Thursday, September 4, 2008

ಭಾವಕ್ಕೆ ಬಳಿದ ಬಣ್ಣಗಳೊಡನೆ ಕಳೆದು ಹೋದವಳು

ಕಾಮನಬಿಲ್ಲಿಗೇಕೆ ಏಳೇ ಬಣ್ಣ?
ನನ್ನ ಭಾವಕ್ಕೆ ಬಳಿದಿರುವುದು ನೂರಾರು ಬಣ್ಣ..

ನನಗೆ ಬಣ್ಣಗಳೆಡೆಗೆ ಒಲವು ಜಾಸ್ತಿ. ಒಂದೊಂದು ಬಣ್ಣವನ್ನೂ ಒಂದೊಂದು ರೀತಿಯಲ್ಲಿ ಮೆಚ್ಚುತ್ತೇನೆ , ಒಂದೊಂದು ಬಣ್ಣಕ್ಕೂ ಒಂದೊಂದು ವಿಶೇಷತೆ.ನನ್ನ ದೃಷ್ಟಿಗೆ ಬಣ್ಣದ ಸೆಳೆತ ಜಾಸ್ತಿ. ನನ್ನ ಉಡುಗೆಯಲ್ಲೂ ಬಣ್ಣಕ್ಕೆ ಪ್ರಾಮುಖ್ಯತೆ . ದೃಷ್ಟಿಗೆ ಏನೊಂದು ಗೋಚರಿಸಿದರೂ ಅದರ ಬಣ್ಣ ಮೊದಲು ನನ್ನ ಸೆಳೆಯುತ್ತದೆ. ಬಣ್ಣಗಳೆಡೆಗಿನ ನನ್ನ ಅವಲೋಕನ ವೈಜ್ಞಾನಿಕ ಕುತೂಹಲವೇನಲ್ಲ , ನನ್ನ ಭಾವಕ್ಕೆ ನಾ ಬಳಿಯುವ ಬಣ್ಣಕ್ಕೆ 'ಕುಂಚ' ನನ್ನ ಅವಲೋಕನ.

ಚಿಕ್ಕ ಚಿಕ್ಕ ಹುಲ್ಲುಗಳ ತಿಳಿ ಹಸಿರು, ಒಣಗಿದ ಜಡ್ಡಿನ ಅರೆ ಬಣ್ಣ, ಪೈರಿನ ಪಚ್ಚೆ ಹಸಿರು, ಮರ ಗಿಡಗಳ ಅಚ್ಚ ಹಸಿರು, ಮಣ್ಣಿನ ಬಣ್ಣ, ಧೂಳಿನ ತಿಳಿ ಬಣ್ಣ, ಕೆಸರಿನ ಕೆಂಬಣ್ಣ , ಬಾನು ಹೊದ್ದ ನೀಲಿ ಬಣ್ಣ, ಮುಂಜಾವಿನ ಬಾನ ಹೊಂಬಣ್ಣ , ರವಿಕಿರಣದ ಕಾಂತಿ ಬಣ್ಣ, ಆಗಸದಿ ತೇಲುವ ಬೆಳ್ಮುಗಿಲ ಬಣ್ಣ, ಕಾರ್ಮೋಡದ ಕರಿ ಬಣ್ಣ, ಮಳೆಗಾಳದಲಾಗೊಮ್ಮೆ ಈಗೊಮ್ಮೆ ಇಣುಕುವ ತಿಳಿಬಿಸಿಲ ಬಣ್ಣ, ನಡುಹಗಲಿನ ಸುಡುಬಿಸಿಲ ಬಣ್ಣ, ಇಳಿಸಂಜೆಯ ಬಾನ ಕಿತ್ತಳೆ ಬಣ್ಣ, ಚುಕ್ಕಿ ಚಿತ್ತಾರವಾದ ಬಾನ ಬಣ್ಣ, ಕಾನ ಕತ್ತಲೆಯಲ್ಲೂ ಬೆಳಕು ಸುರಿಸುವ ಶಶಿಯ ಬೆಳದಿಂಗಳ ಬಣ್ಣ, ಕಡಲ ಆ ನೀಲಿ ಬಣ್ಣ, ತೀರದ ಆ ಮರಳಿನ ಬಣ್ಣ,ಗಿರಿ ಶ್ರೇಣಿಯು ಹೊದ್ದ ಹಿಮದ ಬೆಳ್ಳಿ ಬಣ್ಣ,
ಕಂದನ ಹಾಲ್ಗಲ್ಲದ ಬಣ್ಣ, ಪುಟಾಣಿ ಪಾದದ ಗುಲಾಬಿ ಬಣ್ಣ, ನೊರೆ ಹಾಲ ಬಿಳುಪು ಬಣ್ಣ, ಹಾಲ್ಗೆನೆಯ ಆ ಬಣ್ಣ, ಹಬೆಯಾಡುವ ನೊರೆ ಕಾಫಿಯ ಬಣ್ಣ, ಒಲೆಯ ಒಡಲಿನ ಬೆಂಕಿ ಬಣ್ಣ, ಬೂದಿ ಮುಚ್ಚಿದ ಕೆಂಡದ ಬಣ್ಣ, ಹೊಗೆಯ ಬಣ್ಣ, ಸಂಜೆ ನಸುಗತ್ತಲ ಬಣ್ಣ, ದೇವರೊಳದ ದೀಪದ ಬಣ್ಣ, ಬಣ್ಣಗಳನ್ನೇ ಬದಲಾಯಿಸುವ ಅದೇ ಆ ನನ್ನ ಪ್ರೀತಿಯ ರಸ್ತೆಯಲ್ಲಿರುವ ಸೋಡಿಯಮ್ ದೀಪದ ಬಣ್ಣ, ಜಡಿ ಮಳೆಯ ಹನಿಗಳ ಬಣ್ಣ, ಜುಳು ಜುಳು ಹರಿವ ನೀರಿನ ಬಣ್ಣ, ನಿಂತ ನೀರಿನ ಕೆರೆಯ ತಿಳಿ ಹಸಿರು ಬಣ್ಣ, ಅಮ್ಮನ ಸೀರೆಯ ಬಣ್ಣ, ಇರುವೆಗಳ ಬಣ್ಣ, ಹರಿವ ಹುಳಗಳ ಅದೆಷ್ಟೋ ಬಣ್ಣ,ಮಿಂಚುಳದ ಮಿಣುಕು ಮಿಣುಕು ಹೊಂಬಣ್ಣ , ಆಗಸದಿ ಮಿಂಚುವ ಮಿಂಚಿನ ಬಣ್ಣ, ಚಿಲಿಪಿಲಿ ಹಕ್ಕಿಗಳ ಹಲವು ಬಣ್ಣ, ಅಂಗಳದ ತುಳಸಿಯ ಬಣ್ಣ,ರಂಗೋಲಿ ನಗುವ ಸಗಣಿ ತೀಡಿದ ಅಂಗಳದ ಬಣ್ಣ,ಕೊಟ್ಟಿಗೆಯ 'ಕೆಂಪಿ' ಕರುವಿನ ಬಣ್ಣ, ಅವಳ ಬಳೆಗಳ ಬಣ್ಣ, ಕೆನ್ನೆಯರಿಷಿನ, ಹಣೆಯ ಕುಂಕುಮದ ಬಣ್ಣ, ಕಣ್ಣ ಕಾಡಿಗೆಯ ಬಣ್ಣ, ಹಸ್ತಗಳ ಅಂದಗೊಳಿಸುವ ಮದರಂಗಿ ಬಣ್ಣ , ಅವನ ಕಂಗಳ ಹೊಳಪು ಬಣ್ಣ, ನಗುವ ಹೂಗಳ ಬಣ್ಣ ಬಣ್ಣ, ಚುಮುಚುಮು ಚಳಿಯ ಬೆಳಗಿನ ಇಬ್ಬನಿಯ ಬಣ್ಣ,ಸವಿ ಜೇನ ಬಣ್ಣ, ಅಬ್ಬ ಅದೆಷ್ಟು ಬಣ್ಣಗಳು, ಇವೆಲ್ಲವೂ ನಂಗಿಷ್ಟ.

ಕಾಣದೆಯೂ ಕಾಣುವ ಬಣ್ಣಗಳಿವೆಯಲ್ಲ ,ಅವೂ ನಂಗಿಷ್ಟ. 'ಹೊಂಗನಸು' ಕನಸಿಗೆ ಹೊನ್ನಿನ ಬಣ್ಣವೇ ? "ಬಣ್ಣ ಬಣ್ಣದ ಕನಸು"! ಕನಸಿನ ಎಲ್ಲ ಬಣ್ಣಗಳೂ ನಂಗಿಷ್ಟ, ಮನಸ್ಸಿನ ಹಾಲು ಬಣ್ಣವಿಷ್ಟ . "ನೆನಪು ಹಚ್ಚ ಹಸಿರು " ನೆನಪಿಗೆ ಹಸಿರು ಬಣ್ಣವೇ? ಮರೆವಿಗಾವ ಬಣ್ಣ? ನೆನಪಿನ ಬಣ್ಣಕ್ಕೂ ಒಂಥರಾ ಚೆಲುವಿದೆ. ನೆನಪಿನ ಬಣ್ಣ ಬಲು ಗಾಢ.ಮರೆವಿನ ಬಣ್ಣ ಸ್ವಲ್ಪ ಪೇಲವ. ಅದಕ್ಕೂ ಒಂದು ಸೊಗಸಿದೆ.

ಇನ್ನೆಷ್ಟು ಬಣ್ಣಗಳನ್ನು ಹೇಳಲಿ ? ನೋಡುವ ಪ್ರತಿಯೊಂದಕ್ಕೂ ಬಣ್ಣವಿದೆ , ಚೆಲುವಿದೆ.

ಎಲ್ಲ ಬಣ್ಣಗಳು ಕಲೆತಾಗ ಕಾಣುವ ಸೌಂದರ್ಯಕ್ಕೆ ಎಲ್ಲೆಯುಂಟೆ? ಹೂವಿನ ದಳದ ಮೇಲೋ, ಚಿಗುರೆಲೆಯ ಮೇಲೋ, ಹುಲ್ಲಿನೆಳೆಯ ಮೆಲೋ ಬಿದ್ದ ಹನಿಯೊಡನೆ ರವಿಕಿರಣದ ಹೊಂಬಣ್ಣ ಬೆರೆತಾಗ ಕಾಣುವ ಬಣ್ಣ ಬಣ್ಣವಿದೆಯಲ್ಲ ಆಹಾ ! ಅದು ನನಗೆ ತುಂಬ ಇಷ್ಟ .ಆ ಬಣ್ಣ ಬಣ್ಣದ ಹನಿಯೊಳಗೆ ಬೇರೆಯದೇ ಒಂದು ಲೋಕವಿದೆಯೇನೋ ಅನ್ನಿಸಿಬಿಡುತ್ತದೆ ನನಗೆ. ನೀರ ಹನಿ ಬೆಳಕಿನ ಎಳೆಯೊಡನೆ ಕಲೆತಾಗ ಮೂಡುವ ಈ ಚೆಲುವಿಗೂ ನಾನಾ ಪರಿಯಿದೆ, ಮುಂಜಾನೆಯ ಹನಿಗಳ ಚೆಲುವೇ ಬೇರೆ, ಮುಸ್ಸಂಜೆಯ ಹನಿಗಳ ಚೆಲುವೇ ಬೇರೆ. ಚಳಿಯ ಬೆಳಗಿನಲ್ಲಿ ಜೇಡನ ಬಲೆಗಂಟಿದ ಇಬ್ಬನಿಯ ಹನಿಗಳಿಗೆ ಬೆಳಕಿನೆಳೆ ಸೋಕಿದಾಗ ಕಾಣುವ ಬಣ್ಣದ ಚೆಲುವು ನೋಡಲು ಬಲು ಸೊಗಸು.

ಆದರೆ ನಾ ಇಷ್ಟೆಲ್ಲಾ ಬರೆಯಲು ಕಾರಣ ಬೇರೆಯದೇ ಇದೆ. ಅದು ಗುಳ್ಳೆಗಳ ಮೇಲಣ ಬಣ್ಣದ ಚೆಲುವು. ಬಣ್ಣವಿಲ್ಲದ ಗುಳ್ಳೆಗಳು ಬೆಳಕಿನ ಹೊಳಪ ಸೆಳೆದು ಬಣ್ಣ ಬಣ್ಣವಾಗಿ ಹಾರುವಾಗ ನನ್ನ ಮನಸ್ಸೂ ಗುಳ್ಳೆಗಳಂತೆ ಹಗುರಾಗಿ ತೇಲಿ ಹೋಗುತ್ತದೆ. ನನ್ನ ನೆನಪುಗಳ ಬಣ್ಣದಲ್ಲಿ ಒಂದು ಚಿತ್ರವಿದೆ. ನಾನು ಪುಟ್ಟ ಹುಡುಗಿಯಾಗಿದ್ದಾಗ ಗುಳ್ಳೆಗಳೊಡನೆ ಆಡುತ್ತಿದ್ದುದು. ಅಜ್ಜನ ಮನೆಯ ಎದುರು ಬೇಲಿ ಸಾಲಿನ ಕಳ್ಳಿಗಿಡದ ದಂಟು ಮುರಿದರೆ ಸೋರುತ್ತಿದ್ದ ಕಳ್ಳಿರಸವನ್ನು
ಊದಿದರೆ ಸಾಕು ಬೇರೆ ಬೇರೆ ಗಾತ್ರದ ಅವೆಷ್ಟೋ ಗುಳ್ಳೆಗಳು ನಮ್ಮನ್ನು ಸುತ್ತುವರಿಯುತ್ತಿದ್ದವು. ಒಂದೊಂದು ಗುಳ್ಳೆಗಳಲ್ಲೂ ಅದೆಷ್ಟೋ ಬಣ್ಣಗಳು. ಎಷ್ಟು ಸುಂದರ. ಆ ಆಟ ನನಗೆಂದೂ ಬೇಸರ ತರಿಸುತ್ತಿರಲಿಲ್ಲ.ಪಕ್ಕದ ಮೆನೆಯ ಬೇಲಿಯಲ್ಲಿ ಇನ್ನೊಂದು ಗಿಡವಿತ್ತು, ಏನು ಹೆಸರೋ ತಿಳಿಯದು. ಅದರ ಎಲೆಯನ್ನು ಅರ್ಧರ್ಧವಾಗಿ ಮುರಿದರೆ ಪಟ್ ಎಂದು ಶಬ್ದ ಬರುತ್ತಿತ್ತು, ಆಮೇಲೆ ಮೆಲ್ಲಗೆ ಅದನ್ನು ಒತ್ತಿ ಹಿಡಿದು ಬಿಡಿಸಿದರೆ ಗುಳ್ಳೆಯ ತೆಳು ಪದರು, ತೆಳು ಕನ್ನಡಿಯಂತೆ ಕಾಣುತ್ತಿತ್ತು , ಅದರಲ್ಲೂ ಅಷ್ಟೇ ಹಲವು ಬಣ್ಣಗಳು. ಅದನ್ನು ನೋಡುತ್ತಿದ್ದ ಖುಷಿಯನ್ನು ಇವತ್ತಿಗೂ ನನ್ನ ನೆನಪಿನ ಬುಟ್ಟಿಯಲ್ಲಿ ಚಂದವಾಗಿ ಕಟ್ಟಿಟ್ಟಿದ್ದೇನೆ.

ಹೋದವರ್ಷ ಅಜ್ಜನ ಮನೆಗೆ ಹೋಗಿದ್ದಾಗ ಮುಸ್ಸಂಜೆ ಹೊತ್ತಲ್ಲಿ ದೇವಸ್ಥಾನಕ್ಕೆ ಹೋಗಿದ್ದೆವು. ದೇವರ ದರ್ಶನವಾದ ನಂತರ ಅಲ್ಲೇ ಕಟ್ಟೆಯ ಮೇಲೆ ಮಾತಾಡುತ್ತ ಕುಳಿತಿದ್ದಾಗ ಆಚೆ ಮೂಲೆಯಲ್ಲೆಲ್ಲೊ ಕಳ್ಳಿ ಗಿಡದ ಹಿಂಡು ಕಾಣಿಸಿತು. ನನಗಂತೂ ಬಾಲ್ಯ ಮರುಕಳಿಸಿದಂತಾಗಿ ಕಟ್ಟೆಯಿಂದ ಜಿಗಿದು ಹೋಗಿ ಕಳ್ಳಿ ಎಲೆ ಮುರಿದು ಗುಳ್ಳೆಗಳನ್ನು ಊದಿದೆ. ಅಕ್ಕನೂ ಜೊತೆಯಾದಳು.
ಅದೆಷ್ಟೋ ಹೊತ್ತು ಇಬ್ಬರೂ ಕಾಲವನ್ನೇ ಮರೆತವರಂತೆ ನೂರಾರು ಗುಳ್ಳೆಗಳನ್ನು ಗಾಳಿಗೆ ತೇಲಿ ಬಿಟ್ಟು ಬಣ್ಣಗಳನ್ನು ಕಣ್ತುಂಬಿಕೊಂಡು ಆನಂದಿಸಿದೆವು. ಬೀಸಿಬರುತ್ತಿದ್ದ ತಿಳಿಗಾಳಿಗೆ ಸುತ್ತಲಿದ್ದ ಗದ್ದೆಯ ಹಸಿರುಪೈರುಗಳು ತಲೆದೂಗುತ್ತಿದ್ದಿದ್ದು ನಮ್ಮ ನಲಿವಿಗೆ ಅವೂ ಸಾಥಿ ನೀಡಿದಂತಿತ್ತು. ಭಾವಕ್ಕೆ ಮತ್ತಷ್ಟು ಬಣ್ಣ ಬಳಿದಂತಾಗಿ ಮನಸ್ಸು ಅದೆಲ್ಲೋ ಕಳೆದುಹೋಗಿತ್ತು .

13 comments:

ವಿ.ರಾ.ಹೆ. said...

very nice. ಬಣ್ಣಾ, ಬಣ್ಣಾ, ಬಣ್ಣಾ........
ನೋಡೋ ಮನಸೊಂದಿದ್ದರೆ ಎಲ್ಲವೂ ಬಣ್ಣ ಬಣ್ಣ..

ಅಂದ ಹಾಗೆ ಅಕ್ಕ,ತಂಗಿ ಊದೋವಾಗ ಫೋಟೋ ತೆಗೆದ ಬಣ್ಣ ಯಾರದು ? :)

Sandeepa said...

:-) ನಿನ್ನ ಬರವಣಿಗೆಯ ಬಣ್ಣನು ಸುಮಾರ್ ಬದ್ಲಾಯ್ದು!

btw, Business Punditನಲ್ಲಿ ನಿನ್ನೆ ನೋಡಿದ್ ಫೋಟೊ ನೆನ್ಪಾತು ನಂಗೆ..
ಲಿಂಕು.. ,

ಶ್ಯಾಮಾ said...

ವಿಕಾಸ್,
Thanx,

ಅಂದ ಹಾಗೆ ಅಕ್ಕ,ತಂಗಿ ಊದೋವಾಗ ಫೋಟೋ ತೆಗೆದ ಬಣ್ಣ ಮಾವನ ಮಗಳು :)

ಸಂದೀಪ,

:-) ನಿನ್ನ ಬರವಣಿಗೆಯ ಬಣ್ಣನು ಸುಮಾರ್ ಬದ್ಲಾಯ್ದು! ಮೊದ್ಲು ಸುಮಾರಿಗೆ ಬರಿತಾ ಇದ್ದವಳು ಈಗ ಇನ್ನೊಂದು ಸಲ್ಪ ಚೊಲೋ ಬರಿತ ಇದ್ದಿ ಹೇಳ ಅಥವ ಬರವಣಿಗೆ ಇನ್ನೂ ಹಾಳಾಯ್ದು ಹೇಳಾ ಗೊತ್ತಾಗ್ಲೆ :)

ನೀ ಕೊಟ್ಟಿದ್ ಲಿಂಕಲ್ಲಿರ ಫೋಟೋ ಚನಾಗಿದ್ದು, ಇಷ್ಟ ಆತು. ಥ್ಯಾಂಕ್ಸ್ :)

ತೇಜಸ್ವಿನಿ ಹೆಗಡೆ said...

ಶ್ಯಾಮಾ,

ಮನದೊಳಗೆಲ್ಲಾ ನಿನ್ನ ಬರಹದ ಬಣ್ಣಗಳದೇ ಚಿತ್ತಾರ. ನಂಗೂ ನೀ ಹೇಳಿದೆಲ್ಲಾ ಬಣ್ಣಗಳೂ ಇಷ್ಟ ಆದರೆ ಕಪ್ಪೊಂದು ಬಿಟ್ಟು. ಕಪ್ಪು ಶೋಕ ಸೂಚಕ ಹೇಳ್ತ.. ಅದೂ ಅಲ್ದೆ ಅದೇಕೋ ಎಂತೋ ಕಪ್ಪು ನೋಡಿರೆ ಮನಸ್ಸು ಮುದುಡ್ತು!

PaLa said...

ಸುಂದರ ಬರಹ.. ವಿವಿಧ ಬಣ್ಣಗಳ ಚೆಲುವು, ಬಣ್ಣಗಳ ವಿಧ, ಬಾಲ್ಯದ ಗುಳ್ಳೆಯಾಟ ನೆನಪಿಸಿದ್ದಕ್ಕೆ ತುಂಬ ಧನ್ಯವಾದ. ನೆನಪಿನ ಬಣ್ಣ ತುಂಬ ಸುಂದರ...

Sushrutha Dodderi said...

ಲವ್ಲೀ! ಇವತ್ತಿಡೀ ಕೆಟ್ಟ ಮೂಡಲ್ಲಿದಿದ್ದಿ.. ಮನಸ್ಸಿಗೆ ಕಪ್ಪು ಬಣ್ಣ ಕವಿದಂತಾಗಿತ್ತು.. ನಿನ್ನ ಬ್ಲಾಗಲ್ಲಿ ಇಷ್ಟೆಲ್ಲಾ ಬಣ್ಣ ಒಟ್ಟಿಗೇ ನೋಡಿ ಈಗ ಸ್ವಲ್ಪ ತಿಳಿ ಆತು.. ಥ್ಯಾಂಕ್ಸ್..

ranjith said...

ತುಂಬಾನೆ ಇಷ್ಟ ಆಯ್ತು..:)

sunaath said...

ಶ್ಯಾಮಾ,
ಎಷ್ಟೆಲ್ಲ ಬಣ್ಣಗಳು ತುಂಬಿವೆ ಈ ಲೇಖನದಲ್ಲಿ!

ಶ್ಯಾಮಾ said...

ತೇಜಕ್ಕ,
ಕಪ್ಪನ್ನು ಬರೀ ಬಣ್ಣವಾಗಿ ನೋಡಿದಾಗ ನಂಗೂ ಹಂಗೆ ಅನ್ನಿಸ್ತು, ಆದರೆ ಕೆಲವು ವಸ್ತುಗಳೊಡನೆ ರಿಲೇಟ್ ಮಾಡಿ ನೋಡಿದಾಗ ಕಪ್ಪು ಬಣ್ಣದ ಚೆಲುವು ಇಷ್ಟವಾಗ್ತು. ಉದಾಹರಣೆಗೆ ಕಾಡಿಗೆ ತೀಡಿದ ಕಣ್ಣು, ಕಪ್ಪಾದ ಉದ್ದ ಕೂದಲು, ಹೊಳೆವ ಕಪ್ಪು ಕಂಗಳು ಇವುಗಳ ಚೆಲುವನ್ನು ನೋಡಿದಾಗ ಕಪ್ಪು ಬಣ್ಣ ಮೋಹಕ ಎನ್ನದಿರಲು ಸಾಧ್ಯವೇ?

ಧನ್ಯವಾದಗಳು

Palachandra,

ಹೌದು ನೆನಪಿನ ಬಣ್ಣ ತುಂಬ ಸುಂದರ, ಒಮ್ಮೊಮ್ಮೆ ಮರೆವಿನ ಬಣ್ಣವೂ :)
ಧನ್ಯವಾದಗಳು ಪ್ರತಿಕ್ರಿಯೆಗೆ.

ಸುಶ್ರುತ,
ಮನಸ್ಸಿಗೆ ಕವಿದ ಬೇಸರದ ಬಣ್ಣ ಸ್ವಲ್ಪ ತಿಳಿಯಾಗಿದ್ದಕ್ಕೆ ಸಂತೋಷ.

ರಂಜಿತ್ , ಸುನಾಥ್
ಧನ್ಯವಾದಗಳು ಪ್ರತಿಕ್ರಿಯೆಗೆ

ಸ್ಮಿತಾ said...

Shyami banna andaga nange en gotta nenpagiddu ninna pink colour :) college alli yawaglu baiskotha idde alwaaaa :)

haaa a pata pata anno gidada hesaru kanaglu hoovdu, navu tumbane adtha idwi

Photos tumbaa supper agide :)

ಶ್ಯಾಮಾ said...

ಸ್ಮಿತಾ

ಆ ಪಿಂಕ್ ಡ್ರೆಸ್ ನ ಇನ್ನೂ ಹಾಗೆ ಇಟ್ಕೊಂಡಿದೀನಿ, ಅದನ್ನ ನೋಡಿದಾಗೆಲ್ಲ ನಗು ಬರುತ್ತೆ. ಅದು ನಂಗೆ ತುಂಬ ಇಷ್ಟವಾದ ಡ್ರೆಸ್ , ಆದ್ರೆ ಯಾಕೆ ಹಂಗಾಗ್ತಿತ್ತು ಗೊತ್ತಿಲ್ಲ ಅಲ್ಲವಾ. ಅದನ್ನ ಹಾಕ್ಕೊಂಡಾಗೆಲ್ಲ ನಾವೆಲ್ಲರೂ ಬೈಸ್ಕೊತಿದ್ವಿ :) 2nd ಸೆಮ್ ಇಂದ ಶುರುವಾಗಿದ್ದು ನೋಡು. ಅದನ್ನ ಬರೀತಾ ಹೋದ್ರೆ ದೊಡ್ಡ ಕಥೆನೇ ಆಗುತ್ತೆ ಬಿಡು :)

ನಾನು puc ಅಲ್ಲಿ ಇರ್ಬೇಕಾದ್ರೆ ಒಂದು ಡ್ರೆಸ್ ಇತ್ತು ಅದನ್ನ ಹಾಕ್ಕೊಂಡು ಹೋದಾಗೆಲ್ಲಾ ಮಳೆ ಬರ್ತಿತ್ತು. ನಮ್ಮ ಕ್ಲಾಸಿನವರೆಲ್ಲ ಅದ್ಕೆ ಮಳೆ ಅಂಗಿ ಅಂತ ಹೆಸ್ರಿಟ್ಟಿದ್ರು, ಅದೂ ನಂಗೆ ತುಂಬ ಇಷ್ಟವಾದ ಡ್ರೆಸ್ :)
ಏನೇನೋ ನೆನಪುಗಳು.

ಸಿಮ್ಮಾ said...

ಓಹೋ! ಇಷ್ಟೊಂದು ಬಣ್ಣ ಇವೆ ಅಂತಾ ಇವತ್ತೇ ಗೊತ್ತಾಗಿದ್ದು.
ಜೊತೆಗೆ ನದಿ ನೀರಿನ ಬಣ್ಣ ನೋಡಿದ್ದೀರಾ, ಅದರಲ್ಲೂ ಮಳೆಗಾಲದಲ್ಲಿ ಈ ತುಂಗೆಯನ್ನೊಮ್ಮೆ ನೀವು ನೋಡಬೇಕು ಅದೆಂತಾ ಬಣ್ಣ ಅಂತೀರಿ! ಹಾಗೆಯೇ ಚಿಗುರಿನ ಬಣ್ಣ, ಗಿಡವೆಲ್ಲಾ ಹಸಿರಿದ್ದರೂ ಚಿಗುರು ಮಾತ್ರ ಕಂದಿರುತ್ತೆ. ಇದುವರೆಗೂ ತಿಳಿಯದ ಬಣ್ಣವೆಂದರೆ ಮನಸ್ಸಿಂದು ಮಾತ್ರವೇನೋ!!!

Greeshma said...

ಎಷ್ಟು ತರದ ಬಣ್ಣಗಳನ್ನು ವರ್ಣಿಸಿದ್ದೀರ್ರೀ !!!ಚೆನ್ನಾಗಿದೆ. ಶೀರ್ಷಿಕೆಯೂ ಸೂಪರ್ . ..