Wednesday, January 30, 2008

ಹೇಗೆ ಕಾಯಲಿ ?

ನಾ ಒಂಟಿಯಾಗಿದ್ದರೆ
ಮುಂದೊಮ್ಮೆ ನೀ ಬಂದು
ನನ್ನ ಜೊತೆಯಾಗಲು ನಾ ಕವಿತೆಯಾಗಿ
ಅರಳಬಹುದೆಂದು ಕಾಯಬಹುದಿತ್ತು .
ಆದರೆ ನನ್ನೊಡನೆ ನೀನಿದ್ದೂ
ಇಲ್ಲದಂತಿರಲು ,ನನ್ನೊಲವು
ಭಾವವಿದ್ದೂ ಶಬ್ದಗಳೇ ಸಿಗದೇ
ಮನದಲ್ಲೇಮರೆತುಹೋದ ಕವಿತೆಯಾಗಿತ್ತು .

ನೀ ಮೌನವಾಗಿದ್ದಿದ್ದರೆ
ಮುಂದೊಮ್ಮೆ ನಿನ್ನ ಮೌನ ಬಿರಿದು
ಮಾತು ಹೊರ ಬರಲು ನಿನ್ನ ದನಿಗೆ
ನಾ ದನಿಯಾಗಬಹುದೆಂದು ಕಾಯಬಹುದಿತ್ತು.
ಆದರೆ ನಿನ್ನ ಮಾತುಗಳೇ ಒಗಟು ಒಗಟಾಗಿ
ಅರ್ಥವಾಗದಾದಾಗ ನನ್ನ ಸ್ಥಿತಿ
ಹರಿವ ನೀರಲ್ಲಿಯೇ ಹುಟ್ಟು ಹಾಕಿ
ದೋಣಿ ನಡೆಸಲಾರದವ,ಹೆಪ್ಪುಗಟ್ಟಿದ
ನೀರ ಮುಂದೆ ಅಸಹಾಯಕನಾಗಿ ನಿಂತ ಹಾಗಿತ್ತು .

ಕಟ್ಟಿದ್ದು ಕಾರ್ಮೋಡವಾಗಿದ್ದರೆ
ಮುಂದೊಮ್ಮೆ ಅದು ಕರಗಿ ನೀರಾಗಿ
ಸುರಿದು ಹೋಗಬಹುದೆಂದು ನಾ ಕಾಯಬಹುದಿತ್ತು.
ಆದರೆ ತಿಳಿನೀಲಿ ನಿಶ್ಚಲ ಬಾನೇ
ನನ್ನ ಕಣ್ಣಿಗೆ ಅಡ್ಡಗಟ್ಟಿ
ನಮ್ಮಿಬ್ಬರ ಮನದ ನಡುವಿನ ಅಂತರವನ್ನು
ಅಳೆದಳೆದು ಸಾರಿ ಹೇಳುವಾಗ
ನಾನಾದರೂ ಏನು ಮಾಡಲು ಸಾಧ್ಯವಿತ್ತು ?

10 comments:

ಬಾನಾಡಿ said...

ಒಂದು ಅನುಪಮವಾದ ಕವನ ಓದಿದ ಅನುಭವವಾಯಿತು.
ಅದರಲ್ಲೂ ಕೊನೆಯ ಪದ್ಯದಲ್ಲಿನ ಉಪಮೆ "ತಿಳಿನೀಲಿ ನಿಶ್ಚಲ ಬಾನೇ ...ಮನದ ನಡುವಿನ ಅಂತರವನ್ನು ಅಳೆದಳೆದು ಸಾರಿ ಹೇಳುವಾಗ" ಕವನದ ಉತ್ಕಟತೆಯನ್ನು ಹೇಳುತ್ತದೆ.

ಹಲವು ದಿನಗಳ ನಂತರ ಇಲ್ಲಿ ಭೇಟಿ ನೀಡಿದಾಗಲೂ ನಿರಾಶೆಗೊಳಿಸದೇ ಮತೂಮ್ಮೆಬರಲು ಕರೆದಂತಿದೆ ನಿಮ್ಮ ಬ್ಲಾಗ್.
ಅಭಿನಂದನೆಗಳು.
ಒಲವಿನಿಂದ
ಬಾನಾಡಿ.

Sandeepa said...

wwaaw!

ತೇಜಸ್ವಿನಿ ಹೆಗಡೆ said...

ಹರಿವ ನೀರಲ್ಲಿಯೇ ಹುಟ್ಟು ಹಾಕಿ
ದೋಣಿ ನಡೆಸಲಾರದವ,ಹೆಪ್ಪುಗಟ್ಟಿದ
ನೀರ ಮುಂದೆ ಅಸಹಾಯಕನಾಗಿ ನಿಂತ ಹಾಗಿತ್ತು .

ತುಂಬಾ ಉತ್ತಮ ಕವನ. ಇಷ್ಟವಾಯಿತು.

ಶ್ಯಾಮಾ said...

ಬಾನಾಡಿ, Alpazna ,ತೇಜಸ್ವಿನಿ

ಧನ್ಯವಾದಗಳು

-ಶ್ಯಾಮಾ

Jagali bhaagavata said...

ಆಗಿಲ್ವಾ ಇನ್ನೂ ಕಾದಿದ್ದು? next ಎಂತ?

Nadi Basavaraju said...

ನಿಮ್ಮಿಬ್ಬರ ನಡುವಿನ ಅಂತರ ಕಳೆದು ಹತ್ತಿರ, ಹತ್ತಿರವಾಗಿ ನಡುವೆ ಗಾಳಿ ಕೂಡ ನುಸುಳಿ ಹೋಗದಷ್ಟು
ಎಂದು ಆಶಿಸುತ್ತಾ - ಬಸವರಾಜು

ನಾವಡ said...

"ಶ್ಯಾಮಾ" ರೇ,
ನಿಮ್ಮ ಬ್ಲಾಗ್ ಗೆ ಶಾಂತಲಾ ರ ಬ್ಲಾಗ್ ರೋಲ್ ನಿಂದ ಬಂದೆ. ಎಲ್ಲ ಪೋಸ್ಟ್ ಓದಿದೆ. "ಮಾಗಿ ಮಲ್ಲಿಗೆ ನೆನಪು’, "ನನ್ನ ಹೆಸರಿಗೊಂದು ಸಂಜೆ’ ಕವಿತೆಯ ಕೆಲ ಸಾಲುಗಳು ಇಷ್ಟವಾದವು.
ಜಗುಲಿ ಮಧ್ಯದಲ್ಲೆಲ್ಲ ಕೊಯ್ದ ಹೂಗಳ ರಾಶಿ
ಮನವು ಲೆಕ್ಕ ಹಾಕುತ್ತಿತ್ತು
ದೇವರಿಗಿಷ್ಟು ಪಾಲು ,ಉಳಿದವೆಲ್ಲ ನನಗಿರಲಿ
ಉದ್ದನೆಯ ದಂಡೆಯೇ ನನಗೆ ಬೇಕು.

ನಾವಡ

ಶ್ಯಾಮಾ said...

@ ಬಸವ ರಾಜು

:-)

thanks

@ ನಾವಡ

ಧನ್ಯವಾದಗಳು.

Yogesh Bhat said...

ಅದ್ಬುತ!!! Composition super iddu.

ಶ್ಯಾಮಾ said...

Yogesh

ಧನ್ಯವಾದಗಳು.