“The difficulty of literature is not to write, but to write what you mean”
Wednesday, August 27, 2008
ನಾ ಹಿಡಿಯದ ಹಾದಿ
ಅಲ್ಲೊಂದು ದಾರಿ
ಆ ದಾರಿಯ ಹಿಡಿದು ಸಾಗುವುದು ಎನಗೊಳಿತೆ?
ಅರಿವಿರಲಿಲ್ಲವೆನಗೆ.
ಕಲ್ಲಿರಬಹುದು ಮುಳ್ಳಿರಬಹುದು
ಕಷ್ಟ ಕೋಟಲೆಗಳೆದುರುಗೊಳ್ಳಬಹುದು
ಸುಮ್ಮನೇಕೆ ಇಲ್ಲದ ಉಸಾಬರಿ ಎನಗೆ?
ಮರುಯೋಚನೆಯಿಲ್ಲದೆ ನಡೆದೆ ನನ್ನ ದಾರಿಯಲ್ಲೇ ನಾ.
ಮನಸು ಕಮಲದೆಲೆಯ ಮೇಲಣ ನೀರ ಹನಿ
ಮತ್ತೆ ಆ ದಾರಿಯ ಕಂಡಾಗೆಲ್ಲ ತಿರು ತಿರುಗಿ ನೋಡುವ ಹುಚ್ಚು
ಹಿಡಿದು ಸಾಗಲೇ ಆ ಹಾದಿಯಲೊಮ್ಮೆ?
ಮನದಲ್ಲಿ ಮಿಂಚಂತೆ ಯೋಚನೆ.
ಮತ್ತದೇ ನೂರಾರು ಪ್ರಶ್ನೆಗಳು ಮನದಲ್ಲಿ ಸುಳಿದು
ನನ್ನದೇ ಯೋಚನೆಗೆ ನನ್ನ ಸಮ್ಮತವಿಲ್ಲದೆ
ಸುಮ್ಮನೇ ನಡೆದೆ ನನ್ನ ದಾರಿಯಲ್ಲೇ ನಾ.
ಮನಸು ಕಮಲದೆಲೆಯ ಮೇಲಣ ನೀರ ಹನಿ
ಮತ್ತೆ ಹೊರಳಿತು ಆ ಹಿಡಿಯದ ಹಾದಿಯ ಕಡೆಗೆ.
ತಿರು ತಿರುಗಿ ನೋಡಿದಾಗ
ಕಲಾವಿದನ ಕುಂಚದಲ್ಲರಳಿದ ಕಲೆಯ ಚೆಲುವು
ಕಲ್ಪನೆಯಲಿ ಹುಟ್ಟಿ
ಹೂವು ಹಾಸಿದ ನೆಲವಾಗಿರಬಹುದು
ಹಿಡಿದು ಸಾಗಲೇ ಆ ಹಾದಿಯಲೊಮ್ಮೆ?
ಮನದಲ್ಲಿ ಮಿಂಚಂತೆ ಯೋಚನೆ.
ಮತ್ತದೇ ನನ್ನ ದಾರಿಯ ನೆನಪಾಗೆ
ಸುಮ್ಮನೇ ನಡೆದೆ ನನ್ನ ದಾರಿಯಲ್ಲೇ ನಾ.
ಮನಸು ಕಮಲದೆಲೆಯ ಮೇಲಣ ನೀರ ಹನಿ
ಇಂದು ನಡೆದುಬಿಡಬೇಕು ಆ ಹಿಡಿಯದ ಹಾದಿಯಲಿ
ಅನ್ನಿಸಿದೊಡನೆಯೇ ಹೊರಟು ನಿಂತೆ.
ಹಾದಿಗೆದುರಾಗಿ ನಿಂತು ನೋಡಲು
ಅಂದು ಬೇಲಿ ಹಾಕಿದೆ ಆ ಹಾದಿಗೆ.
ಮತ್ತೆ ಮರಳುವ ಮನಸಿಲ್ಲವಾದರೂ
ನಡೆಯಲೇಬೇಕಿತ್ತು ಮರಳಿ ನನ್ನದೇ ಹಳೆಯ ದಾರಿಯಲಿ ನಾ.
ಬಿಟ್ಟರೂ ಬಿಡದೆನ್ನುವ ಮೋಹ
ಆ ಹಿಡಿಯದ ಹಾದಿಯೆಡೆಗೆ
"ಬೇಲಿ ಹಾರಿದರೆ ಸಾಗಬಹುದಲ್ಲ" ಕೂಗಿ ಹೇಳಿತು ಮನವು.
ನನ್ನನಾವರಿಸಿದ ನೂರು ಪ್ರಶ್ನೆಗಳು ಕರಗಿ
ಮನವು ಹಗುರಾಗಿ
ಹೊರಟು ನಿಂತೆನು ಮತ್ತೆ
ಹಿಡಿಯದ ಆ ಹಾದಿಯಲಿ ಸಾಗಲನುವಾಗಿ.
ಆ ಹಾದಿಯೆದುರಲಿ ಬಂದು ನಿಂತು ಹೆಜ್ಜೆ ಮುಂದಿಡುತಿರಲು
ಸುತ್ತ ನೋಡಿದರೆ ಸುತ್ತುವರಿದಾ ಜನರು
ಅತ್ತ ಹೋಗಲು ಬಿಡದೆ ಎಳೆಯುತಿದ್ದರು ನನ್ನ
ಎಡಕೊಮ್ಮೆ ಬಲಕೊಮ್ಮೆ .
ನನ್ನ ಕೂಗು ಮೂಕವಾಯಿತು
ಹೆಜ್ಜೆ ಕುರುಡಾಯಿತು
ಯಾರದೋ ಹೆಜ್ಜೆ ಸಾಗಿದೆಡೆ ನನ್ನದೂ ಹೆಜ್ಜೆ ಸಾಗಿ
ಪಯಣ ಆರಂಭವಾಯಿತು ಮತ್ತದೇ ಹಳೆಯ ದಾರಿಯಲಿ.
ಎಂದೂ ಹಿಡಿಯದ ಆ ಹಾದಿಗೆ ಬೆನ್ನು ತಿರುಗಿಸಿ ನಾ ಹೊರಟೆ
ಆ ಹಾದಿ ನಾ ಹಿಡಿಯದ ಹಾದಿಯಾಗಿಯೇ ಉಳಿದುಹೊಯ್ತು.
Subscribe to:
Post Comments (Atom)
3 comments:
kavana odi astondu abhyasa illa, chennagi barediddeera...
modalane pyaradalli kastada kalpaneyiddu, 3 neya pyara dalli sukhada haadi yaakaagirabaaradu endu chitrisidderi.
naalkane pyaradalli hosa daariyalli horatu nintaroo, manassige beli haakiddu yaakaagi anta tiliyalilla.
eradane baari odidaaga ea reeti annisitu, nanage maatra heege annisiraloo bahudu.. yaakandre naanu kavanakke teera hosabba.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ಈ ಕವನದ ಸಾರಾಂಶವಿಷ್ಟೇ
ಜೀವನದಲ್ಲಿ ಕೆಲವೊಮ್ಮೆ ಸರಿಯಾದ ಸಂದರ್ಭದಲ್ಲಿ ಸರಿಯಾದ ನಿರ್ಧಾರವನ್ನು (ಮಾಡಬೇಕು ಅಂದುಕೊಂಡಿದ್ದನ್ನು) ಕೈಗೊಳ್ಳದಿದ್ದರೆ , ಕೊನೆಗೊಮ್ಮೆ ಕಾಲಮಿಂಚಿಹೋಗಿ ಪರಿಸ್ಥಿತಿ ಹೇಗೆ ಬದಲಾಗಿ ನಾವು ಬಂದದ್ದನ್ನು ಮೌನವಾಗಿ ಸ್ವೀಕರಿಸಿ ಮುನ್ನಡೆಯಬೇಕಾಗುತ್ತದೆ.
ಇಷ್ಟೇ ನಾನು ಹೇಳ ಹೊರಟಿದ್ದು ಈ ಕವನದ ಮೂಲಕ.
ಧನ್ಯವಾದಗಳು,
ತುಂಬ ಧನ್ಯವಾದ, ನಿಮ್ಮ ವಿವರಣೆಗೆ...ಭಾವನೆ ಚೆನ್ನಾಗಿದೆ.. ಆದರೆ ನನಗೆ ಜೀವನದಲ್ಲಿ ಅವಕಾಶ (ನೀವು ಚಿತ್ರಿಸಿದ ದಾರಿ) ಸಿಕ್ಕಿದರೆ, ಮೊದಲು ಅದರ ಪ್ರಯೋಜನದ ಕಲ್ಪನೆ ಮನಸ್ಸಿಗೆ ಬರುತ್ತದೆ. ನಂತರ ಮನಸ್ಸು ಕಷ್ಟದ (ಕಲ್ಲು ಮುಳ್ಳು) ಯೋಚನೆ ಬಂದು ಹಿಂದೇಟು ಹಾಕುತ್ತದೆ. ನನಗನ್ನಿಸಿದ್ದು ಮೊದಲು ಸುಖದ ಹಾದಿಯ ಕಲ್ಪನೆ ಚಿತ್ರಿಸಿ ನಂತರ ಕಷ್ಟದ ಕಲ್ಪನೆಯಿಂದ ಮನಸ್ಸು ಹಿಂದೇಟು ಹಾಕಿದ್ದನ್ನು ಬರೆದಿದ್ದರೆ ಕವನದ ಹರಿವು ಇನ್ನೂ ಚೆನ್ನಾಗಿರುತ್ತಿತ್ತು ಎಂದು...
ನನಗನ್ನಿಸಿದ್ದು ಅಷ್ಟೆ, ನಾನು ಹೇಳಿದ್ದೆಲ್ಲ ಸರಿ ಅನ್ನೋ ಭ್ರಮೆ ನನಗಿಲ್ಲ! ಕವನದಲ್ಲಿ ಬಳಸಿದ ಉಪಮೆಗಳು ಭಾಷೆಗಳು ಸೊಗಸಾಗಿವೆ.
Post a Comment