Thursday, September 13, 2007

ಹೀಗಿತ್ತು ಚೌತಿ ಹಬ್ಬ

"ಅಮ್ಮ ಏನು ಮಾಡ್ತಾ ಇದ್ದೇ? "ಫೋನಿನಲ್ಲಿ ಅಮ್ಮನನ್ನು ವಿಚಾರಿಸಿದರೆ ಅಮ್ಮ ಚಕ್ಲಿ ಮಾಡುತ್ತಾ ಇದ್ದೆ ಅಂತ ಉತ್ತರ ಕೊಟ್ಟಳು. ಮತ್ತೆ ಅದು ಇದು ಹಬ್ಬದ ತಯಾರಿ ಬಗ್ಗೆ ಮಾತಾಡಿ ಮಾತು ಮುಗಿಸಿ ಫೋನ್ ಇಡುವಾಗ ನಾನು ಹಬ್ಬಕ್ಕೆ ಮನೆಗೆ ಬರುವುದಿಲ್ಲವೆಂಬುದಕ್ಕೆ ಅಮ್ಮನ ದುಃಖ ವ್ಯಕ್ತವಾಗಿತ್ತು.

ಹಾಗೆಯೇ ಹಬ್ಬದ ಬಗ್ಗೆ ವಿಚಾರ ಮಾಡುತ್ತಿದ್ದಾಗ ಮನಸ್ಸು ವರುಷಗಳಷ್ಟು ಹಿಂದೆ ಹೋಗಿ ಆ ಹಬ್ಬದ ಸಂಭ್ರಮಗಳೆಲ್ಲ ಕಣ್ಮುಂದೆ ಬಂದವು.

ಒಟ್ಟು ಕುಟುಂಬಗಳಲ್ಲಿನ ಹಬ್ಬದ ಆಚರಣೆಯ ಸಂಭ್ರಮವೇ ಬೇರೆ. ಚೌತಿ ಹಬ್ಬ ಬಂತೆಂದರೆ ಮೊದಲು ಹೊಸ ಬಟ್ಟೆ ಕೊಡಿಸಲೇ ಬೇಕಿತ್ತು ನಮಗೆ. ಹಬ್ಬಕ್ಕೆ 15 ದಿನಗಳಿರುವಾಗಲೇ ನಾವು ಹಬ್ಬದ ಬಗ್ಗೆ ಕನಸು
ಕಟ್ಟಲು ಶುರುವಿಡುತಿದ್ದೆವು. ಇನ್ನು 12 ಡೇ ದಿನ 10 ಎ ದಿನ ಅಂತೆಲ್ಲಾ. ದೊಡ್ಡಪ್ಪ ಬಂದಾಗ ಯಾವ ಯಾವ ಪಟಾಕಿ ತಂದಿಟ್ಟಿದ್ದಾರೆ ಈ ಸಲ ಅಂತ ವಿಚಾರಿಸಿಟ್ಟುಕೊಳ್ಳುತ್ತಿದ್ದೆವು. ಹಬ್ಬದ ಮುಂಚಿನ ದಿನವೇ ಊರಿಗೆ ಹೋಗಿ ಎಲ್ಲ ಒಟ್ಟಾಗಿ ಬಿಡುತ್ತಿದ್ದೆವು.

ಸಂಜೆ ಹೊತ್ತಿಗೆ ದೊಡ್ಡಪ್ಪ ಗಣಪತಿ ಮೂರ್ತಿಯನ್ನು ತರುವುದಕ್ಕೆ ಹೋದರೆ ನಾವೆಲ್ಲ ಅವರು ಬರುವುದನ್ನೇ ಕಾಯುತ್ತಿದ್ದೆವು. ಒಂದು ಬುಟ್ಟಿಯಲ್ಲಿ ಗಣಪತಿಯನ್ನಿಟ್ಟು ಮೇಲಿಂದ ಒಂದು ಕಾಗದ ಮುಚ್ಚಿಕೊಂಡು ತಂದು ದೇವರ ಮುಂದೆ ಇಟ್ಟರೆ ನಾವೆಲ್ಲ ಕದ್ದು ಕದ್ದು ಹೋಗಿ ಆ ಕಾಗದ ಸರಿಸಿ ಗಣಪತಿಯನ್ನು ನೋಡುತ್ತಿದ್ದೆವು. ಯಾರಾದರೂ ನಮ್ಮನ್ನು ನೋಡಿ ಬಯ್ದಾಗ ಅಲ್ಲಿಂದ ಓಡುವುದು ಒಂದು ರೀತಿಯ ಮಜವಾಗಿತ್ತು.

ಮತ್ತೆ ಸ್ವಲ್ಪ ಹೊತ್ತಿಗೆಲ್ಲಾ ದೊಡ್ಡಪ್ಪ, ಕಾಕ ಅಣ್ಣಂದಿರೆಲ್ಲ ಸೇರಿ ಮಂಟಪ
ಕಟ್ಟಲು ಶುರು ಮಾಡಿದರೆ ನಾವೆಲ್ಲ ಅಲ್ಲಿ ಹಾಜರ್. ನಮ್ಮನೆಯಲ್ಲಿ ಪ್ರತಿ ಸಲ ಒಂದೇ ತರಹದ ಮಂಟಪ. ಏನೇನೂ ಬದಲಾವಣೆಯಿಲ್ಲ. ಹೆಚ್ಚೆಂದರೆ ಹಚ್ಚುತ್ತಿದ್ದ ಕಾಗದದ ಬಣ್ಣ ಬೇರೆ ಬೇರೆ ಆಗಿರ್ತಿತ್ತೆನೊ ಅಷ್ಟೇ. ಪ್ರತಿ ಸಲ ಬೇರೆಯವರ ಮನೆಯಲ್ಲಿ ನಾನಾ ತರಹದ ಮಂಟಪಗಳನ್ನು ನೋಡಿ ಬರುತ್ತಿದ್ದ ನಾವು ನಮ್ಮನೆಯಲ್ಲೂ ಆ ತರಹದ ಮಂಟಪ ಮಾಡಿರೆಂದು ಹಟ ಹಿಡಿಯುತ್ತಿದ್ದೆವು. ಪ್ರತಿಸಲ ಈ ವರ್ಷ ಟೈಮ್ ಇಲ್ಲ ಮುಂದಿನ ಸಲ ನಾವು ಹಂಗೆ ಮಾಡೋಣ ಹಿಂಗೆ ಮಾಡೋಣ ಎಲ್ಲರ ಮನೆಗಿಂತ ನಮ್ಮನೆದೇ ಚಂದವಾಗಬೇಕು ಹಂಗೆ ಮಾಡೋಣ ಸುಮ್ನಿರಿ ಅಂತ ನಂಬಿಸುತ್ತಿದ್ದರು. ಪ್ರತಿಸಲ ನಾವು ಅವರ ಮಾತನ್ನು ನಂಬಿ ಆ ಮುಂದಿನ ಸಲ ಹೆನ್ಗಿರಬಹುದೆನ್ದು ಬಾಯಿ ಕಳೆದುಕೊಂಡು ಕನಸು ಕಾಣುತ್ತಿದ್ದೆವು.

ಇಷ್ಟೆಲ್ಲಾ ಆಗುವ ಹೊತ್ತಿಗೆ ಪಟಾಕಿ ಹಂಚಿಕೆ ಶುರುವಾಗುತ್ತಿತ್ತು. ಯಾರ್ಯಾರಿಗೆ ಯಾವ ಯಾವ ಪಟಾಕಿ ಅಂತ ಎಲ್ಲ ಹಂಚಿಬಿಡುತ್ತಿದ್ದರು. ದೊಡ್ಡ ದೊಡ್ಡ ಪಟಾಕಿ ಹೊಡೆಯಲು ಧೈರ್ಯವಿರದಿದ್ದರೂ ಎಲ್ಲ ಪಟಾಕಿಯ ಸ್ಯಾಂಪಲ್ ಒಂದೊಂದು ಕೊಡಲೇ ಬೇಕಾಗಿತ್ತು ನಮಗೆ. ಇಲ್ಲ ಅಂದ್ರೆ ಕೇಳುತ್ತಲೇ ಇರ್ಲಿಲ್ಲ. ವಾಲೆಗರಿ ಪಟಾಕಿ ಅಂದ್ರೆ ನಮಗೆಲ್ಲ ಅಚ್ಚುಮೆಚ್ಚು. ಯಾವುದೇ ಭಯವಿಲ್ಲದೇ ಹಚ್ಚುತ್ತಿದ್ದ ಪಟಾಕಿ ಅಂದರೆ ಅದೊಂದೇ ಇರಬೇಕು!!

ಇನ್ನು ಹಬ್ಬದ ದಿನ ಬೆಳಗ್ಗೆ ಎಲ್ಲ ಮಕ್ಕಳಿಗೆ ಶೇಷತ್ತೆಯಿಂದ ಸಾಮೂಹಿಕ ಸ್ನಾನ ಆಗುತ್ತಿತ್ತು. ಅತ್ತೆ ಎಂದರೆ ಸ್ವಲ್ಪ ಭಯಪಡುತ್ತಿದ್ದ ನಾವೆಲ್ಲ ಬಾಯ್ಮುಚ್ಚಿಕೊಂಡು ಅವರು ಎಬ್ಬಿಸಿದಾಗ ಎದ್ದು ಸಮೂಹಿಕ ಸ್ನಾನ ಮುಗಿಸುತ್ತಿದ್ದೆವು
ಒಲ್ಲದ ಮನಸ್ಸಿಂದಲೇ. ಬೆಳಿಗ್ಗೆ 7.30-8 ರ ಹೊತ್ತಿಗೆಲ್ಲಾ ಪೂಜೆ ಮುಗಿದುಬಿಡುತ್ತಿತ್ತು. ಹೊಸ ಅಂಗಿ ಹಾಕಿಕೊಂಡು ಓಡಾಡೋಡೇ ಓಡಾಡೋದು. ಪ್ರತಿ ಹಬ್ಬಕ್ಕೂ ಹೊಸ ಹಾಡು ಕಲಿತು ದೇವರ ಮುಂದೆ ಹಾಡಿ ಎಲ್ಲರಿಂದ ಮೆಚ್ಚಿಗೆ ಪಡೆಯೋದೂ ಒಂದು ಖುಷಿಯಾಗಿತ್ತು.

ಮತ್ತೆ ಮನೆ ಪಕ್ಕದ
ಹಿತ್ತಲಿಗೆ ಹೋಗಿ ದೂರ್ವೆ ಕೊಯ್ಯೋಕೆ ಹೋದ್ರೆ ಸುಮಾರು ಹೊತ್ತು ಹಿಡ್ಸುತ್ತಿತ್ತು. ಒಂದು ಸಲ ಅಜ್ಜಿ ಹೆಳಿದ್ದನ್ನು ಚೆನ್ನಾಗಿ ನೆನಪಿಟ್ಟುಕೊಂಡಿದ್ದೆವು. ಜಾಸ್ತಿ ದೂರ್ವೆ ಕೊಯ್ದಷ್ಟೂ ಜಾಸ್ತಿ ಪುಣ್ಯ ಸಿಗುತ್ತಂತ. ಹಾಗಾಗಿ ನಾ ಮುಂದು ತಾ ಮುಂದು ಅಂತ ರಾಶಿ ರಾಶಿ ದೂರ್ವೆ ಕೊಯ್ದು ದೇವರಿಗೆ ಏರಿಸುತ್ತಿದ್ದೆವು.

ಇನ್ನು ಪಟಾಕಿ ಹೊಡೆಯುವ ಹೊತ್ತು ಬಂತೆಂದರೆ ಅಮ್ಮನ ಆಜ್ಞೆಯಂತೆ ಹೊಸ ಬಟ್ಟೆ ತೆಗೆದಿಟ್ಟು ಬೇರೆ ಬಟ್ಟೆ ಹಾಕಿಕೊಂಡು ಹೋಗಬೇಕಿತ್ತು. ಚಿಕ್ಕ ಪುಟ್ಟ ಗಲಾಟೆ ಜಗಳಗಳಿಲ್ಲದೆ ಯಾವತ್ತೂ ಪಟಾಕಿ ಹಚ್ಚೋ ಕಾರ್ಯ ಸಂಪೂರ್ಣವಾಗುತ್ತಲೇ ಇರ್ಲಿಲ್ಲ. ಬೇಕಂತಲೇ ನಮ್ಮನ್ನು ಹೆದರಿಸಲು ನಮ್ಮ ಕಾಲ ಬಳಿಯಲ್ಲೆಲ್ಲ ಪಟಾಕಿ ಇಟ್ಟು ಹೆದರಿಸುತ್ತಿದ್ದ ಅಣ್ಣ , ಆಮೇಲೆ ನಾವು ದೊಡ್ಡವರಿಗೆ ದೂರು ಕೊಟ್ಟು... ಹೀಗೆ ಮಜಾವಾಗಿ ಸಾಗುತ್ತಿತ್ತು.

ನೆಲಚಕ್ರ ಹಚ್ಚುತ್ತಿದ್ದಿದ್ದು ಯಾವಾಗಲೂ ದೊಡ್ಡಪ್ಪ. ನೆಲಚಕ್ರ ತಿರುಗಲು ಶುರುವಾದಕೂಡಲೆ ನಾವು ಅತ್ತ ಇತ್ತ ಒಡುತ್ತಿದ್ದೆವು. ನಮ್ಮ ಕಾಲ ಬಳಿ ಬಂದ ಕೂಡಲೇ ಕಿಟಕಿಯ ಮೇಲೆ ಹತ್ತಿ ನಿಲ್ಲುವುದು. ಕೂಗುವುದು.. ಆಹಾ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ ಆ ದೃಶ್ಯ.

ಕಡುಬು ಕಜ್ಜಾಯಗಳಿಂದ ಕೂಡಿದ ಮಧ್ಯಾಹ್ನದೂಟ ಮುಗಿಸಿ, ಆಟಾಡಿಕೊಂಡು ಸಮಯ ಹೋದದ್ದೇ ತಿಳಿಯುತ್ತಿರಲಿಲ್ಲ. ನಾಲ್ಕು ಐದು ಗಂಟೆಗೆಲ್ಲ ಮತ್ತೆ ರೆಡಿ ಆಗಿ ಅಮ್ಮ ದೊಡ್ಡಮ್ಮರೊಡನೆ ಗಣಪತಿ ನೋಡಲು ಎಲ್ಲರ ಮನೆಗೆ ಹೋಗುತ್ತಿದ್ದೆವು. ಯಾರ ಮನೆ ಗಣಪತಿ, ಮಂಟಪ ಚೆನ್ನಾಗಿದೆ
ಅಂತ ಒಂದು ಚರ್ಚೆಯಾದರೆ, ಯಾರ ಮನೆ ಚಕ್ಕುಲಿ , ಪಂಚಕಜ್ಜಾಯ ಚೆನ್ನಾಗಿತ್ತೆಂದು ಇನ್ನೊಂದು ಚರ್ಚೆ.

ಎಲ್ಲ ಮುಗಿಸಿ ಮನೆಗೆ ಬರುವಷ್ಟರಲ್ಲಿ ಸಂಜೆಯಾಗಿರುತ್ತಿತ್ತು. ಮತ್ತೆ ಕೈ ಕಾಲು ತೊಳೆದು ದೇವರಿಗೆ ಕೈ ಮುಗಿದು ಆರತಿ ಪೂಜೆ ಎಲ್ಲ ಮುಗಿಸಿ ಊಟಕ್ಕೆ ಹೋಗುತ್ತಿದ್ದೆವು. ರಾತ್ರಿ ಊಟ ಮಾಡುವಾಗ ಬಹಳ ಗಡಿಬಿಡಿ ನಮಗೆಲ್ಲ ಯಾಕೆಂದರೆ ಮತ್ತೆ ಪಟಾಕಿ ಹಚ್ಚಲು ಹೋಗಬೇಕು. ಸುರ್ ಸುರ್ ಬತ್ತಿ, ಸುರ್ ಬಾಣ ಇವೆಲ್ಲಾ ಕಣ್ಮುಂದೆ ಕುಣಿಯುತ್ತಿರುತ್ತಿತ್ತು.

ಆಕಾಶಕ್ಕೆ ನೆಗೆಯುತ್ತಿದ್ದ ಆ ಬಾಣದ ಪಟಾಕಿ, ಕಣ್ಮುಂದೆ ಅರಳುತ್ತಿದ್ದ ಹೂಕುನ್ಡ ಇವೆಲ್ಲಾ ನೋಡುತ್ತಾ ಕುಣಿಯುವಾಗ ಎಲ್ಲೋ ಒಮ್ಮೆ ತಪ್ಪಿ ಚಂದ್ರನನ್ನು ನೋಡಿಬಿಟ್ಟೆವೆಂದರೆ ಮುಗೀತು ಮನಸ್ಸಲ್ಲೆಲ್ಲ ಭಯ ಆವರಿಸಿಕೊಂಡುಬಿಡುತ್ತಿತ್ತು. ಚೌತಿಯ ಚಂದ್ರನನ್ನು ನೋಡಿದರೆ ಏನಾದರೂ ಅಪವಾದ ಬರುತ್ತದೆಂದು ದೊಡ್ಡವರು ಹೇಳಿದ್ದು ಗಟ್ಟಿಯಾಗಿ ಮನಸ್ಸಲ್ಲಿರುತ್ತಿತ್ತು. ಎಷ್ಟು ನೋಡಬಾರದು ಎಂದುಕೊಂಡಿದ್ದರೂ ಅದು ಹೇಗೋ ಚಂದ್ರ ಕಂಡುಬಿಡುತ್ತಿದ್ದ. ಆಗೆಲ್ಲ ಅಜ್ಜಿ ಒಂದು ಉಪಾಯ ಹೇಳಿಕೊಟ್ಟಿದ್ದಳು 21 ದೂರ್ವೆ ಕೊಯ್ದು ಹಾಕಿಬಿಟ್ರೆ ಏನೂ ಅಪವಾದ ಬರುವುದಿಲ್ಲ ಅಂತ. ಹಾಗಾಗಿ ಮರುದಿನ ಬೆಳ್ಬೆಳಿಗ್ಗೆ 21 ದೂರ್ವೆ ಏಕೆ ಇನ್ನೊಂದಿಷ್ಟು ಜಾಸ್ತಿನೆ ಕೊಯ್ದು ದೇವರಿಗೆ ಹಾಕೋ ವರೆಗೆ ಸಮಾಧಾನವೇ ಇರ್ತಿರಲಿಲ್ಲ.

ಇಂಥ ಸಂಬ್ರಮ, ಮಾತು ತಮಾಷೆಗಳ ನಡುವೆ 3 ದಿನ ಹೇಗೆ ಕಳೆಯುತ್ತಿತ್ತೋ ಗೊತ್ತಾಗುತ್ತಿರಲಿಲ್ಲ. ಕೊನೆಯ ದಿನ ಪೂಜೆ ಮಾಡಿ ಗಣಪತಿಯನ್ನು ತೋಟದ ಹೊಂಡ ದಲ್ಲಿ ಮುಳುಗಿಸುತ್ತಿದ್ದರೆ ನಮಗೆಲ್ಲ ಅಳು ಬಂದ ಹಾಗಾಗುತ್ತಿತ್ತು. ಎಷ್ಟು ಚಂದದ ಗಣಪತಿಯನ್ನು ಮುಳುಗಿಸುತ್ತಿದ್ದಾರಲ್ಲ ಎಂಬ ದುಃಖ ಒಂದು ಕಡೆ, ಹಬ್ಬ ಮುಗೀತು ಮರಳಿ ಹೋಗಬೇಕು, ನಾಳೆಯಿಂದ ಮತ್ತೆ ಶಾಲೆ ಶುರು ಎನ್ನುವುದೆಲ್ಲಾ ನೆನಪಾಗಿ ದುಃಖ ಇನ್ನೊಂದು ಕಡೆ.

ಇಷ್ಟೆಲ್ಲಾ
ಸುಂದರ ನೆನಪುಗಳ ಮೂಟೆ ಹೊತ್ತು, ಮತ್ತೆ ಮುಂದಿನವರ್ಷದ ಹಬ್ಬದ ಕನಸುಗಳ ಮೂಟೆ ಹೊತ್ತು ವಾಪಾಸಾಗುತ್ತಿದ್ದೆವು.

ಎಷ್ಟು ಸುಂದರ ದಿನಗಳು, ಎಲ್ಲ ನೆನಪಾಗಿ ಇಷ್ಟು ಬರೆಯುವ ಹೊತ್ತಿಗೆ ಮನಸ್ಸೆಲ್ಲ ಭಾರವಾಗುತ್ತಿದೆ..
ಏನೇನೋ ಕಾರಣಗಳಿಂದ ಹೋದ ವರ್ಷವೂ ಹಬ್ಬಕ್ಕೆ ಮನೆಗೆ ಹೊಗಲಾಗಲಿಲ್ಲ, ಈ ವರ್ಷವೂ ಅಷ್ಟೇ. ಮತ್ತೆ ಈಗ ಬಿಚ್ಚಿಟ್ಟ ನೆನಪಿನ ದಿನಗಳಂತೆ ಹಬ್ಬ ಆಚರಿಸಿ ಎಷ್ಟೋ ವರ್ಷಗಳಾದವು. ಅವೆಲ್ಲ ಕಳೆದು ಹೋದ ಅಮೂಲ್ಯ ದಿನಗಳು. ಈಗ ಬರೀ ನೆನಪುಗಳು.

ಪ್ರತಿ ಚೌತಿ ಹಬ್ಬದಲ್ಲೂ
ಇವಿಷ್ಟನ್ನೂ ನೆನಪು ಮಾಡಿಕೊಂಡು "ಹೀಗಿತ್ತು ಚೌತಿ ಹಬ್ಬ "ಎಂದು ಸಂಭ್ರಮಿಸುತ್ತೇನೆ, ಈಗಿಲ್ಲವಲ್ಲ ಆ ಕ್ಷಣಗಳು ಎಂಬ ದುಃಖವನ್ನು ಒಳಗೇ ಬಚ್ಚಿಡುತ್ತೇನೆ.

6 comments:

Sandeepa said...

ಇದ್ದಲ್ಲೇ ಹಬ್ಬ ಮಾಡು!!
ಖುಷಿಲ್ಲಿದ್ರೆ ಅದೇ ಹಬ್ಬ :)

ರಂಜನಾ ಹೆಗ್ಡೆ said...

ಹೆಯ್ ಕೂಸಕ್ಕ ಚಿಯರ್ ಅಪ್ :)
ನಿನ್ನ ಲೇಖನ ಓದಿ ನಿಮ್ಮನೆ ಅಂಗಳದಲ್ಲಿ ಓಡಾಡಿದ ಹಾಗೆ ಆಯಿತು ಶ್ಯಾಮ. ನೆನಪಿನ ಅಲೆಗಳನ್ನು ತೆರೆದು ತೆರೆದು ಇಟ್ಟಿದ್ದೆ.
ಸುಪರ್ ಆಗಿ ಇದ್ದವು ಹಳೆಯ ದಿನಗಳು..... ಈಗ ಅವನ್ನೆಲ್ಲಾ ಹೀಗೆ ನೆನಪು ಮಾಡಿಕೊಂಡು, ಬ್ಲಾಗ್ ಬರೆದುಕೊಂಡು, ಬ್ಲಾಗ್ ಓದಿಕೊಂಡು ಇರದಷ್ಟೆ ನಮ್ಮ ಭಾಗ್ಯ.
ಹೊಗ್ಲಿ ಬಿಡು ಕೂಸೆ ಮುಂದಿನ ಸಾರಿ ಹಬ್ಬಕ್ಕೆ ಹೋಗಬಹುದು ಆಯಿತಾ. (ಬಾಯಿ ಕಳೆದು ಕೊಂಡು ಕನಸು ಕಾಣು ಆಯಿತಾ- ಈ ಲೈನ್ ಎನಕ್ಕೊ ತುಂಬಾ ಇಷ್ಟ ಆಯಿತು).
ಖುಷಿ ಆಗಿ ಇರು ನಾನು ಮನೆಗೆ ಹೊಕ್ತಾ ಇದಿನಿ ಚಕ್ಕುಲಿ ತಂದು ಕೊಡ್ತೀನಿ. ಓಕೆ. "ಸ್ಮೈಲ್ ಪ್ಲೀಸ್"

ಶ್ಯಾಮಾ said...

@ Sandeepa
ಹ್ಮ್ ...ಅದ್ಕೆ ನಂಗೆ ದಿನಾ ಹಬ್ಬ :)

@ Ranju

:)

ನೀನು ಚಕ್ಕುಲಿ ತಗಬರ್ತೆ ಅಂತ ಬಾಯಿ ಕಳಕಂಡು ಕನಸು ಕಾಣ್ತಾ ಇರ್ತಿ ಬೇಗ ಬಾ ಮನೆ ಇಂದ :)

Sushrutha Dodderi said...

ತುಂಬಾ ಇಷ್ಟವಾದದ್ದು:

"ನೆಲಚಕ್ರ ತಿರುಗಲು ಶುರುವಾದಕೂಡಲೆ ನಾವು ಅತ್ತ ಇತ್ತ ಒಡುತ್ತಿದ್ದೆವು. ನಮ್ಮ ಕಾಲ ಬಳಿ ಬಂದ ಕೂಡಲೇ ಕಿಟಕಿಯ ಮೇಲೆ ಹತ್ತಿ ನಿಲ್ಲುವುದು. ಕೂಗುವುದು.. "

ಥ್ಯಾಂಕ್ಸ್..

ಶ್ಯಾಮಾ said...

ಥ್ಯಾಂಕ್ಸ್ ಸುಶ್ರುತ

ನಂಗೆ ಆ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇದ್ದು............ ಈಗಷ್ಟೇ ಕೂಗಿ ಕೂಗಿ ಓಡಿ ಓಡಿ ಸುಸ್ತಾಗಿದ್ಯೆನೊ ಅನ್ನಿಸ್ತಾ ಇದ್ದು

Jagali bhaagavata said...

ಚೆನ್ನಾಗಿದೆ. ಬಾಲ್ಯದ ನೆನಪುಗಳು ಯಾವತ್ತೂ ಸುಮಧುರವಾಗಿರತ್ತೆ. ಇವತ್ತಿನ ದಿನಗಳನ್ನ ಇನ್ನಾವುದೋ ಕಾಲಘಟ್ಟದಲ್ಲಿ ಮೆಲುಕು ಹಾಕುವಾಗ ಅವು ತೀರ ಆಪ್ತವೆನ್ನಿಸುತ್ತವೆ. ಅವತ್ತಿನ ದಿನಗಳು ಹೀಗಿತ್ತು ಅನ್ನುವ ಭರದಲ್ಲಿ ಇವತ್ತಿನ ದಿನಗಳ ಕುರಿತು ಹಳಹಳಿಕೆ ಬೇಡ. ಅವತ್ತು ಚೆನ್ನಾಗಿತ್ತು, ಇವತ್ತೂ ಚೆನ್ನಾಗಿದೆ. ಇವತ್ತನ್ನು ಬದುಕಬೇಕಷ್ಟೇ:-))

ಪುಟ್ಟಿ, ಮತ್ತೆ ತಪ್ಪು ಮಾಡ್ತಿದೀಯ, D ಮತ್ತೆ d ಜಾಸ್ತಿ