Wednesday, December 5, 2007

ಹಳೇ ದಾರಿ - ಹೊಸ ಭಾವ

ದಿನವೂ ಸಾಗುವುದು ಅದೇ
ಹಳೇ ದಾರಿಯಲ್ಲಿ ,
ಅಲ್ಲಿ ಎಲ್ಲವೂ ಹಳತು
ಮನಸಿಗೆ ಬರುವ ಭಾವನೆಯೂ ನಿತ್ಯ ಅದೇ ಹಳತು,
ಮತ್ತದೇ ದಾರಿ ಮತ್ತದೇ ನಿಶ್ಚಲ ನಿರ್ಜೀವ ರಾಶಿಯೆಂದು.

ಇಂದೂ ನಡೆದು ಬಂದಿದ್ದು ಮತ್ತದೇ ಹಳೇ ದಾರಿಯಲ್ಲಿ,
ಆದರಿಂದು ಅನ್ನಿಸಿದ್ದು ಎಲ್ಲವೂ ಹೊಸ ಹೊಸದು,
ನವ್ಯ ಭಾವನೆಗಳ ಪುಳಕ ಮನದಲ್ಲಿ
ಹೊಸತೊಂದು ನೋಟ ನನ್ನ ಕಣ್ಣಲ್ಲಿ
ಸುತ್ತಲಿನ ಗಾಳಿ ಹಳತಲ್ಲ ಹೊಚ್ಚ ಹೊಸದು
ನೀಲಿ ನಭದಲ್ಲಿ ತೇಲುತಿರುವ
ಬೆಳ್ಳಿ ಮೋಡವೂ ಹಳತಲ್ಲ, ಎಂಥ ನವ್ಯ ಸೊಗಸು
ಆಚೆ ಮನೆಯ ಗಿಡದಲ್ಲಿ
ಇಂದು ಅರಳಿದೆಯಲ್ಲ ಹೊಸ ಹೂವೊಂದು
ದಾರಿ ಪಕ್ಕದ ಮರದೆಡೆಯಿಂದ
ಕೇಳಿತಲ್ಲ ಹೊಸತೊಂದು ಹಕ್ಕಿಯ ಚಿಲಿಪಿಲಿ
ಆ ಮೂಲೆ ಮನೆಯ ಚಾವಣಿಯಲ್ಲೊಂದು ಜೇನು ಗೂಡು
ಎಲ್ಲಿಂದ ಬಂತು ನಿನ್ನೆ ಕಂಡಿರಲಿಲ್ಲವಲ್ಲ ಅದನಲ್ಲಿ ?

ಏನಿಂದು ಎಲ್ಲವೂ ಹೊಸ ಹೊಸತು
ಹಳೆಯದರಲ್ಲಿ ಹೊಸತನವ ಕಾಣುವ
ನನ್ನ ಮನಸ್ಸಿನ ಪ್ರೀತಿ ಹೊಸತು
ಅದೇ ಹಳೆಯ ದಾರಿಯಲ್ಲಿ
ನನ್ನ ಕಣ್ಣಲ್ಲಿನ ನೋಟ ಹೊಸತೇ ?
ನನ್ನೊಳಗಿನ ನನಗೆ ಹೊಸತನವೇ ?
ಮನದಲ್ಲಿ ನಿನ್ನೆಗಳ ನೆನಪಿನ ಹಂಗಿಲ್ಲವಿಂದು
ನಡೆದು ಬಂದರೂ ಮತ್ತದೇ ಹಳೇ ದಾರಿಯಲ್ಲಿ.
ಮನದಲ್ಲಿ ನಾಳೆಗಳ ಅರಿವಿಲ್ಲ ದಿಗಿಲಿಲ್ಲವಿಂದು
ನಾಳೆ ನಡೆಯುವುದಾದರೂ ಅದೇ ದಾರಿಯಲ್ಲಿ.

ಮತ್ತದೇ ಹಳೆಯ ದಾರಿಯೆಂಬ ಹಳೇ ಭಾವವಿರಲಿಲ್ಲ
ಇಂದು ದಾರಿಯಲ್ಲಿ ಸಾಗಿ ಬಂದಾಗ
ನಿಶ್ಚಲ ದಾರಿಗೂ ಜೀವಕಳೆಯಿತ್ತು
ಎಲ್ಲವೂ ನಿತ್ಯ ನೂತನವೆನಿಸಿತ್ತು ನನ್ನಲ್ಲಿ ನಾ ಹೊಸತನವ ಕಂಡಾಗ
ತುಟಿಯಂಚಿನಲ್ಲಿ ಹೊಸದೊಂದು ಹೂ ನಗೆಯಿತ್ತು
ಮನದೊಳಗೊಂದಿಷ್ಟು ಪ್ರೀತಿ ..

4 comments:

ಶಾಂತಲಾ ಭಂಡಿ (ಸನ್ನಿಧಿ) said...

ಶ್ಯಾಮಾ...
ತುಂಬ ಚೆನ್ನಾಗಿ ಬರದ್ದೆ.

"ಏನಿಂದು ಎಲ್ಲವೂ ಹೊಸ ಹೊಸತು
ಹಳೆಯದರಲ್ಲಿ ಹೊಸತನವ ಕಾಣುವ
ನನ್ನ ಮನಸ್ಸಿನ ಪ್ರೀತಿ ಹೊಸತು
ಅದೇ ಹಳೆಯ ದಾರಿಯಲ್ಲಿ
ನನ್ನ ಕಣ್ಣಲ್ಲಿನ ನೋಟ ಹೊಸತೇ ?
ನನ್ನೊಳಗಿನ ನನಗೆ ಹೊಸತನವೇ ?"

ಈ ಸಾಲುಗಳು ಇಷ್ಟವಾದವು.

Jagali bhaagavata said...

Nice one. This is good even without the last two para.

ರಂಜನಾ ಹೆಗ್ಡೆ said...

ಕೂಸೆ ತುಂಬಾ ಚನ್ನಾಗಿ ಬರದ್ದೆ.
ಹಳತರಲ್ಲಿ ಹೊಸದನ್ನು ಕಾಣಲೇ ಬೇಕು ಅಲ್ದಾ ಇಲ್ಲೆ ಅಂದ್ರೆ ಲೈಫ್ ಬೋರ್ ಆಗಿ ಹೋಕ್ತು.
ಆ ಹೊಸ ಗಾಳಿ, ಹೊಸ ವಾತಾವರಣ, ಹೊಸ ಮೋಡ ಹೊಸ ಖುಷಿಯನ್ನು ತರಲಿ.

GHCUTE said...

nimma kavana.. niraashavaadadinda aashaavaadada kadege manassannu seleyuva prayatna kaNasiguttade.

namma bhaavanegalannu roopisuva manessembaa kharkhaaneyalli...olleyaa kachha vastutumbidalli olleyaa vastu horabaruttade..
naanu nimma padyavannu arthaisida rithi Ee melinanthe.
dhanyavaadagalu..
ghscute