ಅಮ್ಮಂದಿರ ದಿನ ಎಂದಾಗ ಅಮ್ಮನ ಬಗ್ಗೆ ಏನಾದ್ರೂ ಬರೀಬೇಕು ಅನಿಸ್ತು.. ಅಮ್ಮನ ಬಗ್ಗೆ ದೊಡ್ಡ ದೊಡ್ಡ ಪದಗಳನ್ನೆಲ್ಲ ಉಪಯೋಗಿಸಿ ಎಷ್ಟೋ ಜನ ಬರೀತಾರೆ.. ಬರೆದಿದ್ದಾರೆ.. ನಂಗೆ ಹಾಗೇನೂ ಬರೆಯಲು ನೆನಪಾಗುತ್ತಿಲ್ಲ. ಆದರೆ ಒಂದು ಘಟನೆ ಹೇಗೆ "ಅಮ್ಮ" ಎಂಬ ಶಬ್ದದ ಬಗ್ಗೆ "ಅಮ್ಮ" ಎಂಬ ಜೀವದ ಬಗ್ಗೆ ನನ್ನ ಕಣ್ತೆರೆಸಿತು ಅನ್ನುವುದನ್ನು ಬರೆಯಲೇಬೇಕು ಅಂತ ಅನಿಸಿತು.
ಸುಮಾರು ವರ್ಷಗಳ ಹಿಂದೆ.. ಆವಾಗ ನಾನು ಬರೀ ಇನ್ನಿಲ್ಲದ ಕಾರಣಕ್ಕೆ ಅಮ್ಮ ನೊಂದಿಗೆ ಜಗಳವಾಡುತ್ತಿದ್ದೆ. ಬರೀ ಅಮ್ಮನ ಮಾತಿಗೆ ಎದುರಾಡುವುದು.. ಸಿಡುಕುವುದೇ ಸಾಮಾನ್ಯವಾಗಿತ್ತು. ಅದೊಂದು ವಯಸ್ಸೇ ಹಾಗೆನೋ ಅಮ್ಮ ಹೇಳುವುದೆಲ್ಲ ತಪ್ಪು ಅಂತನೇ ಅನಿಸ್ತಿತ್ತು. ಅವತ್ತು ಒಂದಿನ ಹಾಗೇ ಆಯ್ತು ಅಮ್ಮ ನೊಂದಿಗೆ ಚೆನ್ನಾಗಿ ಜಗಳವಾಡಿ ಮುಖ ಊದಿಸಿಕೊಂಡು ಕುಳಿತಿದ್ದೆ. ಅವತ್ತು ನನ್ನ ಅಜ್ಜಿ(ಅಮ್ಮನ ಅಮ್ಮ) ಮನೇಲಿದ್ದರು. ಬಾ ಇಲ್ಲಿ ಏನೋ ಹೇಳಬೇಕು ಅಂತ ಕರೆದರು. ಗೊತ್ತಾಯ್ತು ನಂಗೆ ಅಮ್ಮನ ಹತ್ರ ಜಗಳ ಆದಿದೆನಲ್ಲ ಅದಕ್ಕೆ ಏನೋ ಹೇಳಕ್ಕೆ ಕರೆದರು ಅಂತ ಅವರು ಯಾವತ್ತು ಬಯ್ಯುತ್ತಿರಲಿಲ್ಲ. ಮನಸ್ಸಿಗೆ ನಾಟುವ 2 ತಿಳುವಳಿಕೆ ಮಾತು ಹೇಳುತ್ತಿದ್ದರು. ಅವತ್ತು ಹಾಗೇ ಕೇಳಿದರು ನನ್ನ "ಅಮ್ಮ ಅಂದ್ರೆ ಏನು ಅಂತ ಗೊತ್ತಾ ನಿಂಗೆ?" ಏನು ಹೇಳಬೇಕೋ ಗೊತ್ತಾಗಲಿಲ್ಲ ನನಗೆ.. ನನಗೆ ಗೊತ್ತು ಅಮ್ಮ ಅಂದ್ರೆ ಏನು ಅಂತ ನಿಂಗೆ ಹೇಳಲಿಕ್ಕೆ ಬರುವುದಿಲ್ಲ ಅಂತ ನನ್ನ ಕೇಳು ಹೇಳ್ತೀನಿ. ಭೂಮಿ ಮೇಲೆ ಕಣ್ಣು ಬಿಟ್ಟ ದಿನದಿಂದ ಅಮ್ಮ ನನ್ನು ನೋಡಿಲ್ಲ.. ಅಮ್ಮ ಅಂತ ಅಮ್ಮನನ್ನು ಒಂದು ಸಲವೂ ಕರೆದಿಲ್ಲ. ಅಮ್ಮನ ಮಡಿಲಲ್ಲಿ ಒಂದಿನನೂ ಮಲಗಿಲ್ಲ.. ಅದಕ್ಕೆ ನನಗೆ ಅಮ್ಮನ ಮಹತ್ವ ಗೊತ್ತು.. ನಿಂಗೆ ಗೊತ್ತಿಲ್ಲ ಅಂತ ಅಂದ್ರು. ಅಜ್ಜಿ ಅವರ ಬಾಲ್ಯದ ದಿನಗಳಲ್ಲಿ ಪಟ್ಟ ಕಷ್ಟಗಳನ್ನು ಒಮ್ಮೆ ಯಾವಾಗಲೋ ಅವರ ಬಾಯಲ್ಲೇ ಕೇಳಿದ್ದು ನೆನಪಾಯಿತು. ಅವರ ಮಾತುಗಳು ಮನಸ್ಸಿನ ಮೇಲೆ ಹೇಗೆ ಪರಿಣಾಮ ಮಾಡಿತು ಅಂದ್ರೆ ನಾನು ಅಮ್ಮನ ಜೊತೆ ಅಷ್ಟು ದಿನ ನಡೆದುಕೊಂಡಿದ್ದೆಲ್ಲ ನೆನಪಿಸಿಕೊಂಡು ಸುಮಾರು ಹೊತ್ತು ಜೋರಾಗಿ ಅತ್ತೆ. ಆವಾಗಲೆ ನಿರ್ಧಾರ ಮಾಡಿದೆ ಇನ್ನೆಂದೂ ಅಮ್ಮಂಗೆ ನೋವಾಗುವ ಹಾಗೆ ನಡೆದುಕೊಳ್ಳಬಾರದು ಅಂತ...
ಅಮ್ಮ ಯಾವಾಗಲೂ ಹೇಳಿಕೊಡ್ತಿದ್ಲು ನಮಗೆ " ನಮ್ಮಿಂದ ಇನ್ನೊಬ್ಬರನ್ನು ಸಂತೋಷಪಡಿಸಲು ಸಾಧ್ಯವಿಲ್ಲದಿದ್ದರೂ ತೊಂದರೆಯಿಲ್ಲ ಆದರೆ ನಮ್ಮಿಂದ ಬೇರೆಯವರಿಗೆ ನೋವಾಗದಂತೆ ನಡೆದುಕೊಳ್ಳುವುದು ನಮ್ಮ ಕಯ್ಯಲ್ಲೇ ಇದೆ ನಾವು ಹಾಗೇ ಇರಬೇಕು ಕೂಡ " ಅಂತ ಅದನ್ನೇ ನಾನು ಪಾಲಿಸುತ್ತಿದ್ದೇನೆ ಇವತ್ತಿಗೂ. ಅಮ್ಮನ ವಿಷ್ಯದಲ್ಲಿ ಕೂಡ. ಅವತ್ತಿನಿಂದ ಅಮ್ಮ ನೊಂದಿಗೆ ಒಂದೊಂದು ಮಾತು ಆಡುವಾಗಲೂ ಯೋಚಿಸುತ್ತೇನೆ ಅಮ್ಮನಿಗೆ ಏನಾದ್ರೂ ಬೇಜಾರಾಗಬಹುದ ಹೀಗೆ ಹೇಳಿದರೆ ಅಂತ.. ಒಂದೊಂದು ಸಲ ಹಾಗೆ ಅನ್ನಿಸಿದರೆ ಅಮ್ಮನನನ್ನು ಸಮಾಧಾನಿಸುತ್ತೇನೆ ಹೋಗಿ ..ನಾನು ಹಾಗಲ್ಲ ಹೇಳಿದ್ದು ಹೀಗೆ ಹೀಗೆ ಅಂತ.. ಅಮ್ಮ ಖುಷಿಯಾಗಿರೋದನ್ನ ನೋಡೋದೇ ಖುಷಿ. ಅಷ್ಟೆಲ್ಲಾ ಹೇಳಿ ನನ್ನ ಕಣ್ಣು ತೆರೆಸಿದ ಅಜ್ಜಿ ನಮ್ಮನ್ನು ಬಿಟ್ಟು ಹೋಗಿ 5-6 ವರ್ಷಗಳೇ ಆಯಿತು.. ಆದರೂ ಅವರಂದು ಆಡಿದ ಮಾತುಗಳು ಇನ್ನೂ ನನ್ನ ಮನಸ್ಸಿನಲ್ಲಿ ಹಾಗೇ ಇವೆ. ಅಮ್ಮ ಇಂದಿಗೂ ಅವರನ್ನು (ಅಮ್ಮನ ಅಮ್ಮ) ನೆನೆಸಿಕೊಂಡು ಕಣ್ಣೀರು ಹಾಕಿದ್ದನ್ನು ಎಷ್ಟೋ ಸಲ ನೋಡಿದ್ದೇನೆ. ಅಮ್ಮ ಅಂದರೇ ಹಾಗೆ. ನಮ್ಮ ನೋವಿಗೆ ಕಣ್ಣೀರಿದುವವಳು ನಮ್ಮ ಖುಷಿಯಲ್ಲೇ ಖುಷಿ ಕಾಣುವವಳು. ಅದಕ್ಕೆ ಅಮ್ಮಂದಿರ ದಿನಕ್ಕೆ ಅಂತ ಈ ಬರವಣಿಗೆ ಅಮ್ಮನಿಗೆ ಒಂದು ಪ್ರೀತಿಯ ಕಾಣಿಕೆ.
ಮುಗಿಸುವ ಮುನ್ನ,
ನಾನು ಚಿಕ್ಕವಳಾಗಿದ್ದಾಗ ಅಮ್ಮನಿಗೆ ಅಂತ ಬರೆದ ಒಂದು ಪದ್ಯ ಇವತ್ತು ಯಾಕೋ ನೆನಪಾಗುತ್ತಿದೆ. ಇದೂ ಅಮ್ಮನಿಗಾಗಿ
ಅಮ್ಮ ನಿನ್ನ ಹೊಗಳಲು
ಯಾವ ಪದವ ಹುಡುಕಲಿ?
ಅಮ್ಮ ನಿನ್ನ ಮಮತೆ ಪ್ರೀತಿಯ
ಹೇಗೆ ತಾನೆ ಮರೆಯಲಿ?
ಅಮ್ಮ ನಿನ್ನ ಮಡಿಲದು
ಪ್ರೀತಿ ಸುಧೆಯ ಕಡಲು.
ಅಮ್ಮ ನಿನ್ನ ಮಡಿಲದು
ಸ್ವರ್ಗಕಿಂತ ಮಿಗಿಲು.
ಅಮ್ಮ ನಿನ್ನ ನುಡಿಗಳು
ಹಾಲು ಜೇನ ಸಂಗಮ.
ಅಮ್ಮ ನಿನ್ನ ಮೊಗವದು
ಹುಣ್ಣಿಮೆಯ ಚಂದ್ರಮ.
ಅಮ್ಮ ನೀನು ಸನಿಹವಿರಲು
ಜಗವನ್ನೇ ಮರೆವೆನು.
ಅಮ್ಮ ನಿನ್ನ ಜೊತೆಯಿರಲು
ಜಗವನ್ನೇ ಗೆ
ಮುಂದಿನಾ ಜನುಮವಿರಲು
ನಿನ್ನ ಕಂದನಾಗೇ ಬರುವೆನು.
ಮತ್ತೆ ನಿನ್ನ ಜೊತೆಯಿರಲು
ಹರುಷದಲ್ಲಿ ಕುಣಿವೆನು.
1 comment:
nice one..
ಇನ್ನೊಂದು ಜನ್ಮ ಇರುವುದಾದರೆ,
ನನಗೆ ಅಮ್ಮನ ಅಮ್ಮನಾಗುವ ಆಸೆ!
Post a Comment