Wednesday, February 20, 2008

ನಕ್ಷತ್ರ ಮೀನು

ನಕ್ಷತ್ರ ಮೀನು !! ಆಹಾ ಶಬ್ದದಲ್ಲೇ ಏನೋ ಮೋಹಕತೆ ಇದೆ ಅಲ್ಲವೇ? ನಂಗೆ ನಕ್ಷತ್ರ ಮೀನಿನ ಹುಚ್ಚು ಹತ್ತಿದ್ದಾದರೂ ಹೇಗೆ? ಯಾವಾಗಿಂದ? ಗೊತ್ತಿಲ್ಲವೋ ನನಗೇ ಗೊತ್ತಿಲ್ಲ. ಹೊಳೆಯುವ ಮಣಿಗಳನ್ನು ಚೆಲ್ಲಿದ್ದಾರೆನೋ ಎಂಬಂತೆ ಕಾಣುವ ನಕ್ಷತ್ರಗಳಿಂದ ತುಂಬಿದ ರಾತ್ರಿ ಆಕಾಶದ ಬಿಂಬವೇನಾದ್ರೂ ನಿಂತ ತಿಳಿ ನೀರಲ್ಲಿ ಬಿದ್ದರೆ ಹೇಗಿರುತ್ತದೋ? ನಿನ್ಯಾವತ್ತಾದರೂ ನೋಡೀದ್ದಿಯಾ? ಬಹುಶಃ ಸಾವಿರದೊಂದನೆಯ ಸಲ ಕೆಳುತ್ತಿದ್ದೇನೇನೋ ನಾನು ನಿನಗೆ ಈ ಪ್ರಶ್ನೆಯನ್ನ. ಅಂದರೆ ನಕ್ಷತ್ರ ಮೀನಿನ ಬಗ್ಗೆ ನನಗಿದ್ದ ಹುಚ್ಚಿನ ಬಗ್ಗೆಯೂ ಸುಮಾರು ಅಷ್ಟೇ ಸಲ ಹೇಳಿರಬಹುದಲ್ವಾ? ಅದೆಷ್ಟೇ ಸಲ ಇರಲಿ ಬಿಡು. ಕೇಳಿಲ್ಲಿ. ಹೇಗಿರಬಹುದು ಚುಕ್ಕಿಗಳಿಂದ ತುಂಬಿದ ಆಕಾಶದ ಬಿಂಬ ನಿಂತ ತಿಳಿ ನೀರಲ್ಲಿ?ಎಷ್ಟು ಚಂದ ಅಲ್ಲವ ಆ ಕಲ್ಪನೆ? ನಾನು ಅದನ್ನ ಯೋಚಿಸಿದಾಗಲೆಲ್ಲ ಅಂದುಕೊಳ್ಳುತ್ತಿದ್ದೆ ಬಹುಶಃ ನಕ್ಷತ್ರ ಮಿನುಗಳೇ ತುಂಬಿದ ತಿಳಿ ನೀರು ಸಹ ಹಾಗೇ ಕಾಣಬಹುದು ಎಂದು.
ಈ ಹೊಲಿಕೆಯಿಂದೆ ಇರಬೇಕು ನಕ್ಷತ್ರ ಮೀನೆಂದರೆ ನಂಗೆ ಅಷ್ಟು ಮೋಹ ಬೆಳೆದಿದ್ದು. ನಾನು ಹೀಗೆಲ್ಲ ಹೇಳುತ್ತಿದ್ದಾಗ ನಿನಗೆ ಏನನ್ನಿಸುತ್ತಿತ್ತೋ? ಸುಮ್ಮನೆ ನಸು ನಕ್ಕು "ಜಗತ್ತು ಎಷ್ಟು ಸುಂದರ ಅಲ್ವಾ" ಅಂದು ಸುಮ್ಮನಾಗಿಬಿಡುತ್ತಿದ್ದೆ ನೀನು. ನಿನ್ನ ಕಣ್ಣುಗಳೂ ತುಂಟ ನಗೆ ಬೀರುತ್ತಿರುತ್ತಿದ್ದವೇನೋ? ಆದರೆ ನಾನೆಂದೂ ನೋಡಿಲ್ಲ. ಮನಸ್ಸಲ್ಲಿ ಅಂದುಕೊಂಡಿದ್ದಷ್ಟೇ. ಹೌದು ಯಾವತ್ತೂ ನಿನ್ನ ಕಣ್ಣುಗಳನ್ನು ನಾ ನೇರವಾಗಿ ನೋಡಿದ್ದೇ ಇಲ್ಲ. ಯಾಕೆ ಹಾಗೆ?ಯೋಚಿಸಿದಷ್ಟೂ ಕಳೆದು ಹೋಗುತ್ತೇನೆ.

ನೆನಪಿದ್ಯಾ ನಿನಗೆ? ನಾನು ಎಲ್ಲಿ ಹೋದರೂ ಬೇರೆ ಬೇರೆ ಆಕಾರದ ಕಲ್ಲುಗಳನ್ನು ಹುಡುಕುತಿದ್ದೆ. ಅಪ್ಪಿ ತಪ್ಪಿ ಯಾವ ಕಲ್ಲಿಗಾದರೂ ನಕ್ಷತ್ರದ ಆಕಾರವಿದ್ದಿದ್ದರೆ ಸಾಕಿತ್ತು , "ನಕ್ಷತ್ರ ಮೀನೂ ಹೀಗೇ ಇರುತ್ತದಾ"? ಅಂತ ನಿನ್ನ ಕೇಳುತ್ತಿದ್ದೆ ನಾನು . ಒಮ್ಮೆ ನೀನು ನಂಗೆ ಪ್ಲಾಸ್ಟಿಕ್ ನ ನಕ್ಷತ್ರ ಮೀನು ತಂದುಕೊಟ್ಟಿದ್ದೆಯಲ್ಲ ಈಗಲೂ ನನ್ನ ಬಳಿ ಇದೆ ಅದು. ಎಷ್ಟು ಖುಷಿಯಾಗಿತ್ತು ನನಗೆ ಅವತ್ತು.

ಆಗೆಲ್ಲ ನನಗೆ ಬಹಳ ಯೋಚಿಸಿದಷ್ಟೂ ನಕ್ಷತ್ರ ಮೀನಿನ ಕನಸು ಬೀಳುತ್ತಿತ್ತು. ಥೇಟ್ ಆಕಾಶದ ನಕ್ಷತ್ರದಂತೆ ಹೊಳೆಯುತ್ತಿದ್ದ ನಕ್ಷತ್ರ. ನನ್ನ ಕಣ್ಣಲ್ಲಿ ಅದರದ್ದೇ ಬಿಂಬ. ನನ್ನ ನೋಡಿ ನಸುನಗುತ್ತಿರುವ ನೀನು. ಮತ್ತೆ ಮತ್ತೆ ನಕ್ಷತ್ರ ಮೀನಿನದೆ ಕನಸು, ನಿನ್ನ ಬೊಗಸೆಯೊಳಗೆ ನನ್ನೆರಡು ಹಸ್ತಗಳು , ನನ್ನ ಬೊಗಸೆಯಲ್ಲಿ ತುಂಬಿ ಹೊಳೆಯುತ್ತಿರುವ ನಕ್ಷತ್ರ ಮೀನುಗಳು, ಸುತ್ತಲೂ ನಮ್ಮ ಕಾಲುಗಳನ್ನು ಚುಂಬಿಸಿ ಓಡಿ ಹೋಗುತ್ತಿರುವ ಅಲೆಗಳು, ಅಲ್ಲಲ್ಲಿ ನಕ್ಷತ್ರ ಮೀನುಗಳು, ಬಾನಂಗಳದಲ್ಲಿ ನಾವು ಆಡುತ್ತಿದ್ದೇವಾ ತಾರೆಗಳೊಡನೆ? ನಂಗೆ ಹಾಗೇ ಅನ್ನಿಸುತ್ತಿತ್ತು.
ಹುಚ್ಚು ಕಲ್ಪನೆಗಳಿಗೆ ಕೊನೆಯೇ ಇಲ್ಲವೇನೋ? ನಾನಂದುಕೊಳ್ಳುತ್ತಿದ್ದೆ. ಆದರೆ ಅದೆಲ್ಲದಕ್ಕೂ ಕೊನೆಯಿದೆ ಅನ್ನಿಸಿದ್ದು ನಕ್ಷತ್ರ ಮೀನುಗಳನ್ನು ನಾ ನೋಡಿದಾಗ. ನಿಜಕ್ಕೂ ಆ ದಿನ ಇನ್ನೂ ಕಣ್ಣಿಗೆ ಕಟ್ಟಿದಂತೆ ನೆನಪಿದೆಯೋ ನನಗೆ. ಅಷ್ಟು ದಿನ ನಕ್ಷತ್ರ ಮೀನೆಂದರೆ ಬರೀ ನನ್ನ ಕಲ್ಪನೆಯ ಚಿತ್ರವಾಗಿತ್ತು. ಆ ಜೀವಿಯನ್ನು ನಾನು ನೋಡಿಯೇ ಇರಲಿಲ್ಲ. ಬರೀ ನನ್ನ ಕಲ್ಪನೆಯಲ್ಲೇ ನನಗೆ ಬೇಕಾದ ಹಾಗೆ ನನ್ನ ಮನಸ್ಸಲ್ಲಿ ಚಿತ್ರಿಸಿಕೊಂಡಿದ್ದೆ ,ಬಣ್ಣ ತುಂಬಿಕೊಂಡಿದ್ದೆ. ಹಾಗೇ ಇದ್ದಿದ್ದರೆ
ಚೆನಾಗಿತ್ತೇನೋ ,ಅವತ್ತು ನೀನು ಮೊದಲ ಬಾರಿಗೆ ನಕ್ಷತ್ರ ಮೀನುಗಳನ್ನು ತೋರಿಸಿದೆಯಲ್ಲ ನಂಗೆ ಇದೇನಾ ನಕ್ಷತ್ರ ಮೀನು ಅನ್ನಿಸಿತು. ಮುಟ್ಟಿ ನೋಡಲು ಭಯವಾಯ್ತು ನಂಗೆ. ಅದೇನೋ ಸಣ್ಣ ಸಣ್ಣ ಮುಳ್ಳಿನಂತದ್ದು ಇತ್ತು ಅದರ ಮೇಲೆಲ್ಲ. ಹೊಳೆಯುತ್ತ ಏನೂ ಇರಲಿಲ್ಲ ಅದು. ಬೆರಳು ತಾಗಿಸಿದರೆ ಸಾಕು ಎಲ್ಲಿ ನನ್ನ ಕೈಯನ್ನೇ ಆವರಿಸಿ ಹಿಡಿದುಕೊಂಡುಬಿಡುತ್ತದೋ ಅಂತ ಭಯವಾಯ್ತು ನಂಗೆ. ನನ್ನ ಕಲ್ಪನೆಯಲ್ಲಿದ್ದಿದ್ದು ಇದಲ್ಲವೆ ಅಲ್ಲ ಬೇರೆ ಇನ್ನೇನೋ ಅನ್ನಿಸಿತು.

ನಕ್ಷತ್ರವನ್ನು ಯಾರಾದರೂ ಬೊಗಸೆಯಲ್ಲಿ ಹಿಡಿಯಲು ಸಾಧ್ಯವಾ? ಹಾಗೆಯೇ ನಕ್ಷತ್ರಮೀನ್ನನ್ನೂ ನಾನು ಬೊಗಸೆಯಲ್ಲಿ ಹಿಡಿಯಲು ಸಾಧ್ಯವಿಲ್ಲ ಅಂತ ಅನ್ನಿಸಿದ್ದು ಅವತ್ತೇ. ಎಷ್ಟು ಬೇಜಾರಾಗಿತ್ತು ನಂಗೆ. ನನ್ನ ಮನಸ್ಸಲ್ಲಿದ್ದ ಸುಂದರ ಕಲ್ಪನೆಯ ಬಣ್ಣದ ಚಿತ್ರದ ಮೇಲೆ ನೀರು ಸೋಕಿ ಬಣ್ಣಗಳೆಲ್ಲ ಕಲಕಿದಂತಾಗಿತ್ತು. ಅವತ್ತಿಂದ ಮತ್ತೆ ಯಾವಾಗಲಾದರೂ ನಾ ನಿನ್ನ ಹತ್ತಿರ ನಕ್ಷತ್ರ ಮೀನಿನ ಬಗ್ಗೆ ಹೇಳಿದ್ದೆನಾ ನೆನಪು ಮಾಡಿಕೋ. ಇಲ್ಲ ಅಲ್ಲವಾ. ಅಷ್ಟೇ ಅಲ್ಲ ನಂಗೆ ಮತ್ತೆಂದೂ ಆ ಕನಸೂ ಬೀಳಲಿಲ್ಲ.

ಯಾಕಾಗಿ ಇದೆಲ್ಲ ಮತ್ತೆ ಮತ್ತೆ ನೆನಪಾಗಿದ್ದು ಅನ್ನಿಸಿರಬಹುದಾ ನಿನಗೆ? ಕೆಲವು ವಿಷಯಗಳು ನೆನಪಾಗಬೇಕೆಂದೇನಿಲ್ಲ. ಯಾಕೆಂದರೆ ಅವು ಮರೆತಿರುವುದೇ ಇಲ್ಲ. ಅದೊಂದು ನೆಪವಷ್ಟೇ. ನಕ್ಷತ್ರ ಮೀನೂ ಹಾಗೇ.

ನೀನು ಹೊರಟೆಯಲ್ಲ ಅವತ್ತು, ನೀ ಹೋಗುವುದು ತಿಳಿದಾಗಲಿಂದ ಯೋಚಿಸುತ್ತಿದ್ದೆ. ನಿನಗೆ ಕೇಳುವುದಕ್ಕೆ ಬಹಳ ಪ್ರಶ್ನೆಗಳಿದ್ದವು ನನ್ನಲ್ಲಿ. ಅದನ್ನೇ ಯೋಚಿಸುತ್ತಿದ್ದೆ. ಕೇಳಬೇಕಾಗಿತ್ತು ನಿನ್ನನ್ನು ನಾನು "ಅದೇ ನಾನು ನೋಡದ ನಿನ್ನ ಆ ಕಣ್ಣುಗಳಲ್ಲಿ ನನಗೆಂದು ಪ್ರೀತಿಯಿತ್ತಾ" ? ಮೊದಲ ಪ್ರಶ್ನೆಯೂ ಅದೇ ಕೊನೆಯ ಪ್ರಶ್ನೆಯೂ ಅದೇ ಆಗಿತ್ತು . ಮತ್ತೆ ಬಹಳ ಪ್ರಶ್ನೆಗಳೆಂದೆನಲ್ಲ ಅವೆಲ್ಲವೂ ಅದೇ.

ನನ್ನ ಕಲ್ಪನೆಯ ನಿನ್ನ ಆ ಕಣ್ಣುಗಳಲ್ಲಿ ಅದೆಷ್ಟು ಚಂದನೆಯ ಪ್ರೀತಿಯಿತ್ತು ಗೊತ್ತಾ ನನಗಾಗಿ. ನಾನೇ ಕಳೆದುಹೊಗುವಷ್ಟು. ಯೋಚಿಸಿದಾಗ ಮತ್ತೆ ಅನ್ನಿಸಿದ್ದು ನನ್ನ ಕಣ್ಣುಗಳಲ್ಲಿ ನಿನಗಾಗಿ ಇದ್ದ ಪ್ರೀತಿ ನಿನಗೆ ಯಾವತ್ತೂ ಕಾಣಲೇ ಇಲ್ಲವಾ? ನೀನಾಡಿದ ಮಾತುಗಳನ್ನೆಲ್ಲ ನೆನಪಿಸಿಕೊಂಡೆ. ಎಲ್ಲದರಲ್ಲೂ ಅಸ್ಪಷ್ಟತೆಯೇ ಇತ್ತು. ನಿನ್ನ ಮಾತುಗಳಲ್ಲಿ ಏನೋ ಹುಡುಕ ಹೋದವಳಿಗೆ ಏನೂ ಸಿಗಲಿಲ್ಲ. ಭಯವಾಗಿದ್ದೇ ಆಗ ನನಗೆ. ನಕ್ಷತ್ರ ಮೀನು ಮತ್ತೆ ಕಣ್ಣೆದುರಿಗೆ ಬಂದಿದ್ದೆ ಅದಕ್ಕೆ. ಹೌದು ನಿನ್ನ ಕಣ್ಣುಗಳಲ್ಲಿನ ಪ್ರೀತಿ ನಕ್ಷತ್ರ ಮೀನಿನ ನನ್ನ ಕಲ್ಪನೆಯಂತೆ ಆಗಿದ್ದರೆ ? ಇಲ್ಲ ಇಲ್ಲ ಹಾಗಾಗಲು ಸಾಧ್ಯವೇ ಇಲ್ಲ .ನನಗೇ ನಾನು ಸಮಾಧಾನ ಹೇಳಿಕೊಂಡೆ. ಭಯ ಇನ್ನೂ ಹೆಚ್ಚಾಯಿತು ನನಗೆ. ನನ್ನ ಪ್ರೀತಿಯೂ ನಕ್ಷತ್ರ ಮೀನಂತಾಗುವುದು ನನಗೆ ಇಷ್ಟವೇ ಇರಲಿಲ್ಲ. ಆದರೆ ಆ ಪ್ರಶ್ನೆಗಳು ? ಅವಕ್ಕೆ ಉತ್ತರ ಹೇಳುವವರ್ಯಾರು ?

ಯೋಚಿಸಿದಷ್ಟೂ ಮತ್ತೂ ಭಯ ಹೆಚ್ಚಾಗಿತ್ತು . ಆದರೆ ಉತ್ತರವೇ ಗೊತ್ತಿಲ್ಲದ ಪ್ರಶ್ನೆಯನ್ನು ಮನಸಲ್ಲೇ ಎಷ್ಟು ದಿನ ನನಗೇ ನಾನು ಕೇಳಿಕೊಂಡಿರುವುದು? ಕಷ್ಟವಲ್ಲವಾ ಅದು? ಹಾಗೆಂದುಕೊಂಡಾಗ ಕೇಳೇ ಬಿಡಬೇಕು ನಿನ್ನನ್ನು ಅನ್ನಿಸಿದ್ದಿದೆ. ಮರು ಕ್ಷಣದಲ್ಲಿ ಮನಸ್ಸು ಕೂಗಿ ಕೂಗಿ ಹೇಳಿದ್ದು ಒಂದೇ ಮಾತು ಪ್ರೀತಿಯೂ ನಕ್ಷತ್ರ ಮೀನಂತಾಗುವುದು ಬೇಡವೆ ಬೇಡ. ಪ್ರಶ್ನೆಯ ಭಾರವನ್ನೇನೋ ನಾನು ಹೊತ್ತುಕೊಂಡೇನು ಆದರೆ ಉತ್ತರ ನನಗೆ ನಕ್ಷತ್ರ ಮೀನಿನಂತಾದರೆ ಆ ಭಾರ ಹೊರುವಷ್ಟು ಶಕ್ತಳಲ್ಲ ನಾನು.

ಅದಕ್ಕೆ ನಾನು ಮೌನಿಯಾಗಿಬಿಟ್ಟೆ. ನೀ ಹೊರಟಾಗ ನಿನ್ನಂತೆಯೇ ನಾನೂ ನಸು ನಕ್ಕು ಸುಮ್ಮನಾಗಿ ನಿನ್ನನ್ನು ಕಳಿಸಿಕೊಟ್ಟೆ. ಪ್ರೀತಿ ನಕ್ಷತ್ರ ಮೀನಾಗದಿದ್ದಿದ್ದಕ್ಕೆ ಸಮಾಧಾನಪಟ್ಟೆ.
ಮೊನ್ನೆನಿನ್ನೊಡನೆ ಫೋನ್ ನಲ್ಲಿ ಮಾತಾಡಿದಾಗ ನಿನಂದೆಯಲ್ಲ ತುಂಬ ಖುಷಿಯಾಗಿದ್ದೀಯ ನೀನು, ಅಂದುಕೊಂಡಿದ್ದೆಲ್ಲ ಸಿಕ್ಕಾಯ್ತು ನಿನಗೆ ಅಂತ. ಖುಷಿಯಾಯ್ತು ನಂಗೆ ನೀ ಖುಷಿಯಾಗಿರುವುದು ಕೇಳಿ. ನನ್ನ ಬಗ್ಗೆ ಚಿಂತೆಯೇ ಬೇಡ. ನೀನಿಲ್ಲದ ಖಾಲಿತನಕ್ಕೆ ದುಃಖ ಪಟ್ಟಿದ್ದಿದೆ ನಿಜ. ಅದರೂ ನನ್ನೊಳಗೆ ನಾ ಇಂದು ಸುಖಿಯೇ. "ಜಗತ್ತು ಎಷ್ಟು ಸುಂದರ ಅಲ್ಲ್ವ " ಅಂತ ನೀನೆ ಹೇಳಿದ್ದೆಯಲ್ಲ. ಅದಕ್ಕೇ ಕಲ್ಪನೆಗಳನ್ನು ಮೀರಿ ವಾಸ್ತವವನ್ನು ನೋಡುವುದೇ ಬದುಕು ಅಂತ ಅರ್ಥಮಾಡಿಕೊಂಡು ಈಗ ಖುಶಿಯಾಗಿದ್ದೀನಿ.

ಕೈಗಂಟಿದ ಕನಸುಗಳನ್ನು ನನಸು ಮಾಡಿಕೊಳ್ಳುವ ಹೊಣೆಯನ್ನೂ ಕಣ್ಣುಗಳು ನನಗೆ ಕೊಟ್ಟಿವೆ. ಅದಕ್ಕೆಲ್ಲ ತಯಾರಾಗಬೇಕು ನಾನು.

ಇಷ್ಟೆಲ್ಲಾ ಯಾಕಾದರೂ ನಾನು ನಿನಗೆ ಹೇಳಿದೆ ಅಂದುಕೊಂಡೆಯ? ಚಿಕ್ಕ ಚಿಕ್ಕ ವಿಷಯಗಳನ್ನೂ ಒಂದೂ ಬಿಡದೇ ನಿನ್ನಲ್ಲಿ ಹೇಳಿಕೊಂಡವಳು ನಾನು. ಇನ್ನು ಇದನ್ನು ಹೇಳದಿದ್ದರೆ ಹೇಗಾದೀತು? ಅದಕ್ಕೇ ಹೇಳಿದ್ದು ಅಷ್ಟೆ.

ಒಲವಿನಿಂದ,
ಹೊಳೆವ ಕಣ್ಣವಳು
ಖುಷಿ.

ಇಷ್ಟು ಬರೆದವಳೇ ಇನ್ನೊಮ್ಮೆ ಬರೆದಿದ್ದನ್ನೆಲ್ಲ ಮೊದಲಿನಿಂದ ಓದಿದಳು ಖುಷಿ. ಸಂಜೆ ತಂಪಿನ ಗಾಳಿಗೆ ಮುಂಗುರುಳು ಹಾರುತ್ತಿತ್ತು. ಅಲ್ಲಿಂದೆದ್ದು ಹೊರಟವಳೇ ಬಚ್ಚಲೊಲೆಯ ಮುಂದೆ ಬಂದು ನಿಂತಳು. ಬಚ್ಚಲೊಲೆಗೆ ಹಾಕಿದ್ದ ಬೆಂಕಿ ಧಗ ಧಗನೆ ಉರಿಯುತ್ತಿತ್ತು.

ಕೈಲಿದ್ದ ಹಾಳೆಯನ್ನು ನಾಲ್ಕು ಚೂರು ಮಾಡಿ ಒಲೆಯೊಳಗೆ ಹಾಕಿದಳು, ಬೆಂಕಿ ಧಗ್ಗೆಂದು 2 ನಿಮಿಷ ಉರಿದು ಬಿಳಿಯ ಹಾಳೆಯ ನಾಲ್ಕೂ ಚೂರುಗಳು ಕರ್ರಗಿನ ಬೂದಿಯಾಯ್ತು . ಅದನ್ನೇ ನೋಡುತ್ತಿದ್ದ ಖುಷಿಯ ಕಣ್ಣುಗಳು ಒಲೆಯ ಬೆಂಕಿಯ ಬೆಳಕಿಗೆ ಹೊಳೆಯುತ್ತಿದ್ದವು.

16 comments:

Sandeepa said...

ಏವನ್! :-)

೨ ನಿಮಿಷ & ಕರ್ರಗಿನ ಬೂದಿ ಕಲ್ಪಿಸಿಕೊಳ್ಳಲು ಸ್ವಲ್ಪ ಕಷ್ಟ ಪಟ್ಟೆ.

ಶ್ಯಾಮಾ said...

:-)

ನಿಂಗೆ ಕಷ್ಟ ಆತಾ! ಛೇ ಹೋಗ್ಲಿ ಬಿಡು. ಯಾವ್ದೋ ಅರ್ಥದಲ್ಲಿ ಹಂಗೆ ಬರ್ದಿದ್ದಾಗಿತ್ತು. :)

ಶ್ಯಾಮಾ said...

ಅಷ್ಟೇ ಅಲ್ಲ. ಕಲ್ಪನೆ ಮಾಡ್ಕ್ಯಳದು ಎಂತನ್ನಾರು ಅಂದ್ರೆ ಸುಮ್ನೆನಾ ?ಕಥೆಲ್ಲಿ ಬೇರೆ ಅದನ್ನೇ ಹೇಳಿದ್ದಿ ನಾನು ;-)

Sandeepa said...

ಹ್ಮ್ಮ್..

ಕಾಗ್ದದ ನಾಲ್ಕು ಚೂರು, ೨ ನಿಮಿಷ ಉರ್ಯಕ್ಕಾರೆ, ಆ ಚೂರು ಅದೆಷ್ಟು ದೊಡ್ಡಕಿರವು.. ಅಥವಾ ಆ ನಿಮಿಷ ಅದೆಷ್ಟು ಶಣ್ಣಕಿರವು ಯೋಚ್ನೆ ಮಾಡ್ತಾ ಇದ್ದಿ.

ಮತ್ತೆ, ನಾನೂ ಸುಮಾರ್ ಕಾಗ್ದನ ಚೂರ್ ಚೂರ್ ಮಾಡಿ ಸುಟ್ಟಿದ್ದಿ. ಕರೀ ಬೂದಿ ಆಗಿದ್ದು ನೆನ್ಪಾಗ್ತಾ ಇಲ್ಲೆ!!

ಶ್ರೀನಿಧಿ.ಡಿ.ಎಸ್ said...

ಚೊಲೋ ಬರದ್ದೆ. ಫುಲ್ ಮೋಡ ತುಂಬಿದ್ ಸಂಜೆ,ಸ್ಟ್ರಾಂಗ್ ಕಾಪಿ ಕುಡ್ದಾಂಗೆ ಆತು!

ತೇಜಸ್ವಿನಿ ಹೆಗಡೆ said...

ಸುಟ್ಟು ಬೂದಿಯಾದ ಆ ಕಾಗ್ದದ ಚೂರಿನ ಬಿಸಿ ಹೊಗೆ ಇಲ್ಲಿವರೆಗೂ ಬಂತು! ಆ ಬೆಂಕಿಯ ಧಗೆ ಖುಶಿನಾ ಎಷ್ಟು ಸುಟ್ಟಿಕ್ಕು ಹೇಳಿ ಅಂದ್ಕತ್ತಾ ಇದ್ದಿ!!

Jagali bhaagavata said...

ಯಾವಾಗ್ ನೋಡಿದ್ರು ದುಃಖಾಂತ್ಯ :-(( ಕಣ್ಣೀರು ಹಾಕಿ ಹಾಕಿ ಸುಸ್ತಾಗೋಯ್ತ್ :-((

ಶ್ಯಾಮಾ said...

sandeepa,

ಸರಿ , ನಂಗೆ ಗೊತಿಲ್ಲೆ . ಎಂತಕ್ಕಂದ್ರೆ ನಾನು ಕಾಗದ ಸುಡದಿಲ್ಲೆ . ಅದಕ್ಕೆ ನಾನು ಹಂಗೆ ಕಲ್ಪನೆ ಮಾಡ್ಕ್ಯಂಡಿ ಅನ್ಸ್ತು . ನಂಗೆ ಬಣ್ಣಗುರುಡು ಆಗಿಕ್ಕು ಆದ್ರೆ ಹೃದಯಗುರುಡು ಅಲ್ಲಾ ನೋಡು ಅದಕ್ಕಾಗಿ :)

ಶ್ಯಾಮಾ said...

ಶ್ರೀನಿಧಿ.ಡಿ.ಎಸ್

ಥ್ಯಾಂಕ್ಸ್ , ನಿನ್ ಕಮೆಂಟ್ ಓದಿ ನಂಗೂ ಹಂಗೆ ಅನ್ಸ್ತು :)

ತೇಜಸ್ವಿನಿ ,

ಅಲ್ದಾ ! ಸುಟ್ಟಿದ್ದು ಕಾಗದ ಆದರು ಅದರ ಜೊತೆ ಅವಳ ಮನಸ್ಸೂ ಇತ್ತೇನಾ ಅಲ್ದಾ ?
ಕಾಮೆಂಟಿಗೆ ಧನ್ಯವಾದ .

ಭಾಗವತರೆ

ಇದನ್ನ ದುಃಖಾಂತ್ಯ ಅಂತಾನೆ ಯಾಕೆ ಅನ್ಕೊಬೇಕು ? ಅವಳು ಏನೋ ಒಂದು ಯೋಚಿಸಿ ಖುಷಿಯಾಗಿರ್ಬೇಕು ಅಂತ
ನಿರ್ಧರಿಸಿದ ಮೇಲೆ ಅದೇ ಸುಖಾಂತ್ಯವೇ. ಪ್ರೀತಿ ಇಲ್ಲದವನ / ಪ್ರೀತಿಯನ್ನು express ಮಾಡಕ್ಕೆ ಬರದೆ ಇರೋವನ ಜೊತೆ ಇರೋದು ದುಃಖಾಂತ್ಯ ಅಂತ ನನ್ನ ಭಾವನೆ .

ಶಾಂತಲಾ ಭಂಡಿ (ಸನ್ನಿಧಿ) said...
This comment has been removed by the author.
ಶಾಂತಲಾ ಭಂಡಿ (ಸನ್ನಿಧಿ) said...

ಶ್ಯಾಮು...
ತುಂಬ ಚೆನ್ನಾಗಿದ್ದು.
ಕಲ್ಪನೆಗಳ ಪೂರ.
ನಕ್ಷತ್ರ ಮೀನು ಮೊದಲ ಬಾರಿಗೆ ನೋಡ್ದಾಗ ನಂಗೂ ಬೇಜಾರಾಗಿತ್ತು.(ಅದರ ಸಾವಿರಗಟ್ಲೆ ಕಾಲು ನೋಡಿ ಬೇಜಾರಾಗ್ಬುಟ್ಟಿತ್ತು.)
ಅದರ ಬಣ್ಣನೂ ಇಷ್ಟ ಆಗ್ಲಿಲ್ಲೆ. ಅದನ್ನ ಮುಟ್ಟತನಕನೇ ಅದ್ರ ಒಂದು ಪಾರ್ಟ್ ಮುರ್ದ್ ಬೇರೆ ಹೋತು, ಬೇಜಾರಾಗಿ ಅಷ್ಟ್ರ ಮೇಲೆ ನಕ್ಷತ್ರಮೀನು ನೋಡ ಆಸೆನೆ ಬಿಟ್ಬಿಟಿ.

ಶ್ಯಾಮಾ said...

:-) :-)
ಶಾಂತಲಕ್ಕ ಥಾಂಕ್ಸ್

ಈ ನಕ್ಷತ್ರ ಮೀನುಗಳ ಕಲ್ಪನೆ ಬಹಳ ವಿಚಿತ್ರವಾಗಿ ನನ್ನ ಮನದಲ್ಲಿ ಹುಟ್ಟಿದ್ದು. ಬರವಣಿಗೆ ನಂಗಿಷ್ಟ. ನನ್ನ ಬರಹಗಳೆಂದರೆ ನಂಗೆ ಅದೇನೋ ಪ್ರೀತಿ. ಒಮ್ಮೊಮ್ಮೆ ಬರವಣಿಗೆ ಬಗ್ಗೆ ನಂಗೆ ಬೇಜಾರಾಗ್ತು. ಆದ್ರೆ ಬರಹಗಳ ಬಗ್ಗೆ ಯವತ್ತೂ ಇಲ್ಲೆ. ಬರಹಗಳ ಬಗ್ಗೆಯ ನನ್ನ ಪೀತಿಯೇ ಅಂತದ್ದು. ನಾನು ಬರೆದಿದ್ದು ನಾನು ಹತ್ತು ಸಲ ಓದಿದ್ದಾಗ್ಲೂ ಅದು ಒಂದೇ ಅರ್ಥ ಕೊಡವು. ಹಂಗೇ ಬರ್ಯಕ್ಕೆ ನಂಗಿಷ್ಟ. ಆದ್ರೆ ಓದುಗನಲ್ಲೂ ಅದೇ ಭಾವನೆ ಹುಟ್ಟವು ಹೇಳೇನು ಇಲ್ಲೆ ಹೇಳದು ಒಂದೊಂದು ಸಲ ಗೊತ್ತಾಗ್ತು.
ಆದ್ರೂ ನನ್ನ ಮನಸ್ಸಲ್ಲಿ ಹುಟ್ಟಿದ ಕಲ್ಪನೆಯ ಬಣ್ಣ ನಿನ್ನ ಮನಸಾಲ್ಲೂ ಹುಟ್ಟಿದ್ದು ಖುಷಿ ಕೊಡ್ತು.

ಮತ್ತೊಮ್ಮೆ ಥ್ಯಾಂಕ್ಸ್

sunaath said...

ಭಾವನೆಗಳ ಹೊಳೆಯಲ್ಲಿ ತೇಲುತ್ತಿರುವಾಗ, ಒಮ್ಮೆಲೆ ಅದು ಜಲಪಾತವಾದರೆ ಎಂತಹ ಅನುಭವ ಆದೀತು, ಹೇಳಿ. ನಕ್ಷತ್ರ ಮೀನು ಸೊಗಸಾದ, ಆದರೆ ದುಃಖಾಂತವಾದ ಭಾವಲಹರಿ.

ಶ್ಯಾಮಾ said...

dhanyavaadagaLu sunaath

Aditya Prasad said...

nice one.:)
But my sympathy s towards nakshatra
meenu..
It never told any one to have expectations on it.. And no one s loving it because it is not up to their expectation... paapa :(
It may also apply for KUSHI's boy..

Sushrutha Dodderi said...

ಶ್ಯಾಮಾ,

ನಮಸ್ಕಾರ. ಹೇಗಿದ್ದೀ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು


ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ