Tuesday, October 16, 2007

ಹುಡುಕಾಟ

ಮತ್ಯಾಕೆ ಹುಡುಕುತಿ
ಹಸಿರು ಲಂಗದ ಪುಟ್ಟ
ಬಾಲೆಯನ್ನ
ನನ್ನೊಳಗೆ ಅವಳು
ಕಳೆದುಹೋಗಿಹಳು ಎಂದೋ..
ಚಿಮ್ಮುವ ನೆರಿಗೆಯ ಹಸಿರು
ಲಂಗ ಈಗ ಬರೀ ನೆನಪಿನ
ಪುಟಗಳಿಗೆ ಹೊದಿಕೆ..

ಮತ್ಯಾಕೆ ಹುಡುಕುತಿ
ಮುದ್ದು ಗಲ್ಲದ ತುಂಟ
ಪುಟಾಣಿಯನ್ನ? ಆಗಲೇ
ಮರೆತು ಹೋಗಿದೆಯಲ್ಲ
ಮುದ್ದು ಮುಖ,
ತುಂಟತನಗಳೆಲ್ಲ ಈಗ ಬರೀ
ನೆನಪಿನ ಪುಟಗಳ ಮೇಲೆ
ಬರೆದ ನಾಲ್ಕು ಸಾಲುಗಳು...

ಮತ್ಯಾಕೆ ಹುಡುಕುತಿ
ಕಾಲುವೆಯ ನೀರಲ್ಲಿ ಕಾಲಿಳಿಬಿಟ್ಟು
ಪುಟಾಣಿ ಮೀನುಗಳು ಪಾದಕ್ಕೆ
ಕಚಗುಳಿಯಿಟ್ಟಾಗ ನಗುತ್ತಿದ್ದ ಚಿನ್ನಾರಿಯನ್ನ?
ಕಾಲುವೆಯೆಂದೋ ಬತ್ತಿ
ಹೋಗಿದೆಯಂತೆ, ಮೀನಿಟ್ಟ
ಕಚಗುಳಿಗೆ ನಕ್ಕಿದ್ದೆಲ್ಲ
ಈಗ ಬರೀ ನೆನಪಿನ ಪುಟಗಳ
ಅಂಚಿಗೆ ಬಿಡಿಸಿದ ಬಳ್ಳಿ ರಂಗೋಲಿ.

ಮತ್ಯಾಕೆ ಹುಡುಕುತಿ
ಮಾತು ಮಾತಿಗೆ ಸಿಟ್ಟಿಗೆದ್ದು
ಮುಖ ಊದಿಸಿಕೊಂಡು ಕಣ್ಣಲ್ಲಿ
ಹನಿ ತುಂಬಿಕೊಂಡು ಹೊರಗೋಡಿ
ಮತ್ತೆ ಒಳ ಬರುವಾಗ,
ಸಿಟ್ಟಾಗಿದ್ದೆ ಮರೆತು ನಗುವ
ಚಿಲುಮೆಯಾಗುತ್ತಿದ್ದವಳನ್ನು?
ಮಾತಿಗೆ ಮೌನದ ಕಡಿವಾಣ
ಎಂದೋ ಬಿದ್ದಿರಲು, ಸಿಟ್ಟಿಗೇಳುವ
ಪೋರಿಯ ಓಟ ನೋಟಗಳೆಲ್ಲ
ಈಗ ಬರೀ ನೆನಪಿನ ಪುಟಗಳ
ಮೇಲೆ ಚೆಲ್ಲಿದ ನೀಲಿ ಶಾಯಿಯ ಗುರುತು

ಮತ್ಯಾಕೆ ಹುಡುಕುತಿ
ಕಳೆದು ಹೋದವಳನ್ನ ?
ಮತ್ಯಾಕೆ ಹುಡುಕುತಿ
ಸಿಕ್ಕಲಾರದವಳನ್ನ ?
ಮತ್ಯಾಕೆ ಹುಡುಕುತಿ
ನೆನಪಿನ ಪುಟಗಳನ್ನ ಬೀಸು ಗಾಳಿಯಲ್ಲಿ
ಹಾರಲು ಬಿಟ್ಟವಳನ್ನ ?
ಅಷ್ಟು ಹಟ ಹೂಡುವೆಯಾದರೆ
ಮನಸೇ, ನೀ ಕೇಳಿಬಿಡು ಎಲ್ಲರನ್ನ
"
ಹುಡುಕಿ ಕೊಡುವಿರಾ ನಂಗೆ ನನ್ನ"?

5 comments:

ಶಾಂತಲಾ ಭಂಡಿ (ಸನ್ನಿಧಿ) said...

ಚೊಲೊ ಇದ್ದು.

Jagali bhaagavata said...

ಓಹ್ಹೋ, ಅದ್ಕೇನಂತೆ? ಹುಡ್ಕಿ ಕೊಡೋಣ. ಆದ್ರೆ ಹುಡ್ಕಿಕೊಟ್ರೆ ನನಗೆ ಏನ್ ಕೊಡಿಸ್ತಿ?

ಮೊನ್ನೆ ಪೇಪರಿನಲ್ಲಿ ಓದ್ತಾ ಇದ್ದೆ, 'ಕಾಣೆಯಾಗಿದ್ದಾರೆ' ವಿಭಾಗದಲ್ಲಿ...'ಯಮುನೆಯ ತೀರದಲ್ಲಿ ಕಾಗದದ ದೋಣಿ ಬಿಟ್ಕೊಂಡು, ಕೃಷ್ಣನಿಗಾಗಿ ಕಾಯ್ತಾ ಇದ್ದ ಹುಡ್ಗಿ' ಅಂತ ಏನೊ ಇತ್ತು. ಅದು ನೀನೇನಾ?:-)

ಶ್ಯಾಮಾ said...

@ ಶಾಂತಲಾ
Thanx

@ಭಾಗವತ್ರು
:-)
ಮೊದ್ಲು ಹುಡ್ಕಿ ಕರ್ಕೊಂಡು ಬರ್ಬೇಕು ಆಮೇಲೆ ಏನ್ ಕೊಡ್ಸೋದು ಅನ್ನೋದರ ವಿಚಾರ..ಯಾಕೆ ಅಂದ್ರೆ ಈಗಿನ್ ಕಾಲದ್ಲಲ್ಲಿ ಜನರನ್ನ ನಂಬೋದು ಕಷ್ಟ :)

Sushrutha Dodderi said...

ಹಳೆಯ ಚಂದದ ಸಂಗತಿಗಳನ್ನೆಲ್ಲ ನೆನಪಿನ ಪುಟಗಳಲ್ಲಿ ಅಚ್ಚಾಗಿಸಿ ಕೊನೆಗೆ ಆ ಪುಟಗಳನ್ನೂ ಗಾಳಿಯಲ್ಲಿ ತೂರಿಬಿಟ್ಟೆಯಾ? ಛೇ!

ಭಾಗ್ವತ್ರಿಗೆ ಬೇಕರೆ ನಾ ಹೆಲ್ಪ್ ಮಾಡ್ತಿ ತಗ.. ;)

ಶ್ಯಾಮಾ said...

@ ಸುಶ್ರುತ

ಹ್ಮ್ ಹೌದು.. ಆ ಚಂದದ ಸಂಗತಿಗಳೆಲ್ಲ ಈಗ ಕಣ್ಣಿಗೆ ಕಂಡೂ ಕೈಗೆ ಸಿಕ್ಕಲಾರದವಾದ್ದರಿಂದ ಆ ಪುಟಗಳನ್ನ ಗಾಳಿಗೆ ತೂರುವ ಕಲ್ಪನೆ ಬಂದಿದ್ದು...

ಭಾಗ್ವತ್ರು ನಂಗೆ ಹೆಲ್ಪ್ ಮಾಡಕ್ಕೆ ಹೋಗಿ ನೀನು ಭಾಗ್ವತ್ರಿಗೆ ಹೆಲ್ಪ್ ಮಾಡಕ್ಕೆ ಹೋಗಿ ಆಮೇಲೆ ನೀವಿಬ್ರೂ "ಕಾಣೆಯಾಗಿದ್ದಾರೆ" ವಿಭಾಗದಲ್ಲಿ ಬಂದುಬಿಟ್ರೆ ಏನ್ ಗತಿ??!! :-D ;-)