ಮನೆ ಮುಂಬಾಗಿಲನ್ನು ತೆರೆದೆ. ಸುಂಯ್ ಅಂತ ತಂಗಾಳಿ ಮುಖದ ಮೇಲೆ ಬೀಸಿ ಹೋಯಿತು. ಹಾಗೆಯೇ ಕಣ್ಮುಚ್ಚಿ 2 ನಿಮಿಷ ನಿಂತಿದ್ದೆ. ಹಾಗೆಯೇ ಮೆಟ್ಟಿಲಿಳಿದು ಕೆಳಗೆ ಹೋದೆ. ಮಳೆಗಾಲವಾದ್ದರಿಂದ ವಾತಾವರಣವೆಲ್ಲ ತಂಪಾಗಿತ್ತು. ಸುತ್ತಲೂ ತಂಪಿನ ಅದೇನೋ ಕಂಪಿತ್ತು.ಅಂಗಳದ ತುಂಬೆಲ್ಲ ಚಿಕ್ಕ ಚಿಕ್ಕ ಹುಲ್ಲುಗಳು ಬೆಳೆದಿದ್ದು, ನೀರಿನ ಪುಟ್ಟ ಪುಟ್ಟ ಹನಿಗಳು ಹುಲ್ಲಿನ ಮೇಲೆ ಮಿಂಚುತ್ತಿದ್ದವು. ಬರಿಗಾಲಲ್ಲಿ ಆ ಹುಲ್ಲಿನ ಮೇಲೆ ಹೆಜ್ಜೆ ಇಟ್ಟು ನಡೆದೆ. ಮುಂದೆ ಹೋಗಿ ಅಲ್ಲಿಯೇ ಇದ್ದ ಉದ್ದನೆಯ ದಾಸವಾಳ ಗಿಡದಲ್ಲಿದ್ದ ಹೂವೊಂದನ್ನು ಕೊಯ್ಯಲು ಹಾರಿ ಹಾರಿ ರೆಂಬೆಯನ್ನು ಬಗ್ಗಿಸಿದರೆ ಪಟ ಪಟನೆ ಹನಿಗಳೆಲ್ಲ ಮೈಮೇಲೆ ಉದುರಿದವು. ಮುಖ ವರೆಸಿಕೊಳ್ಳುತ್ತಾ ಅಲ್ಲೇ ಪಕ್ಕಕ್ಕೆ ನೋಡಿದರೆ ಸೂರಂಚಿನಿಂದ ಬೀಳುತ್ತಿದ್ದ ಹನಿ ಜುಳು ಜುಳು ಎಂದು ಹರಿದು ಹೋಗುತ್ತಿತ್ತು. ತಕ್ಷಣ ಏನೋ ನೆನಪಾದಾಂತಾಗಿ ಒಳಗೆ ಓಡಿ ಹೋದೆ. ಹಿಂದಿನ ದಿನ ರಾತ್ರಿ ಕರೆಂಟ್ ಹೋದಾಗ ಹೊತ್ತು ಕಳೆಯಲೆಂದು ಕಾಗದದ ದೋಣಿ ಮಾಡಿಟ್ಟಿದ್ದು ನೆನಪಾಗಿತ್ತು .
ಮಳೆಗಾಲ ಬಂತೆಂದರೆ ಸೂರಂಚಿನಿಂದ ಬಿದ್ದು ಹರಿದು ಹೋಗುವ ನೀರಲ್ಲಿ ದೋಣಿ ಬಿಡುವುದೆಂದರೆ ಅದೇನೋ ಖುಷಿ.ದೋಣಿಯನ್ನು ಹರಿಯುತ್ತಿದ್ದ ನೀರಲ್ಲಿ ತೇಲಿ ಬಿಟ್ಟೆ. ಆ ದೋಣಿ ಇನ್ನೇನು ತೇಲಿ ಮುಂದೆ ಹೋಗುತ್ತಿದೆ ಅಷ್ಟರಲ್ಲಿ ಪಟ ಪಟನೆ ಹನಿಗಳು ಉದುರಲು ಶುರುವಾಗಿ, ನಾ ನೋಡುತ್ತಿರುವಂತೆಯೇ ನನ್ನ ದೋಣಿ ನನ್ನೆದುರಿಗೇ ಒದ್ಡೆಯಾಗಿ ಮುದುರಿ ಅಲ್ಲೇ ನಿಂತುಬಿಟ್ಟಿತು.
ಛೇ 2 ನಿಮಿಷದ ಹಿಂದಿದ್ದ ಖುಷಿಯೆಲ್ಲ ಮಾಯವಾಗಿಬಿಟ್ಟಿತ್ತು. ಮಳೆಯಲ್ಲಿ ನೆನೆಯಲು ಮನಸ್ಸಾಗದೇ ಒಳಗೆ ಬಂದೆ. ಈ ಮಳೆಗಾಲದ ಮಳೆಯೇ ಹೀಗೆ. ಸುಳಿವು ಕೊಡದೇ ಒಮ್ಮೆಲೇ ಸುರಿಯಲು ಆರಂಭಿಸಿಬಿಡುತ್ತದೆ. ಬಾಗಿಲ ಬಳಿ ನಿಂತವಳನ್ನು ಅಮ್ಮ ಕೇಳಿದಳು. "ಯಾಕೆ ಸಪ್ಪೆ ಮೋರೆ " ನಾನಂದೆ" ನೋಡಮ್ಮ ಎಷ್ಟು ಖುಷಿ ಖುಷಿಯಾಗಿ ದೋಣಿ ತೇಲಿಬಿಡಲು ಹೋದರೆ ಈ ಹಾಳಾದ ಮಳೆ ಬಂದು ಎಲ್ಲ ಹಾಳಾಗಿ ಹೋಯಿತು. " ಅಮ್ಮ ನಕ್ಕು ಬಿಟ್ಟಳು. " ಕಾಗದದ ದೋಣಿ ಬಿಡೋ ವಯಸ್ಸಾ ನಿಂದು. ಅಷ್ಟಕ್ಕೆ ಇಷ್ಟು ಬೇಜಾರು ಮಾಡ್ಕೊಂಡಿದೀಯಾ? ಒಳ್ಳೇ ಹುಡುಗಿ" ಅನ್ನುತ್ತಾ ನಡೆದಳು. ಈ ಅಮ್ಮ ಯಾವಾಗಲೂ ಹೀಗೆ. ಯಾಕೆ ನಾ ಹೇಳಿದ್ದೊಂದೂ ಅರ್ಥ ಆಗಲ್ಲವೋ? ಎಲ್ಲದಕ್ಕೂ ಏನಾದರೊಂದು ಹೇಳದಿದ್ದರೆ ಸಮಾಧಾನವೇ ಇಲ್ಲ. ಅಮ್ಮನೇ ಆಕಾಶದಲ್ಲಿ ಒಂದು ಸ್ವಿಚ್ ಅದುಮಿ ಮಳೆ ಬರೋ ಹಾಗೆ ಮಾಡಿದಳೇನೋ ಅನ್ನುವ ಥರ ಅಮ್ಮನನ್ನು ನೋಡಿ , ಹಾಗೆ ಸುಮ್ಮನೇ ಕಿಟಕಿಯ ಬಳಿ ಹೋಗಿ ನಿಂತೆ.
ಹೊರಗೆ ಒಂದೇ ಸಮ ಮಳೆ. ನನ್ನ ಮನಸ್ಸಿನಲ್ಲೋ ನೆನಪುಗಳ ಮಳೆ.
ಅದ್ಯಾವಾಗ ದೋಣಿ ಮಾಡುವುದನ್ನು ಕಲಿತೇನೋ ನೆನಪಿಲ್ಲ. ಸಿಕ್ಕ ಸಿಕ್ಕ ಕಾಗದದ ಚೂರಲ್ಲೆಲ್ಲ ದೋಣಿ ಮಾಡುವುದು ಇವತ್ತಿಗೂ ನನಗೊಂದು ಗೀಳು. ಮಳೆಗಾಲವಾಗಿದ್ದರೆ ಅಂಗಳದಲ್ಲೆಲ್ಲ ಹರಿಯುತ್ತಿರುವ ನೀರಲ್ಲಿ ದೋಣಿ ತೇಲಿ ಬಿಡುವುದು, ಮಳೆಗಾಲವಲ್ಲದಿದ್ದರೆ ಏನಾಯಿತು ಮನೆಯ ಹಿಂದಿನ ಟ್ಯಾಂಕಿನ ನೀರಲ್ಲೇ ದೋಣಿ ತೇಲಿ ಬಿಟ್ಟು ಖುಷಿ ಪಡುತ್ತಿದ್ದೆ.
ರಜೆಯಲ್ಲಿ ಹಳ್ಳಿಗೆ ಹೋದಾಗ ತೋಟದಲ್ಲಿದ್ದ ಕಾಲುವೆಯಲ್ಲಿ ದೋಣಿ ಬಿಡುವ ಮಜವೇ ಬೇರೆ. ಆ ದೋಣಿ ತೇಲಿ ಹೋಗುತ್ತಾ ಕಣ್ಣಿಗೆ ಕಾಣುವವರೆಗೂ ನೋಡುತ್ತಾ ನಿಂತಿರುತ್ತಿದ್ದೆ. ಆಮೇಲೆ ಅದು ಮುಂದೆ ಹೋಗಿ ನೀರಲ್ಲಿ ಒದ್ಡೆಯಾಗಿ ಮುಳುಗಿ ಹೋಗುತ್ತಿದ್ದಿರಬಹುದು. ಆದರೆ ನಾನು ಹಾಗೆ ಯೋಚಿಸುತ್ತಲೇ ಇರಲಿಲ್ಲ. ತೇಲಿಬಿಟ್ಟ ಪ್ರತಿಯೊಂದು ದೋಣಿಯೂ ಎಲ್ಲೋ ಒಂದು ದಡ ಸೇರಿತು ಎಂದೇ ನಾನು ಅಂದುಕೊಳ್ಳುತ್ತಿದ್ದೆ.
ಮತ್ತೆ ಕಿಟಕಿಯಾಚೆ ನೋಡಿದೆ. ಮಳೆ ನಿಲ್ಲುವ ಯಾವುದೇ ಸೂಚನೆ ನೀಡದೆ ಜರ್ ಅಂತ ಸುರಿಯುತ್ತಲೇ ಇತ್ತು. ಯಾವಾಗಲೂ ಇಷ್ಟ ಪಡುತ್ತಿದ್ದ ಮಳೆಯ ಮೇಲೆ ನಾನು ಅಂದು ಸಿಟ್ಟುಗೊಂಡಿದ್ದೆ.
ನನ್ನ ಕಾಗದದ ಆ ದೋಣಿ ಮಳೆಯ ನೀರಲ್ಲಿ ಒದ್ಡೆಯಾಗಿ ಮುದ್ದೆಯಾಗಿದ್ದು ಕಿಟಕಿಯಿಂದ ಕಾಣುತ್ತಿತ್ತು. ಅದನ್ನು ನೋಡಿ ಬೇಸರವಾಯಿತು. ಯಾವುದೇ ಕೆಲಸ ಮಾಡಿದರೂ ಪೂರ್ತಿಯಾಗಿ ಮಾಡಬೇಕು. ಹಾಗೆಯೇ ದೋಣಿ ತೇಲಿ ಬಿಟ್ಟ ಕೆಲಸ ಪೂರ್ತಿಯಾಗಬೇಕಾದರೆ ಅದು ಅದರ ದಡ ಸೇರಬೇಕು. ನಾನು ಹಾಕಿಕೊಂಡ ನಿಯಮವನ್ನು ನಾನೇ ಮುರಿಯುವಂತೆ ಮಾಡಿದ ಮಳೆಯ ಮೇಲೆ ಇನ್ನಷ್ಟು ಸಿಟ್ಟು ಬಂತು.
ಒಳಗೆ ಫೋನ್ ರಿಂಗಾಗುತ್ತಿತ್ತು. ಅಮ್ಮ ಮಾತಾಡುತ್ತಿರುವುದು ಕೇಳಿತು. "ನಿನ್ನ ಗೆಳತಿ ದೋಣಿ ಮುಳುಗಿಹೋಯಿತು ಅಂತ ಮುಖ ಊದಿಸಿಕೊಂಡು ನಿಂತಿದ್ದಾಳೆ. ಇರು ಕರೆಯುತ್ತೇನೆ" ಅಮ್ಮ ಕರೆದಾಗ ಒಳಗೆ ಹೋಗಿ ಫೋನ್ ಎತ್ತಿಕೊಂಡೆ.ಅತ್ತ ಕಡೆಯಿಂದ ಬರುತ್ತಿದ್ದ ಗೆಳತಿಯ ಧ್ವನಿಗಿಂತ ಮಳೆಯ ಗಲಾಟೆಯೇ ಜಾಸ್ತಿ ಇತ್ತು. ಗೆಳತಿ ನಗುತ್ತಿದ್ದಳು. "ಏನೇ ಯಾಕೆ ಅಷ್ಟು ಬೇಜಾರು? ಆ ದೋಣಿಯಲ್ಲಿ ಕುಳಿತು ಅವನ ಊರಿಗೇನಾದರೂ ಹೊರಟಿದ್ದೆಯ ನೀನು?" ಅವಳು ನನ್ನನ್ನು ರೇಗಿಸುತ್ತಿದ್ದರೆ ನಾನು ಸೋಲುತ್ತೇನಾ ಮಾತಲ್ಲಿ? ನಾನಂದೆ " ನಾನೇನು ಹೊರಟಿರಲಿಲ್ಲ. ದೋಣಿಯಲ್ಲಿ ನನ್ನ ಸಂದೇಶವನ್ನಿಟ್ಟು, ದೋಣಿಯನ್ನು ಅವನೂರಿಗೆ ತೇಲಿ ಬಿಡುತ್ತಿದ್ದೆ. ಅಂತ ಹೊತ್ತಲ್ಲಿ ದೋಣಿ ಮುಳುಗಿದರೆ ಬೇಜಾರಾಗದೇ ಇರುತ್ತ?" ಅವಳು ನಗುತ್ತಿದ್ದಳು. ನಮ್ಮಿಬ್ಬರ ಮಾತು ಮುಗಿಯುವಷ್ಟರಲ್ಲಿ ಹೊರಗೆ ಮಳೆಯ ಸದ್ದು ಕಡಿಮೆಯಾಗಿತ್ತು. ಫೋನ್ ಇಟ್ಟವಳೇ ಹೊರಗೋಡಿ ಹೋಗಿ ನೋಡಿದೆ. ಮಳೆ ನಿಂತಿತ್ತು.
ನಾನು ಮತ್ತೆ ನಿಲ್ಲದೇ ಒಳಗೋಡಿಹೋಗಿ ಮಡಿಸಿಟ್ಟ ದೋಣಿ ಕೈಲಿ ಹಿಡಿದು ಹೊರಗೋಡಿದೆ. ಇನ್ನೇನು ದೋಣಿ ತೇಲಿ ಬಿಡಬೇಕು ಅಷ್ಟರಲ್ಲಿ ಆಚೆ ಮನೆಯ ಪುಟ್ಟಿ ಪಕ್ಕ ನಿಂತು ಕೇಳುತ್ತಿದ್ದಳು. "ಒಬ್ಬಳೇ ದೋಣಿ ಬಿಡುತ್ತೀಯಾ ಅಕ್ಕ? ನನ್ನ ದೋಣಿ ಎಲ್ಲಿ? ". ಅವಳತ್ತ ತಿರುಗಿ ನಗುತ್ತಾ ಪುಟ್ಟ ದೋಣಿಯೊಂದನ್ನು ಅವಳ ಕೈಗಿಟ್ಟೆ. ಇಬ್ಬರೂ ಖುಷಿ ಖುಷಿಯಿಂದ ದೋಣಿಯನ್ನು ಹರಿಯುತ್ತಿದ್ದ ನೀರಲ್ಲಿ ತೇಲಿ ಬಿಟ್ಟೆವು. ದೋಣಿ ಹಾಗೆ ತೇಲುತ್ತಾ ಮುಂದೆ ಹೋಯಿತು. ಅದು ಕಾಣುವ ವರೆಗೂ ಅಲ್ಲೇ ನಿಂತಿದ್ದು ನನ್ನ ಸಂದೇಶ ಹೊತ್ತ ದೋಣಿ ಇನ್ನೇನು ಅವನೂರನ್ನು ಸೇರಿರಬಹುದೆಂದುಕೊಂಡು ನಗುತ್ತಾ ಗೆಳತಿಗೆ ವಿಷಯ ತಿಳಿಸೋಣವೆಂದು ಒಳ ನಡೆದೆ.
11 comments:
ಆಹಾ ಚನ್ನಾಗಿ ಬರದ್ದೆ ಕೂಸಕ್ಕ.
ಅಲ್ದೆ ನಾನು ಇದನ್ನ ಓದಿ ಮುಗಿಸದ್ರೊಳಗೆ ಅವನ ಸಂದೇಶಾನೂ ಬಂದಿಕ್ಕು ಅಲ್ದಾ? ಲಾಸ್ಟಲ್ಲಿ ಲವ್ ಯೂ ಅಂಥಾ ಬರದ್ನಾ?
ಇದನ್ನ ಓದಿ ನಿನ್ನ ಮುಖ ಕೆಂಪಗೆ ಆಕ್ತಾ ಇದ್ದಾ. ಛಿ ಕಳ್ಳಿ ಮುದ್ದಾಗಿ ಕಾಣ್ತಾ ಇದ್ದೆ.
Wow wonderful !!!!
Really its awesome.. . keep continue the writing..
Its really very nice ya
ಆಹಾ ಚನ್ನಾಗಿ ಬರದ್ದೆ ಕೂಸಕ್ಕ. :) :)
ನಿನ್ನ ಬರಹ, ರಂಜು ಕಮೆಂಟು.. ಎಲ್ಲಾ ಓದ್ತಾ .... .. ದೋಣಿ ತರಾನೇ ಎಲ್ಲೆಲ್ಲಿಗೋ ಹೋದಿ ನಾನು.. .. .. .. .. .. .. .. :-)
@ ranju
ಇಲ್ಯೆ ಕೂಸೆ ಇನ್ನೂ ಸಂದೇಶ ಬರ್ಲೆ ಆ ಕಡೆ ಇಂದ. ದೋಣಿ ನಿಧಾನ ಆಗಿ ಬತ್ತಾ ಇದ್ದಿಕ್ಕು ಅಂತ ಕಾಯ್ತಾ ಇದ್ದಿ :)
@ shama
ಥ್ಯಾಂಕ್ಸೆ ಅಕ್ಯಾ :)
@ sahana
ಥ್ಯಾಂಕ್ಸ್ ಕಣೇ
ಥ್ಯಾಂಕ್ಸ್... ಹೇ ಎಲ್ ಎಲ್ಲೋ ಹೋಗಿ ಕಳೆದು ಹೋಗಡ ವಾಪಸ್ ಬಾ :)
ಮ್.... ಮಳೆ, ದೋಣಿ.. ನೆನಪ್ ಮಾಡಡ.... ಊರಿಗ್ ಹೋಗವು ಅನ್ನಿಸ್ತು....
@ Ganeshu
ಮಳೆಗಾಲ ಶುರುವಾದ ಮೇಲೆ ಅದನ್ನೆಲ್ಲ ನೆನಪು ಮಾಡದೇ ಇರಕ್ಕೆ ಹೆಂಗೆ ಸಾಧ್ಯ?? ಅದಕ್ಕೆ ಊರಿಗೆ ಹೋಗ್ತಾ ಇದ್ದಿ 4 ದಿನ ಬಿಟ್ಟು... ಬತ್ಯಾ ನೋಡು :)
ಚೆನ್ನಾಗಿದೆ. ಅವನ ಸಂದೇಶ ಬಂತಾ?
@ Jagali Bhagavata
ಥ್ಯಾಂಕ್ಸ್... ಅವನ ಸಂದೇಶ ಬಂತಾ ಇಲ್ವಾ ಅನ್ನೋದು secret :)
chenangi bardde innu bari
Thanku enigma...
Post a Comment