ಯಾವುದಾದರೊಂದು ನೆಪದಿಂದ ಹಳೆಯ ಕವಿತೆಗಳು ನೆನಪಾಗುತ್ತಲೇ ಇರುತ್ತವೆ. ಅಂತದೇ ಒಂದು ಕವಿತೆ ಇಲ್ಲಿದೆ. ಸುಮಾರು ಎಂಟು ಹತ್ತು ವರ್ಷಗಳ ಹಿಂದೆ ನಾನು ಬರೆದಿದ್ದ ಕವಿತೆ. ಮೊನ್ನೆ ಯಾಕೋ ನೆನಪಾಯ್ತು . ಕವಿತೆಯಲ್ಲಿನ ಪದಗಳು ಬಾಲಿಶವೆನಿಸಿದರೂ ಅದರ ಉದ್ದೇಶ ಮಾತ್ರ ಗಟ್ಟಿಯಾದುದು ಅನ್ನಿಸಿತು. ಇಲ್ಲಿ "ಚೆಲುವು" ಅನ್ನುವ ಪದ ಕವಿತೆಯಲ್ಲಿ ಒಂದು ಉದಾಹರಣೆಯಷ್ಟೇ . ಕವಿತೆಯ ಉದ್ದೇಶ ಚೆಲುವಿಗಷ್ಟೇ ಅಲ್ಲದೆ ಯಶಸ್ಸು , ಕೀರ್ತಿ , ಹಣ ಎಲ್ಲದಕ್ಕೂ ಅನ್ವಯ . ಯಾವುದೇ ಸ್ಥಾನದಲ್ಲಿದ್ದರೂ ನಾನೇ ದೊಡ್ಡವನು ನಾನೇ ಎಲ್ಲವನ್ನೂ ಸಾಧಿಸಿದವನು ಎಂಬ ಅಹಮಿಕೆ ಇರಬಾರದು ಎನ್ನುವುದು ನನ್ನ ತತ್ವ. ಕವಿತೆಯ ಬಗ್ಗೆ ಇನ್ನಷ್ಟು ಹೇಳುವ ಮನಸ್ಸಿತ್ತು. ಆದರೆ ಮಂತ್ರಕ್ಕಿಂತ ಉಗುಳು ಜಾಸ್ತಿ ಆಗಬಾರದು :) , ಮುನ್ನುಡಿಯೇ ಉದ್ದವಾಗಿ ಕವಿತೆ ಕಳೆದು ಹೋಗಬಾರದು . ಅದಕ್ಕೇ ಇಷ್ಟು ಸಾಕು.
ಕವಿತೆ ಇಲ್ಲಿದೆ, ಬಾಲಿಶವಾಗಿದ್ದರೂ ತಿದ್ದದೇ ಅಂದು ಹೇಗೆ ಬರೆದಿಟ್ಟಿದ್ದೇನೋ ಅದನ್ನೇ ಇಲ್ಲಿಟ್ಟಿದ್ದೇನೆ.
ಚಂದದಾ ತೋಟದಲಿ ಚೆಂಗುಲಾಬಿಯ ಗಿಡದಿ
ಪುಟ್ಟಗುಲಾಬಿಯ ಮೊಗ್ಗಾಗಿ ನಾ ನಗುತಲಿದ್ದೆ
ನನಗರಿಯದೆ ನನ್ನ ಚೆಲುವಿಗೆ ನಾ ಬೀಗುತಿದ್ದೆ
ಇಂದಲ್ಲ ನಾಳೆ ಹೂವಾಗರಳುವೆನೆಂಬ ಗರ್ವದಲ್ಲಿದ್ದೆ
ಹುಣ್ಣಿಮೆಯ ಚಂದ್ರನು ಬಾನಲ್ಲೇ ಕರಗಿರಲು
ಬಂದೆ ಬಂದನು ರವಿಯು ಬಾನಿನೇರಿಯಲ್ಲಿ
ಇಬ್ಬನಿಯ ಕಣಗಳು ನನ್ನ ಮೇಲೆರಗಲು
ಕಣ್ಣ ತೆರೆದಾಗ ನಾನು ಅರೆಬಿರಿದ ಹೂವಾಗಿದ್ದೆ ಗಿಡದಲ್ಲಿ
ಚೆಲುವೆಯೊಬ್ಬಳು ನನ್ನ ಬಳಿಯಲ್ಲಿ ಬಂದು
ನನ್ನ ಕೊಯ್ಯಲು ಕೈಚಾಚಿದಳು ಮುಂದು
ಸಂತಸದಿ ಮನದಲ್ಲೇ ನಲಿನಲಿದೆ
ನಾ ಚೆಲುವೆಯ ಮುಡಿ ಸೇರುವೆನೆಂದು.
ಚೆಲುವೆಯ ಮುಡಿಯಲ್ಲಿ ಕಂಗೊಳಿಸುವಾಗ
ನಾ ತಿರುಗಿ ನೋಡಿದೆನೊಮ್ಮೆ
ಬಾಡಿ ಮುದುಡಿದ ನನ್ನ ಹೋಲದ
ಒಣಗಿದ ಹಳೆ ಹೂಗಳೆಡೆಗೆ ಗರ್ವಭಾವದಿ.
ಸಂಜೆ ತಾನೋಡಿ ಬಂದಂತೆಲ್ಲ
ಹೊತ್ತು ತಂತಾನೆ ಜಾರಿದಂತೆಲ್ಲ
ಮುಡಿಯೇರಿ ಕುಳಿತ ನಾ ಬಾಡತೊಡಗಿದ್ದೆ
ನನಗರಿವಿಲ್ಲದೆಯೇ ನಾ ಬಾಡತೊಡಗಿದ್ದೆ
ಕಿತ್ತು ಬಿಸುಟಿದಳಾಗ ಚೆಲುವೆ
ನನ್ನನ್ನು ಮುಡಿಯಿಂದ
ಕಾಲು ಕಸವಾಗಿ ಬಿದ್ದಿದ್ದೆ ಕ್ಷಣದಲ್ಲೇ
ಸೋತಭಾವದಿ ಬಿದ್ದಿದ್ದೆ ನಾನಲ್ಲೇ
ಕನಸಿನಿಂದ ವಾಸ್ತವಕೆ ಬಂದೆ ನಾನಾಗ
ಕಿವಿಯಲ್ಲಿ ಪಿಸುಗುಟ್ಟಿದಂತಾಗಿ
ಚೆಲುವು ಶಾಶ್ವತವಲ್ಲ ಹುಡುಗಿ ಚೆಲುವು ಶಾಶ್ವತವಲ್ಲ
ತಿಳಿದಿರು ನೀ, ಎಂದೂ ಚೆಲುವು ಶಾಶ್ವತವಲ್ಲ
3 comments:
ನಮಸ್ಕಾರ,
ಕವಿತೆ ತುಂಬಾ ಚೆನ್ನಾಗಿದೆ.
ನಿಮ್ಮ ಈ ಕವಿತೆಯನ್ನು ಓದಿದ ಮೇಲೆ ನನಗೆ ನಾನು ಬರೆದ ಕವನದ ನೆನಪಾಯ್ತು. Theme ಒಂದೇ, ಆದರೆ ಆರಿಸಿರುವ ವಸ್ತು ಬೇರೆ. ನನ್ನ ಬ್ಲಾಗನ್ನೊಮ್ಮೆ ಅವಗಾಹಿಸಿ.
http://saagari.wordpress.com/2008/08/11/%E0%B2%9F%E0%B3%88%E0%B2%9F%E0%B2%B2%E0%B3%8D%E0%B2%B2%E0%B3%81-%E0%B2%A4%E0%B3%8B%E0%B2%9A%E0%B2%A6-%E0%B2%95%E0%B2%B5%E0%B2%A8/
ಹತ್ತು ವರ್ಷದಷ್ಟು ಹಳೇಯ ಕವನವಾದರೂ ಇದರಲ್ಲಿ ಪ್ರಭುದ್ದತೆ ಇದೆ. ಭಾಷೆ ನನಗೆ ಬಾಲಿಶವಾಗಿ ತೋರಿಲ್ಲ, ಸರಳವಾಗಿದೆ.
ಇಂದು ಚೆಲುವೋ, ಕೀರ್ತಿಯೋ, ಹಣವೋ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನಂಗೆ ಕವಿತೆಗಳ ಇಷ್ಟ ಆಗದು ಕಡಿಮೆ.. ಆದರೆ ಇದು ಮನಸ್ಸಿಗೆ ನಾಟ್ತು.. ಸೂಪರ್ ಕವಿತೆ...
Post a Comment