Monday, November 5, 2007

ಬೆಟ್ಟದ ಚಂದಿರ

ಬೆಳಿಗ್ಗೆ ಶಶಾಂಕನ ಫೋನ್ ಬಂದಾಗಿನಿಂದ ನನ್ನಲ್ಲಿ ಅದೇನೋ ಬದಲಾವಣೆಯಾಗಿದೆ ಎಂದು ನನಗೆ ಅನ್ನಿಸಹತ್ತಿತ್ತು. ಶಶಾಂಕ ನಾಳೆ ಬರುತ್ತಿದ್ದಾನೆ. ಈ ಆರು ತಿಂಗಳು ಅವನಿಲ್ಲದೇ ಕಳೆದೆನಾ? ನಂಗೇ ಅನುಮಾನವಾಯ್ತು. ಅದೆಷ್ಟು ಬಾರಿ ಯೋಚಿಸಿದೆನೋ ನನಗೇ ಗೊತ್ತಿಲ್ಲ. ಆರು ತಿಂಗಳೋ? ಆರು ವರ್ಷವೋ? ಅನ್ನಿಸುವಷ್ಟು ಕಷ್ಟ ಪಟ್ಟಿದ್ದೇನೆ.

ವಾರದ ಹಿಂದೆ ಫೋನ್ ಮಾಡಿದಾಗ ಬರುವ ವಿಚಾರ ಹೇಳಿದಾಗ ನಂಬೇ ಇರಲಿಲ್ಲ ನಾನು. ಸುಮ್ನೇ ತಮಾಷೆ ಮಾಡ್ತಿದ್ದಾನಾ ಅಂದುಕೊಂಡಿದ್ದೆ. ಇವತ್ತು ಬೆಳಿಗ್ಗೆ ಫೋನ್ ಮಾಡಿ ಹೊರಟಿರುವ ವಿಚಾರ ತಿಳಿಸಿದಾಗಲೇ ಹೌದೆನಿಸಿದ್ದು.

ಮತ್ತೆ ಏನೇನೋ ಯೋಚನೆ ಮಾಡುತ್ತಾ ನಿಂತುಬಿಟ್ಟೆನಲ್ಲ. ಸ್ವರ ಮಲಗುವ ಹೊತ್ತಾಯಿತು ಎಂದುಕೊಳ್ಳುತ್ತಾ ಅಲ್ಲೇ ಆಡಿಕೊಂಡಿದ್ದವಳನ್ನು ಎತ್ತಿ ಮುದ್ಡಿಸುತ್ತಾ ರೂಮಿನೊಳಗೆ ಕಾಲಿಟ್ಟೆ. ಕಿಟಕಿಯ ಬಾಗಿಲುಗಳು ತೆರೆದಿದ್ದರಿಂದ ತಣ್ಣನೆಯ ಸುಳಿಗಾಳಿ ಸುಯ್ಯನೆ ಬೀಸಿ ಬಂತು. ತಂಪಾದ ಗಾಳಿಯ ಜೊತೆ ಸೂಜಿ ಮಲ್ಲಿಗೆಯ ಕಂಪು ಕೂಡ ಸೂಸಿ ಮನಸ್ಸು ಉಲ್ಲಸಿತವಾದಂತಾಯ್ತು. ಲೈಟ್ ಹಾಕಿರದಿದ್ದರೂ ರೂಮಿನ ತುಂಬೆಲ್ಲ ಬೆಳದಿಂಗಳ ಬೆಳಕು ತುಂಬಿತ್ತು.

ಸ್ವರಳನ್ನು ಹಾಗೆಯೇ ಮಂಚದ ಮೇಲೆ ಮಲಗಿಸಿ "ಈಗ ಮಾತಾಡೋ ಹಾಗಿಲ್ಲ. ಕಣ್ಮುಚ್ಚಿ ಮಲ್ಕೋಬೇಕು ಜಾಣಮರಿ ಥರ" ಅಂತ ಹೇಳುತ್ತಾ ಹೊದಿಕೆ ಸರಿ ಮಾಡಿ ಹಣೆಗೊಂದು ಮುತ್ತಿಟ್ಟೆ. ಬಾಗಿಲು ಮುಚ್ಚೋಣವೆಂದು ಕಿಟಕಿಯ ಬಳಿ ಬಂದು ನಿಂತೆ.

ಹೊರಗೆಲ್ಲ ಉಕ್ಕಿ ಬಂದ ನೊರೆ ಹಾಲಿನಂಥ ಬೆಳದಿಂಗಳು. ಹುಣ್ಣಿಮೆಯಾ ಇವತ್ತು? ಏನೇನೂ ಗೊತ್ತಿಲ್ಲ. ವಾರ ದಿನಗಳ ಲೆಕ್ಕವೇ ತಪ್ಪಿ ಹೋಗಿರುವಾಗ ಹುಣ್ಣಿಮೆ ಅಮವಾಸ್ಯೆಗಳ ಅರಿವಾದರೂ ಎಲ್ಲಿಂದ ಬರಬೇಕು ನನಗೆ. ಪೂರ್ಣ ಚಂದಿರ ಮಾತ್ರ ಆಕಾಶದಲ್ಲಿ ಶುಭ್ರವಾಗಿ ಹೊಳೆಯುತ್ತಿದ್ದ.

ಮತ್ತೆ ತಿಳಿಯಾದ ಕಿರುಗಾಳಿ ಬೀಸಿ ಬಂತು. ಗಾಳಿಯೊಡನೆ ಬಂದ ಸೂಜಿ ಮಲ್ಲೆಯ ಕಂಪು ಕಿಟಕಿಯ ಪಕ್ಕದಲ್ಲೇ ಬಳುಕಿ ನಿಂತ ಮಲ್ಲಿಗೆ ಗಿಡದ ಇರುಹನ್ನು ನೆನಪಿಸಲೆಂದೇ ಪದೇ ಪದೇ ನನ್ನ ಮೂಗಿಗೆ ಸೋಕುತ್ತಿದೆಯೇನೊ ಅನ್ನಿಸಿತು. ಹಾಗೆಯೇ ಕಣ್ಣು ಹೊರಳಿಸಿ ಮಲ್ಲಿಗೆ ಗಿಡದತ್ತ ನೋಡಿದೆ ಗಿಡದ ತುಂಬೆಲ್ಲ ಹೂವಿತ್ತು. ಚಂದ್ರನ ತಿಂಗಳ ಬೆಳಕಿನ ಬಿಳುಪಿಗಿಂತ ತಾನೇನು ಕಮ್ಮಿ ಎಂದು ಪಂದ್ಯ ಕಟ್ಟಿದೆಯೇನೋ ಎನ್ನುವಂತೆ ಹೂಗಳು ಬಿರಿದು ಅರಳಿದ್ದವು.

ಅಬ್ಬಾ ! ಅದೆಷ್ಟು ಬೇಗ 4 ವರ್ಷಗಳಾದವು. ಈ ಮಲ್ಲಿಗೆ ಗಿಡ 4 ವರ್ಷಗಳಷ್ಟು ಹಳೆಯದು. ಮೊದಲ ದಿನ ಈ ಮನೆಗೆ ಬಂದಾಗ ಶಶಾಂಕ ತನ್ನೊಡನೆ ಪುಟ್ಟ ಗಿಡವೊಂದನ್ನು ತಂದಿದ್ದ. ಮನೆಯೊಳಗೆ ಕಾಲಿಡುವ ಮೊದಲು ಗಿಡವನ್ನು ನೆಟ್ಟು, ನಮ್ಮ ಜೀವನವೆಲ್ಲ ಈ ಮಲ್ಲಿಗೆಯ ಪರಿಮಳ ತುಂಬಿರಲಿ ಅಂತ ನಕ್ಕಿದ್ದ. ಎಷ್ಟು ಕುದ್ದು ಹೋಗಿದ್ದೆ ನಾನು.

ನಾನು ಮನಸ್ಸಲ್ಲಿ ನೆನಪಿನ ತೇರನ್ನು ಎಳೆಯುತ್ತಾ ನಿಂತಿದ್ದರೆ ಚಂದ್ರ ಮಾತ್ರ ತನ್ನಷ್ಟಕ್ಕೆ ತಾನು ಬೆಳ್ಳಗೆ ನಗುತ್ತಾ ನಿಂತಿದ್ದ. ಆ ಚಂದ್ರನನ್ನು ನೋಡುತ್ತಾ ಹಾಗೇ ಥಟ್ಟನೆ ಶಶಾಂಕನ ಮುಖ ಕಣ್ಮುಂದೆ ಬಂತು.

ಎಂಥ ನಗು ಅವನದು, ಎಂಥವರನ್ನೂ ಮೋಡಿ ಮಾಡುವಂತಹದು. ಹುಣ್ಣಿಮೆಯ ಚಂದ್ರನಷ್ಟು ಬಿಳುಪಲ್ಲದಿದ್ದರೂ ಸದಾ ನಗು ಸೂಸುವ ಅವನ ಮುಖದಲ್ಲಿ ಅದೇನೊ ಕಾಂತಿ, ಆಕರ್ಷಣೆ. ನಾಲ್ಕು ಜನರಲ್ಲಿ ಎದ್ದು ಕಾಣುವಂಥ ಕಾಯ.

ಮೊದಲ ಬಾರಿ ನೋಡಿದಾಗಲೇ ನಾನು ಕಣ್ಣರಳಿಸಿದ್ದೆ. ಬಾಯಿಬಿಟ್ಟು ಹೇಳದಿದ್ದರೂ ಆಗಲೇ ನಂಗೆ ಅವನು ಒಪ್ಪಿಗೆಯಾಗಿಬಿಟ್ಟಿದ್ದ. ಏನಾದರೂ ಮಾತಾಡಿಕೊಳ್ಳಿ ಅಂತ ಕೂರಿಸಿದಾಗ ನಂಗೆ ಬಾಯೆಲ್ಲ ಒಣಗಿಹೋದ ಹಾಗಾಗಿತ್ತು. ಅವನೂ ಜಾಸ್ತಿ ಏನೂ ಮಾತಾಡಲಿಲ್ಲ. ಆದರೂ ಏನೋ ಹೇಳಬೇಕೆಂದುಕೊಂಡವನಂತೆ, ಹೇಳಲು ಆಗದೇ ಒದ್ದಾಡುತ್ತಿರುವವನಂತೆ ಕಾಣಿಸಿದ ನಂಗೆ.

ಮತ್ತೆರಡು ದಿನಗಳಲ್ಲಿ ಎಲ್ಲ ಒಪ್ಪಿಗೆಯಾಗಿದೆಯೆಂದು ಸುದ್ದಿ ಬಂದಾಗ ಒಮ್ಮೆಲೇ ಖುಷಿಯಾದರೂ ಕನ್ನಡಿಯ ಮುಂದೆ ನಿಂತು ಒಮ್ಮೆ ಯೋಚಿಸಿದ್ದೆ. ನನ್ನ ಸಾಧಾರಣ ರೂಪಿಗೂ ಶಶಾಂಕನಿಗೂ ಸರಿ ಹೋಗುತ್ತದೆಯೇ ಎಂದು. ಮತ್ತೆ ಅರೆ ಕ್ಷಣಗಳಲ್ಲಿ ಅಂಥ ಯೊಚನೆಗಳನ್ನೆಲ್ಲ ಗಾಳಿಗೆ ತೂರಿ ಸಂಭ್ರಮದಲ್ಲಿ ಮುಳುಗಿಹೋಗಿದ್ದೆ.

ಮತ್ತೆ 15 ದಿನಗಳಿಗೆ ಮದುವೆಯೆಲ್ಲ ತರಾತುರಿಯಲ್ಲಿ ನಡೆದುಹೋಗಿತ್ತು.

ಮದುವೆಗಿಂತ ಮುಂಚೆ ಒಂದು ದಿನ ಏನೋ ಮಾತಾಡಬೇಕೆಂದು ಮನೆಗೆ ಬಂದಿದ್ದ ಶಶಾಂಕ. ಏನನ್ನೋ ಹೇಳಬೇಕೆಂಬ ಭಾವವನ್ನು ಅವನ ಮುಖದಲ್ಲಿ ಓದಿದ್ದೆ ನಾನು. ಆದರೆ ಭಾವಿ ಅಳಿಯನ ಉಪಚಾರದಲ್ಲಿ ಮನೆಯವರೆಲ್ಲ ತೊಡಗಿ ನನ್ನೊಡನೆ ಒಂದು ಮಾತಾಡಲೂ ಅವಕಾಶ ಕೊಡದೆ ಕಳಿಸಿಬಿಟ್ಟಿದ್ದರು.

ನಾನಂತೂ ಹೆಚ್ಚು ಯೋಚಿಸದೇ ಹೀಗೆಯೇ ಆಕಾಶದ ಚಂದ್ರನನ್ನು ಶಶಾಂಕನಿಗೆ ಹೋಲಿಸಿಕೊಂಡು ಕನಸಿನ ಲೋಕದಲ್ಲಿ ತಿರುಗಾಡಿ ಸಂಭ್ರಮಿಸಿದ್ದೆ.

ಮದುವೆ ಶಾಸ್ತ್ರಗಳೆಲ್ಲ ಮುಗಿದು ತವರಿನಿಂದ ಬೀಳ್ಕೊಡುವಾಗ ಬಿಕ್ಕಳಿಸುತ್ತಾ ನಾನು ಅವನೊಡನೆ ಹೊರಟು ನಿಂತಾಗ ಪುಟ್ಟ ಮಗುವನ್ನು ಸಂತೈಸುವಂತೆ ಸಂತೈಸಿದ್ದ ಅವನು ನನ್ನನ್ನು.

ಹಾಗೆ ಹೊರಟು ಬರುವಾಗ ಒಂದು ಕಹಿ ಸತ್ಯವನ್ನು ನನ್ನ ಮುಂದೆ ಬಿಚ್ಚಿಟ್ಟಿದ್ದ. "ಪ್ರೀತಿ ಅವತ್ತಿಂದ ನಿಂಗೆ ಹೆಳಬೇಕು ಹೇಳಬೇಕು ಅಂತ ಕಷ್ಟಪಟ್ಟೆ. ಆದರೆ ಹೇಳುವುದಕ್ಕಾಗಲಿಲ್ಲ. ಆದ್ರೆ ಹೇಳದೇ ಹಾಗೆ ಮುಚ್ಚಿಡುವುದಕ್ಕೆ ನಂಗಿಷ್ಟವಿಲ್ಲ. ಇವತ್ತು ನಮ್ಮ ಮದುವೆಯಲ್ಲಿ ಮಲ್ಲಿಗೆಯ ಸಸಿಯೊಂದನ್ನು ಕೊಟ್ಟು ಶುಭ ಹಾರೈಸಿದಳಲ್ಲ ಅವಳು ಯಾರು ಗೊತ್ತಾ? ಗೆಳತಿ ಎಂದು ಪರಿಚಯಿಸಿದೆನಲ್ಲ. ಅವಳು ನಾನು ಪ್ರೀತಿಸಿದ ಹುಡುಗಿ. ಸಂಗೀತದ ಸ್ವರಗಳಂತೆ ಮಧುರ ಪ್ರೀತಿ ನಮ್ಮದಾಗಿದ್ದರೂ ಕಾರಣಾಂತರಗಳಿಂದ ಅವಳು ಬೇರೆಯವನನ್ನು ಮದುವೆಯಾಗಿ ನನ್ನ ಬಾಳಿಂದ ಸರಿದುಹೋದಳು. ಬಂದಿದ್ದನ್ನು ಬಂದ ಹಾಗೆ ಸ್ವೀಕರಿಸಿದ ನಾವು ಒಬ್ಬರಿಗೊಬ್ಬರು ಸುಖಜೀವನದ ಶುಭ ಹಾರೈಸಿ ಬೇರೆಯಾದೆವು. ಇಷ್ಟೆಲ್ಲಾ ನಿಂಗೆ ಯಾಕೆ ಹೇಳುತ್ತಿದ್ದೇನೆಂದರೆ ನಮ್ಮಿಬ್ಬರ ಮಧ್ಯ ಯಾವುದೇ ಸುಳ್ಳಿಗೆ, ಅಪನಂಬಿಕೆಗೆ ಅವಕಾಶವಿರಬಾರದು. ನಂಗೆ ಆಗಿ ಹೋಗಿದ್ದನ್ನು ನೆನೆದು ಕೊರಗಿ ಈಗ ಇದ್ದಿದ್ದನ್ನು ಇಲ್ಲವಾಗಿಸಿಕೊಳ್ಳುವ ಹಂಬಲ ವಿಲ್ಲ. ನನ್ನ ಮನದಲ್ಲಿ ಈಗ ಬರೀ ನೀನೆ ನೀನು ತುಂಬಿದ್ದೀಯ. ನಿನ್ನ ಕೈ ಹಿಡಿದು ನನ್ನ ಗಂಟಲಲ್ಲಿ ಅರ್ಧಕ್ಕೆ ನಿಂತುಹೋಗಿರುವ ಹಾಡನ್ನು ಹಾಡುವ ಆಸೆ ಇದೆ ನಂಗೆ. ನನ್ನ ಹಾಡಿಗೆ ಸ್ವರವಾಗುತ್ತೀಯ ತಾನೇ?

ಅವನ ಮಾತುಗಳನ್ನು ಕೇಳುವ ಹೊತ್ತಿಗೆ ನನ್ನ ಮನಸ್ಸಿನ ಹಾಡು ಸ್ವರ ಲಯ ತಾಳಗಳೆಲ್ಲ ತಪ್ಪಿ ಹೋಗಿ ಅಪಸ್ವರವಾಗಿತ್ತು. ಕಟ್ಟಿದ ಕನಸುಗಳೆಲ್ಲ ಚೂರಾದಂತೆ ಕಂಡಿತ್ತು. ಅವನನ್ನೇ ದಿಟ್ಟಿಸುತ್ತ ಕಣ್ಣ ನೀರಿಳಿಸುತ್ತಿದ್ದವಳ ಮೌನವನ್ನು ಅವನು ಅವನ ಪ್ರಶ್ನೆಗೆ ಏನೆಂದು ಉತ್ತರ ಕಲ್ಪಿಸಿಕೊಂಡನೋ ಗೊತ್ತಿಲ್ಲ.

ಮತ್ತೆ ಮಲ್ಲಿಗೆ ಗಿಡದತ್ತ ನೋಡಿದೆ. ಗಾಳಿಗೆ ಹೂಗಳು ಮೆಲ್ಲನೆ ಅಲುಗಾಡುತ್ತಿದ್ದವು. ಮತ್ತೆ ಆ ದಿನಗಳೆಲ್ಲ ಕಣ್ಮುಂದೆ ಬಂದವು. ಒಂದು ದಿನವೂ ನಾನು ಆ ಗಿಡಕ್ಕೆ ನೀರು ಹಾಕಿದ್ದು ನೆನಪು ಕಾಣಲಿಲ್ಲ. ಅವಳು ಕೊಟ್ಟ ಗಿಡಕ್ಕೆ ನಾನ್ಯಾಕೆ ನೀರೆರೆಯಲಿ ಎಂಬ ಮನೋಭಾವ ನಂದು. ಹೋಗಲಿ ಗಿಡ ಹೂ ಬಿಡಲು ಶುರುವಾದಾಗ ತಪ್ಪಿಯೂ ಒಂದು ಹೂ ಕೊಯ್ದು ಮುಡಿಗಿಟ್ಟವಳಲ್ಲ. ಶಶಾಂಕನೇ ಹೂ ಕೊಯ್ದು ಮಾಲೆ ಮಾಡಿ ಪ್ರೀತಿಯಿಂದ ನನ್ನ ಕೈಗಿಟ್ಟರೆ ಅದನ್ನು ಅಲ್ಲೇ ಪಕ್ಕಕ್ಕಿಟ್ಟು ಭಿರ ಭಿರನೆ ನಡೆದುಬಿಡುತ್ತಿದ್ದೆನಲ್ಲ ಎಷ್ಟು ದುರಹಂಕಾರ ನಂಗೆ. ಆದರೂ ಶಶಾಂಕ ಒಂಚೂರೂ ಬೇಸರಿಸಿಕೊಳ್ಳದೇ ಅದು ಹೇಗೆ ಸುಮ್ಮನಿರುತ್ತಿದ್ದ? ತಾಳ್ಮೆ ಅಂದರೆ ಅವನನ್ನು ನೋಡಿ ಕಲಿಯಬೇಕು.

ಮನೆಯಿಂದ ಎಂದೂ ದೂರವಿದ್ದು ಅಭ್ಯಾಸವಿರದ ನಾನು ಮೊದ ಮೊದಲು ಎಲ್ಲರ ನೆನಪಾಗಿ ಚಿಕ್ಕ ಹುಡುಗಿಯಂತೆ ಅಳುತ್ತಿದ್ದರೆ ಪ್ರೀತಿಯಿಂದ ಸಮಾಧಾನಿಸುತ್ತಿದ್ದ. ಒಂದೊಂದು ದಿನ ನಾನು ಅಡುಗೆಯನ್ನೂ ಮಾಡದೇ ಮುಸಿ ಮುಸಿ ಅಳುತ್ತ ಕೂತಿದ್ದರೆ ಒಂಚೂರೂ ಗದರದೇ ಮೆಲ್ಲನೆ ತಿಳಿ ಹೇಳುತ್ತಿದ್ದ. ಆದರೆ ನಾನೆಂಥ ಸ್ವಾರ್ತಿ. ನನ್ನ ಭಾವನೆಗಳಿಗೆ ಅವನು ಅಷ್ಟು ಚೆನ್ನಾಗಿ ಸ್ಪಂದಿಸಿದರೂ ನಾನು ಮಾತ್ರ ಅವನ ಭಾವನೆಗಳನ್ನು ಮುಲಾಜಿಲ್ಲದೇ ತಳ್ಳಿ ಹಾಕಿ ಬಿಡುತ್ತಿದ್ದೆನಲ್ಲ.

ಒಂದೇ ಒಂದು ಸಲ ಅಂದಿದ್ದ ಅವನು "ನಿಂಗೆ ಏನಾದರೂ ಹೇಳುವುದಿದ್ದರೆ ಹೇಳಿಬೀಡು. ಹೀಗೆ ಮೌನವಾಗಿದ್ದು ನನ್ನನ್ನು ಸುಡಬೇಡ" ಎಂದು. ಅದಕ್ಕೂ ನಾನು ಮಾತಾಡಿರಲಿಲ್ಲ.

ಸ್ವರ ಹುಟ್ಟುವಾಗಲೂ ಅಷ್ಟೇ . ಒಳ್ಳೇ ನನ್ನಮ್ಮನಂತೆ ನನ್ನನ್ನು ನೋಡಿಕೊಳ್ಳುತ್ತಿದ್ದ. ನಂಗೆ ಒಂಚೂರೂ ಬೇಸರ ಹುಟ್ಟದಂತೆ ಏನೆಲ್ಲಾ ಮಾಡುತ್ತಿದ್ದ. ಎಂಥ ಮಾಧುರ್ಯಭರಿತ ಧ್ವನಿ ಅವನದು. " ನೀನಿಲ್ಲದೇ ನನಗೇನಿದೆ ...." ಎಂದು ಅವನು ಹಾಡುತ್ತಿದ್ದರೆ ಯವುದೋ ಬೇರೆ ಲೋಕವೇ ಸೃಷ್ಟಿಯಾದಂತೆ ಅನ್ನಿಸುತ್ತಿತ್ತು ನನಗೆ. ಆದರೂ ನಾನು ಭಾವನೆಗಳೇ ಇಲ್ಲದವಳಂತೆ ನಟಿಸುತ್ತಿದ್ದೆ ಅಲ್ಲವೇ?

ಅಷ್ಟಾದರೂ ನನ್ನ ಮನಸ್ಸಿನಲ್ಲಿ ಅವನೆಡೆಗಿದ್ದ ಪ್ರೀತಿಯನ್ನು ತೋರಿಸದೇ ಒಣಜಂಭ ಮಾಡುತ್ತಿದ್ದೆ. ಎಲ್ಲ ನೆನಪಾಗಿ ಅಳು ಬಂತು. ಮನಸ್ಸಲ್ಲಿ ಏನೂ ಮುಚ್ಚಿಡದೆ ಎಲ್ಲ ಹೇಳಿಕೊಂಡು ಹಗುರಾಗಿ ನನ್ನೆಡೆಗೆ ಪ್ರೀತಿಯ ಸೆಲೆಯಾಗಿರುವವನನ್ನು ನಾನ್ಯಾಕೆ ಯಾವಾಗಲೂ ದೂರ ಮಾಡುತ್ತಾ ಬಂದೆ? ಯಾವುದೋ ಒಂದು ಚಮಚದಷ್ಟು ಕಹಿ ಸತ್ಯವನ್ನು ತಿಂದು, ಮುಂದೆ ಸಿಹಿ ತುಂಬಿದ ಕೊಪ್ಪರಿಗೆಯೇ ಇದ್ದರೂ ಕಹಿ ತಿಂದು ಬಾಯೆಲ್ಲ ಕಹಿಯಾಯಿತೆಂದು ಹಳಿಯುತ್ತಾ ಕಾಲ ಹಾಕುತ್ತಿದ್ದೇನಲ್ಲ, ನನ್ನ ಬುದ್ಧಿಗೇನು ಗ್ರಹಣ ಕವಿದಿದೆ? ನಾಲ್ಕು ವರ್ಷಗಳಲ್ಲಿ ಮಾನಸಿಕವಾಗಿ ಅವನಿಗೆಷ್ಟು ನೋವು ಕೊಟ್ಟೆ ನಾನು. ಇವೆಲ್ಲ ಯಾಕಾಗಿ ಅನ್ನಿಸಿತು. ಈ ಆರು ತಿಂಗಳು ನನ್ನ ಕಣ್ತೆರೆಸಿತಾ? ಅವನಿಲ್ಲದಿದ್ದರೆ ಎಲ್ಲ ಬರೀ ಶೂನ್ಯ, ಬರೀ ಕತ್ತಲು, ನನಗೆ ಅಸ್ತಿತ್ವವೇ ಇಲ್ಲ ಅನ್ನಿಸಿತಾ? ಏನೂ ಗೊತ್ತಾಗುತ್ತಿಲ್ಲ ಬರೀ ಅಳುವೊಂದು ಒತ್ತಿ ಬರುತ್ತಿದೆ.

ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ ।
ಕೊರತೆಯೊಂದನು ನೀನು ನೆನೆನೆನೆದು ಕೆರಳಿ ।।
ಧರೆಯೆಲ್ಲವನು ಶಪಿಸಿ ಮನದಿ ನರಕವ ನಿಲಿಸಿ ।
ನರಳುವುದು ಬದುಕೇನೊ ಮಂಕುತಿಮ್ಮ ।।

ಕಗ್ಗದ ನಾಲ್ಕು ಸಾಲುಗಳು ನೆನಪಾದವು. ಈ ಸಾಲುಗಳನ್ನು ನನ್ನಂಥವರನ್ನು ನೋಡಿಯೇ ಬರೆದಿದ್ದಾ?

ಆಕಾಶ ನೋಡಿದೆ ಚಂದ್ರ ಇನ್ನೂ ನಗುತ್ತಲೇ ಇದ್ದ. ನನ್ನ ಮನಸ್ಸಿನ ಗೊಂದಲಗಳನ್ನೆಲ್ಲ ಓದಿ ಹಾಗೆ ನಗುತ್ತಿದ್ದಾನಾ? ಅಥವಾ ನನ್ನೆಲ್ಲ ತಪ್ಪುಗಳನ್ನು ಮನಸ್ಸಿಗಿಟ್ಟುಕೊಳ್ಳದೆ ನನ್ನತ್ತ ನಗು ಬೀರುತ್ತಾನಲ್ಲ ಶಶಾಂಕ ಅಂಥ ನಗೆಯಾ ಅದು?

"ಅಮ್ಮ" ಸ್ವರ ಕರೆದಿದ್ದು ಕೇಳಿ ಹಿಂದೆ ತಿರುಗಿದೆ. "ಪುಟ್ಟ ಇನ್ನೂ ನಿದ್ದೆ ಮಾಡಿಲ್ವ ನೀನು? ನಾಳೆ ಅಪ್ಪ ಬರುತ್ತಿದ್ದಾರೆ. ಬೇಗ ಏಳಲ್ವ ನೀನು? ಮಲಗು ಈಗ" ಅನ್ನುತ್ತಾ ಕಿಟಕಿಯ ಪರದೆಯನ್ನು ಎಳೆದು ಅವಳು ಮಲಗಿದ್ದೆಡೆ ಹೋದೆ.

"ಅಮ್ಮ ಯಾಕೆ ಪರದೆಯನ್ನು ಪೂರ್ತಿ ಮುಚ್ಚಿಬಿಟ್ಟೆ? ಚಂದ್ರ ಕಾಣುತ್ತಲೇ ಇಲ್ಲ ಈಗ. ಚಂದ್ರ ಕಾಣೋ ಹಾಗೆ ಪರದೆಯನ್ನು ಸ್ವಲ್ಪ ಎಳೆಯಮ್ಮ. ನೋಡುತ್ತಾ ಹಾಗೆ ಮಲಗುತ್ತೀನಿ". ಅರೆ! ನನ್ನ ಮಗಳಾ ಹೀಗೆ ಹೇಳ್ತಿರೋದು? ನಾನೂ ನನ್ನಮ್ಮಂಗೆ ಹೀಗೆ ಹೇಳ್ತಿದ್ದೆ ಅಲ್ವಾ? ಪರದೆಯನ್ನು ಚೂರು ಸರಿಸುತ್ತಾ ಯೋಚಿಸಿದೆ. ರಾತ್ರಿ ಕಿಟಕಿಯಾಚೆ ಚಂದ್ರನನ್ನೋ ತಾರೆಯನ್ನೋ ನೋಡುತ್ತಾ ಮಲಗುವುದೇ ನಂಗೆ ಅಭ್ಯಾಸವಿತ್ತು. ಇಲ್ಲದಿದ್ದರೆ ಚಂದ್ರನನ್ನು ತೋರಿಸು ಎಂದು ಹಟ ಮಾಡುತ್ತಿದ್ದೆ. ಚಂದ್ರನ ಬಗ್ಗೆ ನನ್ನಲ್ಲಿ ಅತಿಯಾದ ಮೋಹವಿತ್ತು, ಮನದಲ್ಲಿ ಬಹಳ ಪ್ರಶ್ನೆಗಳಿತ್ತು. ಯಾವಾಗಲೂ ಅಮ್ಮನನ್ನು ಪೀಡಿಸುತ್ತಿದ್ದೆ ನಂಗೆ ಚಂದ್ರನನ್ನು ತಂದುಕೊಡು ಎಂದು. ಆಗಲೆಲ್ಲ ಅಮ್ಮ ಹೇಳುತ್ತಿದ್ದಳು "ಚಂದ್ರ ಬಹಳ ಎತ್ತರದಲ್ಲಿ ಇದ್ದಾನೆ ಪುಟ್ಟ. ನಮ್ಮ ಕೈಗೆ ಎಟುಕೋದಿಲ್ಲ. ತರುವುದಾದರೂ ಹೇಗೆ" ಎಂದು. ನಾನು ಕೇಳುತ್ತಿದ್ದೆ "ಚಂದ್ರ ತುಂಬಾ ಎತ್ತರದಲ್ಲಿದ್ದಾನ? ಎಷ್ಟು ಎತ್ತರ ಅದು?"ಅಮ್ಮ ಯೋಚಿಸಿ ಹೇಳಿದ್ದಳು "ನೀನು ಬಸ್ಸಲ್ಲಿ ಊರಿಗೆ ಹೋಗುವಾಗ ಬೆಟ್ಟ ಕಾಣುತ್ತದಲ್ಲ ಅಷ್ಟು ಎತ್ತರ". ಆ ಸಮಯದಲ್ಲಿ ನಾನು ನೋಡಿದ್ದ ಬೆಟ್ಟ ಎಂದರೆ ನನ್ನ ಮನಸ್ಸಲ್ಲಿ ಅತಿ ಎತ್ತರದ್ದು, ನಮ್ಮ ಊಹೆಗೆ ನಿಲುಕದಷ್ಟು ಎತ್ತರದ್ದು ಎಂಬ ಭಾವನೆಯಿತ್ತು ಬಹುಶಃ. ಅದಕ್ಕೆ ಅಮ್ಮ ಹಾಗೆಂದಿದ್ದಳೇನೋ .

ಮತ್ತೆ ನಾನು ಸಿಕ್ಕಲಾರದ ಚಂದ್ರ ನಿಗಾಗಿ ಅಳುತ್ತಿದ್ದೆ. ಆಗಲೆಲ್ಲ ಅಮ್ಮ ಹೇಳುತ್ತಿದ್ದಳು. "ಯಾಕೆ ಅಳ್ತೀಯ? ನಿಂಗೆ ಗೊತ್ತಾ ರಾತ್ರಿ ನೀನು ಮಲಗಿದ ಮೇಲೆ ಆ ಬೆಟ್ಟದ ಚಂದಿರ ಬೆಟ್ಟದಿಂದಿಳಿದು ತಂಗಾಳಿಯಲ್ಲಿ ತೇಲುತ್ತ ಕೆಳಗೆ ಬರುತ್ತಾನೆ. ನೀನಾಗ ಅವನ್ನನ್ನು ಕಣ್ಣೊಳಗೆ ತುಂಬಿಕೊಂಡು ಮನಸೋ ಇಚ್ಛೆ ಆಡಬಹುದು. ನೀನು ಮಲಗದೇ ಹೀಗೆ ಅಳುತ್ತ ಕೂತಿದ್ದರೆ ನಿನ್ನ ಕಣ್ಣೆದುರಿಗೆ ಚಂದಿರ ಹಾದು ಹೋದರೂ ನಿನ್ನ ಕೈಗೆ ಸಿಕ್ಕುವುದೇ ಇಲ್ಲ". ಹೌದೆಂದೆನಿಸಿ ನಾನು ಬೇಗ ಬೇಗನೆ ಮಲಗಿಬಿಡುತ್ತಿದ್ದೆ ಬೆಟ್ಟದ ಚಂದಿರನ ಕನಸು ಕಾಣುತ್ತ.

ನನ್ನ ಮಗಳಿಗೂ ಇದೇ ಕಥೆ ಹೇಳುವಷ್ಟರಲ್ಲಿ ನಂಗೆ ಆ ಕಥೆ ನಿಜವಾಗಲೂ ಸತ್ಯ ಅನ್ನಿಸಿತು. " ಹೀಗೆ ಅಳುತ್ತ ಕೂತಿದ್ದರೆ ನಿನ್ನ ಕಣ್ಣೆದುರಿಗೇ ಚಂದಿರ ಹಾದು ಹೋದರೂ ನಿನ್ನ ಕೈಗೆ ಸಿಕ್ಕುವುದೇ ಇಲ್ಲ " ಅಮ್ಮ ಮತ್ತೆ ಮತ್ತೆ ನನ್ನ ಕಿವಿಯಲ್ಲಿ ಕೂಗಿದಂತಾಯ್ತು. "ಅಮ್ಮ ಹಾಗಾದರೆ ಬೇಗ ಮಲಗೋಣ. ಇಲ್ಲದಿದ್ದರೆ ಚಂದ್ರ ಬೆಟ್ಟದಿಂದಿಳಿದು ಬಂದರೂ ನಮ್ಮ ಕೈ ಗೆ ಸಿಗದೆ ಹೋದ್ರೆ ಕಷ್ಟ". ಸ್ವರ ಹೇಳುತ್ತಿದ್ದಳು.

"ಹೌದು ಚಂದ್ರನನ್ನು ಈ ಬಾರಿ ಕಳೆದುಕೊಳ್ಳಬಾರದು . ಚಂದಿರ ಬೆಟ್ಟದಿಂದಿಳಿದು ಬಂದಾಗ ಕಣ್ಣೊಳಗೆ ತುಂಬಿಕೊಂಡುಬಿಡಬೇಕು. ಹಳೆಯದೆಲ್ಲ ಮರೆತು ಚಂದಿರನೊಂದಿಗೆ ಹೊಸ ಹೆಜ್ಜೆ ಹಾಕಬೇಕು." ನನ್ನಮನಸ್ಸು ಕೂಗಿ ಹೇಳಿತು . "ಸರಿ ಪುಟ್ಟ ಮಲಗೋಣ ಈಗ" ಅನ್ನುತ್ತಾ ಹೊದಿಕೆಯೊಳಗೆ ತೂರಿಕೊಂಡೆ. ಮನಸ್ಸಿನ ಗೊಂದಲಗಳೆಲ್ಲ ದೂರಾಗಿ ಸಮಧಾನವಾದಂತೆ ಅನ್ನಿಸಿತು. ಸುತ್ತಲೂ ಮಲ್ಲಿಗೆ ಪರಿಮಳದ ತಂಪು ಗಾಳಿ ಹರಡಿತ್ತು. ಚಂದ್ರನ ನಿರೀಕ್ಷೆಯಲ್ಲಿ ಕನಸಿಸುತ್ತ ಮಲಗಿದ ನಮ್ಮಿಬ್ಬರನ್ನೂ ಹಿತವಾದ ನಿದ್ರೆ ಅವರಿಸಿತು.

5 comments:

ಶಾಂತಲಾ ಭಂಡಿ (ಸನ್ನಿಧಿ) said...

ಶ್ಯಾಮಾ...
ಚಂದನೆಯ ಬರಹ.
ಮಲ್ಲಿಗೆಯ ಕಂಪು ನನ್ನ ಮೂಗಿಗೂ ಬಡಿದು ಮನದಲ್ಲೆಲ್ಲಾ ಸುಗಂಧ ಸುವಾಸನೆ.
ಬೆಟ್ಟದ ಚಂದಿರ ಚಂದ್ರಿಕೆಯ ಹಿಡಿದು ಬರುತ್ತಿದ್ದಾನಂತೆ.
ಬಾಳ ಚಂದಿರ ಕಿಟಕಿ ಪರದೆಯ ಸರಿಸುತ್ತ ಹೋದಂತೆ ಸರಿದು ದೂರವಾಗದಿರಲಿ.
ಬಾಳ ಬೆಳಕಹುಣ್ಣಿಮೆಯಂದು ತಿಳಿಹಳದಿಯ ಬೆಳದಿಂಗಳಾಗಲಿ.
ಇಂತದೇ ಬರಹಗಳು ಇನ್ನೊಂದಿಷ್ಟು ಬರಲಿ.

Jagali bhaagavata said...

ಕಗ್ಗದ ಸಾಲು ತುಂಬ ಚೆನ್ನಾಗಿದೆ

ಶ್ಯಾಮಾ said...

@ ಶಾಂತಲಾ
"ಬಾಳ ಬೆಳಕಹುಣ್ಣಿಮೆಯಂದು ತಿಳಿಹಳದಿಯ ಬೆಳದಿಂಗಳಾಗಲಿ."
ತುಂಬ ಖುಷಿ ಆತು ಓದಿ.......

@ ಜಗಲಿ ಭಾಗವತ

"ಕಗ್ಗದ ಸಾಲು ತುಂಬ ಚೆನ್ನಾಗಿದೆ"

ಕಗ್ಗದಲ್ಲಿ ಚಂದವಿರದಿರೋ ಸಾಲು ಯಾವುದಾದರೂ ಇದೆಯಾ ಹೇಳು?
ಕಗ್ಗದ ಸಾಲುಗಳೇ ಹಾಗೆ ಒಂದಕ್ಕಿಂತ ಒಂದು ಚೆನ್ನ.. ಅಷ್ಟೇ ಅರ್ಥಗರ್ಭಿತ..

Jagali bhaagavata said...

ಯಾಕೆ ಏನೂ ಬರೀತಿಲ್ಲ?

ತೇಜಸ್ವಿನಿ ಹೆಗಡೆ said...

ತುಂಬ ಉತ್ತಮವಾದ ಕಥೆ. ಅರ್ಥವತ್ತಾದ ಬರವಣಿಗೆ ಹೀಗೇ ಮುಂದುವರಿಯಲಿ.