Monday, September 20, 2010

ನೆನಪ ಕನವರಿಕೆ

ಮೋಡ ಕವಿದ ಬೇಸರದ ಮಧ್ಯಾಹ್ನ
ಸುಮ್ಮನೇ ಬೀಸಿ ಬಂದ ಗಾಳಿಗೆ
ಕಾಲುಹಾದಿಗುಂಟ ಮರವುದುರಿಸಿದ
ಹೂ ಪಕಳೆಗಳಂತೆ ನಿನ್ನ ನೆನಪು
       
ಹೂ ಕಂಪು ಹರಡಿ ತನುವನಾವರಿಸಿ
ಮನವ ಮುಸುಕಿದ್ದ ಬೇಸರದ ಛಾಯೆ
ಅಳಿಯೆ 
ದಿನವಿಡೀ ಕವಿದಿದ್ದ ಮೋಡ ಕೊಂಚ ಸರಿದು
ಸಂಜೆ ಜಾರುವ ಹೊತ್ತಲ್ಲೂ ಹರಿದ ತಿಳಿ
ಬೆಳಕಂತೆ ನಿನ್ನ ನೆನಪು

ಮುಂಬಾಗಿಲ ದಾಟಿ ಒಳಬರುವಾಗ
ಸಂಜೆ ಯಾರಿಲ್ಲದ ಹೊತ್ತಲ್ಲಿ, ಅರಿವಿಲ್ಲದೇ ಕವಿದ ಕಪ್ಪಿಗೆ
ಮಾತು ಮರೆತಂತಾಗಿ ದಿಗಿಲು ಆವರಿಸುವಾಗ
ಮೆಲ್ನಕ್ಕ  ಗುಡಿಯ ಮುಂದಿನ ಪ್ರಣತಿಯಂತೆ  ನಿನ್ನ ನೆನಪು

ಕಾರುಗತ್ತಲ  ರಾತ್ರಿ, ತಾರೆ ನೂರಲ್ಲ ಒಂದೂ ಇಲ್ಲದೇ
ನಿಶೆ ತಾನೇ ತಾನು ಮುಸುಕಿದಾಗ
ನಿದ್ದೆ ಬಾರದೆಯೂ ಮುಚ್ಚಿಕೊಂಡ ಕಂಗಳೊಳಗೆ
ತುಂಬಿಕೊಂಡ ಕನಸಂತೆ ನಿನ್ನ ನೆನಪು

Monday, April 26, 2010

........

ಸಂಜೆಗೆಂಪಿನ ಪರದೆ ತೆರೆದುಕೊಳುವಾ ವೇಳೆ
ಅರೆಬಿರಿದ ಹೂ ಮೊಗ್ಗು ಚೆಲ್ವ ಬೀರಿ ನಗಲು
ಮೌನದೊಳು ಮರೆತಿದ್ದ  ಹಾಡು
ಮನದೊಳಗೆ ಸಾಲು ಸಾಲಾಗಿ ಬರಲು
ನನ್ನೊಳಗೆ ನಾ ಹಾಡಿಕೊಳ್ಳುವ ಬಯಕೆ
ದನಿಯಿಲ್ಲದಾ ಹಾಡಿಗೆ ರಾಗ ತಾಳಗಳು ಬೇಕೇ?
ಭಾವವೊಂದಿರೆ ಸಾಕೆ?

ಸಂಜೆ ನಸುಗಪ್ಪು ಕವಿಯುವ ಹೊತ್ತು
ಬೀಸಿ ಬೀಸಿ ಬರುತಿಹ ತಂಪಿನ ಗಾಳಿಯಲಿ
ನೆನಪು ಕನಸುಗಳ ತರಗೆಲೆಗಳ ಹಾಸಿ ಕೂತಿರುವಾಗ
ಹಾರಿ ಹೋಗುತಿರುವ ಒಂದೊಂದು ಎಲೆಯನ್ನು
ಒಬ್ಬಳೇ ನಾನು ಹಿಡಿದು ತರಲೇನು ಇಲ್ಲ ಹಾರ ಬಿಡಲೇನು?

ಕವಿದ ಕಡುಗಪ್ಪಿನಲಿ ಚಿಟ ಪಟನೆ ಬೀಳುವ ಹನಿಗಳು
ಕಂಡೂ  ಕಾಣದೆ ಕಳೆದುಹೋಗುತಿರುವಾಗ 
ಸಾಲು ಸಾಲು ಹಾಡು ಮನದಲ್ಲೇ ಮತ್ತೆ ಮರೆತ್ಹೋಗುವ ಮುನ್ನ
ನೀ ಬಂದು ದನಿಯಾಗು ಹಾಡು ಹಾಡಲೇ ಬೇಕಿದೆ ನಾನು .
ನೆನಪು ಕನಸಿನ ತರಗೆಲೆಗಳು ಹಾರಿ  ಚೆದುರಿ
ಅಂಗಳದ ಒದ್ದೆಯಲಿ ಕರಗಿಹೋಗುವ ಮುನ್ನ
ನೀ ಬಂದು ಜೊತೆಯಾಗು ಎಲ್ಲವನೂ ಒಟ್ಟುಗೂಡಿಸಬೇಕಿದೆ ನಾನು.

Thursday, July 23, 2009

ಅಲ್ಲಿ ಶ್ರಾವಣವಂತೆ

ಅಲ್ಲಿ ಶ್ರಾವಣವಂತೆ
ಬಿಡಗೊಡದೆ ಸುರಿವ ಮಳೆ
ಹನಿ ಹನಿಯಲ್ಲೂ ಹೊಳೆಯುತಿರುವುದು ನನ್ನ ನೆನಪೇ ?
ಶ್ರಾವಣದ ಮುಸ್ಸಂಜೆ
ಮಬ್ಬುಗತ್ತಲು ಕವಿಯೆ
ದೇವರೊಳದಲಿ ದೀಪ ಬೆಳಗುವಾ ವೇಳೆ
ಕುಣಿವ ನೆರಳಲಿ ಹುಡುಕಿದ್ದು ನನ್ನ ಚಿತ್ರವನೇ?
ಚಂದ್ರನಿಲ್ಲದ ಇರುಳು
ಶ್ರಾವಣದ ಮಳೆಸುರಿದು ತುಂಬಿದಂಗಳದಲ್ಲಿ
ಜಿರ ಜಿರನೆ ಹನಿ ಬೀಳುವಾಗ ನೀ
ಆಲಿಸಿದ್ದು ನನ್ನ ಗೆಜ್ಜೆಯ ಸದ್ದೇ ?

ಇಲ್ಲಿ ಶ್ರಾವಣವಿಲ್ಲ
ಹೊರಗೆ ಹನಿವ ಮಳೆಯೇನಿಲ್ಲ.
ಹೊಳೆವ ಹನಿಗಳಿಗೆ ಬೊಗಸೆಯೊಡ್ಡಿ
ದೇವರೊಳಗಣ ದೀಪದಲೇ ಹಣತೆ ಬೆಳಗುತ್ತಾ
ಮೋಡಕವಿದ ಬಾನಿನಲ್ಲಡಗಿದ ಚಂದಿರನ
ಹುಡುಕುವೆನೆಂದು ಒದ್ದೆಯಂಗಳದಲ್ಲಿ ಹೆಜ್ಜೆ ಹಾಕುವಾಗ
ನನ್ನ ಗೆಜ್ಜೆ ಸದ್ದಿಗೆ ನೀನು ನಕ್ಕಿದ್ದೆಲ್ಲ
ನೆನಪಮಾಲಿಕೆಯಲಿ ಮುತ್ತಂತೆ ನೇಯುತ್ತಾ
ಕಪ್ಪುಗೂಡಿದ ಸಂಜೆ ಕಿಟಕಿಯಾಚೆ ನೋಟ ನೆಟ್ಟು
ಯಾರದೋ ಬರುವನ್ನು ಕಾಯುವಾಗ
ಮನದಲ್ಲಿ ಮಾತ್ರ ಅದೇಕೋ ಮಳೆ ಸುರಿವ ಸದ್ದು.

Tuesday, January 13, 2009

ಅಂದು ಕಾಣದ ಚಂದಿರ

"ಅಲ್ನೋಡು ಚಂದ್ರ!!"

"ಎಲ್ಲಿ??"

"ಹೇ ಕಿಟಕಿಯಿಂದ ಹೊರಗೆ ನೋಡು, ಕಾಣುತ್ತಾ ಇದೆ ಎಷ್ಟು ಚೆನ್ನಾಗಿ"

"ನಾನೂ ಕಿಟಕಿ ಹೊರಗೇ ನೋಡ್ತಾ ಇರೋದು, ಆದ್ರೆ ನಂಗೆ ಕಾಣುತ್ತಾ ಇಲ್ಲಾ ಚಂದ್ರ"

"ಸರಿಯಾಗಿ ನೋಡೇ "

"ಎಲ್ಲಿ? ನಂಗೆಲ್ಲೂ ಕಾಣ್ತಾ ಇಲ್ಲ"

"ಈ ಕಡೆ ಬಾ , ಬಗ್ಗಿ ನೋಡು ಅಲ್ಲಿ"

"ಸುಳ್ ಹೇಳ್ತಾ ಇದಿಯೇನೋ , ನಂಗಂತೂ ಈಗಲೂ ಏನೂ ಕಾಣ್ತಾ ಇಲ್ಲಾ "

"ನೀನೇ ಸುಳ್ ಹೇಳ್ತಾ ಇದೀಯ ಕಾಣ್ತಾ ಇಲ್ಲ ಕಾಣ್ತಾ ಇಲ್ಲ ಅಂತ, ನಂಗೆ ಎಷ್ಟು ಸರಿಯಾಗಿ ಕಾಣ್ತಾ ಇದೆ"

"ಹೌದೌದು ನಾನ್ಯಾಕೆ ಸುಳ್ಳು ಹೇಳಲಿ . ಕಾಣ್ತಾ ಇಲ್ಲ ಅದ್ಕೇ ಕಾಣ್ತಾ ಇಲ್ಲ ಅಂದಿದ್ದು ಅಷ್ಟೆ"

"ಹ್ಮ್ಮ್ ಹೋಗ್ಲಿ ಬಿಡು, ನಿನಗೆ ಕಾಣಿಸದೆ ಇದ್ರೆ ನಾನೇನು ಮಾಡೋಕಾಗುತ್ತೆ , ಅಥವಾ ನಿನಗೆ ನೋಡಕ್ಕೆ ಬರದೇ ಇದ್ರೆ ನಾನು ಏನ್ ಮಾಡೋಕೆ ಆಗುತ್ತೆ "

******************************************

"ಹೇ ಬೇಗ ಬಾರೆ ಇಲ್ಲಿ"

"ಯಾಕೇ ಕೂಗ್ತಿದಿಯ ಏನಾಯ್ತೆ ?"

"ಅಲ್ನೋಡು ಹೊರಗೆ, ಚಂದ್ರ ಎಷ್ಟು ಚಂದ ಕಾಣ್ತಿದೆ "

"ಚಂದ್ರನಾ? ಎಲ್ಲೇ ನಂಗೆ ಕಾಣುತ್ತಿಲ್ಲ."

"ಸರಿಯಾಗಿ ನೋಡೇ ಹುಡುಗಿ ಕಾಣಿಸ್ತಿದೆ ಎಷ್ಟು ಚಂದಾಗಿ "

"ಹ್ಮ್ಮ್ ಇರಮ್ಮ ಸರಿಯಾಗೇ ನೋಡ್ತೀನಿ "

"ಹೇ ಯಾಕೆ ನನ್ನೆದ್ರಿಗೆ ಬಂದು ನಿಂತೆ? ಚಂದ್ರ ಏನು ನನ್ನ ಮುಖದ ಮೇಲೆ ಇದ್ದಾನಾ? ಆಕಾಶದಲ್ಲಿ ಇರೋದು ಚಂದ್ರ"

"ಹ್ಮ್ಮ್ ಗೊತ್ತು ಗೊತ್ತು, ನಂಗೆ ಕಾಣಲಿಲ್ಲ ಚಂದ್ರ ಆಕಾಶದಲ್ಲಿ ಆದರೆ ನಿನಗೆ ಕಾಣಿಸ್ತಿದಾನಲ್ವಾ, ಈಗ ನಿನ್ನ ಕಣ್ಣೊಳಗೆ ನೋಡಿದ್ರೆ ನಂಗೆ ಚಂದ್ರ ಕಂಡೇ ಕಾಣಬೇಕು
ಅಲ್ವೇನೆ?"

".........................................."

"ಏಯ್ !! ಏನು ಯೋಚನೆ ಮಾಡ್ತಿದೀಯಾ ? ಎಲ್ಲಿ ಕಳೆದು ಹೋದೆ?"

"ಏನಿಲ್ಲ ನೀನು ಹೇಳಿದ್ಯಲ್ಲ ಅದರ ಬಗ್ಗೆ ಯೋಚನೆ ಮಾಡ್ತಿದ್ದೆ . ನೀನು ಹೇಳಿದ್ದು ಸರಿ ಇದೆ. ನೀನು ತುಂಬಾ ಜಾಣೆ , ಚಂದ್ರನ್ನ ನೋಡೋದು ಹೇಗೆ ಅಂತ ಎಷ್ಟು ಚೆನ್ನಾಗಿ ಗೊತ್ತು ಮಾಡ್ಕೊಂಡಿದೀಯ. ನನಗೂ ಗೊತ್ತಿದ್ದಿದ್ರೆ ,ಮನಸ್ಸಿನ ಕಣ್ಣಿಂದ ಒಂಚೂರು ನೋಡೋ ಪ್ರಯತ್ನ ಮಾಡಿದ್ರೆ ಅವತ್ತು ಚಂದ್ರ ಕಂಡಿರುತ್ತಿದ್ದ ನಂಗೆ ."

Wednesday, December 17, 2008

ಅವಳು

ಒದ್ದೆ ಪಾದಗಳ ಹೆಜ್ಜೆ ಜಾಡಿನಲ್ಲಿ ನಡೆಯಹೊರಟವಳು
ಕಾರಿರುಳ ಬಾನಿನಲಿ ಚಂದಿರನ ಹುಡುಕಿದಳು
ನದಿಯಲ್ಲದವಳು ಎಲೆಯಮೇಲೆ ಬಿದ್ದ ಮಳೆಹನಿಯಂಥವಳು
ಕಡಲ ಸೇರಲು ಹೊರಟಳು.
ದನಿಯಿಲ್ಲದವಳು ಮೌನಿ ಶಿಲೆಯಂಥವಳು
ಎದೆರಾಗವಾಗಲವಣಿಸಿದಳು.
ಬಾನಲ್ಲಿ ರವಿ ಜಾರಿದಾಗ ಕವಿದ ಮುಸ್ಸಂಜೆಯಂಥವಳು
ಎಣ್ಣೆಯಾರಿದ ಹಣತೆಯನು ಕಣ್ಬೆಳಕಿನಲಿ ಬೆಳಗುವವನಿಗಾಗಿ ಕಾದಳು.

ಚದುರಿದ ಕನಸುಗಳ ಹೆಕ್ಕಿತರಲು ಹೊರಟವಳು
ಹೊಳೆವ ಕಂಗಳಲಿ ನಕ್ಕವಳು
ಅಂಗಳದ ಗಿಡದಲ್ಲಿ ಬಿರಿದ ಮಲ್ಲಿಗೆಯಂಥವಳು
ವೈಶಾಖದ ಸುಡುಹಗಲಿನಲಿ
ಒದ್ದೆ ಪಾದಗಳ ಜಾಡಿನಲ್ಲಿ ನಡೆಯಹೊರಟಳು
ನಿನ್ನೆಯಾಗಸದಲಿ ಕಂಡಿದ್ದ ಚುಕ್ಕಿಯಂತೆ ಕಳೆದುಹೋದಳು.

Thursday, November 13, 2008

ಎಲ್ಲಿದೆ ನಮ್ಮನೆ?

[ಮಕ್ಕಳ ದಿನಕ್ಕೆಂದು ಒಂದು ಚಂದದ ಕಥೆ ಬರೆಯಬೇಕೆಂದು ಯೋಚಿಸುತ್ತಾ ಕೂತಿದ್ದೆ. ಹಳೆಯದೊಂದಿಷ್ಟು ಹಾಳೆಗಳನ್ನು ತಡಕುತ್ತಿದ್ದವಳಿಗೆ ಅವತ್ಯಾವತ್ತೋ ನಾನು ಬರೆದಿಟ್ಟಿದ್ದ ಈ ಕಥೆ ಸಿಕ್ಕಿತು. ಸುಮ್ಮನೆ ಓದಿಕೊಂಡೆ. ಓದಿ ಮುಗಿಸಿದವಳಿಗೆ ಮತ್ತೇನೂ ಬರೆಯುವ ಮನಸ್ಸಾಗಲಿಲ್ಲ, ಈ ಕಥೆಯೇ ಏನೆಲ್ಲಾ ಹೇಳುತ್ತಿದೆ ಎನ್ನಿಸಿತು, ಹಾಗೇ ಕಥೆಯನ್ನು ಬ್ಲಾಗಂಗಳಕ್ಕೆ ಕರೆತಂದೆ .]

ರಾತ್ರಿಯಾಗಸದಲ್ಲಿ ಹರವಿಕೊಂಡಿದ್ದ ಚುಕ್ಕಿಗಳನ್ನು ನೋಡುತ್ತಿದ್ದೆ ನಾನು. ಎಲ್ಲ ಚುಕ್ಕಿಗಳೂ ಒಂದರಿಂದಿನ್ನೊಂದು ದೂರವಾಗಿ ಛಿದ್ರ ಚಿದ್ರವಾಗಿ ಬಿದ್ದುಕೊಂಡಿದ್ದವು . ಹತ್ತಿರ ಹತ್ತಿರವಾಗಿ ಹೂಗುಚ್ಚದಂತೆ ಕಾಣುವ ಚುಕ್ಕಿಗಳೆಲ್ಲಾದರೂ ಇದ್ದಾವಾ? ಎಂದು ದೂರ ದೂರದವರೆಗೆ ಕಣ್ಣು ಹಾಯಿಸಿ ನೋಡಿದೆ.. ಊಹುಂ ಯಾಕೋ ಎಲ್ಲೂ ಕಾಣಲಿಲ್ಲ .. ಕಂಗಳು ಹನಿಗೂಡಿದವು ಚುಕ್ಕಿಗಳ ಕಥೆಯೂ ನಮ್ಮನೆಯ ಕಥೆಯಂತೆಯೇ ಆಗಿದೆಯ ಅನ್ನಿಸಿ. ದೂರದಲ್ಲಿ ಯಾವುದೋ ಒಂಟಿ ಚುಕ್ಕಿಯೊಂದು ನನ್ನಂತೆಯೇ ಬಿಕ್ಕಳಿಸುತ್ತಿದೆಯೇನೋ ಅನ್ನುವ ಹಾಗೆ ಕಂಡಿತು. ಇಂಥದೇ ರಾತ್ರಿಗಳಲ್ಲಿ ಅಪ್ಪ ನಂಗೆ ಆಗಸದಲ್ಲಿ ಒಟ್ಟೊಟ್ಟಿಗಿರುತ್ತಿದ್ದ ಚುಕ್ಕಿಗಳನ್ನು ತೋರಿಸಿ "ನೋಡು ಅದು ನಾನು,ಮಧ್ಯದಲ್ಲಿರೋದು ನೀನು, ಮತ್ತೆ ಅದರ ಪಕ್ಕದಲ್ಲಿರೋದು ಅಮ್ಮ" ಅನ್ನುತ್ತಿದ್ದ. ಅಮ್ಮ ಚಂದದೊಂದು ನಗೆ ನಗುತ್ತಿದ್ದಳು. ನಂಗೆ ಅದನ್ನು ಎಷ್ಟು ಕೇಳಿದರೂ ತೃಪ್ತಿಯಾಗುತ್ತಿರಲಿಲ್ಲ , ಮತ್ತೆ ಮತ್ತೆ ಪ್ರಶ್ನೆಗಳನ್ನು ಕೇಳುತ್ತಿದ್ದೆ, ದಿನಾಲೂ " ಅಪ್ಪ ಅಮ್ಮ ನಾನು" ಎಂಬ ಚುಕ್ಕಿಗಳನ್ನು ನೋಡಿ ಖುಶಿಪಡ್ತಿದ್ದೆ. ಪ್ರತಿಬಾರಿಯೂ ಅಮ್ಮ "ಎಷ್ಟು ಚಂದವಿದೆ ಈ ರಾತ್ರಿ ,ಇದು ಹೀಗೇ ಇರಲೇನೋ ಅನ್ನಿಸ್ತಿದೆ " ಅನ್ನುತ್ತಿದಳು. ಅವಾಗೆಲ್ಲ ನಂಗೂ ಹಾಗೇ ಅನ್ನಿಸ್ತಿತ್ತು .

ಆದರೆ ಈಗೆಲ್ಲ ನನಗೆ ರಾತ್ರಿ ಆಗಸದಲ್ಲಿ ಯಾರೂ ಚುಕ್ಕಿಗಳನ್ನು ತೋರಿಸುವುದೇ ಇಲ್ಲ. ಬೇಗ ಮಲಗು ಎಂದು ನನ್ನನ್ನು ಗದರಿಸುವ ಅಮ್ಮ ರಾತ್ರಿಯ ಕತ್ತಲಲ್ಲಿ ಬಿಕ್ಕಳಿಸುತ್ತಲೇ ಇರುತ್ತಾಳೆ. ಯಾಕೆಂದು ನನಗೆ ಹೇಗೆ ಅರ್ಥವಾಗಬೇಕು ? ಅದಕ್ಕೇ ಈಗೀಗ ನಾನು ರಾತ್ರಿಯನ್ನು ದ್ವೇಷಿಸುತ್ತೇನೆ . ಬೇಗ ರಾತ್ರಿ ಕಳೆದು ಬೆಳಗಾಗಲಿ ಎಂದುಕೊಳ್ಳುತ್ತೇನೆ , ಏಕೆಂದರೆ ಬೆಳಗಿನಲ್ಲಿ ಅಮ್ಮ ಬಿಕ್ಕಳಿಸುವುದಿಲ್ಲ .

"ಚುಕ್ಕೀ , ಚುಕ್ಕೀ... "

ಯೋಚನೆಗಳನ್ನು ಸುತ್ತ ಹರವಿಕೊಂಡು ನಿಂತವಳಿಗೆ ಅಮ್ಮ ಕೂಗಿದಾಗಲೇ ಈಚಿನ ಅರಿವಾದದ್ದು. ಅಮ್ಮನಿಗೆ ಗೊತ್ತಾಗಬಾರದೆಂದು ಕೊಳವಾಗಿದ್ದ ಕಣ್ಣುಗಳನ್ನು ಬೇಗ ಬೇಗನೆ ಒರೆಸಿಕೊಂಡೆ .

"ಚುಕ್ಕಿ ಕತ್ತಲಲ್ಲಿ ನಿಂತು ಏನು ಮಾಡ್ತಿದೀಯ? ಹೊತ್ತಾಯ್ತು ಬೆಳ್ಗೆ ಬೇಗ ಏಳಬೇಕು ಹೋಗಿ ಮಲ್ಕೋ " ಅಮ್ಮ ಅಂದಾಗ ಒಲ್ಲದ ಮನಸ್ಸಿಂದ ಒಳ ನಡೆದೆ .

ಮಲಗಿದರೂ ಕಂಗಳಿಗೆ ನಿದ್ದೆ ಬಾರದು. ಮತ್ತದೇ ಯೋಚನೆ. ಅಪ್ಪನಿಲ್ಲದ ಮನೆಯಲ್ಲಿ ಇರುವುದೇ ಬೇಜಾರು. ಈ ಅಮ್ಮನಿಗೆ ಹೇಗೆ ಹೇಳಲಿ ಅದನ್ನು. ಸಂಜೆ ಶಾಲೆಯಿಂದ ಬಂದಕೂಡಲೇ ಆಟವಾಡಿಸುವ ಅಪ್ಪ , ಅಮ್ಮನಿಗೆ ಗೊತ್ತಾಗದಂತೆ ರಾಶಿ ರಾಶಿ ಚಾಕಲೇಟುಗಳನ್ನು ಜೇಬಿಂದ ಹೊರತೆಗೆದು ಮುಚ್ಚಿ ಮುಚ್ಚಿ ಕೊಡುವ ಅಪ್ಪ, ನನ್ನೆಲ್ಲ ಮಾತುಗಳಿಗೆ ಕಿವಿಯಾಗುವ ಅಪ್ಪ, ಅಮ್ಮ ಬೈದಾಗಲೆಲ್ಲ ಮುದ್ದುಗರೆವ ಅಪ್ಪ,ಅವನಿಲ್ಲದ ಈ ಮನೆಯಲ್ಲಿ ನಾ ಇರುವುದಾದರೂ ಹೇಗೆ?

ಈಗೀಗ ದಿನಾ ಇಂಥದೇ ಯೋಚನೆಗಳಲ್ಲೇ ರಾತ್ರಿ ಕಳೆದು ಬೆಳಗಾಗುತ್ತದೆ .

***************

ಮೆಲ್ಲನೆ ಬೀರು ಬಾಗಿಲು ತೆಗೆದೆ. ಒಂದಿಷ್ಟು ಬ್ರಶ್ಶುಗಳು , ಬಣ್ಣದ ಟ್ಯುಬುಗಳು, ಪೇಂಟಿಂಗ್ ಹಾಳೆಗಳು .. ಅರ್ಧ ಚಿತ್ರಿಸಿದ ಚಿತ್ರಗಳು ಎಲ್ಲ ಕಂಡವು . ಅಲ್ಲೇ ಕೆಳಗೆಲ್ಲ ಹುಡುಕಿದೆ .. ಹಿಂದೊಮ್ಮೆ ನಮ್ಮನೆಯ ಗೋಡೆಗಳನ್ನೆಲ್ಲ ಅಲಂಕರಿಸಿದ್ದ ಚಿತ್ರಗಳಿಗಾಗಿ. ಊಹುಂ ಎಲ್ಲೂ ಕಾಣಲಿಲ್ಲ ಅವು. ಮತ್ತೆ ಕಂಗಳು ಹನಿಗೂಡಿದವು . ಮತ್ತೆ ಆ ಹಳೆಯ ದಿನಗಳ ನೆನಪಾಯ್ತು . ಅಪ್ಪನಿಗೆ ಪೇಂಟಿಂಗ್ ಅಂದರೆ ತುಂಬ ಪ್ರೀತಿ , ಅಮ್ಮನಿಗೆ ಅಪ್ಪನ ಪೇಂಟಿಂಗಳೆಂದರೆ ಪ್ರಾಣ. ಅಪ್ಪ ಚಿತ್ರಗಳಿಗೆ ಬಣ್ಣ ಹಚ್ಚುತ್ತಿದ್ದರೆ ಅಮ್ಮ ತನ್ಮಯಳಾಗಿ ಅದು ಮುಗಿಯುವವರೆಗೂ ಕೂತಿರುತ್ತಿದ್ದಳು. ನಾನು ಬಣ್ಣಗಳೊಡನೆ ಆಡುತ್ತಿದ್ದೆ .. ನಾನು ಚಿತ್ರ ಬರೆಯುತ್ತೇನೆ ಎಂದು ಹಠ ಮಾಡಿ ಮುಖ ಕೈ ಕಾಲಿಗೆಲ್ಲ ಬಣ್ಣ ಬಳಿದುಕೊಂಡು ಆಡುವುದರಲ್ಲಿ ಏನೋ ಖುಷಿ ಇತ್ತು . ಬಣ್ಣಗಳ ಲೋಕದಲ್ಲಿ ನಾವು ಮೂವರೂ ಕಳೆದುಹೋಗುತ್ತಿದ್ದೆವು .

ಆದರೆ ಈಗೆಲ್ಲ ಅಪ್ಪ ಚಿತ್ರ ಬರೆದು ಬಣ್ಣ ಬಳಿಯುವುದೇ ಇಲ್ಲ. ಅಪ್ಪ ಬರೆದಿದ್ದ ಚಿತ್ರಗಳೆಲ್ಲ ಎಲ್ಲಿ ಹೋದವೆಂದೇ ನನಗೆ ಗೊತ್ತಿಲ್ಲ. ಚಿತ್ರ ಬರೆ ಎಂದರೆ "ನಾನು ಇನ್ನು ಯಾವತ್ತೂ ಚಿತ್ರಗಳಿಗೆ ಬಣ್ಣ ಹಚ್ಚುವುದಿಲ್ಲ" ಎಂದ ಅಪ್ಪ . ಯಾಕೆ ಹಾಗೋ ? ನನಗೆ ಗೊತ್ತಿಲ್ಲ. ನಾನು ಹೀಗೆ ಹಳೆಯ ಅಪೂರ್ಣ ಚಿತ್ರಗಳನ್ನು, ಬಣ್ಣಗಳನ್ನು ಹರವಿಕೊಂಡಿದ್ದನ್ನು ನೋಡಿದರೆ, ಅಪ್ಪ ದಿನವಿಡೀ ಮಂಕಾಗುತ್ತಾನೆ . ಸರಿಯಾಗಿ ಮಾತೇ ಆಡನು. ಬಣ್ಣಗಳನ್ನು ನೋಡಿದರೆ ಅಪ್ಪನಿಗೆ ಅಷ್ಟು ಬೇಸರವಾ? ನನಗೂ ಈಗೀಗ ಬಣ್ಣಗಳೆಂದರೆ ದ್ವೇಷ .

ಕೈಗೆ ತಾಗಿದ್ದ ಚೂರು ಬಣ್ಣವನ್ನು ಬೇಗ ಬೇಗನೆ ಒರೆಸಿಕೊಂಡೆ, ನಾನು ಈ ಕೋಣೆಗೆ ಬಂದಿದ್ದೆನೆಂದು ಅಪ್ಪನಿಗೆ ಗೊತ್ತಾಗಬಾರದೆಂದು ಮೆಲ್ಲನೆ ಹಾಲಿಗೆ ಬಂದು ಸೋಫಾದ ಮೇಲೆ ಉರುಳಿಕೊಂಡೆ .

"ಚುಕ್ಕಿ, ಏಳು ರೆಡಿ ಆಗು , ನಾನು ಇದೀಗ ರೆಡಿ ಆಗಿ ಬಂದುಬಿಡ್ತೀನಿ . ಹೊರಗಡೆ ಸುತ್ತಾಡಿಕೊಂಡು ಊಟ ಮಾಡಿಕೊಂಡು ಬರೋಣ " ಅಪ್ಪ ಹೇಳಿದಾಗ ಮೆಲ್ಲನೆದ್ದು ಹೊರಟೆ.

ಅಮ್ಮನಿಲ್ಲದ ಈ ಮನೆಯಾದರೂ ಎಂತದು ? ಬೆಳ್ಬೆಳಿಗ್ಗೆ ನನ್ನನ್ನು ಮುದ್ದಿಸುತ್ತ ಎಬ್ಬಿಸಿ ಸ್ನಾನ ಮಾಡಿಸಿ , ರೆಡಿ ಮಾಡಿ ಪಪ್ಪಿ ಕೊಡುವ ಅಮ್ಮ, ನಲ್ಮೆ ಮಾತುಗಳಾಡುತ್ತಾ ತುತ್ತಿಡುವ ಅಮ್ಮ, ತೊಡೆಮೇಲೆ ಮಲಗಿಸಿಕೊಂಡು ಕಥೆ ಹೇಳುವ ಅಮ್ಮ, ಅಂಥ ಅಮ್ಮನಿಲ್ಲದ ಇಲ್ಲಿ ನಾನು ದಿನಗಳೆವುದಾದರೂ ಹೇಗೆ?

ವೀಕೆಂಡು ಕಳೆಯಲು ಅಪ್ಪನಿರುವ ಮನೆಗೆ ಬಂದಿದ್ದೇನೆ . ಮೊದಲಾದರೆ ನಮ್ಮನೆ ಅನ್ನುವುದೊಂದಿತ್ತು . ಈಗ ಅಪ್ಪನಿಗೊಂದು ಮನೆ, ಅಮ್ಮನಿಗೊಂದು ಮನೆ! ಆ ನಮ್ಮನೆಯೆಂಬುದು ಎಲ್ಲಿ ಹೋಯ್ತು ??

***************

ಅವತ್ತು ಮನೆಯೆದುರಿನ ರೆಸ್ತೆಯಾಚೆಗೆ ಇದ್ದ ಪಾರ್ಕಿನಲ್ಲಿ ಆಡುತ್ತಿದ್ದಾಗ ಪುಟಾಣಿ ಹುಡುಗಿಯೊಬ್ಬಳ ಕೈ ಹಿಡಕೊಂಡು ಅವಳ ಆಚೆ ಈಚೆ ಅವಳ ಅಪ್ಪ ಅಮ್ಮ
ಹೋಗುತ್ತಿರುವುದು ನೋಡಿದೆ . ಹಿಂದೊಮ್ಮೆ ನಾನೂ ಹೀಗೆ ಇದ್ದ ನೆನಪಾಯ್ತು . ಈಗೆಲ್ಲಿ ಅದು? ಎಷ್ಟು ಚಂದನೆಯ ಪುಟ್ಟ ಸಂಸಾರ ನಮ್ಮದಾಗಿತ್ತು . ಹೀಗಾಗಿದ್ದು ಯಾಕೆ? ಎಲ್ಲ ಚೆನ್ನಾಗಿರುವಾಗ ಒಂದು ದಿನ ಅಪ್ಪ ಅಮ್ಮ ಒಬ್ಬರ ಮೇಲೊಬ್ಬರು ಮುನಿಸಿಕೊಂಡಿದ್ದಾದರೂ ಹೇಗೆ? ಅಮ್ಮ ಅಳುತ್ತಿದ್ದಳು , ಅಪ್ಪ ಮಂಕಾಗಿದ್ದ . ಹಾಗೆಯೇ ಇನ್ನೊಂದು ದಿನ ಅಮ್ಮ ಹೊರಟೆ ಬಿಟ್ಟಳು ನನ್ನ ಕೈಹಿಡಕೊಂಡು , ನಮ್ಮನೆಯನ್ನು ಬಿಟ್ಟು. ಮತ್ತೆ ದಿನಾಲೂ ಅಪ್ಪ ಅಮ್ಮ ಅದೇನೇನೋ ಮಾತಾಡುತ್ತಿದ್ದರು. ಆದರೆ ಮತ್ತೆಂದೂ ನಾವೆಲ್ಲ ಒಟ್ಟಾಗಲೇ ಇಲ್ಲ.

***************

ಮೊನ್ನೆ ಅಮ್ಮ ಯಾರೊಡನೆಯೋ ಹೇಳುತ್ತಿದ್ದಳು "ನನ್ನ ಬದುಕನ್ನು ನಾನೇ ರೂಪಿಸಿಕೊಳ್ಳುವೆ, ನನ್ನ ಮಗಳಿಗೆ ಚಂದದ ನಾಳೆ ಕಟ್ಟಿಕೊಡುವ ಕನಸೂ ನನ್ನದೇ" ಇನ್ನೂ ಏನೇನೋ ...

ಅಪ್ಪ ಯಾರಲ್ಲಿಯೋ ಹೇಳುತ್ತಿದ್ದ " ಯಾರೂ ಇಲ್ಲದೆಯೇ ಬದುಕಲೇಬೇಕಾಗಿದೆ .ಭಾವನೆಗಳೆಲ್ಲ ಎಂದೋ ಸತ್ತಿವೆ , ಮಗಳಿಗೊಂದು ಚಂದದ ನಾಳೆಯನ್ನು ಚಿತ್ರಿಸುವುದೇ ಈಗ ಉಳಿದಿರುವ ಒಂದೇ ಒಂದು ಕನಸು" ಇನ್ನೂ ಏನೇನೋ...

ಎಲ್ಲವನ್ನೂ ಅವರವರೆ ನಿರ್ಧಾರ ಮಾಡಿದಂತಿದೆ .. ನನ್ನದು ? ಏನಿದೆ ? ಚಂದದ ನಾಳಿನ ಭರವಸೆಯಷ್ಟು ಸಾಕೆ ನನಗೆ? ನಮ್ಮದೇ ಎಂಬ ಪುಟ್ಟ ಸಂಸಾರ, ಪುಟ್ಟು ಪುಟ್ಟು ಪ್ರೀತಿ , ನಗು, ಚಿಕ್ಕ ಚಿಕ್ಕ ಸಂತಸಗಳು ಎಲ್ಲ ಇವತ್ತಿಗೆ ಬೇಡವೇ ? ನಂಗೆ ಬರೀ ಅಪ್ಪ, ಬರೀ ಅಮ್ಮ ಬೇಡ.. ಅಪ್ಪ-ಅಮ್ಮ ಬೇಕು ಅನ್ನುವುದನ್ನು ಹೇಗಾದರೂ ಇವರಿಗೆ ನಾನು ಅರಿಕೆ ಮಾಡಿಕೊಡಲಿ?

***************

ಕಾರು ಗಕ್ಕನೆ ನಿಂತಿತು. ಪರಿಚಯದವರಾರನ್ನೋ ನೋಡಿ ಅಪ್ಪ ಕಾರು ನಿಲ್ಲಿಸಿದ. ಹೊರಗೆ ನೋಡಿದೆ ನಾವು ಮೊದಲಿದ್ದ ಮನೆಯ ಎದುರೇ ಕಾರು ನಿಂತಿದ್ದು . ಕಿಟಕಿಯಾಚೆ ನೋಡಿದೆ, ಕತ್ತನ್ನು ಇನ್ನೂ ಹೊರಚಾಚಿ ನೋಡಿದೆ, ನಾನು ಅಂದೊಮ್ಮೆ ಬಿಳಿಯ ಹಾಳೆಯ ಮೇಲೆ ಕುಂಚವನ್ನು ಬಣ್ಣದಲ್ಲದ್ದಿ ಮುದ್ದಾದ ಅಕ್ಷರದಲ್ಲಿ "ನಮ್ಮನೆ" ಎಂದು ಬರೆದು ಬಾಗಿಲಿಗೆ ಅಂಟಿಸಿದ್ದು ಕಾಣಿಸುತ್ತದಾ ಎಂದು. ಅದು ಅಲ್ಲಿ ಇದ್ದ ಹಾಗೆ ಕಾಣಲಿಲ್ಲ. ಅಪ್ಪ ಅದ್ಯಾರಿಗೋ ಹೇಳುತ್ತಿದ್ದ "ಹಳೆಯ ನೆನಪುಗಳೊಟ್ಟಿಗೆ ಈ ಮನೆಯಲ್ಲಿರುವುದು ಕಷ್ಟವಾಯ್ತು , ಅದ್ಕೆ ಕೊಟ್ಟುಬಿಟ್ಟೆ "..

ಎಲ್ಲ ಮುಗಿದಮೇಲೆ ಎಲ್ಲೂ ಇಲ್ಲದ ನಮ್ಮನೆಯನ್ನು ಹುಡುಕುವುದು ವ್ಯರ್ಥ ಎಂದು ಮನಸು ಕೂಗುತ್ತಿದ್ದರೂ ಕಣ್ಣಂಚಿನಿಂದ ಹನಿ ಜಾರುವುದನ್ನು ನಾ ತಡೆಯುವುದಾದರೂ ಹೇಗೆ?

Friday, October 10, 2008

ಹಿಂದೆ ನೋಡದ..

"ಮಾತು ಮಾತಿಗೂ ನೀ ಅಳುವುದು ಯಾಕೆ? ನಂಗೆ ಇಷ್ಟವಾಗೋದಿಲ್ಲ ಅದು ನೋಡು" ನೀ ಹೇಳಿದ ಮಾತು ನೆನಪಾಯ್ತು. ನಿಂಗೆ ಇಷ್ಟವಿಲ್ಲದ್ದನ್ನು ನಂಗಿಷ್ಟವಾಗಿದ್ದಾದರೂ ಮಾಡಲು ನನ್ನ ಮನಸ್ಸೊಪ್ಪುತ್ತಿರಲಿಲ್ಲ . ಆದರೆ ಮಾತು ಮಾತಿಗೆ ಅಳುವುದನ್ನು ಮಾತ್ರ ನನ್ನಿಂದ ತಡೆದುಕೊಳ್ಳುವುದಕ್ಕಾಗುತ್ತಿರಲಿಲ್ಲ. ನದಿಯ ಭೋರ್ಗರೆತ ಹೆಚ್ಚಾದಾಗ ಕಟ್ಟಿದ ಓಡ್ದಾದರೂ ಒಡೆಯದೇ ತಾನು ಇನ್ನೇನು ಮಾಡೀತು? ಹಾಗಿತ್ತು ನನ್ನ ಸ್ಥಿತಿ.

ಆದರೆ ಈಗ ಹಾಗಿಲ್ಲವೇ ಇಲ್ಲ. ನನಗೆ ಅಳಬೇಕೆನಿಸಿದರೂ ಅಳು ಬರುವುದಿಲ್ಲ , ದುಃಖ ಉತ್ಕಟವಾದಾಗಲೂ ಸಹ. ನದಿ ಭೋರ್ಗರೆಯುವುದೇ ಇಲ್ಲ, ಬತ್ತಿದ ನದಿ ಭೋರ್ಗರೆವುದಾದರೂ ಹೇಗೆ?ಎಂದೋ ಮುರಿದು ಬಿದ್ದ ಒಡಕಲು ಒಡ್ಡು ಕೂಡ ನದಿಯನ್ನು ಕಾಯುವ ಹಂಗಿಲ್ಲದೆ ಹಾಯಾಗಿ ಬಿದ್ದುಕೊಂಡಿದೆ .

ಆದರೆ ನಿನ್ನ ನೆನಪುಗಳದೊಂದು ಎಂದೂ ಬತ್ತದ ಒರತೆ .. ನನ್ನ ನಗುವಿನಲ್ಲಿರಲಿ, ನೋವಿನಲ್ಲಿರಲಿ ಮನದಲ್ಲಿ ಸದಾ ಹರಿಯುವ ನದಿ ನಿನ್ನ ನೆನಪು. ನಾ ಸಣ್ಣವಳಿದ್ದಾಗ ಗಾಳಿಪಟದ ದಾರ ಹಿಡಿದು ಓಡುವಾಗ ಎಡವಿ ಬಿದ್ದು ಅಳುವಾಗ ಎತ್ತಿಹಿಡಿದು ಕಣ್ಣೀರು ಒರೆಸಿ ನೀ ಸಮಧಾನಿಸುತ್ತಿದ್ದ ನೆನಪಿನಿಂದ ಹಿಡಿದು, ನಾನು ಸ್ಕೂಲು ಕಾಲೇಜುಗಳಲ್ಲಿ ವೇದಿಕೆಯ ಮೇಲೆ ನಿಂತು ಉದ್ದುದ್ದ ಭಾಷಣ ಹೇಳುವಾಗ ಮೆಚ್ಚುಗೆಯ ಕಂಗಳೊಡನೆ ನೀ ಹುರಿದುಂಬಿಸುತ್ತಿದ್ದ ನೆನಪುಗಳಿಂದ ಹಿಡಿದು, ತಪ್ಪುಗಳಾದಾಗ ಕಿವಿ ಹಿಂಡಿ ಗದರುತ್ತಿದ್ದ ನೆನಪುಗಳು, ಹತ್ತಾರು ಸ್ನೇಹಿತರೊಡನೆ ಹಳ್ಳ ಕಾಡುಗಳ ಸುತ್ತುತ್ತಿದ್ದ ನೆನಪುಗಳೊಡಗೂಡಿ, ಹುಲ್ಲು ಹಾಸಿನ ಮೇಲೆ ಕುಳಿತು ಗಂಟೆಗಟ್ಟಲೆ ಮಾತನಾಡುತ್ತಾ ನಾ ನೆಟ್ಟ ಕನಸಿನ ಬಳ್ಳಿಗಳಿಗೆ ನೀ ನೀರೆರೆಯುತ್ತಿದ್ದ ನೆನಪೂ , ಅಷ್ಟೇ ಏಕೆ ? , ಹಿಂದೆ ನೋಡದೆ ನೀ ನಡೆದ ನೆನಪಿನವರೆಗೂ.

"ನಿನ್ನಲ್ಲಿ ನನಗೆ ಪ್ರೇಮವಿತ್ತೆ ? " ನನಗೆಂದೂ ಈ ಪ್ರಶ್ನೆ ಕಾಡಿರಲೇ ಇಲ್ಲ ನಿನ್ನ ಜೊತೆಯಿರುವಾಗ. ನೀ ಹೋದ ಮೇಲೆ ಹರಿಯುತ್ತಿರುವ ನಿನ್ನ ನೆನಪಿನ ನದಿಯಲ್ಲಿ ಕಾಲಿಳಿಬಿಟ್ಟ ನೀರೆಯ ಗೆಜ್ಜೆಗಾಲು ಕಲ್ಲಿಗೆ ತಾಗಿ ಘಲು ಘಲಿಸುವಂತೆ " ನಿನ್ನಲ್ಲಿ ನನಗೆ ಪ್ರೇಮವಿತ್ತೆ ?" ಎಂದು ಹತ್ತಾರು ಸಲ ಪ್ರಶ್ನಿಸಿಕೊಂಡಿದ್ದೇನೆ ನನ್ನೇ ನಾನು. ಗಿರಿಕಾನನಗಳ ಮೌನದಲ್ಲಿ ಕಳೆದುಹೋಗುವ ಸಣ್ಣ ಸದ್ದಿನಂತೆ ಆ ಪ್ರಶ್ನೆಯೂ ಉತ್ತರವಿಲ್ಲದೆ ಕಳೆದು ಹೋಗಿದೆ.

ಅಷ್ಟಕ್ಕೂ ಸ್ನೇಹವೊಂದು ,ಸಂಬಂಧವೊಂದು ಪ್ರೇಮದಲ್ಲೇ ಕೊನೆಗೊಳ್ಳಬೇಕ ? ಹೆಜ್ಜೆ ಹೆಜ್ಜೆಗೂ , ಮಾತು ಮಾತಿಗೂ ನಿನ್ನನ್ನೇ ಅನುಸರಿಸುತ್ತ ಆಪ್ತವಾಗಿದ್ದ ನನ್ನ ನಿನ್ನ ಬಂಧಕ್ಕೆ, ಪವಿತ್ರ ಸಂಬಂಧಕ್ಕೆ, ಕಟ್ಟಿಕೊಂಡ ಸ್ನೇಹಕ್ಕೆ ಪ್ರೇಮ ಎಂಬುದೊಂದೇ ಹಣೆಪಟ್ಟಿಯಾ? ಹಾಗೆಂದು ಎಲ್ಲರೂ ಆಡಿಕೊಳ್ಳುತ್ತಿದ್ದಾಗ ನಾನು ಅದನ್ನು ಕಿವಿಯ ಬಳಿ ಹಾದು ಹೋದ ಧೂಳೆಂಬಂತೆ ಕೊಡವಿ ಸುಮ್ಮನಾಗಿರುತ್ತಿದ್ದೆ. ಮನಸ್ಸುಗಳ ನಡುವಿನ ಆಪ್ತ ಬಾಂಧವ್ಯಕ್ಕೆ ಹೆಸರಿನ ಹಂಗು ಇರಲೇಬೇಕಾ ? ಇಂಥ ಹಲವು ಪ್ರಶ್ನೆಗಳನ್ನೆತ್ತುತ್ತಿದ್ದ ನನ್ನೊಡನೆ ದನಿಯಾಗುತ್ತಿದ್ದ ನೀನೂ ಸಂಬಂಧಗಳ ಸೂಕ್ಷ್ಮತೆಯನ್ನು , ಅದರ ಹರಿವಿನ ಪಾತ್ರವನ್ನೂ ,ಆಳವನ್ನೂ ಅರಿಯದೇ ದೂರ ನಡೆದಿದ್ದೇಕೆ ? ನನಗೆ ಈವರೆಗೂ ಅರ್ಥವೇ ಆಗಿಲ್ಲ. ಇಷ್ಟೆಲ್ಲಾ ಯೋಚಿಸಿದಾಗ ನನ್ನೇ ನಾ ಕೇಳಿಕೊಳ್ಳುತ್ತೇನೆ "ನಿನಗೆ ನನ್ನಲ್ಲಿ ಪ್ರೇಮವಿತ್ತೆ?"

ಓಡುತ್ತಿದ್ದ ಬಸ್ಸು ಗಕ್ಕನೆ ನಿಂತಾಗ ಯೋಚನೆಗಳ ಹರಿವೂ ಗಕ್ಕನೆ ಒಮ್ಮೆ ನಿಂತಂತಾಯ್ತು. ಸಣ್ಣಗೆ ಮಿಸುಕಾಡಿದೆ. ಮೊನ್ನೆ ಪ್ರಣತಿಯ ಮದುವೆಗೆಂದು ಹೊರಟಾಗ ಅಲ್ಲಿ ನೀನು ಬಂದಿರುತ್ತೀಯೆಂದು ಯೋಚಿಸಿಯೂ ಇರಲಿಲ್ಲ ನಾನು . ಬರೋಬ್ಬರಿ 5 ವರ್ಷಗಳ ನಂತರ ನೀನು ಧುತ್ತೆಂದು ಎದುರಾದಾಗ ನನಗೆ ನಂಬುವುದಕ್ಕೇ ಆಗಲಿಲ್ಲ . ಎಲ್ಲರೊಡನೆಯೂ ಅದೇ ಮಾತು ಅದೇ ಹಾವಭಾವ ಒಂದಿನಿತೂ ಬದಲಾದಂತೆ ತೋರಲಿಲ್ಲ ನೀನು , ಆದರೆ ನನ್ನಡೆಗೆ ಮಾತ್ರ ಪಾರದರ್ಶಕವಲ್ಲದ ಆ ಪರದೆ! , ನೀನೇನಾ ನನ್ನ ನೀನು ಅನ್ನಿಸಿತು. ಆದರೂ ಇಲ್ಲಿ ಬೇಸರಿಸಿಕೊಳ್ಳುವುದಕ್ಕೆ ಕಾರಣವಿಲ್ಲ ಅಂದುಕೊಂಡು ಸುಮ್ಮನಾದೆ . ಆದರೆ ಅದೇ ದಿನ ಸಂಜೆ ನಸುಗತ್ತಲು ಕವಿದ ವೇಳೆಯಲ್ಲಿ ನೀ ಹೊರಟಾಗ ನನ್ನಲ್ಲಿ ಚಿಕ್ಕದೊಂದು ನೀರಿಕ್ಷೆಯಿತ್ತು, ಹೆಚ್ಚೇನೂ ಅಲ್ಲ, ನೀ ಹೊರಡುವಾಗ ಹಿಂತಿರುಗಿ ನೋಡುವ ಆ ಒಂದು ನೋಟಕ್ಕಾಗಿ.

ಎಲ್ಲರೂ ಒಬ್ಬರನ್ನೊಬ್ಬರು ಬೀಳ್ಕೊಡುತ್ತಿದ್ದ ಆ ವೇಳೆಯಲ್ಲಿ ನಿನ್ನ ಆ ಒಂದು ನೋಟಕ್ಕಾಗಿ ನಾ ಕಾಯುತ್ತಿದ್ದೆ . ಆದರೆ ಮತ್ತೊಮ್ಮೆ ನನ್ನ ನಿರೀಕ್ಷೆ ಹುಸಿಗೊಳಿಸಲೆಂಬಂತೆ ನೀ ಹಿಂದೆ ನೋಡದೆ ನಡೆದುಬಿಟ್ಟೆ . ನೋವಾಯ್ತು ನನಗೆ. " ಸಂಬಂಧಗಳು ಮಾಗಬೇಕೆ ಹೊರತು ಹಳಸಬಾರದು" , ನಾನಷ್ಟೇ ಅಂದುಕೊಂಡಿದ್ದು ಇದು, ಬೇರೆಯವರಿಗೂ ಹಾಗನಿಸಬೇಕೆಂದಿಲ್ಲವಲ್ಲ . ಪಕ್ಕದಲ್ಲಿದ್ದ ಗೆಳತಿ ನನ್ನ ಮನವನ್ನೋದಿದಂತೆ ಸಮಾಧಾನಿಸುವ ನೋಟ ಬೀರಿದಳು. ನಿಟ್ಟುಸಿರು ಬಿಟ್ಟು, ನೀ ಹಿಂದೆ ನೋಡದೆ ಸಾಗಿದ ಹಾದಿಯತ್ತ ಒಮ್ಮೆ ದೃಷ್ಟಿಹಾಯಿಸಿದೆ , ಮನಸ್ಸು ಕಲ್ಲೆಸೆದ ಕೊಳದಂತಾಗಿತ್ತು.

ತೆರೆದಿದ್ದ ಕಿಟಕಿಯಿಂದ ತಣ್ಣನೆಯ ಗಾಳಿ ತೇಲಿಬಂದು ಮುಖವನ್ನು ನೇವರಿಸಿ ಹೋಯ್ತು . ಕಿಟಕಿಯಾಚೆ ನೋಡಿದೆ, ಓಡುತ್ತಿದ್ದ ಬಸ್ಸಿನೊಡನೆ ಪೈಪೋಟಿ ಹಚ್ಚಿದಂತೆ ಅರ್ಧ ಚಂದ್ರ ಓಡುತ್ತಿದ್ದ, ಮತ್ತಷ್ಟು ನೆನಪುಗಳು ನುಗ್ಗಿಬಂದವು . ನೆನಪುಗಳನ್ನೆಲ್ಲ
ರೆತುಬಿಡಬೇಕು ಅಂದುಕೊಂಡೆ. ಮರುಕ್ಷಣವೇ ನೆನಪುಗಳನ್ಯಾಕೆ ಮರೆಯಬೇಕು ? ನೆನಪುಗಳನ್ನು ಕೆದಕಲೆಂದು ಹಿಂದೆ ನೋಡುತ್ತಾ ನಿಲ್ಲುವುದುಬೇಕಿಲ್ಲ , ನೆನಪನ್ನು ಜೊತೆಗೊಯ್ದು ಮುಂದೆ ಸಾಗಿದರೆ ತಪ್ಪಿಲ್ಲ ಅನ್ನಿಸಿತು. ಈ ನಿರ್ಧಾರದಲ್ಲೂ ಮತ್ತೆ ನಿನ್ನನ್ನೇ ಅನುಸರಿಸುತ್ತಿದ್ದೇನಾ ಅನ್ನುವ ಯೋಚನೆ ಬಂದು ತುಟಿಯ ಮೇಲೊಂದು ಕಿರುನಗೆ ಮೂಡಿ ಮಾಯವಾಯ್ತು. ಮತ್ತೆ
ಹೊರನೋಡಿದೆ ಅರ್ಧ ಚಂದ್ರ ಓಡುತ್ತಲೇ ಇದ್ದ , ಹಿತವೆನಿಸಿತು , ಕಣ್ಮುಚ್ಚಿದೆ. ನಾಳಿನ ಕಾಲೇಜು, ವಿದ್ಯಾರ್ಥಿಗಳು, ಪಾಠ, ಸೆಮಿನಾರು ಎಲ್ಲ ಕಣ್ಮುಂದೆ ತೇಲಿ ಬಂತು. ಕ್ಷಣದಲ್ಲೇ ಕನಸುಗಣ್ಣನ್ನು ನಿದ್ದೆ ಆವರಿಸಿತು.