ನಿನ್ನೆ ಭಾನುವಾರ ಅಮ್ಮಂದಿರ ದಿನ. ಬೆಳಿಗ್ಗೆ ಎದ್ದು ಅಮ್ಮಂಗೆ ಒಂದು ಫೋನ್ ಮಾಡಿದೆ.. ಅಪ್ಪ ನಗುತ್ತಾ ಕೇಳಿದರು ಬರೀ ಅಮ್ಮನ ದಿನ ಮಾಡುವುದೇ ಆಯ್ತು ಅಪ್ಪಂದಿರ ದಿನ ಯಾವಾಗ? ಅದು ಯಾಕಿಲ್ಲ? ಅಂತ ಇದೆ ಪ್ರಶ್ನೆಯನ್ನು ಹಿಂದೊಮ್ಮೆ ಯಾರೋ ಕೇಳಿ ನನ್ನೊಂದಿಗೆ ವಾದಿಸಿದ್ದು ನೆನಪಾಗಿ ನಗು ಬಂತು.. ಹೌದು ಅಮ್ಮನಿಗೆ ನಮ್ಮೆಲ್ಲರ ಜೀವನದಲ್ಲಿ ಒಂದು ವಿಶೇಷ ಸ್ಥಾನ. ಒಂದು ಸಣ್ಣ ನೋವಾದರೂ ನಾವು ಅಮ್ಮ ಎಂದೇ ಕೂಗುವುದು.. ಅಮ್ಮ ಎಂಬ ಪದದಲ್ಲೇ ಎಷ್ಟೋ ಅರ್ಥ ಎಷ್ಟೋ ಭಾವನೆಗಳು ತುಂಬಿವೆ..
ಅಮ್ಮಂದಿರ ದಿನ ಎಂದಾಗ ಅಮ್ಮನ ಬಗ್ಗೆ ಏನಾದ್ರೂ ಬರೀಬೇಕು ಅನಿಸ್ತು.. ಅಮ್ಮನ ಬಗ್ಗೆ ದೊಡ್ಡ ದೊಡ್ಡ ಪದಗಳನ್ನೆಲ್ಲ ಉಪಯೋಗಿಸಿ ಎಷ್ಟೋ ಜನ ಬರೀತಾರೆ.. ಬರೆದಿದ್ದಾರೆ.. ನಂಗೆ ಹಾಗೇನೂ ಬರೆಯಲು ನೆನಪಾಗುತ್ತಿಲ್ಲ. ಆದರೆ ಒಂದು ಘಟನೆ ಹೇಗೆ "ಅಮ್ಮ" ಎಂಬ ಶಬ್ದದ ಬಗ್ಗೆ "ಅಮ್ಮ" ಎಂಬ ಜೀವದ ಬಗ್ಗೆ ನನ್ನ ಕಣ್ತೆರೆಸಿತು ಅನ್ನುವುದನ್ನು ಬರೆಯಲೇಬೇಕು ಅಂತ ಅನಿಸಿತು.
ಸುಮಾರು ವರ್ಷಗಳ ಹಿಂದೆ.. ಆವಾಗ ನಾನು ಬರೀ ಇನ್ನಿಲ್ಲದ ಕಾರಣಕ್ಕೆ ಅಮ್ಮ ನೊಂದಿಗೆ ಜಗಳವಾಡುತ್ತಿದ್ದೆ. ಬರೀ ಅಮ್ಮನ ಮಾತಿಗೆ ಎದುರಾಡುವುದು.. ಸಿಡುಕುವುದೇ ಸಾಮಾನ್ಯವಾಗಿತ್ತು. ಅದೊಂದು ವಯಸ್ಸೇ ಹಾಗೆನೋ ಅಮ್ಮ ಹೇಳುವುದೆಲ್ಲ ತಪ್ಪು ಅಂತನೇ ಅನಿಸ್ತಿತ್ತು. ಅವತ್ತು ಒಂದಿನ ಹಾಗೇ ಆಯ್ತು ಅಮ್ಮ ನೊಂದಿಗೆ ಚೆನ್ನಾಗಿ ಜಗಳವಾಡಿ ಮುಖ ಊದಿಸಿಕೊಂಡು ಕುಳಿತಿದ್ದೆ. ಅವತ್ತು ನನ್ನ ಅಜ್ಜಿ(ಅಮ್ಮನ ಅಮ್ಮ) ಮನೇಲಿದ್ದರು. ಬಾ ಇಲ್ಲಿ ಏನೋ ಹೇಳಬೇಕು ಅಂತ ಕರೆದರು. ಗೊತ್ತಾಯ್ತು ನಂಗೆ ಅಮ್ಮನ ಹತ್ರ ಜಗಳ ಆದಿದೆನಲ್ಲ ಅದಕ್ಕೆ ಏನೋ ಹೇಳಕ್ಕೆ ಕರೆದರು ಅಂತ ಅವರು ಯಾವತ್ತು ಬಯ್ಯುತ್ತಿರಲಿಲ್ಲ. ಮನಸ್ಸಿಗೆ ನಾಟುವ 2 ತಿಳುವಳಿಕೆ ಮಾತು ಹೇಳುತ್ತಿದ್ದರು. ಅವತ್ತು ಹಾಗೇ ಕೇಳಿದರು ನನ್ನ "ಅಮ್ಮ ಅಂದ್ರೆ ಏನು ಅಂತ ಗೊತ್ತಾ ನಿಂಗೆ?" ಏನು ಹೇಳಬೇಕೋ ಗೊತ್ತಾಗಲಿಲ್ಲ ನನಗೆ.. ನನಗೆ ಗೊತ್ತು ಅಮ್ಮ ಅಂದ್ರೆ ಏನು ಅಂತ ನಿಂಗೆ ಹೇಳಲಿಕ್ಕೆ ಬರುವುದಿಲ್ಲ ಅಂತ ನನ್ನ ಕೇಳು ಹೇಳ್ತೀನಿ. ಭೂಮಿ ಮೇಲೆ ಕಣ್ಣು ಬಿಟ್ಟ ದಿನದಿಂದ ಅಮ್ಮ ನನ್ನು ನೋಡಿಲ್ಲ.. ಅಮ್ಮ ಅಂತ ಅಮ್ಮನನ್ನು ಒಂದು ಸಲವೂ ಕರೆದಿಲ್ಲ. ಅಮ್ಮನ ಮಡಿಲಲ್ಲಿ ಒಂದಿನನೂ ಮಲಗಿಲ್ಲ.. ಅದಕ್ಕೆ ನನಗೆ ಅಮ್ಮನ ಮಹತ್ವ ಗೊತ್ತು.. ನಿಂಗೆ ಗೊತ್ತಿಲ್ಲ ಅಂತ ಅಂದ್ರು. ಅಜ್ಜಿ ಅವರ ಬಾಲ್ಯದ ದಿನಗಳಲ್ಲಿ ಪಟ್ಟ ಕಷ್ಟಗಳನ್ನು ಒಮ್ಮೆ ಯಾವಾಗಲೋ ಅವರ ಬಾಯಲ್ಲೇ ಕೇಳಿದ್ದು ನೆನಪಾಯಿತು. ಅವರ ಮಾತುಗಳು ಮನಸ್ಸಿನ ಮೇಲೆ ಹೇಗೆ ಪರಿಣಾಮ ಮಾಡಿತು ಅಂದ್ರೆ ನಾನು ಅಮ್ಮನ ಜೊತೆ ಅಷ್ಟು ದಿನ ನಡೆದುಕೊಂಡಿದ್ದೆಲ್ಲ ನೆನಪಿಸಿಕೊಂಡು ಸುಮಾರು ಹೊತ್ತು ಜೋರಾಗಿ ಅತ್ತೆ. ಆವಾಗಲೆ ನಿರ್ಧಾರ ಮಾಡಿದೆ ಇನ್ನೆಂದೂ ಅಮ್ಮಂಗೆ ನೋವಾಗುವ ಹಾಗೆ ನಡೆದುಕೊಳ್ಳಬಾರದು ಅಂತ...
ಅಮ್ಮ ಯಾವಾಗಲೂ ಹೇಳಿಕೊಡ್ತಿದ್ಲು ನಮಗೆ " ನಮ್ಮಿಂದ ಇನ್ನೊಬ್ಬರನ್ನು ಸಂತೋಷಪಡಿಸಲು ಸಾಧ್ಯವಿಲ್ಲದಿದ್ದರೂ ತೊಂದರೆಯಿಲ್ಲ ಆದರೆ ನಮ್ಮಿಂದ ಬೇರೆಯವರಿಗೆ ನೋವಾಗದಂತೆ ನಡೆದುಕೊಳ್ಳುವುದು ನಮ್ಮ ಕಯ್ಯಲ್ಲೇ ಇದೆ ನಾವು ಹಾಗೇ ಇರಬೇಕು ಕೂಡ " ಅಂತ ಅದನ್ನೇ ನಾನು ಪಾಲಿಸುತ್ತಿದ್ದೇನೆ ಇವತ್ತಿಗೂ. ಅಮ್ಮನ ವಿಷ್ಯದಲ್ಲಿ ಕೂಡ. ಅವತ್ತಿನಿಂದ ಅಮ್ಮ ನೊಂದಿಗೆ ಒಂದೊಂದು ಮಾತು ಆಡುವಾಗಲೂ ಯೋಚಿಸುತ್ತೇನೆ ಅಮ್ಮನಿಗೆ ಏನಾದ್ರೂ ಬೇಜಾರಾಗಬಹುದ ಹೀಗೆ ಹೇಳಿದರೆ ಅಂತ.. ಒಂದೊಂದು ಸಲ ಹಾಗೆ ಅನ್ನಿಸಿದರೆ ಅಮ್ಮನನನ್ನು ಸಮಾಧಾನಿಸುತ್ತೇನೆ ಹೋಗಿ ..ನಾನು ಹಾಗಲ್ಲ ಹೇಳಿದ್ದು ಹೀಗೆ ಹೀಗೆ ಅಂತ.. ಅಮ್ಮ ಖುಷಿಯಾಗಿರೋದನ್ನ ನೋಡೋದೇ ಖುಷಿ. ಅಷ್ಟೆಲ್ಲಾ ಹೇಳಿ ನನ್ನ ಕಣ್ಣು ತೆರೆಸಿದ ಅಜ್ಜಿ ನಮ್ಮನ್ನು ಬಿಟ್ಟು ಹೋಗಿ 5-6 ವರ್ಷಗಳೇ ಆಯಿತು.. ಆದರೂ ಅವರಂದು ಆಡಿದ ಮಾತುಗಳು ಇನ್ನೂ ನನ್ನ ಮನಸ್ಸಿನಲ್ಲಿ ಹಾಗೇ ಇವೆ. ಅಮ್ಮ ಇಂದಿಗೂ ಅವರನ್ನು (ಅಮ್ಮನ ಅಮ್ಮ) ನೆನೆಸಿಕೊಂಡು ಕಣ್ಣೀರು ಹಾಕಿದ್ದನ್ನು ಎಷ್ಟೋ ಸಲ ನೋಡಿದ್ದೇನೆ. ಅಮ್ಮ ಅಂದರೇ ಹಾಗೆ. ನಮ್ಮ ನೋವಿಗೆ ಕಣ್ಣೀರಿದುವವಳು ನಮ್ಮ ಖುಷಿಯಲ್ಲೇ ಖುಷಿ ಕಾಣುವವಳು. ಅದಕ್ಕೆ ಅಮ್ಮಂದಿರ ದಿನಕ್ಕೆ ಅಂತ ಈ ಬರವಣಿಗೆ ಅಮ್ಮನಿಗೆ ಒಂದು ಪ್ರೀತಿಯ ಕಾಣಿಕೆ. ಮುಗಿಸುವ ಮುನ್ನ, ನಾನು ಚಿಕ್ಕವಳಾಗಿದ್ದಾಗ ಅಮ್ಮನಿಗೆ ಅಂತ ಬರೆದ ಒಂದು ಪದ್ಯ ಇವತ್ತು ಯಾಕೋ ನೆನಪಾಗುತ್ತಿದೆ. ಇದೂ ಅಮ್ಮನಿಗಾಗಿ ಅಮ್ಮ ನಿನ್ನ ಹೊಗಳಲು ಯಾವ ಪದವ ಹುಡುಕಲಿ? ಅಮ್ಮ ನಿನ್ನ ಮಮತೆ ಪ್ರೀತಿಯ ಹೇಗೆ ತಾನೆ ಮರೆಯಲಿ? ಅಮ್ಮ ನಿನ್ನ ಮಡಿಲದು ಪ್ರೀತಿ ಸುಧೆಯ ಕಡಲು. ಅಮ್ಮ ನಿನ್ನ ಮಡಿಲದು ಸ್ವರ್ಗಕಿಂತ ಮಿಗಿಲು.ಅಮ್ಮ ನಿನ್ನ ನುಡಿಗಳು ಹಾಲು ಜೇನ ಸಂಗಮ. ಅಮ್ಮ ನಿನ್ನ ಮೊಗವದು ಹುಣ್ಣಿಮೆಯ ಚಂದ್ರಮ. ಅಮ್ಮ ನೀನು ಸನಿಹವಿರಲು ಜಗವನ್ನೇ ಮರೆವೆನು. ಅಮ್ಮ ನಿನ್ನ ಜೊತೆಯಿರಲು ಜಗವನ್ನೇ ಗೆಲ್ಲುವೆನು. ಮುಂದಿನಾ ಜನುಮವಿರಲು ನಿನ್ನ ಕಂದನಾಗೇ ಬರುವೆನು. ಮತ್ತೆ ನಿನ್ನ ಜೊತೆಯಿರಲು ಹರುಷದಲ್ಲಿ ಕುಣಿವೆನು.
ಬೇರೆಯವರ ಕನಸ ಕಟ್ಟುವರು ಇವರು ದಿನವೂ ನಾ ನಡೆದು ಬರುವ ದಾರಿಯ ಪಕ್ಕದಲ್ಲಿ ಮನೆ ಕಟ್ಟುವವರು ಇವರು, ತಮ್ಮದಲ್ಲದ ಕನಸುಗಳಿಗೆ ಕೈ ಜೋಡಿಸುವರು ಬಣ್ಣ ತುಂಬುವರು ಇವರು ಇವರ ಕಣ್ಣಲ್ಲಿ ಅವರದ್ದೇ ಆದ ಕನಸುಗಳಿಲ್ಲ ಬರೀ ಬೇರೆಯವರ ಕನಸಿನ ಬಿಂಬವನ್ನಷ್ಟೇ ನಾ ಕಂಡಿದ್ದೇನೆ ಅವರ ಕಣ್ಣುಗಳಲ್ಲಿ... ನೋವುಗಳು ತುಂಬಿರಬಹುದು ಕಣ್ಣುಗಳಲ್ಲಿ.. ಆ ದಣಿವಿನ ಛಾಯೆಯಲ್ಲಿ ಅವು ಕಾಣುವುದೇ ಇಲ್ಲ.. ಅಲ್ಲೇ ಆಡಿಕೊಂಡಿರುವ ಅವರ ಆ ಮಕ್ಕಳು... ಅವರಿಗೆ ನಿನ್ನೆಯ ನೆನಪೇ ಇಲ್ಲ ನಾಳೆಯೆಂದರೆ ಗೊತ್ತೇ ಇಲ್ಲ ಬರೀ ಇವತ್ತೇ ಜಗತ್ತು ಅವರ ಕಣ್ಣಲ್ಲಿ .ಸಂಜೆ ಮತ್ತ ದೇ ದಾರಿಯಲ್ಲಿ ಹೋಗುವಾಗ ಅವರದಲ್ಲದ ಆ ಮನೆಯ ಬೆಳಗುತ್ತಿರುವ ಮಿಣಿ ಮಿಣಿ ಉರಿತ್ತಿರುವ ಆ ಚಿಮಣಿ ದೀಪ.. ಅಲ್ಲೇ ಹೊಗೆಯೇಳಿಸುವ ಕಟ್ಟಿಗೆ ಒಲೆಯಲ್ಲಿ ಬೇಯುತ್ತಿರುವ ಆ ಗಂಜಿ... ಒಲೆಯ ಸುತ್ತಲೂ ಕುಳಿತಿರುವ ಆ ಮಕ್ಕಳು ಮತ್ತೆ ಅವರ ಅವ್ವ... ದಿನಾ ಇಷ್ಟೇ ನನಗೆ ಕಾಣಿಸುವುದು ಒಂದೊಂದು ಸಲ ಹಿಂತಿರುಗಿ ನೋಡುತ್ತೇನೆ.. ಒಮ್ಮೆಲೇ ಎಲ್ಲವೂ ಮಂಜು ಮಂಜಾಗಿ ಕಾಣುತ್ತದೆ ಮತ್ತೆ ತಲೆ ತಗ್ಗಿಸಿ ಮನೆಯ ದಾರಿ ಹಿಡಿಯುತ್ತೇನೆ.. ನನ್ನ ಕಣ್ಣಂಚಿನಲ್ಲಿದ್ದ ಆ ಹನಿ ಯಾರಿಗೂ ಕಾಣದೇ ಕಣ್ಣಲ್ಲೇ ಕರಗಿಹೋಗಿರುತ್ತದೆ...
ಅಂದೊಂದು ಮುಸ್ಸಂಜೆ ಏಕಾಂತದಲಿ ಕುಳಿತಿರಲು ನೆನಪಿನಾ ತಂಗಾಳಿ ಬೀಸಿ ತಂಪಾಯಿತೆನ್ನ ಮನ ಬಾಲ್ಯದ ದಿನಗಳವು ಮನದಲ್ಲಿನ್ನೂ ಹಚ್ಚ ಹಸಿರು ಎಷ್ಟೊಂದು ಸುಮಧುರ ದಿನಗಳವು ನೆನಪಾಗಿ ಜಿನುಗಿತು ಒಂದು ಕಣ್ಣೀರು ಏನೇೆನಿರಲಿಲ್ಲ ಬಾಲ್ಯದಲ್ಲಿ ಪ್ರಪಂಚವೇ ನನ್ನದೆಂಬ ಊಹೆ ಕಣ್ತುಂಬಾ ಬಣ್ಣ ಬಣ್ಣದ ಕನಸುಗಳು ಮುಖದಲ್ಲಿ ಮಾತ್ರ ಅದೇ ಮುಗ್ಧ ನಗು ಆಟ ಓಟವೇ ನನ್ನ ಲೋಕ ಅಮ್ಮನ ಕೈಗೂಸು ನಾನು ಆದರೂ ಗೊಂಬೆಗಳ ನಡುವಲ್ಲೆಲ್ಲ ನಾನೇ ಅಮ್ಮ!!! ದಿನವೂ ಒಂದೊಂದು ಕಥೆಯನ್ನು ಕೇಳುತ್ತಾ ಅಮ್ಮನ ಮಡಿಲಲ್ಲಿ ನಿದ್ದೆ ಹೋಗುತ್ತಿದ್ದ ಸವಿ ನೆನಪು ಜೀವನದ ಹಾದಿಯಲ್ಲಿ ಸಾಗಿ ಬರುವಾಗ ನನ್ನೀ ಸುಮಧುರ ಬಾಲ್ಯವನ್ನು ನಾನೆಲ್ಲಿ ಕಳೆದುಕೊಂಡೆ ?ಮರಳಿ ಬಾರೆಯಾ ಬಾಲ್ಯವೇ?? ಮುಗ್ಧತೆಯ ಗೂಡೊಳಗೆ ಬೆಚ್ಚಾಗಿರುವಾ ಸುಖವ ಮತ್ತೆ ತಾರೆಯಾ ನನಗೆ??
ಕಟ್ಟಬೇಡ ನೀ ಎಂದೂ ನಿನ್ನ ಕನಸಿನ ಗೋಪುರವ ಸಾಗರದ ತೀರದಲ್ಲಿ ಏಕೆಂದರೆ ಸಾಗರದ ಅಲೆಗಳಿಗೆ ಇನ್ನಿಲ್ಲ ಇಷ್ಟು ಸಹ ಕರುಣೆ ನೀ ಕಟ್ಟಿ ಶೃಂಗರಿಸಿದ ಗೋಪುರವ ತನ್ನ ಓಡಲೊಳ ಗೆ ಒಂದಾಗಿಸುವುದು ಕ್ಷಣ ಮಾತ್ರದಲ್ಲೆಲ್ಲ ಬೇಡ ಬಾ ನೀನು ಸಾಗರ ತೀರದ ಆಸೆಯ ಬಿಟ್ಟು ಮರಳ ಗೋಪುರ ನಿಲ್ಲುವುದಿಲ್ಲ ಬಂದುಬಿಡು ನೀನು ಕಟ್ಟೋ ಣ ನಾವು ನಮ್ಮೂರ ಚಂದದ ಕೆರೆಯಂಚಿನಲ್ಲಿ ಮಣ್ಣಿನಾ ಗೋಪುರವ ಶೃಂಗರಿಸೋಣ ಕನಸುಗಳ ಬಣ್ಣ ಬಣ್ಣದ ಚಿತ್ತಾರಗಳಿಂದ ಏಕೆಂದರೆ ಯಾವ ಅಲೆಗಳ ಭಯವೂ ಇಲ್ಲಿಲ್ಲ....
ಅಷ್ಟಿಷ್ಟು ಹೊತ್ತು ಅಲೆಗಳ ಅಬ್ಬರವಿಲ್ಲದ ಶಾಂತ ಸಾಗರ... ಮತ್ತೆ ಅದೆಷ್ಟೋ ಹೊತ್ತು ಬರೀ ಅಲೆಗಳ ಅಬ್ಬರ, ದಂಡೆಗೆ ಪಿಸುಮಾತ ಹೇಳಿ ಓಡಿ ಹೋಗುವ ಲೆಕ್ಕವಿಲ್ಲದಷ್ಟು ಆ ಅಲೆಗಳು.. ಅಂಥ ಅದೆಷ್ಟೋ ಅಲೆಗಳು ಬಂದು ಹೋದರೂ ಅಳಿಸಿಹೋಗದ ಅದೆಷ್ಟೋ ಹೆಜ್ಜೆ ಗುರುತುಗಳು... ಇದೆಂಥ ಸಾಗರ ತೀರಾ? ಅಲ್ಲ ಅದು ಸಾಗರ ತೀರವಲ್ಲ!! ಅದು ನನ್ನ ಮನಸ್ಸು!! _________ ***___________ ನನ್ನದು ಕಲ್ಲು ಹೃದಯವೆಂದು ನೀ ಹೇಳಿದೆಯಲ್ಲ ಅದು ಹಾಗಲ್ಲವೋ ಹುಡುಗಾ.. ಪ್ರೀತಿಯೆಂಬುದು ನನ್ನ ಮನಸ್ಸಿನಲ್ಲಿ ಇನ್ನೂ ಮೊಗ್ಗಾಗಿದ್ದಾಗ ಅದೆಲ್ಲಿ ನಲುಗಿ ಹೋಗುವುದೋ ಎಂದು ನಾ ರಕ್ಷಿಸುತ್ತಿದ್ದ ಪರಿ ಅದು ಅಷ್ಟೂ ಅರಿಯದ ನೀನು ನನ್ನ ಪ್ರೀತಿಯ ಮೊಗ್ಗು ಅರಳಿ ಹೂವಾಗುವ ಮುನ್ನವೇ ಚಿವುಟಿಹಾಕಿದೆಯಲ್ಲೋ ಹುಡುಗಾ.... _________ ***___________ ಅಲ್ಲಿ ಅವಳು ಇರಲಿಲ್ಲ ಅಲ್ಲಿ ಅವನೂ ಇರಲಿಲ್ಲ.... ಆದರೆ ಅಲ್ಲಿ ಅವಳ ಕಣ್ಣಿಂದ ಜಾರಿ ಬಿದ್ದ ಹನಿ ಯೊಂದಿತ್ತು....
ಅವನು ಬಿಟ್ಟು ಹೋದ ಅದೆಷ್ಟೋ ನೆನಪುಗಳ ಪರಿಮಳವಿತ್ತು.....