Tuesday, April 29, 2008

ನವ ಭಾವ

ಹಳೆಯ ಹಾಡು ಹಳೆಯ ರಾಗ
ಆದರೇಕೋ ಭಾವವಿಂದು ಹೊಸತಿದೆ
ಮರೆತುಹೋದ ಸಾಲದೊಂದು ಇಂದೇಕೋ ನೆನಪಾಗಿ
ತುಟಿಯ ಮೇಲೆ ಮತ್ತೆ ಮತ್ತೆ ನಲಿದಿದೆ.

ಕೆನ್ನೆಮೇಲೆ ಸಂಜೆಗೆಂಪು ರಂಗದೆಕೋ ಏರಿದೆ
ಕಿವಿಯ ಓಲೆ ಹರಳಿನಲ್ಲಿ ಹೊಸತೇನೋ ಮಿಂಚಿದೆ
ಮುಡಿಯಲಿಲ್ಲ ಸುಮದ ಇರುಹು, ಆದರಿಲ್ಲಿ
ನಿನ್ನೆ ಮುಡಿದ ಮಲ್ಲೆ ಮಾಲೆ ಇಂದೂ ಕಂಪ ಸೂಸುತಿದೆ.

ಕಣ್ಣ ತುಂಬ ಕನಸಿಗೆಲ್ಲ ಹೊಸತದೊಂದು ಚಿತ್ರಣ
ಕನಸ ಚಿತ್ರಕೆಲ್ಲ ಇಂದು ಹೊಸ ಹೊಸತೇ ಬಣ್ಣವು
ಮನಸದಾಗಿರೆ ಏಕೋ ಅರಳಿನಿಂತ ಕುಸುಮವು
ತುಟಿಯ ಮೇಲೆ ಎಳೆಯ ಚಿಗುರಿನಂತ ಮೆಲುನಗೆ.

ಇಳಿಸಂಜೆಯ ತಂಪುಗಾಳಿ , ಕೋಗಿಲೆಯ ಕುಹೂ ಕುಹೂ
ಮತ್ತೆಲ್ಲಿಂದಲೋ ತೇಲಿಬಂದ ಸಂಧ್ಯಾರಾಗದ ಜೊತೆಯಾಗೆ
ಮುದಗೊಂಡ ಮನವು ಉಲಿಯಿತು ಮೆಲ್ಲಗೆ
"ವಸಂತ ಬಂದನೇ ಬಾಳಿಗೆ ?"

Tuesday, April 22, 2008

ಹೆಸರಲ್ಲೇನಿದೆ ಅಂತೀರಾ?

ಮೊನ್ನೆ ಈಮೇಲ್ ಒಂದರಲ್ಲಿ ಒಂದು ಲಿಂಕ್ ಸಿಕ್ಕಿತು. ಅದೇನಪ್ಪ ಅಂದ್ರೆ ಬರ್ತಿರೋ ಚುನಾವಣೆಯ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇದೆಯೋ ಇಲ್ಲವೊ ಅಂತ ನೋಡಬಹುದಾದದ್ದು. ನಂಗೆ ಕುತೂಹಲವಾಯ್ತು. ನಾನೇನು ಹೋಗಿ ವೋಟ್ ಹಾಕುವ ಹುಮ್ಮಸ್ಸಿನಲ್ಲೇನಿರಲಿಲ್ಲ. ಆದರೂ ಇನ್ನೂ ಒಂದು ಸಲವೂ ವೋಟ್ ಹಾಕಿ ಅನುಭವವಿಲ್ಲ ನೋಡಿ ಅದೇನೋ ಕುತೂಹಲ. ಅಷ್ಟೇ ಅಲ್ಲದೆ ಇಂಜಿನಿಯರಿಂಗ್ ಮೂರನೆ ವರ್ಷದಲ್ಲಿದ್ದಾಗ ಯುಗಾದಿ ಹಬ್ಬಕ್ಕೆಂದು ಮನೆಗೆ ಹೋಗಿದ್ದಾಗ ಐಡೆಂಟಿಟಿ ಕಾರ್ಡ್ ಗೆ ಫೋಟೋ ತೆಗೀತಿರೋ ವಿಚಾರ ಗೊತ್ತಾಗಿ ನಾನೂ ನನ್ನ ಗೆಳತಿಯೂ ಹಬ್ಬದ ದಿನ ಬೆಳ್ಬೆಳಿಗ್ಗೆ ಅದ್ಯಾವ್ದೋ ತಾಲುಕಾಫೀಸೋ ಯಾವ್ದೋ ಒಂದರ ಮುಂದೆ ಹೋಗಿ ನಿಂತು ಕಾದು ಕಾದು , ಬಿಸಿಲಲ್ಲಿ ಬೆಂದು , ನಮ್ಮ ಇರುವ ಅಲ್ಪ ಸ್ವಲ್ಪ ತಾಳ್ಮೆಯನ್ನೆಲ್ಲ ಪರೀಕ್ಷೆಗೊಡ್ಡಿ ಅಂತೂ ಗುದ್ದಾಡಿ ನಾವು ಅಂತ ಹೆಸರಿನ ಬಲದ ಮೇಲೆ ಮಾತ್ರ ಗುರುತಿಸಬಹುದಾದ ಒಂದು ಫೋಟೋ ಇರುವ ಕಾರ್ಡ್ ಅನ್ನು ಗಿಟ್ಟಿಸಿಕೊಂಡು ಮಧ್ಯಾಹ್ನ 2.30 -3 ಗಂಟೆಗೆ ಮನೆಗೆ ಹೋಗಿ ಹಬ್ಬಕ್ಕೆ ಅಂತ ಅಷ್ಟು ದೂರದಿಂದ ಬಂದು 3 ಗಂಟೆಗೆ ಮನೆಗೆ ಬರೋದಾ ಊಟಕ್ಕೆ ? ಅಂತ ಅಮ್ಮನ ಕೈಲಿ ಮಂಗಳಾರತಿ ಎತ್ತಿಸಿಕೊಂಡಿದ್ದೆಲ್ಲ ಒಮ್ಮೆಲೇ ನೆನಪಿಗೆ ಬಂದಿದ್ದರಿಂದ ಮತದಾರರ ಪಟ್ಟಿಯಲ್ಲಿ ನನ್ನ ಹೆಸರಿದೆಯೋ ಇಲ್ಲವೋ ಅಂತ ನೋಡಲೇ ಬೇಕಿತ್ತು ನನಗೆ.

ಅಂತೂ ಆ ಲಿಂಕಿನ ಮೇಲೆ ಕ್ಲಿಕ್ ಮಾಡಿ ಒಳಹೋಗಿ ನಮ್ಮೂರಿನ ನಮ್ಮ ಮತಗಟ್ಟೆಯ ಹೆಸರನ್ನೂ ಹುಡುಕಿಬಿಟ್ಟೆ. ಮತದಾರರಪಟ್ಟಿ ಕಾಣಿಸಿತು. ಹಾಗೆಯೇ ಒಂದೊಂದೇ ಹೆಸರನ್ನು ಓದುತ್ತಾ ಹೋದೆ. ಮಧ್ಯದಲ್ಲಿ ಒಂದು ಕಡೆ ಅಪ್ಪನ ಹೆಸರು ಕಂಡೇ ಬಿಟ್ಟಿತು . ಅಲ್ಲೇ ಕೆಳಗೆ ಅಮ್ಮನ ಹೆಸರು. ಮತ್ತಲ್ಲೇ ಕೆಳಗೆ ಇತ್ತಲ್ಲ ನನ್ನ ಹೆಸರು. ಅಬ್ಬ ಹುಡುಕಿದ್ದಕ್ಕೂ ಸಾರ್ಥಕ ಆಯ್ತು ಅಂದುಕೊಳ್ಳುತ್ತಾ ಅದನ್ನು ಕ್ಲೋಸ್ ಮಾಡಬೇಕು ಅಷ್ಟರಲ್ಲಿ ನನ್ನ ಕಣ್ಣು ನನ್ನ ಹೆಸರಿನ ಪಕ್ಕದಲ್ಲಿ ಬರೆದಿದ್ದ "ಗಂ" ಎಂಬ ಅಕ್ಷರದತ್ತ ಹಾಯಿತು. ಅಂದರೆ ಅಲ್ಲಿ ನನ್ನನ್ನು ಹುಡುಗ ಎಂದು ನಮೂದಿಸಲಾಗಿತ್ತು. ಅರೆ ನನ್ನಪ್ಪಾ ಅಮ್ಮಂಗೆ ಮಗ ಇಲ್ದೇ ಇರೋ ವಿಚಾರ ಇವರಿಗೂ ಹೆಂಗೋ ಗೊತ್ತಾಗ್ಬಿಡ್ತಲ್ಲಪ್ಪ ಅಂತ ನಗು ಬಂತು.

ನನ್ನ ಚಂದದ ಹೆಸರಿಗೆ ಅನ್ಯಾಯ ಆಗ್ತಿರೋದು ಇದೇ ಮೊದಲಲ್ಲ. ಅಲ್ಲೇ ಕುಳಿತಲ್ಲೇ ಆಲೋಚನೆ ಹಿಂದೆ ಓಡಿ ಒಂದಿಷ್ಟು ಹಳೆಯ ನೆನಪುಗಳು ನನ್ನನ್ನು ಮುತ್ತಿಕೊಂಡವು.

"ಶ್ಯಾಮಾ ಅಂದ್ರೆ ನೀನಾ? ನಾನ್ಯಾರೋ ಹುಡುಗ ಅನ್ಕೊಂಡಿದ್ದೆ" ಅನ್ನೋದು ಬಹಳ ಸಾಮಾನ್ಯವಾದ ಮಾತು ನಾನು ಜಾಸ್ತಿ ಕೇಳಿದ್ದು. "ಇದೇನು ನಿಂಗೆ ಶ್ಯಾಮ ಅಂತ ಹುಡ್ಗನ ಹೆಸ್ರಿಟ್ಟಿದ್ದಾರಲ್ಲ" ನಾನು ಚಿಕ್ಕವಳಿದ್ದಾಗಂತೂ ಈ ಮಾತು ಕೇಳಿ ಕೇಳಿ ರೋಸಿಹೋಗಿತ್ತು. ಅವರಿಗೆಲ್ಲ ನನ್ನ ಹೆಸರಿನ ಅರ್ಥ ತಿಳಿ ಹೇಳಿ ಹೇಳಿ, ವಾದ ಮಾಡಿ ಮಾಡಿ ಸುಸ್ತಾಗ್ತಿತ್ತು. ನಾನು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಭಾಷಣಕ್ಕೋ ಚರ್ಚಾಸ್ಪರ್ಧೆಗೋ ಹಾಡಿಗೋ ಯಾವುದೊ ಒಂದಕ್ಕೆ ಬೇರೆ ಶಾಲೆಗಳಿಗೆ ಹೋದಾಗ ಸ್ಪರ್ಧಿಗಳ ಹೆಸರು ಕೂಗುವಾಗ ನನ್ನ ಹೆಸರು ಬಂದು ನಾನು ಎದ್ದು ಹೋದರೆ ಶ್ಯಾಮಾ ಅಂತ ಕರದ್ರೆ ಇವಳ್ಯಾರೋ ಹುಡುಗಿ ಬಂದಳಲ್ಲ ಅಂತ ಎಲ್ಲರೂ ನನ್ನನ್ನೇ ನೋಡ್ತಿದ್ದರು. ಮತ್ತೆ ನಾನೇ ಶ್ಯಾಮಾ ಅಂತ ಎಲ್ಲರಿಗೂ ಸಮಜಾಯಿಷಿ ಕೊಡಬೇಕಾಗ್ತಿತ್ತು.

ಆಸ್ಪತ್ರೆ ಮತ್ತೆ ಕೆಲವು ಕಡೆಯೆಲ್ಲ ಹೆಸರು ಹಚ್ಚಿ ಕೂತು ಕಾಯಬೇಕಾದ ಪ್ರಸಂಗ ಬಂದಾಗಲೂ ಶ್ಯಾಮಾ ಅನ್ನೋದನ್ನ ಶ್ಯಾಮ್ ಅಂತ ತಪ್ಪಾಗಿ ಕರೆದ ತಕ್ಷಣವೂ ನಾನೇ ಎದ್ದು ಹೋದರೆ ಏನೋ ಅಪರಾಧವಾಯ್ತೇನೋ ಅನ್ನೋ ಹಾಗೆ ನನ್ನನ್ನು ಮಿಕಿ ಮಿಕಿ ನೋಡ್ತಿದ್ದರು.

ಇನ್ನು ಹೊಸತಾಗಿ ಕಾಲೇಜ್ ಸೇರಿದಾಗಲಂತೂ ನನ್ನ ಹೆಸರು ಇಂತದ್ದು. ಇಂತಹ ಹೆಸರವಳು ನಾನೇ ಅಂತ ಜನರಿಗೆ ಮನದಟ್ಟು ಮಾಡಿಕೊಡಲು ಸುಮಾರು ದಿನ ಹೆಣಗಬೇಕಾಗಿ ಬಂದಿತ್ತು. ಆದರೂ ಹೆಸರನ್ನು ತಪ್ಪಾಗಿ ಕರೆಯುವವರಿಗೂ , ಹೆಸರನ್ನು ನೋಡಿ ಹುಡುಗ ಅಂತ ಕನ್ಫ್ಯೂಸ್ ಮಾಡಿಕೊಂಡು ಆಮೇಲೆ ನಾನು ಅಂತ ಗೊತ್ತಾದ ಮೇಲೆ ಹಲ್ಕಿರಿಯುವವರಿಗೂ ಕೊರತೆಯೇನಿರಲಿಲ್ಲ .

ಒಮ್ಮೆ ನನ್ನ ಗೆಳತಿಯ ಜೊತೆ ಅವಳ ಮನೆಗೆ ಹೋಗಿದ್ದೆ. ಹೊರಗೆ ಕುಳಿತಿದ್ದ ಅವಳ ಅಜ್ಜಿಗೆ ನನ್ನ ಪರಿಚಯಿಸಿದಳು "ಇವ್ಳು ಶ್ಯಾಮು, ನನ್ನ ಫ್ರೆಂಡ್, ಬೆಳಿಗ್ಗೆ ಹೇಳಿದ್ನಲ್ಲ ಕರ್ಕೊಂಡು ಬರ್ತೀನಂತ." ಅವಳಜ್ಜಿ ಕಿಸಿ ಕಿಸಿ ನಕ್ಕು ಹೇಳಿದರು "ನೀನು ಶ್ಯಾಮು ಅಂದಾಗ ನಾನು ಯಾರೋ ಹುಡ್ಗನ್ನ ಕರ್ಕೊಂಡು ಬರ್ತಿದೀಯ ಅನ್ಕೊಂಡೆ". ನಾನೂ ನಗಬೇಕಾಯ್ತು.

ಇಷ್ಟೆಲ್ಲಾ ಸಣ್ಣ ಪುಟ್ಟ ವಿಷಯಗಳಿಗೆ ಕಿರೀಟವಿಟ್ಟಂತೆ ಇನ್ನೊಂದು ಪ್ರಸಂಗ ನಡೆಯಿತು. ನಾನು ಸೆಕೆಂಡ್ P.U.C. ಯಲ್ಲಿದ್ದಾಗ ಇನ್ನೇನು ಪರೀಕ್ಷೆ ಹತ್ತಿರ ಬಂದಿತ್ತು. ಕಾಲೇಜಲ್ಲಿ ಎಕ್ಸಾಮ್ ಹಾಲ್ ಟಿಕೆಟ್ ಕೊಟ್ಟಾಗಿತ್ತು. ಎಲ್ಲ ಸರಿಯಾಗಿದೆಯಾ ಅಂತ ಹಾಲ್ ಟಿಕೆಟ್ ನ ನೋಡ್ತಾ ಇದ್ರೆ ಅಲ್ಲಿ ಜಂಡರ್ - "ಮೇಲ್" ಅಂತ ನಮೂದಿಸಿದ್ದರು . ನನಗೆ ಎಲ್ಲಿಲ್ಲದ ಕೋಪ ಬಂದಿತ್ತು. ತಕ್ಷಣ ಕಾಲೇಜ್ ಆಫೀಸ್ ಸೆಕ್ಷನ್ ಗೆ ಹೋಗಿ "ಹೀಗೆ ಆಗಿದೆ" ಅಂತ ತಿಳಿಸಿದರೆ ಅವರು ಅವಾಗ ಬಾ ಇವಾಗ ಬಾ ನಾಳೆ ಬಾ ಅಂತೆಲ್ಲ ಹೇಳಿ ನನ್ನ ಸಿಟ್ಟಿಗೆ ತುಪ್ಪ ಸುರಿದು ಕಳಿಸಿದರು. ನಾನು ಸಿಟ್ಟು ಮಾಡಿಕೊಂಡು ಮನೆಗೆ ಬಂದು ಎಲ್ಲರ ಮೇಲೂ ಹರಿಹಾಯ್ದೆ.
ಯಾಕೆ ನಂಗೆ ಈ ಹೆಸರು ಇಟ್ಟೆ ಅಂತ ಅಪ್ಪನಿಗೂ ಬಯ್ದಿದ್ದಾಯ್ತು.

ಮರುದಿನ ಅಪ್ಪ ನಾನೇ ಬರ್ತೀನಿ ನಡಿ ಕಾಲೇಜಿಗೆ ಅಂದರು. ಪ್ರಿನ್ಸಿಪಾಲ್ ಅಪ್ಪನಿಗೆ ಪರಿಚಯದವರಾಗಿದ್ದರಿಂದ ಅವರ ಹತ್ರವೇ ಮಾತಾಡಬಹುದು ಅಂತ ಹೊರಟಿದ್ದು. ಕಾಲೇಜಿನೊಳಗೆ ಕಾಲಿಟ್ಟ ತಕ್ಷಣ ನಮ್ಮ ಸಂಸ್ಕೃತ ಪ್ರೊಫೆಸರ್ ಎದುರಾಗಿ ಅಪ್ಪನಿಗೆ "ಹೋ ನೀವೇನಿಲ್ಲಿ?" ಅಂತ ಕೈ ಕುಲುಕಿದರು. ಅಪ್ಪ ಹೀಗೆ ಹೀಗೆ ಆಗಿದೆ ಅದಕ್ಕೆ ಏನಾದ್ರೂ ತೊಂದ್ರೆ ಇದೆಯ ಅಂತ ವಿಚಾರಿಸಿಕೊಂಡು ಹೋಗುವುದಕ್ಕೆ ಬಂದಿದ್ದು ಅಂತ ಹೇಳಿದರು. ಆ ಪ್ರೊಫೆಸರ್ ಮಹಾಶಯರು ತಮ್ಮ ಯಾವತ್ತಿನ ತಮಾಷೆಯ ದನಿಯಲ್ಲೇ "ಇಷ್ಟುಕ್ಕೆಲ್ಲ ಯಾಕೆ ಟೆನ್ಶನ್ . ಎಕ್ಸಾಮ್ ದಿನಾ ಪ್ಯಾಂಟ್ ಶರ್ಟ್ ಹಾಕ್ಕೊಂಡು ಒಂದು ಮೀಸೆ ಹಚ್ಕೊಂಡು ಬಂದ್ಬಿಟ್ರಾಯ್ತಪ್ಪ ಹಿ ಹಿ ಹಿ " ಅಂದರು. ನನಗೆ ಸಿಟ್ಟು ಬರ್ತಾ ಇದ್ರೂ ಅವರು ಹೇಳಿದ್ದಕ್ಕೆ ನಗು ಬರದಿದ್ದರೂ ಸುಳ್ಳು ಸುಳ್ಳೇ ಹಿ ಹಿ ಹಿ ಅಂತ ನಕ್ಕು ಪ್ರಿನ್ಸಿಪಾಲ್ ಅವರನ್ನು ನೋಡಲು ಮುಂದೆ ಹೋಗಬೇಕಾಯ್ತು. ಪ್ರಿನ್ಸಿಪಾಲ್ ಇದೇನೂ ತೊಂದ್ರೆ ಇಲ್ಲ ನಾನು ನೋಡ್ಕೊಳ್ತೀನಿ ಅಂತ ಹೇಳಿದ್ಮೇಲೆ ಸಮಾಧಾನದಿಂದ ಮನೆಗೆ ಬಂದೆ.

ಇನ್ನು ಯಾರಾದರೂ ನಿನ್ನ ಹೆಸರೇನು ಎಂದು ಕೇಳಿದಾಗ ನನ್ನ ಹೆಸರಿನೊಡನೆ ಸ್ಪೆಲ್ಲಿಂಗಾದಿಯಾಗಿ ಎಲ್ಲವನ್ನೂ ಹೇಳುವ ಅಭ್ಯಾಸವನ್ನಿಟ್ಟುಕೊಂಡಿದ್ದೇನೆ. ಇಲ್ಲದಿದ್ದರೆ ಅವರು ಶಮಾ ಅಂತ ನನ್ನ ಅಕ್ಕನ ಹೆಸರನ್ನು ನನಗಿಟ್ಟು ಕರೆಯುವ ಸಾಧ್ಯತೆ ಶೇಕಡ ನೂರರಷ್ಟಿರುತ್ತದೆ. :)

ಇಷ್ಟೆಲ್ಲಾ ನನ್ನ ಹೆಸರಿನ ಪುರಾಣ ಸಂಕ್ಷಿಪ್ತವಾಗಿ ನೆನಪಾಗಿ ನನ್ನೊಳಗೇ ನಾ ನಕ್ಕು, ತಪ್ಪು ತಪ್ಪಾಗಿ ಮತದಾರರ ಪಟ್ಟಿ ತಯಾರಿಸಿದವರನ್ನು ನನ್ನ ಚಂದದ ಹೆಸರಿಗೆ ಅನ್ಯಾಯ ಮಾಡಿದ್ದಕ್ಕೆ ಮನಸ್ಸಲ್ಲೇ ಒಮ್ಮೆ ಬಯ್ದುಕೊಂಡು ಸುಮ್ಮನಾದೆ.

Thursday, April 3, 2008

ಕೊಳಲೂದುವವನು

"ಹುಡ್ಗ ಹೆಂಗಿರ್ಬೇಕೆ ? ಏನೇನ್ ಕಂಡೀಶನ್ ನಿಂದು ?" ಚಿಕ್ಕಪ್ಪ ಕೇಳಿದ್ದಕ್ಕೆ
"ಹುಡ್ಗಂಗೆ ಕೊಳಲು ನುಡಿಸುವುದಕ್ಕೆ ಬರಬೇಕು " ಅಂದೆ.
"ಆಹಾಹಾ ಇವಳನ್ನು ಮದ್ವೆಯಾಗೋದಕ್ಕೆ ಬಂದ್ಬಿಡ್ತಾನೆ ಶ್ರೀಕೃಷ್ಣ ಪರಮಾತ್ಮ ಕೊಳಲೂದಿಕೊಂಡು" ಅಲ್ಲೇ ಕುಳಿತಿದ್ದ ತಮ್ಮ ದೊಡ್ಡದೊಂದು ನಗೆ ನಕ್ಕು ಹೇಳಿದ.
"ಹಾಗಲ್ವೆ ಹುಡ್ಗಿ ನಾನು ಸಿರೀಯಸ್ ಆಗಿ ಕೇಳ್ತಿದೀನಿ. ಹೇಳು" ಚಿಕ್ಕಪ್ಪ ಮತ್ತೆ ಹೇಳಿದರು .
"ನಾನೂ ಹಾಗೇ ಹೇಳಿದ್ದು. ಹುಡ್ಗಂಗೆ ಕೊಳಲೂದುವುದಕ್ಕೆ ಬಂದ್ರೆ ನಂಗಿಷ್ಟ . ಚೆನ್ನಾಗಿರ್ತದೆ ಅಂತ" ನಾನಂದೆ.
"ಆ ಹುಡ್ಗಿ ಏನೋ ಹೇಳ್ತಾಳೆ ನೀನು ಅದನ್ನು ಕೇಳ್ತಿಯ. ಸುಮ್ನಿರೋ ನೀನು. ಯಾವಾಗ ಬರೋದಕ್ಕೆ ಹೇಳ್ತೀಯ ಆ ಹುಡ್ಗನ ಕಡೆಯವರಿಗೆ?" ಅಮ್ಮ ಮಧ್ಯ ಬಾಯಿ ಹಾಕಿ ನನ್ನ ಬಾಯ್ಮುಚ್ಚಿಸಿದಳು.

* * * * * * *

ಒಂದ್ಸಲ ನಾನು 4-5 ವರ್ಷದವಳಿದ್ದಾಗ ನಮ್ಮೂರಿನ ದೇವಸ್ಥಾನದ ವಾರ್ಷಿಕೊತ್ಸವಕ್ಕೆ ಸಂಜೆ ಹೊತ್ತಲ್ಲಿ ಮನೆಯವರೆಲ್ಲರ ಜೊತೆ ಹೋಗಿದ್ದೆ .ತುಂಬ ಜನ ಜಂಗುಳಿ ನಡುವೆ ಹಿಡಿದುಕೊಂಡಿದ್ದ ಅಮ್ಮನ ಕೈ ಬಿಟ್ಟು ಹೋಗಿ ಕಳೆದು ಹೋಗಿದ್ದೆ. ಏನು ಮಾಡುವುದಕ್ಕೂ ಗೊತ್ತಾಗದೇ ಜನರ ನಡುವಲ್ಲೆಲ್ಲ ಓಡಾಡ್ತಾ ಓಡಾಡ್ತಾ ಅಮ್ಮನನ್ನು ಹುಡುಕ್ತಾ ಇದ್ದೆ. ಇನ್ನೇನು ಅಳು ಬರ್ತಾ ಇತ್ತು ಅಷ್ಟೊತ್ತಿಗೆ ಅದ್ಯಾವ್ದೋ ಧ್ವನಿ ನನ್ನನ್ನು ಸೆಳೆದುಬಿಡ್ತು. ದೇವಸ್ಥಾನದ ಪಕ್ಕದ ರಂಗಮಂಟಪದ ಹತ್ತಿರ ನಾನು ನಿಂತಿದ್ದೆ. ತಿರುಗಿ ನೋಡಿದೆ. ಯಾರೋ ಒಬ್ಬನು ಕೊಳಲು ನುಡಿಸ್ತಾ ಇದ್ದ. ರಂಗಮಂಟಪದ ಸುತ್ತಲೂ ಕೊಳಲುವಾದನ ಕೇಳಲು ಜನ ತುಂಬಿಬಿಟ್ಟಿದ್ದರು.ಅದೇ ಮೊದಲು ನಾನು ಕೊಳಲು ನುಡಿಸುವುದನ್ನು ನೋಡಿದ್ದು. ಆ ಕೊಳಲಿನ ದನಿಗೆ ನಾನು ಅದೇ ಆ ಕ್ಷಣದಲ್ಲೇ ಮಾರು ಹೋಗಿದ್ದೆ, ಎಷ್ಟೆಂದರೆ ನಾನು ಕಳೆದುಹೋಗಿದ್ದೇನೆ ಎನ್ನುವುದೇ ಮರೆತುಹೋಗುವಷ್ಟು. ಕೊಳಲಿನ ದನಿಯ ಮಾಧುರ್ಯಕ್ಕೆ ಸೋತು ಇನ್ಯಾವುದೋ ಲೋಕದಲ್ಲಿ ಕಳೆದುಹೋಗಿದ್ದೆ ಮತ್ತೊಮ್ಮೆ ನನಗರಿವಿಲ್ಲದೆ. ಬಹುಶಃ ಅವತ್ತು ನಾದದಲೆಯ ಲೋಕದಲ್ಲಿ ಕಳೆದು ಹೋದವಳು ಇನ್ನೂ ಸಿಕ್ಕಿಲ್ಲ ನನಗೆ ನಾನು!

ಆ ಕಡೆ ಮನೆಯವರೆಲ್ಲ ಕಳೆದುಹೋಗಿದ್ದ ನನ್ನನ್ನು ಹುಡುಕುತ್ತ ಸುಮಾರು 20 ನಿಮಿಷವೋ ಅರ್ಧಗಂಟೆಯೋ ಕಳೆದಮೇಲೆ ನಾನಿರುವಲ್ಲಿಗೆ ಬಂದು "ಇಲ್ಲಿದ್ದೀಯಾ ನೀನು ?" ಅಂದಾಗಲೇ ನಾನು ಅರಿವಿನಾಚೆಯ ಲೋಕದಿಂದ ಈಚೆಗೆ ಬಂದಿದ್ದು.

ಅವತ್ತಿನಿಂದ ನನಗೆ ಕೊಳಲುಗಾನವೆಂದರೆ ಅದೇನೋ ಮೋಹ. ಅದೆಷ್ಟೆಂದರೆ ಮಾತಿಲ್ಲದೆ ಮೌನವಾಗಿ ಸ್ವಲ್ಪ ಹೊತ್ತು ಕುಳಿತುಬಿಟ್ಟೆನೆಂದರೆ ಕಿವಿಯತುಂಬೆಲ್ಲ ತುಂಬಿಕೊಳ್ಳುತ್ತದೆ ಕೊಳಲಿನ ದನಿ. ಅದೆಲ್ಲಿಂದ ಬರುತ್ತದೆಯೋ ಗೊತ್ತಿಲ್ಲ. ರಾತ್ರಿ ನಿದ್ದೆಹೋದಮೇಲೂ ಒಮ್ಮೊಮ್ಮೆ ಎಚ್ಚರವಾಗುತ್ತದೆ ಕಿವಿಯಲ್ಲಿ ಕೊಳಲಿನ ಅದೇ ಆ ನಿನಾದ ಕೇಳಿದಂತಾಗಿ. ಆಗೆಲ್ಲ ಅಮ್ಮ "ಏನಾಯ್ತೆ ಯಾಕೆ ಎಚ್ರಾಯ್ತು ?" ಅಂತ ಕೇಳಿದರೆ
"ಯಾರೋ ಕೊಳಲೂದುವ ಸದ್ದು. ಆಹಾ ಎಂಥ ಅದ್ಭುತ ಕೊಳಲಿನ ಗಾನ. ಅದ್ಕೇಎಚ್ಚರವಾಗಿದ್ದು" ನಾನು ಅಂದರೆ
"ನಿನಗೆಂತ ಮರುಳು. ದಿನಾ ಇದೇ ರಾಗವಾಯ್ತು ನಿಂದು. ಯಾರು ಕೊಳಲೂದುತ್ತಾರೆ ಇಲ್ಲಿ? ಸುಮ್ನೆ ಮಲಕ್ಕೋ" ಎನ್ನುತ್ತಾಳೆ ಅಮ್ಮ.

ನಾನು ಹಾಗಾದರೆ ನಂಗೆ ಕೇಳಿದ್ದೇ ಸುಳ್ಳಾ ಅದು ಅಂತೆಲ್ಲ ಯೋಚನೆ ಮಾಡುತ್ತಾ ಮಲಗುತ್ತೇನೆ.

ನನ್ನ ತಮ್ಮನನ್ನು ಯಾವಾಗಲೂ ಪೀಡಿಸುತ್ತಿದ್ದೆ ಕೊಳಲೂದುವುದನ್ನು ಕಲ್ತುಕೊಳ್ಳೋ ಅಂತ. "ಸುಮ್ನೆ ಇರೆ. ನಂಗೆ ಇಂಟ್ರೆಸ್ಟ್ ಇಲ್ಲ್ಲ ಬರೀ ಬರೀ ಯಾಕೆ ನೀನು ಒತ್ತಾಯಿಸ್ತೀಯ?" ಅಂತ ಅವನು.

ಟಿವಿಯಲ್ಲಿ ಕೊಳಲುವಾದನ ಬರ್ತಾ ಇದ್ರಂತೂ ಆ ಚಾನೆಲ್ ಬದಲಾಯಿಸಕ್ಕೆ ನಾನ್ಯಾವತ್ತೂ ಬಿಡ್ತಾ ಇರ್ಲಿಲ್ಲ. ಇನ್ನು ನನ್ನ ಸಿ.ಡಿ. ರ್ರ್ಯಾಕ್ ತುಂಬ ಕೊಳಲುವಾದನದ ಸಿ.ಡಿ.ಗಳೇ. ಕೊನೆ ಕೊನೆಗೆ ಬ್ಯಾಗ್ರೌಂಡಲ್ಲಿ ಮೆಲುವಾಗಿ ಕೊಳಲಿನ ದನಿ ಕೇಳ್ತಾ ಇಲ್ದಿದ್ರೆ ನಂಗೆ ಓದಿದ್ದು ತಲೆಗೆ ಹತ್ತತಾ ಇರ್ಲಿಲ್ಲ. ಎಕ್ಸಾಮ್ ಟೈಮಲ್ಲಿ ಓದುವಾಗೆಲ್ಲ ನಾನು ತಮ್ಮ ಇದೇ ವಿಷಯಕ್ಕೆ ಜಗಳವಾಡ್ತಿದ್ವಿ.

ನನ್ನ ಈ ಥರದ ಹುಚ್ಚಿಗೆ ಅಮ್ಮ ಸಾಕಷ್ಟು ಹೇಳಿದ್ದೂ ಆಗಿತ್ತು . ಆದರೆ ಈಗ ಹುಡ್ಗನ ವಿಷಯ ಬಂದಾಗ ನಾನು ಹೇಳಿದ್ದು ಕೇಳಿ ಅಮ್ಮಂಗೆ ನಿಜವಾಗ್ಲೂ ಜಾಸ್ತಿನೇ ಸಿಟ್ಟು ಬಂದಿತ್ತು.

* * * * * * *
ಅಲ್ಲ ನಾನು ಕೇಳಿದ್ದಾದರೂ ಏನು? "ನಿಮ್ಗೆ ಕೊಳಲೂದುವುದಕ್ಕೆ ಬರುತ್ತಾ ?" ಅಂತ.

ಆತ ನಾನ್ಯಾವ್ದೋ ಜೋಕ್ ಹೇಳಿದ್ನೇನೋ ಅನ್ನೋ ಹಾಗೆ ನಕ್ಕಿದ್ದ. ಅವ್ನು ಮಾತಾಡುವಾಗ , ಏನೆಲ್ಲ ಹೇಳುವಾಗ ನಾನೂ ಹಾಗೇ ನಕ್ಕಿದ್ನಾ? ಇಲ್ವಲ್ಲ.

ಅವ್ನಿಗೆ ಸಿಟಿ ಲೈಫ್ ಹಿಡ್ಸಲ್ವಂತೆ. ಕೆಲ್ಸ ಮಾಡ್ಕೊಂಡು ಬದುಕ್ತಾ ಇರೋದು ಸಿಟಿಲಾದ್ರೂ ಹಳ್ಳಿ ಜೀವ್ನಾನೇ ಇಷ್ಟವಂತೆ. ಅಲ್ಲ ಅಂದವ್ರ್ಯಾರು. ನಾನು ಸಿಟಿಯಲ್ಲಿ ಹುಟ್ಟಿ ಬೆಳೆದವಳಾದರೇನು ನಂಗೆ ಈ ಹೈ ಹೀಲ್ದು ಮತ್ತೊಂದು ಮಗದೊಂದುಗಳನ್ನೆಲ್ಲ ಮೂಲೆಗ್ಹಾಕಿ ಬರಿಗಾಲಲ್ಲಿ ಅಂಗಳದ ಹಸಿ ಮಣ್ಣಮೇಲೆ ಓಡಾಡುತ್ತ ಹೂವು ಕೀಳೋದು ಇಷ್ಟ, ಗದ್ದೆ ಕೆಸರಲ್ಲಿ ಕಾಲು ಹುಗಿಸಿಕೊಂಡು ಓಡಾಡೋದು ಅಂದ್ರೆ ಇಷ್ಟ ಅಂತ ಮನಸ್ಸಲ್ಲಿ ಅನ್ನಿಸಿದರೂ ಹೇಳಬೇಕೆನಿಸಲಿಲ್ಲ ಯಾಕೋ ಅವನೆದುರಿಗೆ.

ಹೊರಗಡೆ ಸಿಗುವ ಜಂಕ್ ಫುಡ್ ಇಷ್ಟವೇ ಆಗೋಲ್ಲವಂತೆ ಆತನಿಗೆ. ಅವನಿಗೇನು ನಾನೂ ಬಿಸಿ ಬಿಸಿ ಅನ್ನಕ್ಕೆ ಬಿಸಿ ಬಿಸಿ ಹಾಲು ಹಾಕಿ ಕಲೆಸಿ ಮೇಲಿಂದ ಒಂದು ಮಾವಿನಮಿಡಿ ಜೊತೆಗೆ ಒಂದಿಷ್ಟು ಉಪ್ಪಿನ್ನಕಾಯಿ ರಸ ಹಾಕ್ಬಿಟ್ರೆ ಯಾವ ಪಿಜ್ಜಾ ತಂದಿಟ್ರೂ ಮೂಸಿಯೂ ನೋಡಲ್ಲ ಅಂತ ಹೇಳಬೇಕೆನಿಸಿತು. ಆದರೆ ಅವನೇನು ನನ್ನ ಅಭಿಪ್ರಾಯ ಕೇಳಲಿಲ್ಲವಲ್ಲ ಅದ್ಕೇ ಸುಮ್ನಾದೆ ಏನೂ ಹೇಳದೆ.

ಕಾರು,ಬೈಕು,ದುಡ್ಡು ,ಕಾಸು ಎಲ್ಲ ಇದ್ರೂ ಅದ್ನೇ ನೆಚ್ಕೊಂಡು ಇರೋದು ಇಷ್ಟವೇ ಇಲ್ವಂತೆ, ಬಹಳ ಸಿಂಪಲ್ಲಾಗಿ ಇರೋಕೆ ಇಷ್ಟವಂತೆ. ಕಾರು, ಬೈಕು,ಆಟೋ,ಬಸ್ಸು ಎಲ್ಲವೂ ಬೋರಾಗಿ ಎಷ್ಟೋ ಸಲ ಗೆಳತಿಯರ ಜೊತೆ ಕಥೆ ಹೇಳ್ತಾ ಗಂಟೆಗಟ್ಲೆ ನಡ್ಕೊಂಡು ಹೋಗೋ ಖುಷಿ ಇನ್ನೆಲ್ಲೂ ಸಿಕ್ಕಿಲ್ಲ ಅಂತ ಹೇಳೋ ಮನ್ಸಾದ್ರೂ ಅವನೇನೋ ಬೇರೆ ಹೇಳ್ತಿದ್ದರಿಂದ ಸುಮ್ನಾಗ್ಬೇಕಾಯ್ತು.

ಇಷ್ಟೆಲ್ಲಾ ಕಥೆ ಅವನು ಹೇಳಿದ ಮೇಲೆ ನನ್ನ ಬಗ್ಗೆ ನನ್ನ ಇಷ್ಟ ಕಷ್ಟಗಳ ಬಗ್ಗೆ ಒಂದು ಮಾತೂ ಕೇಳದೇ ಇದ್ರೂ ನಾನು "ನಿಮ್ಗೆ ಕೊಳಲೂದುವುದಕ್ಕೆ ಬರುತ್ತಾ?" ಅಂತ ಒಂದು ಮಾತು ಕೇಳಿದ್ರಲ್ಲಿ ತಪ್ಪೇನಿತ್ತು ಅಂತ ನಂಗೆ ಈಗ್ಲ್ಲೂ ಗೊತ್ತಾಗ್ತಿಲ್ಲ .

* * * * * * *
ಹರಿಯುತ್ತಿರುವ ಹೊಳೆಯ ಪಕ್ಕದಲ್ಲಿ ನೀರಲ್ಲಿ ಕಾಲಿಳಿಬಿಟ್ಟು ಕೊಳಲೂದುತ್ತಿರೋ ಅವನ ಪಕ್ಕದಲ್ಲಿ ಕೂತು, ಹುಲ್ಲು ಹಾಸಿನ ಮೇಲೆ ಹಾರಾಡ್ತಿರೋ ಪುಟಾಣಿ ಬಣ್ಣದ ಚಿಟ್ಟೆಗಳನ್ನ ಕಣ್ತುಂಬಿಕೊಳ್ಳುತ್ತ ಕೊಳಲಿನ ನಾದದ ಅಲೆಯಲ್ಲಿ ತೇಲುತ್ತಾ ಯಾವುದೋ ಲೋಕದಲ್ಲಿ ಕಳೆದುಹೋಗುತ್ತೇನೆ ಅಂತೆಲ್ಲ ಅಂದುಕೊಳ್ಳುವುದು ಕೇವಲ ಒಂದು ಕಾವ್ಯಾತ್ಮಕ ಕಲ್ಪನೆ. ಅದೇ ಬದುಕಲ್ಲ ಅಂತ ಗೊತ್ತು ನನಗೆ. ಅಂಥ ಹುಚ್ಚು ಆಸೆಯೇನೂ ನನಗಿಲ್ಲ. ಅಥವಾ ಅಂಥ ಕನಸೂ ಸಹ ನಂಗೆ ಒಮ್ಮೆಯೂ ಬಿದ್ದಿಲ್ಲ. ಆದರೂ ಅವನಿಗೆ ಕೊಳಲೂದುವುದಕ್ಕೆ ಬಂದರೆ ತಪ್ಪೇನು ಅಂತ.

ನಾಳೆ ಬರ್ತಿದ್ದಾನಲ್ಲ ಅವನಿಗೆ ಕೊಳಲೂದುವುದಕ್ಕೆ ಬರುತ್ತದೆಯೋ ಏನೋ? ಅಂತ ಯೋಚಿಸುತ್ತಲೇ ತುಟಿಯ ಮೇಲೊಂದು ಕಿರುನಗೆ. ಯೋಚಿಸುತ್ತಿರುವಾಗಲೇ ಕಣ್ಣನ್ನಾವರಿಸುತ್ತಿರುವ ನಿದ್ದೆಯೊಡನೆ, ಸುತ್ತ ಕವಿದ ಕತ್ತಲೆಯೊಳಗೆ ಎಲ್ಲಿಂದಲೋ ತೇಲಿ ಬಂದ ಮೋಹನ ಮುರಳಿ ಗಾನದ ಅಲೆಯಲ್ಲಿ ಕಳೆದುಹೋಗುತ್ತೇನೆ.Tuesday, April 1, 2008

ನನ್ನ ಸುತ್ತ- ನನಗೆ ಗೊತ್ತಿಲ್ಲದ್ದು

ನನ್ನ ಸುತ್ತಲೂ ನಾನೇ ಹಾಕಿದ ಬೇಲಿ
ಬೇಲಿ ದಾಟಿ ಎಂದೂ ಹೊರಹೋಗಬಾರದೆಂದು
ನನಗೆ ನಾನೇ ಹಾಕಿದ ಬೇಲಿಯೋ
ಅಥವಾ ಬೇಲಿ ದಾಟಿ ಯಾರೂ ಒಳಬರಬಾರದೆಂದು
ನಾನು ಹಾಕಿದ ಬೇಲಿಯೋ ಗೊತ್ತಿಲ್ಲ.
ಅಂತೂ ನಾನೂ ಬೇಲಿ ದಾಟಿ ಹೊರ ಹೋಗಲಿಲ್ಲ
ಬೇಲಿ ದಾಟಿ ಯಾರೂ ಒಳ ಬರಲೂ ಇಲ್ಲ.

ನನ್ನ ಸುತ್ತಲೂ ಮಾತು-ಮೌನಗಳ ಯುದ್ಧ
ಮಾತು ಹೊರಬಂದು ಅರ್ಥಕಳೆದುಕೊಳ್ಳಬಾರದೆಂದು
ಮೌನವನ್ನು ಬಯಸಿದೆನೋ

ಅಥವಾ ಅರ್ಥವಿಲ್ಲದ ಮಾತಾಡಿ ನನ್ನೊಳಗಿನ ನಾನು ಕಳೆದುಹೋಗಬಾರದೆಂದು
ಮಾತುಗಳನ್ನು ಆಡದೇ ಬಚ್ಚಿಟ್ಟೆನೋ ಗೊತ್ತಿಲ್ಲ.
ಅಂತೂ ಮಾತು ಸೋತು ಒಳಗೇ ಸತ್ತಿತು
ಮೌನ ಗೆದ್ದೂ ಸೋತು ಶರಣಾಯಿತು.

ನನ್ನ ಸುತ್ತಲೂ ಅರ್ಧ ಹಾಡಿದ ಹಾಡಿನ ಸಾಲುಗಳು
ರಾಗ ಮರೆತುಹೋಗಿ ಹಾಡಿನ ಭಾವ ಬದಲಾಗಬಾರದೆಂದು
ಅರ್ಧ ಹಾಡಿ ನಿಲ್ಲಿಸಿದ ಹಾಡೋ
ಅಥವಾ ನನ್ನೊಳಗಿನ ಭಾವ ಬತ್ತಿಹೋಗಿ,ಮತ್ತೆ ಭಾವನೆಗಳ ಸುಳಿಗೆ ಸಿಲುಕಬಾರದೆಂದು
ಅರ್ಧ ಹಾಡಿದ ಹಾಡೋ ಗೊತ್ತಿಲ್ಲ.
ಅಂತೂ ಹಾಡಿನ ಭಾವವೂ ಬದಲಾಗಲಿಲ್ಲ
ಅರ್ಧ ಹಾಡಿನ ಸಾಲುಗಳು ಬತ್ತಿದ ಭಾವನೆಗಳ ಅಣಕಿಸುವುದೂ ನಿಲ್ಲಲಿಲ್ಲ.