ತುಂಬಾ ದಿನಗಳ ನಂತರ ನಾನು ಮತ್ತು ನನ್ನ ಅಪ್ಪಯ್ಯ ಅದೂ ಇದೂ ಮಾತಾಡುತ್ತ ಕುಳಿತಿದ್ದೆವು. ಹೀಗೆ ಆರಂಭವಾಗುವ ಮಾತು ಆಮೇಲೆ ಗಂಭೀರ ಚರ್ಚೆಯಲ್ಲೋ ವಾದದಲ್ಲೋ ಕೊನೆಗೊಳ್ಳುವುದು ಸಾಮಾನ್ಯ. ಅವತ್ತೂ ಮಾತಡುತ್ತ ಮಾತಡುತ್ತ ನಮ್ಮ ಜೀವನದ ಧ್ಯೇಯ, ಸಿದ್ಧಾಂತ, ನಮಗೆ ನಾವೇ ಹಾಕಿಕೊಂಡ ನಿಯಮಗಳು ಇಂಥ ವಿಷಯಗಳೆಲ್ಲ ಚರ್ಚೆಯ ಭಾಗವಾಗಿ ಬಂದಾಗ ನನ್ನ ಮತ್ತು ಅಪ್ಪಯ್ಯನ ಸಿದ್ಧಾಂತ, ನಿಯಮಗಳಲ್ಲಿ ಸಾಕಷ್ಟು ಸಾಮ್ಯತೆ ಇದೆ ಅನ್ನಿಸಿತು. ಅವೆಲ್ಲ ಅಪ್ಪಯ್ಯ ಯಾವತ್ತೂ ನನ್ನ ಮೇಲೆ ಹೇರಿದ ವಿಷಯಗಳಲ್ಲ, ನನ್ನ ಭಾಗವೆಂದೇ ತಿಳಿದಿರುವ ಅದೆಷ್ಟೋ ವಿಷಯಗಳು ಅಪ್ಪಯ್ಯನಿಗೂ ಹಾಗೆಯೇ ಎಂದು ತಿಳಿದಾಗ ಇಬ್ಬರಿಗೂ ಒಂದು ಬಗೆಯ ಅಚ್ಚರಿ. ನೀನು ನಿನ್ನಪ್ಪನ ತದ್ರೂಪು ಅಂತ ಅಮ್ಮ ಯಾವಾಗಲೂ ಹೆಳುವುದು ಸರಿಯೇ ಇದೆ ಅಂತ
ಇಬ್ಬರೂ ನಕ್ಕೆವು. ಹಾಗೆಯೇ ಮಾತು ನನ್ನ ಬರವಣಿಗೆ ಓದುವಿಕೆಗಳ ಬದಿಗೆ ತಿರುಗಿತು. ಅದರೊಡನೆ ಕೆಲವು ಹಳೆಯ ವಿಷಯಗಳನ್ನು ಮೆಲುಕು ಹಾಕುವ ಹಾಗಾಯಿತು.
ಅಪ್ಪಯ್ಯ ಒಳ್ಳೆಯ ಬರಹಗಾರ. ಬರೆಯುವುದನ್ನು ಬಿಟ್ಟು ಬಹಳವೇ ವರ್ಷಗಳಾದವು. ಯಾಕೆ ಬಿಟ್ಟಿದ್ದು ಅನ್ನುವುದಕ್ಕೆ ಅವನಲ್ಲಿ ಸಕಾರಣಗಳಿರಲಿಲ್ಲ. ಅಪ್ಪಯ್ಯ ಪ್ರತಿ ಸಲದಂತೆ ಕೊಡುವ ತುಂಡು ತುಂಡು ಕಾರಣಗಳೊಂದೂ ನನಗೆ ಸರಿ ಕಾಣಲಿಲ್ಲ. ನೀನು ಬರೀತಾ ಇದ್ದೀಯಲ್ಲ ಅದೇ ಖುಷಿ ಅಂದ ಅಪ್ಪಯ್ಯ. ಮತ್ತೆ ಆ ದಿನಗಳಲ್ಲಿ ಅಪ್ಪಯ್ಯ ಬರೆದಿದ್ದ ಕೆಲವು ಲೇಖನಗಳು ಮತ್ತು ಅವುಗಳ ಬಗೆಗಿನ ಕೆಲವು ಸ್ವಾರಸ್ಯಕರ ಕಥೆಗಳ ಬಗ್ಗೆ ಮಾತಾಯಿತು. ಅದರ ನಡುವೆ ನಂಗೆ ನೆನಪಾಗಿದ್ದು ಅಪ್ಪಯ್ಯನ ಕವನಗಳು. ನಾವು ಚಿಕ್ಕವರಾಗಿದ್ದಾಗ ಅದನ್ನು ಓದಿ ಹೆಳುತ್ತಿದ್ದಿದ್ದು ಈಗಲೂ ನೆನಪಿದೆ.ಅವುಗಳಲ್ಲಿ 3 ಕವನಗಳು ನನಗೆ ಬಹಳ ಇಷ್ಟವಾಗಿದ್ದು.
ಒಂದು "ಅಪ್ಪ ಹೇಳಿದ್ದು" ಎನ್ನುವ ಕವಿತೆ, ಇನ್ನೊಂದು ಚಂದ್ರಗುಪ್ತ ಮೌರ್ಯನ ಕುರಿತಾದ ಕಥಾ ಕವನ. ಅದನ್ನು ಅಪ್ಪಯ್ಯ ನಾಟಕದ ಹಿಮ್ಮೇಳ ಸಂಗೀತಕ್ಕೆಂದು ಬರೆದದ್ದು, ರಾಗ ಸಂಯೋಜಿಸಿ ಹಾಡಿದ್ದು. ಮತ್ತೊಂದು "ಅಪ್ರಬುದ್ಧ" ಎನ್ನುವ ಕವಿತೆ.
ನೆನಪಿಸಿಕೊಂಡಾಗ ಕೆಲವು ಸಾಲುಗಳು ಮರೆತಿದ್ದವು. ನಂಗೆ ಅವು ಬೇಕೇ ಬೇಕೆಂದು ಹೇಳಿದಾಗ ಅಪ್ಪಯ್ಯ ಹಳೆಯ ಕಡತಗಳಲ್ಲೆಲ್ಲ ಹುಡುಕಿ ಮರೆತ ಸಾಲುಗಳನ್ನೆಲ್ಲ ನೆನಪಿಸಿಕೊಂಡಿದ್ದಾಯ್ತು. ಈ ಕವನವನ್ನು ನನ್ನ ಬ್ಲಾಗ್ ನಲ್ಲಿ ಹಾಕ್ತೇನೆಂದು ನಾನು ಹೇಳಿದಾಗ "70-80 ಕವನ ಬರೆದವಳಿಗೆ ನನ್ನ ಒಂದು ಕವನ ಬೇಕೇನೆ?" ಅಪ್ಪಯ್ಯ ತಮಾಷೆ ಮಾಡಿದರೆ ನಾನಂದೆ "ನನ್ನ 100 ಕವನವೂ ನಿನ್ನ 3 ಕವನದ ತೂಕಕ್ಕೆ ಸರಿದೂಗುವುದಿಲ್ಲವೇನೊ!." ಅಪ್ಪಯ್ಯ ಸುಮ್ಮನೇ ನಕ್ಕ.
"ಅಪ್ಪ ಹೇಳಿದ್ದು" ಎನ್ನುವ ಕವಿತೆಯನ್ನು ಇಲ್ಲಿ ಹಾಕಿದ್ದೇನೆ.
ದು:ಖ ದುಮ್ಮಾನಗಳ
ಕಾಲ ಬಂದಾಗೆಲ್ಲ
ಅಪ್ಪ ಹೇಳುತಲಿದ್ದ
ತಾಳು ತಾಳು,
ತಾಳು ಎಂದು
ಕಾಲ ನಮಗೊಂದು ಬರಬಹುದೆಂದು.
ರಾಮ ಬರುವನು ಎಂದು
ಶಬರಿ ಕಾದಿದ್ದಂತೆ
ವರುಷಗಳನೇಕವನವನು
ವ್ಯರ್ಥ ಕಳೆದ,
ಯಾರು ಬೈದರು ಸಹಿಸಿ
ಸಕಲ ಕಷ್ಟವ ಭರಿಸಿ
ತಾಳ್ಮೆಯಾಂತವನವನು
ಏರಿ ಕುಳಿತ,
ರಾಮ ಬರಲೇ ಇಲ್ಲ
ಶಬರಿ ಬಿಡಲೇ ಇಲ್ಲ.
ಬರುವ ಕಾಲವ ಕಾದು
ಸುಸ್ತಾಗಿ ಕೊನೆಗೊಮ್ಮೆ
ಇಲ್ಲವಾದರು ಅವರು ನನ್ನನಗಲಿ.
ಅವರ ನುಡಿ ಪಾಲಿಸುತ
ಬರದ ಕಾಲವ ಕಾದು
ಬೇಸತ್ತು ಕಾದಿರುವೆ
ಕಾಲನ ಕರೆಗೆ.
7 comments:
ಮೊನ್ನೆ ಬ್ಲಾಗರ್ಸ್ ಮೀಟಲ್ಲಿ ಶ್ಯಾಮ್ ಹೇಳ್ದಾಂಗೆ ಅಪ್ಪಂಗೊಂದು ಬ್ಲಾಗ್ ಎಂತಕೆ ಮಾಡ್ಲಾಗ ನೀನು?:)
ಶ್ಯಾಮಾ...
ಕವನ ಚೆನ್ನಾಗಿದೆ. ಹೀಗೆ ಆಗಾಗ ಅಪ್ಪಯ್ಯ ಬರೆದ ಕವನಗಳನ್ನೂ ಓದುವ ಭಾಗ್ಯ ನಮಗೆ ಲಭಿಸುತ್ತಿರಲಿ. ಇನ್ನೆರಡು ಕವನಗಳೆಲ್ಲಿ?
houdu.. gambheera vishya.. ondu blog madi 'appayya' antha hesridu. appange sareee kaaTa kottu matthe bariyo hange madu.
ತುಂಬಾ ಚೆನ್ನಾಗಿದೆ ಕಣೆ , uncle ದು ಒಂದು ಬ್ಲಾಗ್ ಮಾಡೇ ಬಿಡು . I know hez superb writer.
ಶ್ರೀನಿಧಿ, ಸುಶ್ರುತ ,
ಗಂಭೀರ ವಿಷಯದ ಗಂಭೀರ ಸಲಹೆಯನ್ನ ಗಂಭೀರವಾಗೇ ಸ್ವೀಕರಿಸಿದ್ದಿ. :) . ನೋಡನ 'ಅಪ್ಪಂಗೊಂದು ಬ್ಲಾಗ್'ಮಾಡಕ್ಕಾಗ್ತಾ ಹೇಳಿ.
ಧನ್ಯವಾದಗಳು.
ಶಾಂತಲಕ್ಕ,
ಥಾಂಕ್ಸ್ . ಇನ್ನೆರಡು ಕವನ ಇದ್ದು ನನ್ನಹತ್ರನೆಯಾ, ಹಾಕ್ತಿ ಯಾವಾಗಾದ್ರು :)
ಸ್ಮಿತಾ ,
ಥಾಂಕ್ಸ್ ಕಣೇ. kahanDita keLtini appanna ii bagge :)
Post a Comment