Friday, September 26, 2008

ಚೆಲುವು ಶಾಶ್ವತವಲ್ಲ

ಯಾವುದಾದರೊಂದು ನೆಪದಿಂದ ಹಳೆಯ ಕವಿತೆಗಳು ನೆನಪಾಗುತ್ತಲೇ ಇರುತ್ತವೆ. ಅಂತದೇ ಒಂದು ಕವಿತೆ ಇಲ್ಲಿದೆ. ಸುಮಾರು ಎಂಟು ಹತ್ತು ವರ್ಷಗಳ ಹಿಂದೆ ನಾನು ಬರೆದಿದ್ದ ಕವಿತೆ. ಮೊನ್ನೆ ಯಾಕೋ ನೆನಪಾಯ್ತು . ಕವಿತೆಯಲ್ಲಿನ ಪದಗಳು ಬಾಲಿಶವೆನಿಸಿದರೂ ಅದರ ಉದ್ದೇಶ ಮಾತ್ರ ಗಟ್ಟಿಯಾದುದು ಅನ್ನಿಸಿತು. ಇಲ್ಲಿ "ಚೆಲುವು" ಅನ್ನುವ ಪದ ಕವಿತೆಯಲ್ಲಿ ಒಂದು ಉದಾಹರಣೆಯಷ್ಟೇ . ಕವಿತೆಯ ಉದ್ದೇಶ ಚೆಲುವಿಗಷ್ಟೇ ಅಲ್ಲದೆ ಯಶಸ್ಸು , ಕೀರ್ತಿ , ಹಣ ಎಲ್ಲದಕ್ಕೂ ಅನ್ವಯ . ಯಾವುದೇ ಸ್ಥಾನದಲ್ಲಿದ್ದರೂ ನಾನೇ ದೊಡ್ಡವನು ನಾನೇ ಎಲ್ಲವನ್ನೂ ಸಾಧಿಸಿದವನು ಎಂಬ ಅಹಮಿಕೆ ಇರಬಾರದು ಎನ್ನುವುದು ನನ್ನ ತತ್ವ. ಕವಿತೆಯ ಬಗ್ಗೆ ಇನ್ನಷ್ಟು ಹೇಳುವ ಮನಸ್ಸಿತ್ತು. ಆದರೆ ಮಂತ್ರಕ್ಕಿಂತ ಉಗುಳು ಜಾಸ್ತಿ ಆಗಬಾರದು :) , ಮುನ್ನುಡಿಯೇ ಉದ್ದವಾಗಿ ಕವಿತೆ ಕಳೆದು ಹೋಗಬಾರದು . ಅದಕ್ಕೇ ಇಷ್ಟು ಸಾಕು.

ಕವಿತೆ ಇಲ್ಲಿದೆ, ಬಾಲಿಶವಾಗಿದ್ದರೂ ತಿದ್ದದೇ ಅಂದು ಹೇಗೆ ಬರೆದಿಟ್ಟಿದ್ದೇನೋ ಅದನ್ನೇ ಇಲ್ಲಿಟ್ಟಿದ್ದೇನೆ.

ಚಂದದಾ ತೋಟದಲಿ ಚೆಂಗುಲಾಬಿಯ ಗಿಡದಿ
ಪುಟ್ಟಗುಲಾಬಿಯ ಮೊಗ್ಗಾಗಿ ನಾ ನಗುತಲಿದ್ದೆ
ನನಗರಿಯದೆ ನನ್ನ ಚೆಲುವಿಗೆ ನಾ ಬೀಗುತಿದ್ದೆ
ಇಂದಲ್ಲ ನಾಳೆ ಹೂವಾಗರಳುವೆನೆಂಬ ಗರ್ವದಲ್ಲಿದ್ದೆ

ಹುಣ್ಣಿಮೆಯ ಚಂದ್ರನು ಬಾನಲ್ಲೇ ಕರಗಿರಲು
ಬಂದೆ ಬಂದನು ರವಿಯು ಬಾನಿನೇರಿಯಲ್ಲಿ
ಇಬ್ಬನಿಯ ಕಣಗಳು ನನ್ನ ಮೇಲೆರಗಲು
ಕಣ್ಣ ತೆರೆದಾಗ ನಾನು ಅರೆಬಿರಿದ ಹೂವಾಗಿದ್ದೆ ಗಿಡದಲ್ಲಿ

ಚೆಲುವೆಯೊಬ್ಬಳು ನನ್ನ ಬಳಿಯಲ್ಲಿ ಬಂದು
ನನ್ನ ಕೊಯ್ಯಲು ಕೈಚಾಚಿದಳು ಮುಂದು
ಸಂತಸದಿ ಮನದಲ್ಲೇ ನಲಿನಲಿದೆ
ನಾ ಚೆಲುವೆಯ ಮುಡಿ ಸೇರುವೆನೆಂದು.

ಚೆಲುವೆಯ ಮುಡಿಯಲ್ಲಿ ಕಂಗೊಳಿಸುವಾಗ
ನಾ ತಿರುಗಿ ನೋಡಿದೆನೊಮ್ಮೆ
ಬಾಡಿ ಮುದುಡಿದ ನನ್ನ ಹೋಲದ
ಒಣಗಿದ ಹಳೆ ಹೂಗಳೆಡೆಗೆ ಗರ್ವಭಾವದಿ.

ಸಂಜೆ ತಾನೋಡಿ ಬಂದಂತೆಲ್ಲ
ಹೊತ್ತು ತಂತಾನೆ ಜಾರಿದಂತೆಲ್ಲ
ಮುಡಿಯೇರಿ ಕುಳಿತ ನಾ ಬಾಡತೊ
ಗಿದ್ದೆ
ನನಗರಿವಿಲ್ಲದೆಯೇ ನಾ ಬಾಡತೊ
ಗಿದ್ದೆ

ಕಿತ್ತು ಬಿಸುಟಿದಳಾಗ ಚೆಲುವೆ
ನನ್ನನ್ನು ಮುಡಿಯಿಂದ
ಕಾಲು ಕಸವಾಗಿ ಬಿದ್ದಿದ್ದೆ ಕ್ಷಣದಲ್ಲೇ
ಸೋತಭಾವದಿ ಬಿದ್ದಿದ್ದೆ ನಾನಲ್ಲೇ

ಕನಸಿನಿಂದ ವಾಸ್ತವಕೆ ಬಂದೆ ನಾನಾಗ
ಕಿವಿಯಲ್ಲಿ ಪಿಸುಗುಟ್ಟಿದಂತಾಗಿ
ಚೆಲುವು ಶಾಶ್ವತವಲ್ಲ ಹುಡುಗಿ ಚೆಲುವು ಶಾಶ್ವತವಲ್ಲ
ತಿಳಿದಿರು ನೀ, ಎಂದೂ ಚೆಲುವು ಶಾಶ್ವತವಲ್ಲ

Thursday, September 4, 2008

ಭಾವಕ್ಕೆ ಬಳಿದ ಬಣ್ಣಗಳೊಡನೆ ಕಳೆದು ಹೋದವಳು

ಕಾಮನಬಿಲ್ಲಿಗೇಕೆ ಏಳೇ ಬಣ್ಣ?
ನನ್ನ ಭಾವಕ್ಕೆ ಬಳಿದಿರುವುದು ನೂರಾರು ಬಣ್ಣ..

ನನಗೆ ಬಣ್ಣಗಳೆಡೆಗೆ ಒಲವು ಜಾಸ್ತಿ. ಒಂದೊಂದು ಬಣ್ಣವನ್ನೂ ಒಂದೊಂದು ರೀತಿಯಲ್ಲಿ ಮೆಚ್ಚುತ್ತೇನೆ , ಒಂದೊಂದು ಬಣ್ಣಕ್ಕೂ ಒಂದೊಂದು ವಿಶೇಷತೆ.ನನ್ನ ದೃಷ್ಟಿಗೆ ಬಣ್ಣದ ಸೆಳೆತ ಜಾಸ್ತಿ. ನನ್ನ ಉಡುಗೆಯಲ್ಲೂ ಬಣ್ಣಕ್ಕೆ ಪ್ರಾಮುಖ್ಯತೆ . ದೃಷ್ಟಿಗೆ ಏನೊಂದು ಗೋಚರಿಸಿದರೂ ಅದರ ಬಣ್ಣ ಮೊದಲು ನನ್ನ ಸೆಳೆಯುತ್ತದೆ. ಬಣ್ಣಗಳೆಡೆಗಿನ ನನ್ನ ಅವಲೋಕನ ವೈಜ್ಞಾನಿಕ ಕುತೂಹಲವೇನಲ್ಲ , ನನ್ನ ಭಾವಕ್ಕೆ ನಾ ಬಳಿಯುವ ಬಣ್ಣಕ್ಕೆ 'ಕುಂಚ' ನನ್ನ ಅವಲೋಕನ.

ಚಿಕ್ಕ ಚಿಕ್ಕ ಹುಲ್ಲುಗಳ ತಿಳಿ ಹಸಿರು, ಒಣಗಿದ ಜಡ್ಡಿನ ಅರೆ ಬಣ್ಣ, ಪೈರಿನ ಪಚ್ಚೆ ಹಸಿರು, ಮರ ಗಿಡಗಳ ಅಚ್ಚ ಹಸಿರು, ಮಣ್ಣಿನ ಬಣ್ಣ, ಧೂಳಿನ ತಿಳಿ ಬಣ್ಣ, ಕೆಸರಿನ ಕೆಂಬಣ್ಣ , ಬಾನು ಹೊದ್ದ ನೀಲಿ ಬಣ್ಣ, ಮುಂಜಾವಿನ ಬಾನ ಹೊಂಬಣ್ಣ , ರವಿಕಿರಣದ ಕಾಂತಿ ಬಣ್ಣ, ಆಗಸದಿ ತೇಲುವ ಬೆಳ್ಮುಗಿಲ ಬಣ್ಣ, ಕಾರ್ಮೋಡದ ಕರಿ ಬಣ್ಣ, ಮಳೆಗಾಳದಲಾಗೊಮ್ಮೆ ಈಗೊಮ್ಮೆ ಇಣುಕುವ ತಿಳಿಬಿಸಿಲ ಬಣ್ಣ, ನಡುಹಗಲಿನ ಸುಡುಬಿಸಿಲ ಬಣ್ಣ, ಇಳಿಸಂಜೆಯ ಬಾನ ಕಿತ್ತಳೆ ಬಣ್ಣ, ಚುಕ್ಕಿ ಚಿತ್ತಾರವಾದ ಬಾನ ಬಣ್ಣ, ಕಾನ ಕತ್ತಲೆಯಲ್ಲೂ ಬೆಳಕು ಸುರಿಸುವ ಶಶಿಯ ಬೆಳದಿಂಗಳ ಬಣ್ಣ, ಕಡಲ ಆ ನೀಲಿ ಬಣ್ಣ, ತೀರದ ಆ ಮರಳಿನ ಬಣ್ಣ,ಗಿರಿ ಶ್ರೇಣಿಯು ಹೊದ್ದ ಹಿಮದ ಬೆಳ್ಳಿ ಬಣ್ಣ,
ಕಂದನ ಹಾಲ್ಗಲ್ಲದ ಬಣ್ಣ, ಪುಟಾಣಿ ಪಾದದ ಗುಲಾಬಿ ಬಣ್ಣ, ನೊರೆ ಹಾಲ ಬಿಳುಪು ಬಣ್ಣ, ಹಾಲ್ಗೆನೆಯ ಆ ಬಣ್ಣ, ಹಬೆಯಾಡುವ ನೊರೆ ಕಾಫಿಯ ಬಣ್ಣ, ಒಲೆಯ ಒಡಲಿನ ಬೆಂಕಿ ಬಣ್ಣ, ಬೂದಿ ಮುಚ್ಚಿದ ಕೆಂಡದ ಬಣ್ಣ, ಹೊಗೆಯ ಬಣ್ಣ, ಸಂಜೆ ನಸುಗತ್ತಲ ಬಣ್ಣ, ದೇವರೊಳದ ದೀಪದ ಬಣ್ಣ, ಬಣ್ಣಗಳನ್ನೇ ಬದಲಾಯಿಸುವ ಅದೇ ಆ ನನ್ನ ಪ್ರೀತಿಯ ರಸ್ತೆಯಲ್ಲಿರುವ ಸೋಡಿಯಮ್ ದೀಪದ ಬಣ್ಣ, ಜಡಿ ಮಳೆಯ ಹನಿಗಳ ಬಣ್ಣ, ಜುಳು ಜುಳು ಹರಿವ ನೀರಿನ ಬಣ್ಣ, ನಿಂತ ನೀರಿನ ಕೆರೆಯ ತಿಳಿ ಹಸಿರು ಬಣ್ಣ, ಅಮ್ಮನ ಸೀರೆಯ ಬಣ್ಣ, ಇರುವೆಗಳ ಬಣ್ಣ, ಹರಿವ ಹುಳಗಳ ಅದೆಷ್ಟೋ ಬಣ್ಣ,ಮಿಂಚುಳದ ಮಿಣುಕು ಮಿಣುಕು ಹೊಂಬಣ್ಣ , ಆಗಸದಿ ಮಿಂಚುವ ಮಿಂಚಿನ ಬಣ್ಣ, ಚಿಲಿಪಿಲಿ ಹಕ್ಕಿಗಳ ಹಲವು ಬಣ್ಣ, ಅಂಗಳದ ತುಳಸಿಯ ಬಣ್ಣ,ರಂಗೋಲಿ ನಗುವ ಸಗಣಿ ತೀಡಿದ ಅಂಗಳದ ಬಣ್ಣ,ಕೊಟ್ಟಿಗೆಯ 'ಕೆಂಪಿ' ಕರುವಿನ ಬಣ್ಣ, ಅವಳ ಬಳೆಗಳ ಬಣ್ಣ, ಕೆನ್ನೆಯರಿಷಿನ, ಹಣೆಯ ಕುಂಕುಮದ ಬಣ್ಣ, ಕಣ್ಣ ಕಾಡಿಗೆಯ ಬಣ್ಣ, ಹಸ್ತಗಳ ಅಂದಗೊಳಿಸುವ ಮದರಂಗಿ ಬಣ್ಣ , ಅವನ ಕಂಗಳ ಹೊಳಪು ಬಣ್ಣ, ನಗುವ ಹೂಗಳ ಬಣ್ಣ ಬಣ್ಣ, ಚುಮುಚುಮು ಚಳಿಯ ಬೆಳಗಿನ ಇಬ್ಬನಿಯ ಬಣ್ಣ,ಸವಿ ಜೇನ ಬಣ್ಣ, ಅಬ್ಬ ಅದೆಷ್ಟು ಬಣ್ಣಗಳು, ಇವೆಲ್ಲವೂ ನಂಗಿಷ್ಟ.

ಕಾಣದೆಯೂ ಕಾಣುವ ಬಣ್ಣಗಳಿವೆಯಲ್ಲ ,ಅವೂ ನಂಗಿಷ್ಟ. 'ಹೊಂಗನಸು' ಕನಸಿಗೆ ಹೊನ್ನಿನ ಬಣ್ಣವೇ ? "ಬಣ್ಣ ಬಣ್ಣದ ಕನಸು"! ಕನಸಿನ ಎಲ್ಲ ಬಣ್ಣಗಳೂ ನಂಗಿಷ್ಟ, ಮನಸ್ಸಿನ ಹಾಲು ಬಣ್ಣವಿಷ್ಟ . "ನೆನಪು ಹಚ್ಚ ಹಸಿರು " ನೆನಪಿಗೆ ಹಸಿರು ಬಣ್ಣವೇ? ಮರೆವಿಗಾವ ಬಣ್ಣ? ನೆನಪಿನ ಬಣ್ಣಕ್ಕೂ ಒಂಥರಾ ಚೆಲುವಿದೆ. ನೆನಪಿನ ಬಣ್ಣ ಬಲು ಗಾಢ.ಮರೆವಿನ ಬಣ್ಣ ಸ್ವಲ್ಪ ಪೇಲವ. ಅದಕ್ಕೂ ಒಂದು ಸೊಗಸಿದೆ.

ಇನ್ನೆಷ್ಟು ಬಣ್ಣಗಳನ್ನು ಹೇಳಲಿ ? ನೋಡುವ ಪ್ರತಿಯೊಂದಕ್ಕೂ ಬಣ್ಣವಿದೆ , ಚೆಲುವಿದೆ.

ಎಲ್ಲ ಬಣ್ಣಗಳು ಕಲೆತಾಗ ಕಾಣುವ ಸೌಂದರ್ಯಕ್ಕೆ ಎಲ್ಲೆಯುಂಟೆ? ಹೂವಿನ ದಳದ ಮೇಲೋ, ಚಿಗುರೆಲೆಯ ಮೇಲೋ, ಹುಲ್ಲಿನೆಳೆಯ ಮೆಲೋ ಬಿದ್ದ ಹನಿಯೊಡನೆ ರವಿಕಿರಣದ ಹೊಂಬಣ್ಣ ಬೆರೆತಾಗ ಕಾಣುವ ಬಣ್ಣ ಬಣ್ಣವಿದೆಯಲ್ಲ ಆಹಾ ! ಅದು ನನಗೆ ತುಂಬ ಇಷ್ಟ .ಆ ಬಣ್ಣ ಬಣ್ಣದ ಹನಿಯೊಳಗೆ ಬೇರೆಯದೇ ಒಂದು ಲೋಕವಿದೆಯೇನೋ ಅನ್ನಿಸಿಬಿಡುತ್ತದೆ ನನಗೆ. ನೀರ ಹನಿ ಬೆಳಕಿನ ಎಳೆಯೊಡನೆ ಕಲೆತಾಗ ಮೂಡುವ ಈ ಚೆಲುವಿಗೂ ನಾನಾ ಪರಿಯಿದೆ, ಮುಂಜಾನೆಯ ಹನಿಗಳ ಚೆಲುವೇ ಬೇರೆ, ಮುಸ್ಸಂಜೆಯ ಹನಿಗಳ ಚೆಲುವೇ ಬೇರೆ. ಚಳಿಯ ಬೆಳಗಿನಲ್ಲಿ ಜೇಡನ ಬಲೆಗಂಟಿದ ಇಬ್ಬನಿಯ ಹನಿಗಳಿಗೆ ಬೆಳಕಿನೆಳೆ ಸೋಕಿದಾಗ ಕಾಣುವ ಬಣ್ಣದ ಚೆಲುವು ನೋಡಲು ಬಲು ಸೊಗಸು.

ಆದರೆ ನಾ ಇಷ್ಟೆಲ್ಲಾ ಬರೆಯಲು ಕಾರಣ ಬೇರೆಯದೇ ಇದೆ. ಅದು ಗುಳ್ಳೆಗಳ ಮೇಲಣ ಬಣ್ಣದ ಚೆಲುವು. ಬಣ್ಣವಿಲ್ಲದ ಗುಳ್ಳೆಗಳು ಬೆಳಕಿನ ಹೊಳಪ ಸೆಳೆದು ಬಣ್ಣ ಬಣ್ಣವಾಗಿ ಹಾರುವಾಗ ನನ್ನ ಮನಸ್ಸೂ ಗುಳ್ಳೆಗಳಂತೆ ಹಗುರಾಗಿ ತೇಲಿ ಹೋಗುತ್ತದೆ. ನನ್ನ ನೆನಪುಗಳ ಬಣ್ಣದಲ್ಲಿ ಒಂದು ಚಿತ್ರವಿದೆ. ನಾನು ಪುಟ್ಟ ಹುಡುಗಿಯಾಗಿದ್ದಾಗ ಗುಳ್ಳೆಗಳೊಡನೆ ಆಡುತ್ತಿದ್ದುದು. ಅಜ್ಜನ ಮನೆಯ ಎದುರು ಬೇಲಿ ಸಾಲಿನ ಕಳ್ಳಿಗಿಡದ ದಂಟು ಮುರಿದರೆ ಸೋರುತ್ತಿದ್ದ ಕಳ್ಳಿರಸವನ್ನು
ಊದಿದರೆ ಸಾಕು ಬೇರೆ ಬೇರೆ ಗಾತ್ರದ ಅವೆಷ್ಟೋ ಗುಳ್ಳೆಗಳು ನಮ್ಮನ್ನು ಸುತ್ತುವರಿಯುತ್ತಿದ್ದವು. ಒಂದೊಂದು ಗುಳ್ಳೆಗಳಲ್ಲೂ ಅದೆಷ್ಟೋ ಬಣ್ಣಗಳು. ಎಷ್ಟು ಸುಂದರ. ಆ ಆಟ ನನಗೆಂದೂ ಬೇಸರ ತರಿಸುತ್ತಿರಲಿಲ್ಲ.ಪಕ್ಕದ ಮೆನೆಯ ಬೇಲಿಯಲ್ಲಿ ಇನ್ನೊಂದು ಗಿಡವಿತ್ತು, ಏನು ಹೆಸರೋ ತಿಳಿಯದು. ಅದರ ಎಲೆಯನ್ನು ಅರ್ಧರ್ಧವಾಗಿ ಮುರಿದರೆ ಪಟ್ ಎಂದು ಶಬ್ದ ಬರುತ್ತಿತ್ತು, ಆಮೇಲೆ ಮೆಲ್ಲಗೆ ಅದನ್ನು ಒತ್ತಿ ಹಿಡಿದು ಬಿಡಿಸಿದರೆ ಗುಳ್ಳೆಯ ತೆಳು ಪದರು, ತೆಳು ಕನ್ನಡಿಯಂತೆ ಕಾಣುತ್ತಿತ್ತು , ಅದರಲ್ಲೂ ಅಷ್ಟೇ ಹಲವು ಬಣ್ಣಗಳು. ಅದನ್ನು ನೋಡುತ್ತಿದ್ದ ಖುಷಿಯನ್ನು ಇವತ್ತಿಗೂ ನನ್ನ ನೆನಪಿನ ಬುಟ್ಟಿಯಲ್ಲಿ ಚಂದವಾಗಿ ಕಟ್ಟಿಟ್ಟಿದ್ದೇನೆ.

ಹೋದವರ್ಷ ಅಜ್ಜನ ಮನೆಗೆ ಹೋಗಿದ್ದಾಗ ಮುಸ್ಸಂಜೆ ಹೊತ್ತಲ್ಲಿ ದೇವಸ್ಥಾನಕ್ಕೆ ಹೋಗಿದ್ದೆವು. ದೇವರ ದರ್ಶನವಾದ ನಂತರ ಅಲ್ಲೇ ಕಟ್ಟೆಯ ಮೇಲೆ ಮಾತಾಡುತ್ತ ಕುಳಿತಿದ್ದಾಗ ಆಚೆ ಮೂಲೆಯಲ್ಲೆಲ್ಲೊ ಕಳ್ಳಿ ಗಿಡದ ಹಿಂಡು ಕಾಣಿಸಿತು. ನನಗಂತೂ ಬಾಲ್ಯ ಮರುಕಳಿಸಿದಂತಾಗಿ ಕಟ್ಟೆಯಿಂದ ಜಿಗಿದು ಹೋಗಿ ಕಳ್ಳಿ ಎಲೆ ಮುರಿದು ಗುಳ್ಳೆಗಳನ್ನು ಊದಿದೆ. ಅಕ್ಕನೂ ಜೊತೆಯಾದಳು.
ಅದೆಷ್ಟೋ ಹೊತ್ತು ಇಬ್ಬರೂ ಕಾಲವನ್ನೇ ಮರೆತವರಂತೆ ನೂರಾರು ಗುಳ್ಳೆಗಳನ್ನು ಗಾಳಿಗೆ ತೇಲಿ ಬಿಟ್ಟು ಬಣ್ಣಗಳನ್ನು ಕಣ್ತುಂಬಿಕೊಂಡು ಆನಂದಿಸಿದೆವು. ಬೀಸಿಬರುತ್ತಿದ್ದ ತಿಳಿಗಾಳಿಗೆ ಸುತ್ತಲಿದ್ದ ಗದ್ದೆಯ ಹಸಿರುಪೈರುಗಳು ತಲೆದೂಗುತ್ತಿದ್ದಿದ್ದು ನಮ್ಮ ನಲಿವಿಗೆ ಅವೂ ಸಾಥಿ ನೀಡಿದಂತಿತ್ತು. ಭಾವಕ್ಕೆ ಮತ್ತಷ್ಟು ಬಣ್ಣ ಬಳಿದಂತಾಗಿ ಮನಸ್ಸು ಅದೆಲ್ಲೋ ಕಳೆದುಹೋಗಿತ್ತು .