ಕಂಗಳ ತುಂಬಾ ಕನಸುಗಳಿದ್ದವು ಕನಸುಗಳ ಪ್ರೀತಿಸಿದೆ
ಕನಸುಗಳನೆ ಉಸಿರಾಗಿಸಿದೆ ಕನಸುಗಳನ್ನು ಎದೆಯ
ಗೂಡಲ್ಲಿ ಬಚ್ಚಿಟ್ಟೆಒಮ್ಮೆ ತಾರೆಗಳ ನೋಡಿ
ಮನಸೋತೆ ....ತಾರೆಗಳ ಬಿಂಬ ನನ್ನ ಕಣ್ಣಲ್ಲಿ ಪ್ರತಿಬಿಂಬಿಸಿತು.. ತಾರೆಗಳ ಪ್ರೀತಿಸಿದೆ ತಾರೆಗಳೊಡನೆ ನಲಿದೆ ಎದೆಯ ಗೂಡಲ್ಲಿದ್ದ ಕನಸುಗಳೆಲ್ಲ ನೊಂದುಕೊಂಡವೇನೋ ನನ್ನ ಪ್ರೀತಿಯ ತಾರೆಗಳೊಡನೆ ಹಂಚಿಕೊಳ್ಳಲಾಗದೆ, ಕನಸುಗಳೆಲ್ಲ ತಾರೆಗಳಾಗಿ ದೂರದಾಗಸ ಸೇರಿದವು ನನ್ನ ಕೈಗೆ ನಿಲುಕದ ಹಾಗೆ... ದೂರದಲ್ಲಿ ನಿಂತು ನೋಡಿ ನಲಿಯುವುದೊಂದೇ ಈಗ ನನ್ನ ಪಾಲಿಗೆ.
May ತಿಂಗಳ ಒಂದು ದಿನ. ಗಿಡದ ಎಲೆಗಳು ಏಕೆ ಹೊರಗೆ ನಿಂತರೆ ನಾನೇ ಸುಟ್ಟು ಕರಕಲಾಗುವೇನೇನೋ ಎಂಬಂಥ ಸುಡು ಬಿಸಿಲು. ಹೊತ್ತೇರಿದಂತೆ ಏರುತ್ತಿರುವ ಆ ಸೆಖೆ. ಮನಸ್ಸಿಗೇನೋ ಮುದವಿಲ್ಲ. ಏನು ಕೆಲಸ ಮಾಡಲೂ ಗೆಲುವಿಲ್ಲ. ಇವನದೋ ಅವತ್ತಿನಿಂದ ಒಂದೇ ಪ್ರಶ್ನೆ "ನಿನಗೇನು ಇಷ್ಟ??" ನಾನೂ ಏನೂ ಉತ್ತರ ಕೊಡದೇ ಕಣ್ಣಲ್ಲೇ ನಕ್ಕು ಸುಮ್ಮನಾಗುತ್ತಿದ್ದೆ.
ಸಂಜೆಯಾಗುತ್ತಲಿತ್ತು. ಬಿಸಿಲಿನ ತಾಪವೇನೋ ಕಡಿಮೆಯಾಗಿತ್ತು. ಸೆಖೆಯೇನೂ ಒಂಚೂರು ಕಡಿಮೆಯಾಗಿಲ್ಲ. ನನಗಂತೂ ನಿಂತಲ್ಲಿ ನಿಲ್ಲಲಾಗುತ್ತಿಲ್ಲ. ಒಳ ಹೊರಗೂ ಅದೆಷ್ಟು ಸಲ ಓಡಾಡಿದೆನೋ? ಯಾರದೋ ಬರುವನ್ನು ನಿರೀಕ್ಷಿಸುತ್ತಿರುವಂತಿತ್ತು ನನ್ನ ವರ್ತನೆ.
ಮತ್ತೆ ಹೊರ ಹೋಗಿ ಮೇಲೆ ನೋಡಿದೆ ಆಕಾಶದಲ್ಲೆಲ್ಲ ಮೋಡ ಕಟ್ಟಿತ್ತು. ಅದಕ್ಕೆ ಇರಬೇಕು ಈ ರೀತಿ ವಿಪರೀತ ಸೆಖೆ. ಮನಸ್ಸಿಗೆಲ್ಲ ಕಿರಿಕಿರಿ. ಇಂಥ ಹೊತ್ತಿನಲ್ಲಿ ಇವನು ಬೇರೆ ವಿರಾಮವಿಲ್ಲದೇ ಕೇಳುತ್ತಿದ್ದಾನೆ ಅದೇ ಪ್ರಶ್ನೆಯನ್ನು ಮತ್ತೆ ಮತ್ತೆ . ನಿನಗೇನು ಇಷ್ಟ?" ಎಂದು. ಏನನ್ನಲಿ ನಾನು ಇವನಿಗೆ? ನಿಲ್ಲಲಾರದೇ ನಾ ಒಳಗೆ ಹೋದರೆ ಬೆಕ್ಕಿನಂತೆ ಹಿಂದೆಯೇ ಬಂದು ಮತ್ತೆ ಪ್ರಶ್ನೆ ಇಟ್ಟ " ಹೇಳು please ನಿಂ ಗೇನು ಇಷ್ಟ?" ಅಷ್ಟರಲ್ಲಿ ಹೊರಗೆ ಏನೋ ಸದ್ದಾಯಿತು. ಕಿಟಕಿಯಲ್ಲಿ ಇಣುಕಿ ನೋಡಿದ್ದೆ ಗೊತ್ತಾಯ್ತು ಅದು ಮಳೆ ಹನಿಗಳ ಸ ದ್ದೆಂದು. ಮೈ ಮೇಲೆ ಹು ಳ ಬಿಟ್ಟವಳಂತೆ ಕುಣಿಯುತ್ತಾ ಹೊರಗೆ ಓಡಿದೆ ನಾನು. ಅದೆಷ್ಟೋ ದಿನಗಳ ಬಿಸಿಲಿಗೆ ಕಾದ ಇಳೆ ಇಂದು ಮಳೆ ಹನಿಗಳಲ್ಲಿ ಮಿಂದು ತಂಪಾಗಿದ್ದಳು. ಆ ಕಾದ ಮಣ್ಣ ಕಣಗಳ ಮೇಲೆ ನೀರ ಹನಿ ಸಿಂಚನವಾಗಿ ಅದೇನೋ ಆಹ್ಲಾದಕರ ಪರಿಮಳ ವಾತಾವರಣವೆಲ್ಲ ತುಂಬಿತ್ತು. ಮಳೆ ಹನಿಗಳ ಕಂಡು ತಂಪಾದ ಇಳೆಯಂತೆ ನನ್ನ ಮನವೂ ಕೂಡ ತಂಪಾಗಿತ್ತು. ಆ ಮಣ್ಣಿನ ಕಂಪನ್ನು ಆಹ್ಲಾದಿಸುತ್ತಾ ಅದೆಷ್ಟೋ ಹೊತ್ತು ಅಲ್ಲೇ ನಿಂತಿದ್ದೆ.
ಅದಾಗಲೇ ನನ್ನ ಪಕ್ಕ ಬಂದು ನಿಂತಿದ್ದ ಅವನು ಕೇಳಿದ "ಈಗಲಾದರೂ ಹೇಳು ನಿಂಗೇನಿಷ್ಟ?" ಸುರಿಯುತ್ತಿರುವ ಹನಿಗಳನ್ನು ಬೊಗಸೆಯಲ್ಲಿ ತುಂಬಿಕೊಳ್ಳುತ್ತಾ ನಾನು ಹೇಳಿದೆ " ನಂಗೆ ಮೊದಲ ಮಳೆ ಇಷ್ಟ. ಮೊದಲ ಮಳೆ ಬಿದ್ದಾಗ ಮಣ್ಣು ಸೂಸುವ ಆ ಕಂಪು ಇನ್ನೂ ಇಷ್ಟ". ಅವನತ್ತ ತಿರುಗಿ ನಾನು ನಕ್ಕೆ. ಅವನೂ ನಕ್ಕ.
(ನಿಂಗೆ ನಾನು ಇಷ್ಟವಾ ಅಂತ ಅವನೂ ಕೇಳಲಿಲ್ಲ ನಾನೂ ಹೇಳಲಿಲ್ಲ).......
ಚಂದ ಮಾಮನಿಗೂ ನನಗೂ ಮೊದಲಿನಿಂದ ಏನೋ ಒಂದು ಭಾವನಾತ್ಮಕ ಸಂಬಂಧ. ದಿನಾಲೂ ರಾತ್ರಿಯಾಗಾಸದಲ್ಲಿ ಚಂದ್ರನನ್ನು ಕಣ್ತುಂಬಿಕೊಳ್ಳುತ್ತಾ ನಕ್ಷತ್ರಗಳನ್ನು ಎಣಿಸುವುದೆಂದರೆ ನಂಗಿಷ್ಟ. ಚಂದ್ರನನ್ನು ನೋಡಿದಾಗಲೆಲ್ಲಾ ನನಗೆ ಈ ರೀತಿ ರಾತ್ರಿಯಾಗಾಸದಲ್ಲಿ ಮೋಹ ಬೆಳೆಯಲು ಕಾರಣವಾದ ಆ ಬಾಲ್ಯದ ದಿನಗಳು ನೆನಪಾಗುವವು. ನಾನಾಗ 4-5 ವರ್ಷದವಳಿರಬಹುದು. ದಿನಾಲೂ ರಾತ್ರಿ ಊಟವಾದ ಮೇಲೆ ಅಮ್ಮ ಕೆಲಸದಲ್ಲಿ ಮುಳುಗಿರುವಾಗ ಅಪ್ಪಯ್ಯ ನನ್ನನ್ನು ಮತ್ತು ಅಕ್ಕನನ್ನು ಹೊರಗಡೆ ಅಂಗಳಕ್ಕೆ ಕರೆದೊಯುತ್ತಿದ್ದರು. ಊಟವಾದ ಮೇಲೆ ಮಲಗುವ ಮುನ್ನ ನೂರು ಹೆಜ್ಜೆ ನಡೆಯಲೇ ಬೇಕೆಂಬ ಕಾನೂನು ಬೇರೆ!! ಅಷ್ಟರಲ್ಲಿ ಅಮ್ಮ ನಮ್ಮ ಕಾಟವಿಲ್ಲದೇ ತನ್ನ ಕೆಲಸ ಮುಗಿಸಿಕೊಳ್ಳಲಿ ಎಂಬುದು ಉದ್ದೇಶವಿರಬೇಕು. ಅಪ್ಪಯ್ಯನ ಎರಡೂ ಕೈಯೊಳಗೆ ನಮ್ಮ ಪುಟ್ಟ ಪುಟ್ಟ ಬೆರಳುಗಳು ಬೆಸೆದಿರುತ್ತಿದ್ದವು. "ಉಂಡು ನೂರಡಿ ನಡೆದು" ಎನ್ನುತ್ತಾ ಶುರುವಾಗುತ್ತಿತ್ತು ನಮ್ಮ ನಡಿ ಗೆ ಹೇಗಾದರೂ ಮಾಡಿ ಬೇಗ ಬೇಗ ನೂರು ನಡೆಯನ್ನು ಮುಗಿಸಬೇಕೆಂಬುದೇ ದಿನಾ ನನ್ನ ಆಲೋಚನೆ ಆಗಿರುತ್ತಿತ್ತು. ಒಂದೊಂದು ಹೆಜ್ಜೆಯನ್ನೂ ಲೆಕ್ಕ ಹಾಕಿ ನೂರಾದ ತಕ್ಷಣ "ಅಪ್ಪಯ್ಯ ನೂರು ಆಯ್ತು ನೂರು ಆಯ್ತು" ಎನ್ನುತ್ತಿದ್ದೆ. (ಆಗಲೇ ಲೆಕ್ಕದಲ್ಲಿ ಜಾಣ ! :-) ) "ಇಲ್ಲ ಇನ್ನೂ ಆಗಿಲ್ಲ " ಎಂಡುಬಿಡುತ್ತಿದ್ದರು. ಎಷ್ಟು ಬೇಜಾರಾಗ್ತಿತ್ತು.. ಸಾಕು ಸಾಕೂ ಎಂದು ಹಟ ಮಾಡುತ್ತಿದ್ದೆ. ಕೊನೆಗೆ ಸರಿ ಹೋಗಲಿ ಕಟ್ಟೆಯ ಮೇಲೆ ಸ್ವಲ್ಪ ಹೊತ್ತು ಕೂರೋಣವೆಂದು ಹೋದರೆ ನಾನು ಕಥೆ ಹೇಳು ಕಥೆ ಹೇಳೆಂದು ಪೀಡಿಸುತ್ತಿದ್ದೆ. ಅಪ್ಪಯ್ಯನಿಗೆ ಯಾವತ್ತೂ ಕಥೆ ಹೇಳಲು ಬರುವುದಿಲ್ಲ.. ಅದಕ್ಕೆ ಪದ್ಯ ಹೇಳ್ಕೊ ಡ್ತೀ ನಿ ಅಂತ ಶುರು ಮಾಡ್ತಿದ್ರು. ಅಪ್ಪಯ್ಯನ ಹತ್ರ ಪದ್ಯಗಳ ಬುಟ್ಟಿನೆ ಇರ್ತಿತ್ತು ... ಅವೆಲ್ಲ ಪದ್ಯಗಳಲ್ಲಿ ನಂಗೆ ತುಂಬಾ ಇಷ್ಟವಾಗ್ತಿದ್ದಿದ್ದು, ಚಂದ್ರನೊಂದಿಗೆ ಸ್ನೇಹ ಬೆಳೆಯಲು ಕಾರಣವಾಗಿದ್ದು... ಈ ಲೇಖನ ಬರೆಯಲು ಪ್ರೇರೇಪಿಸಿದ್ದು.. ಇಂದಿಗೂ ನಾನು ಇಷ್ಟಪಟ್ಟು ಗುನುಗುವುದು ಎಂದರೆ... ತಿಂಗಳ ಬೆಳಕಿನ ಇರುಳಿನಳೊಂದು ಅಮ್ಮನು ಕೆಲಸದಿ ಇರುತಿರೆ ಕಂಡು ಗೋಪಿಯೂ ಪುಟ್ಟು ಹೊರಗಡೆ ಬಂದು ಬಾವಿಯ ಇಣುಕಿದರು ಬಾವಲಿ ಚಂದ್ರನ ಬಿಂಬವ ಕಂಡು ಚಂದ್ರನು ಬಾವಿಗೆ ಬಿದ್ದನು ಎಂದು ಅಯ್ಯೋ ಪಾಪವೇ ಎನ್ನುತಲೊಂದು ಕೊಕ್ಕೆಯ ಹುಡುಕಿದರು ಹಗ್ಗದ ತುದಿಯಲಿ ಕೊಕ್ಕೆಯ ಕಟ್ಟಿ ಚಂದ್ರನ ಮೇಲಕೆ ಎತ್ತಲೂ ಎಂದು ಗೋಪಿಯೂ ಪುಟ್ಟು ಹಗ್ಗದ ಕೊಕ್ಕೆಯ ಬಾವಿಗೆ ಇಳಿಸಿದರು ಹಗ್ಗದ ಕೊಕ್ಕೆಯೂ ಕಲ್ಲಿಗೆ ಸಿಕ್ಕಿ ಪುಟ್ಟು ಚಂದ್ರನು ಸಿಕ್ಕೇ ಸಿಕ್ಕ ಎನ್ನುತಾ ತುಂಬಾ ಭ ರದಿಂದಳೆಯೇ ಹಗ್ಗವು ತುಂಡಾಯ್ತು ಎಳೆತದ ರಭಸಕೆ ಪುಟ್ಟು ಬಿದ್ದಾ, ಮೆಲ್ಲನೇ ಮನೆ ಕಡೆ ನೋಡುತಲೆದ್ದ ಗೋಪಿಗೆ ಆಗಸ ತೋರುತಲೆಂದ ಗೋಪಿ ನೋಡಲ್ಲಿ ಚಂದ್ರನ ಮೇಲಕೆ ಏರಿಸಿಬಿಟ್ಟೆ ನಮ್ಮಯ ದೇವರ ಬದುಕಿಸಿಬಿಟ್ಟೆ ಅಮ್ಮಗೆ ಗೊತ್ತಾದರೆ ನಾ ಕೆಟ್ಟೇ ಎಂದೋಡಿ ದ ಪುಟ್ಟು..... ಎಷ್ಟು ಚೆನ್ನಾಗಿರೋ ಪದ್ಯ... ದಿನಾಲೂ ಇದೆ ಪದ್ಯ ಹೇಳಿಕೊಡೆಂದು ಹಟ ಹಿಡಿಯುತ್ತಿದ್ದೆವು. ದಿನಾಲೂ ಮುಂದೆ ಏನಾಗುವುದೋ ಕಥೆಯಲ್ಲಿ ಎನ್ನುವ ಕುತೂಹಲ ಇದ್ದೇ ಇರುತ್ತಿತ್ತು... ಎಂಥ ಮುಗ್ಧತೆ!!!! ಆದರೆ ಒಂದೇ ಒಂದು ಬೇಜಾರಿತ್ತು ನಂಗೆ ಆ ಪದ್ಯ ಕೇಳುವಾಗ.. ಏನೆಂದರೆ ಮನೆಯಲ್ಲಿ ಅಕ್ಕನನ್ನು ಪುಟ್ಟು ಎಂದೆ ಕರೆಯುವುದು. ಪದ್ಯದಲ್ಲಿ ಅವಳು ಇರುವಾಗ ನಾನು ಏಕಿಲ್ಲ ಎಂದು ದಿನಾ ರಾಗ ಎಳೆಯುತ್ತಿದ್ದೆ. ಒಂದು ದಿನ ಸಾಕಾಗಿ ಅಪ್ಪಯ್ಯ ಪದ್ಯವನ್ನು ನನ್ನಿಷ್ಟದಂತೆ ಬದಲಿಸಿ, "ಶ್ಯಾಮುವು ಪುಟ್ಟುವು ಹೊರಗಡೆ ಬಂದು ಬಾವಿಯ ಇಣುಕಿದರು" ಎಂದು ತಿರುಚಿ ನನ್ನನ್ನು ಸಮಾಧಾನಗೊಳಿಸಿದರು. ಆಮೇಲೆಲ್ಲ ಆ ಪದ್ಯ ಕೇಳುವಾಗ ನಾವೇ ಅದರಲ್ಲಿರುವ ಮಕ್ಕಳೇನೋ ಎಂದು ಅನಿಸುತ್ತಿತ್ತು. ನಾವೇ ಬಾವಿ ಇಣುಕಿದಂತೆ, ಅಮ್ಮ ಬಂದರೆ ಏನಾಗುವುದೆಂಬ ಭಯ ಎಲ್ಲ ಕಣ್ಮುಂದೆ ಚಿತ್ರಿಸಿದಂತಿರುತಿತ್ತು ....ಎಷ್ಟೋ ಸಾರಿ ಹಾಗೆಯೇ ನಿದ್ದೆ ಹೋಗಿರುತ್ತಿದ್ದೆವು ನಮಗೆ ಅರಿವಿಲ್ಲದೆಯೇ.... ಎಷ್ಟು ಜೀವಕಳೆ ತುಂಬಿರುತ್ತಿತ್ತು ಆ ಸಂಜೆಗಳಲ್ಲಿ... ನೆನಪಿಸಿಕೊಂಡಾಗಲೆಲ್ಲ ಮತ್ತೆ ಪುಟ್ಟ ಹುಡುಗಿಯಾಗುತ್ತೇನೆ... ಮತ್ತೆ ಮರಳಿ ಬಾರದ ಆ ಕ್ಷಣಗಳಿಗಾಗಿ ಕಣ್ತುಂಬಿಕೊಳ್ಳುತ್ತದೆ... ಹಾಗೆ ಯೋಚಿಸುತ್ತಾ ನೆನಪಿನ ಸುಳಿಯಲ್ಲೆಲ್ಲೋ ಕಳೆದು ಹೋಗುತ್ತೇನೆ. ಇಂದಿಗೂ ಕತ್ತಲಾದೊಡನೆ ಒಬ್ಬಳೇ ಹೊರಗಡೆ ಆಕಾಶವನ್ನೇ ದಿಟ್ಟಿಸುತ್ತಾ ಗಂಟೆಗಟ್ಟಲೇ ನಿಂತು ಬಿಟ್ಟಿರುತ್ತೇನೆ.. ಕಿವಿಯಲ್ಲೆಲ್ಲ ಪುಟ್ಟ ಶ್ಯಾಮುವಿನ ಧ್ವನಿ ಗುಂಜಿಸುತ್ತಿರುತ್ತದೆ "ಚಂದ್ರನು ಬಾವಿಗೆ ಬಿದ್ದನು ಎಂದು...."
ಎಲ್ಲೆಲ್ಲೂ ಮುಸುಕಿದಾ ಇಬ್ಬನಿಯಲ್ಲಿ ಮಿಂದು ತಂಪಾದ ಇಳೆಯ ಸೊಬಗಿನ ನೋಟದಲ್ಲಿ ಮೈಮರೆತಿರುವಾಗ ಛ ಕ್ಕೆಂದು ಕಣ್ಮನ ಸೆಳೆದವಲ್ಲ ಆ ಬೇಲಿ ಮೇಲಿನಾ ನೀಲಿ ಹೂಗಳು ಹ ಠ ಹೂಡಿದವಲ್ಲ ಕಾ ಲ್ಗಳು ಮುಂದೆ ಹೋಗಲಾರೆವೆಂದು ನಟ್ಟ ನೋಟವ ಅತ್ತಿತ್ತ ಹರಿಸಲಾರೆವೆಂದವಲ್ಲ ಕಂಗಳು ಅದೇನು ಸೆಳೆತವೋ ಆ ಬೇಲಿ ಮೇಲಿನ ನೀಲಿ ಹೂಗಳದು ಕುಂಡ ದ ಚೆಂಗುಲಾಬಿ ಬಳ್ಳಿಗಂಟಿದಾ ಮೊಲ್ಲೆ ಮಲ್ಲಿಗೆ ಹಿತ್ತಲ ಗಿಡದ ಸೇವಂತಿಗೆ ಏಕೋ ಮುದ ನೀಡಲಿಲ್ಲ ಇಂದು ಮತ್ತೆ ಮತ್ತೆ ಹುಡುಕಿದ್ದು ಆ ಬೇಲಿ ಮೇಲಿನ ನೀಲಿ ಹೂಗಳನ್ನ ದಿನವೆಲ್ಲಾ ಮನದಲ್ಲಿ ನೀಲಿ ಹೂಗಳದ್ದೇ ಧ್ಯಾನ ನಿಂತಲ್ಲಿ ನಿಲ್ಲುತ್ತಿಲ್ಲ ಮನಸ್ಸು ಮತ್ತೆ ಮತ್ತೆ ಓಡುತ್ತಿದೆ ಅಲ್ಲಿ ಆ ಬೇಲಿ ಮೇಲಿನಾ ನೀಲಿ ಹೂಗಳೆಡೆಗೆ ಸಂಜೆಯಾಯ್ತಲ್ಲ ಇನ್ನೇನು ಬಾಡಿ ಹೋಗಿರಬಹುದು ಆ ಬೇಲಿ ಮೇಲಿನಾ ನೀಲಿ ಹೂಗಳು ಎಂದಾಕ್ಷಣ ಮನವೂ ಕೂಡ ಆ ಹೂಗಳಂತೇ ಮುದುಡಿ ಹೋಯ್ತಲ್ಲ ಕಣ್ಣಿಂದ ನೀರ ಹನಿ ಜಾರಿ ಜಾರಿ ನಿದ್ದೆಯಾಳಕ್ಕೆ ಜಾರಿದಾಗ ಒಂದು ಸುಂದರ ಕನಸಾಯ್ತು ಮಧ್ಯದಲ್ಲಿ ನಿಂತಿರಲು ನಾನು ಸುತ್ತಲೂ ನೂರು ನೂರಾರು ನೀಲಿ ಹೂಗಳು ಅವೇ ಆ ಬೇಲಿ ಮೇಲಿನಾ ನೀಲಿ ಹೂಗಳು.......
ನನ್ನಿಂದ ದೂರ ಸಾಗುವಾಗ ಅಂದು ನೀನೊಮ್ಮೆ ಹಿಂತಿರುಗಿ ನೋಡಬೇಕಿತ್ತು ನಾನಲ್ಲೇ ನಿಂತಿದ್ದೆ...... ಇಂದು ತಿರುಗಿ ಬಾರದಷ್ಟು ದೂರ ಸಾಗಿದ್ದೇವೆ ಇಬ್ಬರೂ... ಆಗಾಗ ನೆನಪುಗಳು ಕಾಡುವುದಂತೂ ಸುಳ್ಳಲ್ಲ!! ಈಗಲೂ ನಿನ್ನ ಆ ನೂರಾರು ಪ್ರಶ್ನೆಗಳಿಗೆ ನನ್ನದು ಒಂದೇ ಒಂದು ಮೌನದ ಉತ್ತರ.. ಕಣ್ಣಲ್ಲೀಗ ನಿನಗಾಗಿ ಒಂದು ಹನಿ ನೀರಿಲ್ಲ ಬರೀ ನಿಟ್ಟುಸಿರು ನೆನಪುಗಳು ಕಾಡಿದಾಗ ಆದರೂ ಕೂಗಿ ಕೂಗಿ ಹೇಳಬೇಕೆನಿಸುವುದು ಒಂದೇ ಒಂದು ಮಾತು ಅಂದು ನೀನೊಮ್ಮೆ ಹಿಂತಿರುಗಿ ನೋಡಬೇಕಿತ್ತು ನಾನಲ್ಲೇ ನಿಂತಿದ್ದೆ.......
"ನೆನಪಿನಂಗಳದಿಂದ ಒಂದಿಷ್ಟುವಿನ" ಮೂಲಕ ನನ್ನೊಳಗಿನ ಮಾತುಕತೆಗಳನ್ನು ಇಲ್ಲಿ ಬಿಚ್ಚಿಡುವ ಒಂದು ಸಣ್ಣ ಪ್ರಯತ್ನ.... ಕೆಲವು ಮಧುರ ನೆನಪುಗಳು ,ಕೆಲವು ಕಹಿ ನೆನಪುಗಳು, ನನಸು ಆದ ಕನಸುಗಳು, ಕಳೆದುಹೋದ ಅದೆಷ್ಟೋ ಕನಸುಗಳು... ನಾನು ಪಡೆದಿದ್ದು, ಕಳೆದುಕೊಂಡಿದ್ದು,ನಾನು ಕಲಿತಿದ್ದು...ನಂಗೆ ಅನಿಸಿದ್ದು.... ಇವೆಲ್ಲವನ್ನು ಕಟ್ಟಿಡುವ ಬುಟ್ಟಿ ಈ "ನೆನಪಿನಂಗಳದಿಂದ ಒಂದಿಷ್ಟು....."
ನಂಗಿಷ್ಟವಾದ ನಾಲ್ಕಾರು ಸಾಲುಗಳು............
If you don't go after what you want,
You will never have it.
If you dont ask,
The answer is alwas no.
If you dont step forward,
You are always in the same place.
If you dont have a dream,
You will never succeed.
If you dont stretch,
You will never have it"