ತಗ್ಗಿನಂಚಿನಲ್ಲಿ
ನಾ ನೆಟ್ಟ ಹೂ ಬಳ್ಳಿ
ಹೂ ಬಿಟ್ಟಿದೆಯಂತೆ,
ಹಳದಿ ಬಣ್ಣದ ಹೂವು
ತಿಳಿಯಾದ ಪರಿಮಳ ಬೀರುತ್ತಾ
ಕಣ್ಣಿಗೆ ಹಬ್ಬವಾಗಿದೆಯಂತೆ
ಮತ್ತೆ ನಾ ಕೇಳಿದೆ ಬಿಟ್ಟ
ಹೂಗಳೆಷ್ಟು?
ಬಣ್ಣ ಬರೀ ಹಳದಿಯೆ
ಅಂಚಿಗೆ ಕೆಂಪಿಲ್ಲವೇ?
ಬಳ್ಳಿಯಲ್ಲಿ ಮತ್ತಿರುವ
ಮೊಗ್ಗುಗಳೆಷ್ಟು?
ಎಂಥ ಸೊಬಗದು ಆ
ಬಳ್ಳಿಗಂಟಿದ ಪುಟ್ಟ ಹೂವಿನದು?
ಬಿಟ್ಟಿದ್ದು ಒಂದೇ ಒಂದು
ಪುಟ್ಟ ಹೂವಂತೆ
ಬಣ್ಣ ಬರಿಯ ಹಳದಿಯಂತೆ
ಮತ್ತೆ ಬಳ್ಳಿಗಂಟಿ
ಮೊಗ್ಗಿಲ್ಲವಂತೆ
ಎಲ್ಲ ಒಂದೇ ಹೂವಿನ ಮೋಡಿಯಂತೆ
ಮತ್ತೆ ನಾ ಕೇಳಿದೆ ಹೂವಿಗೆ
ಮುತ್ತಿದ್ದ ದುಂಬಿಗಳೆಷ್ಟು?
ಅಷ್ಟು ಚೆಲುವೆ ನಾ ನೆಟ್ಟ
ಬಳ್ಳಿಯಲ್ಲಿ ಬಿಟ್ಟ ಒಂಟಿ
ಹೂವಿನದು?
ಹೂವ ಹೊತ್ತು ಬಳ್ಳಿಯೂ
ನಗುತಿರಬಹುದಲ್ಲ
ಬಳ್ಳಿ ಚಿಗುರಿದೆಯೆ ಸೊಂಪಾಗಿ?
ಹೂವಿನ ಸುತ್ತೆಲ್ಲ ದುಂಬಿಗಳ
ಹಿಂಡಂತೆ,
ಹೂವಿನ ದಳದ ಮೇಲೆ ಬಿದ್ದ
ಹನಿಗಳೆರಡು ಮುತ್ತಂತೆ
ಹೊಳೆಯುತ್ತಿದೆಯಂತೆ,
ಹೂವೆಲ್ಲಿ ಬಾಡುವುದೋ ಎಂದು
ಸೂರ್ಯನೂ ಮೋಡಗಳ ಹಿಂದೆಲ್ಲೋ
ಮರೆಯಾದನಂತೆ.
ಹೆಸರರಿಯದ ಆ ಹೂ
ಬಳ್ಳಿಯನ್ನು ನಾ ನೆಟ್ಟಾಗ
ಬಲು ಹಿಂದೆ ಪ್ರಶ್ನೆ
ನೂರಿತ್ತು ಮನದಲ್ಲಿ
ಬಾಡಿ ಬಳಲಿರುವ ಬಳ್ಳಿ ನಿಲ್ಲುವುದೇ ಈ ನೆಲದಲ್ಲಿ
ಚಿಗುರಿ ಅಲ್ಲೆಲ್ಲ ಹಬ್ಬಿ
ಹೂ ಬಿಡುವುದೇ ಈ ಬಳ್ಳಿ,
ಮೊಗ್ಗು ಬಿರಿದು ಅರಳಿದಾಗ
ದಿನ ದಿನವೂ ನೀರೆರೆವಾಗ
ಮುಟ್ಟಿ ಸವರುತ್ತಿದ್ದೆ
ಬಳ್ಳಿಯನ್ನು,
ಬಗ್ಗಿ ನೋಡುತ್ತಿದ್ದೆ
ಮನದಲ್ಲೇ ನಾನಂದುಕೊಂಡು
ಮೊಗ್ಗಾಗಿದೆಯೇ
ಬಳ್ಳಿಯಂಚಿನಲ್ಲೊಂದು..
ವರುಷಗಳಷ್ಟು ಹಳೆಯದಾದ
ಹೂ ಬಳ್ಳಿಇನ್ನು ಹೂ
ಬಿಡುವುದಿಲ್ಲವೆಂದು
ನಾ ಮರೆತೇ ಬಿಟ್ಟಿರುವಾಗ,
ಅಷಾಢವೆರಗಿ ಎಲ್ಲ
ಹೂಗಿಡಗಳು ಹೂವಿಲ್ಲದೇ
ಬರಿದೆ ನಿಂತಿರುವಾಗ
ಅಂಗಳದಂಚಿನಲ್ಲಿ ನಾನೆಟ್ಟ
ಹೂ ಬಳ್ಳಿ
ಹೂ ಬಿಟ್ಟಿದೆಯಂತೆ
ನಾನಿಲ್ಲದ ಹೊತ್ತಿನಲ್ಲಿ
ಹೂವನ್ನು ನೋಡಿ ಚೆಲುವ ಕಣ್ಣಲ್ಲಿ
ಸೆರೆಹಿಡಿಯದಿದ್ದರೇನಾಯಿತು,
ಹೂವಿನ ಚಿತ್ತಾರವನ್ನು
ಮನದಲ್ಲೇ ಚಿತ್ರಿಸಿಕೊಂಡು
ಮೆಲು ನಕ್ಕೆ,
ಗಾಳಿ ಬೀಸಿ ಬಳ್ಳಿ ತೂಗಿ
ನನ್ನ ನೆನಪಾಗಿ ಹೂವು
ನಕ್ಕಿರಬಹುದೆಂದು
ಮುಂದಿದ್ದ ಹೂವಿನ
ಚಿತ್ರಕ್ಕೊಂದು ಮುತ್ತಿಟ್ಟೆ.
5 comments:
ಸಕತ್ ಆಲ್ದಾ ಶ್ಯಾಮ,
ಅಂತೂ ಹೂ ಬಿಟ್ತಲ್ಲಾ. ಮನದಲ್ಲಿ ಇದ್ದ ನೂರು ಪ್ರಶ್ನೆಗೆ, ಅನುಮಾನಕ್ಕೆ ಉತ್ತರ ಕೊಟ್ತಲ್ಲಾ ಸದ್ಯ.
ಒಂದೇ ಹೂ ಬಿಟ್ಟಿದಕ್ಕೆ ರಾಶಿ ದುಂಬಿಗಳು ಬತ್ತಾ ಇದ್ದಾ ಅನ್ನಿಸ್ತು ಸರಿ ನೋಡಿಕೊಳ್ಳಲೇ ಹೇಳು ಇಲ್ಲೆ ಅಂದ್ರೆ ದುಂಬಿಗಳು ಮಕರಂದ ಹೀರಿ ಹೂವನ್ನ ಬಾಡಿಸಿ ಬಿಟ್ರೆ ಕಷ್ಟ.
ಹೂ ಬಳ್ಳಿ ಮರನಾ ತಬ್ಬಕ್ಕೆ ರೆಡಿ ಆಯ್ದಾ ಕೇಳಕಾಗಿತ್ತು.
ಕವನ ಓದಿದ ಮೇಲೆ ನನಗೊಂದು ಸಂಶಯ ಕಾಡುತ್ತಿದೆ. ನೀವು ನಿಜವಾಗಿಯೂ ಸಸಿ ನೆಟ್ಟು, ನೀರು ಹಾಕಿ, ಹೂವು ಅರಳುವುದನ್ನು ಕಾತುರದಿಂದ ಕಾದು ನೋಡಿದ್ದೀರಾ? ಈಗಲೂ ಹೂವಿನ ಗಿಡಗಳಿಗೆ ನೀರುಣಿಸುವ ಹವ್ಯಾಸ ಇದೆಯಾ?
ಪ್ರಶ್ನೆ ಏನೇ ಇರಲಿ.. ಕವನ ನನಗಿಷ್ಟವಾಯಿತು.
@ ರಂಜನಾ
ಹ್ಮ್ಮ್ ಹೌದು ಸಖತ್ ಖುಶಿ.. ಅಂತೂ ಹೂ ಬಿಟ್ಟಿತಲ್ಲ ಅಂತ
ಆದರೂ ನೂರು ಪ್ರಶ್ನೆಗಳಿಗೆ ಉತ್ತರ ಸಿಕ್ಕದ ಮೇಲೆ ನೂರಾ ಒಂದನೆಯದು ಪ್ರಶ್ನೆ ಬಂತು ಈಗ.. ನಾನು ಅಷ್ಟು ಆಸೆ ಪಟ್ಟು ಕಾದರೂ ಬಿಡದ ಹೂ ಈಗ ನಾನಿಲ್ಲದ ಸಮಯದಲ್ಲೇ ಬಿಟ್ಟಿದ್ದು ಯಾಕೆ ಅಂತ...
ಏನೇ ಆಗಲಿ ಹೂ ಬಿಟ್ಟಿತಲ್ಲ ಅನ್ನೋದು ಖುಶಿ ಕೊಡ್ತು..
ಹೂ ಸದಾ ನಗ್ತಾ ನಗ್ತಾ ಇರ ಹಂಗೆ ಕಾಯದೆ ಈಗ ಕೆಲ್ಸಾ :)
@ JOMON
ಅಂಥ ಸಂಶಯ ಯಾಕೊ? ಗಿಡಕ್ಕೆ ನೀರುಣಿಸಿ ಎಲೆಗಳನ್ನು ಸವರಿ ಆನಂದಿಸುವುದು ಈಗಲೂ ನಂಗೆ ಪ್ರೀತಿ.. ಆದರ ಬೆಂಗಳೂರಲ್ಲಿ ಈಗ ನಾನಿರುವ ಜಾಗದಲ್ಲಿ ಒಂದೇ ಒಂದು ಗಿಡವೂ ಇಲ್ಲ :( ........ ಅವೆಲ್ಲ ಬರೀ ಊರಿಗೆ ಹೋದಾಗ ಇಷ್ಟಪಟ್ಟು ಮಾಡುವ ಕೆಲಸಗಳ ಪಟ್ಟಿಗೆ ಸೇರಿ ಹೋಗಿದೆ..
ಅದಿರಲಿ ನೆನಪಿನಂಗಳಕ್ಕೆ ನಿಮಗೆ ಸ್ವಾಗತ... ಕವನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು
ಎಷ್ಟು ಚಂದ ಬರದ್ಯಲೆ! ತುಂಬ ಇಷ್ಟ ಆತು ಯಂಗೆ.
ಹೀಗೆ ಕಾದಿದ್ದರ ಪ್ರತಿಫಲ ಲೇಟ್ ಆಗಿ ಸಿಕ್ದಾಗ್ಲೇ ಇಷ್ಟು ಖುಷಿ ಆಗದು! ಕಾಯುವಿಕೆಯ ಸಮಯ ಪ್ರತಿಫಲದ ಬೆಲೆಯನ್ನ ಹೆಚ್ಚು ಮಾಡ್ತು. ಕವನದ ತುಂಬ ನಿನ್ನ ಖುಷಿನೇ ತುಂಬಿದ್ದು. ಚಂದ ಕವನ!
ಥ್ಯಾಂಕ್ಸ್ ಶಾಂತಲಾ
ಹೌದು ಆಸೆ ಪಟ್ಟಿದ್ದರ ಪ್ರತಿಫಲ ಕಾದು ಕಾದು ಕೊನೆಗೆ ಸಿಕ್ಕಾಗ ಆಗುವ ಆನಂದವೇ ಬೇರೆ.. ಅದೇ ಅರ್ಥದಲಿ ನಾನು ಬರೆದಿದ್ದು ಈ ಕವನ
Post a Comment