Wednesday, June 20, 2007

ಮರಳುವುದಾದರೂ ಹೇಗೆ ?


ಏನೇನಿರಲಿಲ್ಲ ನನ್ನ ಪುಟ್ಟದೊಂದು ಲೋಕದಲ್ಲಿ
ಆದರೂ ಅದು ಮತ್ತಿನ್ನೇನನ್ನು ಹುಡುಕಲೆಂದು ಹೊರಟು ಬಿಟ್ಟೆನೋ ಗೊತ್ತಿಲ್ಲ ನನ್ನ ಪುಟ್ಟ ಲೋಕದಿಂದ ನಾನು ....

ಮೊದ ಮೊದಲು ಅಲ್ಲಿಂದ ಹೊರ ಬಂದಾಗ ಎಲ್ಲ ಬಹು ಸುಂದರವಾಗೇ ಕಾಣುತ್ತಿತ್ತು ..
ಹೊಸ ಲೋಕವೇ ಬಹು ಚೆಂದ ಅನ್ನಿಸುತ್ತಿತ್ತು..
ಕಂಡು ಕೇಳರಿಯದ ಹೊಸ ಲೋಕವೇ ನನ್ನದೆಂಬಂತೆ ನಾ ನಡೆಯತೊಡಗಿದ್ದೆ, ಗೊತ್ತಿಲ್ಲದಿದ್ದರೂ ಗೊತ್ತು ಗುರಿಗಳು ...

ನನ್ನ ಪುಟ್ಟ ಲೋಕವನ್ನು ಮರೆತೇಬಿಟ್ಟಿದ್ದೆ
ಒಂದೊಂದು ಹೆಜ್ಜೆಯಲ್ಲೂ ಗೆಲುವ ಕಂಡಾಗ..
ಎಲ್ಲ ಸಾಧಿಸಿಬಿಟ್ಟೆನೆಂದು ನಗುತ್ತಿದ್ದೆ..
ಹಾದಿಯಲ್ಲಿ ಸಾಗಿಬರುವಾಗ ಎಷ್ಟೋ ಸಲ ಮುಗ್ಗರಿಸಿದ್ದೇನೆ,
ಎಷ್ಟೋ ಸಲ ಎಡವಿ ಬಿದ್ದಿದ್ದೇನೆ,
ಆದರೂ ಏನೆಲ್ಲ ಕಲಿತಿದ್ದೇನೆ ...
ಏನೆಲ್ಲ ಪಡೆದುಕೊಂಡೆನೋ ಅಷ್ಟೇ ಕಳೆದುಕೊಂಡಿದ್ದೇನೆ ..

ಇನ್ನೆಷ್ಟೋ ದೂರ ಸಾಗಿದಾಗ ಒಂದೊಂದೇ ಅರಿವಾಗತೊಡಗಿತು,
ನನ್ನ ಆ ಪುಟ್ಟ ಲೋಕದಲ್ಲಿದ್ದ ಚಿಕ್ಕ ಚಿಕ್ಕ ಖುಶಿಗಳು, ಆ ಸಂತೃಪ್ತಿ ಇಲ್ಲಿಲ್ಲವೆಂದು

ಹೊಸ ಲೋಕ ಬೇಸರ ತರಿಸಿತ್ತು,
ಇಷ್ಟು ದೂರ ಸಾಗಿ ಬಂದ ಮೇಲೆ..

ಇವತ್ತೇಕೋ ಹಳೆ ನೆನಪುಗಳ ಗಾಳಿ ರೋಯ್ಯನೆ ಬೀಸುತ್ತಿದೆ
ನೆನಪಿನ ಗಾಳಿಯ ರಭಸವೆಷ್ಟಿದೆಯೆಂದರೆ ಮುಂದೆ ಹೆಜ್ಜೆ ಕಿತ್ತು ಮುಂದಿಡಲು ಆಗುತ್ತಿಲ್ಲ
ಒಮ್ಮೆಲೇ ಯೋಚಿಸುತ್ತೇನೆ ಮರಳಿ ಹೋಗಿ ಬಿಡಲೇ ನನ್ನ ಪುಟ್ಟ ಲೋಕಕ್ಕೆ ಮತ್ತೊಮ್ಮೆ
ಸೇರಿಕೊಂಡು ಬಿಡಲೇ ಬೆಚ್ಚನೆಯ ಗೂಡನ್ನು ಇನ್ನೊಮ್ಮೆ,

ಹೇಗೂ ನಡೆದು ಬಂದ ದಾರಿಯಲ್ಲಿ ಹೆಜ್ಜೆ ಗುರುತುಗಳಿವೆಯಲ್ಲ
ದಾರಿ ಹುಡುಕುವುದೇನೋ ಕಷ್ಟವಿಲ್ಲ
ಹೆಜ್ಜೆ
ಗುರುತುಗಳ ಜಾಡಿನಲ್ಲೇ ನಡೆಯಬಹುದಲ್ಲ,
ಹಿಂತಿರುಗಿ ನೋಡಿದರೆ ಏನಿದೆ ಅಲ್ಲಿ ,
ಉಸುಕಿನ ನೆಲದಲ್ಲಿ,
ನೂರು ನೂರಾರು ಗುರುತಿಸಲಾಗದ ಹೆಜ್ಜೆಗಳು,
ಅಲೆಗಳ ಒಡಲಿನಲ್ಲಿ ಅಳಿಸಿಹೋದ ಇನ್ನೆಷ್ಟೋ ಹೆಜ್ಜೆಗಳು
ನನ್ನದೇ ಹೆಜ್ಜೆ ಗುರುತು ನನಗೆ ಕಾಣುತ್ತಿಲ್ಲ...
ಮರಳುವುದಾದರೂ ಹೇಗೆ ನಾನು ನನ್ನ ಆ ಪುಟ್ಟ ಲೋಕಕ್ಕೆ?
ನನ್ನಾಸೆಯನ್ನು ಅಂಗಯ್ಯಲ್ಲಿಟ್ಟು ಸುಮ್ಮನೇ ಗಾಳಿಗೆ ಊದಿಬಿಟ್ಟೆ...

Friday, June 15, 2007

ರಂಗೇರುವಾಗ ಮದರಂಗಿ ಮನದಲ್ಲಿ ಏನಿಂಥ ತಳಮಳ

ಏಳೆಂಟು ಹುಡುಗಿಯರ ಗುಂಪು.. ಅಲ್ಲೆಲ್ಲ್ಲ ಅವರ ನಗಯೆ ಕಲರವ.. ಮಧ್ಯದಲ್ಲಿ ಅವಳು..ಇನ್ನೆರಡು ದಿನ ಕಳೆದರೆ ಅವಳ ಮದುವೆ ..ತನ್ನ ಕೈಗಳ ಮೇಲೆ ಬಿಡಿಸಿದ ಮದರಂಗಿಯ ಚಿತ್ತಾರವನ್ನೇ ನೋಡುತ್ತಿದ್ದಳು. ಮದರಂಗಿ ಅಂದರೆ ಅವಳಿಗೆ ತುಂಬಾ ಇಷ್ಟ.. ಮದರಂಗಿಯ ರಂಗು ಅಂದ್ರೆ ಅವಳಿಗೆ ಎಲ್ಲಿಲ್ಲದ ಹುಚ್ಚು.. ಅದು ಸೂಸುವ ಪರಿಮಳ ಅವಳನ್ನು ಯಾವುದೋ ಲೋಕಕ್ಕೆ ಕರೆದೊಯ್ಯುತ್ತಿತ್ತು..
ಚಿತ್ತಾರವನ್ನೇ ನೋಡುತ್ತಿದ್ದ ಅವಳು ಯೋಚಿಸುತ್ತಿದ್ದಳು.. "ಪ್ರತಿ ಸಲ ಕೈ ಮೇಲೆ ರಂಗು ಹಾಕಿಸಿಕೊಳ್ಳುವಾಗಲೂ ಎಷ್ಟು ಉತ್ಸುಕಳಾಗಿರುತ್ತಿದ್ದೆ ನಾನು.. ಒಂದೊಂದು ಎಳೆ ಕೈ ಮೇಲೆ ಬಿದ್ದಾಗಲೂ ಅದನ್ನು ನೋಡುವುದೇ ಏನೋ ಖುಷಿ.. ಆದರೆ ಇವತ್ತು ಯಾಕೆ ಹಾಗೆ ಅನಿಸುತ್ತಿಲ್ಲ.. ಎಳೆಗಳಲ್ಲಿ ಏನೂ ಜೀವವೇ ಇಲ್ಲ ಅನ್ನಿಸುತ್ತಿದೆಯಲ್ಲ.. ರಂಗು ಇಂದು ಏಕೆ ನನಗೆ ಹುಚ್ಚು ಹಿಡಿಸುತ್ತಿಲ್ಲ... " ಮದರಂಗಿಯ ಪರಿಮಳವೆಂದರೆ ಇಷ್ಟಪಡುತ್ತಿದ್ದ ಅವಳಿಗೆ ಇಂದೇಕೋ ಪರಿಮಳ ಹಿಂಸೆಯೆನಿಸಿತು.. ಹೊಟ್ಟೆಯಲ್ಲೇನೋ ವಿಚಿತ್ರ ಸಂಕಟ...


ಗೆಳತಿಯರೆಲ್ಲ ನಗುತ್ತಾ ಮಾತನಾಡುತ್ತಾ ಇವಳನ್ನು ಚೇಡಿಸುತ್ತಿದ್ದರು.. ಇವಳು ಮಾತ್ರ ಒಳಗಿನ ಭಾವನೆಗಳನ್ನು ಮುಚ್ಚಿಟ್ಟು ಕಷ್ಟಪಟ್ಟು ನಗುತ್ತಿದ್ದಳು... ಆಚೀಚೆಯೆಲ್ಲ ಕಣ್ಣಾಡಿಸಿದಳು. ಮನೆ ತುಂಬಾ ಜನ. ಎಲ್ಲರೂ ಅದೆಷ್ಟು ಸಂಭ್ರಮದಿಂದ ಓಡಾಡುತ್ತಿದ್ದಾರೆ.. ನಂಗೆ ಮಾತ್ರ ಯಾಕೆ ಹೀಗಾಗುತ್ತಿದೆ? ಅವಳು ಯೋಚಿಸಿದಳು. ಮೊನ್ನೆ ತನಕ ಸರಿಯಾಗೇ ಇದ್ದೇನಲ್ಲ. ಖುಷಿಯಾಗೇ ಇದ್ದೆ. ಬೇಜಾರಾಗುವಂಥ ಯಾವುದೇ ಘಟನೆ ನಡೆದೇ ಇಲ್ಲ.. ತಾನು ಮದುವೆಯಾಗುತ್ತಿರುವವನೂ ಒಳ್ಳೆಯವನೆ. ಎಲ್ಲ ಇಷ್ಟವಾದ ಮೇಲೆಯೇ ತಾನೂ ಹೂಂ ಅಂದಿದ್ದು. ಈಗ ಒಮ್ಮೆಲೇ ಯಾಕೆ ಹೀಗನ್ನಿಸುತ್ತಿದ್ದೆ. ಏನೂ ಬೇಡ ಏನೂ ಬೇಡ ಅನ್ನಿಸುತ್ತಿದೆಯಲ್ಲ.


ಮೊನ್ನೆ ಮನೆಗೆ ಒಬ್ಬೊಬ್ಬರಾಗಿ ನೆಂಟರಿಷ್ಟರು ಬರುತ್ತಿದ್ದ ಹಾಗೆ ತನ್ನಲ್ಲಿ ಏನೋ ಹೇಳಲಾರದ ಭಯ, ದುಃಖ ಆವರಿಸಿಕೊಳ್ಳುತ್ತಿದೆ.. ಏನು ಮಾಡಬೇಕೋ ತೊಚುತ್ತಿಲ್ಲ... ಗಟ್ಟಿಯಾಗಿ ಅಳಬೇಕೆನ್ನಿಸಿತು ಅವಳಿಗೆ.. ಛೇ ಹಾಗೆ ಮಾಡಿದರೆ ಬಂದವರೆಲ್ಲ ಏನಂದುಕೊಂಡಾರು.. ಸುಮ್ಮನಾದಳು.. ಜೋರಾದ ನಗುವಿನ ಸದ್ದಿಗೆ ಹಿಂತಿರುಗಿ ನೋಡಿದಳು.. ಅವಳ ತಂಗಿ ಎಲ್ಲರನ್ನು ನಗಿಸುತ್ತಾ ಕೀಟಲೆ ಮಾಡುತ್ತಾ ಓಡಾಡುತ್ತಿದ್ದಳು .. ನಾನೂ ಹೀಗೆ ಮನೆಯ ಶುಭಕಾರ್ಯಗಳಲ್ಲಿ ನಗು ನಗುತ್ತಾ ಓಡಾಡಿಕೊಂಡಿರುತ್ತಿದ್ದೆ ಅಲ್ಲವ? ಅಂದುಕೊಂಡಳು.. ತಂಗಿಯನ್ನು ನೋಡಿ ಅಸೂಯೆ ಆಯಿತು ಅವಳಿಗೆ..
ಅವಳ ಪ್ರೀತಿಯ ಚಿಕ್ಕಮ್ಮ ಕುಳಿತಲ್ಲೇ ಕಣ್ಣು ಸನ್ನೆ ಮಾಡಿ ನಗಿಸುತ್ತಿದ್ದರು..ಯಾವಾಗಲು ಅವರ ಹೆಗಲ ಮೇಲೆ ಕೈ ಹಾಕಿ ಕೂತು ಹರಟೆ ಹೊಡೆಯುತ್ತಿದ್ದಳು. ಇವತ್ತೇಕೋ ಏನೂ ಬೇಡವಾಗಿತ್ತು ಅವಳಿಗೆ...

ಬೇಡದ ಯೋಚನೆಯ ಝರಿಯಲ್ಲಿ ತೇಲಿ ಹೋಗಿದ್ದಳು ಅವಳು... ಎರಡೂ ಕೈ ಗಳನ್ನು ಚಾಚಿ ಕುಳಿತು ಅವಳಿಗೆ ಕೈ ನೋಯುತ್ತಿತ್ತು.. ಆದರೂ ಹಾಗೆ ಕೂತಿದ್ದಳು.. "ಅಕ್ಕ ಫೋನ್" ತಂಗಿಯ ಧ್ವನಿಗೆ ಯೋಚನೆಯ ಲಹರಿಯಿಂದ ಹೊರ ಬಂದಳು.. ಹೌದು ಅವನ ಫೋನ್.. ಯಾಕೋ ಮಾತಾಡುವ ಮನಸ್ಸಾಗಲಿಲ್ಲ. "ಎರಡೂ ಕೈಗಳು ಬ್ಯೂಸಿ ಆಗಿವೆ.. ನಾನು ಆಮೇಲೆ ಮಾತಾಡ್‌ತೀನಿ ಅಂತ ನೀನೆ ಹೇಳು" ಅಂದಳು.. ಅವಳು ಹೋದ ಕಡೆಯೇ ನೋಡಿದಳು. ಏನಾಗಿದೆ ತನಗೆ ಅಂದುಕೊಂಡಳು. ದಿನಾಲೂ ಅವನ ಒಂದು ಫೋನ್ ಕಾಲ್ ಗಾಗಿ ಎಷ್ಟು ಕಾಯುತ್ತಿದ್ದೆ. ಫೋನ್ ಮಾಡುವುದು ಒಂದು ನಿಮಿಷ ತಡವಾದರೂ ಬೇಜಾರಾಗ್ತಿದ್ದೆ. ಇವತ್ತು ಯಾಕೆ ಹಾಗೆ ಹೇಳಿದೆ.. ಛೇ ಹಾಗೆ ಹೇಳಬಾರದಿತ್ತು. ಅವನಿಗೆ ಬೇಜಾರಾಯ್ತೇನೋ. ಅಂದುಕೊಂಡಳು.


ಮತ್ತೆ ಮದರಂಗಿಯ ರಂಗೇರುತ್ತಿದ್ದ ಕೈಗಳತ್ತ ನೋಡಿದಳು. ಎರಡೂ ಕೈಗಳು ಚಿತ್ತಾರಗಳಿಂದ ತುಂಬಿಹೋಗಿದ್ದವು. ಪರಿಮಳ ಮತ್ತೆ ಅವಳಿಗೆ ಯಾಕೋ ಇಷ್ಟವಾಗಲಿಲ್ಲ. ಹೊಟ್ಟೆಯೆಲ್ಲ ತೊಳೆಸಿದಂತಾಯಿತು. ಇನ್ನೂ ಇಲ್ಲಿ ಕೂರಲು ಸಾಧ್ಯವಿಲ್ಲ ಅನಿಸಿತು.. " ತುಂಬಾ ಸೆಖೆ ಯಾಗುತ್ತಿದೆ .ಕೂತು ಕೂತು ಬೇಜಾರಾಯಿತು. ಒಮ್ಮೆ ಓಡಾಡಿಕೊಂಡು ಎಲ್ಲರನ್ನೂ ಮಾತಾಡಿಸಿಕೊಂಡು ಬರುತ್ತೇನೆ ನೀವೆಲ್ಲ ಮಾತಡುತ್ತಾ ಇರಿ" ಅಂತ ಎದ್ದು ಹೊರಟಳು. ಅಡಿಗೆ ಮನೆಯತ್ತ ಹೋಗಿ ಬಾಗಿಲ ಬಳಿ ನಿಂತು ಕೆಲಸದಲ್ಲಿ ಮಗ್ನಳಾಗಿದ್ದ ಅಮ್ಮನನ್ನು ನೋಡಿದಳು.. "ಏನೇ ಕುಡಿಯೋದಕ್ಕೆ ಏನಾದರೂ ಬೇಕಾ.. ಎಷ್ಟು ದಣಿದಿದ್ದೀಯನಿನ್ನ ಮುಖ ನೋಡು.. ನಾಳೆ ಮದುವೆಯಾಗೋ ಹುಡುಗಿ ನೀನು" ಅಂದರು ಅಮ್ಮ. "ಬೇಡ ಅಮ್ಮ ಏನೂ ಬೇಡ" ಅಂದು ಅಲ್ಲೇ ನಿಂತಳು. ಅಮ್ಮನಿಗೇನಾಗಿದೆ.. ಅವತ್ತಿಂದ ನೋಡ್ತಾ ಇದ್ದೀನಿ ನನ್ನನ್ನ ಬೇರೆ ತರವೇ ನೋಡುತ್ತಿದ್ದಾಳಲ್ಲ. ನಂಗಿಷ್ಟವಾಗಿದ್ದೆಲ್ಲ ನಾನು ಹೇಳದೆಯೇ ಮಾಡಿಕೊಡುವುದು, ಬೇಡ ಬೇಡವೆಂದರೂ ಉಪಚರಿಸುವುದು.. ಯಾಕೆ ಹೀಗೆ? ನಾನೇನು ಅತಿಥಿಯಾ? ಅಥವಾ ಹರಕೆಯ ಕುರಿಯೇ?" ಛೇ ಎಂಥ ಕೆಟ್ಟ ಆಲೋಚನೆ ಅಂದುಕೊಂಡು ಅಲ್ಲಿ ನಿಲ್ಲಲಾಗದೇ ಅಲ್ಲಿಂದ ಹೊರ ನಡೆದಳು.

ಅಂಗಳದತ್ತ ಹೋಗುತ್ತಿದ್ದ ಅವಳನ್ನು ನೋಡಿದವರು ಯಾರೋ
"
ಮದುಮಗಳನ್ನು ಯಾಕೆ ಹಾಗೆ ಒಬ್ಬಳೇ ಇರಲು ಬಿಡ್ತೀರೇ .. ಹಾಗೆಲ್ಲ ಒಬ್ಬಳೇ ಇದ್ರೆ ಅವಳಿಗೆ ಬೇಡದ ಯೋಚನೆಗಳು ಜಾಸ್ತಿ ಬರುತ್ವೆ ಅವಳ ಜೊತೆ ಯಾರಾದ್ರೂ ಇರಿ" ಅವರ ಧ್ವನಿ ಅಲ್ಲಿ ಹರಟುತ್ತಿದ್ದ ಹುಡುಗಿಯರ ಕಿವಿಗೆ ಬೀಳುವುದಾದರೂ ಹೇಗೆ?

ಅವಳು ಹೊರ ಬಂದು ಮನೆ ಮುಂದಿನ ಕಟ್ಟೆ ಮೇಲೆ ನಿಂತಳು.. ಅಂಗಳದಲ್ಲೆಲ್ಲ ಚಪ್ಪರ ಹಾಕಲು ಜನ ಓಡಾಡುತ್ತಿದ್ದರು.. ಯಾರಿಗೂ ಬಿಡುವೇ ಇಲ್ಲ.. ಅಪ್ಪ ಅದೆಷ್ಟು ಓಡಾಡುತ್ತಿದ್ದಾರೆ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ.. ಅಲ್ಲಿ ಹಾಗೆ ಮಾಡಿ ಈಕಡೆ ಇದು ಸರಿ ಇಲ್ಲ.. ಅಬ್ಬಾ ಎಷ್ಟು ಟೆನ್ಷನ್ ಮಾಡಿಕೊಂಡಿದ್ದಾರೆ ಅನ್ನಿಸಿತು.. ನಿಂತಿದ್ದ ಅವಳೆಡೆಗೆ ದೃಷ್ಟಿ ಹಾಯಿಸಿ ಅಪ್ಪ ನಕ್ಕರು.. ಇವಳು ನೋಡುತ್ತಲೇ ಇದ್ದಳು...ಇದೆ ಅಂಗಳದಲ್ಲಲ್ಲವೇ ತಾನು ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ನಡೆಯಲು ಕಲಿತಿದ್ದು, ಇದೇ ಅಂಗಳದಲ್ಲಲ್ಲೇವೆ ತಾನು ಆಡಿ ಬೆಳೆದಿದ್ದು.. ಇಲ್ಲೇ ಅಲ್ಲವ ದಿನಾ ಬೆಳಗ್ಗೆ ಎದ್ದು ತಾನು ಚುಕ್ಕೆ ಇಟ್ಟು ರಂಗೋಲಿ ಹಾಕುತ್ತಿದ್ದಿದ್ದು, ಇನ್ನೆಲ್ಲ ಅವು ಬರೀ ನೆನಪುಗಳು ಅಂದುಕೊಂಡಳು , ಅವಳು ನೆಟ್ಟಿದ್ದ ಮಲ್ಲಿಗೆ ಗಿಡ ಮತ್ತು ಗುಲಾಬಿ ಗಿಡದಲ್ಲಿ ಹೂಗಳರಳಿ ನಗುತ್ತಿದ್ದವು. ದಿನವೂ ಅವುಗಳಿಗೆ ನೀರು ಹಾಕಿ ಎಲೆಗಳನ್ನು ಸವರದಿದ್ದರೆ ತನಗೆ ಸಮಾಧಾನವೇ ಇರುತ್ತಿರಲಿಲ್ಲ, ಇನ್ನು ಮೇಲೆ ಹೇಗೆ ಇದೆಲ್ಲ ಅನ್ನಿಸಿತು ಅವಳಿಗೆ..


ಓಡಾಡುತ್ತಿದ್ದ ಅಪ್ಪನನ್ನು ನೋಡಿದಳು ,ಆ ಕ್ಷಣ ಅಪ್ಪ ಎಷ್ಟು ಕೆಟ್ಟವನು ಅನ್ನಿಸಿಬಿಡ್ತು. ಎಷ್ಟು ಆರಾಮಾಗಿ ಇದ್ದೇ ನಾನು. ಅಪ್ಪನಿಗೆ ಅಂತ ಏನು ಅರ್ಜೆಂಟ್ ಇತ್ತು ನನ್ನ ಮದುವೆ ಮಾಡಿ ದೂರ ಕಳಿಸೋದು. ಅಷ್ಟು ಬೇಜಾರಾಗಿಬಿಟ್ಟೆನ ನಾನು ಇಲ್ಲಿ. ಮರು ಕ್ಷಣವೇ ಅಂದುಕೊಂಡಳು ಛೇ ಹೀಗೇಕೆ ಯೋಚಿಸುತ್ತಿದ್ದೇನೆ ಅಪ್ಪಂದೇನು ತಪ್ಪಿದೆ ಇದ್ರಲ್ಲಿ ನಂಗೆ ಇಷ್ಟು ಬೇಗ ಮದುವೆ ಬೇಡ ಎಂದಾಗ ಅಪ್ಪ ಆಗಲಿ ಅಂತ ಸುಮ್ಮನಿದ್ದಿದ್ದರಲ್ಲವೇ. ಆದರೆ ಯಾವುದೋ ಒಳ್ಳೇ ಸಂಬಂಧ ಹೇಗೋ ಹುಡುಕಿಕೊಂಡು ಬಂದು ಹುಡುಗನನ್ನು ನೋಡಿಯಾದ ಮೇಲೆ ಅಪ್ಪ ತನ್ನನ್ನು ಕೇಳಿದ್ದರಲ್ಲವೇ. ಇದರಲ್ಲಿ ಒತ್ತಾಯವಿಲ್ಲ ಮಗಳೇ. ನೀನು ಹೂಂ ಅಂದರಷ್ಟೇ ಮಾತ್ರ ಮುಂದುವರೆಯುವುದು ಅಂತ ಆಗ ನಾನೇ ಅಲ್ಲವೇ ಸಮ್ಮತಿ ಸೂಚಿಸಿದ್ದು.
ಒಂದು ಭಾರವಾದ ನಿಟ್ಟುಸಿರೊಂದನ್ನು ಹೊರದಬ್ಬಿದಳು. ಮನಸ್ಸೆಲ್ಲ ಭಾರವಾಗಿತ್ತು, ಮನೆ, ಅಂಗಳ, ಹೂವಿನ ಗಿಡಗಳು , ಅಪ್ಪ ಅಮ್ಮ ತಂಗಿ, ಗೆಳತಿಯರು ಎಲ್ಲರನ್ನೂ ಬಿಟ್ಟು ತನ್ನದಲ್ಲದ ಯಾವುದೋ ಮನೆಗೆ ಹೋಗಿ ಅದೇ ತನ್ನ ಮನೆಯೆಂದೊಕೊಂಡು ಬಾಳುವುದು ಸಾಧ್ಯವಾ? ಯೋಚಿಸಿದಳು ಅವಳು.

ಮದುವೆಯ ತಯಾರಿ, ಗಡಿಬಿಡಿಯಲ್ಲೂ ಅಪ್ಪನಿಗೆ ಮಗಳ ಮನಸ್ಸನ್ನು ಅರಿಯೋದು ಕಷ್ಟವಾ?.. ಸುಮಾರು ಹೊತ್ತಿಂದ ಅಲ್ಲೇ ನಿಂತಿದ್ದ ಮಗಳತ್ತ ಬಂದು.. "ಯಾಕೆ ಮಗಳೆ ಹೀಗೆ ನಿಂತಿದ್ದೀಯಾ ಇಲ್ಲಿ " ಅಂತ ಗಲ್ಲ ತಟ್ಟಿದಾಗ ಅವಳ ಕಣ್ಣಿಂದ ಹನಿಗಳು ಉದುರಲು ಶುರುವಾಗಿಹೋಯಿತು. "ಅಪ್ಪ ನಾನು ನಿಮ್ಮನ್ನೆಲ್ಲ ಬಿಟ್ಟು ಎಲ್ಲೂ ಹೋಗೋದಿಲ್ಲ ಅಪ್ಪ. ನಂಗೆ ತುಂಬಾ ಬೇಜಾರಾಗ್ತಿದೆ. ಅಪ್ಪ.." ಮಗಳ ಕಣ್ಣಲ್ಲಿ ಹನಿ ಜಾರಿದರೆ ಅಪ್ಪನ ಮನಸ್ಸು ಕರಗದಿರುವುದೇ? ಅಪ್ಪ ಅವಳ ಎರಡೂ ಕೆನ್ನೆಗಳ ಮೇಲೆ ತಮ್ಮ ಕೈಗಳನ್ನಿಡುತ್ತಾ " ಪುಟ್ಟಾ ನಂಗೆ ಅರ್ಥವಾಗುತ್ತಮ್ಮ.. ನಿನ್ನ ಕಳಿಸಿಕೊಡಬೇಕೆಂದು ನಮಗೂ ಅಷ್ಟೇ ನೋವಾಗ್ತಿದೆಯೋ.. ಆದರೆ ಇದೆಲ್ಲ ಜೀವನದ ಒಂದು ಭಾಗ. ನೀನು ಮದುವೆಯಾಗಿ ಇಲ್ಲಿಂದ ಹೋಗುವೆಯೆಂಬ ಮಾತ್ರಕ್ಕೇ ನಮೆಲ್ಲ ಸಂಬಂಧಗಳೂ ಮುಗಿದುಹೋಗುವುದಿಲ್ಲ. ನಮ್ಮೆಲ್ಲರ ಪ್ರೀತಿ ಯಾವಾಗಲೂ ಹೀಗೇ ಇರುವುದು. ಈ ಮನೆ, ಈ ಅಂಗಳ, ಈ ಗಿಡಗಳು ಎಲ್ಲವಕ್ಕೂ ಯಾವತ್ತೂ ನೀನು ಹೊರಗಿನವಳಾಗುವುದಿಲ್ಲ.. ನೀನು ಯಾವತ್ತಿದ್ದರೂ ನಮ್ಮೆಲ್ಲರ ಪ್ರೀತಿಯ ಪುಟ್ಟನೇ. ಎಲ್ಲ ಸರಿ ಹೋಗುತ್ತೆ. ಸುಮ್ಮನಾಗೂ ಪುಟ್ಟಾ. ನೀನು ಅಳುತ್ತಿದರೆ ಏನು ಚಂದ. ಯಾವಾಗಲೂ ನಗು ನಗುತ್ತಾ ಇರಬೇಕಮ್ಮ ನೀನು" .

ಅಪ್ಪನ ಮಾತುಗಳನ್ನು ಕೇಳಿದ ಅವಳಂದಳು
" ಅಪ್ಪ ಒಂದೇ ಒಂದು ಸಲ ನಿನ್ನ ಹೆಗಲ ಮೇಲೆ ತಲೆಯಿಟ್ಟು ಮನಸೋ ಇಚ್ಛೆ ಅತ್ತು ಬಿಡುತ್ತೀನಪ್ಪ . ನಂಗೆ ಆವಾಗ್ಲೇ ಸಮಾಧಾನ". ಅವಳು ತನ್ನ ತಲೆಯನ್ನು ಅಪ್ಪನ ಹೆಗಲ ಮೇಲಿತ್ತು ಅಪ್ಪನ ಕೈ ಮೇಲೆ ಕೈ ಇಟ್ಟಳು.
ಅಷ್ಟು ಹೊತ್ತು ತಡೆ ಹಿಡಿದಿದ್ದ ದುಃಖವೆಲ್ಲ ಉಮ್ಮಳಿಸಿ ಬಂದು ಬಿಕ್ಕಿ ಬಿಕ್ಕಿ ಅಳುತಿದ್ದಳು. ಹಾಡೊಂದು ತೇಲಿ ಬರುತ್ತಿತ್ತು "ನಮ್ಮ ಮನೆಯಂಗಳದಿ ಅರಳಿದ ಹೂವೊಂದನು....." ಅವಳ ತಲೆ ನೇವರಿಸುತ್ತಿದ್ದ ಅಪ್ಪನ ಕಣ್ಣುಗಳಿಂದ ಹನಿಗಳು ಒಂದೊಂದಾಗಿ ಜಾರುತ್ತಿದ್ದವು...