"ನೋಡು ಪಲ್ಲು ,ಇವತ್ತಿಂದ ಶಾಲೆಗೆ ಹೋಗ್ತಿದೀಯ ನೀನು. ಒಂದನೇ ಕ್ಲಾಸು. ಇನ್ಮೇಲಿಂದ ನಿನ್ನ ಮಂಗಾಟಗಳನ್ನೆಲ್ಲ ಬಿಟ್ಟು ಬಿಡಬೇಕು. ಶಾಲೆಯಲ್ಲೂ ನಿನ್ನ ಚೇಷ್ಟೆಗಳನ್ನ ಮುಂದುವರಿಸಿದೆಯೋ ಟೀಚರಿಂದ ಏಟು ಬೀಳುತ್ತೆ ಮತ್ತೆ. ಅದಕ್ಕೆ ಅವೆಲ್ಲಾ ಬಿಟ್ಟು ಒಳ್ಳೆ ಹುಡ್ಗಿ ಅನ್ನಿಸ್ಕೋಬೇಕು ಗೊತ್ತಾಯ್ತಾ ?" ಅಮ್ಮ ನನ್ನ ಜುಟ್ಟು ಕಟ್ಟುತ್ತ ಹೇಳಿದಳು.
"ಹೂಂ " ಅಂದು ಹಲ್ಕಿರಿದೆ ನಾನು .
ತಿಂಡಿ ತಿಂದು ಹಿಂದಿನ ದಿನವೇ ಜೋಡಿಸಿಟ್ಟಿದ್ದ ಶಾಲೆಯ ಚೀಲವನ್ನು ಹೆಗಲಿಗೇರಿಸಿದೆ .ಮಳೆಗಾಲ ಹದವಾಗಿ ಶುರುವಾಗಿತ್ತು. ಆ ದಿನ ಮಳೆ ಬರುತ್ತಿರಲಿಲ್ಲವಾದರೂ ಅಮ್ಮ ಮಳೆ ಬಂದರೂ ಬರಬಹುದೆಂಬ ಆಲೋಚನೆಯಿಂದ ರೈನ್ ಕೋಟ್ ತೊಡಿಸಲು ಬಂದಳು. ನಂಗೆ ಸಿಟ್ಟೇ ಬಂತು. ಮಳೆ ಬರ್ತಾ ಇಲ್ದಿದ್ರೂ ಯಾಕ್ ಹಾಕ್ಕೊಳ್ಬೇಕ್ ಅದನ್ನ ಅಂತ.
"ಅಮ್ಮ ನಂಗೆ ಬೇಡ ರೈನ್ ಕೋಟ್. ಎಷ್ಟು ಸಲ ಹೇಳಿದೀನಿ ನಂಗೆ ಕೊಡೆ ಬೇಕು ಅಂತ. ಆದರೂ ಕೊಡ್ಸಿಲ್ಲ ನಂಗೆ. ಅಂತದ್ರಲ್ಲಿ ಮಳೆ ಬರ್ದೇ ಇರೋವಾಗ ಯಾಕೆ ಹಾಕ್ಕೊಳ್ಬೇಕು ಆ ರೈನ್ ಕೋಟನ್ನ ?" ಮುಖ ಊದಿಸಿಕೊಂಡು ನಾನು ಹೇಳಿದರೆ ಅಮ್ಮ ಮೆತ್ತಗೆ ಗದರಿದಳು.
"ಹೇಳಿದ್ದೆನಲ್ಲ ನಿನಗೆ ಮುಂದಿನ ಮಳೆಗಾಲಕ್ಕೆ ಕೊಡ್ಸ್ತೇನೆ ಕೊಡೆಯನ್ನ ಅಂತ. ಜೋರು ಗಾಳಿ ಮಳೆ ಬಂದ್ರೆ ಕೊಡೆ ಹಿಡ್ಕೊಂಡು ನಡ್ಕೊಂಡು ಬರೋಕ್ಕಾಗುತ್ತ ನಿಂಗೆ? ಹೇಳಿದ್ಮಾತು ಕೇಳು ಈಗ ಸುಮ್ನೆ ಹಾಕ್ಕೋ ಇದನ್ನ, ದಾರಿ ಮಧ್ಯ ಮಳೆ ಬಂದ್ರೆ ಏನ್ಮಾಡ್ತೀಯಾ?"
ಒಲ್ಲದ ಮನಸ್ಸಿಂದ ರೈನ್ ಕೋಟ್ ಹಾಕಿಕೊಂಡು ಹೊರ ಒಳದಲ್ಲಿದ್ದ ನಿಲುವುಗನ್ನಡಿಯಲ್ಲಿ ನನ್ನೇನಾ ನೋಡಿಕೊಂಡೆ.
"ಅಮ್ಮಾ ನಾನು ಗುಮ್ಮನ ಹಂಗೆ ಕಾಣ್ತಿದೀನಲ್ವಾ?" ನಾನಂದಾಗ ಅಮ್ಮಂಗೆ ನಗು ಬಂತು. ಏನೂ ಹೇಳಲಿಲ್ಲ ಅಮ್ಮ. "ಅಮ್ಮಾ ನಂಗೆ ಮುಂದಿನ ವರ್ಷ ಕೊಡೆ ಕೊಡ್ಸ್ತೀಯಲ್ಲ ಅದು ಬಣ್ಣದ ಕೊಡೇನೆ ಆಗಿರಬೇಕು ಸರಿನಾ ?"
"ಸರಿ ಸರಿ ನೀನೀಗ ಹೊರಡು. ನಿನ್ನಪ್ಪ ಆಗಲೇ ಹೊರಟಾಯ್ತು " ಅಮ್ಮ ಅಂದಾಗ ಹೊರಗೋಡಿದೆ. ಅಪ್ಪ ಆಗಲೇ ಹೊರಗೆ ನನಗಾಗಿ ಕಾಯುತ್ತ ನಿಂತಿದ್ದರು.
ಶಾಲೆಯೇನು ದೂರವಿರಲಿಲ್ಲ ನಮ್ಮನೆಯಿಂದ. ನಮ್ಮನೆ ಆಗಿ 3 ಮನೆ ದಾಟಿದ ಮೇಲೆ ಬಲಕ್ಕೆ ತಿರುಗಿದರೆ ಇಳಿಜಾರಾದ ರಸ್ತೆ. ಅಲ್ಲಿಳಿದು ನೇರವಾಗಿ ಸ್ವಲ್ಪ ದೂರ ನಡೆದರೆ ಅರಳಿಮರ. ಅರಳಿಮರದ ಎದುರು ದೊಡ್ಡ ಆಟದ ಬಯಲು.ಅದರ ಆಚೆ ತುದಿಗೆ ನಮ್ಮ ಶಾಲೆ.
ನನಗೇನೂ ಆ ದಾರಿ ಹೊಸತಲ್ಲ.ಅದೇ ಆ ಆಟದ ಬಯಲಲ್ಲೇ ನಾವೆಲ್ಲ ನಿತ್ಯ ಆಡುವುದು. ಆದರೆ ಇವತ್ತು ಶಾಲೆಯ ಮೊದಲ ದಿನವಾದ್ದರಿಂದ ಅಪ್ಪ ನನ್ನೊಡನೆ ಹೊರಟಿದ್ದು.
ಅಪ್ಪನ ಕೈ ಹಿಡಿದೇ ನಡೆದು ಹೋದೆ. ಒಂಥರಾ ಭಯ ಒಂಥರಾ ಖುಷಿ ಎರಡೂ ಆಗ್ತಾ ಇತ್ತು .ಮೊದಲನೆ ದಿನ ಹೇಗೋ ಏನೋ ಅಂತ. ಮತ್ತೆ ರೈನ್ ಕೋಟಿನಲ್ಲಿ ಗುಮ್ಮನ ತರಹ ಕಾಣ್ತಾ ಇರೋದಕ್ಕೆ ಬೇಜಾರಾಗಿತ್ತು.
ನನ್ನನ್ನು ಶಾಲೆಯ ಬಳಿ ಬಿಟ್ಟು ಅಪ್ಪ ಹೊರಟಾಗ ನಂಗೆ ಅಳು ಬಂದ ಹಾಗಾಯಿತು. ಅಪ್ಪನ ಕೈ ಗಟ್ಟಿಯಾಗಿ ಹಿಡಿದು ಹಾಗೆ ನಿಂತಿದ್ದೆ. ಅಪ್ಪ ನನ್ನೆತ್ತಿಕೊಂಡು ಮುದ್ದು ಮಾಡಿ "ಒಳ್ಳೆ ಹುಡ್ಗಿ ಅಲ್ವಾ ನೀನು? ಹಿಂಗೆಲ್ಲ ಅಳಬಾರದು. ಅಲ್ನೋಡು ಎಷ್ಟು ಮಕ್ಳು ನಿನ್ನ ಹಾಗೆ. ಜಾಣೆ ಆಗಬೇಕು ನೀನು" ಅನ್ನುತ್ತಾ ಕೆಳಗಿಳಿಸಿದರು. ಹೊರಟು ನಿಂತ ಅಪ್ಪ ಮತ್ತೆ ತಿರುಗಿ "ಜಾಸ್ತಿತಂಟೆ ಮಾಡಬೇಡ ಪಲ್ಲು. ಜಾಣೆ ಅನ್ನಿಸ್ಕೋಬೇಕು ಆಯ್ತಾ. ಸಂಜೆ ನಿನ್ನ ಫ್ರೆಂಡ್ಸ್ ಜೊತೆ ಹುಷಾರಾಗಿ ಮನೆಗೆ ಬಾ "ಅಂದರು.
ಅಮೇಲೇನೂ ನಂಗೆ ಅಳು ಬರಲಿಲ್ಲ. ಎಲ್ಲ ಮಕ್ಕಳ ಜೊತೆ ಆರಾಮಾಗಿ ದಿನ ಕಳೆದೆ. ಸಂಜೆ ನಿಮ್ಮಿ ಪೂಜಾ,ಮಂಜು,ವಿನ್ನಿ ಜೊತೆ ಮನೆಗೆ ಹೊರಟೆ. ಅಷ್ಟೊತ್ತೂ ಸುರಿಯುತ್ತಿದ್ದ ಮಳೆ ನಿಂತಿತ್ತು. ಅದಕ್ಕೆ ನಾನು ರೈನ್ ಕೋಟನ್ನು ಬ್ಯಾಗಿನಲ್ಲಿಯೇ ಇಟ್ಟು ಬ್ಯಾಗನ್ನು ಹೆಗಲಿಗೇರಿಸಿ ಹೊರಟೆ. ದಾರಿ ಮಧ್ಯ ಅಲ್ಲಲ್ಲಿ ನಿಂತಿದ್ದ ನೀರಲ್ಲಿ ಹಾರಿ ಹಾರಿ ಮೈಯೆಲ್ಲಾ ಒದ್ದೆಯಾಗಿ ಮನೆಗೆ ಹೋಗಿ ಬಯ್ಸಿಕೊಂಡಿದ್ದೂ ಆಯ್ತು.
ಶಾಲೆಯಿಂದ ಮನೆಗೆ ಬರುವ ದಾರಿಯಲ್ಲಿ ಅದೇ ಆ ಅರಳಿಮರದಿಂದ ಸ್ವಲ್ಪ ಮುಂದೆ ಒಂದು ಮನೆ. ಮನೆ ಎದುರಿಗೆ ಒಂದು ಪುಟ್ಟ ತೋಟವೇ ಇತ್ತು. ಆ ಮನೆ ಅಂದ್ರೆ ನನಗೇಕೋ ತುಂಬ ಇಷ್ಟವಾಗಿತ್ತು. ಎಷ್ಟು ಬಗೆಯ ಗಿಡಗಳಿದ್ದವು ಅಲ್ಲಿ.ದಿನಾಲೂ ಅಲ್ಲಿಂದ ಬರುವಾಗ ಗೇಟಿನಿಂದ ಒಳಗೆ ಇಣುಕುತ್ತಿದ್ದೆ. ಒಂದು ಸಲವಾದರೂ ಒಳಗೆ ಹೋಗಿ ಅಲ್ಲೆಲ್ಲಾ ಗಿಡಗಳ ನಡುವಲ್ಲಿ ಓಡಾಡಬೇಕು, ಹೂಗಳನ್ನು ನೋಡಬೇಕು ಎಂದು ಆಸೆಯಾಗುತ್ತಿತ್ತು. ಆದ್ರೆ ನನ್ನ ಜೊತೆಗಾರರೆಲ್ಲ "ಸುಮ್ನೆ ನಡಿಯೇ ಮನೆಗೆ. ಆ ಮನೆ ಅಜ್ಜಿಗೆ ಗೊತ್ತಾದ್ರೆ ಅಷ್ಟೇ ಮತ್ತೆ" ಅಂತ ನನ್ನ ಎಳೆದೊಯ್ಯುತ್ತಿದ್ದರು.
ಅವತ್ತೊಂದು ದಿನ ಅಮ್ಮ ಶಾಲೆಯಿಂದ ಒಂದು ಗಂಟೆ ಮುಂಚೆ ಕೇಳ್ಕೊಂಡು ಬಾ ಡಾಕ್ಟರ ಹತ್ರ ಹೋಗೋಣ ಅಂದಿದ್ದಳು. ಅದಕ್ಕೆ ನಾನು ಶಾಲೆ ಬಿಡೋ ಒಂದು ಗಂಟೆ ಮುಂಚೆ ಕೇಳ್ಕೊಂಡು ಮನೆಗೆ ಹೊರಟಿದ್ದೆ. ಸಣ್ಣದಾಗಿ ಮಳೆ ಹನಿಯುತ್ತಿತ್ತು. ಮನಸ್ಸಿಲ್ಲದಿದ್ದರೂ ಆ ರೈನ್ ಕೋಟ್ ಏರಿಸಿಕೊಂಡು ಹೊರಟೆ. ಅರಳಿಮರ ದಾಟಿ ಅದೇ ಆ ಮನೆ ಹತ್ರ ಬರ್ತಿದ್ದ ಹಾಗೆ ಮನಸ್ಸಲ್ಲಿ ಏನೇನೋ ಆಲೋಚನೆ. ಹಾಗೇ ಬಗ್ಗಿ ನೋಡಿದೆ. ಮನೆ ಹೊರಗೆ ಯಾರೂ ಕಾಣಲಿಲ್ಲ. ಕಂಪೌಂಡು ಹತ್ತಿದರೆ ಎಟುಕುವಷ್ಟು ಎತ್ತರದಲ್ಲಿ ಬಳ್ಳಿಗುಲಾಬಿ ಹೂಗಳು ಕಂಡವು, ಹತ್ತಿ ಒಂದು ಹೂ ಕಿತ್ತೇ ಬಿಡೋಣವೆನಿಸಿತು. ಆ ಕ್ಷಣದಲ್ಲಿ ಅಮ್ಮ ಬೇಗ ಬಾ ಅಂದಿದ್ದೆಲ್ಲ ಮರ್ತೇ ಹೋಗಿತ್ತು.
ಕಷ್ಟ ಪಟ್ಟು ಆ ಕಟ್ಟೆ ಹತ್ತಿ ಹೂ ಕೀಳುವಷ್ಟರಲ್ಲಿ ಅತ್ತ ಕಡೆಯಿಂದ ಯಾರೋ ಕೂಗುತ್ತಿದ್ದರು. "ಯಾರು ಅದು ಕಂಪೌಂಡ್ ಮೇಲೆ " ನಂಗೆ ಭಯವಾಗಿ ಏನು ಮಾಡುವುದೆಂದೇ ತಿಳಿಯದೆ ರಸ್ತೆಕಡೆ ಜಿಗಿಯುವುದು ಬಿಟ್ಟು ಒಳಗಡೆಯೇ ಜಿಗಿದುಬಿಟ್ಟೆ. ಅಚ್ಚ ನೀಲಿ ಬಣ್ಣದ ಸೀರೆ ಉಟ್ಟಿದ್ದ ಕಪ್ಪು ಕನ್ನಡಕ ಮೇಲೇರಿಸುತ್ತ
ಬಂದ ಅಜ್ಜಿ ನನ್ನೆದುರಿಗೆ ನಿಂತು "ಇಲ್ಲೇನ್ ಮಾಡ್ತಿದಿಯ ನೀನು ?" ಅಂದರು. ಕೈಲಿದ್ದ ಹೂ ತೋರಿಸಿದೆ. ಇನ್ನೇನು ಇವರು ಬಯ್ಯೋದಂತೂ ಗ್ಯಾರಂಟಿ , ಇನ್ನು ಅಮ್ಮಂಗೂ ಹೇಳಿದರೆ ಏನು ಕಥೆ ಅಂತೆಲ್ಲ ಯೋಚನೆಯಾಯ್ತು.
"ಪುಟ್ಟಮ್ಮ ಹಾಗೆಲ್ಲ ಹೇಳ್ದೆ ಕೇಳ್ದೆ ಮೇಲ್ಹತ್ತಿ ಹೂ ಕಿಳೋದು ತಪ್ಪಲ್ವಾ? ನೀ ಬಿದ್ದು ಪೆಟ್ಟಾಗಿದ್ರೆ ಏನ್ ಗತಿ? ನಿನಗೆ ಹೂ ಬೇಕಾಗಿದ್ರೆ ನನ್ನ ಕೇಳಿದ್ರೆ ಕೊಡ್ತಿಡ್ನಲ್ಲ. ಏನ್ ಹೆಸ್ರು ನಿಂದು ?"
"ಪಲ್ಲು , ಅಂದ್ರೆ ಪಲ್ಲವಿ "
"ಹೂಂ ತಗೋ ಹೂವು" ಅನ್ನುತ್ತಾ ಇನ್ನೊಂದೆರಡು ಹೂ ಕಿತ್ತು ನನ್ನ ಕೈಲಿಟ್ಟರು . ಏನೂ ಬಯ್ಯಲಿಲ್ಲ ಅಂತ ಸಮಾಧಾನವಾಯ್ತು ನಂಗೆ. ಅವರು ಇನ್ನೂ ಏನೇನೋ ಕೇಳ್ತಾ ಇದ್ರು ನನ್ನ. ನಾ ಮಾತ್ರ ಸುತ್ತಮುತ್ತ ನೋಡ್ತಾ ಇದ್ದೆ. ಎಷ್ಟೊಂದು ಹೂ ಗಿಡಗಳಿದ್ದವು. ಚಿಟ್ಟೆಗಳೆಲ್ಲ ಚಂದವಾಗಿ ಹಾರಾಡ್ತಾ ಇದ್ದವು ಗೌರಿ ಗಿಡದ ಹೂಗಳ ಮೇಲೆ. ನನ್ನ ಗಮನ ಬೇರೆ ಕಡೆಗೆ ಇದ್ದಿದ್ದು ನೋಡಿ ಅವರು "ಗಿಡ , ಹೂವು ಅಂದ್ರೆ ಇಷ್ಟವಾ ನಿಂಗೆ? ಬಾ ನನ್ಜೊತೆ. ನಮ್ಮ ತೋಟವೆನ್ನೆಲ್ಲ ತೋರಿಸ್ತೀನಿ ". ನನ್ನ ಮನಸಲ್ಲಿ ಇರೋದೆಲ್ಲ ಇವರಿಗೆ ಹೇಗೆ ಗೊತ್ತಾಯ್ತು ಅಂತ ಅನ್ನಿಸಿದರೂ ತುಂಬ ಖುಷಿಯಿಂದ ಹೊರಟೆ. " ನಿಮ್ ಹೆಸರೇನು ?" ನಾ ಕೇಳಿದಾಗ " ನನ್ನ ಎಲ್ರೂ ಮಾಮಿ ಅಂತಾನೆ ಕರ್ಯೋದು. ನಿನೂ ಹಾಗೇ ಕರಿ " ಅಂದರು.
ಹೂಂ ಅಂದು ಮುನ್ನಡೆಯುತ್ತಿದ್ದವಳಿಗೆ ಥಟ್ಟನೆ ಅಮ್ಮ ಬೇಗ ಬಾ ಅಂದಿದ್ದು ನೆನಪಾಯ್ತು. "ಮಾಮಿ ನಾನು ನಾಳೆ ಬಂದರೂ ನಿಮ್ಮ ತೋಟನೆಲ್ಲ ತೋರಿಸ್ತೀರ? ನಂಗೆ ಈಗ ಮನೆಗೆ ಹೋಗ್ಬೇಕು " ಅಂದೆ. "ಹೋ ಅದ್ಕೇನು ನಾಳೆ ಬಾ ಆರಾಮಾಗಿ ಸುತ್ತಾಡ್ಬೋದು " ಅಂದರು ಅವರು.
ಅವತ್ತು ಸಂಜೆಯೆಲ್ಲ ತುಂಬ ಖುಷಿಯಲ್ಲಿದ್ದೆ. ಮರುದಿನ ಶನಿವಾರ ಸಂಜೆ ಆಟವಾಡಲು ಹೋಗದೆ ಸೀದಾ ಮಾಮಿ ಮನೆಗೆ ಹೋದೆ. ನನ್ನ ನೋಡುತ್ತಲೇ ನಗು ನಗುತ್ತ ಕೈ ಹಿಡಿದು ತೋಟದಲ್ಲಿ ಸುತ್ತಾಡಲು ಕರೆದೊಯ್ದರು. ಎಷ್ಟೊಂದು ಹೂವಿನ ಗಿಡಗಳು. ನನಗೆ ಯಾವುದು ನೋಡಬೇಕೆಂದೇ ತಿಳಿಯಲಿಲ್ಲ. ಹೂವಿಗಂಟಿ ಕೊಂಡಿದ್ದ ಮಳೆಹನಿಗಳಲ್ಲಿ ಬೇರೆ ಹೂಗಳ, ಎಲೆಗಳ ಬಿಂಬ ಕಾಣುತ್ತಿತ್ತು . ಮತ್ತೆ ಎಲ್ಲ ಕಡೆ ಚಿಕ್ಕ ಚಿಕ್ಕ ಹುಲ್ಲು. ಹದವಾಗಿ ಬಿದ್ದ ಮಳೆಗೆ ಇನ್ನೂ ಸೊಂಪಾಗಿ ಬೆಳೆದಿತ್ತು. ನೆಲವೆಲ್ಲ ಒದ್ದೆ ಒದ್ದೆ. ಬೀಸುತ್ತಿದ್ದ ತಣ್ಣನೆಯ ಗಾಳಿಯಲ್ಲಿ ಅದೇನೋ ಒಂಥರಾ ಕಂಪಿತ್ತು.
ಆಚೆ ಪಕ್ಕದಲ್ಲಿ ಒಂದು ಸಣ್ಣ ಕೊಳವಿತ್ತು. ಕೊಳದಲ್ಲಿ ಪುಟ್ಟ ಪುಟ್ಟ ತಾವರೆ ಹೂಗಳು , ಗುಲಾಬಿ ಮತ್ತೆ ತಿಳಿ ನೀಲಿ ಬಣ್ಣದ್ದು. ತಾವರೆ ಎಲೆಗಳ ಮೇಲೆ ನೀರಹನಿಗಳು. ಅತ್ತ ಇತ್ತ ಜರುತ್ತಿರುವುದನ್ನು ನೋಡುತ್ತ ಅಲ್ಲೇ ನಿಂತು ಬಿಟ್ಟೆ. "ಮಾಮಿ ಇಷ್ಟೆಲ್ಲಾ ಗಿಡ ಯಾರು ಬೆಳೆಸಿದ್ದು ? ನೀವೇನಾ ?" ಎಂದೆ. "ನಾನೊಬ್ಳೆ ಅಲ್ಲ ಪುಟ್ಟಿ . ನಂಗೆ ಸಹಾಯ ಮಾಡುವುದಕ್ಕೆ ಆಳುಗಳಿದ್ದಾರೆ. ಈ ಮನೆಯಲ್ಲಿ ಇರೋದು ನಾನೊಬ್ಳೆ. ನನ್ನ ಒಬ್ಳೇ ಮಗಳು ಡೆಲ್ಲಿಯಲ್ಲಿ ಇರೋದು. ಅವಳಿಗೂ ನಿನ್ನಷ್ಟೇ ಪುಟ್ಟ ಮಗಳಿದ್ದಾಳೆ. ನಿನ್ನ ನೋಡಿ ನಂಗೆ ಅವಳದ್ದೆ ನೆನಪಾಯ್ತು. ನಿಂಗೆ ಇಲ್ಲಿ ಬರಬೇಕು ಅನ್ನಿಸಿದಾಗಲೆಲ್ಲ ಬಾ, ಗಿಡಗಳ ಜೊತೆ ಕಾಲ ಕಳಿ, ನಂಗೂ ಖುಷಿ ಆಗುತ್ತೆ " ಮಾಮಿ ಅಂದಾಗ ನಂಗೂ ಖುಷಿ ಆಯ್ತು.
ವಾರದಲ್ಲೊಂದೆರಡು ದಿನವಾದರೂ ನಾನು ಮಾಮಿ ಮನೆಗೆ ಹೋಗೇ ಹೋಗುತ್ತಿದ್ದೆ. ಸಂಜೆ ಹೊತ್ತಲ್ಲಿ ಅವರು ಗಿಡಗಳಿಗೆ ನೀರುಣಿಸುತ್ತಿದ್ದರೆ ನಾನೂ ನೀರು ಹಾಕ್ತೀನಂತ ಅವರ ಹಿಂದೆಯೇ ಓಡುತ್ತಿದ್ದೆ. ನಾನೂ ಒಂದು ಪುನ್ನಾಗ ಹೂವಿನ ಗಿಡ ನೆಟ್ಟು ನನ್ನ ಗಿಡ ಎಂದು ಸ್ವಲ್ಪ ಜಾಸ್ತಿನೇ ನೀರು ಆ ಗಿಡಕ್ಕೆ ಹಾಕ್ತಿದ್ದೆ. ಬೇರೆ ಗಿಡಗಳಿಗೆ ಅದು ಗೊತ್ತಾಗಿ ಬೇಜಾರಾಗಬಹುದ? ಅಂತ ಅನ್ನಿಸಿದರೂ ಆ ಗಿಡಕ್ಕೆ ಜಾಸ್ತಿ ನೀರು ಹಕುವುದೇನೂ ಬಿಡಲಿಲ್ಲ ನಾನು.
ಮಳೆಗಾಲ ಕಳೆದು ಛಳಿಗಾಲ ಶುರುವಾದಾಗ ನನಗೆ ಒಂಥರಾ ನಿರಾಳವಾಗಿತ್ತು. ಅಬ್ಬ! ಆ ರೈನ್ ಕೋಟ್ ಹಾಕ್ಕೊಳೋದು ತಪ್ಪಿತು ಇನ್ಮೇಲೆ. ಹೇಗೂ ಮುಂದಿನ ಮಳೆಗಾಲಕ್ಕೆ ಕೊಡೆ ಕೊಡಿಸ್ತೀನಂತ ಅಮ್ಮ ಹೇಳಾಗಿದೆ. ಕೊಡಿಸ್ದೆ ಇದ್ರೆ ಬಿಡವ್ರು ಯಾರು ಅಂತ ನನಗೆ ನಾನೇ ಹೇಳಿಕೊಂಡೆ.
ಮಾಮಿ ಮನೆಯಲ್ಲಿ ಎರಡು ಪುಟಾಣಿ ಮೊಲಗಳನ್ನು ತಂದ ಮೇಲಂತೂ ಆ ಪುಟು ಪುಟು ಜಿಗಿದು ಓಡುತ್ತಿದ್ದ ಮೊಲಗಳೊಡನೆ ಓಡುತ್ತಿದ್ದ ನನ್ನನ್ನೂ ಹಿಡಿಯುವವರಿಲ್ಲವಾಯಿತು . ಬೆಣ್ಣೆ, ಬೆಳ್ಳಿ ಅಂತ ಹೆಸರನ್ನೂ ನಾನೇ ಇಟ್ಟಿದ್ದೆ ಅವಕ್ಕೆ. ಇನ್ನು ಆಡಲು ಹೋದಾಗ ನನ್ನ ಸ್ನೇಹಿತರೆದುರಿಗೆ ಹೇಳುವುದಕ್ಕೆ ನಂಗೆ ಇನ್ನೂ ಒಂದು ವಿಷಯ ಸಿಕ್ಕಂತಾಗಿತ್ತು.
ಅವತ್ತೊಂದು ದಿನ ನಾನು ಕೊಳದ ಬಳಿ ತಾವರೆ ಎಲೆಗಳ ಮೇಲೆ ಡ್ಯಾನ್ಸ್ ಮಾಡುತ್ತಿದ್ದ ನೀರಿನ ಹನಿಗಳನ್ನು ನೋಡುತ್ತ ಕುಳಿತಿದ್ದೆ. ಬೆಣ್ಣೆ ಬೆಳ್ಳಿ ಅಲ್ಲೇ ಎಲ್ಲೋ ಆಡ್ತಾ ಇದ್ದವು. "ತುಂಬ ಚಳಿ ಒಳಗೆ ಹೋಗೋಣ ಬಾ" ಮಾಮಿ ಕರೆದಾಗ ಇಲ್ಲವೆನ್ನಲಾಗದೆ ಹೋದೆ. ಮೊದಲ ಬಾರಿಗೆ ಅವತ್ತು ಮಾಮಿ ನನ್ನ ಮಹಡಿ ಮೇಲೆ ಕರೆದುಕೊಂಡು ಹೋಗಿದ್ದು . ಅಲ್ಲಿ ಒಂದು ಕೋಣೆಯಲ್ಲಿ ಹಳೆಯ ಸಾಮಾನುಗಳಿದ್ದವು. ನಾನು ಅದೇನು? ಇದೇನು? ಅಂತ ಯಾವತ್ತಿನ ಹಾಗೇ ಪ್ರಶ್ನೆಗಳ ಸುರಿಮಳೆ ಸುರಿಸುತ್ತ ಇದ್ದೆ. ಹಾಗೇ ನೋಡುತ್ತ ಅಲ್ಲೇ ಮೊಳೆಗೆ ನೇತು ಹಾಕಿದ್ದ ಪುಟ್ಟ ಕೊಡೆಯ ಮೇಲೆ ನನ್ನ ದೃಷ್ಟಿ ಬಿತ್ತು. ಆಹಾ ! ಎಷ್ಟು ಚಂದದ ಕೊಡೆ. ಆಕಾಶ ನೀಲಿ ಬಣ್ಣದ ಕೊಡೆ. ಗುಲಾಬಿ ಬಣ್ಣದ ಹಿಡಿಕೆ . ಕೊಡೆಯ ಮೇಲೆಲ್ಲ ಬಂಗಾರ ಬಣ್ಣದ ನಕ್ಷತ್ರದ ಚಿತ್ರಗಳಿದ್ದವು. ಮೊದಲೇ 'ಕೊಡೆ' ಎಂಬುದರ ಬಗ್ಗೆ ಏನೇನೋ ಕನಸು ಆಸೆಗಳಿದ್ದ ನನ್ನನ್ನು ಮೋಹಗೊಳಿಸಲು ಆ ಕೊಡೆಗೆ ಅರೆಕ್ಷಣವೂ ಬೇಕಾಗಲಿಲ್ಲ.
"ಅದ್ಯಾರ್ ಕೊಡೆ?" ಅದಾಗಲೇ ನಾ ಕೆಲಿಯಾಗಿತ್ತು. ಮಾಮಿ " ಓ ಅದಾ ನನ್ನಮಗಳು ಚಿಕ್ಕವಳಾಗಿದ್ದಾಗ ನನ್ನ ತಮ್ಮ ಬೆಂಗಳೂರಿಂದ ತಂದಿದ್ದು. ಇನ್ನೂ ಹಾಗೆ ಇದೆ ನೋಡು. ಬಾ ಕೆಳಗೆ ಹೋಗೋಣ. ದೇವರಿಗೆ ದೀಪ ಹಚ್ಹ್ಬೇಕು " ಅಂದಾಗ ತಿರು ತಿರುಗಿ ಮತ್ತೆ ಮತ್ತೆ ಕೊಡೆಯನ್ನೇನೋಡುತ್ತ ಕೆಳಗಿಳಿದೆ.
ಅವತ್ತು ಮನೆಗೆ ಹೋದರೂ ನನಗೆ ಆ ನೀಲಿ ಕೊಡೆಯದ್ದೇ ಗುಂಗು . ಎಷ್ಟು ಚಂದದ ಕೊಡೆ. ನನ್ನ ಹತ್ರವೂ ಅದೇ ಥರದ ಕೊಡೆ ಇದ್ರೆ ಎಷ್ಟು ಚಂದ. ಒಳ್ಳೆ ಆಕಾಶನ ನಾನೇ ಹೊತ್ತುಕೊಂಡು ಹೋದ ಹಾಗೆ ಅನ್ನಿಸಬಹುದೇನೋ ಅಲ್ವಾ? ನಕ್ಷತ್ರಗಳನ್ನ ಮುಟ್ಟಿ ಮುಟ್ಟಿ ನೋಡುತ್ತ ಆಹಾ!! ಹೀಗೆ ಏನೇನೋ ಆಲೋಚನೆಗಳು.
ಮರುದಿನ ಶಾಲೆಗೆ ಹೋಗುವಾಗ ನಿಮ್ಮಿ, ಪೂಜಾ ಹತ್ರ ಕೊಡೆ ಬಗ್ಗೆ ಹೇಳಿದೆ. ಮಂಜು , ವಿನ್ನಿ ಬಂದಾಗಲೂ ಮತ್ತೆ ಅದೇ ವಿಷ್ಯ. ಕೊಡೆ ಬಗ್ಗೆ ಹೇಳುತ್ತ ಹೇಳುತ್ತ "ಮುಂದಿನ ಮಳೆಗಾಲಕ್ಕೆ ಮಾಮಿ ಅದನ್ನ ನಂಗೇ ಕೊಡ್ತೀನಂತ ಹೇಳಿದ್ರು" ನನಗರಿವಿಲ್ಲದೆಯೇ ಸುಳ್ಳೊಂದು ಬಾಯಲ್ಲಿ ಬಂದಿತ್ತು. ಅವರು ನೋಡಿರದ ಆ ಚಂದದ ಕೊಡೆಯೊಂದು ನನಗೆ ಸಿಗಬಹುದೆಂದು ನಾನು ಯಾಕಾದರೂ ಹೇಳಿದೇನೋ ? ಅವರಲ್ಲಿ ಇರ್ಷ್ಯೇ ಹುಟ್ಟಿಸಲೆಂದಾ? ನಂಗೆ ಗೊತ್ತಾಗಲಿಲ್ಲ.
ಮತ್ತೆ ಮಾಮಿ ಮನೆಗೆ ಹೋದಾಗಲೆಲ್ಲ ಏನಾದರೂ ನೆಪ ಮಾಡಿ ಮಹಡಿ ಮೇಲಿನ ಕೋಣೆಗೆ ಹೋಗಿ ಆ ಕೊಡೆಯನ್ನು ಕಣ್ತುಂಬಿಕೊಂಡು ಬರುತ್ತಿದ್ದೆ. ಹಾಗೆ ನೋಡಿದಾಗಲೆಲ್ಲ ನಾ ಹೇಳಿದ ಸುಳ್ಳು ನೆನಪಾಗುತ್ತಿತ್ತು. ಆಡಲು ಹೋದಾಗಲೆಲ್ಲ ಪದೇ ಪದೇ ಚಂದದ ಕೊಡೆ ಮತ್ತು ಮಾಮಿ ಅದನ್ನು ನನಗೆ ಕೊಡುತ್ತಾರೆಂಬ ಸುಳ್ಳನ್ನು ನನ್ನ ಬಾಯಿಂದ ಕೇಳಿ ಕೇಳಿ ನನ್ನ ಸ್ನೇಹಿತರಿಗೆಲ್ಲ ಬೇಜಾರಾಗಿ ಹೋಗಿತ್ತು.
ಆಟ ಪಾಠ, ಕೊಡೆಯ ಕನಸಿನ ನಡುವೆ ದಿನಗಳು ಹೋಗಿದ್ದೆ ತಿಳಿಯಲಿಲ್ಲ. ವರ್ಷದ ಪರೀಕ್ಷೆಗಳೆಲ್ಲ ಮುಗಿದು ಬೇಸಿಗೆ ರಜೆ ಶುರುವಾಗಿ ನಾವೆಲ್ಲ ಬಾಲವಿಲ್ಲದ ಮಂಗಗಳಂತಾಗಿದ್ದೆವು. ಆಟ ಮುಗಿಸಿ ಮನೆಗೆ ಹೋಗುವಾಗ ಒಂದು ದಿನ ಮಾಮಿ ಮನೆಗೆ ಹೋದೆ. ಅವತ್ತವರು ತುಂಬ ಖುಷಿಯಾಗಿದ್ದರು. "ಬಾರೆ ಪಲ್ಲು,
ಮುಂದಿನವಾರ ನನ್ನ ಮಗಳು ಶರ್ಮಿ ಮತ್ತವಳ ಮಗಳು ನೇಹಾ ಬರ್ತಿದಾರೆ. 15 ದಿನ ಇಲ್ಲಿರೋದಕ್ಕೆ. ನಿನಗೆ ಅಡುವುದಕ್ಕೆ ಇನ್ನೊಬ್ಳು ಗೆಳತಿ ಸಿಕ್ಕ ಹಾಗಾಗುತ್ತೆ ". ನಾನೂ ಖುಷಿಯಲ್ಲಿ ಮನೆಗೆ ಬಂದೆ.
ಆ ಮುಂದಿನವಾರ ಅನ್ನೋದು ಬಂದೇ ಬಿಟ್ಟಿತ್ತು . ಶರ್ಮಿ ಆಂಟಿ ಮತ್ತು ನೇಹಾ ಬಂದ ಮೊದಲ ದಿನ ನಾನು ಬಹಳ ಮುಜುಗರದಿಂದಲೇ ಅವರ ಮನೆಗೆ ಹೋಗಿದ್ದೆ. ಒಂದು ದಿನಕ್ಕೆಲ್ಲ ಪುಟ್ಟ ನೇಹಾ ನನ್ನೊಡನೆ ಚೆನ್ನಾಗಿ ಹೊಂದಿಕೊಂಡಿದ್ದಳು. ನಾನು ಅವಳನ್ನು ತೋಟದ ತುಂಬೆಲ್ಲ ಸುತ್ತಾಡಿಸುತ್ತಿದ್ದೆ. ಬೆಣ್ಣೆಬೆಳ್ಳಿ ಜೊತೆ ಆಡೋದು , ತುಂಬೆ ಹೂವನ್ನು ಚೀಪಿ ಸಿಹಿ ರಸ ಹೀರೋದು , ಗಿಡದ ಸಂದುಗಳಲ್ಲೆಲ್ಲ ಬೆಳೆದ ಹುಳಿ ಸೊಪ್ಪು ತಿನ್ನೋದು , ಮರದ ಮೇಲೆ ಕೋಗಿಲೆ ಕೂ ಕೂ ಅಂತ ಕೂಗಿದಾಗಲೆಲ್ಲ ಅದರ ಜೊತೆ ನಾವೂ ಕೂ ಕೂ ಅಂತ ಕೂಗೋದು ಎಲ್ಲವೂ ಅವಳಿಗೆ ಹೊಸತೇ !! ಪ್ರತಿಯೊಂದೂ ಅವಳಿಗೆ ಅಚ್ಚರಿಯೇ !! ಖುಷಿ ಕೊಡುವ ಇಷ್ಟು ಚಿಕ್ಕ ಚಿಕ್ಕ ಸಂಗತಿಗಳೊಂದೂ ಅವಳಿಗೆ ಗೊತ್ತಿಲ್ಲದಿರುವುದನ್ನು ನೋಡಿ ನನಗೂ ಅಚ್ಚರಿಯೇ!!
ನನ್ನ ಪುಟ್ಟ ಪುನ್ನಾಗ ಹೂವಿನ ಗಿಡವನ್ನು ಅವಳಿಗೆ ತೋರಿಸಿದೆ. ನಾನೇ ನೆಟ್ಟು ನೀರು ಹಾಕಿ ಬೆಳೆಸಿದ್ದು ಅಂತನೂ ಹೇಳಿದೆ. ಆ ಗಿಡಕ್ಕೆ ಜಾಸ್ತಿ ನೀರು ಹಾಕುವ ವಿಚಾರವನ್ನು ಗುಟ್ಟೆಂಬಂತೆ ಕಿವಿಯಲ್ಲಿ ಪಿಸುಗುಟ್ಟಿದೆ.
ಒಂದು ದಿನ ಆಡಲು ಹೋಗುವಾಗ ನನ್ನೊಡನೆ ನೆಹಳನ್ನು ಕರೆದೊಯ್ದೆ. ನನ್ನ ಹೊಸ ಗೆಳತಿ ಡೆಲ್ಲಿಯಿಂದ ಬಂದಿದ್ದು ಹಾಗೆ ಹೀಗೆ ಅಂತೆಲ್ಲ ಮಾತುಕತೆಯಾಯ್ತು. ಆಟ ಮುಗಿಸಿ ವಾಪಸ್ ಬರುವಾಗ ದಾರಿಯಲ್ಲಿ ನಿಮ್ಮಿ ಹೇಳಿದಳು. " ಅಲ್ವೆ ಮಾಮಿ ನಿನಗೆ ಆ ನೀಲಿ ಕೊಡೆಯನ್ನು ನಿಂಗೇ ಕೊಡ್ತಾರೆ ಅಂತ ಈಗಲೂ ಅನ್ಸ್ತಿದ್ಯಾ ನಿನಗೆ? ಈಗ ನೇಹಾ ಬಂದಾದ ಮೇಲೆ ಅವಳಿಗೆ ತಾನೆ ಅದನ್ನು ಕೊಡೋದು . ಇಷ್ಟು ದಿನ ಭಾರಿ ಜಂಭದಿಂದ ಬೀಗ್ತಿದ್ದೆ ನೀನು. ಈಗೇನು ಮಾಡ್ತೀಯ ?" ನಂಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ಆ ಆಲೋಚನೆ ಅದುವರೆಗೂ ನನ್ನ ತಲೆಗೆ ಬಂದೇ ಇರಲಿಲ್ಲ.
ಅವತ್ತು ರಾತ್ರಿ ಮಲಗುವಾಗಲೂ ಅದೇ ಯೋಚನೆ. ಮಾಮಿ ಆ ಕೊಡೆಯನ್ನು ಅವಳಿಗೇ ಕೊಟ್ಟು ಬಿಟ್ರೆ ಏನ್ ಮಾಡೋದು ? ನಕ್ಷತ್ರ ತುಂಬಿದ ನೀಲಿ ಆಕಾಶ ಕೈಲಿ ಹಿಡ್ಕೊಂಡು ಹೋಗಬೇಕು ಅಂತ ಅನ್ಕೊಂಡಿದ್ದೆಲ್ಲ ಆಗೋದೆ ಇಲ್ವಾ ? ಯೋಚಿಸಿದಷ್ಟೂ ಮತ್ತೂ ಮತ್ತೂ ಬೇಜಾರಾಯ್ತು. ನೇಹಾ ಯಾಕಾದ್ರೂ ಬಂದಳೋ ಅಂತನೂ ಅನ್ನಿಸಿತು. ಮತ್ತೆ ಗೆಳತಿಯರ ಮುಂದೆಲ್ಲ ಜಂಭ ಕೊಚ್ಚಿಕೊಂಡಿದ್ದೆ ಬಂತು. ಈಗ ಕೊಡೆ ಸಿಗದೆ ಇದ್ರೆ ಅವರೆಲ್ಲ ನನ್ನ ಗೇಲಿ ಮಾಡಬಹುದಲ್ವಾ ? ಅದಕ್ಕೇ ಅಮ್ಮ ಹೇಳೋದು ಅನ್ಸುತ್ತೆ ಸುಳ್ಳು ಹೇಳಬಾರದು ಯಾವಾಗಲೂ ಅಂತ. ಯಾಕೆ ಹೀಗಾಯ್ತು? ಅಳೂನೇ ಬಂತು ನಂಗೆ. ಸುಮ್ಮನೆ ಮುಸುಕೆಳೆದುಕೊಂಡು ಮಲಗಿದೆ.
ಮತ್ತೆರಡು ದಿನ ಆಡುವುದಕ್ಕೆ ಹೋಗದೆ ಮನೆಯಲ್ಲೇ ಇದ್ದೆ. ಮೂರನೆ ದಿನ ಅದೇ ದಾರಿಯಾಗಿ ಹೋಗುತ್ತಿದ್ದಾಗ ಗೇಟಿನ ಬಳಿ ನಿಂತಿದ್ದ ನೇಹಾ ನನ್ನನ್ನು ಕರೆಯುತ್ತಿದ್ದಳು . ನಂಗೆ ಮತ್ತೆ ಆ ಕೊಡೆ, ನಿಮ್ಮಿ ಹೇಳಿದ್ದು ಎಲ್ಲ ನೆನಪಾಗಿ , ಕರೆದಿದ್ದು ಕೇಳಿಯೂ ಕೇಳದವಳಂತೆ ತಿರುಗಿ ನೋಡದೆಯೇ ಮನೆಗೋಡಿ ಬಂದುಬಿಟ್ಟೆ.
ಮರುದಿನ ಸಂಜೆ ಮನೆಯಿಂದ ಹೊರ ಬಂದಾಗ ಆಕಾಶದಲ್ಲೆಲ್ಲ ಮೋಡ ಕಟ್ಟಿತ್ತು . ನಾನು ತಟ್ಟೆಯಲ್ಲಿ ಬೂಂದಿ ಕಾಳುಗಳನ್ನಿಟ್ಟುಕೊಂಡು ಅಂಗಳಕ್ಕಿಳಿದೆ.ಅಲ್ಲೇ ಸಂದಿಯಲ್ಲಿ ಇರುವೆ ಗೂಡಿನ ಬಳಿ ಹೋಗಿ ತುದಿಗಾಲಲ್ಲಿ ಕುಳಿತು ಒಂದೊಂದೇ ಕಾಳನ್ನು ಇರುವೆಗಳತ್ತ ಬೀರುತ್ತ ಅವು ಅದನ್ನು ಕಚ್ಚಿ ಎಳೆದುಕೊಂಡು ಹೋಗುವುದನ್ನೇನೋಡುತ್ತಿದ್ದೆ.
"ಪಲ್ಲು" ಯಾರೋ ಕರೆಂತಾಗಿ ಹಿಂತಿರುಗಿದೆ. ಮಾಮಿ ಮತ್ತು ನೇಹಾ ನಿಂತಿದ್ದರು. "ಯಾಕೆ ಪಲ್ಲು ಸುಮಾರು ದಿನದಿಂದ ಮನೆ ಕಡೆ ಬಂದಿಲ್ಲ. ಆಡುವುದಕ್ಕೂ ಹೋಗಿದ್ದು ಕಂಡಿಲ್ಲ. ನಿನಗೇನಾದರೂ ಹುಶಾರಿಲ್ವೇನೋ ಅಂತ ನಾವೇ ನೋಡೋದಕ್ಕೆ ಬಂದ್ವಿ . ನೇಹಾ ನಾಳೇನೇ ಹೊರಡುವುದು . ನಿನಗೆ ಟಾಟಾ ಹೇಳಬೇಕು
ಅಂದ್ಲು ." "ಅರೆ ಒಳಗೆ ಬನ್ನಿ" ಅಮ್ಮ ಅದಾಗಲೇ ಹೊರಬಂದು ಎಲ್ಲರನ್ನೂ ಒಳಗೆ ಕರೆದಳು . ಸ್ವಲ್ಪ ಹೊತ್ತಿನ ಮಾತುಕತೆಯ ನಂತರ ಅಮ್ಮ "ನೀ ಅವರ ಮನೆಗೆ ಹೋಗಿ ಸ್ವಲ್ಪ ಹೊತ್ತು ಇದ್ದು ಬಾ. ನಾಳೆನೆ ಹೋಗ್ತಾಳಲ್ಲ ನಿನ್ನ ಗೆಳತಿ " ಅಂದಳು .ಸರಿ ಎನ್ನುತ್ತ ಅವರ ಜೊತೆ ಹೋದೆ.
ಸ್ವಲ್ಪ ಹೊತ್ತಿಗೇ "ಮಳೆ ಬರೋ ಹಾಗಿದೆ. ನಾನಿನ್ನು ಹೋಗ್ಬೇಕು" ಅಂತ ಹೊರಟ ನನ್ನನ್ನು ಮಾಮಿ "ಇರು ಒಂದು ನಿಮಿಷ ಬಂದೆ" ಅಂದು ಒಳಗೆ ಹೋದರು. ಹೊರಗೆ ಬಂದಾಗ ಮಾಮಿಯ ಒಂದು ಕೈಲಿ ಅದೇ ಆ ನೀಲಿ ಕೊಡೆ, ನಕ್ಷತ್ರ ತುಂಬಿದ ಆಕಾಶದಂತ ಕೊಡೆ ಇತ್ತು . ಇನ್ನೊಂದು ಕೈಲಿ ಜರಿಯಂಚಿನ ಹಸಿರು ಲಂಗ. "ಇವೆರಡೂ ನಮ್ಮ ಶರ್ಮಿದೆ . ನಿಮ್ಮಂತಾ ಪುಟಾಣಿಗಳು ಇರುವಾಗ ಇವಕ್ಕೆ ಮಹಡಿ ಮೇಲಿನ ಕೋಣೆಯಲ್ಲೇನು ಕೆಲಸ ? ನೇಹಾ ಇದು ನಿನಗೆ" ಅಂತ ಲಂಗವನ್ನು ಅವಳ ಕೈಲಿಟ್ಟರು ."ಪಲ್ಲು ಬಾ ಇಲ್ಲಿ , ನಿಂಗೆ ಈ ನೀಲಿ ಕೊಡೆ ಅಂದ್ರೆ ತುಂಬ ಇಷ್ಟ ಅಲ್ವಾ? ಅದಕ್ಕೇ ಇದು ನಿಂಗೆ". ನಂಗೆ ನಂಬಲೇ ಆಗಲಿಲ್ಲ , ಮೊದಲ ಬಾರಿಗೆ ಆ ಕೊಡೆಯನ್ನು ಕೈಲಿ ಹಿಡಿದಿದ್ದೆ. ಮೆಲ್ಲನೆ ಸವರಿದೆ. ನನ್ನ ಕಣ್ಣುಗಳೂ ಬಹುಶಃ ಕೊಡೆಯ ಮೇಲಿದ್ದ ನಕ್ಷತ್ರಗಳಂತೆ ಹೋಳೆಯುತ್ತಿದ್ದವೇನೋ!! ನಾನು ಸುಳ್ಳು ಹೇಳಿದ್ದು , ಕೊಡೆಯ ಬಗ್ಗೆ ಆಸೆ ಪಟ್ಟು ನೇಹಾ ಮೇಲೆ ಅಸೂಯೆ ಪಟ್ಟಿದ್ದು, ಮಾತಾಡಿಸದೇ ಒಡಿ ಹೋಗಿದ್ದು ಎಲ್ಲ ನೆನಪಾಗಿ ನಾಚಿಕೆಯಾಯ್ತು. "ನಂಗೆ ಬೇಡ ನಂಗೆ ಬೇಡ" ಅಂದೆ. ಮಾಮಿ ಪ್ರೀತಿಯಿಂದ ತಲೆ ಸವರಿ "ನಿನಗೇ ಇದು ಇಟ್ಕೋ. ನಿನ್ನಮ್ಮಂಗೆ ನಾನು ಹೇಳ್ತೀನಿ" ಅಂದಾಗ ಸುಮ್ಮನಾದೆ. ಮಾಮಿಯತ್ತ ಪ್ರೀತಿಯ ನಗೆ ಬೀರಿ, ನೇಹಾಗೆ ಟಾಟಾ ಹೇಳಿ ಹೊರಟೆ.
ಹೊರಗೆ ಕಾಲಿಡುತ್ತಿದ್ದಂತೆ ಬರ್ರ ಬರ್ರನೆ ಮಳೆ ಸುರಿಯಲು ಶುರುವಾಯಿತು . ಪಕ್ಕಕ್ಕೆ ನೋಡಿದೆ. ಬೆಣ್ಣೆ, ಬೆಳ್ಳಿ ಇಬ್ರೂ ಮಳೆಯಲ್ಲೇ ಹುಲ್ಲುಗಳ ಮೇಲೆ ಜಿಗಿಯುತ್ತ ಓಡ್ತಾ ಇದ್ದವು. ಎರಡು ಬಿಳಿ ಮೋಡಗಳು ಆಕಾಶದಿಂದ ಉದುರಿಬಿದ್ದಿವೆಯೇನೋ ಅನ್ನೋ ಹಾಗೆ ಕಂಡಿತು ನಂಗೆ. ತಲೆಯೆತ್ತಿ ಮೇಲೆ ನೋಡಿದೆ. ಆಕಾಶವೇ ಕಾಣಲಿಲ್ಲ. ಬರೀ ಮಳೆ ಹನಿಗಳೇ ಕಂಡವು. ನಂಗೆ ನಗು ಬಂತು. "ಅಲ್ಲ ಆಕಾಶ ಯಾಕೆ ಕಾಣಬೇಕು? ನನ್ನ ಕೈಲೇ ಇದೆಯಲ್ಲ ಆಕಾಶ" ಅಂತ. ಮೆಲ್ಲನೆ ಕೊಡೆ ಬಿಚ್ಚಿದೆ. ಮತ್ತೆ ಮೇಲೆ ನೋಡಿದೆ. ಈಗ ಎಲ್ಲ ನೀಲಿ ನೀಲಿಯಾಗಿ ಕಂಡಿತು. ಆಕಾಶವನ್ನು ನಾನು ಕೈಲಿ ಹಿಡಿದಿದ್ದೆ. ಕೊಡೆಯ ಮೇಲೆ ಬಿದ್ದ ನೀರು ಪಟ ಪಟ ಶಬ್ದ ಮಾಡುತ್ತ ಕೊಡೆಯಂಚಿನಿಂದ ಹನಿದು ಕೆಳಗೆ ಬೀಳುತ್ತಿತ್ತು. ನಾನು ಹಿಂತಿರುಗಿದೆ. ಮಾಮಿ, ನೇಹಾ ಬಾಗಿಲ ಬಳಿ ನಿಂತು ಕೈ ಬೀಸುತ್ತಿದ್ದಿದ್ದು ಮಳೆಯ ನೀರಲ್ಲಿ ಮಸುಮಸುಬಾಗಿ ಕಂಡಿತು. ನಾನೂ ಅವರತ್ತ ಕೈ ಬೀಸಿ ನನ್ನ ಪುಟ್ಟ ಆಕಾಶ ಹೊತ್ತು ಮನೆಯತ್ತ ನಡೆದೆ.
20 comments:
ಶ್ಯಾಮು...
ಎಷ್ಟು ಚಂದವಲೆ...ನಿನ್ನ ನೀಲಿ ಕೊಡೆ, ಯಂಗೂ ಒಂದಿನ ಕೊಡೆ....
:)
ಕೊಡನ ತಗ ಅದ್ಕೆಂತು. ಇಬ್ರು ಒಂದೇ ಕೊಡೆಲ್ಲಿ ಹೋಪನ. ಇಬ್ರೂ ಒದ್ದೆಯಾಗಲಕ್ಕು :)
Shyama tumba chanagide , nange navu college ge hogowaga kode ge jagla adtha iddiddu nenpaythu...Tumba chanagide .. enta kalpane neeli kode gu aakashakku... waw excellent
ಚೋ ನೈಚ್! ;) ನೀಲಿ ಬಾನಲ್ಲೇ ನಕ್ಷತ್ರಗಳು..! ಎಷ್ಟ್ ಚನಾಗಲ್ದಾ? ಕೊಡೆ ನಂಗೂ ಬೇಕೂ... :'(
Smitha
ಹೂಂ.. ಅದನ್ನ ಹೇಗೆ ಮರೆಯೋದು ಹೇಳು. ದಿನಾ ಮಧ್ಯಾಹ್ನ ಕೊಡೆ ಮರ್ತು ಬಂದು ನೀನು ಮೇಲೆ ಹೋಗಿ ತಗೊಂಡು ಬಾ ,ನೀನು ಮೇಲೆ ಹೋಗಿ ತಗೊಂಡು ಬಾ ಅಂತ ಕಚ್ಚಾಡ್ತಿದ್ವಲ್ಲ :-) , ಬಾಪಿ ಮತ್ತೆ ನುಂಕ್ಸು ನಮ್ಮಿಬ್ರನ್ನು ಬಿಸಿಲಲ್ಲಿ ನಡೆಸ್ತಿದ್ರಲ್ಲ, ತಾವಿಬ್ರು ಕೊಡೆ ಹಿಡ್ಕೊಂಡು :-(
ಥ್ಯಾಂಕ್ಸ ಕಣೆ.
ಸುಶ್ರುತ
ನಿನ್ನೆ ರಾತ್ರಿ ಆಕಾಶ ನೋಡಕ್ಕರೆ ನಂಗೂ ಹಂಗೆ ಅನ್ಸ್ತು. ರಾತ್ರಿನೂ ನೀಲಿ ನೀಲಿ ಹಂಗೇ ಇದ್ದು ನಕ್ಷತ್ರ ಇದ್ರೆ ಇನ್ನೂ ಚಂದ ಅಂತ.
ಸಣ್ಣಕ್ಕಿರಕ್ಕಾರೆ ನಂಗೆ ಇಂಥಾದ್ದೇ ಏನೇನೋ ಅಲೋಚನೇ ಬತ್ತಿತ್ತು. mostly ಅದೇ ಥರ imagination ಮಾಡ್ಕ್ಯಂಡು ಕಥೆ ಬರ್ದಿದ್ದಕ್ಕೆ ಕಥೆಲ್ಲೂ ಅದೇ ಬಂದಿದ್ದು.
ನಿಂಗೂ ಬೇಕಾ ಕೊಡೆ. ಕೊಡದಿಲ್ಲೆ ಅಂತ ಹೇಳದಿಲ್ಲೆ. :)
ನೀನೂ ಬಾ, ಈಗ್ಲೆ ಇಬ್ರಾಯ್ದ್ಯ ಕೊಡೆಲ್ಲಿ ನೀ ಒಬ್ಬವ ಹೆಚ್ಚೇನಲ್ಲ :)
ಶ್ಯಾಮಾ,
ಸೂಪರ್, ಇನ್ನೂ ಒಂಸ್ವಲ್ಪ ತಿದ್ದಿ ಬರೆದಿದ್ದರೆ ಇನ್ನೂ ಚಂದ ಬರ್ತಿತ್ತು.
ಕೇಶವ (www.kannada-nudi.blogspot.com)
ತುಂಬೆ ಹೂವು ಚೀಪದು, ಹುಳಿ ಸೊಪ್ಪು ತಿನ್ನದು... ಅಯ್ಯೋ... ಮನೆ ನೆನಪಾಗ್ತಾ ಇದ್ದು.
ನವಿರಾದ ಬರಹ . ಒಂದೆ ಗುಕ್ಕಿನಲ್ಲಿ ಓದಿಸಿಕೊಂಡು ಹೋಯ್ತು.
~ಮಧು
:-)
ಇದ್ನೋದಿದ್ ಮೇಲೆ, ಎದ್ರಿಗಿಪ್ಪ ವಿಶಾಲವಾದ ಕೆರೆಯ ನೀಲಿ ನೀರಲ್ಲೆಲ್ಲ ಪಲ್ಲುದೇ ಚಿತ್ರ:)
Keshav Kulkarni,
ಧನ್ಯವಾದಗಳು, ಬರವಣಿಗೆ ಮೆಚ್ಚಿದ್ದಕ್ಕೆ ಮತ್ತೆ ಸಲಹೆಗೆ.
ಮಧು,
ತುಂಬೆ ಹೂವು ಚೀಪದು, ಹುಳಿ ಸೊಪ್ಪು ತಿನ್ನದು.ಎಷ್ಟು ಚಂದ ಅಲ್ದಾ?
ಧನ್ಯವಾದಗಳು.
Alpazna,
:)
ನೀಲಿ ಕೊಡೆಯಲ್ಲಿ ಎಂಗೂ ಜಾಗ ಇದ್ದಾ?
ನಿಂಗೂ ಜಾಗ ಬೇಕಾ? ಸರಿ ಬಾ ನಿಂಗೂ ಜಾಗ ಕೊಡನ :)
ಶ್ಯಾಮಾ,
ನಂಗೆ ಕೊಡೆಗಿಂತ ಇಷ್ಟು ಸುಂದರವಾದ ಕಥೆ ಬರೆದ ನಿನ್ನ ನೋಡವು ಕಾಣಸ್ತಾ ಇದ್ದು. ನಿಜಕ್ಕೂ ನಿಂದು ಅತ್ಯಂತ ಸುಂದರ ಮನಸ್ಸು. ಭೇಟಿಯಾಗನ ಅಲ್ದಾ? ;-) ಮೊಲಗಳೆಂದರೆ ನಂಗೂ ರಾಶಿನೇ ಇಷ್ಟ... ನಿಜಕ್ಕೂ ಪಲ್ಲೂನ ಕಂಡ್ರೆ ಸ್ವಲ್ಪ ಅಸೂಯೆ ಆಗ್ತು;-)
ತೇಜಸ್ವಿನಿ
:)
ಖಂಡಿತ ಭೇಟಿಯಾಗನ.
ಪಲ್ಲುವಿನಂತ ಪುಟಾಣಿ ಹುಡುಗಿ ನನ್ನೊಳಗೆ ಯಾವಾಗಲೂ ಇರ್ತು :) ಕೆಲವೊಮ್ಮೆ ಹಿಂಗೆ ಕಥೆಯಾಗಿ ಹೊರಗೆ ಬತ್ತು ;-)
Thanks.
ಬಾಲರ ಭಾವನೆಗಳನ್ನು ಎಷ್ಟು ನೈಜವಾಗಿ ಚಿತ್ರಿಸಿದ್ದೀರಲ್ಲ!
sunaath,
ಧನ್ಯವಾದಗಳು.
Hi,Shyama. Nangantoo "Neeli Kode" odi tumba khushi aatu. Ninna mele sittoo batta iddu. Yake heli gottidda? Nange ishtu dina adru kathe barete heli heliddille adke:)...
Nange nanu shalege hopaga Amma jade hakudu, Appa shalege karkand hopudu ella nenpatu.
Thanks Swarna,
Sit entakke? monne kathe bariti heLi ashte alla kathenu heLidnale ashtottu kutgandu :)
hfsfk jdh zcvn
wow gold
cheap wow gold
buy wow gold
cheapest wow gold
world of warcraft gold
wow
world of warcraft
wow gold
wow gold
wow gold
wow gold
wow gold
wow gold
wow gold
wow gold
wow gold
wow gold
wow gold
wow gold
wow gold
wow gold
maple story
maple story mesos
maplestory mesos
maplestory
maple story mesos
maple story cheats
maple story hacks
maple story guides
maple story items
lotro
lotro gold
buy lotro gold
lotro cheats
lotro guides
google排名
google左侧排名
google排名服务
百度推广
百度排名
商业吧
网站推广
福州热线
体育博客
股票博客
游戏博客
魔兽博客
考试博客
汽车博客
房产博客
电脑博客
nba live
logo design
website design
web design
窃听器
手机窃听器
商标设计
代考
高考答案
办理上网文凭
代考
Post a Comment