Tuesday, January 22, 2008

ಕೈ ಜಾರಿ ಹೋಗುತ್ತಾವ ಕನಸುಗಳು?

ರಾತ್ರಿ ಬೀಳೋ ಕನಸಿಗೆನಾದ್ರೂ ಅರ್ಥ ಇರುತ್ತದೆಯಾ ? 4 ದಿನಗಳಿಂದ ಯೋಚನೆ ಮಾಡ್ತಾನೇ ಇದ್ದೀನಿ. ಆದ್ರೆ ಏನೂ ಗೊತ್ತಾಗ್ತಿಲ್ಲ. ಯಾಕಂದ್ರೆ ಒಂದೇ ಕನಸು ಪದೇ ಪದೇ ದಿನಾ ರಾತ್ರಿ ಬೀಳುವುದಕ್ಕೆ ಶುರುವಾಗಿದೆ. ಯಾಕೆ ಹಿಂಗಾಗ್ತಿದೆ?

ಆ ಕನಸಾದ್ರೂ ಎಷ್ಟು ವಿಚಿತ್ರವಾಗಿದೆ ಗೊತ್ತ ?. ಚಿಕ್ಕ ಚಿಕ್ಕ ಹುಲ್ಲುಗಳೇ ತುಂಬಿರೋ ನೆಲ, ಎಷ್ಟು ದೂರ ಕಣ್ಣು ಹಾಯಿಸಿದರೂ ಆ ಹಸಿರು ಬಯಲೇ ಕಾಣಿಸುತ್ತಿರುತ್ತದೆ, ಜೋರಾಗಿ ಬೀಸೊ ಗಾಳಿ ಬೇರೆ. ನಾನು ಒಬ್ಬಳೇ ಅಲ್ಲಿ ನಡೆದು ಹೋಗ್ತಾ ಇರುತ್ತೇನೆ. ಮನಸಲ್ಲಿ ವಿಚಿತ್ರ ಭಾವನೆ ತುಂಬಿರುತ್ತದೆ. ಏನಾದರೂ ಹುಡುಕಲು ಹೊರಟಿದ್ದೆನಾ? ಆ ಸಮಯದಲ್ಲಿ ನಂಗೇನು ಗೊತ್ತಿರುವುದಿಲ್ಲ . ಸ್ವಲ್ಪ ದೂರ ನಡೆದ ಮೇಲೆ ದೂರದಲ್ಲಿ ಏನೋ ಹೊಳೆಯುತ್ತಿರುವುದು ಕಾಣಿಸುತ್ತದೆ ಅದನ್ನು ನೋಡಿ ನನ್ನ ಕಣ್ಣಲ್ಲೂ ಏನೋ ಮಿಂಚು, ನನ್ನ ನಡೆಯುವ ವೇಗ ಹೆಚ್ಚುತ್ತದೆ . ಇನ್ನೂ ಜೋರಾಗಿ ನಡೆಯುತ್ತ ಹೊಳೆಯುತ್ತಿರುವ ವಸ್ತುವನ್ನು ಸಮೀಪಿಸುತ್ತೇನೆ , ಇನ್ನೂ ಸ್ವಲ್ಪ ದೂರ ನಡೆದಾದ ಮೇಲೆ ಹೊಳೆಯುತ್ತಿರುವುದು ಒಂದೇ ವಸ್ತು ಅಲ್ಲ ಆ ಬಯಲಿನ ತುಂಬೆಲ್ಲ ಬರೀ ಹೊಳೆಯುತ್ತಿರುವ ನಕ್ಷತ್ರದಂಥದ್ದು ಏನೋ ಹಾಸಿ ಬಿದ್ದಿರುವುದು ಅನ್ನುವುದು ನನಗೆ ಗೊತ್ತಾಗುತ್ತದೆ.

ಈಗಂತೂ ನಾನು ಓಡಲು ಶುರು ಮಾಡುತ್ತೇನೆ. ಮನಸ್ಸಿನಲ್ಲಿದ್ದ ಭಯ ಆತಂಕ ಎಲ್ಲ ಮಾಯವಾಗಿ , ತುಟಿಯಲ್ಲಿ ನಗುವಿರುತ್ತದೆ. ನಕ್ಷತ್ರಗಳಂಥದ್ದು ಹಾಸಿರುವ ನೆಲದ ಮೇಲೆ ಕಾಲಿಟ್ಟಿದ್ದೆ ಮಂಡಿಯೂರಿ ಕುಳಿತು ಬೊಗಸೆಯಲ್ಲಿ ಆ ಹೊಳೆಯುತ್ತಿರುವ ನಕ್ಷತ್ರಗಳನ್ನು ತುಂಬಿಕೊಳ್ಳುತ್ತಾ ಇನ್ನೇನು ನನ್ನ ಮಡಿಲಲ್ಲಿ ತುಂಬಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ ಅವೆಲ್ಲ ನನ್ನ ಬೊಗಸೆಯಿಂದ ಹಾರಿ ಗಾಳಿಯಲ್ಲಿ ತೇಲಿ ಮಾಯವಾಗುತ್ತವೆ, ಮತ್ತೆ ಮತ್ತೆ ಬೊಗಸೆಯಲ್ಲಿ ತುಂಬಿಸಿಕೊಳ್ಳುತ್ತೇನೆ ಅವುಗಳನ್ನು, ಮತ್ತೆ ಮತ್ತೆ ಅವೆಲ್ಲ ಗಾಳಿಯಲ್ಲಿ ತೇಲಿ ಮಾಯವಾಗುತ್ತವೆ, ನಾನು ಜೋರಾಗಿ ಕೂಗುತ್ತ ಓಡುತ್ತೇನೆ ಆದರೂ ಏನು ಸಿಗುವುದಿಲ್ಲ , ಅಷ್ಟು ಹೊತ್ತಿಗೆ ಸರಿಯಾಗಿ ಎಚ್ಚರವಾಗುತ್ತದೆ.

ಮೊದಲನೇ ದಿನ ಕನಸು ಬಿದ್ದು ಎಚ್ಚರವಾದಾಗ ಸಮಯ ರಾತ್ರಿ 3.30 ಆಗಿತ್ತು . ಆಮೇಲೆ ಅದನ್ನೇ ಯೋಚನೆ ಮಾಡ್ತಾ ಇದ್ದೆ, ಬೆಳಗ್ಗೆವರೆಗೂ ನಿದ್ದೆಯೇ ಬರಲಿಲ್ಲ.

ಮರುದಿನವೂ ಮತ್ತೆ ಅದೇ ಕನಸು. ಎಚ್ಚರವಾದಾಗ ಮತ್ತೆ 3.30. ಮೊನ್ನೆ ರಾತ್ರಿ ಮತ್ತದೇ ಕನಸು ಎಚ್ಚರವಾದಾಗ 2.20, ಯಾಕೆ ಹೀಗಾಗ್ತಿದೆ ಅಂತ ನಿನ್ನೆ ಇಡೀ ದಿನ ಯೋಚಿಸಿದೆ ಏನೂ ಗೊತ್ತಾಗಲಿಲ್ಲ, ನಿನ್ನೆಮಲಗುವಾಗ ಅದರ ಬಗ್ಗೆ ಯೋಚಿಸಲೇ ಬಾರದು ಅಂತ ನಿರ್ಧರಿಸಿ ಬೇಗ ಮಲಗಿದೆ . ಆದರೆ ಮತ್ತದೇ ಕನಸು ಬಿತ್ತು. ಬೆಳಗ್ಗೆ ವರೆಗೆ ನಿದ್ದೆ ಬರಲಿಲ್ಲ, ಬರೀ ಆ ಕನಸಿನದ್ದೆ ಯೋಚನೆ.


ಇವತ್ತು ಬೆಳಿಗ್ಗೆ ಈಮೇಲ್ ನಲ್ಲಿ ಬಂದ ಈ ಚಿತ್ರ ನೋಡಿದಾಗ ಮತ್ತೆ ಆ ಕನಸೇ ನೆನಪಾಯ್ತು. ಕನಸುಗಳು ಕೈಗೆ ಎಟುಕುವಂತಿದ್ದೂ ಕೈ ಜಾರಿ ಹೋಗುವುದು ಅಂದ್ರೆ ಇದೇನಾ ? ಅನ್ನಿಸಿಬಿಡ್ತು. ಯಾಕೋ ತುಂಬ ಬೇಸರ ಮನಸ್ಸಿನ ತುಂಬೆಲ್ಲ ತುಂಬಿಕೊಂಡಿದೆ.

4 comments:

Sushrutha Dodderi said...

ಬೊಗಸೆ ತುಂಬ ನಕ್ಷತ್ರ..!! ಆಹ್! ಸಿಕ್ಕಿದ್ರೆ ಸ್ವಲ್ಪ ನಂಗೂ ಹೇಳು ಮಾರಾಯ್ತಿ.. ಹೆಂಗೆ ಹಿಡಿದೆ ಅಂತ..;)

ಆಮೇಲೇ, ನೀನು ಆ ನಕ್ಷತ್ರಗಳನ್ನ ಬೊಗಸೇಲೇ ಇಟ್ಕೊಂಡಿದ್ರೆ ಮತ್ತವು ಜಾರಿ ಹೋಗದೇ ಇರ್ತ್ವಾ? ಅದ್ನ ಮನಸ್ಸಿನೊಳಗೆ ತುಂಬಿ ಬೀಗ ಹಾಕಿ ಬಂಧಿಸಿಡವು.. ಆದ್ರೆ ನೀನೀಗ ಮನ್ಸಿನ ತುಂಬ ಬೇಸರವನ್ನ ತುಂಬ್ಕೊಂಡಿರೋದ್ರಿಂದ ನಕ್ಷತ್ರಕ್ಕೆ ಜಾಗಾನೇ ಇಲ್ಲೆ..! ಬೇಗ ಎಲ್ಲಾ ಬೇಸರಾನೂ ಖಾಲಿ ಮಾಡಿ ಇದ್ನ ತುಂಬ್ಕ್ಯ.. ಆಲ್ ದಿ ಬೆಸ್ಟ್! :-)

ಸಿಂಧು sindhu said...

ಪುಟ್ಟ ಕನಸುಗಾತೀ..

ವಿಚಿತ್ರವಾದರೂ ವಿಶೇಷವಾದ ಕನಸು ಕಂಡವಳೇ, ಎಷ್ಟು ಚೆನಾಗಿ ಬರ್ದಿದೀ. ಇಲ್ಲ ಕಣೋ ಕನಸುಗಳು ಕೈಜಾರಿ ಹೋಗುವುದಿಲ್ಲ. ಕೈಜಾರಿದಂತೆ ಕಂಡರೂ ಮತ್ತೊಂದು ಜೀವನ್ಮುಖೀ ತಿರುವಿನಲ್ಲಿ ಹೊಸದೇ ಜೀವನೋತ್ಸಾಹದೊಂದಿಗೆ ಬಂದು ತೆಕ್ಕೆ ಹಾಕಿಕೊಳ್ಳುತ್ತದೆ. ಅದಕ್ಕೆ ಗೊತ್ತು ನಿನಗೆ ಆ ಕನಸೆಂದರೆ ಎಷ್ಟು ಪ್ರೀತಿ ಅಂತ.

A dream is always given to you with the power to make it come true.. ಅಂತ ಎಲ್ಲೋ ಓದಿದ ನೆನಪು. ಹಾಗೇ ಆಗಲಿ ನಿನಗೂ. ಬೊಗಸೆಯ ನಕ್ಷತ್ರಗಳನ್ನ ಮೆತ್ತಗೆ ಮೇಲೆತ್ತಿ ಮಡಿಲಿಗೆ ಹಾಕಿಕೋ. ಹೂವರಳಿದ ಹಾದಿ ಎದುರಾಗುತ್ತದೆ.

ಪ್ರೀತಿಯಿಂದ
ಸಿಂಧು

ಶಾಂತಲಾ ಭಂಡಿ (ಸನ್ನಿಧಿ) said...

ಶ್ಯಾಮಾ...

ವಾವ್ ಎಷ್ಟು ಲಕೀ ನೀನು. ಎಷ್ಟು ಒಳ್ಳೆಯ ಕನಸು ನಿನ್ನನ್ನೇ ಹುಡುಕಿಕೊಂಡು ಬಂದಿದೆಯಲ್ಲ.
ನೋಡು, ಕೈಗೆಲ್ಲ ಮನದಲ್ಲಿರೋ ಸುಮಧುರ ಭಾವದ ಆ ಜಿಗುಟನ್ನು ಹಚ್ಚಿಕೊಂಡು ಇನ್ನೊಂದು ಸಲ ಟ್ರೈ ಮಾಡು. ನಿನ್ನ ಕೈಗೆ ಅಂಟಿಕೊಂಡ ಕನಸಿನ ನಕ್ಷತ್ರಗಳು ನಕ್ಕು ನನಸಿನ ಹೂವಾಗಿ ನಿನ್ನ ಬೊಗಸೆಯಲ್ಲಿ ನಳನಳಿಸುತ್ತವೆ.

ಬೇಜಾರೆಂತಕ್ಕೆ? ಅದೇನು ನೀನು ಬೇಕು ಅಂತ ಕಂಡ ಹಗಲುಗನಸು ಅಲ್ವಲ್ಲಾ...ರಾತ್ರಿ ತಾನಾಗಿ ಬಿದ್ದ ಕನಸು..ತಾನಾಗೇ ನಿನ್ನ ಬೆನ್ನು ಬಿದ್ದಿರುವ ಕನಸು ನಿನ್ನ ಬಿಟ್ಟು ಹೋಗಲಾರದು. ಬೇಜಾರನ್ನೆಲ್ಲಾ ಬಿಸಾಕು. ನಗುತ್ತಾ ನಕ್ಷತ್ರಗಳ ನಿನ್ನವಾಗಿಸಿಕೋ.

ಶ್ಯಾಮಾ said...

@ಸುಶ್ರುತ

ಬೊಗಸೆ ತುಂಬ ನಕ್ಷತ್ರದ ಕಲ್ಪನೆನೇ ಎಷ್ಟು ಖುಷಿ ಕೊಡ್ತು ಅಲ್ದಾ? ನಿಜವಾಗ್ಲೂ ಸಿಕ್ಕಿದ್ರೆ ಇನ್ನೆಷ್ಟು ಖುಷಿ ಆಗ್ತೇನಾ ಃ) ಸಿಕ್ಕಿದ್ರೆ ನಿಂಗೆ ಹೇಳ್ತಿ ಃ)
ಬೇಗ ಎಲ್ಲಾ ಬೇಸರ ಖಾಲಿ ಮಾಡಿ ಮತ್ತೆ ಬೊಗಸೆಯಲ್ಲಿ ಕನಸಿನ ನಕ್ಶತ್ರ ತುಂಬಕ್ಕೆ ಟ್ರೈ ಮಾಡ್ತಿ
ನೀ ಕೊಟ್ಟಿರ ಆಲ್ ದಿ ಬೆಸ್ಟ್!ಗೆ ಥಾಂಕ್ಸು :)

ಸಿಂಧು ಅಕ್ಕ,

ನೀನು ಇಷ್ಟು ಪ್ರೀತಿಯಿಂದ ಬರ್ದಿದ್ದು ಓದಿ ಕಣ್ಣಿಂದ ದೊಡ್ಡ ದೊಡ್ಡ ಹನಿ ಬಿತ್ತು ಯಾಕೋ ಗೊತ್ತಿಲ್ಲೆ.. ರಾತ್ರಿ ಬಿದ್ದ ಒಂದು ಪುಟ್ಟ ಕನಸಿಗೆ ಮನಸ್ಸು ಇಷ್ಟು ವಿಚಲಿತ ಆಗಿದ್ದು ವಿಚಿತ್ರ ಅನ್ನಿಸ್ತು. ಆ ಭಾವನೆಯನ್ನ ಅಕ್ಷರದಲ್ಲಿ ಹರಿಬಿಟ್ಟು ಎಲ್ಲರ ಮುಂದೆ ಇಟ್ಟಿದ್ದು ಸರಿ ಆತು ಅನ್ನಿಸ್ತು ನೀ ಬರ್ದಿದ್ದು ಓದಿ. A dream is always given to you with the power to make it come true.. :)
ಅಕ್ಕರೆಯ ಸಾಲುಗಳಿಗೆ ಧನ್ಯವಾದ

ಶಾಂತಲಕ್ಕ

ಸಿಂಧು ಅಕ್ಕನ ಕಮೆಂಟ ಓದಿ ನೀ ಬರ್ದಿದ್ದು ಓದಿದಿ. ಕಣ್ಣು ತುಂಬಿಕೊಂಡೇ ಇತ್ತು.ಮೊದಲನೇ ಸಲ ಎಂತು ಕಾಣಲೇ ಇಲ್ಲೆ. ಅದಕ್ಕೆ ಇನ್ನೊಂದ್ಸಲ ಓದಿದಿ. ಕನಸುಗಳೇ ಹಂಗೆ ಅಲ್ದಾ ಅವಾಗೇ ನಮ್ಮ ಬೆನ್ನು ಹತ್ತಿ ಬಂದು ನಮ್ಮ ಭಾವನೆಗಳನ್ನು ಅಲ್ಲಾಡಿಸೋದು?
ಬೇಜಾರೆಂತಕ್ಕೆ? ಅಂದ್ರೆ ನಂಗೇ ಗೊತ್ತಿಲ್ಲೆ.. ಇದು ಹತಾಶೆಯ ನೋವು ಖಂಡಿತ ಅಲ್ಲ.. ಯಾವುದೋ ಅವ್ಯಕ್ತ ಭಯ ಹೀಗೆ ರಾತ್ರಿ ಕನಸಿನಲ್ಲಿ ವ್ಯಕ್ತ ಆಗ್ತ ಇದ್ದಿಕ್ಕಾ?
ಏನೇ ಇರಲಿ ಕನಸಿನ ಮೊಗ್ಗರಳಿ ಹೂವಾಗುವವರೆಗೆ ಕಾಯುವುದಕ್ಕೆ ನಂಗೆ ಖಂಡಿತ ಬೇಜಾರಿಲ್ಲೆ.ನಗುತ್ತಾ ನಕ್ಷತ್ರಗಳನ್ನ ನನ್ನ ಬೊಗಸೆಯೊಳಗೆ ತುಂಬಿಸ್ತಿ.
ಪ್ರೀತಿಯ ಮಾತುಗಳಿಗೆ ಧನ್ಯವಾದ