ಮೌನ ಬೇಕಿತ್ತು ನನಗೆ
ಆದರೆ ಮನಸು ಕೇಳುತ್ತಿಲ್ಲ
ಬರೀ ಮಾತು ಬರೀ ಮಾತು
ಮನಸ್ಸಿನ ತುಂಬೆಲ್ಲ.
ಕಡಲ ತೀರದ ಮರಳಿನ
ಮೇಲೆ ಸದ್ದಾಗದಂತೆ ಹೆಜ್ಜೆ ಇಡುತ್ತಿದ್ದೇನೆ
ಮೌನ ಬೇಕಿದೆ ನನಗೆ
ಆದರೆ ನನ್ನದೋ ಮೌನವೆಂದರೇನೆಂದು
ಅರಿಯದ ಮನಸು,
ಬರೀ ಮಾತು ಬರೀ ಮಾತು
ಮನಸ್ಸಿನ ತುಂಬೆಲ್ಲ.
ಸುತ್ತಲೂ ನಿಶ್ಶಬ್ದ ನೀರವತೆ
ಕಡಲದೂ ತಾನಿಂದು ಏಕೋ ಮೌನ ತಾಳಿದೆ
ನನ್ನಿಂಗಿತವ ಅರಿತಂತೆ
ಅಲೆಗಳೂ ಬಂದು ಹೋಗುತ್ತಿವೆ ಸದ್ದಿಲ್ಲದಂತೆ
ನನ್ನ ಕಾಲಿಗೊಂದಿಷ್ಟು ಹನಿಯ ಸೋಕಿಸಿ
ನನಗೂ ಬೇಕಿದೆ ಮೌನ,
ಆದರೆ ಮನಸೊಂದು ಕೇಳುತ್ತಿಲ್ಲ ಏಕೋ
ಬರೀ ಮಾತು ಬರೀ ಮಾತು
ಮನಸಿನ ತುಂಬೆಲ್ಲ.
ಗಾಳಿಯ ಕೂಗಿಲ್ಲ,
ನೊರೆಯುಕ್ಕಿ ಬಂದಂತೆ
ಸದ್ದಾಗಿಸುವ ಅಲೆಗಳಂಚಿನ ಗುಳ್ಳೆಗಳಿಲ್ಲ
ಎಲ್ಲೆಲ್ಲೂ ಹೆಪ್ಪುಗಟ್ಟಿದ ಮೌನ
ನನಗೂ ಅದೇಕೋ ಬೇಕೆನಿಸುತಿದೆ ಮೌನ
ಆದರೆ ಮನಸು ಕೇಳುತ್ತಿಲ್ಲ
ಬರೀ ಮಾತು ಬರೀ ಮಾತು
ಮನಸಿನ ತುಂಬೆಲ್ಲ.
ಕಡಲ ತೀರದ ಸಂಜೆ ಇಂದು
ಭಾರವಾಗಿದೆ ಏಕೋ
ಮೌನವೋ ? ಮಾತೋ ? ಎಂಬ
ಗೊಂದಲವು ತುಂಬಿರಲು
ಮನದೊಳಗೆ
ಸಂಜೆ ಸೂರ್ಯನೂ ಸದ್ದಿಲ್ಲದೆ ಜಾರುತ್ತಿದ್ದ
ಮೌನವಾಗಿ ಮಲಗಿದ ಕಡಲೊಳಗೆ
ನನ್ನ ಕಾಲಡಿಗೆ ಜಾರುತ್ತಿರುವ ಮರಳಿನಂತೆ.
ಕೂಗಿ ಕರೆದು
ನಿಲ್ಲಿಸಬೇಕೆನಿಸುತ್ತಿಲ್ಲ ಅವನನ್ನು ,
ಮೌನವೇ ಸಾಕೆನಿಸುತ್ತಿದೆ ನನಗೆ ಏಕೋ
ಆದರೂ ಮನಸು ಕೇಳುತ್ತಿಲ್ಲ
ಬರೀ ಮಾತು ಬರೀ ಮಾತು
ಮನಸಿನ ತುಂಬೆಲ್ಲ...
5 comments:
ನನ್ ಹತ್ರ ಇದ್ದು ಮೌನ; ಆದ್ರೆ ಅದ್ನ ಕೊಡಕ್ಕಾಪ್ದಿಲ್ಲೆ. ;D
ಕವನ ಚನಾಗಿರೋದು ನಿಜ.
ಕೊಡಕ್ಕೆ ಬಂದಿದ್ರೆ ಚೆನ್ನಾಗಿರ್ತಿತ್ತು.....ಬೇಕೇ ಬೇಕಾಗಿತ್ತು ನಂಗೆ :)
ನನ್ನತ್ರನೂ ಮೌನ ಇದ್ದು. ಕೊಡಕಾಗ್ತು. ಆದ್ರೆ ಮಸಾಲೆದೋಸೆ ಕೊಡ್ಸವು :-)
ಒಳ್ಳೆ ಮಸಾಲೆ ದೋಸೆ ಕಥೆ ಆಯ್ತಲ್ಲಾ ನಿಂದು :)
ಹೂಂ ಸರಿ ಕೊಡ್ಸೋಣಾ... ಅದಕ್ಕೆ ಮೊದ್ಲು ಮೌನ ತಂದಿಡು ಆಮೇಲೆ ಮಸಾಲೆ ದೋಸೆ :)
Post a Comment