Sunday, August 31, 2008

ಹನಿಗಳು

ನಿದ್ದೆ ಬಾರದ ರಾತ್ರಿ
ತೆರೆದ ಕಂಗಳು ಅಂದು
ಕಂಡಿದ್ದ ಕನಸುಗಳು
ಇಂದು ರಾತ್ರಿಯಾಗಸದಲ್ಲಿ
ಹೊಳೆಯುತ್ತಿವೆ ತಾರೆಗಳಾಗಿ.

******

ನಕ್ಷತ್ರಗಳನ್ನು ಎಣಿಸಿ ಎಣಿಸಿ
ಸೋತ ಕಣ್ಣುಗಳು
ನಿನ್ನ ಕಣ್ಣುಗಳನ್ನು ಸಂಧಿಸಿದಾಗ
ಹಕ್ಕಿ ಗರಿಯಷ್ಟು ಹಗುರವಾದ
ನಿನ್ನ ಪ್ರೀತಿಯ ನೋಟವೂ
ಭಾರವೆನಿಸಿ ಮುಚ್ಚಿಕೊಂಡಾಗ
ಉದುರಿದ ಹನಿಯು
ನಿನ್ನ ಬೊಗಸೆಯ ಸ್ಪರ್ಶದಲ್ಲಿ
ಮುತ್ತಾಯಿತು.

******

ಸಂಜೆ ಬಾನ ಸೆರಗಿನಂಚಿನಲಿ ಚುಕ್ಕಿಗಳ ಚಿತ್ತಾರ,
ಮುಂಗುರುಳ ನೇವರಿಸುವ ನೆಪದಿ ಬೀಸಿ ಬಂದ ತಿಳಿಗಾಳಿ,
ಹಾರಿ ಹೋದ ಬೆಳ್ಳಕ್ಕಿ ಹಿಂಡು,
ಬೇಲಿ ಸಾಲಿನ ಆ ನೀಲಿ ಹೂವು ನಕ್ಕ ಪರಿಯು
ನಿನ್ನ ನೆನಪ ತಾರದಿರಲು ಸಾಧ್ಯವೇ?

Wednesday, August 27, 2008

ನಾ ಹಿಡಿಯದ ಹಾದಿ
ಅಲ್ಲೊಂದು ದಾರಿ
ದಾರಿಯ ಹಿಡಿದು ಸಾಗುವುದು ಎನಗೊಳಿತೆ?
ಅರಿವಿರಲಿಲ್ಲವೆನಗೆ.
ಕಲ್ಲಿರಬಹುದು ಮುಳ್ಳಿರಬಹುದು
ಕಷ್ಟ ಕೋಟಲೆಗಳೆದುರುಗೊಳ್ಳಬಹುದು
ಸುಮ್ಮನೇಕೆ ಇಲ್ಲದ ಉಸಾಬರಿ ಎನಗೆ?
ಮರುಯೋಚನೆಯಿಲ್ಲದೆ ನಡೆದೆ ನನ್ನ ದಾರಿಯಲ್ಲೇ ನಾ.

ಮನಸು ಕಮಲದೆಲೆಯ ಮೇಲಣ ನೀರ ಹನಿ
ಮತ್ತೆ ದಾರಿಯ ಕಂಡಾಗೆಲ್ಲ ತಿರು ತಿರುಗಿ ನೋಡುವ ಹುಚ್ಚು
ಹಿಡಿದು ಸಾಗಲೇ ಹಾದಿಯಲೊಮ್ಮೆ?
ಮನದಲ್ಲಿ ಮಿಂಚಂತೆ ಯೋಚನೆ.
ಮತ್ತದೇ ನೂರಾರು ಪ್ರಶ್ನೆಗಳು ಮನದಲ್ಲಿ ಸುಳಿದು
ನನ್ನದೇ ಯೋಚನೆಗೆ ನನ್ನ ಸಮ್ಮತವಿಲ್ಲದೆ
ಸುಮ್ಮನೇ ನಡೆದೆ ನನ್ನ ದಾರಿಯಲ್ಲೇ ನಾ.

ಮನಸು ಕಮಲದೆಲೆಯ ಮೇಲಣ ನೀರ ಹನಿ
ಮತ್ತೆ ಹೊರಳಿತು ಹಿಡಿಯದ ಹಾದಿಯ ಕಡೆಗೆ.
ತಿರು ತಿರುಗಿ ನೋಡಿದಾಗ
ಕಲಾವಿದನ ಕುಂಚದಲ್ಲರಳಿದ ಕಲೆಯ ಚೆಲುವು
ಕಲ್ಪನೆಯಲಿ ಹುಟ್ಟಿ
ಹೂವು ಹಾಸಿದ ನೆಲವಾಗಿರಬಹುದು
ಹಿಡಿದು ಸಾಗಲೇ ಹಾದಿಯಲೊಮ್ಮೆ?
ಮನದಲ್ಲಿ ಮಿಂಚಂತೆ ಯೋಚನೆ.
ಮತ್ತದೇ ನನ್ನ ದಾರಿಯ ನೆನಪಾಗೆ
ಸುಮ್ಮನೇ ನಡೆದೆ ನನ್ನ ದಾರಿಯಲ್ಲೇ ನಾ.

ಮನಸು ಕಮಲದೆಲೆಯ ಮೇಲಣ ನೀರ ಹನಿ
ಇಂದು ನಡೆದುಬಿಡಬೇಕು ಹಿಡಿಯದ ಹಾದಿಯಲಿ
ಅನ್ನಿಸಿದೊಡನೆಯೇ ಹೊರಟು ನಿಂತೆ.
ಹಾದಿಗೆದುರಾಗಿ ನಿಂತು ನೋಡಲು
ಅಂದು ಬೇಲಿ ಹಾಕಿದೆ ಹಾದಿಗೆ.
ಮತ್ತೆ ಮರಳುವ ಮನಸಿಲ್ಲವಾದರೂ
ನಡೆಯಲೇಬೇಕಿತ್ತು ಮರಳಿ ನನ್ನದೇ ಹಳೆಯ ದಾರಿಯಲಿ ನಾ.

ಬಿಟ್ಟರೂ ಬಿಡದೆನ್ನುವ ಮೋಹ
ಹಿಡಿಯದ ಹಾದಿಯೆಡೆಗೆ
"ಬೇಲಿ ಹಾರಿದರೆ ಸಾಗಬಹುದಲ್ಲ" ಕೂಗಿ ಹೇಳಿತು ಮನವು.
ನನ್ನನಾವರಿಸಿದ ನೂರು ಪ್ರಶ್ನೆಗಳು ಕರಗಿ
ಮನವು ಹಗುರಾಗಿ
ಹೊರಟು ನಿಂತೆನು ಮತ್ತೆ
ಹಿಡಿಯದ ಹಾದಿಯಲಿ ಸಾಗಲನುವಾಗಿ.

ಹಾದಿಯೆದುರಲಿ ಬಂದು ನಿಂತು ಹೆಜ್ಜೆ ಮುಂದಿಡುತಿರಲು
ಸುತ್ತ ನೋಡಿದರೆ ಸುತ್ತುವರಿದಾ ಜನರು
ಅತ್ತ ಹೋಗಲು ಬಿಡದೆ ಎಳೆಯುತಿದ್ದರು ನನ್ನ
ಎಡಕೊಮ್ಮೆ ಬಲಕೊಮ್ಮೆ .
ನನ್ನ ಕೂಗು ಮೂಕವಾಯಿತು
ಹೆಜ್ಜೆ ಕುರುಡಾಯಿತು
ಯಾರದೋ ಹೆಜ್ಜೆ ಸಾಗಿದೆಡೆ ನನ್ನದೂ ಹೆಜ್ಜೆ ಸಾಗಿ
ಪಯಣ ಆರಂಭವಾಯಿತು ಮತ್ತದೇ ಹಳೆಯ ದಾರಿಯಲಿ.

ಎಂದೂ ಹಿಡಿಯದ ಹಾದಿಗೆ ಬೆನ್ನು ತಿರುಗಿಸಿ ನಾ ಹೊರಟೆ
ಹಾದಿ ನಾ ಹಿಡಿಯದ ಹಾದಿಯಾಗಿಯೇ ಉಳಿದುಹೊಯ್ತು.

Friday, August 22, 2008

ಮುಸ್ಸಂಜೆಯ ನೆನಪು

ಮಣ್ಣ ಹಣತೆಯ ಎಣ್ಣೆ ಬತ್ತಿಯ
ಪುಟ್ಟ ದೀಪಕ್ಕೆ
ಮುಸ್ಸಂಜೆಯ ನೆನಪು
ಬಾ ಎಂದು ಕರೆಯುತಲಿತ್ತು ಮುಸ್ಸಂಜೆಯನು
ಬಾನಲ್ಲಿ ರವಿ ಜಾರುವ ಮುನ್ನವೇ.
ಮುಸ್ಸಂಜೆಯ ಮಬ್ಬುಗತ್ತಲಿಗೋ
ದೀಪವೆಂದರೆ ಒಲವು
ತನ್ನನಾವರಿಸಿ ಬೆಳಗು ನೀಡುವುದು ದೀಪ ತಾನೆ?
ಕಾಯುವಿಕೆಯು ಕೊನೆಗೊಂಡು
ಹೊತ್ತು ಕಂತು ಮಬ್ಬು ಕವಿದಾ ವೇಳೆ
ದೀಪ ನಂದಿತು ಏಕೆ?
ದೀಪಕ್ಕೆ ಮುಸ್ಸಂಜೆಯ ನೆನಪು
ಬರಿಯ ನೆಪವಷ್ಟೆಯೇನು?

[ಅವತ್ತು ಯಾವತ್ತೋ ಒಂದು ದಿನ ಮನಸಲ್ಲಿ ಮೂಡಿದ ಸಾಲುಗಳು. ಇವಿಷ್ಟೇ ಬರ್ದಿದ್ದು ಅಥವಾ ಮುಂದೆ ಬರಿಯಬೇಕು ಅನ್ನಿಸಲಿಲ್ಲ . ಅಪೂರ್ಣವಾದ ಕವಿತೆ?!! ]

Wednesday, August 6, 2008

ಅವಳು ರಾಧೆಯಲ್ಲ

"ಕೃಷ್ಣ"
ಅವಳಿಗೆ , ಆ ಒಂಭತ್ತರ ಬಾಲೆಗೆ ಕೃಷ್ಣನೆಂದರೆ ಸಾಕು ಕಣ್ಣರಳುವುದು. ಕೃಷ್ಣ ಅವಳ ಆತ್ಮ , ಕೃಷ್ಣ ಅವಳ ನಗು, ಕೃಷ್ಣ ಅವಳ ಖುಷಿ. ಅವಳಿಗೆ ಏಕಾಂತವೆಂದರೆ ಏನೆಂದು ತಿಳಿಯದು , ಏಕೆಂದರೆ ಅವಳ ಏಕಾಂತದಲ್ಲೂ ಕೃಷ್ಣನಿರುವನು ಅವಳ ಜೊತೆಗೆ. ಕೃಷ್ಣ ಅವಳ ಮಾನಸ ಮಿತ್ರ. ಅವಳ ಖುಷಿ, ನಗು, ದುಃಖ , ಅಳು ಎಲ್ಲದರಲ್ಲಿ ಇರುವುದು ಕೃಷ್ಣನೇ. ಖುಷಿಯಾದಾಗ ಕೃಷ್ಣನೊಡನೆ ಮಾತನಾಡುವಳು ತನ್ನೊಳಗೇ. ದುಃಖವಾದಾಗಲೂ ನೆನೆವುದು ಕೃಷ್ಣನನ್ನೇ , ಯಾಕೆ ಹೀಗೆ ಎಂದು ಕೇಳುವಳು ಅವನನ್ನೇ .

ಕೃಷ್ಣನ ಪೂಜಿಸಿ ಹಬ್ಬ ಮಾಡಲು ಅವಳಿಗೆ ಕೃಷ್ಣಾಷ್ಟಮಿಯೇ ಆಗಬೇಕಿಲ್ಲ . ಅವಳಿಗೆ ಅನ್ನಿಸಿದಾಗಲೆಲ್ಲ ಕೃಷ್ಣನನು ಪೂಜಿಸುವ ಸಂಭ್ರಮ . ಅವಳ ಆ ಕೃಷ್ಣನ ವಿಗ್ರಹಕ್ಕೆ ಸಡಗರದ ಪೂಜೆ. ವಿಗ್ರಹ ! ಅದೆಂಥ ದಿವ್ಯ ಕಳೆಯಿರುವ ಕೃಷ್ಣನ ವಿಗ್ರಹ. ಅವಳು ಐದರ ಬಾಲೆಯಾಗಿದ್ದಾಗ ಅಜ್ಜ ತಂದುಕೊಟ್ಟಿದ್ದು. ಆಗಿನಿಂದ ಅವಳಿಗೆ ಆ ವಿಗ್ರಹದ ಮೇಲೆ ಅದೇನೋ ಮೋಹ. ಅವಳಿಗೆ ಅದು ಬರಿಯ ವಿಗ್ರಹವಲ್ಲ . ಅದು ಕೃಷ್ಣನೆಂದೇ ಅವಳ ನಂಬಿಕೆ . ಆ ವಿಗ್ರಹ ಜೊತೆಯಿದ್ದರೆ ಕೃಷ್ಣನೇ ಜೊತೆಯಿರುವನೆಂಬ ಭಾವ.
ಮಕ್ಕೆಳೆಲ್ಲ ಅದರೊಟ್ಟಿಗೆ ಆಡುವಾಗ ತನಗೆ ಅದರ ಮೇಲೆ ಜಾಸ್ತಿ ಅಧಿಕಾರವಿದೆ ಎಂದು ತನ್ನಷ್ಟಕ್ಕೆ ತಾನು ಅಂದುಕೊಳ್ಳುವಳು.

ಶಾಲೆಗೆ ರಜೆ ಬಂದರೆ ಸಾಕು ಪುಟ್ಟ ಮಂಟಪದಲ್ಲಿ ಕೃಷ್ಣನನ್ನಿ
ಟ್ಟು , ಹೂವು ಮಾಲೆ , ಎಲೆಗಳಿಂದ ಸಿಂಗರಿಸುವಳು. ಎಲ್ಲರೊಟ್ಟಿಗೆ ಹಾಡಿ ಪಾಡಿ ನಲಿಯುವಳು. ಮಕ್ಕಳ ಆಟವಾ ಅದು? ನೋಡುವವರ ಕಣ್ಣಿಗೆ ಹಬ್ಬ!

ಅವಳ ಮುಗ್ಧ ಮನಸಿನಲ್ಲಿ ಕೃಷ್ಣನದೊಂದು ಪುಟ್ಟ ಲೋಕ. ಅವಳು ರಾಧೆಯಲ್ಲ , ಅವಳು ಮೀರೆಯಲ್ಲ , ಕೃಷ್ಣ ತನ್ನ ಆಪ್ತಗೆಳೆಯನೆಂದೇ ಕನಸಲ್ಲೂ ಮನಸಲ್ಲೂ ಕನವರಿಸುವವಳು.

ಅವತ್ತೊಂದು ದಿನ ಬೇಸಿಗೆಯ ಬೆಳಗಿನಲ್ಲಿ ಕೃಷ್ಣನೊಂದಿಗೆ ಆಡಿಕೊಂಡಿದ್ದಳು ಅವಳು. ಬೆಳ್ಬೆಳಿಗ್ಗೆ ಬಂದ ಪುರೋಹಿತರು ಅಜ್ಜನೊಂದಿಗೆ ಏನೋ ಮಾತಾಡುತ್ತಲಿದ್ದರು. ಸಮಯವಾಯಿತೆಂದು ಹೊರಟು ನಿಂತ ಅವರಿಗೆ ಅದೇನೋ ನೆನಪಾಯಿತು. ಮತ್ತೆನಿಂತರು. ಅಲ್ಲೇ ಮುಂದಿನ ಮನೆಯಲ್ಲಿ ಜರುಗುವ ಉಪನಯನ ಕಾರ್ಯಕ್ರಮಕ್ಕೆ ಹೊರಟವರು ಅವರು, ವಟುವಾದ ಹುಡುಗನಿಗೆ ಆಶಿರ್ವಾದಪೂರ್ವಕವಾಗಿ ಏನನ್ನಾದರೂ ಕೊಡುವುದು ಅವರ ವಾಡಿಕೆ . ಈ ಸಾರಿ ಮರೆತು ಬಂದಿದ್ದಾರೆ. "ಏನು ಕೊಡಲಿ ಈಗ ?" ಇವಳ ಅಜ್ಜನನ್ನು ಕೇಳಿದರು. ಅಜ್ಜ ಇನ್ನೂ ಯೋಚನೆಯಲ್ಲಿ ಇರುವಾಗಲೇ ಪುರುಹಿತರ ಕಣ್ಣು ಇವಳು ಆಡಿಕೊಂಡಿದ್ದ ಕೃಷ್ಣನವಿಗ್ರಹದ ಮೇಲೆ ಬಿ
ತ್ತು. "ಈ ವಿಗ್ರಹ ಅವನಿಗೆ ಕೊಡಲು ಲಾಯಕ್ಕಾಗಿದೆ . ಈ ಪುಟ್ಟಿಗೆ ಇನ್ನೊಂದು ದಿನ ಇಂಥದ್ದೇ ತಂದುಕೊಟ್ರೆ ಆಯ್ತು. ಇದನ್ನೇ ಒಯ್ಯುತ್ತೇನೆ . ಆಗಬಹುದೇ? " ಎಂದರು ಅವರು. ಅಜ್ಜನಿಗೋ ಏನು ಹೇಳೋದೆಂದು ತಿಳಿಯದಾಯ್ತು . ಆ ಕೃಷ್ಣನೊಂದಿಗೆ ಅವಳ ನಂಟನ್ನು ಬಲ್ಲವರು ಅವರು. ಅವರು ಏನೋ ಹೇಳುವಷ್ಟರಲ್ಲಿ ಪುರೋಹಿತರು ಅವಳಲ್ಲಿ "ಇಲ್ಲಿ ಕೊಡಮ್ಮಒಮ್ಮೆ ಆ ವಿಗ್ರಹವನ್ನ " ಎನ್ನುತ್ತಾ ಕೈಗೆ ತೆಗೆದುಕೊಂಡರು . "ನಿಂಗೆ ನಿನ್ನ ಅಜ್ಜನ ಕೈಲಿ ಈಥರದ್ದೆ ಇನ್ನೊಂದು ಕೊಡಿಸುವುದಕ್ಕೆ ಹೇಳ್ತೀನಿ . ಈಗ ಇದನ್ನು ನಾನು ಒಯ್ಯುತ್ತೇನೆ ಆಯ್ತಾ " ಅನ್ನುತ್ತಾ ಹೊರಟರು .

ಅವಳ ಹೃದಯಬಡಿತವೇ ನಿಂತಂತಾಯ್ತು . ಅಳು ಒಮ್ಮೆಲೇ ಒತ್ತರಿಸಿಕೊಂಡು ಬಂತು. ಕಣ್ಣುಗಳು ತಂತಾನೇ ಹನಿಗೂಡಿದವು. ನೀರು ತುಂಬಿದ ಕಣ್ಣುಗಳಿಗೆ ಕೊನೆಯಬಾರಿ ಅವಳ ಕೃಷ್ಣ ಅಸ್ಪಷ್ಟವಾಗಿ ಕಂಡನು. " ನನ್ನ ಕೃಷ್ಣ ನನಗೆ ಬೇಕು, ನನಗೆ ಬೇಕು. " ಅವಳು ಅಳುತ್ತ ಓಡಿದಳು. ಆದರೂ ಅವರು ಹೊರಟು ಹೋದರು . ಅವಳ ಅಳು ಅವರಿಗೆ ಕೇಳಿಸಿತಾ ಅಥವಾ ಕೇಳಿಸಲಿಲ್ಲವಾ ? ಅವಳಿಗೆ ಗೊತ್ತಾಗಲಿಲ್ಲ.

ಮತ್ತೊಂದು ಕೃಷ್ಣ ವಿಗ್ರಹವನ್ನು ತಂದುಕೊಡುವೆನೆಂದು ಅಶ್ವಾಸನೆಯಿಡುತ್ತ ಸಮಾಧಾನಿಸಲು ಬಂದ ಅಜ್ಜನ ಮಾತುಗಳು ಅವಳಿಗೆ ರುಚಿಸಲಿಲ್ಲ . ಮನೆಯವರೆಲ್ಲ ಬಂದು ಸಮಾಧಾನ ಮಾಡಿದರೂ ಅವಳ ಅಳು ನಿಲ್ಲಲಿಲ್ಲ . ಅವಳು ಅತ್ತಳು . ಮತ್ತೆ ಮತ್ತೆ ಅತ್ತಳು. ಕೃಷ್ಣ ತನ್ನನ್ನು ಬಿಟ್ಟು ಹೋಗಿದ್ದು ಯಾಕೆಂದು ತಿಳಿಯದೇ ಕಣ್ಣೀರಿಟ್ಟಳು. ಮತ್ತೆ ಮತ್ತೆ ಅವನನ್ನು ಕೇಳಬೇಕು ಅನ್ನಿಸಿತು ದೂರ ಹೋಗಿದ್ದು ಯಾಕೆ ಎಂದು. ಆದರೆ ಹೇಗೆ ಕೇಳುವುದು ದೂರ ಹೋದ ಅವನನ್ನು.

ಕೃಷ್ಣ ಅಮೂರ್ತ ರೂಪ . ಅವನ ಮೂರ್ತಿಯಲ್ಲೇನಿದೆ ? ಕೃಷ್ಣನೆಂಬ ಭಾವ ಆತ್ಮದಲ್ಲಿ ಇದ್ದರೆ ಸಾಕು. ಆದರೆ ಆ ಮುಗ್ಧ ಕಂದನಿಗೆ ಮೂರ್ತ ಅಮೂರ್ತಗಳು ಹೇಗೆ ಅರ್ಥವಾಗಬೇಕು . ಆ ಕೃಷ್ಣನ ವಿಗ್ರಹವೇ ಅವಳ ಆತ್ಮ . ಅವಳ ಆತ್ಮವೇ ಅವಳ ಕೃಷ್ಣ. ಆತ್ಮವೇ ದೂರ ಹೋದರೆ?

ಅದಾದ ಮೇಲೆ ಅವಳ ನಿನ್ನೆ ಇಂದು ನಾಳೆಗಳೆಲ್ಲ ಬರೀ ದೂರವಾದ ಕೃಷ್ಣನ ನೆನೆದು ಚಿಂತಿಸುವದರಲ್ಲೇ ಕಳೆಯಿತು . ಎಲ್ಲಿರಬಹುದು ನನ್ನ ಕೃಷ್ಣ. ಅವರ ಮನೆಯಲ್ಲಿ ಹೊರಗೆ ಕಾಣುವಂತೆ ಇಟ್ಟಿರಬಹುದಾ ? ನೋಡುವ ಆಸೆಯಾಯ್ತು ಅವಳಿಗೆ. ಆಟವಾಡುವ ನೆಪದಲ್ಲಿ ಎದುರು ಮನೆಗೆ ಹೋದಾಗ ಅಲ್ಲೆಲ್ಲಾ ಹುಡುಕಿದಳು ಕೃಷ್ಣನನ್ನು. ಕೃಷ್ಣ ಎಲ್ಲೂ ಕಾಣದೇ ಮತ್ತದೇ ನಿರಾಸೆ ಅವಳ ಪಾಲಿಗೆ.

15 ವರ್ಷಗಳಲ್ಲಿ ಅದೆಷ್ಟೋ ಹಗಲುಗಳು ರಾತ್ರಿಗಳು ಕೃಷ್ಣನ ನೆನಪಲ್ಲೇ ಕಳೆದು ಹೋದವು. ಬೀಸುವ ಗಾಳಿ, ತಂಪಿನ ಮಳೆ ಹನಿ , ಹೂ ಸೂಸುವ ಗಂಧ , ಹಕ್ಕಿಯ ಜೇನ್ದನಿಯ ಇಂಪು ಎಲ್ಲವೂ ಅವಳಿಗೆ ಕೃಷ್ಣನ ನೆನಪನ್ನು ಹೊತ್ತು ತರುವ ಸಂಗಾತಿಗಳು.

ಭಾನುವಾರ ಬೆಳಗ್ಗೆಯಿಂದ ಬಿಟ್ಟೂ ಬಿಡದೇ ಜಿಟಿ ಜಿಟಿ ಹೊಯ್ಯುತ್ತಿರುವ ಮಳೆ ಮಧ್ಯಾಹ್ನವನ್ನೂ ಆವರಿಸಿದ ಹೊತ್ತು, ಮನಸ್ಸೆಲ್ಲ ಬೇಸರವೇ ತುಂಬಿಕೊಂಡು ಕಿಟಕಿಯಿಂದ ಮಳೆ ನೋಡುತ್ತಿರುವಾಗ ಅವಳಿಗೆ ಎಲ್ಲ ನೆನಪಾಗಿ , ಕಣ್ಣಂಚಿನಿಂದ ಹನಿ ಜಾರಿತು. ಮನಸ್ಸಿನಲ್ಲಿ ಕೃಷ್ಣನೇ ಕೃಷ್ಣ ತುಂಬಿಕೊಂಡು ಕಣ್ಣ ಮುಂದೆ ಅವನದೇ , ಅವಳ ಆ ಕೃಷ್ಣನದೇ ರೂಪ ತೇಲಿಬಂತು. ಕಿಟಕಿಯಾಚೆ ಹನಿ ಹನಿಯುತ್ತಿರುವ ಮಳೆ, ಅವಳ ಮನಸಲ್ಲೂ ಅಷ್ಟೆ. ಅವಳು ರಾಧೆಯಲ್ಲ , ಅವಳು ಮೀರೆಯಲ್ಲ. ಆದರೂ ಅವಳು ಕೃಷ್ಣನ ನೆನಪೇ ಉಸಿರಾಗಿರುವ ಅವನ ಗೆಳತಿ.

Friday, August 1, 2008

ಮೌನದ ಗೆಳತಿ

ಈಗೀಗ ನನ್ನ ಹೆಜ್ಜೆಗಳಿಗೆ ಸದ್ದಿಲ್ಲ
ಘಲು ಘಲು ಎನ್ನುತ್ತಿದ್ದ
ಗೆಜ್ಜೆಗಳಿಗೂ ಯಾಕೋ ಮೌನದ ಮುಸುಕು.
ಕಿಂಕಿಣಿಸುತ್ತಿದ್ದ ಬಳೆಗಳದು
ಮಾತಿಲ್ಲವೀಗ,
ಕಂಗಳೊಳಗೆ ಕನಸುಗಳ ನಗೆಯ
ಕಿಲಕಿಲವಿಲ್ಲದೇ ಬರೀ ನಿಶ್ಶಬ್ದ.
ಮನದ ಕಡಲದು
ಪಿಸುಮಾತಿನ ಭಾವದಲೆಗಳ
ಭೋರ್ಗರೆತವಿಲ್ಲದೆ ಪ್ರಶಾಂತ.
ಮಾನಸದೊಳು ಭಾವವಾಗಿ
ಕಣ್ಣಂಚಿನ ಮಿಂಚಾಗಿ
ತುಟಿಯಂಚಿನಲಿ ನಗೆಯಾಗುತ್ತಿದ್ದ
ಕವಿತೆಗಳಿಗೀಗ ಧ್ಯಾನಸ್ಥ ಮೌನ.
ನಾನೀಗ ಮೌನದ ಗೆಳತಿ.