Tuesday, January 15, 2008

ನೀಲು ಮತ್ತು ಮುತ್ತಿನ ಉಂಗುರ

ಕಿಟಕಿಯಿಂದ ಕಳ್ಳರಂತೆ ಕದ್ದುಮುಚ್ಚಿ ಒಳಬಂದ ಸೂರ್ಯನ ಕಿರಣಗಳು ಮುಚ್ಚಿದ್ದ ಕಣ್ಣೆವೆಗಳ ಬಿದ್ದಾಗ ಫಕ್ ಅಂತ ಎಚ್ಚರವಾಯಿತು. ಥೋ ಇಷ್ಟು ಬೇಗ ಬೆಳಗಾಯ್ತಾ ಅಂತ ಮತ್ತೆ ಮಗ್ಗಲು ಬದಲಿಸುತ್ತಾ ಮುದುಡಿಕೊಳ್ಳುತ್ತಿದ್ದಾಗ ಫಳ್ ಫಳ್ ಅಂತ ರೂಮಿನ ಟ್ಯೂಬ್ ಲೈಟ್ ಹತ್ತಿಕೊಂಡಿತು. ಜೊತೆಗೆ ಮ್ಯೂಸಿಕ್ ಪ್ಲೇಯರ್ ಕೂಡ ತಂತಾನೇ ಹಾಡಲು ಶುರುವಾಗಿ

"ತುಮ್ ಕೋ ದೇಖಾ ತೋ ಖಯಾಲ್ ಆಯಾ.. ಜಿಂದಗಿ ಧೂಪ್ ತುಮ್ ಘನಾ ಸಾಯಾ ..."

ಜಗಜಿತ್ ಸಿಂಗ್ ರ ಕಂಠದಿಂದ ಘಜಲ್ ನ ಸಾಲುಗಳು ಮೃದುಹೂವಿನ ದಳಗಳ ಸ್ಪರ್ಶದಂತೆ ನನ್ನ ಕಿವಿಗೆ ಸೋಕಿ ಎದ್ದು ಕುಳಿತೆ.ಆಹಾ ಬೆಳ್ಬೆಳಿಗ್ಗೆ ಘಜಲ್ ಕೇಳಿ ಎಷ್ಟು ಖುಷಿಯಾಯ್ತು .ರಾತ್ರಿ ಘಜಲ್ ಕೇಳುತ್ತ ಮಲಗಿದ್ದೆ. ಬಹುಶಃ ಮಧ್ಯ ಕರೆಂಟ್ ಹೋಗಿದೆ. ನಂಗೆ ಅದಕ್ಕೆ ಮೊದಲೇ ನಿದ್ದೆ ಬಂದಿತ್ತಿರಬಹುದು . ಬಹುಶಃ ರಾತ್ರಿ ಹೋದ ಕರೆಂಟ್ ಈಗಲೇ ಬಂದಿದ್ದು ಇರಬಹುದು.

ಘಜಲ್ ನ ಸಾಲುಗಳನ್ನು ಮತ್ತೆ ಮತ್ತೆ ಗುನುಗುತ್ತ ಎದ್ದು ಸ್ನಾನ ಮುಗಿಸಿ ಅಮ್ಮನ ಬಿಸಿ ಬಿಸಿ ಕಾಫಿಗಾಗಿ ಕಾಯುತ್ತ, ಭಾನುವಾರ ಇವತ್ತಿಡಿ ಏನೇನು ಮಾಡಬೇಕೆಂದು ಆಲೋಚಿಸಿದೆ . ಅಮ್ಮ ಅವತ್ತಿಂದ ಗೊಣಗುತ್ತಿದ್ದಳು. "ನಿನ್ನ ರೂಮಿನಲ್ಲಿ ಸಾಮಾನುಗಳು ಜಾಸ್ತಿ ಆಗಿವೆ . ಅದೆಷ್ಟು ಪುಸ್ತಕಗಳೋ ಏನೋ. ಸ್ವಲ್ಪ ನೀಟ್ ಆಗಿ ಇಡು ಎಲ್ಲವನ್ನು. ಯಾವುದು ಬೇಕು ಯಾವುದು ಬೇಡ ಅಂತ ನೋಡಿ, ಬೇಡವಾದ್ದನ್ನೆಲ್ಲ ಆಚೆಗೆ ಹಾಕು ನೋಡೋಣ" ಅಂತ.

ನಂಗೂ ಹೌದೆನಿಸಿತು . ಉಪಯೋಗಿಸದೇ ಇಟ್ಟ ಅದೆಷ್ಟೋ ಸಮಾನುಗಳಿಗೆಲ್ಲ ಎಷ್ಟು ಧೂಳು ಹಿಡಿದಿದೆಯೋ ಏನೋ? ಅದಕ್ಕೇ ಇತ್ತೀಚಿಗೆ ನನ್ನ ತಂಬೂರ ಪಿಯಾನೋ ಮೇಲೆಲ್ಲ ಎಷ್ಟು ಒರೆಸಿದರೂ ಬರೀ ಧೂಳು. ಎಲ್ಲ ಕ್ಲೀನ್ ಮಾಡೋಣ ಅಂದುಕೊಂಡೆ .

ಕಾಫಿ ಆರುವ ಮುನ್ನ ಕುಡಿದು, ರೂಮಿನೊಳಗೆ ಕಾಲಿಟ್ಟೆ. ಸ್ಟೂಲ್ ಹತ್ತಿ ಮೇಲಿದ್ದ ಪುಸ್ತಕಗಳನ್ನೆಲ್ಲ ಒಂದೊಂದಾಗಿ ನೋಡುತ್ತ ಧೂಳು ಒರೆಸಿ ಜೋಡಿಸಿಟ್ಟೆ. ತುದಿಯಲ್ಲಿ ಒಂದು ಕಪ್ಪುಬ್ಯಾಗ್ ಇತ್ತು. ಏನಿದೆಯೋ ಇದರಲ್ಲಿ ಅಂತ ಬ್ಯಾಗ್ ನ ಕೆಳಗಿಳಿಸಿ ಸ್ಟೂಲ್ ನಿಂದ ಕೆಳಗಿಳಿದು ನೆಲದ ಮೇಲೆ ಕುಳಿತೆ. ಬ್ಯಾಗಿನ ಒಳಗೆ ನೋಡಿದೆ. ಒಂದೆರಡು ಮಡಿಚಿಟ್ಟ ಕಾಗದಗಳಿತ್ತು. ಬಿಡಿಸಿ ನೋಡಿದೆ. ಕೆಂಪು ಹಳದಿ ನೀಲಿ ಬಣ್ಣಗಳನ್ನು ತುಂಬಿದ ರಂಗೋಲಿ ಇತ್ತು ಕಾಗದದಲ್ಲಿ. ಇನ್ನೊಂದು ಕಾಗದ ಬಿಡಿಸಿದೆ ಅದರಲ್ಲಿ ಪದ್ಯವೊಂದಿತ್ತು
"ಚಂದಿರನೇತಕೆ ಓಡುವನಮ್ಮ
ಮೋಡಕೆ ಹೆದರಿಹನೆ ?.."
ಪೂರ್ತಿ ಪದ್ಯವನ್ನೋದಿದೆ. ಎಷ್ಟು ಮುದ್ದಾದ ಪದ್ಯ. ನಂಗೆ ತುಂಬ ಇಷ್ಟವಾದ ಪದ್ಯ. ಆ ಚೀಲದಲ್ಲಿ ಬಣ್ಣದ ಪೆನ್ಸಿಲ್ ಗಳು,ಬಳೆ ಮತ್ತೆ ಇನ್ನೂ ಏನೇನೋ ಇತ್ತು. ನನ್ನ ಬಾಲ್ಯದ ಕುರುಹುಗಳನ್ನು ನೋಡಿ ನಗು ಬಂತು. ಮತ್ತೆ ಅಲ್ಲೇ ಒಂದು ಪುಟ್ಟ ಡಬ್ಬಿಯಿತ್ತು. ಹೌದು ಅದೇ ಪುಟ್ಟ ಡಬ್ಬಿ. ನಂಗೆ ಬಲು ಪರಿಚಿತವಾದ ಡಬ್ಬಿ. ಮುಚ್ಚಳವನ್ನು ಮೆಲ್ಲನೆ ತೆರೆದೆ. ಒಳಗೆ ಪುಟ್ಟದಾದ ಒಂದು ಮುತ್ತಿನ ಉಂಗುರವಿತ್ತು. ಬಂಗಾರದ ಬಣ್ಣವಿದ್ದ ಉಂಗುರದ ಬಣ್ಣ ಮಾಸಿ ಸ್ವಲ್ಪ ಬೆಳ್ಳಗಾದಂತಿತ್ತು. ಉಂಗುರದ ಮೇಲ್ಭಾಗದಲ್ಲಿ ಒಂದೇ ಒಂದು ಗೋಲಾಕಾರದ ಮುತ್ತು. ಉಂಗುರದ ಕೆಳಭಾಗಕ್ಕೆಲ್ಲ ದಾರ ಸುತ್ತಿಕೊಂಡಿತ್ತು.ಉಂಗುರವನ್ನೆತ್ತಿ ಮೆಲ್ಲನೆ ಸವರಿದೆ. ಮತ್ತೆ ಆ ಹಳೆಯ ನೆನಪಿನ ಗಾಳಿ ನನ್ನ ಸುತ್ತ ಬೀಸತೊಡಗಿತು.

ನಾನು ಚಿಕ್ಕವಳಾಗಿದ್ದಾಗ ನಮ್ಮ ಓಣಿಯಲ್ಲಿ ನನ್ನ ಓರಗೆಯ ಹುಡುಗಿಯರ್ಯಾರೂ ಇರಲಿಲ್ಲ. ಅದಕ್ಕೆ ನಾನು ಆಚೆ ಮನೆಯ ಶಂಕ್ರು ಮತ್ತು ಅವನ ಸ್ನೇಹಿತರು ಆಡುವಲ್ಲಿಗೆ ಹೋಗಿ "ನನ್ನನ್ನೂ ಆಟಕ್ಕೆ ಸೇರಿಸಿಕೊಳ್ರೋ" ಅಂತ ಗೋಗರೆಯುತ್ತಿದ್ದೆ. ಆದರೆ ಒಂದು ದಿನವೂ ಅವರು ನನ್ನನ್ನು ಆಟಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ. ಏನಾದರೂ ಹೇಳಿ ಹೆದರಿಸಿ ನನ್ನನ್ನು ಓಡಿಸುವುದರಲ್ಲಿ ಅವರಿಗದೇನೋ ಮಜಾ. ಅವತ್ತೂ ಹಾಗೇ ಆಯಿತು. ಆ ಶಂಕ್ರು ಮತ್ತವನ ಸ್ನೇಹಿತರೆಲ್ಲ ಕೀಟಲೆ ಮಾಡುತ್ತಿದ್ದರೂ ನಾನು ಕೇಳದೇ "ಯಾಕ್ರೋ ನಾನು ಆಟಕ್ಕೆ ಬೇಡ" ಅಂದರೆ ಅವರೆಲ್ಲ "ನೀನು ಕಪ್ಪಗಿದ್ದೀಯಲ್ಲ ಅದಕ್ಕೆ. ನೋಡು ನಮ್ಮನ್ನೆಲ್ಲಾ . ಯಾರೂ ಕಪ್ಪಗಿಲ್ಲ . ನೀನೋಬ್ಳೆ ಕಪ್ಪು. ಅದಕ್ಕೆ ಆಟಕ್ಕೆ ಬೇಡ ಅಂದಿದ್ದು " ಅಂದುಬಿಟ್ರು .

ನಂಗೆ ಆಟಕ್ಕೆ ಸೇರಿಸಿಕೊಳ್ಳದಿರೋ ಬೇಸರ ಒಂದುಕಡೆಯಾದರೆ, ಕಪ್ಪಗಿದ್ದಿಯ ಅಂತ ಅವಮಾನಿಸಿದರಲ್ಲ ಆ ಬೇಸರ ಇನ್ನೊಂದು ಕಡೆ. ಅಳು ಒತ್ತಿಕೊಂಡು ಬಂದಿತ್ತು. ಅಲ್ಲೇ ರಸ್ತೆ ಬದಿಯಲ್ಲಿ ಅಳುತ್ತ ಕಣ್ಣೊರೆಸಿಕೊಳ್ಳುತ್ತ ಮನೆ ಕಡೆಗೆ ಹೊರಟಿದ್ದೆ . "ಯಾಕೆ ಪುಟ್ಟಿ ಅಳುತ್ತಿದ್ದೀಯ ?" ಯಾರೋ ಹೆಗಲ ಮೇಲೆ
ಕೈಯಿಟ್ಟು ಕೇಳಿದಾಗ ಕತ್ತು ಹೊರಳಿಸಿ ಹಿಂದೆ ನೋಡಿದೆ. ನೀಲಿ ಬಣ್ಣದ ಹಸಿರು ಅಂಚಿದ್ದ ಉದ್ದ ಲಂಗ ತೊಟ್ಟಿದ್ದ ನನಗಿಂತ ಸುಮಾರು 3-4 ವರ್ಷಗಳಷ್ಟು ದೊಡ್ಡವಳಾದ ಹುಡುಗಿಯೊಬ್ಬಳು ನಿಂತಿದ್ದಳು. ಕೆನೆಹಾಲಿನಂತೆ ಬೆಳ್ಳಗಿದ್ದಳು ಅವಳು. ಬಿಸಿಲಿಗೆ ಕೆಂಪು ಕೆಂಪಾಗಿದ್ದ ಅವಳ ಮುಖದಲ್ಲಿ ಅಕ್ಕನ ಅಕ್ಕರೆಯಿತ್ತು .

"ನಿನ್ನೇ ಕೇಳಿದ್ದು . ಯಾಕೆ ಅಳ್ತಿದೀಯಾ ?" ಅವಳು ಹಾಗಂದಿದ್ದೆ ನಂಗೆ ಮತ್ತೆ ಅಳು ಒತ್ತಿ ಬಂತು. ನಡೆದಿದ್ದೆಲ್ಲವನ್ನು ಅವಳಿಗೆ ಹೇಳಿಬಿಟ್ಟೆ . ಒಂದು ಕ್ಷಣ ಅವಳೂ ಈಗ ನಕ್ಕು ಬಿಟ್ರೆ,ಕಪ್ಪು ಹುಡುಗಿ ಅಂತ ಸರಿಯಾಗೇ ಹೇಳಿದ್ದಾರೆ ಅಂದು ಬಿಟ್ರೆ ಅನ್ನಿಸಿತು. ಆದ್ರೆ ಹಾಗೇನೂ ಆಗಲಿಲ್ಲ . ಎಲ್ಲ ಕೇಳಿದ್ದೇ ಅವಳೆಂದಳು "ಅಯ್ಯೋ ಪುಟ್ಟಿ ಆ ಪುಂಡ ಹುಡುಗರ ಮಾತಿಗೆಲ್ಲ ನಿನ್ಯಾಕೆ ಅಳ್ತಿಯ ? ಚಂದದ ಚಿನ್ನಾರಿ ಥರ ಇದ್ದಿಯಾ ನೀನು. ಇನ್ಮೇಲಿಂದ ಅವರ ಜೊತೆ ನೀ ಆಡುವುದಕ್ಕೆ ಹೋಗೋದೇ ಬೇಡ. ನಾನು ನೀನು ಫ್ರೆಂಡ್ಸ್ .ನಾವಿಬ್ರೂ ಜೊತೆಯಾಗಿ ಆಡೋಣ ಆಯ್ತಾ ? ನೋಡು ಆ ಮನೆ ಕಾಣ್ತಿದೆಯಲ್ಲ ಅಲ್ಲೇ ನಾನಿರೋದು .. ನಿನ್ನೆ ಅಷ್ಟೆ ಬಂದಿದ್ದು ಇಲ್ಲಿಗೆ" ಅಂದಳು .

ಅರೆ ನಮ್ಮನೆ ಎದ್ರಿಗಿರೋ ಮನೆ. ಮನೆ ಮುಂದೇನೆ ನನ್ನ ಫ್ರೆಂಡ್ ಮನೆ. ತುಂಬ ಖುಷಿಯಾಯ್ತು ನಂಗೆ. "ನಿನ್ ಹೆಸ್ರೇನೆ ?" ಅಂದೆ.
ಅದಕ್ಕವಳು "ನೀಲು " ಅಂದಳು .ಆಹಾ ಎಷ್ಟು ಚಂದದ ಹೆಸರು ಅಂದುಕೊಂಡೆ.ಅವತ್ತೇ ಕೊನೆ ಮತ್ತೆಂದೂ ನಾನು ಆ ಶಂಕ್ರು ಮತ್ತವನ ಸ್ನೇಹಿತರ ಜೊತೆ ಆಡುವುದಕ್ಕೆ ಹೋಗಲಿಲ್ಲ .

ನೀಲು ನನ್ನ ಕೈ ಹಿಡಿದು ನನ್ನನ್ನು ಅವಳ ಮನೆಗೆ ಕರೆದೊಯ್ದಳು . ಬಾಗಿಲಲ್ಲೇ ನಿಂತಿದ್ದ ಅವಳಜ್ಜ ನಮ್ಮನ್ನು ನೋಡಿದ್ದೇ "ಯಾರೇ ಬೆಳ್ಳಕ್ಕಿ ನಿನ್ನ ಜೊತೆಗಿರುವ ಆ ಪುಟಾಣಿ ಗುಬ್ಬಚ್ಚಿ?" ಅಂದರು. ಹೌದು ನೀಲುವಿನ ಅಜ್ಜ ಅವಳನ್ನು ಕರೆಯುತ್ತಿದ್ದಿದ್ದೆ ಹಾಗೆ ಬೆಳ್ಳಕ್ಕಿ ಅಂತ. ನೀಲು "ಇವಳು ಎದುರು ಮನೆ ಪುಟ್ಟಿ ಇವತ್ತಿಂದ ನನ್ನ ಫ್ರೆಂಡ್ ಅಂದಳು". ನಂಗೆ ನೀಲು ಮನೆಯವರೆಲ್ಲ ತುಂಬ ಇಷ್ಟವಾಗಿಬಿಟ್ಟಿದ್ದರು . ಅದರಲ್ಲೂ ಅಜ್ಜ ಅಂತೂ ನನ್ನನ್ನು ಗುಬ್ಬಚ್ಚಿ ಅಂತಾನೆ ಕರೆಯುತ್ತಿದ್ದ್ದರು . ಹಾಗೆ ಕರೆದಾಗಲೆಲ್ಲ ನಂಗೆ ತುಂಬಾ ಖುಷಿಯಾಗುತ್ತಿತ್ತು . ಮುಖ್ಯವಾಗಿ ನನ್ನನ್ನು ಯಾರೂ ಕಪ್ಪು ಹುಡುಗಿ ಅಂತ ಹಂಗಿಸುವವರೇ ಇರಲಿಲ್ಲ. ಕಪ್ಪು ಹುಡುಗಿಯ ಒಳಗೂ ಒಂದು ಚಂದದ ಮನಸ್ಸಿದೆ ಅನ್ನುವುದನ್ನು ನೀಲು ಕಂಡಿದ್ದಳು .

ನೀಲು ನಂಗೆ ಸಿಕ್ಕಾಗಿನಿಂದ ನನ್ನ ಪ್ರಪಂಚವೇ ಬದಲಾದ ಹಾಗಾಗಿತ್ತು . ಚುಕ್ಕಿ ಆಟ ಕವಡೆ ಆಟದಿಂದ ಹಿಡಿದು ಚಿನ್ನಿ ದಾಂಡು ಗೋಲಿ ಆಟವನ್ನೂ ಸಹ ಅವಳೇ ನಂಗೆ ಹೇಳಿ ಕೊಟ್ಟಿದ್ದು. ಮರ ಹತ್ತಿ ಹಣ್ಣು ಕೀಳೋದು , ಹಿಂದಿನ ಓಣಿ ಆಚೆ ಇರೋ ಬಂಡೆ ಮೇಲೆ ಕೂತು ಜೋರಾಗಿ ಕೂಗೋದು, ಹಕ್ಕಿ ಪುಕ್ಕಗಳನ್ನೆಲ್ಲ ಹೆಕ್ಕಿ ತಂದು ಪುಸ್ತಕದಲ್ಲಿಡುವುದು , ಪುಟ್ಟ ಕರುಗಳ ಹಿಂದೆ ನಾವೂ ಓಡುವುದು , ರಾತ್ರಿ ಆಕಾಶದಲ್ಲಿ ಚುಕ್ಕೆ ಎಣಿಸುವುದು ಆಹಾ! ಇಷ್ಟೆಲ್ಲಾ ಖುಷಿ ಕೊಡೋ ಸಂಗತಿಗಳು ಇವೆ ಅಂತಾನೆ ನಂಗೆ ಗೊತ್ತಿರಲಿಲ್ಲ .

ನೀಲು ಎಷ್ಟು ತುಂಟಿಯೋ ಅಷ್ಟೆಜಾಣೆ. ಹಾಡುವುದೆಂದರೆ ಅವಳಿಗೆ ಪ್ರಾಣ. ದಿನಾ ಸಂಜೆ ದೇವರಿಗೆ ದೀಪ ಹಚ್ಚುವ ಹೊತ್ತಿನಲ್ಲಿ ಅವಳು ದೇವರ ಮುಂದೆ ಕುಳಿತು ಹೆಚ್ಚೂ ಕಮ್ಮಿ ಒಂದು ಗಂಟೆ ಹಾಡುತ್ತಿದ್ದಳು . ಅವಳೊಟ್ಟಿಗೆ ಕುಳಿತು ನಾನೂ ಹಾಡುವುದನ್ನು ಕಲಿತೆ . ನಂಗೂ ಹಾಡಲು ಬರುತ್ತದೆಂದು ನಂಗೆ ಗೊತ್ತಾಗಿದ್ದೆ ಅವಾಗ . ನಂಗೆ ಸ್ವರ ರಾಗಗಳ ಹುಚ್ಚು ಹಿಡಿಸಿದ್ದೇ ಅವಳು, ನನ್ನ ನೀಲು.

ಅವತ್ತು ಭಾನುವಾರ ನೀಲು ಮತ್ತು ನನ್ನನ್ನು ಅಜ್ಜ ಸಮುದ್ರ ತೀರಕ್ಕೆ ಕರೆದುಕೊಂಡು ಹೊರಟಿದ್ದರು. ನಮಗಿಬ್ಬರಿಗೂ ಖುಷಿಯೋ ಖುಷಿ. ಆ ಕಡಲಿನ ತೀರದಲ್ಲಿ ಮರಳಿನ ರಾಶಿ ಮಾಡಿ ಇಬ್ಬರೂ ಒಂದೊಂದು ಕಡೆಯಿಂದ ಸುರಂಗ ತೋಡಿ ಒಬ್ಬರ ಕೈ ಒಬ್ಬರಿಗೆ ತಾಗಿದಾಗ ಅದೆಷ್ಟು ಮೋಜಿತ್ತು . ಅಲೆಗಳ ಹಿಂದೆಯೇ ಓಡುತ್ತಿದ ಪುಟ್ಟ ಪುಟ್ಟ ಹಕ್ಕಿಗಳ ಹಿಂದೆ ನಾವೂ ಪುಟ್ಟ ಹಕ್ಕಿಗಳಂತೆ ಎರಡೂ ಕೈಗಳನ್ನೂ ರೆಕ್ಕೆಯಂತೆ ಬಿಚ್ಚಿ ಓಡುತ್ತಿದ್ದೆವಲ್ಲ ಆಹಾ! ಎಂತ ಸೊಗಸಿತ್ತು . ಅವತ್ತಿಂದ ಪ್ರತಿ ಭಾನುವಾರ ತಪ್ಪದೆ ನಾನು ನೀಲು ಅಜ್ಜನೊಡನೆ ಬಂದೇ ಬರುತ್ತಿದ್ದೆವು ಆ ಸಮುದ್ರ ತೀರಕ್ಕೆ.

"ನೀಲು ನೀ ಎಷ್ಟು ಚಂದ ಹಾಡ್ತೀಯ , ನಂಗೆ ನಿನ್ನ ಹಾಗೆ ಹಾಡಲು ಬರೋದೇ ಇಲ್ಲ "ನಾನು ಅಂದರೆ , ಅವಳೆನ್ನುತ್ತಿದ್ದಳು "ಹುಚ್ಚಿ ಹಾಗೇಕೆ ಅಂತೀಯ ಪುಟ್ಟಿ ? ನೀನು ನನಗಿಂತ ಚೆನ್ನಾಗಿ ಹಾಡ್ತೀಯ ಗೊತ್ತ ? ನೋಡ್ತಾ ಇರು ಒಂದಿನ ನಾನು ನೀನು ಹಾಡ್ತಾ ಹಾಡ್ತಾ ಏನೋ ಸಾಧಿಸ್ತೀವಿ ". ನಂಗೆ ಅಷ್ಟೇನೂ ಅರ್ಥ ಆಗಿರಲಿಲ್ಲ ಅವಾಗ .ನಾನು ಚೆನ್ನಾಗಿ ಹಾಡ್ತೀನಿ ಅಂದಿದ್ದಷ್ಟೇ ಅರ್ಥ ಆಗಿತ್ತು .

ನೀಲು ಯಾವಾಗಲೂ ಹೇಳುತ್ತಿದ್ದಳು ಅವಳ ಚಿಕ್ಕಮ್ಮನ ಊರಿನಲ್ಲಿ ನಡೆಯೋ ಜಾತ್ರೆ ಬಗ್ಗೆ. ಯಾವ ಉರೋ ನಂಗೆ ಸರ್ಯಾಗಿ ನೆನಪಿಲ್ಲ ಈಗ .ಅವಳು ಜಾತ್ರೆಯಲ್ಲಿ ನೋಡಿದ್ದನ್ನ ಕಣ್ಣು ಕಟ್ಟುವ ಹಾಗೆ ಹೇಳುತ್ತಿದ್ದಳು. ಆ ವರ್ಷ ಅವಳು ಜತ್ರೆಗೆಂದು 2 ದಿನಕ್ಕೆ ಹೊರಟು ನಿಂತಾಗ ನಂಗೆ ಅಳು ಬಂದಿತ್ತು. "ನೀಲು ನನ್ನ ಬಿಟ್ಟು ಹೋಗ್ತೀಯಾ . ನಂಗೆ ಬೇಜಾರು ನೀನಿಲ್ದಿದ್ರೆ " ಕಣ್ಣ್ತುಂಬಿಕೊಂಡು ನಾನು ಹೇಳುತ್ತಿದ್ದರೆ ಅವಳು ಬೆನ್ನಿಗೊಂದು ಗುದ್ದು ಕೊಟ್ಟು ಹೇಳಿದ್ದಳು "ಪುಟ್ಟಿ ನಿನಗೆ ಜಾತ್ರೆಯಿಂದ ಏನೇನೋ ತರ್ತೀನಿ . ಹಿಂಗೆಲ್ಲ ಅಳ್ತಾರ ಸುಮ್ನಿರು ".

ನೀಲು ಇಲ್ಲದೆ 2 ದಿನ ಕಳೆದಿದ್ದು ನಂಗೆ ತುಂಬ ಕಷ್ಟವೆನಿಸಿತು . 2 ದಿನ ಕಳೆದು ನೀಲು ಬಂದಾಗ ಮತ್ತ್ಯಾವತ್ತೂ ನನ್ನ ಹೀಗೆ ಬಿಟ್ಟು ಹೋಗಬಾರದೆಂದು ಅವಳ ಕೈ ಗಟ್ಟಿಯಾಗಿ ಹಿಡಿದಿದ್ದೆ . ನಗುತ್ತ ಅವಳು ನನಗೆಂದು ತಂದಿದ್ದ ಎಲ್ಲವನ್ನೂ ನನ್ನ ಮುಂದಿಟ್ಟಿದ್ದಳು . ಅವುಗಳಲ್ಲಿ ನಂಗೆ ತುಂಬ ಇಷ್ಟವಾಗಿದ್ದು ಆ ಮುತ್ತಿನ ಉಂಗುರ . "ಆಹಾ ಎಷ್ಟು ಚಂದ ಇದ್ಯಲ್ಲೇ !! ಇದೂ ನಂಗಾ ?"
"ಹೌದೇ . ಅದೂ ನಿಂಗೇ. ಇಲ್ನೋಡು ನನ್ನ ಕೈ ಬೆರಳಲ್ಲೂ ಅಂತದ್ದೇ ಉಂಗುರ. ಇಬ್ಬರಿಗೂ ಒಂದೇ ತರದ್ದಿರಲಿ ಅಂತಾನೆ ತಂದಿದ್ದು . ಯಾವಾಗಲೂ ಇದು ನಿನ್ನ ಬೆರಳಲ್ಲೇ ಇರ್ಬೇಕು ಆಯ್ತಾ, ತೆಗೆಯಬಾರದು ."
"ಹೂಂ " ಅಂತ ಕೈ ಬೆರಳಿಗೆ ಹಾಕಿಕೊಂಡೆ. ಯಾವ ಬೆರಳಿಗೆ ಹಾಕಿದರೂ ಕಳಚಿ ಬೀಳುತ್ತಿತ್ತು . ನನ್ನ ಸಪ್ಪೆ ಮುಖ ನೋಡಿ ನೀಲು
"ಅಯ್ಯೋ ನಿನ್ನ ಪುಟ್ಟ ಬೆರಳಿಗೆ ಅದು ಹ್ಯಾಗೆ ಹಿಡಿಯುತ್ತೆ? ಇರು ಒಂದು ನಿಮಿಷ" ಅಂದು ಒಂದಿಷ್ಟುದ್ದದ ದಾರ ತಂದು ಉಂಗುರಕ್ಕೆ ಸುತ್ತಿ ನನ್ನ ಕೈ ಬೆರಳಿಗೆ ಹಾಕಿದ್ದಳು .
"ನಿಂಗೊತ್ತ ಪುಟ್ಟಿ ಈ ಮುತ್ತನ್ನು ಮುಟ್ಟಿ ಏನನ್ನು ಬೇಡಿಕೊಂಡರೂ ಅದು ಸಿಗುತ್ತದಂತೆ " ನೀಲು ಹೇಳಿದಾಗ "ಹೌದಾ !!" ಎಂದು ನಾನು ಕಣ್ಣರಳಿಸಿದ್ದೆ.
ತಕ್ಷಣ ಕಣ್ಮುಚ್ಚಿ "ನೀಲು ನಾನು ಯಾವಾಗಲೂ ಹೀಗೆ ಜೊತೆಲೆ ಇರ್ಬೇಕು" ಅಂತ ಬೇಡಿಕೊಂಡಿದ್ದೆ .

ಅವತ್ತಿಂದ ಆ ಉಂಗುರವನ್ನು ನಾನು ಯಾವ ಕಾರಣಕ್ಕೂ ತೆಗೆಯುತ್ತಿರಲಿಲ್ಲ . ನನ್ನ ಪುಟ್ಟ ಜಗತ್ತಿನಲ್ಲಿ ನೀಲುವಿನ ಜೊತೆ ಆ ಉಂಗುರಕ್ಕೂ ಒಂದು ವಿಶೇಷ ಸ್ಥಾನವನ್ನು ನಾನು ಕೊಟ್ಟಿದ್ದೆ .

ನಾನೂ ನೀಲುವಿನ ಜೊತೆ ವಾರಕ್ಕೆರಡು ದಿನ ಸಂಗೀತ ಪಾಠಕ್ಕೆ ಹೋಗುತ್ತಿದ್ದೆ . ಅವತ್ತೊಂದು ದಿನ ಸಂಗೀತ ಪಾಠ ಮುಗಿಸಿ ಬರುವಾಗ ನೀಲು ಇವತ್ತು ಸಮುದ್ರ ತೀರಕ್ಕೆ ಹೋಗೋಣ್ವಾ? ಅಜ್ಜನ್ನ ಕೇಳ್ತಿನಿ ಅಂದಳು . ಸಮುದ್ರ ತೀರಕ್ಕೆ ಹೋದಾಗ ನನ್ನ ಕೈ ಹಿಡಿದೇ ನಡೆಯುತ್ತಿದ್ದವಳು ಒಂದು ಕ್ಷಣ ಸುಮ್ಮನೆ ನಿಂತು "ಕೇಳಿಸಿಕೊ ಆ ಅಲೆಗಳ ಶಬ್ದವನ್ನ . ಅದರೊಟ್ಟಿಗೆ ಹಾಡಬೇಕು . ನಿಂಗೊತ್ತ ಈ ಅಲೆಗಳ ಶಬ್ದದಲ್ಲೇ ಸಪ್ತ ಸ್ವರಗಳೂ ಅವೆಷ್ಟೋ ರಾಗಗಳೂ ಇವೆಯಂತೆ. ಅದಕ್ಕೆ ಅಲೆಗಳೊಂದಿಗೆ ಹಾಡುತ್ತ ನಾವು ಸ್ವರ ರಾಗಗಳನ್ನು ಗೆಲ್ಲಬೇಕು ."
ನಾನು ಕಣ್ರೆಪ್ಪೆ ಮಿಟುಕಿಸುತ್ತಾ ಅವಳನ್ನೇ ನೋಡುತ್ತಿದ್ದೆ . ಪೂರ್ತಿ ಅರ್ಥವಾಗದಿದ್ದರೂ ನಾನು ತುಂಬ ಚೆನ್ನಾಗಿ ಹಾಡುವುದನ್ನು ಕಲಿಯಬೇಕೆಂದೇ ಅವಳು ಹೇಳಿದ್ದು ಅನ್ನಿಸಿತು. ಕೈಯಲ್ಲಿದ್ದ ಉಂಗುರದ ಮುತ್ತನ್ನು ಸವರಿಕೊಂಡು ಕೇಳಿಕೊಂಡೆ "ನೀಲು ಯಾವಾಗಲೂ ನನ್ನ ಜೊತೇನೆ ಇರ್ಬೇಕು. ನಾನೂ ಅವಳೂ ಎಷ್ಟು ಚೆನ್ನಾಗಿ ಹಾಡಬೇಕೆಂದರೆ ನಮ್ಮಹಾಡನ್ನುಕೇಳಲು ತುಂಬ ಜನ ಬಂದು ಚಪ್ಪಾಳೆ ತಟ್ಟಬೇಕು." ಹೀಗೆ ಇನ್ನೂ ಏನೇನೋ ಯೋಚಿಸುತ್ತ ಮನೆಗೆ ಬಂದಿದ್ದೆ .

ರಾತ್ರಿ 8.30 - 9 ಗಂಟೆ . ನಾನು ಮಲಗುವ ಹೊತ್ತು. ಎದುರು ಮನೆಯಿಂದ ಏನೋ ಗಲಾಟೆ ಕೇಳಿಸುತ್ತಿತ್ತು . ಅಪ್ಪ ಅಮ್ಮ ಬಾಗಿಲು ತೆರೆದು ಹೊರಗೋಡಿದರು. ನಂಗೆ ಭಯವಾಯ್ತು . ನಾನೂ ಹೊರಗೋಡಿದೆ . ಹೊರಗೆ ನೋಡಿದ್ರೆ ಜ್ಞಾನ ತಪ್ಪಿದ್ದ ನೀಲುವನ್ನು ಅವರಪ್ಪ ಎತ್ತಿಕೊಂಡು ಓಡುತ್ತಿದ್ದರು . ಆಗಿದ್ದಿಷ್ಟು ಏನಕ್ಕೆಂದೋ ಅಟ್ಟ ಹತ್ತಿದ್ದ ನೀಲು ಕಾಲ್ಜಾರಿ ಕೆಳಗೆ ಬಿದ್ದು ಜ್ಞಾನ ತಪ್ಪಿದ್ದಳು .

ಮತ್ತೆ ಸುಮಾರು ದಿನ ನೀಲು ಆಸ್ಪತ್ರೆಯಲ್ಲೇಇದ್ದಳು . ನಾನು ದಿನಾ ಅಮ್ಮನನ್ನು ಕೇಳುತ್ತಿದ್ದೆ. "ಏನಾಗಿದೆಯಮ್ಮ ನೀಲುಗೆ ? ನಾನು ನೋಡ್ಬೇಕು ಅವಳನ್ನು".
ಅಮ್ಮ ಅಂದಿದ್ದಳು " ಹೂಂ ಹೋಗೋಣ ನೋಡುವುದಕ್ಕೆ . ಅವಳಿಗೆನೂ ಆಗೋದಿಲ್ಲ ಬೇಗ ಹುಷಾರಾಗ್ತಾಳೆ. ನೀ ಅಳಬೇಡ ."

ಆದರೆ ಯಾರೋ ಮಾತಾಡುವುದನ್ನು ನಾನು ಕೇಳಿಸಿಕೊಂದುಬಿಟ್ಟಿದ್ದೆ , "ಬೆನ್ನು ಮೂಳೆ ಮುರಿದುಹೋಗಿದೆಯಂತೆ, ತುಂಬ ಅಪಾಯವಂತೆ ". ನಂಗೆ ತುಂಬ ಭಯವಾಯ್ತು. "ಅಪಾಯವ ? ಏನಾಗಬಹುದು ಹಾಗಾದ್ರೆ ? ಪಾಪ ನೀಲುಗೆ ಏನೂ ಆಗದಿರಲಿ . ಬೇಗ ಹುಷಾರಾಗಿ ಬರಲಿ ನೀಲು" ಕಣ್ತುಂಬಿಕೊಳ್ಳುತ್ತ ಉಂಗುರದ ಮುತ್ತನ್ನು ಸವರಿಕೊಂಡು ಕಣ್ಮುಚ್ಚಿಕೊಂಡೆ.

ಮರುದಿನ ನೀಲುನ ನೋಡುವುದಕ್ಕೆ ಆಸ್ಪತ್ರೆಗೆ ಹೋದೆ ಅಮ್ಮನೊಟ್ಟಿಗೆ . ಪಾಪ ಅವಳು ಮಲಗೇ ಇದ್ದಳು . ಬಾಡಿದ್ದ ಅವಳ ಮುಖದಲ್ಲಿ ನನ್ನನ್ನು ನೋಡುತ್ತಲೇ ನಗುವೊಂದು ಸುಳಿದಿತ್ತು. "ನೀಲು " ಅನ್ನುತ್ತಲೇ ನನ್ನ ಗಂಟಲುಬ್ಬಿತ್ತು.
"ಹೇ ಪುಟ್ಟಿ ನೀನಂತೂ ಬರೀ ಅಳೋ ಹುಡುಗಿಯಾಗ್ಬಿಟ್ಟೆ ನೋಡು. ಯಾಕೆ ಅಳ್ತೀಯ ? ನನಗೇನೂ ಆಗಿಲ್ಲ " ಅಂದಳು . ನಾನು ಕಣ್ಣೊರೆಸಿಕೊಂಡೆ.
"ನಿಮ್ಮನೆ ಹಿತ್ಲಲ್ಲಿ ಆ ಪೊದೆಯೊಳಗೆ ಹಕ್ಕಿ ಗೂಡು ಕಟ್ಟಿತ್ತಲ್ಲ . ಅವತ್ತು ಮೊಟ್ಟೆ ನೋಡಿದವಲ್ಲ , ಮರಿಯಾಯ್ತಾ ಅದು? ನೋಡಿದ್ಯಾ ನೀನು ?"
ಇಲ್ಲವೆಂದು ತಲೆಯಾಡಿಸಿದೆ .
ತುಂಬ ಸುಸ್ತಾದಂತಿದ್ದರೂ ತುಂಬ ಮಾತಾಡಿದಳು. ಒಂದು ಹಾಡು ಹಾಡೆಂದಳು. ಅವಾಗಲೇ ತುಂಬ ಹೊತ್ತಾದ್ದರಿಂದ ನಾಳೆ ಬಂದಾಗ ಹಾಡುತ್ತೀನೆಂದು ಹೊರಟೆ. ಯಾಕೋ ಅವಳ ಕಣ್ಣೂ ತುಂಬಿ ಕೊಂಡಿದ್ದಂಗೆ ಅನ್ನಿಸ್ತು. ಮತ್ತೆ ಮತ್ತೆ ಉಂಗುರದ ಮುತ್ತನ್ನು ಮುಟ್ಟಿಕೊಂಡೆ.

ಮತ್ತೆರಡು ದಿನ ಕಳೆದ ಮೇಲೆ ಬಂದಿದ್ದು ನೀಲುವಲ್ಲ ಅವಳು ಸತ್ತ ಸುದ್ದಿ.
ಬದುಕೆಂದರೇನೆಂದೇ ತಿಳಿಯದ 10 ರ ಆಸು ಪಾಸಿನ ಆ ವಯಸ್ಸಿನಲ್ಲಿ ನನಗೆ ಸಾವಿನ ಸೂತಕದ ನೆರಳು ಬಲು ಭಾರವಾಗಿ ಕಾಡಿತ್ತು. ಕಣ್ಮುಚ್ಚಿಕೊಂಡರೆ ಸಾಕು ಕಣ್ತುಂಬಿಕೊಂಡಿದ್ದ ಅವಳ ಮುಖವೇ ಕಾಣಿಸುತ್ತಿತ್ತು . ಒಂದು ಹಾಡು ಹಾಡೇ ಅಂದರೂ ಹಾಡದೆ ಹಾಗೇ ಬಂದಿದ್ದಕ್ಕೆ ಇನ್ನೂ ಬೇಜಾರಾಯ್ತು .

ನೀಲು ಇಲ್ಲದೇ ಗರಿ ಕಿತ್ತ ನವಿಲಿನಂತಾಗಿದ್ದೆ ನಾನು. ಧ್ವನಿ ಕಳೆದುಕೊಂಡ ಕೋಗಿಲೆಯಂತಾಗಿದ್ದೆ. ನನ್ನ ಪ್ರೀತಿಯ ನೀಲು ನನ್ನೊಂದಿಗಿಲ್ಲ ಎಂಬುದನ್ನು ನನ್ನ ಮನಸ್ಸು ಒಪ್ಪಿಕೊಳ್ಳಲು ತಯಾರೇ ಇರಲಿಲ್ಲ. ದಿನವಿಡೀ ಮುಖಮುಚ್ಚಿ ಕುಳಿತು ಅಳುತ್ತಿದ್ದೆ . ಯಾರ ಮಾತನ್ನೂ ಕೇಳುತ್ತಿರಲಿಲ್ಲ . ಅತ್ತು ಅತ್ತು ಸಾಕಾಗಿ ಯಾಕೋ ಒಮ್ಮೆ ಕೈ ಬೆರಳು ನೋಡಿದವಳಿಗೆ ಉಂಗುರ ಕಂಡಿತ್ತು . ಅದೇ ಆ ಮುತ್ತಿನುಂಗುರ . ಕೇಳಿದ್ದನ್ನು ಕೊಡುವ ಉಂಗುರ ಎಂದು ನಾನು ತಿಳಿದಿದ್ದ ಉಂಗುರ. ಅದನ್ನೇ ದಿಟ್ಟಿಸಿದೆ "ಛೆ .. ನೀಲು ಸುಳ್ಳು ಹೇಳಿದ್ದಳಾ ? ಕೇಳಿದ್ದೆಲ್ಲ ಕೊಡುವ ಉಂಗುರ ಅಂದಿದ್ದಳು . ಆದ್ರೆ ನಾನು ಕೇಳಿದ್ದೇನು ? ನೀಲು ನಾನು ಯಾವಾಗಲೂ ಜೊತೆಗಿರಬೇಕು ಎಂದು. ಆದ್ರೆ ನೀಲು ನನ್ನ ಬಿಟ್ಟು ಹೋಗಿಬಿಟ್ಟಳಲ್ಲ. ಹಾಗಾದರೆ ಉಂಗುರ ನಾವು ಕೆಳಿದ್ದನ್ನೆಲ್ಲ ಕೊಡುವುದೆಲ್ಲ ಸುಳ್ಳು. ಆದರೆ ನೀಲು ಯಾಕೆ ಸುಳ್ಳು ಹೇಳಿದ್ದಳು ? ನಂಗೆ ತುಂಬ ಬೇಜಾರಾಯ್ತು . ಉಂಗುರವನ್ನು ಇನ್ನೊಂದು ಕೈಯಿಂದ ಜೋರಾಗಿ ಎಳೆದೆ. ಬೆರಳಿನಿಂದ ಉಂಗುರ ಈಚೆ ಬಂತು. ಕಿಟಕಿಯಾಚೆ ಎಸೆಯುವ ಮನಸ್ಸಾಗಲಿಲ್ಲ. ಯಾಕಂದ್ರೆ ನೀಲು ತುಂಬ ಪ್ರೀತಿಯಿಂದ ನಂಗೆ ಕೊಟ್ಟಿದ್ದು ಅದು. ಅದಕ್ಕೇ ಪುಟ್ಟ ಡಬ್ಬಿಯೊಂದರಲ್ಲಿ ಉಂಗುರವನ್ನು ಮುಚ್ಚಿಟ್ಟು ಎತ್ತಿಟ್ಟುಬಿಟ್ಟೆ .

ಕಾಲಕ್ಕೆ ಎಲ್ಲವನ್ನೂ ಮರೆಸುವ ಶಕ್ತಿಯಿದೆಯಂತೆ. ಸ್ವಲ್ಪ ದಿನ ತೀರ ಮಂಕಾಗಿದ್ದ ನಾನು ದಿನ ವರ್ಷಗಳು ಕಳೆದಂತೆ ನೀಲು ಬಿಟ್ಟುಹೋಗಿದ್ದ ಶೂನ್ಯವನ್ನು ನನ್ನದೇ ರೀತಿಯಲ್ಲಿ ತುಂಬಿಕೊಂಡಿದ್ದೆ. ನೀಲು ಹೋದ ಮೇಲೆ ಈ 14 ವರ್ಷಗಳಲ್ಲಿ ಬರೀ ಸ್ವರ ರಾಗಗಳೇ ನನ್ನ ಸ್ನೇಹಿತರಾಗಿಬಿಟ್ಟವು. ಈಗಲೂ ನಾನು ತುಂಬ ಜನರೆದುರು ಹಾಡಿ ಹೊಗಳಿಸಿಕೊಂಡಾಗ ನೀಲುವಿನ ನೆನಪಾಗಿ ಕಣ್ತುಂಬಿಕೊಳ್ಳುತ್ತದೆ .

ಇಷ್ಟೆಲ್ಲಾ ನೆನಪಾಗುವ ಹೊತ್ತಿಗೆ ಮಧ್ಯಾಹ್ನವಾಗಿತ್ತು. ಬಾಗಿಲು ತೆರೆದು ಹೊರ ಹೊರಟವಳನ್ನು ಅಮ್ಮ ಕೇಳಿದಳು "ಈ ಬಿರು ಬಿಸಿಲಿನಲ್ಲಿ ಎಲ್ಲಿ ಹೋಗ್ತಿದ್ದೀಯೇ?"
ನಾನು ಉತ್ತರಿಸದೆ ಹಾಗೆ ಹೊರ ನಡೆದೆ.

ಆಟೋ ಹತ್ತಿದವಳೇ ನೇರವಾಗಿ ಬಂದಿಳಿದಿದ್ದು ಅದೇ ಆ ಕಡಲ ತೀರಕ್ಕೆ .

ಮಧ್ಯಾಹ್ನ ಕಳೆದು ಬಾನೆಲ್ಲ ಸಂಜೆಗೆಂಪಿನ ಬಣ್ಣ ತಾಳುವವರೆಗೂ ನಾ ಅಲ್ಲೇಇದ್ದೆ. ಅಲೆಗಳು ಒಂದಾದ ಮೇಲೊಂದು ಬಂದು ಹೋಗುತ್ತಲೇ ಇದ್ದವು. ಅಲೆಗಳ ಶಬ್ದದಲ್ಲಿ ಸ್ವರ ರಾಗಗಳನ್ನು ಅರಿಯಲು ಪ್ರಯತ್ನಿಸುತ್ತಿದ್ದೆನಾ ನಾನು? ಗೊತ್ತಿಲ್ಲ. ಅದೇಕೋ ಮರಳಿನ ರಾಶಿ ಮಾಡಿ ಸುರಂಗ ತೋಡುವ ಮನಸಾಯ್ತು . ಮರಳಿನ ರಾಶಿ ಮಾಡುತ್ತಾ ಕೈಲಿ ಹಿಡಿದಿದ್ದ ಉಂಗುರವನ್ನು ಪಕ್ಕಕ್ಕಿಟ್ಟೆ . ಏನೋ ಅಂದುಕೊಳ್ಳುವಷ್ಟರಲ್ಲಿ ಅಲೆಯೊಂದು ಬಂದು ಮರಳಿನ ರಾಶಿಯನ್ನು ಧ್ವಂಸ ಮಾಡಿತು , ನನ್ನ ಕಣ್ಣೆದುರಿಗೇ ಪಕ್ಕಕ್ಕಿದ್ದ ಉಂಗುರವನ್ನು ತನ್ನೊಂದಿಗೆ ಒಯ್ದುಬಿಟ್ಟಿತು . ಅಲೆಯ ಹಿಂದೆಯೇ ಓಡಿದೆ. ಆದರೂ ಏನೂ ಸಿಗಲಿಲ್ಲ. ತುಂಬ ದುಃಖವಾಯ್ತು. ಸುಮ್ಮನೆ ಮನೆಗೆ ಬಂದೆ.ಹೇಳದೇ ಕೇಳದೇ ಹೋಗಿದ್ದಕ್ಕೆ ಅಮ್ಮ ಸಿಟ್ಟಾಗಿದ್ದಳೆನ್ನಿಸುತ್ತದೆ. ಏನೂ ಕೇಳಲಿಲ್ಲ ಅಮ್ಮ ನಾ ತಿರುಗಿ ಬಂದಾಗ.

ಒಳ ಹೋದವಳೇ ಮತ್ತೆ ಮ್ಯುಸಿಕ್ ಪ್ಲೇಯರ್ ಆನ್ ಮಾಡಿದೆ . ಮತ್ತದೇ ಘಜಲ್ ತೇಲಿ ಬಂತು
ತುಮ್ಕೋ ದೇಖಾ ತೋ ಯೇ ಖಯಾಲ್ ಆಯಾ
ಜಿಂದಗೀ ಧೂಪ್ ತುಮ್ ಘನಾ ಸಾಯಾ ..
ಹಮ್ ಜಿಸೆ ಗುನ್ ಗುನಾ ನಹೀ ಸಕತೆ
ವಕ್ತ್ ನೇ ಐಸಾ ಗೀತ್ ಕ್ಯೂಂ ಗಾಯಾ .....

ಗಂಟಲುಬ್ಬಿ ಬಂತು. ಹಿಡಿದಿಟ್ಟಿದ್ದ ಕಣ್ಣೀರು ಧಾರೆಯಾಗಿ ಕೆನ್ನೆಗಳ ಮೇಲೆ ಹರಿಯಿತು . ದಿಂಬಿನೊಳಗೆ ಮುಖ ಹುದುಗಿಸಿ ಬಿಕ್ಕಳಿಸಿದೆ .

2 comments:

ಸುಪ್ತದೀಪ್ತಿ suptadeepti said...

ಸರಳ ಸುಂದರ ನಿರೂಪಣೆ. ಹೃದಯದೊಳಗೆ ತೂರಿಕೊಳ್ಳುವ ಕಥೆ. ಘನಾ ಸಾಯಾ ಸರಿದಾಗ ಧೂಪ್ ಇನ್ನೂ ಹೆಚ್ಚಾದಂತೆ ಅನ್ನಿಸುವ, ಹಾಡಲಾಗದ ಹಾಡು ಎದುರು ನಿಂತಾಗ ಗಂಟಲುಬ್ಬಿ ಬರುವ ಕ್ಷಣಗಳು ನಮಗೆಲ್ಲ ಗೊತ್ತಿದ್ದದ್ದೆ. ಹೆಸರು ಮಾತ್ರ ಬೇರೆ ಬೇರೆ. ಭಾವವೊಂದೇ.

ಶಾಂತಲಾ ಭಂಡಿ (ಸನ್ನಿಧಿ) said...

ಶ್ಯಾಮಾ...

ಒಳ್ಳೆಯ ಹಾಡನ್ನೇ ಹಾಡಿದ್ದೀರ.

ತುಂಬಿದ ಭಾವಗಳ ಮಧ್ಯೆ ಸಿಲುಕಿದ ಹಾಡು ಬಾಯ್ಬಿಡುವುದೇ ಇಲ್ಲ, ಆಚೆ ಬರುವುದೂ ಇಲ್ಲ. ಭಾವಗಳ ಮಧ್ಯೆ ಇನಿತು ಸಡಿಲಿಕೆಯಿದ್ದರೂ ಸಾಕು, ಹಾಡು ನೀರಿನ ಹಾಗೆ ಸಲೀಸಾಗಿ ಹರಿದುಬರುತ್ತದೆ. ಅಲ್ಲವೇ?
ಯಾವ ರಾಗದಲ್ಲಾದರೂ ಸರಿ, ಹಾಡುತ್ತಿರಿ. ಕೇಳಲು ಬರುತ್ತಿರುತ್ತೇವೆ.