"ಸಂಜೆ ಆಗ್ತಾ ಬಂತು ಮಳೆ ಬೇರೆ ಬರೋ ಹಾಗಿದೆ. ಇಷ್ಟು ಹೊತ್ತಲ್ಲಿ ಹೋಗೋದು ಬೇಕಾ? ನಾಳೆ ಹೋಗಿ ಪುಸ್ತಕ ತಂದರೆ ಆಗೋದಿಲ್ವಾ ಚಿನ್ನು?" ಚಿನ್ಮಯಿಯ ಅಮ್ಮ ಕೇಳಿದರು.
"ಇಲ್ಲ ಅಮ್ಮ.. ಎಷ್ಟು ಹೊತ್ತೂ ಇಲ್ಲ ಬೇಗ ಬಂದು ಬಿಡ್ತೀನಿ." ಮೊದಲ ಬಾರಿ ಅಮ್ಮನ ಹತ್ತಿರ ಸುಳ್ಳು ಹೇಳಿ ಹೊರಟವಳಿಗೆ ಯಾಕೋ ಸರಿ ಅನ್ನಿಸಲಿಲ್ಲ.
"ಅಮ್ಮ ಮಧು ಬಂದಿದ್ದಾನೆ ಅಮ್ಮ ಆದರೆ ಹಾಗೇ ಒಂದು ಸಲ ಹೋಗಿ ಮಾತಾಡಿಸಿಕೊಂಡು ಬರ್ತೀನಮ್ಮ"
"ಅಲ್ವೇ ಚಿನ್ನು ಮ..."..
ಅಮ್ಮ ಹೇಳುತ್ತಿದ್ದ ಮಾತುಗಳೊಂದೂ ಕೇಳಲೇ ಇಲ್ಲ ಚಿನ್ಮಯಿಗೆ... ಅವಳಾಗಲೇ ಮನೆಯ ಅಂಗಳ ದಾಟಿ ರಸ್ತೆಯಲ್ಲಿದ್ದಳು.
********************
ಚಿನ್ಮಯಿ ಮಧು ಬಾಲ್ಯದ ಸ್ನೇಹಿತರು. ಮಧು ಚಿನ್ಮಯಿಗಿಂತ 3-4 ವರ್ಷಕ್ಕೆ ದೊಡ್ಡವನು. ಚಿನ್ಮಯಿ ಮಧುವಿನ ಬೆರಳು ಹಿಡಿದೆ ನಡೆಯಲು ಕಲಿತವಳು. ಒಟ್ಟಿಗೆ ಆಡಿ ಬೆಳೆದವರು.
ಸ್ನೇಹಕ್ಕೂ ಮಿಗಿಲಾದ ಸುಂದರ ಸಂಬಂಧ ಅವರದಾಗಿತ್ತು. 2 ವರ್ಷಗಳ ಹಿಂದೆ ಯಾರೋ ಹೇಳಿದ ಯಾವುದೋ ಮಾತಿಗೆ ಇಬ್ಬರ ನಡುವೆ ಅದೇನು ಮಾತುಕತೆಯಾಯ್ತೋ ಕೊನೇಲಿ ಒಂದೇ ಒಂದು ಮಾತು ಹೇಳಿ ಎದ್ದು ಹೋಗಿದ್ದ ಮಧು " ನಿನ್ನಿಂದ ನನಗೆ ಬರೀ ನೋವು ಒಂದೇ ಸಿಕ್ಕೋದು ಕಣೇ "
ಮಧು ಹೇಳಿದ ಮಾತುಗಳಾ ಅವು ಅಂತ ತನ್ನನ್ನೇ ತಾನು ನಂಬದವಳಂತೆ ನಿಂತು ಬಿಟ್ಟಿದ್ದಳು ಚಿನ್ಮಯಿ. ಅದಾದ ಮೇಲೆ ಅವನು 6 ತಿಂಗಳು ಬೆಂಗಳೂರಿಂದ ಮನೆಗೇ ಬರಲಿಲ್ಲ. ಮೊದಲಾದರೆ ತಿಂಗಳಿಗೆ ಒಂದು ಸಲವಾದರೂ ಬಂದು ಹೋಗಿರುತ್ತಿದ್ದ. ದಿನವೂ ಫೋನ್ ಮಾಡುತ್ತಿದ್ದ. 6 ತಿಂಗಳ ನಂತರ ಮಧು ಅಮೇರೀಕಾ ಗೆ ಹೋಗಿದ್ದು ಗೊತ್ತಾಯಿತು. ಒಂದು ದಿನದ ಮಟ್ಟಿಗೆ ಊರಿಗೆ ಬಂದವನು ಇವಳಿಗೊಂದು ಮಾತೂ ಹೇಳದೇ ಹೋಗಿದ್ದು ಅವಳಿಗೆ ಇನ್ನೂ ನೋವುಂಟು ಮಾಡಿತ್ತು.
2 ವರ್ಷಗಳ ನಂತರ ಇವತ್ತೇ ಅವನ ಧ್ವನಿ ಕೇಳಿದ್ದು. ಬೆಳಿಗ್ಗೆ ಫೋನ್ ರಿಂಗ್ ಆದಾಗ ಅತ್ತಲಿಂದ ಮಧುವಿನ ಧ್ವನಿ ಕೇಳಿತ್ತು." ನಾನು ಚಿನ್ನು ಮಧು. ಸಂಜೆ ಕೆರೆ ಹತ್ರ ಸಿಗ್ತೀಯಾ ಮಾತಾಡಬೇಕು". ಇವಳು ಹೂಂ ಅನ್ನುವಷ್ಟರಲ್ಲಿ ಫೋನ್ ಇಟ್ಟುಬಿಟ್ಟಿದ್ದ. ಮಧುವಿನೊಂದಿಗೆ ಮತ್ತೆ ಮಾತಾಡೋದು ಕನಸೇ ಅಂತ ಅಂದುಕೊಂಡಿದ್ದಳು. ಆದರೆ ಇವತ್ತು.. ಇದು ನಿಜವೇ ಅವಳಿಗೆ ನಂಬಲಿಕ್ಕಾಗುತ್ತಿಲ್ಲ....
***************************************
ಕೆರೆಯ ನೀರಿಗೆ ತಾಗುವಂತಿದ್ದ ಆ ಕಲ್ಲಿನ ಮೇಲೆ , ಕೆರೆಯ ನೀರಲ್ಲಿ ಕಾಲು ಇಳಿಬಿಟ್ಟು ಕುಳಿತಿದ್ದ ಮಧು. ಪ್ರಶಾಂತವಾಗಿ ನಿಂತಿದ್ದ ನೀರಿಗೆ ಒಂದು ಕಲ್ಲು ಎಸೆದ. ಎದ್ದ ಆ ಅಲೆಗಳನ್ನು ನೋಡಿದ.. ತನ್ನ ಮನಸ್ಸೂ ಹೀಗೇ ಕಲ್ಲೆಸೆದ ಕೊಳವಾಗಿದೆಯಾ ಅನ್ನಿಸಿತು ಅವನಿಗೆ. ಅವತ್ತು ತಾನು ಅವಳೊಂದಿಗೆ ಕಡೆಯದಾಗಿ ಮಾತಾಡಿದ ಗಳಿಗೆ ನೆನಪಾಯಿತು. ತಾನು ಅವತ್ತು ಅಷ್ಟು ಬೇಜಾರಾಗಿ ಹೋಗಬೇಕಾದರೆ ಒಂದು ಮಾತು ಹೇಳಲಿಲ್ಲವಲ್ಲ ಅವಳು ಹೋಗಬೇಡವೋ ಅಂತ.. ಅದು ಹೇಗೆ ಅಂದು ಬಿಟ್ಟಳು. "ಸರಿ ಹೋಗು ಹಾಗಾದರೆ ನನ್ನಿಂದ ದೂರ" ಅಂತ.
ಅವಳೀಲ್ಲದೇ ತಾನು ಎಷ್ಟು ಕಷ್ಟ ಪಟ್ಟೆ 2 ವರ್ಷ. ಅವಳನ್ನೊಂದೇ ಅಲ್ಲ ಅವಳ ನೆನಪನ್ನೂ ಮರೆಯಬೇಕೆಂದೇ ಅಲ್ಲವೇ ತಾನು ಅಷ್ಟು ದೂರ ಹೋಗಿದ್ದು. ಆದರೆ ತನ್ನಿಂದ ಅದು ಒಂಚೂರು ಸಾಧ್ಯವಾಗಲೆ ಇಲ್ಲ. ಅದಕ್ಕಾಗಿಯೇ ಓಡೋಡಿ ಬಂದಿದ್ದಲ್ಲವೇ ಅವಳನ್ನು ಕಾಣಲು. ಅವಳಿಗೆ ಒಂದಿನವೂ ನನ್ನ ನೆನಪಾಗಲಿಲ್ಲವೇ? ಪ್ರತಿ ಸಲ ಸಣ್ಣ ಪುಟ್ಟ ವಿಚಾರಾಕ್ಕೆಲ್ಲ ಜಗಳವಾಡಿದಾಗ ತಾನೆ ಅಲ್ಲವೇ ರಾಜಿಯಾಗುತ್ತಿದ್ದಿದ್ದು. ಈ ಒಂದು ಸಲ ಅವಳು ತನ್ನನ್ನು ಮಾತಾದಿಸಬಹುದಿತ್ತಲ್ಲ. ತಾನು ಅಲ್ಲಿಂದ ಓಡೋಡಿ ಬಂದು ಬಿಡುತ್ತಿದ್ದೆ. ಎಲ್ಲವನ್ನೂ ಇವತ್ತು ಕೇಳಬೇಕು ಅವಳ ಹತ್ರ ಅಂದುಕೊಂಡ ಮಧು. ಅವಳಿಲ್ಲದೇ ತಾನು ಕಷ್ಟ ಪಟ್ಟಿದ್ದನ್ನು ಹೇಳಬೇಕು, ಅವಳೆಂದರೆ ಎಷ್ಟು ಇಷ್ಟ ತನಗೆ ಅನ್ನೋದನ್ನ ಹೇಳಬೇಕು, ಅವತ್ತು ರಾಮಣ್ಣನ ಮಗಳ ಮದುವೆಯಲ್ಲಿ ಅವಳು ಕಡು ಹಸಿರು ಬಣ್ಣದ ಚಿಕ್ಕ ಜರಿಯಂಚಿನ ಸೀರೆಯಲ್ಲಿ ಅದೆಷ್ಟು ಮುದ್ದಾಗಿ ತನ್ನ ಕಣ್ಣಿಗೆ ಕಂಡಿದ್ದು, ಎಲ್ಲಾ ಎಲ್ಲಾ ಹೇಳಿಬಿಡಬೇಕು ಇವತ್ತು....
***************************************************
ತೋಟದ ದಾರಿಯಲ್ಲಿ ನಡೆದು ಬರುತ್ತಿದ್ದ ಚಿನ್ಮಯಿಗೆ ಇವತ್ತು ಏಕೋ ಎಷ್ಟು ನಡೆದರೂ ದಾರಿ ಕ್ರಮಿಸುತ್ತಲೇ ಇಲ್ಲವೇನೋ ಅನ್ನಿಸುತ್ತಿತ್ತು. ಅವತ್ತು ಹಾಗೆ ಹೇಳಿ ಹೋದವನು ಇವತ್ತೇ ಮಾತಾಡಿದ್ದು. ಅವತ್ತು ಹಾಗೆ ಹೇಳಲು ಮನಸ್ಸಾದರೂ ಹೇಗೆ ಬಂತು ಅವನಿಗೆ? ನನ್ನಿಂದ ಬರೀ ನೋವೇ ಅಂತೆ ಅವನಿಗೆ... ಯಾಕೆ ಹಾಗೆ ಹೇಳಬೇಕಿತ್ತು?. ನಂಗೆ ಅದರಿಂದ ಎಷ್ಟು ಬೇಜಾರಾಯಿತು ಅನ್ನೋದು ಅವನಿಗೆ ಒಂದಿನವಾದರೂ ಅನ್ನಿಸಲಿಲ್ಲವ? ಅದೊಂದು ಮಾತು ಅವನು ಆಡದಿದ್ದರೆ ತಾನೆ ಹೋಗಿ ಅವನೊಟ್ಟಿಗೆ ಮಾತಾಡಿರುತ್ತಿದ್ದೆ..ಇಷ್ಟೆಲ್ಲಾ ಆಗುತ್ತಿತ್ತ ? ಅವನು ಇಲ್ಲಿಂದ ಹೋದ ಮೇಲೆ ತಾನೆಷ್ಟು ಕಷ್ಟಪಟ್ಟೆ.. ಬರೀ ಸ್ನೇಹವಿದ್ದ ಲ್ಲಿ ಪ್ರೀತಿಯೆಂಬುದು ಚಿಗುರೊಡೆಯುತ್ತಾ ಇತ್ತು ತನ್ನ ಮನಸ್ಸಲ್ಲಿ ಅನ್ನೋದು ಅವನು ಹೋದ ಮೇಲೆ ತಾನೆ ತನಗೆ ಗೊತ್ತಾಗಿದ್ದು..
ಅವನಾದರೋ ಒಂದು ಸಲ ತನ್ನೊಡನೆ ಮಾತಾಡಬಹುದಿತ್ತಲ್ಲ.. ಯಾಕೆ ಹಾಗೆ ಮಾಡಿದ?.. ಕೇಳಬೇಕು ಇವತ್ತು ಅವನನ್ನು.. ಆದರೆ ಇವತ್ತು ಯಾವುದಕ್ಕೂ ಅವನೆದುರಿಗೆ ಅಳಲೇ ಬಾರದು. ಎಷ್ಟು ಬಯ್ಯುತ್ತಿದ್ದ ಅವನು ನಾನು ಅತ್ತಾಗಲೆಲ್ಲ . ಅವನಿಗೆ ತನ್ನಲ್ಲಿ ಚೂರೂ ಇಷ್ಟವಾಗದಿದ್ದು ಅದೊಂದೇ.. ಇವತ್ತು ಏನಾದರೂ ಅಳಲೇಬಾರದು ಅಂದುಕೊಂಡಳು..ಮನಸ್ಸಿನಲ್ಲಿರೋ ಮಾತೆಲ್ಲ ಹೇಳಿಬಿಡಬೇಕುಇವತ್ತು... ಎಲ್ಲ ಎಲ್ಲ ಹೇಳಿಬಿಡಬೇಕು ಅಂದುಕೊಂಡಳು.
*****************************
ಕೆರೆಯಲ್ಲಿ ಕಾಲು ಇಳಿಬಿಟ್ಟು ಕುಳಿತಿದ್ದ ಮಧು ಗೆ ಚಿನ್ಮಯಿ ಬಂದಿದ್ದು ಅವಳ ಗೆಜ್ಜೆ ಸದ್ದಿನಿಂದಲೇ ಗೊತ್ತಾಯಿತು,, ಒಂದು ಹಂತದವರೆಗೆ ಬಂದ ಸದ್ದು ಅಲ್ಲೇ ನಿಂತುಬಿಟ್ಟಿತಲ್ಲ.. ಮಧು ಯೋಚಿಸುತ್ತಿದ್ದ.. ಮಧು ಅಲ್ಲಿ ಕುಳಿತಿದ್ದನ್ನು ಚಿನ್ಮಯಿ ನೋಡಿದಳು.. ಅಲ್ಲೇ ತಾನೆ ತಾವಿಬ್ಬರೂ ಯಾವಾಗಲೂ ಕುಳಿತುಕೊಳ್ಳುತ್ತಿದ್ದಿದ್ದು.. ಅವನು ಇಷ್ಟೂ ಬದಲಾಗಿಲ್ಲ ಇವತ್ತೂ ನನ್ನ ಜಾಗದಲ್ಲಿ ಕುಳಿತಿದ್ದಾನೆ. ಯೋಚಿಸಿ ನಗು ಬಂತು ಅವಳಿಗೆ. ಮಧು ಕುಳಿತಲ್ಲೇ ಪಕ್ಕದಲ್ಲಿ ಒಂದು ಕಲ್ಲಿತ್ತು. ಅಲ್ಲಿ ಕುಳಿತರೆ ಪುಟ್ಟದಾಗಿದ್ದ ಚಿನ್ಮಯಿಗೆ ಕೆರೆಯ ನೀರಲ್ಲಿ ಕಾಲು ಇಳಿಬಿಟ್ಟು ಕೂರಲು ಆಗುತ್ತಿರಲಿಲ್ಲ. ಮಧು ಬೇಕಂತಲೇ ಅವಳನ್ನು ಗೋಳಾಡಿಸಲು ಮೊದಲು ಓಡಿ ಹೋಗಿ ತಗ್ಗಿದ್ದ ಜಾಗದಲ್ಲಿ ಕೂತುಬಿಡುತ್ತಿದ್ದ. ಅದಕ್ಕಾಗಿ ಇಬ್ಬರೂ ಕಿತ್ತಾಡುತ್ತಿದ್ದರು. ಯೋಚಿಸುತ್ತಾ ಅಲ್ಲೇ ನಿಂತುಬಿಟ್ಟಳು ಚಿನ್ಮಯಿ .
ಹೆಜ್ಜೆಯ, ಗೆಜ್ಜೆಯ ಸದ್ದು ಅಲ್ಲೇ ನಿಂತಾಗ ಮಧು ಹಿಂತಿರುಗಿದ. "ಯಾಕೆ ಅಲ್ಲೇ ನಿಂತೆ ಚಿನ್ನು ಬಾ ಕೆಳಗೆ"
ಚಿನ್ಮಯಿ ಕೆಳಗಿಳಿದು ಹೋಗಿ ಕಲ್ಲಿನ ಮೇಲೆ ಕುಳಿತಳು. "ಹೇಗಿದೀಯಾ ಮಧು"? ಉಲಿದಳು ಚಿನ್ಮಯಿ . " ಹೂಂ ಇದೀನಿ ಹೀಗೆ.. ನೀನು?" ಅಂತ ಮಧು ಅಂದಾಗ ಚಿನ್ಮಯಿ "ಹೂಂ" ಅಷ್ಟೇ ಅಂದಳು.
ಅಷ್ಟೇ ಆಮೇಲೆ ಇಬ್ಬರಿಗೂ ಮಾತೇ ಹೊರಡಲಿಲ್ಲ.. ಮಧು ಕತ್ತೆತ್ತಿ ಮೇಲೆ ನೋಡಿದ ಆಗಸದಲ್ಲೆಲ್ಲ ಕಪ್ಪನೆಯ ಮೋಡ ಕಟ್ಟಿತ್ತು. ಅವಳೂ ಮೇಲೆ ನೋಡಿದಳು.. ಎಷ್ಟೊಂದು ಮೋಡ ಕವಿದಿದೆ ಆಗಸದಲ್ಲಿ.. ನಮ್ಮ ಮನಸ್ಸಲ್ಲೂ ಕೂಡ ಅಂದುಕೊಂಡಳು.
ಅದೆಷ್ಟೋ ಹೊತ್ತು ಹಾಗೆ ಕುಳಿತಿದ್ದರು ಇಬ್ಬರೂ. ಮನಸ್ಸಿನ ಮಾತುಗಳಿಗೆ ಮೌನದ ಬೇಲಿ ಹಾಕಿದಂತಿತ್ತು.. ಅಥವಾ ಆ ಮೌನದಲ್ಲೇ ಇಬ್ಬರಿಗೂ ಅವರವರ ಮನಸ್ಸಿನಲ್ಲಿದ್ದುದು ಗೋಚರವಾಗಿತ್ತೋ? ಚಿನ್ಮಯಿ ತನ್ನ ಡ್ರೆಸ್ ನ ಮೇಲಿದ್ದ ಹೊಳೆಯುವ ಟಿಕ್ಕೆಗಳಿಗಿದ್ದ ದಾರದೊಡನೆ ಆಡುತ್ತಿದ್ದಳು. ಸ್ವಲ್ಪ ಹೊತ್ತು ಅದನ್ನೇ ನೋಡಿದ ಮಧು " ಅದೆಂಥ ಮಾಡುತ್ತಿದ್ದೀಯಾ ಆವಾಗಿಂದ ? ಹಳೆ ಚಾಳಿ ಇನ್ನೂ ಬಿಟ್ಟಿಲ್ಲ. ನಿನ್ನ ಕೈಗೆ ಸುಮ್ಮನಿರಲು ಬರೋದಿಲ್ವ? ಅಂದ.
ಚಕ್ಕನೆ ಅವನತ್ತ ತಿರುಗಿ ನೋಡಿದ ಚಿನ್ಮಯಿ " ನೀನು ಮಾತ್ರ ನನ್ನ ಜಾಗದಲ್ಲಿ ಕುಳಿತು ನನ್ನ ಮೇಲೆ ಕೂರೋ ಹಾಗಿ ಮಾಡಿದೀಯಾ. ನಿನ್ನ ಹಳೆ ಚಾಳಿ ಎಲ್ಲಿ ಬಿಡ್ತೀಯ" ಅಂದಳು. ಇಬ್ಬರೂ ಜೋರಾಗಿ ನಕ್ಕರು. ಮತ್ತೆ 2 ನಿಮಿಷಕ್ಕೆ ಅದೇ ಮೌನ.
ಚಿನ್ಮಯಿ ತನ್ನ ಕೈ ಮೇಲೆ ಬಿದ್ದ ನೀರ ಹನಿಯನ್ನು ನೋಡಿ ತಲೆಯೆತ್ತಿ ಮಧು ಮುಖ ನೋಡಿದಳು. ಅವನ ಕಣ್ಣಲ್ಲಿ ನೀರು. "ಏನು ಇದು ಮಧು ಇವತ್ತು ನೀನು ನನ್ನ ತರಹ ಆಗಿದೀಯಾ?. ನಿನ್ನ ಕಣ್ಣಲ್ಲಿ ನೀರು ಉಹೂಂ ನೋಡೋಕ್ಕಾಗಲ್ಲ ಸುಮ್ಮನಿರು" ಮಧು ಏನೋ ಹೇಳಲು ಹೋರಾಟಾಗ ಚಿನ್ಮಯಿ ತಡೆಡಳು. " ಬೇಡ ಮಧು ಏನೂ ಹೇಳೋದು ಬೇಡ. ನೀನು ಹೇಳದೆಯೇ ನಂಗೆಲ್ಲ ಅರ್ಥ ಆಯ್ತು ಕಣೋ. ನಾ ಏನು ನಿನ್ನ ಇವತ್ತಾ ಮೊದಲು ನೋಡ್ತೀರೋದು" ಇಷ್ಟು ಹೇಳುವಷ್ಟರಲ್ಲಿ ಅವಳ ಗಂಟಲುಬ್ಬಿ ಬಂದಿತ್ತು. ಆದರೂ ತಡೆ ಹಿಡಿಡಳು. ಅಳಬಾರದೆಂದು ಆಗಲೇ ನಿರ್ಧರಿಸಿದ್ದಳಲ್ಲ. ಅವನು ಅವಳನ್ನು ನೋಡಿ ಮುಗುಳ್ನಕ್ಕ. ಹಿತವಾದ ತಂಗಾಳಿಯೊಂದು ಬೀಸಿತು. ನೋಡ ನೋಡುತ್ತಿದ್ದಂತೆಯೇ ಕಟ್ಟಿದ್ದ ಕರಿ ಮೋಡವೆಲ್ಲ ಕರಗಿ ದಪ್ಪ ದಪ್ಪ ಮಳೆ ಹನಿಗಳು ಬೀಳಲಾರಂಭಿಸಿದವು. ಚಿನ್ಮಯಿ ಅವನು ಹಿಡಿದಿದ್ದ ಕೈ ಬಿಡಿಸಿಕೊಂಡು ಮೇಲೆದ್ದು ಓಡಿದಳು.
ಮಧು ಕೂಗಿದ " ಏ ಚಿನ್ನು ನಿಲ್ಲು ಕೊಡೆ ಬಿಡಿಸುತ್ತೇನೆ ಮಳೆಯಲ್ಲಿ ನೆನೆಯೋದು ಬೇಡ ನೀನು" ಅವಳಾಗಲೇ ಓಡಿ ಮೇಲೆ ಹೋಗಿಯಾಗಿತ್ತು. ಹೇಳಿದ ಮಾತನ್ನು ಯಾವಾಗಾದರೂ ಕೇಳುತ್ತಾಳ ಇವಳು ಅಂದುಕೊಂಡು ತಾನೂ ಮೇಲೆದ್ದ ಕೊಡೆಯನ್ನು ಬಿಡಿಸುತ್ತಾ. ಚಿನ್ಮಯಿ ಹೋದ ದಿಕ್ಕಿಗೆ ನೋಡಿದ. ಅವಳು ತನ್ನೆರಡೂ ಕೈಗಳನ್ನು ಮಳೆ ಹನಿಗಳತ್ತ ಚಾಚಿ ಕುಣಿಯುತ್ತಿದ್ದಳು. ಅದಾಗಲೇ ಅವಳ ಕಣ್ಣಲ್ಲಿ ತುಂಬಿಕೊಂಡಿದ್ದ ಕಣ್ಣ ಹನಿಗಳೆಲ್ಲ ಮಳೆ ಹನಿಗಳೊಂದಿಗೆ ಕಂಡೂ ಕಾಣದಂತೆ ಬೆರೆತು ಹೋಗಿದ್ದವು. ಮಳೆ ಹನಿಗಳೊಂದಿಗೆ ಆಡುತ್ತಿದ್ದ ಅವಳನ್ನು ನೋಡಿ ಅವನಿಗೆ 6-7 ವರ್ಷಗಳ ಪುಟ್ಟ ಹುಡುಗಿ ಚಿನ್ಮಯಿ ನೆನಪಾದಳು. ಆವಾಗಲೂ ಹೀಗೆ ಇದ್ದಳು ಈಗಲೂ ಹಾಗೆ. ಒಂಚೂರೂ ಬದಲಾಗಿಲ್ಲ ಅಂದುಕೊಂಡ ಮಧು. ಅವಳು ಅಂದು ಹೇಳಿದ್ದ ಮಾತುಗಳು ನೆನಪಾದವು " ಜನ ಬದಲಾಗುತ್ತಾರೋ ಮಧು. ಆದರೆ ನಾನು ಹಾಗಲ್ಲ ಯಾವತ್ತೂ ಬದಲಾಗೋದಿಲ್ಲ ಹೀಗೆ ಇರ್ತೀನಿ ಯಾವಾಗಲೂ" ಅವಳು ಹೇಳಿದ್ದು ನಿಜ ಅನ್ನಿಸಿತು ಅವನಿಗೆ.
ಕೂಗಿ ಕರೆದ ಅವಳನ್ನು" ಸಾಕು ಬಾ ಚಿನ್ನು ಮನೆಗೇ ಹೋಗೋಣ. ಸಂಜೆ ಬರುವಾಗ ಅಮ್ಮನಿಗೆ ಹೇಳಿದ್ದೆ ಚಿನ್ನುನ ಕರ್ಕೊಂಡು ಬರ್ತೀನಂತ. ಅದಕ್ಕೆ ಅಮ್ಮ ಹಲಸಿನ ಹಣ್ಣಿನ ಕಡುಬು ಮಾಡುತ್ತೇನೆ. ಬೇಗ ಕರೆದುಕೊಂಡು ಬಾ ಅವಳಿಗೆ ತುಂಬಾ ಇಷ್ಟ ಅದು ಅಂದಳು" ಪುಟ್ಟ ಹುಡುಗಿಯಂತೆ ಓಡಿ ಬಂದಳು ಚಿನ್ಮಯಿ
" ಹಲಸಿನ ಹಣ್ಣಿನ ಕಡುಬು.. ನಡಿಯೋ ಬೇಗ.. ಬಿಸಿ ಆರೋಗಿದ್ರೆ ಕಷ್ಟ" ಅಂದ ಅವಳ ತಲೆ ಮೇಲೊಂದು ಕುಟ್ಟಿದ ಮಧು " ಆವಾಗಿಂದ ಅಷ್ಟು ಕರೆದರೂ ಬಾರದವಳು ಕಡುಬು ಅಂದ ತಕ್ಷಣ ಬಂದಿದ್ದು ನೋಡು"
"ಹೇ ನಂಗೆ ತಲೆ ಮೇಲೆ ಹೊಡೆದರೆ ಸಿಟ್ಟು ಬರುತ್ತೆ. ತಲೆಗೆ ಹೊಡೀಬೇಡ ಅಂತ ಎಷ್ಟು ಸಾರಿ ಹೇಳಿದ್ದೆ ನಿಂಗೆ?" ಅವನಿಂದ ಅಷ್ಟು ದೂರ ಹೋಗಿ ನಿಂತಳು.
" ಅಯ್ಯೋ ತಪ್ಪಾಯ್ತು ಬಾ ಈಗ, ಬೇಗ ಬೇಗ ನಡಿ ಕಡುಬು ತಿಂದಾದ ಮೇಲೆ ನಿನ್ನ ನಿಮ್ಮನೆ ವರೆಗೆ ಬಿಟ್ಟು ಬರುತ್ತೇನೆ.. ನಿಮ್ಮ ಅಮ್ಮನೂ ಕಾಯುತ್ತಿರುತ್ತಾಳೆ "
ಅವಳು ನಗುತ್ತಾ ಅವನೊಂದಿಗೆ ಹೆಜ್ಜೆ ಹಾಕಿದಳು. ಅಷ್ಟು ಹೊತ್ತು ಮೋಡಗಳ ಮರೆಯಲ್ಲೆಲ್ಲೋ ಮರೆಯಾಗಿದ್ದ ಚಂದಿರ ಬಾನಲ್ಲಿ ಇಣುಕಿ ಇವರಿಬ್ಬರನ್ನೂ ನೋಡಿ ನಗುತ್ತಲಿದ್ದ.
19 comments:
ತುಂಬ ಲವಲವಿಕೆಯಿಂದ ಕೂಡಿದೆ ಬರಹ. ಹೀಗೆಲ್ಲ ಆಗತ್ತೋ ಇಲ್ವೋ ಬೇರೆ ಪ್ರಶ್ನೆ...ಆದ್ರೆ ಕಥೆ ಖುಶಿ ಕೊಡತ್ತೆ. ಕಥೆಯ ಗತಿ ತೀರ ಊಹಾತ್ಮಕವಾದದ್ದು. ಆದ್ರೆ ಕಥೆಯ ರಮ್ಯತೆ, ಪದಗಳನ್ನ ಪೋಲು ಮಾಡದೆ ನಿರೂಪಣೆಯಲ್ಲಿ ತೋರಿದ ಸಂಯಮ, 'ಇಬ್ರೂ ಒಂದಾಗ್ಲಿ' ಅನ್ನೋ ಓದುಗರ ಹಂಬಲ....ಇದ್ರಿಂದಾಗಿ ಖುಶಿ ಕೊಡತ್ತೆ.
ಇದೇ ಥರ ಕಥೆಗಳು ಬರ್ತಾ ಇರ್ಲಿ. ಬೇಕಿದ್ರೆ ಈಶ್ವರಯ್ಯನವರ 'ಸರಸಿ' ಓದು.
ಅಲ್ಲೊಂದು, ಇಲ್ಲೊಂದು ...ತೀರ ನಗಣ್ಯ ತಪ್ಪು ಮಾಡಿದೀಯ ಅಷ್ಟೆ. ತುಂಬ ಸುಧಾರಿಸಿದೆ. ಈ ಖುಶಿಯಲ್ಲಿ ನಮಗೆ ಪಾರ್ಟಿ ಎಲ್ಲಿ?????:-))
ಹೌದು ಹೀಗೆಲ್ಲ ಆಗುತ್ತೋ ಇಲ್ಲವೋ.. ಆದರೆ ಬರೆಯೋದಿಕ್ಕಂತೂ ಖುಶಿ ಕೊಡುತ್ತೆ. ಏಲ್ಲವೂ ಊಹಾತ್ಮಕ ಅದಕ್ಕೆ ಕಟ್ಟು ಕಥೆ ಅಂತ ಹೆಸರು :)
ಮತ್ತೆ ಈಶ್ವರಯ್ಯನವರ 'ಸರಸಿ' ಕೆಲವು ವರ್ಷಗಳ ಹಿಂದೆ ತರಂಗ ವಾರಪತ್ರಿಕೆಯಲ್ಲಿ ಪ್ರಕಟವಗುತ್ತಿದ್ದಾಗ ತಪ್ಪದೇ ಓದುತ್ತಿದ್ದೆ.
ಪಾರ್ಟಿ???
ಶ್ಯಾಮಾ,
ಒಳ್ಳೆ ಕತೆ. ಜಗಲಿ ಭಾಗವತರು ಹೇಳಿದ ಹಾಗೆ, 'ಇಬ್ರೂ ಒಂದಾಗ್ಲಿ' ಅನ್ನೋ ಹಂಬಲ ಎಲ್ಲರಿಗೂ ಬಂದೇ ಬರುತ್ತದೆ.
ಕಥೆ ಇನ್ನೂ ಇದ್ದಿದ್ದರೆ ಅನ್ನಿಸಿತು. ಲವಲವಿಕೆಯ ಶೈಲಿ. ಬರೀತಾ ಇರಿ ಹೀಗೆಯೇ.
ಹೌದು ಇಬ್ಬರೂ ಒಂದಾಗಲಿ ಅಂತ ಎಲ್ಲರಿಗೂ ಬಂದೇ ಬರುತ್ತದೆ...
ಓದಿ ಎಲ್ಲರೂ ಇಷ್ಟ ಪಟ್ಟಿದ್ದಕ್ಕೆ ಖುಶಿ ಆತು.. ನಾನು ಅಷ್ಟೇ ಇಷ್ಟ ಪಟ್ಟು ಬರೆದ ಕಥೆ..
ಧನ್ಯವಾದಗಳು...
ಕಥೆ ಹೇಳಿರೋ ಶೈಲಿ ಬಹಳ ಇಷ್ಟ ಆಯಿತು..
ಚೆನ್ನಾಗಿ ಬರ್ದಿದಿರಾ.
Thanku vikas....
ಕಥೆಯ ಗತಿ ತೀರ ಊಹಾತ್ಮಕವಾದದ್ದು...ಅಂದ್ರೆ ಕಥೆಯ ಜಾಡು ಗೊತ್ತಾಗ್ಬಿಡತ್ತೆ, Predictable, ಅಂತ ಹೇಳ್ಬೇಕಿತ್ತು. ಊಹ್ಯವಾಗಿದೆ ಅನ್ನೋದು ಸರಿಯಾದ ಶಬ್ದ ಅನ್ಸತ್ತೆ.
ಹ್ಞೂ ಮತ್ತೆ. ಓದುಗ ದೊರೆಗಳಿಂದಾಗಿ ಕಾಗುಣಿತ ತಪ್ಪುಗಳು ಕಡ್ಮೆಯಾಗಿದೆ. ನಂಗೆ, ಸುಶ್ರುತಂಗೆ, ಶ್ರೀನಿಧಿಗೆ, ವಿಕಾಸಂಗೆ, ಸುಪ್ತದೀಪ್ತಿಗೆ ....ಎಲ್ಲಾರ್ಗೂ ಪಾರ್ಟಿ ಬೇಕು:-))
ಹೂಂ ಸರಿ. ಎಲ್ಲ ಬಂದುಬಿಡಿ ಪಾರ್ಟಿ ಮಾಡೋಣ :)
ಹೂಂ ಸರಿ. ಎಲ್ಲ ಬಂದುಬಿಡಿ ಪಾರ್ಟಿ ಮಾಡೋಣ :) ......
ಎಲ್ಲಿ? ಯಾವಾಗ? ಎಷ್ಟೊತ್ತಿಗೆ?.....ಸಂದರ್ಭ ಸಹಿತ ವಿವರಿಸಿ.
abba anthu happy ending madidyala....
@ adithya,
houda tamma, kadigoo happy ending madiddi. Infact modlu kathe mansalli bandaga bere tharane ending ittu. aamele nange bejarathu adke happy ending maDidi :)
ಚೆನ್ನಾದ ಬರಹ.. ಓದಿಸಿಕೊಂಡು ಹೋಯ್ತು
ಧನ್ಯವಾದಗಳು ಮನಸ್ವಿನಿ
chennagi barediddeera..
ಮನಸ್ವಿನಿ, ಅರ್ಚನ
ನೆನಪಿನಂಗಳಕ್ಕೆ ಸ್ವಾಗತ
ಧನ್ಯವಾದಗಳು
ಶ್ಯಾಮಾ,
ತುಂಬಾ ಚನ್ನಾಗಿ ಬರದ್ದಿ.
ಕವನ ಮಾತ್ರ ಅಲ್ಲಾ ಕಥೆನೂ ಚನ್ನಾಗಿ ಬರೀತಿ.
ಈ ಕಥೆ ಓದಿದಾಗ ಇಲ್ಲೆ ಅಕ್ಕ ಪಕ್ಕದಲ್ಲಿ ಎಲ್ಲೋ ನೆಡಿತಾ ಇದ್ದೇನೋ ಅನ್ನಿಸ್ತಾ ಇತ್ತು ನಂಗೆ.
ಥ್ಯಾಂಕ್ಸ್ ರಂಜು...
ನಿರೂರಣೆಯ ದಾಟಿ ಇಷ್ಟ ಆಯ್ತು.ಚೆನ್ನಾಗಿದೆ ಬರಹ..
@ ಚಿರವಿರಹಿ
ನೆನಪಿನಂಗಳಕ್ಕೆ ಸ್ವಾಗತ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
Post a Comment