Monday, September 20, 2010

ನೆನಪ ಕನವರಿಕೆ

ಮೋಡ ಕವಿದ ಬೇಸರದ ಮಧ್ಯಾಹ್ನ
ಸುಮ್ಮನೇ ಬೀಸಿ ಬಂದ ಗಾಳಿಗೆ
ಕಾಲುಹಾದಿಗುಂಟ ಮರವುದುರಿಸಿದ
ಹೂ ಪಕಳೆಗಳಂತೆ ನಿನ್ನ ನೆನಪು
       
ಹೂ ಕಂಪು ಹರಡಿ ತನುವನಾವರಿಸಿ
ಮನವ ಮುಸುಕಿದ್ದ ಬೇಸರದ ಛಾಯೆ
ಅಳಿಯೆ 
ದಿನವಿಡೀ ಕವಿದಿದ್ದ ಮೋಡ ಕೊಂಚ ಸರಿದು
ಸಂಜೆ ಜಾರುವ ಹೊತ್ತಲ್ಲೂ ಹರಿದ ತಿಳಿ
ಬೆಳಕಂತೆ ನಿನ್ನ ನೆನಪು

ಮುಂಬಾಗಿಲ ದಾಟಿ ಒಳಬರುವಾಗ
ಸಂಜೆ ಯಾರಿಲ್ಲದ ಹೊತ್ತಲ್ಲಿ, ಅರಿವಿಲ್ಲದೇ ಕವಿದ ಕಪ್ಪಿಗೆ
ಮಾತು ಮರೆತಂತಾಗಿ ದಿಗಿಲು ಆವರಿಸುವಾಗ
ಮೆಲ್ನಕ್ಕ  ಗುಡಿಯ ಮುಂದಿನ ಪ್ರಣತಿಯಂತೆ  ನಿನ್ನ ನೆನಪು

ಕಾರುಗತ್ತಲ  ರಾತ್ರಿ, ತಾರೆ ನೂರಲ್ಲ ಒಂದೂ ಇಲ್ಲದೇ
ನಿಶೆ ತಾನೇ ತಾನು ಮುಸುಕಿದಾಗ
ನಿದ್ದೆ ಬಾರದೆಯೂ ಮುಚ್ಚಿಕೊಂಡ ಕಂಗಳೊಳಗೆ
ತುಂಬಿಕೊಂಡ ಕನಸಂತೆ ನಿನ್ನ ನೆನಪು

Monday, April 26, 2010

........

ಸಂಜೆಗೆಂಪಿನ ಪರದೆ ತೆರೆದುಕೊಳುವಾ ವೇಳೆ
ಅರೆಬಿರಿದ ಹೂ ಮೊಗ್ಗು ಚೆಲ್ವ ಬೀರಿ ನಗಲು
ಮೌನದೊಳು ಮರೆತಿದ್ದ  ಹಾಡು
ಮನದೊಳಗೆ ಸಾಲು ಸಾಲಾಗಿ ಬರಲು
ನನ್ನೊಳಗೆ ನಾ ಹಾಡಿಕೊಳ್ಳುವ ಬಯಕೆ
ದನಿಯಿಲ್ಲದಾ ಹಾಡಿಗೆ ರಾಗ ತಾಳಗಳು ಬೇಕೇ?
ಭಾವವೊಂದಿರೆ ಸಾಕೆ?

ಸಂಜೆ ನಸುಗಪ್ಪು ಕವಿಯುವ ಹೊತ್ತು
ಬೀಸಿ ಬೀಸಿ ಬರುತಿಹ ತಂಪಿನ ಗಾಳಿಯಲಿ
ನೆನಪು ಕನಸುಗಳ ತರಗೆಲೆಗಳ ಹಾಸಿ ಕೂತಿರುವಾಗ
ಹಾರಿ ಹೋಗುತಿರುವ ಒಂದೊಂದು ಎಲೆಯನ್ನು
ಒಬ್ಬಳೇ ನಾನು ಹಿಡಿದು ತರಲೇನು ಇಲ್ಲ ಹಾರ ಬಿಡಲೇನು?

ಕವಿದ ಕಡುಗಪ್ಪಿನಲಿ ಚಿಟ ಪಟನೆ ಬೀಳುವ ಹನಿಗಳು
ಕಂಡೂ  ಕಾಣದೆ ಕಳೆದುಹೋಗುತಿರುವಾಗ 
ಸಾಲು ಸಾಲು ಹಾಡು ಮನದಲ್ಲೇ ಮತ್ತೆ ಮರೆತ್ಹೋಗುವ ಮುನ್ನ
ನೀ ಬಂದು ದನಿಯಾಗು ಹಾಡು ಹಾಡಲೇ ಬೇಕಿದೆ ನಾನು .
ನೆನಪು ಕನಸಿನ ತರಗೆಲೆಗಳು ಹಾರಿ  ಚೆದುರಿ
ಅಂಗಳದ ಒದ್ದೆಯಲಿ ಕರಗಿಹೋಗುವ ಮುನ್ನ
ನೀ ಬಂದು ಜೊತೆಯಾಗು ಎಲ್ಲವನೂ ಒಟ್ಟುಗೂಡಿಸಬೇಕಿದೆ ನಾನು.