏನೆಂದೇ ಗೊತ್ತಿಲ್ಲ. ನಮ್ಮ ಕಾಲದ ಕಾಗಕ್ಕ ಗುಬ್ಬಕ್ಕಗಳೆಲ್ಲ ಎಲ್ಲಿಗೋ ಹಾರಿ ಹೋಗಿ ಬಹಳ ವರ್ಷಗಳಾಗಿಬಿಟ್ಟಿದೆ. ಹೀಗೆಲ್ಲ ಯೋಚಿಸಿದಾಗ ಬೇಜಾರಾಗುತ್ತದೆ
ನನಗೆ.

ದಿನಾ ಸಂಜೆ ಟೆರೆಸ್ ಮೇಲೆ ಸುಮ್ಮನೇ ಗಾಳಿಗೆ ಮೈಯೊಡ್ಡಿ ನಿಂತು ಲಹರಿಯಲ್ಲಿ ಯೋಚಿಸುತ್ತಿರುವಾಗ ದೀಕ್ಷಾ ಪುಟ್ಟಿ ಬಂದರೆ ಅವಳಿಗೆ ಆಕಾಶ ನಕ್ಷತ್ರ ಚಂದ್ರ ಎಲ್ಲ ತೋರಿಸಿ ಕಥೆ ಹೇಳ್ತಿದ್ದೆ. ಮೊದ ಮೊದಲು ಉತ್ಸಾಹ ತೋರಿಸದೇ ಕೀಟಲೆ ಮಾಡುತ್ತಿದ್ದವಳು ಆಮೇಲೆ ತುಂಬ ಕುತೂಹಲದಿಂದ ಕೇಳುತ್ತಿದ್ದಳು. ನಡು ನಡುವೆ ಮುದ್ದು ಬರುವಂತೆ ಮುಗ್ಧ ಪ್ರಶ್ನೆಗಳು. ಹಾಗೆಯೇ ಒಂದು ದಿನ ಆಕಾಶದತ್ತ ಮುಖ ಮಾಡಿದವಳೇ "ಹಾ . ನಿಮ್ಮನೆ ಚಂದ್ರ ಎಷ್ಟು ದೊಡ್ದಕ್ಕಿದ್ನೆ ! ನಮ್ಮನೆ ಚಂದ್ರ ಸಣ್ಣಕಿದ್ದ ! ಎಂತಕ್ಕೇನಾ !" ಅಂದಳು. ನಂಗೆ ನಗು ಮತ್ತು ಅವಳ ಮೇಲೆ ಮುದ್ದು ಎರಡೂ ಉಕ್ಕಿ ಬಂತು. ನನಗೆ ಮಕ್ಕಳು ಇಂಥ ಕುತೂಹಲಿ ಮತ್ತು ಮುಗ್ಧಭಾವದವರಾಗಿದ್ದಾಗಲೇ ಇಷ್ಟವಾಗೋದು. ಅವಳ ಪ್ರಶ್ನೆಗೆ ಅವಳಂತೆಯೇ ಮುಗ್ಧವಾದ ಉತ್ತರವನ್ನಿತ್ತು , ಅದಕ್ಕೆ ಅವಳು ಕೇಳಿದಇನ್ನಷ್ಟು ಮುಗ್ಧ ಪ್ರಶ್ನೆಗಳಿಗೆ ಮತ್ತೆ ಉತ್ತರ ಹುಡುಕುತ್ತ , ಅವಳು ಹೇಳಿದ ಚಂದಕ್ಕಿಮಾಮ - ಚಕ್ಕುಲಿಮಾಮನ ಕಥೆಯನ್ನು ಮನದಣಿಯೆ ಆನಂದಿಸಿದೆ.

ಮೊನ್ನೆ ಯಾಕೋ ವಿಮಾನದ ಕಥೆ ಮತ್ತು ಚಂದಕ್ಕಿಮಾಮ - ಚಕ್ಕುಲಿಮಾಮಾನ ಕಥೆ ಬಹಳ ನೆನಪಾಗುತ್ತಿತ್ತು, ನೆನಪು ಇಲ್ಲಿ ಅಕ್ಷರವಾಯ್ತು.

Wednesday, July 16, 2008

ಸೋರಿ ಹೋಗುತಿದೆ ಬೆಳದಿಂಗಳು

ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.
ಬೆಳ್ಳಿ ಬೆಳಕ ಕಣ್ತುಂಬಿಕೊಂಡು
ಮನದಣಿಯೆ ಅಂಗಳದಲ್ಲಿ ನಲಿಯುವವರಿಲ್ಲದೇ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.

ಅವಳ ಕಂಗಳೊಳಗೆ ಬೆಳದಿಂಗಳಿಳಿಯುವಾಗ
ಅವನು ಅವಳ ಕಣ್ಣಲ್ಲಿ ಕಣ್ಣಿಡಲು ,
ಅವಳ ಕೆನ್ನೆ ಕೆಂಪಾಗಿ ಅವನು ನಗುವುದಕೆ
ಅವನಿಲ್ಲ ಅವಳಿಲ್ಲ ಅಲ್ಲಿ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.

ಅಳುವ ಕಂದನಿಗೊಮ್ಮೆ
ನಗುವ ಚಂದಕ್ಕಿ ಮಾಮನನು ತೋರಿಸಿ
ಹಾಲು ಬೆಳದಿಂಗಳಲಿ ತೋಯ್ದ ತುತ್ತನುಣಿಸಿ
ಚಂದ್ರನೂರಿಗೆ ಕಳುಹುವೆನೆಂದು ಲಾಲಿ ಹಾಡಿ
ಮುದ್ದಿಸಲು ಯಾರಿಲ್ಲದೇ ಅಲ್ಲಿ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.

ಶ್ರಾವಣದ ಇರುಳಿನಲಿ
ಕಪ್ಪಿಟ್ಟ ಕಾರ್ಮೋಡ ಕರಗಿ ಮಳೆ ಹನಿಯುವಾಗ
ಮರದ ಮರೆಯಲ್ಲಿಣುಕಿ
ಬೆಳದಿಂಗಳ ನಗೆ ಚೆಲ್ಲುವ ಚಂದಿರನ
ತುಂಬುಮೊಗವ ನೋಡುವವರಿಲ್ಲದೇ ಅಲ್ಲಿ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.