Friday, March 14, 2008

ಮರೆತರು

ದೀಪದ ಬುಡದಲ್ಲಿ ಬರೀ ಕತ್ತಲು
ಬರೀ ಕತ್ತಲು ಎನ್ನುತ್ತ ಅಲ್ಲೇ ನಿಂತು
ದೀಪ ಎಲ್ಲೆಡೆ ಪಸರಿಸುವ ಬೆಳಕನ್ನು ನೋಡುವುದೇ ಮರೆತರು.

ಕಳೆದುಕೊಂಡೆನು ಅದನು ಇದನು ಎನ್ನುತ್ತ
ಕೊನೆವರೆಗೆ ಕಳೆದದ್ದನ್ನು ಹುಡುಕುತ್ತಲೇ ಹೋಗಿ
ಉಳಿದಿದ್ದನ್ನು ಉಳಿಸಿಕೊಳ್ಳಲು ಮರೆತೇಬಿಟ್ಟರು .

ಬೆಚ್ಚನೆಯ ಗೂಡಲ್ಲಿ ಕನಸಿನ ಗುಟುಕುಗಳ ನುಂಗುತ್ತನುಂಗುತ್ತ
ರೆಕ್ಕೆ ಬಲಿತು ಆಗಸಕ್ಕೆ ಹಾರುವ ಸಂಭ್ರಮಾತುರದಲ್ಲಿ
ಅಷ್ಟು ದಿನ ನೆಲೆಕೊಟ್ಟು ನಿಲ್ಲಿಸಿದ ನೆಲವನ್ನು ಮರೆತೇಹೋದರು.

ಆ ಹತ್ತಾರು ಗುರಿಗಳು , ಸಿಕ್ಕಷ್ಟೂ ಸಾಲದೆನ್ನುವ ಗಳಿಕೆ ,
ಸಾಧಿಸಿದಷ್ಟೂ ಇನ್ನೇನೋ ಉಳಿದುಹೋಯಿತೆನ್ನುವ ಹಳಹಳಿಕೆ
ಈ ಎಲ್ಲದರ ನಡುವೆ ದಣಿದೆವೆಂದುಕೊಳ್ಳುತ್ತ ಒಂದು ನಗುವೆಂದರೇನೆಂದೇ ಮರೆತರು.

ಎಲ್ಲವೂ ಇದ್ದೂ ಏನಿಲ್ಲವೆನ್ನುತ್ತ
ಬರದ ನಿನ್ನೆಗಳಿಗೆ ಕೊರಗುತ್ತ, ಗೊತ್ತಿಲ್ಲದ ನಾಳೆಗಳಿಗೆ ಕಾಯುತ್ತ
ಇಂದು ಬದುಕುವುದನ್ನು ಮರೆತೇಬಿಟ್ಟರು.

9 comments:

ತೇಜಸ್ವಿನಿ ಹೆಗಡೆ said...

ಮರೆತರು ಕವನವನೋದುತ್ತಾ..
ಹುದುಗಿಹ ಭಾವಗಳ ಮೆಲುಕುತ್ತಾ..
ನಿಜವೆಂದು ಮನಸೊಪ್ಪಲು,
ಮೆಚ್ಚುಗೆಯ ಬರೆಯಲು ನಾ
ಮರೆಯಲಿಲ್ಲ ..;-)

ಯಜ್ಞೇಶ್ (yajnesh) said...

ತುಂಬಾ ಸುಂದರವಾಗಿ ಬೈಂದು

ಶಾಂತಲಾ ಭಂಡಿ (ಸನ್ನಿಧಿ) said...

ಶ್ಯಾಮಾ...
ಪ್ರತಿ ಸಾಲೂ ಮುತ್ತು ಪೋಣಿಸಿದಂಗೆ, ಅದರರ್ಥ ಮಾಣಿಕ್ಯದಂಗೆ.
ಪ್ರತಿ ಸಾಲುಗಳೂ ಸತ್ಯವನ್ನು ಹೊತ್ತು ಧೈರ್ಯದಿಂದ ಮುನ್ನಡೆಯುವ ಯೋಧನ ಹಾಗೆ.
ಚೊಲೊ ಬರದ್ದೆ. ಬರೀತಾ ಇರು.

ಸ್ಮಿತಾ said...

ತುಂಬಾ ಚೆನ್ನಾಗಿ ಬರ್ದಿದಿಯ ಶ್ಯಾಮಾ ..... ನನ್ನ ಪರಿಸ್ಥಿತಿ ಹಾಗೆ ಇದೆ ಕಣೆ.

Unknown said...

Hi Shyama..Tumba cholo baradde..

jomon varghese said...

ನಮಸ್ಕಾರ..

ಸೊಗಸಾದ ಕವಿತೆ. ತುಂಬಾ ಚೆನ್ನಾಗಿ ಬರೆದಿದ್ದೀರ.

ಧನ್ಯವಾದಗಳು.

ಜೋಮನ್.

Jagali bhaagavata said...

ಅಯ್ಯಬ್ಬ....ಅಂತೂ ಗೋಳಿನ ಕತೆ ಕವಿತೆಗೆ ರಜೆ ಕೊಟ್ಟೆ ಅಂತ ಆಯ್ತು :-)ಚೆನ್ನಾಗಿದೆ :-)

ಶ್ಯಾಮಾ said...

ತೇಜಸ್ವಿನಿ

ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು :)

ಯಜ್ಞೇಶ್
ಧನ್ಯವಾದಗಳು

ಶಾಂತಲಾ

ಅಕ್ಕಾ,
ಮುತ್ತನ್ನು ಹುಡುಕಿ ಹುಡುಕಿ ಪೋಣಿಸುವುದು ಕಷ್ಟದ ಕೆಲಸ. ಮನಸ್ಸಲ್ಲಿ ಇಂಥ ಸಾಲುಗಳು ಯೋಧರ ಹಾಗೆ ಮುನ್ನುಗ್ಗುವುದಕ್ಕೆ ಯಾವಾಗಲೂ ಕಾಯ್ತಾ ಇರ್ತ. ಸಮಯ ಸಂದರ್ಭ ಸಿಗವು ಅಷ್ಟೆ. ನನ್ನ ಕಡೆಯಿಂದ ಪ್ರಯತ್ನ ಹೀಗೇ ಇರ್ತು. ಪ್ರೋತ್ಸಾಹಕ್ಕೆ ಧನ್ಯವಾದಗಳು

ಸ್ಮಿತಾ
ಯಾಕೆ ಹಾಗೆ ಅಂದುಕೊಳ್ತೀಯಾ? ನಿನ್ನ ಹತ್ರ ಆಮೇಲೆ ಮಾತಡ್ತೀನಿ :)
ಥ್ಯಾಂಕ್ಸ್ ಕಣೆ.

Roopa

ಥ್ಯಾಂಕ್ಸ್ :)

ಜೋಮನ್

ನಮಸ್ಕಾರ..
ಧನ್ಯವಾದಗಳು ಮೆಚ್ಚುಗೆಯ ಮಾತುಗಳಿಗೆ.

ಭಾಗವತ

ಬರೀ ರಜೆ ಕೊಟ್ಟಿದೀನಿ ಅಷ್ಟೆ, ಇಲ್ಲಿಂದ ಹೊರಟುಹೋಗಿ ಅಂತ ಏನೂ ಹೇಳಿಲ್ಲ. ರಜೆ ಮುಗಿಸ್ಕೊಂಡು ವಾಪಸ್ ಇಲ್ಲಿಗೆ ಬರ್ದೇ ಇನ್ನೆಲ್ಲಿಗೆ ಹೋಗ್ತಾವೆ ಅವು? ;-)

ಥ್ಯಾಂಕ್ಸ್ :)

Jagali bhaagavata said...

ಹೊಸದನ್ನು ಬರೆಯುವದನ್ನು ಮರೆತರು :-)