Wednesday, January 9, 2008

ನನ್ನ ಹೆಸರಿಗೊಂದು ಸಂಜೆ














ನೀ ನನ್ನೊಡನಿರುವ ದಿನಗಳು
ಬೆರಳೆಣಿಕೆಯಷ್ಟಿರುವಾಗ ಆ
ದಿನಗಳಲ್ಲೊಂದರ
ಸಂಜೆಯೊಂದನ್ನು ನನ್ನ
ಹೆಸರಿಗೆ ನೀ ಬರೆಯುವೆಯಾ ಗೆಳತಿ?

ನಿನ್ನೊಡನೆ ಆಡಲು ಬೆಟ್ಟದಷ್ಟಿದೆ
ಮಾತು ನನ್ನೊಳಗೆ
ಆದರೆ ಆ ಬೆಟ್ಟದದಿಯಲ್ಲಿನ
ಸಂಜೆ ಬೇಡ ನನಗೆ,
ನಾ ಮೌನದ ಮೂಟೆಯ
ನನ್ನೊಡನೆ ಹೊತ್ತು ತರುವೆ
ಮೌನಕ್ಕೆ ನಿನ್ನ ಉಸಿರಿನ ಜೊತೆಯಿರಲಿ ಸಾಕು

ನೀ ನನ್ನ ಮಾತುಗಳಿಗೆ ಕಿವಿಯಾಗುವುದು
ಬೇಡ ಗೆಳತಿ
ಮಾತಿನಲ್ಲೇ ಮರೆಯಾಗಿ ಹೋಗುವ
ಆ ಸಂಜೆ ಬೇಡ ನನಗೆ
ನಿನ್ನೊಡನೆ ಸಾಗುತ್ತ ಹಾಗೇ ಮೌನಿಯಾಗಿಬಿಡುವೆ ನಾನು
ನೀ ನನ್ನ ಮೌನಕ್ಕೆ ಹೆಗಲಿನಾಸರೆ ನೀಡು ಸಾಕು

ಜಾರಬಹುದು ನನ್ನ ಕಣ್ಣಿಂದ ಹನಿಗಳೊಂದೆರಡು
ನೀ ತಡೆಯ ಬೇಡ ಹನಿಗಳ ಕಣ್ಣೀರೊರೆಸುವ ನೆಪದಿ
ಒಡಲೊಳಗಿನ ನೋವ ಮತ್ತೆ
ಬಚ್ಚಿಡುವ ಸಂಜೆಯದು ಬೇಡ ನನಗೆ
ನನ್ನ ಕೈಗೊಮ್ಮೆ ನೀಡು ನೀ
ಬೆಚ್ಚನೆಯ ಬಿಗಿ ಹಿಡಿತ ,ನನಗಷ್ಟು ಸಾಕು

ಕತ್ತಲಾವರಿಸಿ ಆಗಸದಲ್ಲಿ ತಾರೆ ಹೊಳೆಯುವ ಮುನ್ನ
ನೀ ನಡೆದು ಬಿಡು ತಿರುಗಿ ನೋಡದಂತೆ
ಮತ್ತದೇ ಕಾಲುದಾರಿಯಲ್ಲಿ.
ಮನದಲ್ಲೇ ಮರೆತುಹೋಗುವ
ಸಂಜೆಯಾಗುವುದು ಬೇಡವದು
ಬಿದ್ದು ಹಾಸಿದ ಹೂವುಗಳಲ್ಲೊಂದ ಎತ್ತಿಕೊಡು ಸಾಕು
ನೀ ಹೋಗುವಾ ಮುನ್ನ
ಒಂದು ನಗೆ ನಕ್ಕುಬಿಡುವೆ ನಿನ್ನೊಂದಿಗೆ
ನಾ ಆ ಹೂವ ಹಾಗೆ

ಗಾಳಿ ಬೆನ್ನತ್ತಿದ ಮುಗಿಲಿನಂತೆ
ನೀ ನನ್ನಿಂದ ದೂರ ಸರಿದು ಹೋಗಿ
ಬಾಳ ಬಾನೆಲ್ಲ ಖಾಲಿ ನೀಲಿಯಾಗುವ ಮುನ್ನ
ನಿನ್ನ ಸಂಜೆಯೊಂದನ್ನು ನನ್ನ
ಹೆಸರಿಗೆಂದೇ ನೀ ಬರೆಯುವೆಯಾ ಗೆಳತಿ ?

3 comments:

Jagali bhaagavata said...

ಚೆನ್ನಾಗಿದೆ.

VENU VINOD said...

ನೀ ನನ್ನೊಡನಿರುವ ದಿನಗಳು
ಬೆರಳೆಣಿಕೆಯಷ್ಟಿರುವಾಗ ಆ
ದಿನಗಳಲ್ಲೊಂದರ
ಸಂಜೆಯೊಂದನ್ನು ನನ್ನ
ಹೆಸರಿಗೆ ನೀ ಬರೆಯುವೆಯಾ ಗೆಳತಿ?

ಮೊದಲ ಪ್ಯಾರಾವೇ ಗಮನ ಸೆಳೆಯಿತು..ಆದರೆ ಕವನ ತುಂಬಾ ನೋವೇ ಇದೆಯೇನೋ ಅನ್ನಿಸ್ತು

ಸ್ಮಿತಾ said...

Konegu ondu sanjena ninge kodalagalilla gelathi, nannanu kshamisu.. Saying ide alwa "Man proposes but God disposes".

Ella devara aata...Miss u a lot