Tuesday, March 25, 2008

ಅಪ್ಪ ಹೇಳಿದ್ದು

ತುಂಬಾ ದಿನಗಳ ನಂತರ ನಾನು ಮತ್ತು ನನ್ನ ಅಪ್ಪಯ್ಯ ಅದೂ ಇದೂ ಮಾತಾಡುತ್ತ ಕುಳಿತಿದ್ದೆವು. ಹೀಗೆ ಆರಂಭವಾಗುವ ಮಾತು ಆಮೇಲೆ ಗಂಭೀರ ಚರ್ಚೆಯಲ್ಲೋ ವಾದದಲ್ಲೋ ಕೊನೆಗೊಳ್ಳುವುದು ಸಾಮಾನ್ಯ. ಅವತ್ತೂ ಮಾತಡುತ್ತ ಮಾತಡುತ್ತ ನಮ್ಮ ಜೀವನದ ಧ್ಯೇಯ, ಸಿದ್ಧಾಂತ, ನಮಗೆ ನಾವೇ ಹಾಕಿಕೊಂಡ ನಿಯಮಗಳು ಇಂಥ ವಿಷಯಗಳೆಲ್ಲ ಚರ್ಚೆಯ ಭಾಗವಾಗಿ ಬಂದಾಗ ನನ್ನ ಮತ್ತು ಅಪ್ಪಯ್ಯನ ಸಿದ್ಧಾಂತ, ನಿಯಮಗಳಲ್ಲಿ ಸಾಕಷ್ಟು ಸಾಮ್ಯತೆ ಇದೆ ಅನ್ನಿಸಿತು. ಅವೆಲ್ಲ ಅಪ್ಪಯ್ಯ ಯಾವತ್ತೂ ನನ್ನ ಮೇಲೆ ಹೇರಿದ ವಿಷಯಗಳಲ್ಲ, ನನ್ನ ಭಾಗವೆಂದೇ ತಿಳಿದಿರುವ ಅದೆಷ್ಟೋ ವಿಷಯಗಳು ಅಪ್ಪಯ್ಯನಿಗೂ ಹಾಗೆಯೇ ಎಂದು ತಿಳಿದಾಗ ಇಬ್ಬರಿಗೂ ಒಂದು ಬಗೆಯ ಅಚ್ಚರಿ. ನೀನು ನಿನ್ನಪ್ಪನ ತದ್ರೂಪು ಅಂತ ಅಮ್ಮ ಯಾವಾಗಲೂ ಹೆಳುವುದು ಸರಿಯೇ ಇದೆ ಅಂತ
ಇಬ್ಬರೂ ನಕ್ಕೆವು. ಹಾಗೆಯೇ ಮಾತು ನನ್ನ ಬರವಣಿಗೆ ಓದುವಿಕೆಗಳ ಬದಿಗೆ ತಿರುಗಿತು. ಅದರೊಡನೆ ಕೆಲವು ಹಳೆಯ ವಿಷಯಗಳನ್ನು ಮೆಲುಕು ಹಾಕುವ ಹಾಗಾಯಿತು.

ಅಪ್ಪಯ್ಯ ಒಳ್ಳೆಯ ಬರಹಗಾರ. ಬರೆಯುವುದನ್ನು ಬಿಟ್ಟು ಬಹಳವೇ ವರ್ಷಗಳಾದವು. ಯಾಕೆ ಬಿಟ್ಟಿದ್ದು ಅನ್ನುವುದಕ್ಕೆ ಅವನಲ್ಲಿ ಸಕಾರಣಗಳಿರಲಿಲ್ಲ. ಅಪ್ಪಯ್ಯ ಪ್ರತಿ ಸಲದಂತೆ ಕೊಡುವ ತುಂಡು ತುಂಡು ಕಾರಣಗಳೊಂದೂ ನನಗೆ ಸರಿ ಕಾಣಲಿಲ್ಲ. ನೀನು ಬರೀತಾ ಇದ್ದೀಯಲ್ಲ ಅದೇ ಖುಷಿ ಅಂದ ಅಪ್ಪಯ್ಯ. ಮತ್ತೆ ಆ ದಿನಗಳಲ್ಲಿ ಅಪ್ಪಯ್ಯ ಬರೆದಿದ್ದ ಕೆಲವು ಲೇಖನಗಳು ಮತ್ತು ಅವುಗಳ ಬಗೆಗಿನ ಕೆಲವು ಸ್ವಾರಸ್ಯಕರ ಕಥೆಗಳ ಬಗ್ಗೆ ಮಾತಾಯಿತು. ಅದರ ನಡುವೆ ನಂಗೆ ನೆನಪಾಗಿದ್ದು ಅಪ್ಪಯ್ಯನ ಕವನಗಳು. ನಾವು ಚಿಕ್ಕವರಾಗಿದ್ದಾಗ ಅದನ್ನು ಓದಿ ಹೆಳುತ್ತಿದ್ದಿದ್ದು ಈಗಲೂ ನೆನಪಿದೆ.ಅವುಗಳಲ್ಲಿ 3 ಕವನಗಳು ನನಗೆ ಬಹಳ ಇಷ್ಟವಾಗಿದ್ದು.

ಒಂದು "ಅಪ್ಪ ಹೇಳಿದ್ದು" ಎನ್ನುವ ಕವಿತೆ, ಇನ್ನೊಂದು ಚಂದ್ರಗುಪ್ತ ಮೌರ್ಯನ ಕುರಿತಾದ ಕಥಾ ಕವನ. ಅದನ್ನು ಅಪ್ಪಯ್ಯ ನಾಟಕದ ಹಿಮ್ಮೇಳ ಸಂಗೀತಕ್ಕೆಂದು ಬರೆದದ್ದು, ರಾಗ ಸಂಯೋಜಿಸಿ ಹಾಡಿದ್ದು. ಮತ್ತೊಂದು "ಅಪ್ರಬುದ್ಧ" ಎನ್ನುವ ಕವಿತೆ.

ನೆನಪಿಸಿಕೊಂಡಾಗ ಕೆಲವು ಸಾಲುಗಳು ಮರೆತಿದ್ದವು. ನಂಗೆ ಅವು ಬೇಕೇ ಬೇಕೆಂದು ಹೇಳಿದಾಗ ಅಪ್ಪಯ್ಯ ಹಳೆಯ ಕಡತಗಳಲ್ಲೆಲ್ಲ ಹುಡುಕಿ ಮರೆತ ಸಾಲುಗಳನ್ನೆಲ್ಲ ನೆನಪಿಸಿಕೊಂಡಿದ್ದಾಯ್ತು. ಈ ಕವನವನ್ನು ನನ್ನ ಬ್ಲಾಗ್ ನಲ್ಲಿ ಹಾಕ್ತೇನೆಂದು ನಾನು ಹೇಳಿದಾಗ "70-80 ಕವನ ಬರೆದವಳಿಗೆ ನನ್ನ ಒಂದು ಕವನ ಬೇಕೇನೆ?" ಅಪ್ಪಯ್ಯ ತಮಾಷೆ ಮಾಡಿದರೆ ನಾನಂದೆ "ನನ್ನ 100 ಕವನವೂ ನಿನ್ನ 3 ಕವನದ ತೂಕಕ್ಕೆ ಸರಿದೂಗುವುದಿಲ್ಲವೇನೊ!." ಅಪ್ಪಯ್ಯ ಸುಮ್ಮನೇ ನಕ್ಕ.

"ಅಪ್ಪ ಹೇಳಿದ್ದು" ಎನ್ನುವ ಕವಿತೆಯನ್ನು ಇಲ್ಲಿ ಹಾಕಿದ್ದೇನೆ.

ದು:ಖ ದುಮ್ಮಾನಗಳ
ಕಾಲ ಬಂದಾಗೆಲ್ಲ
ಅಪ್ಪ ಹೇಳುತಲಿದ್ದ
ತಾಳು ತಾಳು,
ತಾಳು ಎಂದು
ಕಾಲ ನಮಗೊಂದು ಬರಬಹುದೆಂದು.

ರಾಮ ಬರುವನು ಎಂದು
ಶಬರಿ ಕಾದಿದ್ದಂತೆ
ವರುಷಗಳನೇಕವನವನು
ವ್ಯರ್ಥ ಕಳೆದ,
ಯಾರು ಬೈದರು ಸಹಿಸಿ
ಸಕಲ ಕಷ್ಟವ ಭರಿಸಿ
ತಾಳ್ಮೆಯಾಂತವನವನು
ಏರಿ ಕುಳಿತ,
ರಾಮ ಬರಲೇ ಇಲ್ಲ
ಶಬರಿ ಬಿಡಲೇ ಇಲ್ಲ.

ಬರುವ ಕಾಲವ ಕಾದು
ಸುಸ್ತಾಗಿ ಕೊನೆಗೊಮ್ಮೆ
ಇಲ್ಲವಾದರು ಅವರು ನನ್ನನಗಲಿ.
ಅವರ ನುಡಿ ಪಾಲಿಸುತ
ಬರದ ಕಾಲವ ಕಾದು
ಬೇಸತ್ತು ಕಾದಿರುವೆ
ಕಾಲನ ಕರೆಗೆ.

Friday, March 14, 2008

ಮರೆತರು

ದೀಪದ ಬುಡದಲ್ಲಿ ಬರೀ ಕತ್ತಲು
ಬರೀ ಕತ್ತಲು ಎನ್ನುತ್ತ ಅಲ್ಲೇ ನಿಂತು
ದೀಪ ಎಲ್ಲೆಡೆ ಪಸರಿಸುವ ಬೆಳಕನ್ನು ನೋಡುವುದೇ ಮರೆತರು.

ಕಳೆದುಕೊಂಡೆನು ಅದನು ಇದನು ಎನ್ನುತ್ತ
ಕೊನೆವರೆಗೆ ಕಳೆದದ್ದನ್ನು ಹುಡುಕುತ್ತಲೇ ಹೋಗಿ
ಉಳಿದಿದ್ದನ್ನು ಉಳಿಸಿಕೊಳ್ಳಲು ಮರೆತೇಬಿಟ್ಟರು .

ಬೆಚ್ಚನೆಯ ಗೂಡಲ್ಲಿ ಕನಸಿನ ಗುಟುಕುಗಳ ನುಂಗುತ್ತನುಂಗುತ್ತ
ರೆಕ್ಕೆ ಬಲಿತು ಆಗಸಕ್ಕೆ ಹಾರುವ ಸಂಭ್ರಮಾತುರದಲ್ಲಿ
ಅಷ್ಟು ದಿನ ನೆಲೆಕೊಟ್ಟು ನಿಲ್ಲಿಸಿದ ನೆಲವನ್ನು ಮರೆತೇಹೋದರು.

ಆ ಹತ್ತಾರು ಗುರಿಗಳು , ಸಿಕ್ಕಷ್ಟೂ ಸಾಲದೆನ್ನುವ ಗಳಿಕೆ ,
ಸಾಧಿಸಿದಷ್ಟೂ ಇನ್ನೇನೋ ಉಳಿದುಹೋಯಿತೆನ್ನುವ ಹಳಹಳಿಕೆ
ಈ ಎಲ್ಲದರ ನಡುವೆ ದಣಿದೆವೆಂದುಕೊಳ್ಳುತ್ತ ಒಂದು ನಗುವೆಂದರೇನೆಂದೇ ಮರೆತರು.

ಎಲ್ಲವೂ ಇದ್ದೂ ಏನಿಲ್ಲವೆನ್ನುತ್ತ
ಬರದ ನಿನ್ನೆಗಳಿಗೆ ಕೊರಗುತ್ತ, ಗೊತ್ತಿಲ್ಲದ ನಾಳೆಗಳಿಗೆ ಕಾಯುತ್ತ
ಇಂದು ಬದುಕುವುದನ್ನು ಮರೆತೇಬಿಟ್ಟರು.

Monday, March 10, 2008

ಶುಭಾಶಯಗಳು

ನಂಗೆ ಮರೆವು ಸ್ವಲ್ಪ ಜಾಸ್ತಿನೇ ಜಾಸ್ತಿ. ಅದು ಅವಾಗಾವಾಗ prove ಆಗ್ತಾ ಇರುತ್ತೆ. ಅದೇನು ಹೊಸ ವಿಷಯ ಅಲ್ಲ ಬಿಡಿ. ಆದರೂ ಈ ವಿಷಯವನ್ನು ಈಗ ಇಲ್ಲಿ ಎಲ್ಲರಿರೆದುರಿಗೆ ಹೇಳೋ ಅಂತ ವಿಷಯನಾದ್ರೂ ಏನು ಅಂದ್ರೆ ...

ಸ್ವಲ್ಪ ದಿನಗಳ ಹಿಂದೆ ಯಾರದ್ದೋ ಬ್ಲಾಗ್ ಅಲ್ಲಿ "ನನ್ನ ಬ್ಲಾಗ್ ನ ಮೊದಲನೆ ಹುಟ್ಟು ಹಬ್ಬ " ಅಂತ ಓದಿದೆ. ಥಟ್ಟನೆ ನನ್ನ ಬ್ಲಾಗ್ ನ ಹುಟ್ಟಿದ ಹಬ್ಬ ಯಾವಾಗ? ಅಂತ ಪ್ರಶ್ನೆ ತಲೆಯಲ್ಲಿ ಬಂತು. ಬ್ಲಾಗ್ ಗೆ ಹೋಗಿ ನೋಡಿದೆ. ಮೊದಲ ಪೋಸ್ಟ್ ನ ಡೇಟ್ ೮-ಮಾರ್ಚ್-೨೦೦೭ ಅಂತ ಇತ್ತು. ಓಹೋ ಇನ್ನೂ ಸುಮಾರು ದಿನ ಇದೆ. ನಾನೂ ನನ್ನ ಬ್ಲಾಗ್ ನ ಹುಟ್ಟು ಹಬ್ಬವನ್ನು ಆಚರಿಸಬೇಕು ಅಂತ ಮನಸ್ಸಲ್ಲೇ ನಕ್ಕು ಸುಮ್ಮನಾಗಿದ್ದೆ.

ಸ್ವಲ್ಪ ದಿನಗಳ ಹಿಂದೆ ಎನ್ನುವ ಒಂದು ದಿನ ಮತ್ತು ಇವತ್ತಿನ ದಿನದ ಮಧ್ಯ ಎಷ್ಟೋ ದಿನಗಳು ಬಂದು ಬಿಟ್ಟಿದ್ದರಿಂದ ನಂಗೆ ನನ್ನ ಬ್ಲಾಗ್ ನ ಹುಟ್ಟುಹಬ್ಬ, ಅದನ್ನ ನಾನು ಸಂಭ್ರಮಿಸಬೇಕು ಅಂತ ಅಂದುಕೊಂಡಿದ್ದು ಎಲ್ಲ ಮರೆತು ಹೋಗಿತ್ತು.

ಇವತ್ತು ಅದೇಕೋ ನನ್ನ ಬ್ಲಾಗ್ ಅಲ್ಲಿ ಏನನ್ನೋ ಹುಡುಕುತ್ತಿದ್ದವಳಿಗೆ ಮೊದಲ ಪೋಸ್ಟ್ ನ ಡೇಟ್ ಕಾಣಿಸಿತು . ಬ್ಲಾಗ್ ನ ಹುಟ್ಟು ಹಬ್ಬದ ದಿನ ಕಳೆದು ಮತ್ತೆರಡು ದಿನ ಕಳೆದಿತ್ತು. ಅವಾಗಲೇ ಮೇಲ್ಕಂಡ ವಿಷಯಗಳೆಲ್ಲ ತಲೆಯಲ್ಲಿ ಹಾದು ಹೋಗಿ ಮನಸ್ಸು ವಿಚಿತ್ರ ಭಾವನೆಗಳಿಂದ ತುಂಬಿ ಹೋಯಿತು. ತಮ್ಮ ಸ್ನೇಹಿತರ ಹುಟ್ಟು ಹಬ್ಬದ ಪಾರ್ಟಿಗಳಿಗೆ ಹೋಗಿ ಬಂದು ತಮ್ಮ ಹುಟ್ಟು ಹಬ್ಬವನ್ನೂ ಹೀಗೆಯೇ ಆಚರಿಸುತ್ತಾರ ನಮ್ಮ ಮನೆಯಲ್ಲಿ? ಅಂತ ಕನಸು ಕಂಡು ಅಮೇಲೆಅದು ಹಾಗೆ ಆಗದಿದ್ದಲ್ಲಿ ಬೇಸರಿಸಿಕೊಂಡು ಮುನಿಸಿಕೊಂಡು ಕುಳಿತಿರುವ ಮುದ್ದು ಮಗುವಿನಂತೆ ನನ್ನ ಬ್ಲಾಗ್ ನಂಗೆ ಕಂಡಿತು.

ಒಂದು ವರ್ಷದ ಹಿಂದೆ ಬ್ಲಾಗ್ ನಲ್ಲಿ ಬರೆಯಲು ಆರಂಭಿಸಿದಾಗ ಇಂಥದ್ದೇ ಬರಹಗಳನ್ನು ಬರೆಯಬೇಕು ಹೀಗೆಯೇ ಬರೆಯಬೇಕು ಅಂತ ಏನು ನಿರ್ಧರಿಸಿರಲಿಲ್ಲ, ನಾನು ಬರೆದಿಟ್ಟಿದ್ದ ಒಂದಷ್ಟು ಬರಹಗಳನ್ನು ಬ್ಲಾಗ್ ನಲ್ಲಿ ಹರಿಯ ಬಿಡಬೇಕು ಎಂದಷ್ಟೇ ಅಂದುಕೊಂಡಿದ್ದು. ಬರೆಯುತ್ತ ಬರೆಯುತ್ತ ಬರೆವಣಿಗೆಯೆಡೆಗಿನ ನನ್ನ ಪ್ರೀತಿ ಮತ್ತೂ ಹೆಚ್ಚಾಗಿದ್ದಕ್ಕೆ ತುಂಬ ಖುಷಿ ಇದೆ.

ನಾನು ಪ್ರೀತಿಯಿಂದ ಬರೆದ ಬರಹಗಳನ್ನು ಪ್ರೀತಿಯಿಂದ ಓದಿ , ತಪ್ಪುಗಳಿದ್ದಲ್ಲಿ ಹೇಳಿ ತಿದ್ದಿಕೊಳ್ಳಲು ನೆರವಾಗಿ, ಮತ್ತಷ್ಟು ಬರೆಯಲು ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ನನ್ನ ಧನ್ಯವಾದಗಳು.

ಹುಟ್ಟು ಹಬ್ಬ ಕಳೆದು ೨ ದಿನವಾದರೇನು? ೪ ದಿನವಾದರೇನು? ಬರಹ ಚಿರನೂತನ ಅದಕ್ಕೆ ದಿನ ದಿನ ದಿನವೂ ಹಬ್ಬ.
ಅದರೂ ....
ನನ್ನ ಪ್ರೀತಿಯ ಬರಹಗಳನ್ನು ಕಟ್ಟಿಡುವ ಪುಟ್ಟ ಬುಟ್ಟಿ "ನೆನಪಿನಗಳಿಂದ ಒಂದಿಷ್ಟು"ವಿಗೆ ಮೊದಲನೆಯ ಹುಟ್ಟುಹಬ್ಬದ ಶುಭಾಶಯಗಳು ಮನತುಂಬಿದ ಪ್ರೀತಿಯೊಂದಿಗೆ.
----ಶ್ಯಾಮಾ