ಅಂತ್ಯದರಿವಿಲ್ಲದ ಏಕಾಂತ
                ಹನಿ ಹನಿದು ಸುರಿದ ಮಳೆ ನಿಂತ ಹೊತ್ತು
                    ಬೆಳಗೋ ಬೈಗೋ ಅರಿವಿಲ್ಲವಿನಿತೂ
                    ಕಾರ್ಮುಗಿಲ ಮುಸುಕು ಹೊದ್ದು 
                      ಆಗಸವು ಮಲಗಿರಲು
                    ಸಪ್ತ ಸ್ವರಗಳ, ರಾಗ-ತಾಳಗಳ
                ನೆನಪಿನ ಮೇಳ ಮನದ ಅಂಗಳದಲ್ಲಿ.
                            "ನಿ ಧ ಮ ಗ ರೆ ಸಾ"
                          ತುಟಿಯ ಮೇಲೆ ಸ್ವರಗಳು
                         ಲಾಸ್ಯವಾಡುತಿರೆ
            ಮನದಲ್ಲಿ ಮತ್ತ್ಯಾವುದೋ ರಾಗದಾ ನೆನಹು.
                           "ಸಾ ರೆ ಮ ಪ ನಿ ಸಾ"
                        ಸ್ವರವುಕ್ಕಿ ಬರಲು
                           ತಾನ ಗಾನದ ಲಹರಿ
                  ಹರಿವ ನದಿಯಂತೆ ಮನದಿ.
                ಕಿಟಕಿಯಾಚೆಯಿಂದ ಬಂದ 
                  ತಿಳಿಬಿಸಿಲ ಕೋಲು
            ಚಿನ್ನದೆಳೆಯಂತೆ ಹೊಳೆಹೊಳೆದು
                ಕಣ್ಣೆವೆಗಳ ಸೋಕಿದಾಗ
                ಹೊಸತಾಗಿ ಕಂಡಿತ್ತು 
                ರಾಗಲಹರಿಯಲಿ ಮಿಂದ
            ಸುತ್ತಲಿನ ಏಕಾಂತದ ಲೋಕ.
        ಮತ್ತೆ ಹನಿ ಹನಿದು ಮಳೆ ಜಿಮುರಿ ಬರಲು
        ಕಾರ್ಮುಗಿಲು ಕರಗಿ ಆಗಸವು  ತಿಳಿಯಾಗಿ
        ಅಲ್ಲೇ ಅಂಚಲ್ಲಿ ನಗುತಿತ್ತು ಕಾಮನಬಿಲ್ಲು.
            ಇನಿದನಿಯ ಹಕ್ಕಿ ಹಿಂಡು
            ಬಾನಿನಾಚೆ ಹಾರುತಿರೆ,
      ತುಂಬಿ ಬಂದ ಮನವು ಉಲಿಯಿತು ಮೆಲ್ಲನೆ
    ಏಕಾಂತದಲೂ ಇದೆಯೇ ಈ ಪರಿಯ ಚೆಲುವು?
7 comments:
ಶ್ಯಾಮಾ,
"ಏಕಾಂತದಲೂ ಇದೆಯೇ ಈ ಪರಿಯ ಚೆಲುವು?"
ನಿಜ. ಕೆಲವೊಮ್ಮೆ ಏಕಾಂತ ಕೊಡುವ ಶಾಂತಿ, ನೆಮ್ಮದಿ ಯಾವುದರಿಂದಲೂ ಸಿಗದು. ಹಾಗಾಗಿಯೇ ಏಕಾಂತವೂ ಚೆಲುವೆನಿಸುವುದು.
ಏಕಾಂತದಲ್ಲೇ ಏಮೂ ಇರೋದು ಚೆಲುವು, ಒಲವು, ಗೆಲುವು, ನಲಿವು ಎಲ್ಲ.
ಚಂದ ಶಬ್ದಗಳನ್ನು ಧರಿಸಿದ ಸುಂದರ ಕವಿತೆ.
ತುಂಬಾ ಚನ್ನಾಗಿ ಕವಿತೆ ಮೂಡಿ ಬಂದಿದೆ
ಶಾಂತಿ,ನೆಮ್ಮದಿ,ನಲಿವು ಅಲ್ಲದೆ
ದುಃಖ-ದುಮ್ಮಾನ,
ಕೋಪ-ತಾಪ ಮರೆಸುವ ದಿವ್ಯ ಔಷದ ಏಕಾಂತದಲ್ಲೇ ಇದೆ ಅನಿಸುತ್ತದೆ.
ಅಂತ್ಯದರಿವಿಲ್ಲದ ಏಕಾಂತಕ್ಕೆ ಹನಿ ಹನಿದು ಸುರಿವ ಮಳೆ ನಿಂತ ಹೊತ್ತಿನ ಚಿತ್ರ perfect! ಚೆನ್ನಾಗಿದೆ:)
Chanagide shyami :)
ಏಮೂ,
’ಏ’ ’ಕಾಂತ’ ಅಂತ ಯಾರನ್ನ ಕರೀತಾ ಇದೀಯಾ?:-)
ಚಂದದ ಕವನ. ಪದಗಳ ನೇಯ್ಗೆ ಇಷ್ಟವಾಯಿತು.
Post a Comment