Friday, October 10, 2008

ಹಿಂದೆ ನೋಡದ..

"ಮಾತು ಮಾತಿಗೂ ನೀ ಅಳುವುದು ಯಾಕೆ? ನಂಗೆ ಇಷ್ಟವಾಗೋದಿಲ್ಲ ಅದು ನೋಡು" ನೀ ಹೇಳಿದ ಮಾತು ನೆನಪಾಯ್ತು. ನಿಂಗೆ ಇಷ್ಟವಿಲ್ಲದ್ದನ್ನು ನಂಗಿಷ್ಟವಾಗಿದ್ದಾದರೂ ಮಾಡಲು ನನ್ನ ಮನಸ್ಸೊಪ್ಪುತ್ತಿರಲಿಲ್ಲ . ಆದರೆ ಮಾತು ಮಾತಿಗೆ ಅಳುವುದನ್ನು ಮಾತ್ರ ನನ್ನಿಂದ ತಡೆದುಕೊಳ್ಳುವುದಕ್ಕಾಗುತ್ತಿರಲಿಲ್ಲ. ನದಿಯ ಭೋರ್ಗರೆತ ಹೆಚ್ಚಾದಾಗ ಕಟ್ಟಿದ ಓಡ್ದಾದರೂ ಒಡೆಯದೇ ತಾನು ಇನ್ನೇನು ಮಾಡೀತು? ಹಾಗಿತ್ತು ನನ್ನ ಸ್ಥಿತಿ.

ಆದರೆ ಈಗ ಹಾಗಿಲ್ಲವೇ ಇಲ್ಲ. ನನಗೆ ಅಳಬೇಕೆನಿಸಿದರೂ ಅಳು ಬರುವುದಿಲ್ಲ , ದುಃಖ ಉತ್ಕಟವಾದಾಗಲೂ ಸಹ. ನದಿ ಭೋರ್ಗರೆಯುವುದೇ ಇಲ್ಲ, ಬತ್ತಿದ ನದಿ ಭೋರ್ಗರೆವುದಾದರೂ ಹೇಗೆ?ಎಂದೋ ಮುರಿದು ಬಿದ್ದ ಒಡಕಲು ಒಡ್ಡು ಕೂಡ ನದಿಯನ್ನು ಕಾಯುವ ಹಂಗಿಲ್ಲದೆ ಹಾಯಾಗಿ ಬಿದ್ದುಕೊಂಡಿದೆ .

ಆದರೆ ನಿನ್ನ ನೆನಪುಗಳದೊಂದು ಎಂದೂ ಬತ್ತದ ಒರತೆ .. ನನ್ನ ನಗುವಿನಲ್ಲಿರಲಿ, ನೋವಿನಲ್ಲಿರಲಿ ಮನದಲ್ಲಿ ಸದಾ ಹರಿಯುವ ನದಿ ನಿನ್ನ ನೆನಪು. ನಾ ಸಣ್ಣವಳಿದ್ದಾಗ ಗಾಳಿಪಟದ ದಾರ ಹಿಡಿದು ಓಡುವಾಗ ಎಡವಿ ಬಿದ್ದು ಅಳುವಾಗ ಎತ್ತಿಹಿಡಿದು ಕಣ್ಣೀರು ಒರೆಸಿ ನೀ ಸಮಧಾನಿಸುತ್ತಿದ್ದ ನೆನಪಿನಿಂದ ಹಿಡಿದು, ನಾನು ಸ್ಕೂಲು ಕಾಲೇಜುಗಳಲ್ಲಿ ವೇದಿಕೆಯ ಮೇಲೆ ನಿಂತು ಉದ್ದುದ್ದ ಭಾಷಣ ಹೇಳುವಾಗ ಮೆಚ್ಚುಗೆಯ ಕಂಗಳೊಡನೆ ನೀ ಹುರಿದುಂಬಿಸುತ್ತಿದ್ದ ನೆನಪುಗಳಿಂದ ಹಿಡಿದು, ತಪ್ಪುಗಳಾದಾಗ ಕಿವಿ ಹಿಂಡಿ ಗದರುತ್ತಿದ್ದ ನೆನಪುಗಳು, ಹತ್ತಾರು ಸ್ನೇಹಿತರೊಡನೆ ಹಳ್ಳ ಕಾಡುಗಳ ಸುತ್ತುತ್ತಿದ್ದ ನೆನಪುಗಳೊಡಗೂಡಿ, ಹುಲ್ಲು ಹಾಸಿನ ಮೇಲೆ ಕುಳಿತು ಗಂಟೆಗಟ್ಟಲೆ ಮಾತನಾಡುತ್ತಾ ನಾ ನೆಟ್ಟ ಕನಸಿನ ಬಳ್ಳಿಗಳಿಗೆ ನೀ ನೀರೆರೆಯುತ್ತಿದ್ದ ನೆನಪೂ , ಅಷ್ಟೇ ಏಕೆ ? , ಹಿಂದೆ ನೋಡದೆ ನೀ ನಡೆದ ನೆನಪಿನವರೆಗೂ.

"ನಿನ್ನಲ್ಲಿ ನನಗೆ ಪ್ರೇಮವಿತ್ತೆ ? " ನನಗೆಂದೂ ಈ ಪ್ರಶ್ನೆ ಕಾಡಿರಲೇ ಇಲ್ಲ ನಿನ್ನ ಜೊತೆಯಿರುವಾಗ. ನೀ ಹೋದ ಮೇಲೆ ಹರಿಯುತ್ತಿರುವ ನಿನ್ನ ನೆನಪಿನ ನದಿಯಲ್ಲಿ ಕಾಲಿಳಿಬಿಟ್ಟ ನೀರೆಯ ಗೆಜ್ಜೆಗಾಲು ಕಲ್ಲಿಗೆ ತಾಗಿ ಘಲು ಘಲಿಸುವಂತೆ " ನಿನ್ನಲ್ಲಿ ನನಗೆ ಪ್ರೇಮವಿತ್ತೆ ?" ಎಂದು ಹತ್ತಾರು ಸಲ ಪ್ರಶ್ನಿಸಿಕೊಂಡಿದ್ದೇನೆ ನನ್ನೇ ನಾನು. ಗಿರಿಕಾನನಗಳ ಮೌನದಲ್ಲಿ ಕಳೆದುಹೋಗುವ ಸಣ್ಣ ಸದ್ದಿನಂತೆ ಆ ಪ್ರಶ್ನೆಯೂ ಉತ್ತರವಿಲ್ಲದೆ ಕಳೆದು ಹೋಗಿದೆ.

ಅಷ್ಟಕ್ಕೂ ಸ್ನೇಹವೊಂದು ,ಸಂಬಂಧವೊಂದು ಪ್ರೇಮದಲ್ಲೇ ಕೊನೆಗೊಳ್ಳಬೇಕ ? ಹೆಜ್ಜೆ ಹೆಜ್ಜೆಗೂ , ಮಾತು ಮಾತಿಗೂ ನಿನ್ನನ್ನೇ ಅನುಸರಿಸುತ್ತ ಆಪ್ತವಾಗಿದ್ದ ನನ್ನ ನಿನ್ನ ಬಂಧಕ್ಕೆ, ಪವಿತ್ರ ಸಂಬಂಧಕ್ಕೆ, ಕಟ್ಟಿಕೊಂಡ ಸ್ನೇಹಕ್ಕೆ ಪ್ರೇಮ ಎಂಬುದೊಂದೇ ಹಣೆಪಟ್ಟಿಯಾ? ಹಾಗೆಂದು ಎಲ್ಲರೂ ಆಡಿಕೊಳ್ಳುತ್ತಿದ್ದಾಗ ನಾನು ಅದನ್ನು ಕಿವಿಯ ಬಳಿ ಹಾದು ಹೋದ ಧೂಳೆಂಬಂತೆ ಕೊಡವಿ ಸುಮ್ಮನಾಗಿರುತ್ತಿದ್ದೆ. ಮನಸ್ಸುಗಳ ನಡುವಿನ ಆಪ್ತ ಬಾಂಧವ್ಯಕ್ಕೆ ಹೆಸರಿನ ಹಂಗು ಇರಲೇಬೇಕಾ ? ಇಂಥ ಹಲವು ಪ್ರಶ್ನೆಗಳನ್ನೆತ್ತುತ್ತಿದ್ದ ನನ್ನೊಡನೆ ದನಿಯಾಗುತ್ತಿದ್ದ ನೀನೂ ಸಂಬಂಧಗಳ ಸೂಕ್ಷ್ಮತೆಯನ್ನು , ಅದರ ಹರಿವಿನ ಪಾತ್ರವನ್ನೂ ,ಆಳವನ್ನೂ ಅರಿಯದೇ ದೂರ ನಡೆದಿದ್ದೇಕೆ ? ನನಗೆ ಈವರೆಗೂ ಅರ್ಥವೇ ಆಗಿಲ್ಲ. ಇಷ್ಟೆಲ್ಲಾ ಯೋಚಿಸಿದಾಗ ನನ್ನೇ ನಾ ಕೇಳಿಕೊಳ್ಳುತ್ತೇನೆ "ನಿನಗೆ ನನ್ನಲ್ಲಿ ಪ್ರೇಮವಿತ್ತೆ?"

ಓಡುತ್ತಿದ್ದ ಬಸ್ಸು ಗಕ್ಕನೆ ನಿಂತಾಗ ಯೋಚನೆಗಳ ಹರಿವೂ ಗಕ್ಕನೆ ಒಮ್ಮೆ ನಿಂತಂತಾಯ್ತು. ಸಣ್ಣಗೆ ಮಿಸುಕಾಡಿದೆ. ಮೊನ್ನೆ ಪ್ರಣತಿಯ ಮದುವೆಗೆಂದು ಹೊರಟಾಗ ಅಲ್ಲಿ ನೀನು ಬಂದಿರುತ್ತೀಯೆಂದು ಯೋಚಿಸಿಯೂ ಇರಲಿಲ್ಲ ನಾನು . ಬರೋಬ್ಬರಿ 5 ವರ್ಷಗಳ ನಂತರ ನೀನು ಧುತ್ತೆಂದು ಎದುರಾದಾಗ ನನಗೆ ನಂಬುವುದಕ್ಕೇ ಆಗಲಿಲ್ಲ . ಎಲ್ಲರೊಡನೆಯೂ ಅದೇ ಮಾತು ಅದೇ ಹಾವಭಾವ ಒಂದಿನಿತೂ ಬದಲಾದಂತೆ ತೋರಲಿಲ್ಲ ನೀನು , ಆದರೆ ನನ್ನಡೆಗೆ ಮಾತ್ರ ಪಾರದರ್ಶಕವಲ್ಲದ ಆ ಪರದೆ! , ನೀನೇನಾ ನನ್ನ ನೀನು ಅನ್ನಿಸಿತು. ಆದರೂ ಇಲ್ಲಿ ಬೇಸರಿಸಿಕೊಳ್ಳುವುದಕ್ಕೆ ಕಾರಣವಿಲ್ಲ ಅಂದುಕೊಂಡು ಸುಮ್ಮನಾದೆ . ಆದರೆ ಅದೇ ದಿನ ಸಂಜೆ ನಸುಗತ್ತಲು ಕವಿದ ವೇಳೆಯಲ್ಲಿ ನೀ ಹೊರಟಾಗ ನನ್ನಲ್ಲಿ ಚಿಕ್ಕದೊಂದು ನೀರಿಕ್ಷೆಯಿತ್ತು, ಹೆಚ್ಚೇನೂ ಅಲ್ಲ, ನೀ ಹೊರಡುವಾಗ ಹಿಂತಿರುಗಿ ನೋಡುವ ಆ ಒಂದು ನೋಟಕ್ಕಾಗಿ.

ಎಲ್ಲರೂ ಒಬ್ಬರನ್ನೊಬ್ಬರು ಬೀಳ್ಕೊಡುತ್ತಿದ್ದ ಆ ವೇಳೆಯಲ್ಲಿ ನಿನ್ನ ಆ ಒಂದು ನೋಟಕ್ಕಾಗಿ ನಾ ಕಾಯುತ್ತಿದ್ದೆ . ಆದರೆ ಮತ್ತೊಮ್ಮೆ ನನ್ನ ನಿರೀಕ್ಷೆ ಹುಸಿಗೊಳಿಸಲೆಂಬಂತೆ ನೀ ಹಿಂದೆ ನೋಡದೆ ನಡೆದುಬಿಟ್ಟೆ . ನೋವಾಯ್ತು ನನಗೆ. " ಸಂಬಂಧಗಳು ಮಾಗಬೇಕೆ ಹೊರತು ಹಳಸಬಾರದು" , ನಾನಷ್ಟೇ ಅಂದುಕೊಂಡಿದ್ದು ಇದು, ಬೇರೆಯವರಿಗೂ ಹಾಗನಿಸಬೇಕೆಂದಿಲ್ಲವಲ್ಲ . ಪಕ್ಕದಲ್ಲಿದ್ದ ಗೆಳತಿ ನನ್ನ ಮನವನ್ನೋದಿದಂತೆ ಸಮಾಧಾನಿಸುವ ನೋಟ ಬೀರಿದಳು. ನಿಟ್ಟುಸಿರು ಬಿಟ್ಟು, ನೀ ಹಿಂದೆ ನೋಡದೆ ಸಾಗಿದ ಹಾದಿಯತ್ತ ಒಮ್ಮೆ ದೃಷ್ಟಿಹಾಯಿಸಿದೆ , ಮನಸ್ಸು ಕಲ್ಲೆಸೆದ ಕೊಳದಂತಾಗಿತ್ತು.

ತೆರೆದಿದ್ದ ಕಿಟಕಿಯಿಂದ ತಣ್ಣನೆಯ ಗಾಳಿ ತೇಲಿಬಂದು ಮುಖವನ್ನು ನೇವರಿಸಿ ಹೋಯ್ತು . ಕಿಟಕಿಯಾಚೆ ನೋಡಿದೆ, ಓಡುತ್ತಿದ್ದ ಬಸ್ಸಿನೊಡನೆ ಪೈಪೋಟಿ ಹಚ್ಚಿದಂತೆ ಅರ್ಧ ಚಂದ್ರ ಓಡುತ್ತಿದ್ದ, ಮತ್ತಷ್ಟು ನೆನಪುಗಳು ನುಗ್ಗಿಬಂದವು . ನೆನಪುಗಳನ್ನೆಲ್ಲ
ರೆತುಬಿಡಬೇಕು ಅಂದುಕೊಂಡೆ. ಮರುಕ್ಷಣವೇ ನೆನಪುಗಳನ್ಯಾಕೆ ಮರೆಯಬೇಕು ? ನೆನಪುಗಳನ್ನು ಕೆದಕಲೆಂದು ಹಿಂದೆ ನೋಡುತ್ತಾ ನಿಲ್ಲುವುದುಬೇಕಿಲ್ಲ , ನೆನಪನ್ನು ಜೊತೆಗೊಯ್ದು ಮುಂದೆ ಸಾಗಿದರೆ ತಪ್ಪಿಲ್ಲ ಅನ್ನಿಸಿತು. ಈ ನಿರ್ಧಾರದಲ್ಲೂ ಮತ್ತೆ ನಿನ್ನನ್ನೇ ಅನುಸರಿಸುತ್ತಿದ್ದೇನಾ ಅನ್ನುವ ಯೋಚನೆ ಬಂದು ತುಟಿಯ ಮೇಲೊಂದು ಕಿರುನಗೆ ಮೂಡಿ ಮಾಯವಾಯ್ತು. ಮತ್ತೆ
ಹೊರನೋಡಿದೆ ಅರ್ಧ ಚಂದ್ರ ಓಡುತ್ತಲೇ ಇದ್ದ , ಹಿತವೆನಿಸಿತು , ಕಣ್ಮುಚ್ಚಿದೆ. ನಾಳಿನ ಕಾಲೇಜು, ವಿದ್ಯಾರ್ಥಿಗಳು, ಪಾಠ, ಸೆಮಿನಾರು ಎಲ್ಲ ಕಣ್ಮುಂದೆ ತೇಲಿ ಬಂತು. ಕ್ಷಣದಲ್ಲೇ ಕನಸುಗಣ್ಣನ್ನು ನಿದ್ದೆ ಆವರಿಸಿತು.