Thursday, August 23, 2007

** ಸ್ಮೈಲ್ ಪ್ಲೀಸ್ **

ಬೆಳಿಗ್ಗೆ ಎಚ್ಚರವಾದಾಗ 8 ಗಂಟೆ. ಅಯ್ಯೋ ಇಷ್ಟೊತ್ತು ನಿದ್ದೆ ಮಾಡಿದೆನಾ ?ಎಂದುಕೊಂಡು ಆಫೀಸಿಗೆ ಲೇಟ್ ಆಗುತ್ತದೆಂದು ಎದ್ದು ಬೇಗ ಬೇಗ ರೆಡಿ ಆಗಲು ಶುರು ಮಾಡಿದೆ. ರೆಡಿ ಆಗಿ ರೂಮಿನಿಂದ ಹೊರಗೆ ಬಂದೆ. ಪಕ್ಕದ ರೂಮಿನಲ್ಲಿದ್ದ ನನ್ನ ಗೆಳತಿ ನನ್ನ ಮುಖ ನೋಡಿದವಳೇ "ಯಾಕೆ ಏನಾಯ್ತು? " ಎಂದಳು. ನಾನು ಅರ್ಥವಾಗದೆ "ಯಾರಿಗೆ?" ಎಂದು ಪ್ರಶ್ನಾರ್ಥಕವಾಗಿ ಅವಳನ್ನು ನೋಡಿದೆ. ಅದಕ್ಕವಳು " ನಿಂಗೆ ಕಣೆ. ನೀನು ಹೇಳದಿದ್ದರೆ ನಂಗೆ ಗೊತ್ತಾಗೋದಿಲ್ವ?" ಅಂದಳು. ನಾನು "ಇಲ್ಲ ಏನು ಆಗಿಲ್ಲ. ನಾನು ಚೆನ್ನಾಗೆ ಇದ್ದೀನಲ್ಲ. ಯಾಕೆ ಕೇಳ್ತಿದೀಯ ಹೀಗೆ?" ಅಂದೆ. "ನಿನ್ನ ಮುಖ ನೋಡಿದ್ರೆ ಗೊತ್ತಾಗುತ್ತೆ ರಾತ್ರಿ ಸರಿ ನಿದ್ದೆ ಮಾಡಿಲ್ಲ ಅಂತ. ಯಾಕೆ ಅಷ್ಟು ಬೇಜಾರು ಮಾಡ್ಕೊಂಡಿದೀಯ? ಯಾವಾಗಲೂ ನಿನ್ನ ಮುಖದಲ್ಲಿರುವ ಆ ನಗು ಎಲ್ಲಿ ಇವತ್ತು? ಸ್ಮೈಲ್ ಪ್ಲೀಸ್" ಅಂದಳು.

ನಂಗೆ ಏನು ಹೇಳುವುದೋ ಗೊತ್ತಾಗಲಿಲ್ಲ. ಕಷ್ಟಪಟ್ಟು ಒಂದು ನಗೆಯನ್ನು ನಕ್ಕು ಅಲ್ಲಿಂದ ಹೊರಟೆ. ಹೌದು ಅವಳು ಹಾಗೇ. ಈ 6 ವರ್ಷ ಗಳ ನನ್ನ ಅವಳ ಒಡನಾಟದಲ್ಲಿ ನಾನು ತುಂಬಾ ಬೇಜಾರಾದಾಗಲೆಲ್ಲ ನನ್ನ ಮುಖ ನೋಡಿದ ಕೂಡಲೇ ಕಂಡುಹಿಡಿಯೋದು ಅವಳೊಬ್ಬಳೆ. ಯಾವಾಗಲು ನಗುತ್ತಿರುವ ನಿನ್ನ ಮುಖದಲ್ಲಿ ಒಂದು ನಿಮಿಷ ನಗು ಮಾಯವಾಗುವುದೂ ನಂಗೆ ಇಷ್ಟವಾಗೋಲ್ಲ ಎನ್ನುತ್ತಾಳವಳು.

ಫೋನ ರಿಂಗಾಗುತ್ತಿತ್ತು. ಅತ್ತಕಡೆಯಿಂದ ಅಕ್ಕ ಹಲೋ ಅಂದಳು. ನಾನು ಹಲೋ ಅಂದೇ. "ಯಾಕೇ ಧ್ವನಿ ಒಂಥರಾ ಇದೆ ಏನಾಯ್ತು?" ಅಂದಳು. ಅದಕ್ಕೆ ನಾನು "ಏನೂ ಇಲ್ಲಾ" ಅಂದೆ. ಮತ್ತೆ ಅವಳು "ಸುಳ್ಳು ಹೇಳ್ತೀಯಾ? ನಿನ್ನ ಧ್ವನಿಯ ಜೊತೆ ಯಾವಾಗಲೂ ಇರುವ ಆ ನಗು ಇವತ್ತಿಲ್ಲ. ನಿನ್ನ ಜೊತೆ ಫೋನಿನಲ್ಲಿ ಮಾತಾಡುವಾಗಲೂ ನಗುತ್ತಿರುವ ಆ ನಿನ್ನ ಮುಖವೇ ಕಣ್ಮುಂದೆ ಬರುತ್ತದೆ. ಯಾಕೆ ಹಾಗಿದ್ದೀಯಾ ಇವತ್ತು. ನಗು ಸ್ವಲ್ಪ" ಅಂದಳು.
ಅದೂ ಇದೂ ಮಾತಾಡಿ ಫೋನ ಇಟ್ಟೆ.

ಯೋಚಿಸುತ್ತಾ ಹಾಗೆ ಆಫೀಸಿಗೆ ಬಂದೆ. ಕಂಪ್ಯೂಟರ್ ಆನ್ ಮಾಡುತ್ತಿರುವಾಗಲೇ ಬಂದ ಸಹೋದ್ಯೋಗಿಗೆ ಗುಡ್ ಮಾರ್ನಿಂಗ್ ಹೆಳುತ್ತ ಕುಳಿತುಕೊಳ್ಳುತ್ತಿರುವಾಗ ಅವಳೇ ಹತ್ತಿರ ಬಂದು "ಆರ್ ಯೂ ಓಕೇ? ಯಾಕೆ ಹುಷಾರಿಲ್ವ. " ಅಂತೆಲ್ಲ ಬಡ ಬಡನೆ ಪ್ರಶ್ನೆ ಉದುರಿಸಿದಳು. "ಹ್ಮ್ ಹೌದು. ಸ್ವಲ್ಪ ಹುಷಾರಿಲ್ಲ " ಅಂತಷ್ಟೇ ಹೇಳಿ ಸುಮ್ಮನಾಗಿಬಿಟ್ಟೆ.

ಸ್ವಲ್ಪ ಹೊತ್ತಿಗೆ ನನ್ನ ಬಾಸ್ ಏನೋ ಮಾತಾಡುತ್ತಾ ನನ್ನ ಮುಖ ನೋಡಿದವರೇ "ಅರೆ ಯೂ ಆಲ್ ರೈಟ್? ಯಾಕೆ ಸಪ್ಪಗಿದ್ದೀಯ? "
"ಐ ಆಮ್ ಫೈನ್ ಮೇಡಮ್. ಯಾಕೆ ಹಾಗನ್ಸ್ತಿದೆ ನಿಮಗೆ. " ಕಷ್ಟಪಟ್ಟು ನಗಲು ಪ್ರಯತ್ನಿಸಿದೆ. "ಹಿ ಹಿ ನೀನು ಹಾಗೆ ಹೆಳಿದ್ರೆ ನಂಗೊತ್ತಾಗಲ್ವಾ. ಏನು ಇವತ್ತಾ ಮೊದ್ಲು ನಾನು ನಿನ್ನ ನೋಡ್ತೀರೋದು? ಚಿಯರ್ ಅಪ್. ಸ್ಮೈಲ್ ಪ್ಲೀಸ್" ಅಂದರು.

ಹಿಂದಿನ ದಿನ ಯಾವುದೋ ವಿಷಯಕ್ಕೆ ಬೇಜಾರಾಗಿದ್ದು ನಿಜವಾಗಿತ್ತು. ಹೀಗೆ ಯೇ ಇನ್ನೊಂದಿಷ್ಟು ಜನ ಕೇಳಿದಾಗ ಆಶ್ಚರ್ಯ ಆಯ್ತು. ಮುಖದ ಮೇಲಿನ ಒಂದು ನಗು ಎಷ್ಟು ಮುಖ್ಯ ಅಂತ ಅನ್ನಿಸ್ತು. ಮೊನ್ನೆ ತಮ್ಮ ಕಳಿಸಿದ್ದ ಒಂದು ಏಸ್ಸೆಮ್ಮೆಸ್ ತೆಗೆದು ಓದಿದೆ .

"Never stop your SMILE even if u are sad becoz U knever know who is falling in Love with ur Smile."

ಹಾಗೇ ಯೋಚಿಸುತ್ತಾ ನಾನು ಕಾಲೇಜಿನಲ್ಲಿದ್ದಾಗ ಹೊಸದಾಗಿ ನಾವು ಹಾಕಿಸಿದ್ದ ನೋಟೀಸ್ ಬೋರ್ಡಿನಲ್ಲಿ ಹಾಕಲು ನಾನು ಬರೆದಿದ್ದ ಒಂದು ಕವನ ನೆನಪಾಯಿತು.


ಒಂದು ಮುಗುಳ್ನಗೆ
ಅಂಥ ಬೆಲೆಯುಳ್ಳದ್ದಲ್ಲ ಬಿಡಿ
ಆದರೂ ಅದು ಮಾಡುವ ಮೋಡಿ
ಅಂತಿಂಥದ್ದಲ್ಲ್ಲ ನೋಡಿ

ಒಂದು ಕ್ಷಣ ಮಾತ್ರ ಕಾಣುವ ಆ ನಗೆ
ನೆನಪಿನಲ್ಲುಳಿಯುವುದು ಮಾತ್ರ ಕೊನೆವರೆಗೆ
ಎಷ್ಟು ಸಿರಿವಂತನಿರಲಿ ಇದನ್ನು ಹೊಂದಲೇಬೇಕೆಂದಿಲ್ಲ
ಮತ್ತೆ ಇದನ್ನು ಹೊಂದದಷ್ಟು ಬಡವ ಯಾರೂ ಇಲ್ಲ

ಈ ಒಂದು ನಗೆ ಸಾಕು ಚೆಲ್ಲಲು
ಹರುಷದ ಹೊನಲು ಎಲ್ಲೆಲ್ಲೂ
ಸ್ನೇಹವನು ಉದಯಿಸುವುದು
ಈ ನಗೆ ಹೃದಯ ಹೃದಯದಲ್ಲೂ

ದಣಿದವನಿಗೊನ್ದು ಉತ್ಸಾಹದ ಚಿಲುಮೆ
ನೊಂದವನಿಗೊಂದು ಆಶಾಕಿರಣ
ಎಲ್ಲ ಕಷ್ಟಗಳಿಗೂ ನೈಸರ್ಗಿಕ ಸಲಹೆ
ಈ ಒಂದು ಮುಗುಳ್ನಗೆ

ಬೇಡಿದರೆ ಸಿಗುವಂಥದ್ದಲ್ಲ
ಕೊಂಡುಕೊಳ್ಳುವಂಥದ್ದಲ್ಲ
ಕದ್ದು ಪಡೆಯುವಂಥದ್ದಲ್ಲ
ಅಂತಿಂಥದ್ದಲ್ಲ್ಲ ಮುಗುಳ್ನಗೆ

ಇಷ್ಟು ಮಾತ್ರ ಹೇಳಬಹುದು
ಮುಗುಳ್ನಗೆಯ ಮೋಡಿ
ಕಾಣಲೇಬೇಕೆ ನೀವೂ ?
"ಒಮ್ಮೆ ಮುಗುಳ್ನಗೆ ಬೀರಿ ನೋಡಿ"


ಸಂಜೆಯವರೆಗೂ ನನ್ನ ಮುಖದಲ್ಲಿ ಕಾಣೆಯಾಗಿದ್ದ ನಗುವಿನ ಬಗ್ಗೆಯೇ ನನ್ನ ಮುಖ ನೋಡಿದವರೆಲ್ಲ ಕೇಳುತ್ತಿದ್ದಾಗ ನನ್ನ ನಗುವಿಗೆ ಇಷ್ಟೊಂದು ಮಹತ್ವ ಇದೆಯಾ? ಅಂದುಕೊಳ್ಳುತ್ತಾ ಮನೆಗೆ ಹೊರಟೆ.

ಆಫೀಸ್ ನಿಂದ ಹೊರಗೆ ಕಾಲಿಡುತ್ತಿದ್ದ ಹಾಗೆಯೇ ಪಟ ಪಟನೆ ಮಳೆ ಹನಿಯಲು ಶುರುವಾಯ್ತು. ಕತ್ತೆತ್ತಿ ಮೇಲೆ ನೋಡಿದೆ. ಹನಿಗಳೆಲ್ಲ ನನ್ನ ಮುಖದ ಮೇಲೆ ಪಟ ಪಟನೆ ಉದುರಿದವು. ಆ ಮಳೆ ಹನಿಗಳೂ "ಸ್ಮೈಲ್ ಪ್ಲೀಸ್" ಅನ್ನುತ್ತಿವೆಯೇನೋ ಅನ್ನಿಸಿತು. ಮನಸ್ಸಿನಾಳ ದಿಂದ ನಗೆ ಯೊಂದು ತುಟಿಗಳ ಮೇಲೆ ತೇಲಿ ಬಂತು. ಮಳೆಯಲ್ಲಿ ನೆನೆಯುತ್ತಾ ಮನೆಯತ್ತ ಓಡಿದೆ.

Saturday, August 18, 2007

ಭೂಮಿ-ಮುಗಿಲು


ಉರಿವ ಬಿಸಿಲಲಿ ಕಾದು ಕಾದು
ಹಸಿರೆಲ್ಲ ಒಣಗಿ ವಿರಹಿಣಿಯಂತೆ
ಕಾಣುತ್ತಿದ್ದ ಇಳೆಯು
ಒಮ್ಮಿಂದೊಮ್ಮೆ ಆಗಸದಲ್ಲಿ
ಮುಗಿಲು ಕಟ್ಟಲು, ತಂಗಾಳಿ ಬೀಸಲು
ಯಾರನ್ನೋ ಬರಮಾಡಿಕೊಳ್ಳಲು
ಸಿದ್ಧವಾದಂತೆ ಕಂಡಳು
ಮನದಿ ಮೂಡಿತು ಶಂಕೆಯು
ಮುಗಿಲು ಭೂಮಿಯ ಪ್ರೇಮಿಯೇ?

ತಂಗಾಳಿ ಬೀಸಿ ಬೀಸಿದಾಗಲೆಲ್ಲ
ಮೊದಲ ಮಳೆ ಹನಿಗಳ ಸಿಂಚನ
ಅಹುದೆ ಭೂಮಿಗೆ ಮುಗಿಲಿನ ಚುಂಬನ?
ಮತ್ತೆ ಮೂಡಿತು ಶಂಕೆಯು
ಮುಗಿಲು ಭೂಮಿಯ ಪ್ರೇಮಿಯೇ?

ಭೂಮಿ ಹೊದ್ದಳು ಹಸಿರಿನುಡುಗೆಯ
ಮುಡಿಯ ತುಂಬೆಲ್ಲ ಹೂವೇ ಹೂವು
ಮುಗಿಲ ಕಾಣಲು ತವಕಗೊಂಡಳೇ?
ನವ ವಧುವಿನಲಂಕಾರದಲ್ಲಿ ನಾಚಿ ನುಲಿದಳೆ?
ತಿಳಿಗಾಳಿ ಬೀಸಿ ಹಸಿರು ಹುಲ್ಲುಗಳು
ತೂಗಿ ಸೀರೆ ನೆರಿಗೆಯಂತೆ ಚಿಮ್ಮಿದಾಗ
ಮುಗಿಲು ಮೆಚ್ಚಿ ಮನಸೋತನೆ?
ಮತ್ತೆ ಮೂಡಿತು ಶಂಕೆಯು
ಮುಗಿಲು ಭೂಮಿಯ ಪ್ರೇಮಿಯೇ?

ಹರಿವ ನೀರಿನ ಜುಳು ಜುಳು
ಅಹುದೆ ಅವಳ ನಗುವಿನ ಕಿಲ ಕಿಲ?
ಅವಳ ನಗುವ ಕದ್ದು ನೋಡಲು
ಮುಗಿಲು ಬಂದನೇ ಮೆಲ್ಲಗೆ?
ಭುವಿಯ ಕೆನ್ನೆಯೆಲ್ಲ ಕೆಂಪು ಕೆಂಪು
ಕಳ್ಳನವನು, ಅವಳ ಕೆನ್ನೆ
ಚಿವುಟಿದನೆ ಸುಮ್ಮಗೆ?
ಮತ್ತೆ ಮೂಡಿತು ಶಂಕೆಯು
ಮುಗಿಲು ಭೂಮಿಯ ಪ್ರೇಮಿಯೇ?

ಕಂಗೊಳಿಸುತಿರುವ ತರು ಲತೆಗಳು
ಹೌದೇ ಅವಳ ಮದುವೆಯ ತೋರಣ?
ಕಪ್ಪೆಯೋಲಗ, ಇರುವೆ ದಿಬ್ಬಣ
ಎಲ್ಲೆಲ್ಲೂ ಕಳೆಗಟ್ಟುತಿದೆ ಸಂಭ್ರಮ
ಗುಡುಗು ಸಿಡಿಲುಗಳ ಮಂತ್ರ ಘೋಷದ ನಡುವೆ
ಕರಗಿ ಸುರಿಯಿತು ಮುಗಿಲದು
ವರ್ಷಧಾರೆಯ ತಂಪು ಇಳೆಯ ತಬ್ಬಲು
ಮನವು ಉಸುರಿತು ಸುಮ್ಮನೇ
ಇಂದು ಭೂಮಿ ಮುಗಿಲಿನ ಮಿಲನವೆ?

Wednesday, August 8, 2007

ನೂರು ಮಾತಿನ ಮೂರು ಹನಿಗಳು


ನನ್ನೊಳಗೆ ಆಡಲು
ಮಾತು ನೂರಿತ್ತು
ಏನು ಮಾತನಾಡುವುದೆಂದು
ತೋಚದೆ ನಾ ಮೌನಿಯಾಗಿದ್ದೆ.
ಬಹುಷಃ ನಿನ್ನಲ್ಲಿ
ಮಾತುಗಳೆಲ್ಲವೂ ಮುಗಿದಿತ್ತು
ಅದಕ್ಕೆ ನೀ
ಮೌನಿಯಾಗಿದ್ದೆ.

*************

ನೂರು ಕನಸುಗಳು ಚೂರಾಗಿ
ಮುನ್ನೂರು ಕನಸುಗಳಾಗಿವೆ
ಚೂರುಗಳನ್ನೇ ಆಯ್ದು ಆಯ್ದು
ಜೋಡಿಸುತ್ತಾ ಬಣ್ಣ
ಹಚ್ಚುತ್ತಿರುವೆ.
ಕೈ ಜೋಡಿಸಲು ನನ್ನೊಂದಿಗೆ
ನೀನಿಲ್ಲ ಅಷ್ಟೇ.

*************

ಕದ್ದ ಯಾವ ವಸ್ತುವೂ ನಮಗೆ
ದಕ್ಕಲಾರದೆಂದು ಯಾರೋ ಹೇಳಿದ್ದು
ಸರಿಯೇ ಇರಬೇಕು..
ಒಮ್ಮೆ ನಾನು ನಿನಗೆ
ಗೊತ್ತಾಗದಂತೆ ನಿನ್ನ
ಮನಸ್ಸನ್ನು ಕದ್ದುಬಿಟ್ಟಿದ್ದೆ!!.

Friday, August 3, 2007

ನೆನಪಾಗಿ ಕಾಡುವ ಮುಗ್ಧ ಸ್ನೇಹ


"ಅಮ್ಮ ನಾನು ಪಾಪುನ ಒಮ್ಮೆ ಮುಟ್ಟಲಾ ?"ತೊದಲು ನುಡಿಯಲ್ಲಿ ಕೇಳಿದಳು ಪುಟ್ಟು ತನ್ನ ಅಮ್ಮನನ್ನು. ಪುಟ್ಟುವಿಗೆ ಇನ್ನೂ ಒಂದೂ ವರೆ ವರ್ಷ. ಅದಾಗಲೇ ಅಮ್ಮನ ಬಳಿ ಇನ್ನೊಂದು ಪಾಪು ಬಂದಿದೆ. ಅಷ್ಟು ಚಿಕ್ಕ ಮಗುವನ್ನು ಅಷ್ಟು ಹತ್ತಿರದಿಂದ ಪುಟ್ಟು ನೋಡಿದ್ದೆ ಅವತ್ತು ಮೊದಲ ಬಾರಿಗೆ. "ನಿಧಾನ ಪುಟ್ಟು. ಇಲ್ಲಾಂದ್ರೆ ಪಾಪುಗೆ ಎಚ್ಚ್ರಾಗ್ತು" ಪುಟ್ಟು ಅಮ್ಮನ ಪಕ್ಕ ಮಲಗಿದ್ದ ಪಾಪುವನ್ನೇ ನೋಡುತ್ತಿದ್ದಳು. ಕೆಂಪಾಗಿದ್ದ ಆ ಪುಟ್ಟ ಬಾಯಿ, ಗುಲಾಬಿ ಬಣ್ಣದ ಆ ಪುಟ್ಟ ಪುಟ್ಟ ಪಾದಗಳು, ಮಡಿಚಿಕೊಂಡಂತಿದ್ದ ಆ ಪುಟ್ಟ ಪುಟ್ಟ ಕೈಗಳು ಎಲ್ಲವನ್ನೂ ತನ್ನ ಬೆರಗು ಕಂಗಳಿಂದ ನೋಡುತ್ತಾ ಮೆಲ್ಲನೆ ಪಾಪುವಿನ ಗುಲಾಬಿ ಪಾದಗಳ ಮೇಲೆ ಕೈಯಾಡಿಸಿದಳು. ಪಾಪು ಕೊಸರಾಡಿದಾಗ ತಾನೇನೋ ಮಾಡಿಬಿಟ್ಟೆನೆಂಬ ಭಯದಿಂದ ಅಮ್ಮನತ್ತನೋಡಿದಳು. ಅಮ್ಮ ಸುಮ್ಮನೆ ನಕ್ಕು ಪುಟ್ಟುವಿನ ಹಣೆಗೊಂದು ಹೂಮುತ್ತನ್ನಿಟ್ಟು ಹೊರಗೆ ಆಡಿಕೊ ಹೋಗು ಅಂತ ಕಳಿಸಿದಳು.

3 ದಿನ ಕಳೆದ ಮೇಲೆ ಅಮ್ಮನೊಂದಿಗೆಪುಟ್ಟು ತನ್ನ ಅಜ್ಜನಊರಿಗೆ ಬಂದಿಳಿದಳು. ಮಳೆಗಾಲದ ಸಮಯವಾದ್ದರಿಂದ ಅಂಗಳದ ತುಂಬೆಲ್ಲಾ ನೀರೆ ನೀರು. ಪುಟ್ಟುವಿಗೆ ಹಿಗ್ಗೋ ಹಿಗ್ಗು ನೀರಲ್ಲಿ ಆಡಬಹುದೆನ್ದು. ಮುದ್ದುಗರೆವ ಅಜ್ಜ ಅಜ್ಜಿಯರ ಸಾಂಗತ್ಯದಲ್ಲಿ ಅಂದಿನ ದಿನ ಕಳೆದಿದ್ದೆ ಗೊತ್ತಾಗಲಿಲ್ಲ.

ಮರುದಿನ ಬೆಳಿಗ್ಗೆಯಿಂದ ಪುಟ್ಟುವಿನ ದಿನಚರಿಯೇ ಬದಲಾಗುವುದಿತ್ತು. ಸ್ನಾನ ಊಟ ಪ್ರತಿಯೊಂದನ್ನೂ ಮಾಡಿಸುತ್ತಿದ್ದ ಅಮ್ಮ ಈಗ ಮಲಗೆ ಇರುವಳು. ಪಕ್ಕದಲ್ಲಿ ಪಾಪು ಬೇರೆ. ಪುಟ್ಟು ಪ್ರತಿಯೊಂದಕ್ಕೋ ಅಜ್ಜಿಯನ್ನೇ ಕೇಳಬೇಕು. ಬೆಳಿಗ್ಗೆ ಎದ್ದಾಕ್ಷಣ ಮೊದಲು ಪಾಪುವನ್ನು ನೋಡಬೇಕು. "ಪಾಪು ಯಾವಾಗ ದೊಡ್ಡಕ್ಕಾಗದು? ನನ್ನ ಜೊತೆ ಆಡೋದಕ್ಕೆ ಯಾವಾಗ ಬರೋದು ಪಾಪು?" ಅನ್ನುವ ಹತ್ತಾರು ಪ್ರಶ್ನೆಗಳ ಸುರಿಮಳೆ. ಮತ್ತೊಮ್ಮೆ ಪಾಪುವಿನ ಗಲ್ಲ ಸವರಿದರೇ ಸಮಾಧಾನ ಅವಳಿಗೆ.

ಅಲ್ಲೇ ಅಂಗಳದಲ್ಲಿ ಆಡಿಕೊಳ್ಳುತ್ತಿದ್ದ ಪುಟ್ಟು ಅಳುತ್ತಿದ್ದ ಪಾಪುವಿನ ಧ್ವನಿ ಕೇಳಿ ಬಚ್ಚಲಿನತ್ತ ಓಡಿದಳು.ಅಜ್ಜಿಯ ನೀಡಿಕೊಂಡಿದ್ದ ಕಾಲುಗಳ ಮೇಲೆ ಮಲಗಿದ್ದ ಪಾಪು ಮೈಗೆಲ್ಲ ಎಣ್ಣೆ ಹಚ್ಚಿಕೊಂಡು ಪಳ ಪಳ ಹೊಳೆಯುತ್ತಿತ್ತು. "ಯಾಕೆ ಅಜ್ಜಿ ಪಾಪುಗೆ ಎಣ್ಣೆ ಹಚ್ತಾ ಇದ್ದೇ?"ಪಾಪುಗೆ ಸ್ನಾನ ಮಾಡಿಸೋವಾಗ ಎಣ್ಣೆ ಹಚ್ಚವು ಮಗಾ, ಮೈ ಕೈಯೆಲ್ಲ ಗಟ್ಟಿ ಆಗ್ಲೀ ಅಂತ". ಪುಟ್ಟುವಿಗೆ ಇದೆಲ್ಲಹೊಸತು "ಪಾಪು ಸ್ನಾನ ಮಾಡೋದನ್ನ ನಾನೂ ನೋಡ್ತಿ" ಅಂತ ಅಲ್ಲೇ ನಿಂತಳು.

ಹಬೆಯಾಡುತ್ತಿದ್ದ ಬಿಸಿ ನೀರಿನಿಂದ ಮಗುವಿಗೆ ಸ್ನಾನ ಮಾಡಿಸುವುದನ್ನು ತನ್ನ ಬೆರಗುಕಂಗಳಿಂದ ನೋಡುತ್ತಾ, ಅದೇ ಹೆಳೆಯಲ್ಲಿ ತಾನೂ ನೀರಾಡಿಮೈ ಒದ್ದೆ ಮಾಡಿಕೊಂಡು ಬಚ್ಚಲಿನಿಂದ ಹೊರ ಬಾರೆಂದರೆ ಮೊಂಡಾಟ ಮಾಡಿ ಇನ್ನಷ್ಟು ಹೊತ್ತು ನೀರಲ್ಲಿ ಆಡಿ ಸ್ನಾನ ಮುಗಿಸಿ ಹೊರ ಬರುವಾಗ ಮೂಲೆಯಲ್ಲೆಲ್ಲೋ ಕುಳಿತಿದ್ದ ಪುಟಾಣಿ ಕಪ್ಪೆ ಮರಿಯೊಂದು ಛಂಗನೆ ಕಾಲ ಬಳಿ ಹಾರಿದಾಗ ಪುಟ್ಟುವಿಗೆ ಉಸಿರು ಕಟ್ಟಿದಂತಾಗಿತ್ತು.. "ಅಜ್ಜಿ ಇಲ್ಲಿ ನೋಡು ಬೇಗ.. ಏನು ಇದು" ಕೂಗಿದಳು. ಅಜ್ಜಿ ಅತ್ತ ತಿರುಗಿದವಳೆ ನಗುತ್ತಾ ಹೇಳಿದಳು " ಅದು ಕಪ್ಪೆ ಮರಿ ಮಗ"... ನೋಡುವಷ್ಟರಲ್ಲಿ ಕಪ್ಪೆ ಮರಿ ಅಲ್ಲೆಲ್ಲ ಛಂಗ ಛಂಗನೆ ಜಿಗಿದಾಡತೊಡಗಿತ್ತು.ಪುಟ್ಟುವಿಗೆ ಇದು ಏನೋ ಹೊಸ ಆಶ್ಚರ್ಯಮೂಡಿಸಿತ್ತು. ಅವಳೂ ಕಪ್ಪೆ ಮರಿಯ ಹಿಂದೆ ಜಿಗಿಯುತ್ತ ನಗುತ್ತಿದ್ದಳು. ಮತ್ತೆ ಸ್ವಲ್ಪ ಹೊತ್ತಿನಲ್ಲೇ ಕಪ್ಪೆ ಮರಿ ಎಲ್ಲೋ ಮಾಯವಾಗಿತ್ತು.

ಮರುದಿನ ಬೆಳಿಗ್ಗೆ ಮತ್ತದೆ ಹೊತ್ತಿನಲ್ಲಿ ಮಳೆ ನಿಂತಿದ್ದು ನೋಡಿ ಅಂಗಳದ ನೀರಲ್ಲಿ ಆಡಲು ಪುಟ್ಟು ಹೊರಟಿದ್ದೇ ಅವಳಿಗೆ ಕಪ್ಪೆ ಮರಿ ಕಂಡಿತ್ತು. ಪುಟ್ಟುವಿನ ಕಣ್ಣಲ್ಲಿ ಖುಷಿಯ ಹೊನಲು, ಮುಖದಲ್ಲಿ ಮುಗ್ಧ ನಗೆ. ಅದೆಷ್ಟೋ ಹೊತ್ತು ಕಪ್ಪೆ ಮರಿಯೊಂದಿಗೆ ಹಾರಿ ಹಾರಿ ಕುಣಿದಳು. ದಿನಾಲೂ ಇದೇ ಮುಂದುವರೀದಿತ್ತು. ಪುಟಾಣಿ ಕಪ್ಪೆ ಮರಿಯೊಂದಿಗೆ ಪುಟ್ಟುವಿನ ಸ್ನೇಹ ದಿನದಿಂದ ದಿನಕ್ಕೆ ಬಲವಾಗುತ್ತಿತ್ತು. ದಿನಾಲೂ ಆ ಸಮಯಕ್ಕೆ ಕಪ್ಪೆ ಮರಿ ಅಂಗಳಕ್ಕೆ ಕುಣಿಯಲು ಬಂದುಬಿಡುತ್ತಿತ್ತು. ಮಾತು ಬಾರದ ಆ ಮೂಕ ಪ್ರಾಣಿ, ಏನೂ ಅರಿಯದ ಮುಗ್ಧ ಕಂದನ ನಡುವೆ ಅದೇನೋ ಹೇಳಲಾರದ ಬಾಂಧವ್ಯ. ಅವರ ಆಟವನ್ನು ನೋಡುವ ದೊಡ್ಡವರಿಗೋ ಒಳ್ಳೇಮನರಂಜನೆ.

ನೋಡ ನೋಡುತ್ತಾ ಒಂದು ತಿಂಗಳು ಕಳೆದದ್ದೆ ಗೊತ್ತಾಗಲಿಲ್ಲ. ಪುಟ್ಟು ಆ ಹೊಸ ದಿನಚರಿಗೆ ಸಂಪೂರ್ಣವಾಗಿ ಹೊಂದಿಕೊಂಡುಬಿಟ್ಟಿದ್ದಳು. ಪುಟ್ಟ ಪಾಪೂವಿನೊಂದಿಗೆ ಆಡುವುದಕ್ಕೂ ಶುರುವಿಟ್ಟಿದ್ದಳು. ಅವತ್ತೊಂದು ದಿನ ಬೆಳಿಗ್ಗೆ ಎಂದಿನಂತೆ ಸ್ನಾನವಾದ ಮೇಲೆ ಅಂಗಳದಲ್ಲಿಳಿದು ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತಾ ನಡೆದು ಬರುತ್ತಿದ್ದ ಅವಳ ಗೆಜ್ಜೆಯ ಝಲ್ ಝಲ್ ಶಬ್ದಕ್ಕೆ ಯಾರಾದರೂ ಮೋಡಿಗೊಳಗಾಗುವಂತಿತ್ತು . ಕಪ್ಪೆ ಮರಿಯು ಹೊರಬರುವುದೇನೋ ಎಂದು ಅವಳು ಅತ್ತಿತ್ತ ಕಣ್ಣರಳಿಸಿ ನೋಡುತ್ತಿರುವಾಗಲೇ ಜಿಗಿ ಜಿಗಿದು ಬಂತು ಕಪ್ಪೆ ಮರಿ. ಕಪ್ಪೆ ಮರಿ ಇನ್ನೇನು ಕುಪ್ಪಳಿಸುವುದರಲ್ಲಿತ್ತು ಅಷ್ಟರಲ್ಲಿ ಅಲ್ಲೆಲ್ಲೋ ಹಂಚಿನ ಮೇಲೆ ಕುಳಿತಿದ್ದ ಕಾಗೆಯೊಂದು ರೋಯ್ಯನೆ ಹಾರಿ ಬಂದು ಕಪ್ಪೆ ಮರಿಯನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಹಾರಿ ಹೋಯ್ತು.

ಪುಟ್ಟುವಿಗೆ ಏನಾಯ್ತು ಎಂದು ಅರಿವಾಗುವುದರೊಳಗೆ ಎಲ್ಲ ನಡೆದುಹೋಗಿತ್ತು.ಅಲ್ಲೇ ಹೋಗುತ್ತಿದ್ದ ಅಜ್ಜನನ್ನು ಕೂಗಿ ಹೇಳಿದಳು "ಅಜ್ಜ ನೋಡು ಆ ಕಾಕಣ್ಣ ನನ್ನ ಕಪ್ಪೆ ಮರಿಯನ್ನು ಕಚಕ್ಯಂಡು ಹೋತು. ಅದು ಮತ್ತೆ ತಂದು ಕಪ್ಪೆ ಮರಿನ ಇಲ್ಲೇ ಬಿಡ್ತು ಅಲ್ದನಾ?"ಅವಳಿಗೆ ನಿರಾಸೆ ಆಗಬಾರದೆಂದು ಅಜ್ಜ " ಹೌದು ಹೌದು ನೀನೇನು ಬೇಜಾರಾಗಡ" ಅಂತ ಸಮಾಧಾನಿಸಿ ಮತ್ತೇನೇನೋಹೆಳುತ್ತ ವಿಷಯಾಂತರಿಸಿ ಅವಳನ್ನು ಒಳಗೆ ಕರೆದೊಯ್ಯುವ ಪ್ರಯತ್ನ ಮಾಡುತ್ತಿದ್ದರೆ ಪುಟ್ಟುವಿನ ಗಮನವೆಲ್ಲ ಕಾಗೆ ಮೇಲೆ ಹಾರಿ ಹೊದೆಡೆಗೆ ಇತ್ತು. ಕಾಗೆ ಎಲ್ಲಿ ಹೋಗಿರಬಹುದು ತನ್ನ ಕಪ್ಪೆ ಮರಿಯನ್ನು ಕಚ್ಚಿಕೊಂಡು? ಏನು ಮಾಡುತ್ತಿರಬಹುದು? ಯಾವಾಗ ತಂದು ಬಿಡುತ್ತೋ ಮತ್ತೆ ಅಂತೆಲ್ಲ ಯೊಚನೆಗಳು ಅವಳ ತಲೆಯಲ್ಲಿ ಹರಿದಾಡುತ್ತಿರಬಹುದು ಎಂದು ಅವಳ ಮುಖಭಾವ ನೋಡಿದ ಅಜ್ಜನಿಗೆ ಅನ್ನಿಸಿತು.

ಮತ್ತೆ ದಿನಾಲೂ ಕಪ್ಪೆ ಮರಿಗಾಗಿ ಕಾಯುವುದು ಅದು ಬಾರದಿದ್ದಾಗ ಎಲ್ಲರನ್ನೂ ಕೇಳಿ ಪೀಡಿಸುವುದು ನಿತ್ಯದ ದಿನಚರಿಯಾಯ್ತು. ದಿನಾ ಏನಾದ್ರೂ ಕಥೆ ಕಟ್ಟಿ ಹೇಳಿ ಅವಳನ್ನು ನಂಬಿಸುವುದು ದೊಡ್ಡವರ ದಿನಚರಿಯಾಯ್ತು.

ಮೂರು ತಿಂಗಳು ಕಳೆದು ಅಮ್ಮ ಮತ್ತು ಪಾಪುವಿನೊಂದಿಗೆ ಅಲ್ಲಿಂದ ಹೊರಡುವ ಹೊತ್ತಿಗೆ ಕಪ್ಪೆ ಮರಿ ಪುಟ್ಟುವಿನ ನೆನಪಿನಿಂದ ಮಾಸಿ ಹೋಗಿತ್ತು.

********
22 ವರ್ಷಗಳಲ್ಲಿ ಈ ಕಥೆಯನ್ನು ಅದೆಷ್ಟೋ ಬಾರಿ ಅಮ್ಮ ತನ್ನೆದುರಿಗೆ ಹೇಳುವುದನ್ನು ಕೆಳಿದಾಗಲೆಲ್ಲ ಪುಟ್ಟುವಿಗೆ ತನ್ನ ಮತ್ತು ಕಪ್ಪೆಯ ಮರಿಯ ಆ ಸ್ನೇಹದ ಬಗ್ಗೆ ಅದೇನೋ ಭಾವನೆ ಮನಸ್ಸಲ್ಲಿ ಮೂಡುತ್ತಿತ್ತು.ತನಗೇನೂ ನೆನಪಿಲ್ಲದಿದ್ದರೂ ಅಮ್ಮ ಹೇಳಿದ್ದನ್ನು ಕೇಳಿಯೇ ನಡೆದಿದ್ದರ ಚಿತ್ರಣ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಮಳೆಗಾಲ ಬಂದಾಗಲೆಲ್ಲ ಆ ಕಥೆ ನೆನಪಾಗಿ ಕಾಡುತ್ತಿತ್ತು .

ಮತ್ತೊಮ್ಮೆ ಈಗ ಅದೇ ಥರ ಮಳೆಗಾಲ. ಮಾತಾದಡಿದ್ದೂ ಕೇಳದಷ್ಟು ಸದ್ದು ಮಾಡುತ್ತಿರುವ ಆ ಮಳೆಹನಿಗಳು. ಆದರೂ ದೂರದಲ್ಲೆಲ್ಲೋ ಕಪ್ಪೆಗಳು ಕೂಗುತ್ತಿರುವಂತ ಸದ್ದು. ಮನೆಯ ಮುಂಬಾಗಿಲು ತೆರೆದು ಮಳೆ ನೋಡುತ್ತಾ ನಿಂತವಳ ಕಣ್ಣೆಲ್ಲ ಅಂಗಳದ ಕಡೆಯೇ ನೆಟ್ಟಿತ್ತು. ಕಪ್ಪೆ ಮರಿ ಕಾಣಿಸುತ್ತದಾ ಎಂದು ಕಾಯುತ್ತಿರುವಂತಿತ್ತು ಅವಳ ನೋಟ.