ಚಳಿಯ ಬೆಳಗಿನಲೊಮ್ಮೆ
ನಡೆದು ಬರುವಾಗ ಹಾದಿ ಬದಿಯಲ್ಲಿ
ಹೂವು ಮಾರುವ ಹುಡುಗಿ ಕೂಗುತಿದ್ದಳು
ಹೂವು ಬೇಕೇನಮ್ಮ ಹೂವು ಬೇಕೆ?
ತರ ತರದ ಹೂವುಗಳ ಅವಳ ಬುಟ್ಟಿಯಲಿ ನೋಡೆ
ಎನ್ನ ಮನದಲ್ಲಿ ನುಗ್ಗಿ ಬಂತು
ಮಾಗಿ ಮಲ್ಲಿಗೆಯ ನೆನಪು.
ಇಂಥದೇ ಚಳಿಯ ಬೆಳಗಿನಲ್ಲಿ
ಅಂಗಳಕ್ಕಿಳಿದರೆ ಸಾಕು ಕಣ್ಣೋಟವ ಸೆಳೆಯುತ್ತಿತ್ತು
ಹಿತ್ತಲ ನಡುವಲ್ಲಿ ನಿಂತ ಮಾಗಿ ಮಲ್ಲಿಗೆಯ ಗಿಡವು
ಬಿಳಿ ಹೂಗಳ ಚಾದರವ ತಾ ಹೊದ್ದು.
ಅದ ನೋಡೆ ಕಣ್ಣುಗಳು ಕೇಳುತ್ತಿದ್ದವು ಎನ್ನ
ಎಂಥ ಸುಂದರವದು , ನೋಟ ಕೀಳಲಾಗುತ್ತಿಲ್ಲ
ಏನದು ಬೆಳ್ಳಿಯ ಚೆಂಡೆ ?
ಹೂವ ಬುಟ್ಟಿಯ ಹಿಡಿದು ಹಿತ್ತಲಿಗಿಳಿದರೆ ಸಾಕು
ಇಬ್ಬನಿಯ ಸ್ಪರ್ಶಕ್ಕೆ ನಾಚಿ ನೀರು ನೀರಾಗಿ
ನಗುತಲಿರುವ ಹೂಗಳ ನೋಡೆ
ಕಣ್ಣಿಗೆ ಹೂಗಳ ಲೆಕ್ಕ ತಪ್ಪುತ್ತಿತ್ತು .
ಹೂವು ಕೊಯ್ಯುವ ಸಂಭ್ರಮವು ಎನ್ನ ಮನದಲಿರೆ
ಹೂ ಬುಟ್ಟಿ ತುಂಬಿದರೇನಾಯ್ತು
ಎತ್ತಿ ಹಿಡಿದ ಲಂಗದಲ್ಲಷ್ಟು ಹೂಗಳ ರಾಶಿ .
ಜಗುಲಿ ಮಧ್ಯದಲ್ಲೆಲ್ಲ ಕೊಯ್ದ ಹೂಗಳ ರಾಶಿ
ಮನವು ಲೆಕ್ಕ ಹಾಕುತ್ತಿತ್ತು
ದೇವರಿಗಿಷ್ಟು ಪಾಲು ,ಉಳಿದವೆಲ್ಲ ನನಗಿರಲಿ
ಉದ್ದನೆಯ ದಂಡೆಯೇ ನನಗೆ ಬೇಕು.
ಪ್ರೀತಿಯಿಂದ ಒಂದೊಂದೇ ಹೂವೆತ್ತಿ
ಅಮ್ಮ ಹೂವುಗಳ ದಾರದಲ್ಲಿ ಹೆಣೆಯೆ
ನನ್ನ ಮುಡಿಯಲ್ಲಿ ನಗುತ್ತಿತ್ತು ಮಲ್ಲಿಗೆಯ ದಂಡೆ.
ಚಳಿಯ ಇರುವಲ್ಲೂ ಮನವು
ಮಾಗಿ ಮಲ್ಲಿಗೆಯ ನೆನಪಲ್ಲಿ
ಮುದಗೊಂಡು ಬೆಚ್ಚಗಾಗಿರಲು
ಹಿಂತಿರುಗಿ ನೋಡಿದೆ ನಾ ಸುಮ್ಮನೊಮ್ಮೆ.
ಹಾದಿಯ ಈಚೆ ತುದಿಯಲಿ ನಾನು
ಆಚೆ ತುದಿಯಲಿ ಹೂಮಾರುವ ಹುಡುಗಿ
ಕೂಗುತ್ತ ಹೂವು ಬೇಕೇನಮ್ಮ ಹೂವು ಬೇಕೆ?
5 comments:
cool one!
ಹೂವನ್ನೂ ಮಾರ್ತ್ವಲ ಜನ!!
ಅದೆಂಗ್ ಮನ್ಸ್ ಬತ್ತೇನ ಅಲ್ದ?!
ಚೊಲೋ ಬರದ್ದೆ ..
ಚಿಕ್ಕವರಿದ್ದಾಗ ಉದ್ದುದ್ದ ದಂಡೆ ಕತ್ಕೊದು ಹೇಳಿ ಅಜ್ಜಿಗೆ ತ್ರಾಸ್ ಕೊಡ್ತಾ ಇದ್ಡಿದ್ದು ನೆನಪಾತು....
ಹಿಂಗೆ ಬರೀತಾ ಇರು ..
@Alpazna
ಹ್ಂ ಎಂತಾ ಮಾಡಕ್ ಬತ್ತು ಅದೂ ಒಂದು ಉದ್ಯೋಗ.
@Roopa
Thanks a lot. ನೀವು ಹೀಗೆ ಬರ್ತಾ ಇರಿ ಈ ಕಡೆ :)
ಸುಂದರ ಕವನ.
Thanks sunath
Post a Comment