ನೀಲಿ ಕಡಲಿನ ಅಲೆಗಳು ಎಂದಿಗಿಂತಲೂ ಅಂದು ಹೆಚ್ಚಾಗಿಯೇ ಹುಚ್ಚೆದ್ದಿದ್ದವು. ಇಳಿಸಂಜೆಯ ಬಿಸಿಲೊಡನೆ ಕಡಲ ತೀರದಲ್ಲಿ ಬೆಚ್ಚನೆಯ ಕಾವಿತ್ತು. ಗಾಳಿ ತುಸು ಜೋರಾಗಿಯೇ ಬೀಸುತ್ತಿತ್ತು. ಜಡೆ ಕಟ್ಟದೆ ಹಾಗೆಯೇ ಬಿಟ್ಟಿದ್ದ ನನ್ನ ನೀಳ ಕೂದಲು ಗಾಳಿಗೆ ಹಾರುತ್ತಿತ್ತು. ಸೀರೆಯ ಉದ್ದನೆಯ ಸೆರಗು ಗಾಳಿಯೊಡನೆ ತೇಲುತ್ತಾ ನನ್ನ ನಿನ್ನ ನಡುವೆ ಪರದೆಯಂತೆ ಅನ್ನಿಸುತ್ತಿತ್ತು. ನಮ್ಮೊಡನೆ ಬಂದವರೆಲ್ಲ ಆಚೆಯೆಲ್ಲೋ ನೀರಲ್ಲಿ ಆಡುತ್ತಿದ್ದರು ಅನ್ನಿಸುತ್ತದೆ. ನಂಗೆ ಅದ್ಯಾವುದರ ಪರಿವೆಯಿರಲಿಲ್ಲ. ಅಲ್ಲಿದ್ದಿದ್ದು ನಾವಿಬ್ಬರೇ ಅನ್ನಿಸುತ್ತಿತ್ತು ನನಗೆ. ಪರದೆಯಂತೆ ನಡುವೆ ಹಾರುತ್ತಿದ್ದ ನೀಲಿ ಸೆರಗಿನಾಚೆ ನೀನು ಕಾಣುತ್ತಿದ್ದೆ. ತುಂಬ ಖುಷಿಯಾಗಿದ್ದೆ ನೀನು, ಬಂದು ಹೋಗುತ್ತಿದ್ದ ಅಲೆಗಳೊಡನೆ ಆಡುತ್ತ ನಿನ್ನ ಯಾವತ್ತಿನ ಪ್ರಸನ್ನ ಮುಖಭಾವದಲ್ಲಿ. ನನ್ನಮನವೋ ಯಾವತ್ತಿನಂತೆ ಅಂದೂ ಕೂಡ ದ್ವಂದ್ವ ತುಂಬಿದ ಗೂಡು. ಏನೋ ಕಳವಳ. ಏನನ್ನೋ ನಿರ್ಧರಿಸಬೇಕಾದ ತೀವ್ರತೆ ನನ್ನಲ್ಲಿ.
ಒಮ್ಮೆಕಣ್ಣ ಮುಂದೆ ಹರವಿಕೊಂಡಿದ್ದ ಆ ಅಗಾಧ ಜಲರಾಶಿಯನ್ನು ನೋಡಿದೆ. ಏನೋ ಒಂದು ಧನ್ಯತಾ ಭಾವ, ಶರಣಾಗತ ಭಾವ ಮನದಲ್ಲಿ ಉಕ್ಕಿ ಬಂತು. ಈ ಸವಿಸ್ತಾರದೆದುರು ತೃಣಮಾತ್ರಳು ನಾನು ಎನ್ನುವ ಭಾವ, ಇದಲ್ಲದೇ ಮತ್ತೆಲ್ಲವೂ ಶೂನ್ಯ ಎನ್ನುವ ಭಾವ ಮನದ ಕಡಲಲ್ಲಿ ಉಕ್ಕಿ ಉಕ್ಕಿ ಬಂತು . ತಿರುಗಿ ನಿನ್ನತ್ತನೋಡಿದೆ. ಮತ್ತದೇ ಭಾವ, ಕಡಲನ್ನು ನೋಡಿದಾಗ ಮನದಲ್ಲಿ ಉಕ್ಕಿದ ಭಾವವೇ ಮತ್ತೊಮ್ಮೆ ಬಂತು. ಹೌದು ಮೊದಲೆಲ್ಲ ನನಗೆ ಕಡಲನ್ನು ಕಣ್ಣುಹಾಯುವಷ್ಟು ದೂರ ನೋಡಿದಾಗ ಮಾತ್ರ ಆ ಶರಣಾಗತ ಭಾವ,ಸೋತ ಭಾವ ಬರುತ್ತಿದ್ದಿದ್ದು . ಆಗೊಮ್ಮೆ ನಿನ್ನ ಕಂಡಾಗಿನಿಂದ ನಿನ್ನ ನೋಡಿದಾಗಲೂ ಅದೇ ಭಾವ ಮನದಲ್ಲಿ ಮೂಡುತ್ತದೆ ಯಾಕೋ ಗೊತ್ತಿಲ್ಲ.
ಅಲೆಗಳ ನೀರಿನಿಂದ ಒದ್ದೆಯಾದ ಆ ಮರಳಿನ ತೀರದ ಮೇಲೆ ಹೆಜ್ಜೆ ಗುರುತನ್ನು ಇಡುತ್ತಾ ಹಾಗೆಯೇ ಅದೆಷ್ಟೋ ದೂರ ಮೌನವಾಗಿ ನಡೆದು ಹೋಗುವ ಮನಸ್ಸಾಯಿತು ನನಗೆ. ನೀನೂ ನನ್ನೊಡನೆ ಬಂದು ಇಬ್ಬರೂ ಜೊತೆಯಾಗಿ ಹೆಜ್ಜೆ ಹಾಕಬೇಕೆಂಬ ಹಂಬಲ ಮನದಲ್ಲಿತ್ತು. ನೀನೋ ನೀರಲ್ಲಿ ಮುಳುಗೇಳುತ್ತ ಅಲೆಗಳೊಡನೆ ಆಡುತ್ತಿದ್ದೆ. ನನಗೋ ಮಳೆಹನಿಗಳು ಬೀಳುವಾಗಷ್ಟೇ ನೀರಲ್ಲಿ ಆಡಬೇಕೆನಿಸುವುದು. ಅದು ಬಿಟ್ಟರೆ ಈ ಕಡಲ ನೀರಲ್ಲಿ ಇಳಿದು ಆಡಬೇಕೆಂದು ಅನ್ನಿಸುವುದೇ ಇಲ್ಲ. ನಾನು ನೀನಿದ್ದ ಕಡೆಗೆ ಬೆನ್ನು ಹಾಕಿ ಹೆಜ್ಜೆ ಮುಂದಿಡಲು ಶುರುವಿಟ್ಟೆ. ನಾನೊಂದಿಷ್ಟು ದೂರ ನಡೆದ ಮೇಲೆ ನೀನು ಓಡೋಡುತ್ತ ಬಂದು ನನ್ನ ಜೊತೆಯಾಗುವೆಯೇನೋ ಅಂದುಕೊಂಡೇ ನಡೆಯಲಾರಂಭಿಸಿದೆ.
ಮರಳಿನ ಮೇಲೆ ಮೂಡುತ್ತಿದ ಅದೆಷ್ಟೋ ಹೆಜ್ಜೆಗುರುತುಗಳನ್ನು ಹಿಂದೆ ಹಾಕುತ್ತ ನಾನು ಅದೆಷ್ಟು ದೂರ ನಡೆದುಬಿಟ್ಟೆನೋ. ಕಾಲನ್ನು ಸೋಕಿ ಹೋದ ಅಲೆಗಳ ಲೆಕ್ಕವಿಡಲಾಗಲಿಲ್ಲ ನನಗೆ. ದೂರ ದೂರದವರೆಗೂ ನೋಡಿದಷ್ಟೂ ಮುಗಿಯದ ನೀಲಿ ಕಡಲು. ನಡೆದಷ್ಟೂ ದೂರವಾದಂತೆ ಕಾಣುವ ಕೈಗೆಟುಕದ ನೀಲಿ ಆಗಸ. ಎಲ್ಲ ನೋಡುತ್ತ ನೀಲಿ ಸೀರೆಯುಟ್ಟಿದ್ದ ನಾನೂ ಆ ನೀಲಿ ಅನಂತದಲ್ಲಿ ಲೀನವಾಗುತ್ತಿರುವೆನೇನೋ ಅನ್ನಿಸಿತು.
ಅಷ್ಟು ದೂರ ನಡೆದ ಮೇಲೆ ನೀನೂ ನನ್ನೊಡನೆ ಮೌನವಾಗಿ ನಡೆದುಬರುತ್ತಿರಬಹುದಾ ಅನ್ನಿಸಿ ಹಿಂತಿರುಗಿ ನೋಡಿದೆ. ಇಲ್ಲ ಅಲ್ಲಿ ನೀನಿರಲಿಲ್ಲ. ಅದೆಷ್ಟೋ ದೂರದಲ್ಲಿ ನಾ ಬಿಟ್ಟು ಬಂದ ನೀನು ಇನ್ನೂ ಅಲ್ಲೇನಿಂತಿದ್ದೆ. ದೂರದ ಒಂದು ಅಕೃತಿಯಂತೆ ಕಾಣುತ್ತಿದ್ದೆ. ಒಂದೆರಡು ನಿಮಿಷಗಳ ನಂತರ ನೀನು ನನ್ನತ್ತ ಕೈ ಬೀಸುತ್ತಿರುವುದು ಕಂಡಿತು. ಆ ಕ್ಷಣ ನನ್ನ ನೋಟ ಕೊಂಚ ಮಸುಕಾಯಿತು. ಮತ್ತೆ ಮತ್ತೆ ನಿನ್ನತ್ತ ನೋಡಿದೆ. ಇಲ್ಲ, ಆಗ ಅದೇ ಆ ಕಡಲಿನ ಮುಂದೆ ಬರುತ್ತಿದ್ದ ಸೋತ ಭಾವ ಧನ್ಯತಾ ಭಾವ ನನ್ನಲ್ಯಾಕೋ ಮೂಡಲಿಲ್ಲ.
ನಾ ನಡೆದು ಬಂದ ದಾರಿಯನ್ನೇನೋಡಿದೆ. ಅಚ್ಚೊತ್ತಿದ್ದ ಹೆಜ್ಜೆ ಗುರುತೊಂದೂ ಕಾಣಲಿಲ್ಲ. ಬಂದು ಹೋದ ಅಲೆಗಳು ಅವುಗಳನ್ನೆಲ್ಲ ಕಡಲ ಮಡಿಲೊಳಗೆಲ್ಲೋ ಸೇರಿಸಿಯಾಗಿತ್ತು. ನಿನ್ನಿಂದ ಬಹಳ ದೂರ ನಡೆದು ಬಂದುಬಿಟ್ಟಿದ್ದೇನೆಂದು ದೃಢವಾಗಿದ್ದು ಆಗಲೇ. ಮರಳಿ ನಿನ್ನೆಡೆಗೆ ಬರಲಾರದಷ್ಟು ದಣಿವಾಗಿದೆಯೆನಿಸಿತು. ಏನೋ ನಿರ್ಧಾರವಾದಂತಾಗಿ ಮನಸ್ಸು ಭಾರವಾದ ನಿಟ್ಟುಸಿರನ್ನು ಹೊರಹಾಕಿತು. ಅಲೆಬಂದು ಹೋದಮೇಲೆ ನಿಶ್ಶಬ್ದವಾದ ದಡದಂತಾಗಿತ್ತು ಮನ.
ಮತ್ತೆ ನಮ್ಮೊಡನೆ ಬಂದವರೆಲ್ಲ ಹೊರಡುವ ಸಮಯವಾಯಿತೆಂದು ಕೂಗುತ್ತಿದ್ದರು. ಕಡಲಿನೆಡೆಗೆ ಬೆನ್ನು ಹಾಕಿ ಎಲ್ಲರೂ ಹೊರಟರು, ನೀನೂ , ನಾನೂ . ಅಷ್ಟು ಹೊತ್ತು ಬೆಳಗುತ್ತಿದ್ದ ಸೂರ್ಯ ನಮ್ಮ ಹಿಂದೆ ಅದೇ ಆ ಕಡಲಿನಾಳದಲ್ಲಿ ಮುಳುಗುತ್ತಿದ್ದ.
14 comments:
ಅಗಾದ ಕಡಲಿನ ಭಾವಕ್ಕೆ ಮನದ ಭಾವಗಳ ಬಣ್ಣದ ಲೇಪನ ಸೊಗಸಾಗಿದೆ...
ಕಡಲ ತೀರದ ಬೆಚ್ಚನೆ ಸಂಜೆಯ ಅನುಭವವನ್ನ ಬರಹದಲ್ಲಿ ಮೂಡಿಸಿದ್ದಿರಾ.... :)
Shyaama,
Good one.
ಶ್ಯಾಮಾ...
ಚೆನ್ನಾಗಿದೆ ಕಡಲಾಳದ ಭಾವಗಳ ಮನದಾಳದ ಅಲೆಗಳಾಗಿ ಮೂಡಿಸಿದ ರೀತಿ.
ಶ್ಯಾಮಾ
ಕಡಲ ಕಡುನೀಲಿ ಬಣ್ಣವೇ ವಿಷಾದದ ಹೊದಿಕೆಯನ್ನುಟ್ಟು ಕಥಾರೂಪಹೊತ್ತು ಬಂದಂತೆ ಅನಿಸಿತು. ಎಷ್ಟೋಂದು ಏಕಾಂಗಿತನವಿದೆ!? ಕಡಲೊಳಗೆ ಕಡಲೊಂದೇ ಒಂಟಿಯಾಗಿರುವಂತೆ...
ಅಮರ,
ನೆನಪಿನಂಗಳಕ್ಕೆ ಸ್ವಾಗತ ನಿಮಗೆ.
ಭಾವಗಳೇ ಹಾಗೆ, ನದಿಯಾಗಿ ಹರಿದರೂ ಕೊನೆಗೆ ಸೇರುವುದು ಕಡಲನ್ನೇ.
ಭಾವಕ್ಕೆ ಬಳಿದ ಬಣ್ಣ ವಿಷಾದದ್ದಗಿದ್ದರೂ ಅದೂ ಒಮ್ಮೊಮ್ಮೆ ಹಿತ.
ಧನ್ಯವಾದಗಳು ಪ್ರತಿಕ್ರಿಯೆಗೆ.
ಮನಸ್ವಿನಿ ,
Tahnkuu
ಶಾಂತಲಕ್ಕ,
ಅಲೆಗಳ ಭಾವವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದ.
ತೇಜಸ್ವಿನಿ,
ಕಡಲು.......
ಕಡಲಿನ ಮುಂದೆ ನಾನು ಯಾವಾಗಲೂ ಮೌನಿ, ವಿಷಾದ/ವಿನೋದಗಳ ನಡುವಿನ ಅಂತರ ನಿಜಕ್ಕೂ ಮರೆತುಹೋದಂತೆ ಆ ಕ್ಷಣ. ಆದರೆ ಮನದ ಮಾತುಗಳಿಗೆ ಯಾವತ್ತೂ ಮೌನವಿಲ್ಲ. ಅಂಥ ಮೌನ ಬೇರೆ ಯಾವಾಗಲಾದರೂ ನೆನಪಾದಾಗ ನನಗೆ ಅಚ್ಚರಿ. ಇಂಥ ಅಚ್ಚರಿಯನ್ನು ಕಥಾವಸ್ತುವಾಗಿಟ್ಟು ಯೋಚಿಸಿದಾಗ ಮೂಡಿದ್ದು ಈ ಕಥೆ.
"ಕಡಲ ಕಡುನೀಲಿ ಬಣ್ಣವೇ ವಿಷಾದದ ಹೊದಿಕೆಯನ್ನುಟ್ಟು" ಒಳ್ಳೇವ್ಯಾಖ್ಯಾನ್ಯ.
ಇನ್ನು, ಕಡಲೊಳಗೆ ಕಡಲು ಯಾವಾಗಲೂ ಒಂಟಿಯೇ. (ನಂಗೆ ಯಾಕೋ ಹಂಗೆ ಅನ್ನಿಸ್ತಾ ಇದ್ದು)
ಕಡಲಿಗೂ ಯಾವುದಾದರೂ ಪ್ರಶ್ನೆ ಉಳ್ಸಿದ್ನಾ? :)
ಪ್ರತಿಕ್ರಿಯೆಗೆ ಧನ್ಯವಾದಗಳು.
"ಅಲೆ ಬಂದು ಕರೆಯುವುದು ನಿನ್ನೊಲುಮೆಯರಮನೆಗೆ..." ಸಾಲುಗಳಿಗಿಂತ ವ್ಯತಿರಿಕ್ತ ಭಾವಹೊರಳು ಇಲ್ಲಿ.
ಕಡಲಿನೊಳಗಿನ ಮೌನದೊಳಗೆ ಅಸಂಖ್ಯ ಪ್ರಶ್ನೆಗಳೇ ಹುದುಗಿರುವಾಗ ಕಡಲಿಗೆ ಪ್ರಶ್ನೆಗಳನ್ನು ಉಳಿಸುವ ಮಾತೆಲ್ಲಿ ಬಂತು? ನಿನ್ನ-ನನ್ನಂಥ ಸಾವಿರಾರು ಭಾವಜೀವಿಗಳ ಪ್ರಶ್ನೆಗಳ ಆಗರ ಆ ಸಾಗರ. ಅದರ ಮುಂದೆ ಮೌನವೇ ಬಂಧುರ.
Font colour ಬದ್ಲಾಯ್ಸು.
ಸುಪ್ತದೀಪ್ತಿ,
"ಕಡಲಿಗೆ ಪ್ರಶ್ನೆಗಳನ್ನು ಉಳಿಸುವ ಮಾತೆಲ್ಲಿ ಬಂತು? "
ಹೌದು,ಕಡಲಿನೊಳಗಿನ ಮೌನದೊಳಗೆ ಹುದುಗಿರುವ ಅಸಂಖ್ಯ ಪ್ರಶ್ನೆಗಳೊಡನೆ ಕಡಲಿಗೇ ನಾವು ಬಿಟ್ಟು ಬಂದಿರುವ ಪ್ರಶ್ನೆಗಳು ಅದೆಷ್ಟೋ?
ಇನ್ನು ಕಡಲಿನೆದುರುಗಿನ ಮೌನದ ಬಗ್ಗೆ ಹೇಳಬೇಕೆಂದರೆ ಒಂದೇ ಶಬ್ದ ಸಾಕು "ಮೌನ".
ಧನ್ಯವಾದಗಳು.
JB
ಬದ್ಲಾಯಿಸಿದ್ದೇನೆ.
ಧನ್ಯವಾದಗಳು
Registration- Seminar on the occasion of kannadasaahithya.com 8th year Celebration
ಪ್ರೀತಿಯ ಅಂತರ್ಜಾಲ ಸ್ನೇಹಿತರೆ,
ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.
ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.
http://saadhaara.com/events/index/english
http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.
ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.
ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.
-ಕನ್ನಡಸಾಹಿತ್ಯ.ಕಾಂ ಬಳಗ
ista aytu:)
ಶ್ಯಾಮಾ,
ಒಳ್ಳೆಯ ಅಭಿವ್ಯಕ್ತಿ.
ಪೂರ್ತಿ ಅರಳದೆ ನಸುಬಿರಿದ ಮೊಗ್ಗೇ ಘಮಸೂಸುವಂತಹ ಸಾಲುಗಳು.
ಇಷ್ಟವಾಯಿತು.
ಪ್ರೀತಿಯಿಂದ
ಸಿಂಧು
ಯೋಗೇಶ್,ಸಿಂಧು ಅಕ್ಕ,
ಧನ್ಯವಾದಗಳು.
ಶ್ಯಾಮಾ,
ಭಾವಪೂರ್ಣವಾದ narration.
ಇಷ್ಟವಾಯಿತು.
ಧನ್ಯವಾದಗಳು ಸುನಾಥರವರೇ.
Post a Comment