Wednesday, July 16, 2008

ಸೋರಿ ಹೋಗುತಿದೆ ಬೆಳದಿಂಗಳು

ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.
ಬೆಳ್ಳಿ ಬೆಳಕ ಕಣ್ತುಂಬಿಕೊಂಡು
ಮನದಣಿಯೆ ಅಂಗಳದಲ್ಲಿ ನಲಿಯುವವರಿಲ್ಲದೇ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.

ಅವಳ ಕಂಗಳೊಳಗೆ ಬೆಳದಿಂಗಳಿಳಿಯುವಾಗ
ಅವನು ಅವಳ ಕಣ್ಣಲ್ಲಿ ಕಣ್ಣಿಡಲು ,
ಅವಳ ಕೆನ್ನೆ ಕೆಂಪಾಗಿ ಅವನು ನಗುವುದಕೆ
ಅವನಿಲ್ಲ ಅವಳಿಲ್ಲ ಅಲ್ಲಿ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.

ಅಳುವ ಕಂದನಿಗೊಮ್ಮೆ
ನಗುವ ಚಂದಕ್ಕಿ ಮಾಮನನು ತೋರಿಸಿ
ಹಾಲು ಬೆಳದಿಂಗಳಲಿ ತೋಯ್ದ ತುತ್ತನುಣಿಸಿ
ಚಂದ್ರನೂರಿಗೆ ಕಳುಹುವೆನೆಂದು ಲಾಲಿ ಹಾಡಿ
ಮುದ್ದಿಸಲು ಯಾರಿಲ್ಲದೇ ಅಲ್ಲಿ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.

ಶ್ರಾವಣದ ಇರುಳಿನಲಿ
ಕಪ್ಪಿಟ್ಟ ಕಾರ್ಮೋಡ ಕರಗಿ ಮಳೆ ಹನಿಯುವಾಗ
ಮರದ ಮರೆಯಲ್ಲಿಣುಕಿ
ಬೆಳದಿಂಗಳ ನಗೆ ಚೆಲ್ಲುವ ಚಂದಿರನ
ತುಂಬುಮೊಗವ ನೋಡುವವರಿಲ್ಲದೇ ಅಲ್ಲಿ
ಸೋರಿ ಹೋಗುತಿದೆ ಬೆಳದಿಂಗಳು
ಸುಮ್ಮನೇ ಅಂಗಳದಲ್ಲಿ.

8 comments:

ತೇಜಸ್ವಿನಿ ಹೆಗಡೆ said...

ಶ್ಯಾಮಾ,

"ಸೋರಿಹೋಗುತಿದೆ ಬೆಳದಿಂಗಳು.." ತುಂಬಾ ಸುಂದರ ಕಲ್ಪನೆ. ಸಿಹಿಯಾದ ನೋವಿನ ಜೊತೆ ಸೊಗಸಾದ ಮುಗುಳ್ನಗೆಮೂಡಿದಂತಹ ಅನುಭವವಾಯಿತು.

Sandeepa said...

ತೆಗೆದಿಡುವೆಯಾ ಸ್ವಲ್ಪ?
ತುಂಬಾ ಬೇಡ, ನಿನ್ನ ಬೊಗಸೆಯಲ್ಲಿ
ಹಿಡಿಸುವಷ್ಟು, ಅಷ್ಟೇ ಸಾಕು!
ಏನು ಮಾಡಲಿ? ಬೇಕೆಂದಾಗ
ಇರುವುದಿಲ್ಲ ಬೆಳದಿಂಗಳು,
ಈಗೀಗ ಬೆಚ್ಚಗಿರಿಸುವ ಬಿಸಿಲಿಗೂ ಬರ!
ಜೀವನವೆಲ್ಲ ಒಂತರಾ ಮೋಡಕವಿದ
ವಾತಾವರಣ!!

sunaath said...

ನಿಮ್ಮ ಕವನದಲ್ಲಂತೂ ಬೆಳದಿಂಗಳು ಸೂರೆಯಾಗಿದೆ, ಸೋರಿ ಹೋಗಿಲ್ಲ.

ಭಾವಜೀವಿ... said...

ಶ್ಯಾಮಾ,
ಮಗುವಿನ ಮುಗ್ಧ ನಗುವಿನಂತಿದೆ ನಿಮ್ಮ ಈ ಕವನ...
ಯಾರ ಹಂಗೂ ಇಲ್ಲದೆ, ಯಾರ ಅಣತಿಗೂ ಕಾಯದೆ ಸುಮ್ಮನೆ ಕಾನನದ ಒಳಗಿಂದ ಹುಟ್ಟುವ, ಹೆಸರೇ ಬೇಡದ ಝರಿಯಂತೆ ಹರಿಯುವ, ಸುರಿಯುವ ಬೆಳದಿಂಗಳು, ಈ ಕವನದಲ್ಲಿ ಸಂಪೂರ್ಣವಾಗಿ ನಿಮಗೆ ದಕ್ಕಿದೆ! ಬೆಳದಿಂಗಳನ್ನು ನೋಡಿದಾಗಲೆಲ್ಲಾ ನನಗೆ ಹಾಲು ಕುಡಿದು ಕೇಕೆ ಹಾಕುವ ಮಗುವಿನ ಹಾಲುಗಲ್ಲದ ಮೇಲೆ ಉಳಿದಿರುವ ಆ ಹಾಲಿನ ಹನಿಯನ್ನು ನೆನಪಿಸುತ್ತದೆ! ಹಾಗೆ ಈ ನಿಮ್ಮ ಕವನವೂ ಕೂಡ!!

Vijaya said...

tumba saralavaagi chennagi bardideeya ... ninna blog na onderadu posts follow maaddroo comment haakirlilla ... kaarana illa ... heege.
oh ... btw ... congrats ... chikkamma aagiddakke!! better late than never :-)

Vijaya said...

better late than never ... wishes ge ... tappu tilyokke munche explanation kottideeni :-)

ಶ್ಯಾಮಾ said...

ತೇಜಸ್ವಿನಿ ಅಕ್ಕ
ಹೌದು ಒಂಥರಾ ನೋವು.. ಬೆಳದಿಂಗಳಿನ ಸೊಗಸನ್ನು ಸವಿಯದೇ ಹಾಗೇ ಬೆಳದಿಂಗಳು ಬತ್ತಿ ಹೋಗ್ತಾ ಇದ್ದಲ್ಲ ಅಂತ..
ಧನ್ಯವಾದಗಳು ಪ್ರತಿಕ್ರಿಯೆಗೆ.

Alpazna,

ಪುಟ್ಟ ಬೊಗಸೆ, ಅಷ್ಟೇ ಹಿದಿದಿಟ್ಟಿದ್ದು.

ಬೇಕೆಂದಾಗ ಬೆಳದಿಂಗಳು ಇಲ್ಲ, ಬೆಳದಿಂಗಳು ಇದ್ದಾಗ ಸವಿಯಲು ಮನಸಿಲ್ಲ ಅದ್ಕೆ ಬೆಳದಿಂಗಳು ಸೋರಿ ಹೋಗ್ತಾ ಇರದು.

ಮನಸಲ್ಲಿ ಕವಿದ ಮೋಡ ಸರಿದು ಹೂ ಬಿಸಿಲು ಮೂಡಿ ಬೆಚ್ಚಾಗಾಗಲಿ,
ರಾತ್ರಿ ಆಗಸದಲ್ಲಿ ಚಂದ್ರ ನಕ್ಕು ಬೆಳದಿಂಗಳು ಸುರಿಯಲಿ :)

ಸುನಾಥರವರೇ,
ಅಂಗಳದಲ್ಲಿ ಸೋರಿ ಹೋಗುತ್ತಿದ್ದ ಬೆಳದಿಂಗಳನ್ನು ಪುಟ್ಟ ಬೊಗಸೆಯಲ್ಲಿ ಹಿಡಿದಿಡಲು ಮಾಡಿದ ಯತ್ನವೇ ಕವಿತೆ.
ಧನ್ಯವಾದಗಳು.

ಭಾವಜೀವಿ,

ಬ್ಲಾಗಿಗೆ ಸ್ವಾಗತ.

ನಿಮ್ಮ ಪ್ರತಿಕ್ರಿಯೆಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ, ಎಷ್ಟು ಸುಂದರವಾಗಿ ಪ್ರತಿಕ್ರಿಯಿಸಿದ್ದೀರ. ಧನ್ಯವಾದಗಳು.

Vijaya,

ಬ್ಲಾಗಿಗೆ ಸ್ವಾಗತ.
ಧನ್ಯವಾದಗಳು, ಪ್ರತಿಕ್ರಿಯೆಗೆ ಮತ್ತು wishes ಗೆ :)
ತಪ್ಪು ತಿಳಿಯಲ್ಲ ಮೊದಲನೆ comment ಗೇ ಅರ್ಥ ಆಯ್ತು :)

Sree said...

hmm...sweetest songs n saddest thoughts yet again!