
ನೆನಪಿದ್ಯಾ ನಿನಗೆ? ನಾನು ಎಲ್ಲಿ ಹೋದರೂ ಬೇರೆ ಬೇರೆ ಆಕಾರದ ಕಲ್ಲುಗಳನ್ನು ಹುಡುಕುತಿದ್ದೆ. ಅಪ್ಪಿ ತಪ್ಪಿ ಯಾವ ಕಲ್ಲಿಗಾದರೂ ನಕ್ಷತ್ರದ ಆಕಾರವಿದ್ದಿದ್ದರೆ ಸಾಕಿತ್ತು , "ನಕ್ಷತ್ರ ಮೀನೂ ಹೀಗೇ ಇರುತ್ತದಾ"? ಅಂತ ನಿನ್ನ ಕೇಳುತ್ತಿದ್ದೆ ನಾನು . ಒಮ್ಮೆ ನೀನು ನಂಗೆ ಪ್ಲಾಸ್ಟಿಕ್ ನ ನಕ್ಷತ್ರ ಮೀನು ತಂದುಕೊಟ್ಟಿದ್ದೆಯಲ್ಲ ಈಗಲೂ ನನ್ನ ಬಳಿ ಇದೆ ಅದು. ಎಷ್ಟು ಖುಷಿಯಾಗಿತ್ತು ನನಗೆ ಅವತ್ತು.
ಆಗೆಲ್ಲ ನನಗೆ ಬಹಳ ಯೋಚಿಸಿದಷ್ಟೂ ನಕ್ಷತ್ರ ಮೀನಿನ ಕನಸು ಬೀಳುತ್ತಿತ್ತು. ಥೇಟ್ ಆಕಾಶದ ನಕ್ಷತ್ರದಂತೆ ಹೊಳೆಯುತ್ತಿದ್ದ ನಕ್ಷತ್ರ. ನನ್ನ ಕಣ್ಣಲ್ಲಿ ಅದರದ್ದೇ ಬಿಂಬ. ನನ್ನ ನೋಡಿ ನಸುನಗುತ್ತಿರುವ ನೀನು. ಮತ್ತೆ ಮತ್ತೆ ನಕ್ಷತ್ರ ಮೀನಿನದೆ ಕನಸು, ನಿನ್ನ ಬೊಗಸೆಯೊಳಗೆ ನನ್ನೆರಡು ಹಸ್ತಗಳು , ನನ್ನ ಬೊಗಸೆಯಲ್ಲಿ ತುಂಬಿ ಹೊಳೆಯುತ್ತಿರುವ ನಕ್ಷತ್ರ ಮೀನುಗಳು, ಸುತ್ತಲೂ ನಮ್ಮ ಕಾಲುಗಳನ್ನು ಚುಂಬಿಸಿ ಓಡಿ ಹೋಗುತ್ತಿರುವ ಅಲೆಗಳು, ಅಲ್ಲಲ್ಲಿ ನಕ್ಷತ್ರ ಮೀನುಗಳು, ಬಾನಂಗಳದಲ್ಲಿ ನಾವು ಆಡುತ್ತಿದ್ದೇವಾ ತಾರೆಗಳೊಡನೆ? ನಂಗೆ ಹಾಗೇ ಅನ್ನಿಸುತ್ತಿತ್ತು.

ಚೆನಾಗಿತ್ತೇನೋ ,ಅವತ್ತು ನೀನು ಮೊದಲ ಬಾರಿಗೆ ನಕ್ಷತ್ರ ಮೀನುಗಳನ್ನು ತೋರಿಸಿದೆಯಲ್ಲ ನಂಗೆ ಇದೇನಾ ನಕ್ಷತ್ರ ಮೀನು ಅನ್ನಿಸಿತು. ಮುಟ್ಟಿ ನೋಡಲು ಭಯವಾಯ್ತು ನಂಗೆ. ಅದೇನೋ ಸಣ್ಣ ಸಣ್ಣ ಮುಳ್ಳಿನಂತದ್ದು ಇತ್ತು ಅದರ ಮೇಲೆಲ್ಲ. ಹೊಳೆಯುತ್ತ ಏನೂ ಇರಲಿಲ್ಲ ಅದು. ಬೆರಳು ತಾಗಿಸಿದರೆ ಸಾಕು ಎಲ್ಲಿ ನನ್ನ ಕೈಯನ್ನೇ ಆವರಿಸಿ ಹಿಡಿದುಕೊಂಡುಬಿಡುತ್ತದೋ ಅಂತ ಭಯವಾಯ್ತು ನಂಗೆ. ನನ್ನ ಕಲ್ಪನೆಯಲ್ಲಿದ್ದಿದ್ದು ಇದಲ್ಲವೆ ಅಲ್ಲ ಬೇರೆ ಇನ್ನೇನೋ ಅನ್ನಿಸಿತು.
ನಕ್ಷತ್ರವನ್ನು ಯಾರಾದರೂ ಬೊಗಸೆಯಲ್ಲಿ ಹಿಡಿಯಲು ಸಾಧ್ಯವಾ? ಹಾಗೆಯೇ ನಕ್ಷತ್ರಮೀನ್ನನ್ನೂ ನಾನು ಬೊಗಸೆಯಲ್ಲಿ ಹಿಡಿಯಲು ಸಾಧ್ಯವಿಲ್ಲ ಅಂತ ಅನ್ನಿಸಿದ್ದು ಅವತ್ತೇ. ಎಷ್ಟು ಬೇಜಾರಾಗಿತ್ತು ನಂಗೆ. ನನ್ನ ಮನಸ್ಸಲ್ಲಿದ್ದ ಸುಂದರ ಕಲ್ಪನೆಯ ಬಣ್ಣದ ಚಿತ್ರದ ಮೇಲೆ ನೀರು ಸೋಕಿ ಬಣ್ಣಗಳೆಲ್ಲ ಕಲಕಿದಂತಾಗಿತ್ತು. ಅವತ್ತಿಂದ ಮತ್ತೆ ಯಾವಾಗಲಾದರೂ ನಾ ನಿನ್ನ ಹತ್ತಿರ ನಕ್ಷತ್ರ ಮೀನಿನ ಬಗ್ಗೆ ಹೇಳಿದ್ದೆನಾ ನೆನಪು ಮಾಡಿಕೋ. ಇಲ್ಲ ಅಲ್ಲವಾ. ಅಷ್ಟೇ ಅಲ್ಲ ನಂಗೆ ಮತ್ತೆಂದೂ ಆ ಕನಸೂ ಬೀಳಲಿಲ್ಲ.
ಯಾಕಾಗಿ ಇದೆಲ್ಲ ಮತ್ತೆ ಮತ್ತೆ ನೆನಪಾಗಿದ್ದು ಅನ್ನಿಸಿರಬಹುದಾ ನಿನಗೆ? ಕೆಲವು ವಿಷಯಗಳು ನೆನಪಾಗಬೇಕೆಂದೇನಿಲ್ಲ. ಯಾಕೆಂದರೆ ಅವು ಮರೆತಿರುವುದೇ ಇಲ್ಲ. ಅದೊಂದು ನೆಪವಷ್ಟೇ. ನಕ್ಷತ್ರ ಮೀನೂ ಹಾಗೇ.
ನೀನು ಹೊರಟೆಯಲ್ಲ ಅವತ್ತು, ನೀ ಹೋಗುವುದು ತಿಳಿದಾಗಲಿಂದ ಯೋಚಿಸುತ್ತಿದ್ದೆ. ನಿನಗೆ ಕೇಳುವುದಕ್ಕೆ ಬಹಳ ಪ್ರಶ್ನೆಗಳಿದ್ದವು ನನ್ನಲ್ಲಿ. ಅದನ್ನೇ ಯೋಚಿಸುತ್ತಿದ್ದೆ. ಕೇಳಬೇಕಾಗಿತ್ತು ನಿನ್ನನ್ನು ನಾನು "ಅದೇ ನಾನು ನೋಡದ ನಿನ್ನ ಆ ಕಣ್ಣುಗಳಲ್ಲಿ ನನಗೆಂದು ಪ್ರೀತಿಯಿತ್ತಾ" ? ಮೊದಲ ಪ್ರಶ್ನೆಯೂ ಅದೇ ಕೊನೆಯ ಪ್ರಶ್ನೆಯೂ ಅದೇ ಆಗಿತ್ತು . ಮತ್ತೆ ಬಹಳ ಪ್ರಶ್ನೆಗಳೆಂದೆನಲ್ಲ ಅವೆಲ್ಲವೂ ಅದೇ.
ನನ್ನ ಕಲ್ಪನೆಯ ನಿನ್ನ ಆ ಕಣ್ಣುಗಳಲ್ಲಿ ಅದೆಷ್ಟು ಚಂದನೆಯ ಪ್ರೀತಿಯಿತ್ತು ಗೊತ್ತಾ ನನಗಾಗಿ. ನಾನೇ ಕಳೆದುಹೊಗುವಷ್ಟು. ಯೋಚಿಸಿದಾಗ ಮತ್ತೆ ಅನ್ನಿಸಿದ್ದು ನನ್ನ ಕಣ್ಣುಗಳಲ್ಲಿ ನಿನಗಾಗಿ ಇದ್ದ ಪ್ರೀತಿ ನಿನಗೆ ಯಾವತ್ತೂ ಕಾಣಲೇ ಇಲ್ಲವಾ? ನೀನಾಡಿದ ಮಾತುಗಳನ್ನೆಲ್ಲ ನೆನಪಿಸಿಕೊಂಡೆ. ಎಲ್ಲದರಲ್ಲೂ ಅಸ್ಪಷ್ಟತೆಯೇ ಇತ್ತು. ನಿನ್ನ ಮಾತುಗಳಲ್ಲಿ ಏನೋ ಹುಡುಕ ಹೋದವಳಿಗೆ ಏನೂ ಸಿಗಲಿಲ್ಲ. ಭಯವಾಗಿದ್ದೇ ಆಗ ನನಗೆ. ನಕ್ಷತ್ರ ಮೀನು ಮತ್ತೆ ಕಣ್ಣೆದುರಿಗೆ ಬಂದಿದ್ದೆ ಅದಕ್ಕೆ. ಹೌದು ನಿನ್ನ ಕಣ್ಣುಗಳಲ್ಲಿನ ಪ್ರೀತಿ ನಕ್ಷತ್ರ ಮೀನಿನ ನನ್ನ ಕಲ್ಪನೆಯಂತೆ ಆಗಿದ್ದರೆ ? ಇಲ್ಲ ಇಲ್ಲ ಹಾಗಾಗಲು ಸಾಧ್ಯವೇ ಇಲ್ಲ .ನನಗೇ ನಾನು ಸಮಾಧಾನ ಹೇಳಿಕೊಂಡೆ. ಭಯ ಇನ್ನೂ ಹೆಚ್ಚಾಯಿತು ನನಗೆ. ನನ್ನ ಪ್ರೀತಿಯೂ ನಕ್ಷತ್ರ ಮೀನಂತಾಗುವುದು ನನಗೆ ಇಷ್ಟವೇ ಇರಲಿಲ್ಲ. ಆದರೆ ಆ ಪ್ರಶ್ನೆಗಳು ? ಅವಕ್ಕೆ ಉತ್ತರ ಹೇಳುವವರ್ಯಾರು ?
ಯೋಚಿಸಿದಷ್ಟೂ ಮತ್ತೂ ಭಯ ಹೆಚ್ಚಾಗಿತ್ತು . ಆದರೆ ಉತ್ತರವೇ ಗೊತ್ತಿಲ್ಲದ ಪ್ರಶ್ನೆಯನ್ನು ಮನಸಲ್ಲೇ ಎಷ್ಟು ದಿನ ನನಗೇ ನಾನು ಕೇಳಿಕೊಂಡಿರುವುದು? ಕಷ್ಟವಲ್ಲವಾ ಅದು? ಹಾಗೆಂದುಕೊಂಡಾಗ ಕೇಳೇ ಬಿಡಬೇಕು ನಿನ್ನನ್ನು ಅನ್ನಿಸಿದ್ದಿದೆ. ಮರು ಕ್ಷಣದಲ್ಲಿ ಮನಸ್ಸು ಕೂಗಿ ಕೂಗಿ ಹೇಳಿದ್ದು ಒಂದೇ ಮಾತು ಪ್ರೀತಿಯೂ ನಕ್ಷತ್ರ ಮೀನಂತಾಗುವುದು ಬೇಡವೆ ಬೇಡ. ಪ್ರಶ್ನೆಯ ಭಾರವನ್ನೇನೋ ನಾನು ಹೊತ್ತುಕೊಂಡೇನು ಆದರೆ ಉತ್ತರ ನನಗೆ ನಕ್ಷತ್ರ ಮೀನಿನಂತಾದರೆ ಆ ಭಾರ ಹೊರುವಷ್ಟು ಶಕ್ತಳಲ್ಲ ನಾನು.
ಅದಕ್ಕೆ ನಾನು ಮೌನಿಯಾಗಿಬಿಟ್ಟೆ. ನೀ ಹೊರಟಾಗ ನಿನ್ನಂತೆಯೇ ನಾನೂ ನಸು ನಕ್ಕು ಸುಮ್ಮನಾಗಿ ನಿನ್ನನ್ನು ಕಳಿಸಿಕೊಟ್ಟೆ. ಪ್ರೀತಿ ನಕ್ಷತ್ರ ಮೀನಾಗದಿದ್ದಿದ್ದಕ್ಕೆ ಸಮಾಧಾನಪಟ್ಟೆ.

ಕೈಗಂಟಿದ ಕನಸುಗಳನ್ನು ನನಸು ಮಾಡಿಕೊಳ್ಳುವ ಹೊಣೆಯನ್ನೂ ಕಣ್ಣುಗಳು ನನಗೆ ಕೊಟ್ಟಿವೆ. ಅದಕ್ಕೆಲ್ಲ ತಯಾರಾಗಬೇಕು ನಾನು.
ಇಷ್ಟೆಲ್ಲಾ ಯಾಕಾದರೂ ನಾನು ನಿನಗೆ ಹೇಳಿದೆ ಅಂದುಕೊಂಡೆಯ? ಚಿಕ್ಕ ಚಿಕ್ಕ ವಿಷಯಗಳನ್ನೂ ಒಂದೂ ಬಿಡದೇ ನಿನ್ನಲ್ಲಿ ಹೇಳಿಕೊಂಡವಳು ನಾನು. ಇನ್ನು ಇದನ್ನು ಹೇಳದಿದ್ದರೆ ಹೇಗಾದೀತು? ಅದಕ್ಕೇ ಹೇಳಿದ್ದು ಅಷ್ಟೆ.
ಒಲವಿನಿಂದ,
ಹೊಳೆವ ಕಣ್ಣವಳು
ಖುಷಿ.
ಇಷ್ಟು ಬರೆದವಳೇ ಇನ್ನೊಮ್ಮೆ ಬರೆದಿದ್ದನ್ನೆಲ್ಲ ಮೊದಲಿನಿಂದ ಓದಿದಳು ಖುಷಿ. ಸಂಜೆ ತಂಪಿನ ಗಾಳಿಗೆ ಮುಂಗುರುಳು ಹಾರುತ್ತಿತ್ತು. ಅಲ್ಲಿಂದೆದ್ದು ಹೊರಟವಳೇ ಬಚ್ಚಲೊಲೆಯ ಮುಂದೆ ಬಂದು ನಿಂತಳು. ಬಚ್ಚಲೊಲೆಗೆ ಹಾಕಿದ್ದ ಬೆಂಕಿ ಧಗ ಧಗನೆ ಉರಿಯುತ್ತಿತ್ತು.
ಕೈಲಿದ್ದ ಹಾಳೆಯನ್ನು ನಾಲ್ಕು ಚೂರು ಮಾಡಿ ಒಲೆಯೊಳಗೆ ಹಾಕಿದಳು, ಬೆಂಕಿ ಧಗ್ಗೆಂದು 2 ನಿಮಿಷ ಉರಿದು ಬಿಳಿಯ ಹಾಳೆಯ ನಾಲ್ಕೂ ಚೂರುಗಳು ಕರ್ರಗಿನ ಬೂದಿಯಾಯ್ತು . ಅದನ್ನೇ ನೋಡುತ್ತಿದ್ದ ಖುಷಿಯ ಕಣ್ಣುಗಳು ಒಲೆಯ ಬೆಂಕಿಯ ಬೆಳಕಿಗೆ ಹೊಳೆಯುತ್ತಿದ್ದವು.