Thursday, November 13, 2008

ಎಲ್ಲಿದೆ ನಮ್ಮನೆ?

[ಮಕ್ಕಳ ದಿನಕ್ಕೆಂದು ಒಂದು ಚಂದದ ಕಥೆ ಬರೆಯಬೇಕೆಂದು ಯೋಚಿಸುತ್ತಾ ಕೂತಿದ್ದೆ. ಹಳೆಯದೊಂದಿಷ್ಟು ಹಾಳೆಗಳನ್ನು ತಡಕುತ್ತಿದ್ದವಳಿಗೆ ಅವತ್ಯಾವತ್ತೋ ನಾನು ಬರೆದಿಟ್ಟಿದ್ದ ಈ ಕಥೆ ಸಿಕ್ಕಿತು. ಸುಮ್ಮನೆ ಓದಿಕೊಂಡೆ. ಓದಿ ಮುಗಿಸಿದವಳಿಗೆ ಮತ್ತೇನೂ ಬರೆಯುವ ಮನಸ್ಸಾಗಲಿಲ್ಲ, ಈ ಕಥೆಯೇ ಏನೆಲ್ಲಾ ಹೇಳುತ್ತಿದೆ ಎನ್ನಿಸಿತು, ಹಾಗೇ ಕಥೆಯನ್ನು ಬ್ಲಾಗಂಗಳಕ್ಕೆ ಕರೆತಂದೆ .]

ರಾತ್ರಿಯಾಗಸದಲ್ಲಿ ಹರವಿಕೊಂಡಿದ್ದ ಚುಕ್ಕಿಗಳನ್ನು ನೋಡುತ್ತಿದ್ದೆ ನಾನು. ಎಲ್ಲ ಚುಕ್ಕಿಗಳೂ ಒಂದರಿಂದಿನ್ನೊಂದು ದೂರವಾಗಿ ಛಿದ್ರ ಚಿದ್ರವಾಗಿ ಬಿದ್ದುಕೊಂಡಿದ್ದವು . ಹತ್ತಿರ ಹತ್ತಿರವಾಗಿ ಹೂಗುಚ್ಚದಂತೆ ಕಾಣುವ ಚುಕ್ಕಿಗಳೆಲ್ಲಾದರೂ ಇದ್ದಾವಾ? ಎಂದು ದೂರ ದೂರದವರೆಗೆ ಕಣ್ಣು ಹಾಯಿಸಿ ನೋಡಿದೆ.. ಊಹುಂ ಯಾಕೋ ಎಲ್ಲೂ ಕಾಣಲಿಲ್ಲ .. ಕಂಗಳು ಹನಿಗೂಡಿದವು ಚುಕ್ಕಿಗಳ ಕಥೆಯೂ ನಮ್ಮನೆಯ ಕಥೆಯಂತೆಯೇ ಆಗಿದೆಯ ಅನ್ನಿಸಿ. ದೂರದಲ್ಲಿ ಯಾವುದೋ ಒಂಟಿ ಚುಕ್ಕಿಯೊಂದು ನನ್ನಂತೆಯೇ ಬಿಕ್ಕಳಿಸುತ್ತಿದೆಯೇನೋ ಅನ್ನುವ ಹಾಗೆ ಕಂಡಿತು. ಇಂಥದೇ ರಾತ್ರಿಗಳಲ್ಲಿ ಅಪ್ಪ ನಂಗೆ ಆಗಸದಲ್ಲಿ ಒಟ್ಟೊಟ್ಟಿಗಿರುತ್ತಿದ್ದ ಚುಕ್ಕಿಗಳನ್ನು ತೋರಿಸಿ "ನೋಡು ಅದು ನಾನು,ಮಧ್ಯದಲ್ಲಿರೋದು ನೀನು, ಮತ್ತೆ ಅದರ ಪಕ್ಕದಲ್ಲಿರೋದು ಅಮ್ಮ" ಅನ್ನುತ್ತಿದ್ದ. ಅಮ್ಮ ಚಂದದೊಂದು ನಗೆ ನಗುತ್ತಿದ್ದಳು. ನಂಗೆ ಅದನ್ನು ಎಷ್ಟು ಕೇಳಿದರೂ ತೃಪ್ತಿಯಾಗುತ್ತಿರಲಿಲ್ಲ , ಮತ್ತೆ ಮತ್ತೆ ಪ್ರಶ್ನೆಗಳನ್ನು ಕೇಳುತ್ತಿದ್ದೆ, ದಿನಾಲೂ " ಅಪ್ಪ ಅಮ್ಮ ನಾನು" ಎಂಬ ಚುಕ್ಕಿಗಳನ್ನು ನೋಡಿ ಖುಶಿಪಡ್ತಿದ್ದೆ. ಪ್ರತಿಬಾರಿಯೂ ಅಮ್ಮ "ಎಷ್ಟು ಚಂದವಿದೆ ಈ ರಾತ್ರಿ ,ಇದು ಹೀಗೇ ಇರಲೇನೋ ಅನ್ನಿಸ್ತಿದೆ " ಅನ್ನುತ್ತಿದಳು. ಅವಾಗೆಲ್ಲ ನಂಗೂ ಹಾಗೇ ಅನ್ನಿಸ್ತಿತ್ತು .

ಆದರೆ ಈಗೆಲ್ಲ ನನಗೆ ರಾತ್ರಿ ಆಗಸದಲ್ಲಿ ಯಾರೂ ಚುಕ್ಕಿಗಳನ್ನು ತೋರಿಸುವುದೇ ಇಲ್ಲ. ಬೇಗ ಮಲಗು ಎಂದು ನನ್ನನ್ನು ಗದರಿಸುವ ಅಮ್ಮ ರಾತ್ರಿಯ ಕತ್ತಲಲ್ಲಿ ಬಿಕ್ಕಳಿಸುತ್ತಲೇ ಇರುತ್ತಾಳೆ. ಯಾಕೆಂದು ನನಗೆ ಹೇಗೆ ಅರ್ಥವಾಗಬೇಕು ? ಅದಕ್ಕೇ ಈಗೀಗ ನಾನು ರಾತ್ರಿಯನ್ನು ದ್ವೇಷಿಸುತ್ತೇನೆ . ಬೇಗ ರಾತ್ರಿ ಕಳೆದು ಬೆಳಗಾಗಲಿ ಎಂದುಕೊಳ್ಳುತ್ತೇನೆ , ಏಕೆಂದರೆ ಬೆಳಗಿನಲ್ಲಿ ಅಮ್ಮ ಬಿಕ್ಕಳಿಸುವುದಿಲ್ಲ .

"ಚುಕ್ಕೀ , ಚುಕ್ಕೀ... "

ಯೋಚನೆಗಳನ್ನು ಸುತ್ತ ಹರವಿಕೊಂಡು ನಿಂತವಳಿಗೆ ಅಮ್ಮ ಕೂಗಿದಾಗಲೇ ಈಚಿನ ಅರಿವಾದದ್ದು. ಅಮ್ಮನಿಗೆ ಗೊತ್ತಾಗಬಾರದೆಂದು ಕೊಳವಾಗಿದ್ದ ಕಣ್ಣುಗಳನ್ನು ಬೇಗ ಬೇಗನೆ ಒರೆಸಿಕೊಂಡೆ .

"ಚುಕ್ಕಿ ಕತ್ತಲಲ್ಲಿ ನಿಂತು ಏನು ಮಾಡ್ತಿದೀಯ? ಹೊತ್ತಾಯ್ತು ಬೆಳ್ಗೆ ಬೇಗ ಏಳಬೇಕು ಹೋಗಿ ಮಲ್ಕೋ " ಅಮ್ಮ ಅಂದಾಗ ಒಲ್ಲದ ಮನಸ್ಸಿಂದ ಒಳ ನಡೆದೆ .

ಮಲಗಿದರೂ ಕಂಗಳಿಗೆ ನಿದ್ದೆ ಬಾರದು. ಮತ್ತದೇ ಯೋಚನೆ. ಅಪ್ಪನಿಲ್ಲದ ಮನೆಯಲ್ಲಿ ಇರುವುದೇ ಬೇಜಾರು. ಈ ಅಮ್ಮನಿಗೆ ಹೇಗೆ ಹೇಳಲಿ ಅದನ್ನು. ಸಂಜೆ ಶಾಲೆಯಿಂದ ಬಂದಕೂಡಲೇ ಆಟವಾಡಿಸುವ ಅಪ್ಪ , ಅಮ್ಮನಿಗೆ ಗೊತ್ತಾಗದಂತೆ ರಾಶಿ ರಾಶಿ ಚಾಕಲೇಟುಗಳನ್ನು ಜೇಬಿಂದ ಹೊರತೆಗೆದು ಮುಚ್ಚಿ ಮುಚ್ಚಿ ಕೊಡುವ ಅಪ್ಪ, ನನ್ನೆಲ್ಲ ಮಾತುಗಳಿಗೆ ಕಿವಿಯಾಗುವ ಅಪ್ಪ, ಅಮ್ಮ ಬೈದಾಗಲೆಲ್ಲ ಮುದ್ದುಗರೆವ ಅಪ್ಪ,ಅವನಿಲ್ಲದ ಈ ಮನೆಯಲ್ಲಿ ನಾ ಇರುವುದಾದರೂ ಹೇಗೆ?

ಈಗೀಗ ದಿನಾ ಇಂಥದೇ ಯೋಚನೆಗಳಲ್ಲೇ ರಾತ್ರಿ ಕಳೆದು ಬೆಳಗಾಗುತ್ತದೆ .

***************

ಮೆಲ್ಲನೆ ಬೀರು ಬಾಗಿಲು ತೆಗೆದೆ. ಒಂದಿಷ್ಟು ಬ್ರಶ್ಶುಗಳು , ಬಣ್ಣದ ಟ್ಯುಬುಗಳು, ಪೇಂಟಿಂಗ್ ಹಾಳೆಗಳು .. ಅರ್ಧ ಚಿತ್ರಿಸಿದ ಚಿತ್ರಗಳು ಎಲ್ಲ ಕಂಡವು . ಅಲ್ಲೇ ಕೆಳಗೆಲ್ಲ ಹುಡುಕಿದೆ .. ಹಿಂದೊಮ್ಮೆ ನಮ್ಮನೆಯ ಗೋಡೆಗಳನ್ನೆಲ್ಲ ಅಲಂಕರಿಸಿದ್ದ ಚಿತ್ರಗಳಿಗಾಗಿ. ಊಹುಂ ಎಲ್ಲೂ ಕಾಣಲಿಲ್ಲ ಅವು. ಮತ್ತೆ ಕಂಗಳು ಹನಿಗೂಡಿದವು . ಮತ್ತೆ ಆ ಹಳೆಯ ದಿನಗಳ ನೆನಪಾಯ್ತು . ಅಪ್ಪನಿಗೆ ಪೇಂಟಿಂಗ್ ಅಂದರೆ ತುಂಬ ಪ್ರೀತಿ , ಅಮ್ಮನಿಗೆ ಅಪ್ಪನ ಪೇಂಟಿಂಗಳೆಂದರೆ ಪ್ರಾಣ. ಅಪ್ಪ ಚಿತ್ರಗಳಿಗೆ ಬಣ್ಣ ಹಚ್ಚುತ್ತಿದ್ದರೆ ಅಮ್ಮ ತನ್ಮಯಳಾಗಿ ಅದು ಮುಗಿಯುವವರೆಗೂ ಕೂತಿರುತ್ತಿದ್ದಳು. ನಾನು ಬಣ್ಣಗಳೊಡನೆ ಆಡುತ್ತಿದ್ದೆ .. ನಾನು ಚಿತ್ರ ಬರೆಯುತ್ತೇನೆ ಎಂದು ಹಠ ಮಾಡಿ ಮುಖ ಕೈ ಕಾಲಿಗೆಲ್ಲ ಬಣ್ಣ ಬಳಿದುಕೊಂಡು ಆಡುವುದರಲ್ಲಿ ಏನೋ ಖುಷಿ ಇತ್ತು . ಬಣ್ಣಗಳ ಲೋಕದಲ್ಲಿ ನಾವು ಮೂವರೂ ಕಳೆದುಹೋಗುತ್ತಿದ್ದೆವು .

ಆದರೆ ಈಗೆಲ್ಲ ಅಪ್ಪ ಚಿತ್ರ ಬರೆದು ಬಣ್ಣ ಬಳಿಯುವುದೇ ಇಲ್ಲ. ಅಪ್ಪ ಬರೆದಿದ್ದ ಚಿತ್ರಗಳೆಲ್ಲ ಎಲ್ಲಿ ಹೋದವೆಂದೇ ನನಗೆ ಗೊತ್ತಿಲ್ಲ. ಚಿತ್ರ ಬರೆ ಎಂದರೆ "ನಾನು ಇನ್ನು ಯಾವತ್ತೂ ಚಿತ್ರಗಳಿಗೆ ಬಣ್ಣ ಹಚ್ಚುವುದಿಲ್ಲ" ಎಂದ ಅಪ್ಪ . ಯಾಕೆ ಹಾಗೋ ? ನನಗೆ ಗೊತ್ತಿಲ್ಲ. ನಾನು ಹೀಗೆ ಹಳೆಯ ಅಪೂರ್ಣ ಚಿತ್ರಗಳನ್ನು, ಬಣ್ಣಗಳನ್ನು ಹರವಿಕೊಂಡಿದ್ದನ್ನು ನೋಡಿದರೆ, ಅಪ್ಪ ದಿನವಿಡೀ ಮಂಕಾಗುತ್ತಾನೆ . ಸರಿಯಾಗಿ ಮಾತೇ ಆಡನು. ಬಣ್ಣಗಳನ್ನು ನೋಡಿದರೆ ಅಪ್ಪನಿಗೆ ಅಷ್ಟು ಬೇಸರವಾ? ನನಗೂ ಈಗೀಗ ಬಣ್ಣಗಳೆಂದರೆ ದ್ವೇಷ .

ಕೈಗೆ ತಾಗಿದ್ದ ಚೂರು ಬಣ್ಣವನ್ನು ಬೇಗ ಬೇಗನೆ ಒರೆಸಿಕೊಂಡೆ, ನಾನು ಈ ಕೋಣೆಗೆ ಬಂದಿದ್ದೆನೆಂದು ಅಪ್ಪನಿಗೆ ಗೊತ್ತಾಗಬಾರದೆಂದು ಮೆಲ್ಲನೆ ಹಾಲಿಗೆ ಬಂದು ಸೋಫಾದ ಮೇಲೆ ಉರುಳಿಕೊಂಡೆ .

"ಚುಕ್ಕಿ, ಏಳು ರೆಡಿ ಆಗು , ನಾನು ಇದೀಗ ರೆಡಿ ಆಗಿ ಬಂದುಬಿಡ್ತೀನಿ . ಹೊರಗಡೆ ಸುತ್ತಾಡಿಕೊಂಡು ಊಟ ಮಾಡಿಕೊಂಡು ಬರೋಣ " ಅಪ್ಪ ಹೇಳಿದಾಗ ಮೆಲ್ಲನೆದ್ದು ಹೊರಟೆ.

ಅಮ್ಮನಿಲ್ಲದ ಈ ಮನೆಯಾದರೂ ಎಂತದು ? ಬೆಳ್ಬೆಳಿಗ್ಗೆ ನನ್ನನ್ನು ಮುದ್ದಿಸುತ್ತ ಎಬ್ಬಿಸಿ ಸ್ನಾನ ಮಾಡಿಸಿ , ರೆಡಿ ಮಾಡಿ ಪಪ್ಪಿ ಕೊಡುವ ಅಮ್ಮ, ನಲ್ಮೆ ಮಾತುಗಳಾಡುತ್ತಾ ತುತ್ತಿಡುವ ಅಮ್ಮ, ತೊಡೆಮೇಲೆ ಮಲಗಿಸಿಕೊಂಡು ಕಥೆ ಹೇಳುವ ಅಮ್ಮ, ಅಂಥ ಅಮ್ಮನಿಲ್ಲದ ಇಲ್ಲಿ ನಾನು ದಿನಗಳೆವುದಾದರೂ ಹೇಗೆ?

ವೀಕೆಂಡು ಕಳೆಯಲು ಅಪ್ಪನಿರುವ ಮನೆಗೆ ಬಂದಿದ್ದೇನೆ . ಮೊದಲಾದರೆ ನಮ್ಮನೆ ಅನ್ನುವುದೊಂದಿತ್ತು . ಈಗ ಅಪ್ಪನಿಗೊಂದು ಮನೆ, ಅಮ್ಮನಿಗೊಂದು ಮನೆ! ಆ ನಮ್ಮನೆಯೆಂಬುದು ಎಲ್ಲಿ ಹೋಯ್ತು ??

***************

ಅವತ್ತು ಮನೆಯೆದುರಿನ ರೆಸ್ತೆಯಾಚೆಗೆ ಇದ್ದ ಪಾರ್ಕಿನಲ್ಲಿ ಆಡುತ್ತಿದ್ದಾಗ ಪುಟಾಣಿ ಹುಡುಗಿಯೊಬ್ಬಳ ಕೈ ಹಿಡಕೊಂಡು ಅವಳ ಆಚೆ ಈಚೆ ಅವಳ ಅಪ್ಪ ಅಮ್ಮ
ಹೋಗುತ್ತಿರುವುದು ನೋಡಿದೆ . ಹಿಂದೊಮ್ಮೆ ನಾನೂ ಹೀಗೆ ಇದ್ದ ನೆನಪಾಯ್ತು . ಈಗೆಲ್ಲಿ ಅದು? ಎಷ್ಟು ಚಂದನೆಯ ಪುಟ್ಟ ಸಂಸಾರ ನಮ್ಮದಾಗಿತ್ತು . ಹೀಗಾಗಿದ್ದು ಯಾಕೆ? ಎಲ್ಲ ಚೆನ್ನಾಗಿರುವಾಗ ಒಂದು ದಿನ ಅಪ್ಪ ಅಮ್ಮ ಒಬ್ಬರ ಮೇಲೊಬ್ಬರು ಮುನಿಸಿಕೊಂಡಿದ್ದಾದರೂ ಹೇಗೆ? ಅಮ್ಮ ಅಳುತ್ತಿದ್ದಳು , ಅಪ್ಪ ಮಂಕಾಗಿದ್ದ . ಹಾಗೆಯೇ ಇನ್ನೊಂದು ದಿನ ಅಮ್ಮ ಹೊರಟೆ ಬಿಟ್ಟಳು ನನ್ನ ಕೈಹಿಡಕೊಂಡು , ನಮ್ಮನೆಯನ್ನು ಬಿಟ್ಟು. ಮತ್ತೆ ದಿನಾಲೂ ಅಪ್ಪ ಅಮ್ಮ ಅದೇನೇನೋ ಮಾತಾಡುತ್ತಿದ್ದರು. ಆದರೆ ಮತ್ತೆಂದೂ ನಾವೆಲ್ಲ ಒಟ್ಟಾಗಲೇ ಇಲ್ಲ.

***************

ಮೊನ್ನೆ ಅಮ್ಮ ಯಾರೊಡನೆಯೋ ಹೇಳುತ್ತಿದ್ದಳು "ನನ್ನ ಬದುಕನ್ನು ನಾನೇ ರೂಪಿಸಿಕೊಳ್ಳುವೆ, ನನ್ನ ಮಗಳಿಗೆ ಚಂದದ ನಾಳೆ ಕಟ್ಟಿಕೊಡುವ ಕನಸೂ ನನ್ನದೇ" ಇನ್ನೂ ಏನೇನೋ ...

ಅಪ್ಪ ಯಾರಲ್ಲಿಯೋ ಹೇಳುತ್ತಿದ್ದ " ಯಾರೂ ಇಲ್ಲದೆಯೇ ಬದುಕಲೇಬೇಕಾಗಿದೆ .ಭಾವನೆಗಳೆಲ್ಲ ಎಂದೋ ಸತ್ತಿವೆ , ಮಗಳಿಗೊಂದು ಚಂದದ ನಾಳೆಯನ್ನು ಚಿತ್ರಿಸುವುದೇ ಈಗ ಉಳಿದಿರುವ ಒಂದೇ ಒಂದು ಕನಸು" ಇನ್ನೂ ಏನೇನೋ...

ಎಲ್ಲವನ್ನೂ ಅವರವರೆ ನಿರ್ಧಾರ ಮಾಡಿದಂತಿದೆ .. ನನ್ನದು ? ಏನಿದೆ ? ಚಂದದ ನಾಳಿನ ಭರವಸೆಯಷ್ಟು ಸಾಕೆ ನನಗೆ? ನಮ್ಮದೇ ಎಂಬ ಪುಟ್ಟ ಸಂಸಾರ, ಪುಟ್ಟು ಪುಟ್ಟು ಪ್ರೀತಿ , ನಗು, ಚಿಕ್ಕ ಚಿಕ್ಕ ಸಂತಸಗಳು ಎಲ್ಲ ಇವತ್ತಿಗೆ ಬೇಡವೇ ? ನಂಗೆ ಬರೀ ಅಪ್ಪ, ಬರೀ ಅಮ್ಮ ಬೇಡ.. ಅಪ್ಪ-ಅಮ್ಮ ಬೇಕು ಅನ್ನುವುದನ್ನು ಹೇಗಾದರೂ ಇವರಿಗೆ ನಾನು ಅರಿಕೆ ಮಾಡಿಕೊಡಲಿ?

***************

ಕಾರು ಗಕ್ಕನೆ ನಿಂತಿತು. ಪರಿಚಯದವರಾರನ್ನೋ ನೋಡಿ ಅಪ್ಪ ಕಾರು ನಿಲ್ಲಿಸಿದ. ಹೊರಗೆ ನೋಡಿದೆ ನಾವು ಮೊದಲಿದ್ದ ಮನೆಯ ಎದುರೇ ಕಾರು ನಿಂತಿದ್ದು . ಕಿಟಕಿಯಾಚೆ ನೋಡಿದೆ, ಕತ್ತನ್ನು ಇನ್ನೂ ಹೊರಚಾಚಿ ನೋಡಿದೆ, ನಾನು ಅಂದೊಮ್ಮೆ ಬಿಳಿಯ ಹಾಳೆಯ ಮೇಲೆ ಕುಂಚವನ್ನು ಬಣ್ಣದಲ್ಲದ್ದಿ ಮುದ್ದಾದ ಅಕ್ಷರದಲ್ಲಿ "ನಮ್ಮನೆ" ಎಂದು ಬರೆದು ಬಾಗಿಲಿಗೆ ಅಂಟಿಸಿದ್ದು ಕಾಣಿಸುತ್ತದಾ ಎಂದು. ಅದು ಅಲ್ಲಿ ಇದ್ದ ಹಾಗೆ ಕಾಣಲಿಲ್ಲ. ಅಪ್ಪ ಅದ್ಯಾರಿಗೋ ಹೇಳುತ್ತಿದ್ದ "ಹಳೆಯ ನೆನಪುಗಳೊಟ್ಟಿಗೆ ಈ ಮನೆಯಲ್ಲಿರುವುದು ಕಷ್ಟವಾಯ್ತು , ಅದ್ಕೆ ಕೊಟ್ಟುಬಿಟ್ಟೆ "..

ಎಲ್ಲ ಮುಗಿದಮೇಲೆ ಎಲ್ಲೂ ಇಲ್ಲದ ನಮ್ಮನೆಯನ್ನು ಹುಡುಕುವುದು ವ್ಯರ್ಥ ಎಂದು ಮನಸು ಕೂಗುತ್ತಿದ್ದರೂ ಕಣ್ಣಂಚಿನಿಂದ ಹನಿ ಜಾರುವುದನ್ನು ನಾ ತಡೆಯುವುದಾದರೂ ಹೇಗೆ?