Tuesday, April 22, 2008

ಹೆಸರಲ್ಲೇನಿದೆ ಅಂತೀರಾ?

ಮೊನ್ನೆ ಈಮೇಲ್ ಒಂದರಲ್ಲಿ ಒಂದು ಲಿಂಕ್ ಸಿಕ್ಕಿತು. ಅದೇನಪ್ಪ ಅಂದ್ರೆ ಬರ್ತಿರೋ ಚುನಾವಣೆಯ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇದೆಯೋ ಇಲ್ಲವೊ ಅಂತ ನೋಡಬಹುದಾದದ್ದು. ನಂಗೆ ಕುತೂಹಲವಾಯ್ತು. ನಾನೇನು ಹೋಗಿ ವೋಟ್ ಹಾಕುವ ಹುಮ್ಮಸ್ಸಿನಲ್ಲೇನಿರಲಿಲ್ಲ. ಆದರೂ ಇನ್ನೂ ಒಂದು ಸಲವೂ ವೋಟ್ ಹಾಕಿ ಅನುಭವವಿಲ್ಲ ನೋಡಿ ಅದೇನೋ ಕುತೂಹಲ. ಅಷ್ಟೇ ಅಲ್ಲದೆ ಇಂಜಿನಿಯರಿಂಗ್ ಮೂರನೆ ವರ್ಷದಲ್ಲಿದ್ದಾಗ ಯುಗಾದಿ ಹಬ್ಬಕ್ಕೆಂದು ಮನೆಗೆ ಹೋಗಿದ್ದಾಗ ಐಡೆಂಟಿಟಿ ಕಾರ್ಡ್ ಗೆ ಫೋಟೋ ತೆಗೀತಿರೋ ವಿಚಾರ ಗೊತ್ತಾಗಿ ನಾನೂ ನನ್ನ ಗೆಳತಿಯೂ ಹಬ್ಬದ ದಿನ ಬೆಳ್ಬೆಳಿಗ್ಗೆ ಅದ್ಯಾವ್ದೋ ತಾಲುಕಾಫೀಸೋ ಯಾವ್ದೋ ಒಂದರ ಮುಂದೆ ಹೋಗಿ ನಿಂತು ಕಾದು ಕಾದು , ಬಿಸಿಲಲ್ಲಿ ಬೆಂದು , ನಮ್ಮ ಇರುವ ಅಲ್ಪ ಸ್ವಲ್ಪ ತಾಳ್ಮೆಯನ್ನೆಲ್ಲ ಪರೀಕ್ಷೆಗೊಡ್ಡಿ ಅಂತೂ ಗುದ್ದಾಡಿ ನಾವು ಅಂತ ಹೆಸರಿನ ಬಲದ ಮೇಲೆ ಮಾತ್ರ ಗುರುತಿಸಬಹುದಾದ ಒಂದು ಫೋಟೋ ಇರುವ ಕಾರ್ಡ್ ಅನ್ನು ಗಿಟ್ಟಿಸಿಕೊಂಡು ಮಧ್ಯಾಹ್ನ 2.30 -3 ಗಂಟೆಗೆ ಮನೆಗೆ ಹೋಗಿ ಹಬ್ಬಕ್ಕೆ ಅಂತ ಅಷ್ಟು ದೂರದಿಂದ ಬಂದು 3 ಗಂಟೆಗೆ ಮನೆಗೆ ಬರೋದಾ ಊಟಕ್ಕೆ ? ಅಂತ ಅಮ್ಮನ ಕೈಲಿ ಮಂಗಳಾರತಿ ಎತ್ತಿಸಿಕೊಂಡಿದ್ದೆಲ್ಲ ಒಮ್ಮೆಲೇ ನೆನಪಿಗೆ ಬಂದಿದ್ದರಿಂದ ಮತದಾರರ ಪಟ್ಟಿಯಲ್ಲಿ ನನ್ನ ಹೆಸರಿದೆಯೋ ಇಲ್ಲವೋ ಅಂತ ನೋಡಲೇ ಬೇಕಿತ್ತು ನನಗೆ.

ಅಂತೂ ಆ ಲಿಂಕಿನ ಮೇಲೆ ಕ್ಲಿಕ್ ಮಾಡಿ ಒಳಹೋಗಿ ನಮ್ಮೂರಿನ ನಮ್ಮ ಮತಗಟ್ಟೆಯ ಹೆಸರನ್ನೂ ಹುಡುಕಿಬಿಟ್ಟೆ. ಮತದಾರರಪಟ್ಟಿ ಕಾಣಿಸಿತು. ಹಾಗೆಯೇ ಒಂದೊಂದೇ ಹೆಸರನ್ನು ಓದುತ್ತಾ ಹೋದೆ. ಮಧ್ಯದಲ್ಲಿ ಒಂದು ಕಡೆ ಅಪ್ಪನ ಹೆಸರು ಕಂಡೇ ಬಿಟ್ಟಿತು . ಅಲ್ಲೇ ಕೆಳಗೆ ಅಮ್ಮನ ಹೆಸರು. ಮತ್ತಲ್ಲೇ ಕೆಳಗೆ ಇತ್ತಲ್ಲ ನನ್ನ ಹೆಸರು. ಅಬ್ಬ ಹುಡುಕಿದ್ದಕ್ಕೂ ಸಾರ್ಥಕ ಆಯ್ತು ಅಂದುಕೊಳ್ಳುತ್ತಾ ಅದನ್ನು ಕ್ಲೋಸ್ ಮಾಡಬೇಕು ಅಷ್ಟರಲ್ಲಿ ನನ್ನ ಕಣ್ಣು ನನ್ನ ಹೆಸರಿನ ಪಕ್ಕದಲ್ಲಿ ಬರೆದಿದ್ದ "ಗಂ" ಎಂಬ ಅಕ್ಷರದತ್ತ ಹಾಯಿತು. ಅಂದರೆ ಅಲ್ಲಿ ನನ್ನನ್ನು ಹುಡುಗ ಎಂದು ನಮೂದಿಸಲಾಗಿತ್ತು. ಅರೆ ನನ್ನಪ್ಪಾ ಅಮ್ಮಂಗೆ ಮಗ ಇಲ್ದೇ ಇರೋ ವಿಚಾರ ಇವರಿಗೂ ಹೆಂಗೋ ಗೊತ್ತಾಗ್ಬಿಡ್ತಲ್ಲಪ್ಪ ಅಂತ ನಗು ಬಂತು.

ನನ್ನ ಚಂದದ ಹೆಸರಿಗೆ ಅನ್ಯಾಯ ಆಗ್ತಿರೋದು ಇದೇ ಮೊದಲಲ್ಲ. ಅಲ್ಲೇ ಕುಳಿತಲ್ಲೇ ಆಲೋಚನೆ ಹಿಂದೆ ಓಡಿ ಒಂದಿಷ್ಟು ಹಳೆಯ ನೆನಪುಗಳು ನನ್ನನ್ನು ಮುತ್ತಿಕೊಂಡವು.

"ಶ್ಯಾಮಾ ಅಂದ್ರೆ ನೀನಾ? ನಾನ್ಯಾರೋ ಹುಡುಗ ಅನ್ಕೊಂಡಿದ್ದೆ" ಅನ್ನೋದು ಬಹಳ ಸಾಮಾನ್ಯವಾದ ಮಾತು ನಾನು ಜಾಸ್ತಿ ಕೇಳಿದ್ದು. "ಇದೇನು ನಿಂಗೆ ಶ್ಯಾಮ ಅಂತ ಹುಡ್ಗನ ಹೆಸ್ರಿಟ್ಟಿದ್ದಾರಲ್ಲ" ನಾನು ಚಿಕ್ಕವಳಿದ್ದಾಗಂತೂ ಈ ಮಾತು ಕೇಳಿ ಕೇಳಿ ರೋಸಿಹೋಗಿತ್ತು. ಅವರಿಗೆಲ್ಲ ನನ್ನ ಹೆಸರಿನ ಅರ್ಥ ತಿಳಿ ಹೇಳಿ ಹೇಳಿ, ವಾದ ಮಾಡಿ ಮಾಡಿ ಸುಸ್ತಾಗ್ತಿತ್ತು. ನಾನು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಭಾಷಣಕ್ಕೋ ಚರ್ಚಾಸ್ಪರ್ಧೆಗೋ ಹಾಡಿಗೋ ಯಾವುದೊ ಒಂದಕ್ಕೆ ಬೇರೆ ಶಾಲೆಗಳಿಗೆ ಹೋದಾಗ ಸ್ಪರ್ಧಿಗಳ ಹೆಸರು ಕೂಗುವಾಗ ನನ್ನ ಹೆಸರು ಬಂದು ನಾನು ಎದ್ದು ಹೋದರೆ ಶ್ಯಾಮಾ ಅಂತ ಕರದ್ರೆ ಇವಳ್ಯಾರೋ ಹುಡುಗಿ ಬಂದಳಲ್ಲ ಅಂತ ಎಲ್ಲರೂ ನನ್ನನ್ನೇ ನೋಡ್ತಿದ್ದರು. ಮತ್ತೆ ನಾನೇ ಶ್ಯಾಮಾ ಅಂತ ಎಲ್ಲರಿಗೂ ಸಮಜಾಯಿಷಿ ಕೊಡಬೇಕಾಗ್ತಿತ್ತು.

ಆಸ್ಪತ್ರೆ ಮತ್ತೆ ಕೆಲವು ಕಡೆಯೆಲ್ಲ ಹೆಸರು ಹಚ್ಚಿ ಕೂತು ಕಾಯಬೇಕಾದ ಪ್ರಸಂಗ ಬಂದಾಗಲೂ ಶ್ಯಾಮಾ ಅನ್ನೋದನ್ನ ಶ್ಯಾಮ್ ಅಂತ ತಪ್ಪಾಗಿ ಕರೆದ ತಕ್ಷಣವೂ ನಾನೇ ಎದ್ದು ಹೋದರೆ ಏನೋ ಅಪರಾಧವಾಯ್ತೇನೋ ಅನ್ನೋ ಹಾಗೆ ನನ್ನನ್ನು ಮಿಕಿ ಮಿಕಿ ನೋಡ್ತಿದ್ದರು.

ಇನ್ನು ಹೊಸತಾಗಿ ಕಾಲೇಜ್ ಸೇರಿದಾಗಲಂತೂ ನನ್ನ ಹೆಸರು ಇಂತದ್ದು. ಇಂತಹ ಹೆಸರವಳು ನಾನೇ ಅಂತ ಜನರಿಗೆ ಮನದಟ್ಟು ಮಾಡಿಕೊಡಲು ಸುಮಾರು ದಿನ ಹೆಣಗಬೇಕಾಗಿ ಬಂದಿತ್ತು. ಆದರೂ ಹೆಸರನ್ನು ತಪ್ಪಾಗಿ ಕರೆಯುವವರಿಗೂ , ಹೆಸರನ್ನು ನೋಡಿ ಹುಡುಗ ಅಂತ ಕನ್ಫ್ಯೂಸ್ ಮಾಡಿಕೊಂಡು ಆಮೇಲೆ ನಾನು ಅಂತ ಗೊತ್ತಾದ ಮೇಲೆ ಹಲ್ಕಿರಿಯುವವರಿಗೂ ಕೊರತೆಯೇನಿರಲಿಲ್ಲ .

ಒಮ್ಮೆ ನನ್ನ ಗೆಳತಿಯ ಜೊತೆ ಅವಳ ಮನೆಗೆ ಹೋಗಿದ್ದೆ. ಹೊರಗೆ ಕುಳಿತಿದ್ದ ಅವಳ ಅಜ್ಜಿಗೆ ನನ್ನ ಪರಿಚಯಿಸಿದಳು "ಇವ್ಳು ಶ್ಯಾಮು, ನನ್ನ ಫ್ರೆಂಡ್, ಬೆಳಿಗ್ಗೆ ಹೇಳಿದ್ನಲ್ಲ ಕರ್ಕೊಂಡು ಬರ್ತೀನಂತ." ಅವಳಜ್ಜಿ ಕಿಸಿ ಕಿಸಿ ನಕ್ಕು ಹೇಳಿದರು "ನೀನು ಶ್ಯಾಮು ಅಂದಾಗ ನಾನು ಯಾರೋ ಹುಡ್ಗನ್ನ ಕರ್ಕೊಂಡು ಬರ್ತಿದೀಯ ಅನ್ಕೊಂಡೆ". ನಾನೂ ನಗಬೇಕಾಯ್ತು.

ಇಷ್ಟೆಲ್ಲಾ ಸಣ್ಣ ಪುಟ್ಟ ವಿಷಯಗಳಿಗೆ ಕಿರೀಟವಿಟ್ಟಂತೆ ಇನ್ನೊಂದು ಪ್ರಸಂಗ ನಡೆಯಿತು. ನಾನು ಸೆಕೆಂಡ್ P.U.C. ಯಲ್ಲಿದ್ದಾಗ ಇನ್ನೇನು ಪರೀಕ್ಷೆ ಹತ್ತಿರ ಬಂದಿತ್ತು. ಕಾಲೇಜಲ್ಲಿ ಎಕ್ಸಾಮ್ ಹಾಲ್ ಟಿಕೆಟ್ ಕೊಟ್ಟಾಗಿತ್ತು. ಎಲ್ಲ ಸರಿಯಾಗಿದೆಯಾ ಅಂತ ಹಾಲ್ ಟಿಕೆಟ್ ನ ನೋಡ್ತಾ ಇದ್ರೆ ಅಲ್ಲಿ ಜಂಡರ್ - "ಮೇಲ್" ಅಂತ ನಮೂದಿಸಿದ್ದರು . ನನಗೆ ಎಲ್ಲಿಲ್ಲದ ಕೋಪ ಬಂದಿತ್ತು. ತಕ್ಷಣ ಕಾಲೇಜ್ ಆಫೀಸ್ ಸೆಕ್ಷನ್ ಗೆ ಹೋಗಿ "ಹೀಗೆ ಆಗಿದೆ" ಅಂತ ತಿಳಿಸಿದರೆ ಅವರು ಅವಾಗ ಬಾ ಇವಾಗ ಬಾ ನಾಳೆ ಬಾ ಅಂತೆಲ್ಲ ಹೇಳಿ ನನ್ನ ಸಿಟ್ಟಿಗೆ ತುಪ್ಪ ಸುರಿದು ಕಳಿಸಿದರು. ನಾನು ಸಿಟ್ಟು ಮಾಡಿಕೊಂಡು ಮನೆಗೆ ಬಂದು ಎಲ್ಲರ ಮೇಲೂ ಹರಿಹಾಯ್ದೆ.
ಯಾಕೆ ನಂಗೆ ಈ ಹೆಸರು ಇಟ್ಟೆ ಅಂತ ಅಪ್ಪನಿಗೂ ಬಯ್ದಿದ್ದಾಯ್ತು.

ಮರುದಿನ ಅಪ್ಪ ನಾನೇ ಬರ್ತೀನಿ ನಡಿ ಕಾಲೇಜಿಗೆ ಅಂದರು. ಪ್ರಿನ್ಸಿಪಾಲ್ ಅಪ್ಪನಿಗೆ ಪರಿಚಯದವರಾಗಿದ್ದರಿಂದ ಅವರ ಹತ್ರವೇ ಮಾತಾಡಬಹುದು ಅಂತ ಹೊರಟಿದ್ದು. ಕಾಲೇಜಿನೊಳಗೆ ಕಾಲಿಟ್ಟ ತಕ್ಷಣ ನಮ್ಮ ಸಂಸ್ಕೃತ ಪ್ರೊಫೆಸರ್ ಎದುರಾಗಿ ಅಪ್ಪನಿಗೆ "ಹೋ ನೀವೇನಿಲ್ಲಿ?" ಅಂತ ಕೈ ಕುಲುಕಿದರು. ಅಪ್ಪ ಹೀಗೆ ಹೀಗೆ ಆಗಿದೆ ಅದಕ್ಕೆ ಏನಾದ್ರೂ ತೊಂದ್ರೆ ಇದೆಯ ಅಂತ ವಿಚಾರಿಸಿಕೊಂಡು ಹೋಗುವುದಕ್ಕೆ ಬಂದಿದ್ದು ಅಂತ ಹೇಳಿದರು. ಆ ಪ್ರೊಫೆಸರ್ ಮಹಾಶಯರು ತಮ್ಮ ಯಾವತ್ತಿನ ತಮಾಷೆಯ ದನಿಯಲ್ಲೇ "ಇಷ್ಟುಕ್ಕೆಲ್ಲ ಯಾಕೆ ಟೆನ್ಶನ್ . ಎಕ್ಸಾಮ್ ದಿನಾ ಪ್ಯಾಂಟ್ ಶರ್ಟ್ ಹಾಕ್ಕೊಂಡು ಒಂದು ಮೀಸೆ ಹಚ್ಕೊಂಡು ಬಂದ್ಬಿಟ್ರಾಯ್ತಪ್ಪ ಹಿ ಹಿ ಹಿ " ಅಂದರು. ನನಗೆ ಸಿಟ್ಟು ಬರ್ತಾ ಇದ್ರೂ ಅವರು ಹೇಳಿದ್ದಕ್ಕೆ ನಗು ಬರದಿದ್ದರೂ ಸುಳ್ಳು ಸುಳ್ಳೇ ಹಿ ಹಿ ಹಿ ಅಂತ ನಕ್ಕು ಪ್ರಿನ್ಸಿಪಾಲ್ ಅವರನ್ನು ನೋಡಲು ಮುಂದೆ ಹೋಗಬೇಕಾಯ್ತು. ಪ್ರಿನ್ಸಿಪಾಲ್ ಇದೇನೂ ತೊಂದ್ರೆ ಇಲ್ಲ ನಾನು ನೋಡ್ಕೊಳ್ತೀನಿ ಅಂತ ಹೇಳಿದ್ಮೇಲೆ ಸಮಾಧಾನದಿಂದ ಮನೆಗೆ ಬಂದೆ.

ಇನ್ನು ಯಾರಾದರೂ ನಿನ್ನ ಹೆಸರೇನು ಎಂದು ಕೇಳಿದಾಗ ನನ್ನ ಹೆಸರಿನೊಡನೆ ಸ್ಪೆಲ್ಲಿಂಗಾದಿಯಾಗಿ ಎಲ್ಲವನ್ನೂ ಹೇಳುವ ಅಭ್ಯಾಸವನ್ನಿಟ್ಟುಕೊಂಡಿದ್ದೇನೆ. ಇಲ್ಲದಿದ್ದರೆ ಅವರು ಶಮಾ ಅಂತ ನನ್ನ ಅಕ್ಕನ ಹೆಸರನ್ನು ನನಗಿಟ್ಟು ಕರೆಯುವ ಸಾಧ್ಯತೆ ಶೇಕಡ ನೂರರಷ್ಟಿರುತ್ತದೆ. :)

ಇಷ್ಟೆಲ್ಲಾ ನನ್ನ ಹೆಸರಿನ ಪುರಾಣ ಸಂಕ್ಷಿಪ್ತವಾಗಿ ನೆನಪಾಗಿ ನನ್ನೊಳಗೇ ನಾ ನಕ್ಕು, ತಪ್ಪು ತಪ್ಪಾಗಿ ಮತದಾರರ ಪಟ್ಟಿ ತಯಾರಿಸಿದವರನ್ನು ನನ್ನ ಚಂದದ ಹೆಸರಿಗೆ ಅನ್ಯಾಯ ಮಾಡಿದ್ದಕ್ಕೆ ಮನಸ್ಸಲ್ಲೇ ಒಮ್ಮೆ ಬಯ್ದುಕೊಂಡು ಸುಮ್ಮನಾದೆ.

13 comments:

Sushrutha Dodderi said...

ಅಯ್ಯೋ..! ನನ್ ಹೆಸ್ರೂ 'ಹೆಂ' ಅಂತ ಹಾಕಿದ್ದ ಮಾರಾಯ್ತಿ ಮತದಾರರ ಪಟ್ಟೀಲಿ..! ಅಪ್ಪಂಗೆ ಫೋನ್ ಮಾಡಿ ಹೇಳಿದಿ, ತಿದ್ದುಸ್ತಿ ಅಂದ. ಆಮೇಲೆಂತಾತು ಗೊತಾಗಲ್ಲೆ.. :-/

Harisha - ಹರೀಶ said...

ಹೇ.. ನಿಂಗಳ ಲಿಂಗ ಬದಲಾವಣೆ (ಲಿಸ್ಟ್ ನಲ್ಲಿ) ಮಜಾ ಇದ್ದು.. ಇಂಥದ್ದೇನೂ ಹೊಸದಲ್ದೆ ಇದ್ರೂ ಭಾರಿ ನಗು ಬತ್ತು, ಕೆಲವು ಸಲ ಕಸಿವಿಸಿ ಆಗೋ ಹಾಂಗೂ ಮಾಡ್ತು...

ನಾ ಇಂಜಿನಿಯರಿಂಗ್ ಮಾಡಕ್ಕಾರೆ ನಮ್ ಕ್ಲಾಸ್ಮೇಟ್ ಒಬ್ಬ ಮೇಘ ಅಂತ ಇದ್ದಿದ್ದ. ಯಾರೇ ಹೊಸ ಲೆಕ್ಚರರ್ ಬಂದರೂ ಕೂಡ ಹಾಜರಿಯಲ್ಲಿ ಅವನ ಹೆಸರು ಕರ್ಯಕ್ಕಾರೆ ಹುಡುಗೀರ ಕಡೆ ನೋಡ್ತಿದ್ದ. ಹಂಗಾಗಿ ಪ್ರತಿ ಲೆಕ್ಚರರ್ ಫರ್ಸ್ಟ್ ಕ್ಲಾಸ್ ನಲ್ಲೋ ನನ್ಗಕ್ಕೆ ಮಜಾ... ಅವ ಎದ್ದ ಕೂಡ್ಲೇ ಎಲ್ಲರೂ ಒಟ್ಟಿಗೆ ನಗಕ್ಕೆ ಶುರು ಮಾಡ್ತಿದ್ಯ. ಅವನ ಮುಖ ಪಾಪ ಹರಳೆಣ್ಣೆ ಕುಡ್ದವರ ಥರ ಆಗಿರ್ತಿತ್ತು... ಇನ್ನು ಕಿರಣ್, ಮನು ಅನ್ನೋ ಹುದುಗಿಯರದ್ದೂ ನಿಮ್ಮ ಕಥೆನೆ..

Harisha - ಹರೀಶ said...
This comment has been removed by the author.
ರಂಜನಾ ಹೆಗ್ಡೆ said...

ಹಃ ಹಃ! ಸುಪರ್! ನನ್ನ ಹೆಸರನ್ನು ಅಷ್ಟೆಲ್ಲಾ ಯಾರು ತಪ್ಪಾಗಿ ಹೇಳದಿಲ್ಲೆ. ನಂಗೆ ತುಂಬಾ ಇಷ್ಟ ಆತು ನಿನ್ನ ಹೆಸರು. ಶ್ಯಾಮಾ ಎಷ್ಟು ಚಂದ ಹೆಸರು ಅಲ್ದಾ? ಸುಶ್ರುತ ನ ಹೆಸರು ಅಷ್ಟೆ.

ಶ್ಯಾಮಾ said...

ಸುಶ್ರುತ,

:) ಎಂತ ಮಾಡಕ್ಕೂ ಬರದಿಲ್ಲೆ ಬಿಡು.

ಹರೀಶ,
ಹೊಸ ಲೆಕ್ಚರರ್ ಬಂದಾಗ ನಂದೂ ಅದೇ ಕಥೆ ಆಗ್ತಿತ್ತು ನನ್ನ ಹೆಸ್ರು ಕರ್ದು ಹುಡುಗರ ಕಡೆ ನೋಡ್ತಿದ್ದ :(
ನನ್ನ ಹೆಸರಿನ ಕಥೆ ಬರಿತಾ ಹೋದ್ರೆ ತುಂಬಾ ಉದ್ದದ ಕಥೆ ಆಗ್ತು ಬಿಡು ಅಷ್ಟಿದ್ದು.

ರಂಜನಾ ,

:) :)
ಹೌದು ಎಷ್ಟು ಚಂದದ ಹೆಸರು, ಆದರೆ ಜನ ತಪ್ಪು ತಪ್ಪು ಕರಿತ್ವಲಾ ಅವಾಗ ಬೇಜಾರಾಗ್ತು.

Sree said...

ಹಹ್ಹ! ನಾನೂ ’ಶ್ರೀನಾಥ’ ’ಶ್ರೀಮಂತ’ ಎಲ್ಲಾ ಅನುಭವ್ಸಿಬಿಟ್ಟಿದೀನಿ:) ಈಗ ಅದಿಕ್ಕೇ ಶ್ರೀ ಅಂದುಬಿಡ್ತೀನಿ, ತಲೆನೋವೇ ಬೇಡ ಅಂತ:)) ಹಾಂ, ಶ್ಯಾಮಾ ಸಖತ್ ಮುದ್ದಾದ ಹೆಸ್ರು

ಮನಸ್ವಿ said...

ನಾನು ಮೊದಲು ಮತದಾರರ ಪಟ್ಟಿ ನೋಡಿ ಎಲ್ಲಾ ಸರಿ ಇದ್ದ ಅಂತ ೨ಸರಿ ನೋಡ್ಕ್ಯಂಡು ಈಗ ಕಮೆಂಟಲು ಬಂದಿ, ಹೆಸರಿನ ಅರ್ಥಾನು ಹಾಕಿದ್ರೆ ತುಂಬಾ ಚನಾಗಿತ್ತು ಅನುಸ್ತು, ನೀನು ನಂಗೆ ನಿನ್ನ ಹೆಸರಿನ ಅರ್ಥ ಹೇಳಿದ ಮೇಲೆ, ಎಲ್ಲರಿಗೂ ಗೊತಾಗ್ಲಿ "ಶ್ಯಾಮಾ" ಅಂದ್ರೆ ಏನು ಅರ್ಥ ಅಂತ,
write here what shyama means?

ಶ್ಯಾಮಾ said...

Sree,

ಹಿ ಹಿ ಹಿ ನಿಮ್ದೂ ಇದೇ ಕಥೇನಾ? ನೀವೇನೋ ಶ್ರೀ ಅಂದು ತಲೆನೋವು ಸ್ವಲ್ಪ ಕಡ್ಮೆ ಮಾಡ್ಕೊಂಡಿದೀರಾ, ನನ್ನ ಹೆಸ್ರು ಹಾಗೆ ತುಂಡು ಮಾಡಿ ಹೇಳೋದಕ್ಕೆ ಬರೋ ಹಾಗೂ ಇಲ್ವೇ :)

Thanks.. :)

ಮನಸ್ವಿ,
೨ ಸರಿ ನೋಡಿದ ಮೇಲೆ ಎಲ್ಲಾ ಸರಿ ಇತ್ತಾ ಇಲ್ಯಾ?

ಇನ್ನು ನನ್ನ ಹೆಸರಿನ ಅರ್ಥವನ್ನು ಇಲ್ಲೂ ಹೇಳವು ಹೇಳಾದ್ರೆ

ಸಂಸ್ಕೃತದಲ್ಲಿ ಶ್ಯಾಮಾ ಅನ್ನುವುದಕ್ಕೆ ಗಾಢವಾದದ್ದು, ಕಪ್ಪು , ಮೋಹಕವಾದದ್ದು, ಚೆಲುವು ಅನ್ನುವ ಅರ್ಥಗಳು.

ಇನ್ನು ಪುರಾಣಗಳ ಪ್ರಕಾರ ಯಮುನಾ ನದಿಗೆ 'ಶ್ಯಾಮಾ' ಅನ್ನುವ ಹೆಸರೂ ಇದೆಯಂತೆ
ಮತ್ತು ದೇವಿ ದುರ್ಗಾ/ಕಾಳಿ ಯ ಇನ್ನೊಂದು ಹೆಸರು ಶ್ಯಾಮಾ

ಇವಿಷ್ಟು ನಾನು ತಿಳಿದುಕೊಂದಿದ್ದು ನನ್ನ ಹೆಸರಿನ ಬಗ್ಗೆ.

ಧನ್ಯವಾದಗಳು

Supreeth.K.S said...

ನನ್ನ ಹೆಸರೂ ಇಂಥ ಅವಾಂತರಗಳಿಗೆ ಈಡಾಗಿದೆ. ಸುಪ್ರೀತ್ ಎಂಬುದನ್ನು ಸುಪ್ರೀತಾ ಎಂದರೆ ಹುಡುಗಿಯ ಹೆಸರಾಗಿಬಿಡುತ್ದೆ.

ಆ ಲಿಂಕನ್ನು ಇಲ್ಲಿ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು.

ಶ್ಯಾಮಾ said...

ಸುಪ್ರೀತ್,

ಒಂದಲ್ಲಾ ಒಂದು ಕಥೆ ಎಲ್ಲರ ಹೆಸರಿಗೂ ಇದೆ ಅಂತ ಆಯ್ತು :)

ನೀವು ಕೇಳಿದ link ಇಲ್ಲಿದೆ
http://164.100.80.116/electoraldatadelimit/

Narayan said...

shayama ravare,

innu neevu halli voter list nodbeku... bekku beragagtira, MALE na FEMALE and viceversa kuda aagiro cases na nodi.. namma deshadalli itara nediyodu aste surprisingenu alla bidi..

BTW, nimma complete profilelalli nimma hesaru bittu enu illa.. Infact I've recently joined yr blog.. nimdu yava ooru? neevu by profession enu? blogaayana bittu bere havyasagalu enive nimge? currently yellidira?

idella telkondu nimma blog ohdidare adhu swalpa completaagiruthe antha nanna udhesha..

hoping to see answers for my Qs..

Thanks,
Narayan

ಸುಪ್ತದೀಪ್ತಿ suptadeepti said...

ಶ್ಯಾಮಾ, ಸುಶ್, ಶ್ರೀ, ಸುಪ್ರೀತ್... ನಿಮ್ಮೆಲ್ಲರ ಹೆಸ್ರು ನನ್ನ ನಾಡಲ್ಲೇ ಅಪಭ್ರಂಶ ಆಗಿವೆ. ನನ್ನ ಹೆಸ್ರು ಈ ಪರದೇಶದಲ್ಲಿ ಏನೇನೋ ಆಗಿ ಹೋಗತ್ತೆ!! ಅದನ್ನೆಲ್ಲ ನೆನೆಸ್ಕೊಂಡ್ರೆ ನಗುವಿಗೆ ಒಳ್ಳೆ ಗ್ರಾಸ.

ಶ್ಯಾಮಾ, ಸುಲಲಿತ ಬರಹ ಖುಷಿ ಕೊಟ್ಟಿತು.

ಶ್ಯಾಮಾ said...

Narayan,

ನನ್ನ ವಿವರಗಳಿಗಿಂತ ಬರಹ ಮುಖ್ಯ ಅನ್ನಿಸಿದ್ದಕ್ಕೆ ಏನೂ ವಿವರಗಳನ್ನು ಹಾಕಿಲ್ಲ ಅಷ್ಟೆ,

Thanks

ಸುಪ್ತದೀಪ್ತಿ,

ನೀವು ಹೇಳಿದಂತೆ ನೆನಪಿಸಿಕೊಂಡಾಗಲೆಲ್ಲ ನಗು ಬರುತ್ತದೆ, ಆದ್ರೆ ಅದು ಘಟಿಸುವಾಗ ಕೋಪ :)

ಧನ್ಯವಾದಗಳು

ಶ್ಯಾಮಾ