Friday, December 7, 2007

ದೀಪ ಹಚ್ಚಬೇಕು

ಸೂರ್ಯ ಜಾರುತಿರುವನು
ಪಡುವಣದ ಬಾನಿನಂಚಲ್ಲಿ
ಹಕ್ಕಿ ಗೂಡು ಸೇರುವ ಹೊತ್ತು
ಬಾನಲ್ಲೂ ಅದೆಂಥದೋ ಮೌನದ ಛಾಪಿನೊತ್ತು
ಸೂರ್ಯ ಮರೆಯಾದಂತೆ ಮಂದವಾಗುತ್ತಿದೆ
ಒಳಗೆ ತೂರಿ ಬರುತಿದ್ದ ಬೆಳಕೂ.
ದೇವರ ಮನೆಯಲ್ಲೂ ಏಕೋ ಎಣ್ಣೆಯಿಲ್ಲದ ಪ್ರಣತಿ
ಮತ್ತಲ್ಲಿ ನಾ ಕುಳಿತು ಹಾಡಬೇಕಿದೆ ಭಕ್ತಿ ಭಾವದ ಹಾಡು.
ಸಂಜೆಯಾಗುತ್ತಲಿದೆ
ದೀಪ ಹಚ್ಚಬೇಕು
ಮನೆಯೊಳಗೆ
ಕತ್ತಲಾವರಿಸುವ ಮುನ್ನ.

ಚುಕ್ಕಿ ಚಂದ್ರಮರಿಲ್ಲದ ಬಾನು
ಮಸುಕಾಗುತಿದೆ ನೀಲಿಯೂ ತಾನು
ಸುತ್ತಲೂ ಮುಸುಕುತ್ತಿದೆ ಮಬ್ಬು
ನೋಟಕ್ಕೆ ಎಳೆಯುತ್ತ ಮಿತಿಯೆಂಬ ಗೆರೆಯ.
ಕಣ್ಣಿಗೋ ಕನಸಿಗೆ ಬಣ್ಣ ತುಂಬುವ ತವಕ
ಮತ್ತಲ್ಲಿ ನಾ ಹುಡುಕಿ ಒಟ್ಟುಗೂಡಿಸಬೇಕಿದೆ
ಚೆಲ್ಲಿ ಚದುರಿದ ಕನಸುಗಳನು.
ಸಂಜೆಯಾಗುತ್ತಲಿದೆ
ದೀಪ ಹಚ್ಚಬೇಕು
ಕಣ್ಣೊಳಗೆ
ಕತ್ತಲಾವರಿಸುವ ಮುನ್ನ.

ಮನಕಿಲ್ಲ ದಣಿವಿನ ಇರುವಿನರಿವು
ಅಲ್ಲೆಂತದೋ ಯೋಚನೆಗಳ ಝರಿ
ಕಣ್ಣ ಮುಂದೆ ಕವಲೊಡೆದು ಮಲಗಿರಲು ಈ ದಾರಿ ಆ ದಾರಿ
ಸಾಗುವುದೆಲ್ಲೆಂದು ತಿಳಿಯದೇ
ಬೆಳಕು ಕತ್ತಲೆಯಾಟದಲ್ಲಿ ಕಳೆದುಹೋಗುವೆನೆಂಬ ದಿಗಿಲು.
ಎತ್ತ ಸಾಗುಬೇಕೆನ್ನುವುದನರಿತು
ಮತ್ತಲ್ಲಿ ನಾ ಮುನ್ನಡೆದು ಮುಟ್ಟಬೇಕಿದೆ ಗುರಿಯ
ಸಂಜೆಯಾಗುತ್ತಲಿದೆ
ದೀಪ ಹಚ್ಚಬೇಕು
ಮನದೊಳಗೆ
ಕತ್ತಲಾವರಿಸುವ ಮುನ್ನ.

4 comments:

Jagali bhaagavata said...

ಚೆನ್ನಾಗಿದೆ ಕವನ.

ಬೇರೆ ಯಾರೂ ಏನೂ ಬರ್ದಿಲ್ಲ ಅಂತ ಬರೀತಿದೀನಿ. ಮಸಾಲೆ ದೋಸೆ ಕೊಡ್ಸು (ಒಟ್ಟು ೪ ಮಸಾಲೆ ದೋಸೆ ಕೊಡಿಸ್ಬೇಕು ನೀನಿವಾಗ)

ಶ್ಯಾಮಾ said...

ನಾಲ್ಕು ಮಸಾಲೇ ದೋಸೆನಾ? ಅದು ಹೇಗೆ ನಾಲ್ಕು ಆಯ್ತು? ನಂಗೆ ಗೋತ್ತಾಗ್ತಿಲ್ಲ. ಯಾರು ಬರೀದೆ ಇದ್ದಾಗ ನೀನು ಬರದ್ರೆ ನಾನು ಮಸಾಲೆ ದೋಸೆ ಕೊಡ್ಸ್ತೀನಿ ಅಂತ ನಾನ್ಯಾವಾಗ ನಿಂಗೆ ಹೇಳಿದ್ದೆ ಃ) ನೀನು ಹೇಳ್ತಿರೋದು ಹಂಗೆ ಇದೆ :)

ಚೆನ್ನಾಗಿದೆ ಕವನ.
ಅಂತನೂ ಸುಮ್ನೆ ಹೇಳಿದ್ದಾ? :)

Jagali bhaagavata said...

ಕವನ ನಿಜವಾಗ್ಲೂ ಚೆನ್ನಾಗಿದೆ.

ಛೆ, ಇಷ್ಟು ಬೇಗ ಮರ್ತು ಬಿಟ್ಯಾ? :-( ಮೊದಲ್ನೇ ಪೋಸ್ಟ್-ನಿಂದ ನೋಡ್ಕೊಂತ ಬಾ. ಲೆಕ್ಕ ಸಿಗತ್ತೆ :-)

ಶ್ಯಾಮಾ said...

:-)