Thursday, July 24, 2008

ಹೀಗೇ ಒಂದಿಷ್ಟು ಮಾತುಕತೆ

ಅವತ್ತೊಂದು ದಿನ ಹೀಗೇ ಏನೋ ಓದುತ್ತ ಕುಳಿತಿದ್ದೆ. ದೀಕ್ಷಾ ಪುಟಾಣಿ ಅಲ್ಲೇ ಆಡುತ್ತ ಏನೋ ಮಾಡುತ್ತಿದ್ದಳು. ಇದ್ದಕ್ಕಿದ್ದಂತೆ ಹೊರಗಡೆ ಏನೋ ಸದ್ದಾಯ್ತು. ಗುಂಯ್ ಗುಂಯ್ ಎಂದು ಸದ್ದು ಇನ್ನೂ ಜೋರಾಯಿತು. ಹೊರಗೆ ಸಮೀಪದಲ್ಲಿ ವಿಮಾನವೊಂದು ಹಾರುತ್ತಿತು ಅದರದ್ದೇ ಗಲಾಟೆ. ನನ್ನ ಯಾವತ್ತಿನ ಅಭ್ಯಾಸದಂತೆ "ಹೇಯ್ ಬಾರೆ ದೀಕ್ಷಾ ಹೊರಗೆ ನೋಡು ಏನೋ ಶಬ್ದ. ಏನೋ ತೋರ್ಸ್ತಿ ಬಾ " ನಾನು ಕೂಗಿದೆ. ಅವಳಿಗೆ ವಿಮಾನ ತೋರಿಸಬೇಕು ಅಂತ ನಾನು ಬಹಳ ಉತ್ಸಾಹದಲ್ಲಿದ್ದೆ. ಆದರೆ ನನ್ನಆಶ್ಚರ್ಯಕ್ಕೆ ಅವಳು ಯಾವುದೇ ಉತ್ಸಾಹ ತೋರದೆ ಬಹಳ ಉದಾಸೀನ ಭಾವದಲ್ಲಿ " ಅದು ಬೇರೆ ಏನೂ ಅಲ್ಲ. ವಿಮಾನಹೋಗ್ತಾ ಇದೆ ಅದರದ್ದೇ ಶಬ್ದ ಅಷ್ಟೆ." ಅಂದಳು ನನಗೆ ಅಷ್ಟೂ ಗೊತ್ತಿಲ್ಲ ಎಂಬಂತೆ.

ಅಷ್ಟು ಪುಟಾಣಿ ಹುಡುಗಿಯ ಕೈಯಲ್ಲಿ ನಂಗೆ ಮಂಗಳಾರತಿ ಆಗಿತ್ತು. ನನ್ನ ಉತ್ಸಾಹವೆಲ್ಲ ಠುಸ್ ಪಟಾಕಿಯಂತೆ ಆರಿ ಹೋಗಿತ್ತು. ಈಗಿನ ಮಕ್ಕಳನ್ನು ನಮ್ಮ ಬಾಲ್ಯ ಕಾಲದ ಮಕ್ಕಳಂತೆ ಹೋಲಿಸಿಕೊಂಡು ನಾನು ಅವಳನ್ನು ಕೂಗಿದ್ದು ನನ್ನ ತಪ್ಪೇ ಆಗಿತ್ತು.

ಈಗಿನ ಮಕ್ಕಳಿಗೆ ಆಶ್ಚರ್ಯ ಎನ್ನುವುದು ಯಾವುದೂ ಉಳಿದಿಲ್ಲ ಅಂತ ನನ್ನ ಭಾವನೆ. ಉದಾಹರಣೆಗೆ ವಿಮಾನವೇ. ನಾವೆಲ್ಲ ಚಿಕ್ಕವರಾಗಿದ್ದಾಗ ಆಕಾಶದಲ್ಲಿ ಒಂಚೂರು ಶಬ್ದವಾದರೂ ಸಾಕು ಪಿಳ್ಳೆಯಂತೆ ಕಾಣುತ್ತಿದ್ದ ವಿಮಾನವನ್ನು ನೋಡಲು ಎಲ್ಲಿದ್ದರೂ ಓಡಿ ಹೊರಗೆ ಬಂದು ಮೇಲೆ ನೋಡುತ್ತಿದ್ದೆವು. ಎಲ್ಲಾದರೂ ನಮಗೆ ಅದು ಕಾಣದೇ ಬೇರೆಯವರಿಗೆ ಮಾತ್ರ ಕಂಡುಬಿಟ್ಟಿದ್ದರೆ ಬೇಜಾರಾಗುತ್ತಿತ್ತು. ಈಗಿನ ಮಕ್ಕಳು ವಿಮಾನವನ್ನು ಆಕಾಶದಲ್ಲಿ ನೋಡುವುದೇನು ಎಷ್ಟೋ ಸಲ ವಿಮಾನದಲ್ಲಿ ಕೂತು ಹಾರಾಡಿಯೂ ಇರುತ್ತಾರೆ. ಬೆಂಗಳೂರಿನಂತ ಊರಲ್ಲಿ ದಿನಾ ಬೆಳಗಾದರೆ ಆಕಾಶದಲ್ಲಿ ಎಷ್ಟೋ ವಿಮಾನ ಹಾರುತ್ತಿರುವುದು ಬೇಡಅಂದರೂ ಕಣ್ಣಿಗೆ ಬಿದ್ದೇ ಬೀಳುತ್ತದೆ. ಅದಕ್ಕೇ ಅವರಿಗೆ ನಮ್ಮಂತೆ ಅದರಲ್ಲಿ ಯಾವುದೇ ವಿಶೇಷತೆ ಕಾಣುವುದಿಲ್ಲ.

ಈಗಿನ ಮಕ್ಕಳಿಗೆ ಇಂಥದ್ದು
ಬೇ.. ಅನ್ನುವುದಕ್ಕಿಂತ ಮೊದಲೇ ತಂದುಕೊಟ್ಟುಬಿಡುತ್ತೇವೆ. ಅದೇ ಕಾರಣಕ್ಕೆ ಮಕ್ಕಳಿಗೆ ನಮ್ಮಂತೆ ನಾನು ದೊಡ್ಡವಳಾದ ಮೇಲೆ ದುಡಿಯುವಂತವಳಾದ ಮೇಲೆ ಇಂಥದ್ದನ್ನು ನಾನೇ ತಗೋಬೇಕು" ಅನ್ನುವ ಆಸೆ, ಭಾವನೆಬರುವುದೇ ಇಲ್ಲವೇನೋ ಬಹುಷಃ .

ಇದು ಒಂದು ಉದಾಹರಣೆಯಷ್ಟೇ. ಎಲ್ಲವೂ ಕೈಗೆಟುಕುವುದರಿಂದ ಇನ್ನೂ ಎಷ್ಟೋ ವಿಷಯಗಳಲ್ಲಿ ಮಕ್ಕಳಿಗೆ ಕುತೂಹಲವೆ ಉಳಿದಿಲ್ಲ. ಮಕ್ಕಳಿಗೆ ಆಶ್ಚರ್ಯ ಎನ್ನುವುದಕ್ಕೆ ಏನೂ ಉಳಿದಿಲ್ಲವೇನೋ! ವಯಸ್ಸಿಗೆ ಮೀರಿ ಎಲ್ಲವೂ ಈಗಿನ ಮಕ್ಕಳಿಗೆ ಗೊತ್ತಿರುತ್ತದೆ. ನಮ್ಮಂತೆ ಆಕಾಶ ನೋಡಿ ಚಂದ್ರ ನಕ್ಷತ್ರಗಳನ್ನು ನೋಡಿ ಆನಂದಿಸೋ ಮನಸ್ಥಿತಿ ಯಾರಿಗೂ ಇಲ್ಲ. ಅದರಲ್ಲೇನಿದೆ ಅನ್ನುವ ನಿರ್ಭಾವುಕ ಮನೋಭಾವ. ನೀತಿ ಕಥೆಗಳು, ಪದ್ಯಗಳು ಯಾರಿಗೆ ಬೇಕಾಗಿದೆ ಈಗ ? ಅವು ಏನೆಂದೇ ಗೊತ್ತಿಲ್ಲ. ನಮ್ಮ ಕಾಲದ ಕಾಗಕ್ಕ ಗುಬ್ಬಕ್ಕಗಳೆಲ್ಲ ಎಲ್ಲಿಗೋ ಹಾರಿ ಹೋಗಿ ಬಹಳ ವರ್ಷಗಳಾಗಿಬಿಟ್ಟಿದೆ. ಹೀಗೆಲ್ಲ ಯೋಚಿಸಿದಾಗ ಬೇಜಾರಾಗುತ್ತದೆ
ನನಗೆ.

ದಿನಾ ಸಂಜೆ ಟೆರೆಸ್ ಮೇಲೆ ಸುಮ್ಮನೇ ಗಾಳಿಗೆ ಮೈಯೊಡ್ಡಿ ನಿಂತು ಲಹರಿಯಲ್ಲಿ ಯೋಚಿಸುತ್ತಿರುವಾಗ ದೀಕ್ಷಾ ಪುಟ್ಟಿ ಬಂದರೆ ಅವಳಿಗೆ ಆಕಾಶ ನಕ್ಷತ್ರ ಚಂದ್ರ ಎಲ್ಲ ತೋರಿಸಿ ಕಥೆ ಹೇಳ್ತಿದ್ದೆ. ಮೊದ ಮೊದಲು ಉತ್ಸಾಹ ತೋರಿಸದೇ ಕೀಟಲೆ ಮಾಡುತ್ತಿದ್ದವಳು ಆಮೇಲೆ ತುಂಬ ಕುತೂಹಲದಿಂದ ಕೇಳುತ್ತಿದ್ದಳು. ನಡು ನಡುವೆ ಮುದ್ದು ಬರುವಂತೆ ಮುಗ್ಧ ಪ್ರಶ್ನೆಗಳು. ಹಾಗೆಯೇ ಒಂದು ದಿನ ಆಕಾಶದತ್ತ ಮುಖ ಮಾಡಿದವಳೇ "ಹಾ . ನಿಮ್ಮನೆ ಚಂದ್ರ ಎಷ್ಟು ದೊಡ್ದಕ್ಕಿದ್ನೆ ! ನಮ್ಮನೆ ಚಂದ್ರ ಸಣ್ಣಕಿದ್ದ ! ಎಂತಕ್ಕೇನಾ !" ಅಂದಳು. ನಂಗೆ ನಗು ಮತ್ತು ಅವಳ ಮೇಲೆ ಮುದ್ದು ಎರಡೂ ಉಕ್ಕಿ ಬಂತು. ನನಗೆ ಮಕ್ಕಳು ಇಂಥ ಕುತೂಹಲಿ ಮತ್ತು ಮುಗ್ಧಭಾವದವರಾಗಿದ್ದಾಗಲೇ ಇಷ್ಟವಾಗೋದು. ಅವಳ ಪ್ರಶ್ನೆಗೆ ಅವಳಂತೆಯೇ ಮುಗ್ಧವಾದ ಉತ್ತರವನ್ನಿತ್ತು , ಅದಕ್ಕೆ ಅವಳು ಕೇಳಿದಇನ್ನಷ್ಟು ಮುಗ್ಧ ಪ್ರಶ್ನೆಗಳಿಗೆ ಮತ್ತೆ ಉತ್ತರ ಹುಡುಕುತ್ತ , ಅವಳು ಹೇಳಿದ ಚಂದಕ್ಕಿಮಾಮ - ಚಕ್ಕುಲಿಮಾಮನ ಕಥೆಯನ್ನು ಮನದಣಿಯೆ ಆನಂದಿಸಿದೆ.

ಮೊನ್ನೆ ಯಾಕೋ ವಿಮಾನದ ಕಥೆ ಮತ್ತು ಚಂದಕ್ಕಿಮಾಮ - ಚಕ್ಕುಲಿಮಾಮಾನ ಕಥೆ ಬಹಳ ನೆನಪಾಗುತ್ತಿತ್ತು, ನೆನಪು ಇಲ್ಲಿ ಅಕ್ಷರವಾಯ್ತು.

9 comments:

ಶಾಂತಲಾ ಭಂಡಿ (ಸನ್ನಿಧಿ) said...

ಶ್ಯಾಮಾ...

"ಈಗಿನ ಮಕ್ಕಳಿಗೆ ಇಂಥದ್ದು ಬೇ.. ಅನ್ನುವುದಕ್ಕಿಂತ ಮೊದಲೇ ತಂದುಕೊಟ್ಟುಬಿಡುತ್ತೇವೆ." ಈ ಸಾಲು ಓದ್ತಾ ನಗು ಬಂತು.:)
ಹ್ಮ್..ಅಲ್ಲವಾ? ಮಗು ‘ಬೇಕು’ ಅಂತ/‘ಬೇಡ’ವೆಂತ? ಅಂತಲೂ ಯೋಚಿಸದೆ ತಂದುಕೊಟ್ಟುಬಿಟ್ಟುರುತ್ತೇವೆ.
ಕೆಲವು ಮಕ್ಕಳು ಅದನ್ನೇ ಕಿತ್ತು ಮತ್ತೆ ಜೋಡಿಸಿ ಏನನ್ನೋ ಸಾಧಿಸಿದ್ದೇನೆಂಬ ತೃಪ್ತಿಭಾವ ತೋರಿದಾಗ ಅಯ್ಯೋ ಅಂತನಿಸುತ್ತೆ. ನಮ್ಮ ಹಾಗೆ ಉಳಿದ ಆಟಿಕೆಗಳ ಜೊತೆ ಪರಿಸರದಲ್ಲೇ ಸುಲುಭವಾಗಿ ದೊರೆತ ವಸ್ತುಗಳಿಂದ ಕೈಯಾರೆ ತಯಾರಿಸಿದ ಆಟಿಕೆಗಳನ್ನಾಡುವ ಖುಷಿ ಈ ಮಕ್ಕಳಿಗೆ ಲಭ್ಯವೇ? ಏನೇ ಮಾಡಿದರೂ ಪ್ರಾಕ್ಟಿಕಲ್/ಪ್ರಾಜೆಕ್ಟ್ ಎಂಬ ಹೆಸರನ್ನು ಹೊತ್ತು ಅಂಗಡಿಯ ಸರಕುಗಳನೇ ಮೊರಹೊಕ್ಕ ಪದಾರ್ಥಗಳಿಂದ ಸಿದ್ಧವಾಗ್ಬೇಕು.
ಇನ್ನು ಕಾಗಕ್ಕ ಗುಬ್ಬಕ್ಕ! ಬಿಟ್ಟೇಬಿಡೋಣ. ಮನುಷ್ಯನೇ ರೆಕ್ಕೆ ಕಟ್ಟಿಕೊಂಡು ಬೇಕಾಬಿಟ್ಟಿ ಹಾರಾಡತೊಡಗಿದ ಈ ಕಾಲದಲ್ಲಿ ಕಾಗಕ್ಕ ಗುಬ್ಬಕ್ಕರು ನೆನೆದವರ ಮನದ ಕಥೆಗಳೇ ಆಗ್ಬಿಟ್ಟಿವೆ.
ಸಧ್ಯಕ್ಕೆ ನೀವು ಹೇಳಿದ ಹಾಗೆ ಚಂದಮಾಮನ ತೋರಿಸ್ಬಹುದು.(ನಮಗೂ ಇಷ್ಟವೇ ಅಂತಿಟ್ಕೊಳಿ :)
ಚಂದದ ಲೇಖನ. ತುಂಬ ಇಷ್ಟವಾಯ್ತು.

ವಿ.ರಾ.ಹೆ. said...

ಈಗ ಮಕ್ಕಳಿಗೆ ಆಶ್ಚರ್ಯ ಎನ್ನುವುದಕ್ಕೆ ಏನೂ ಉಳಿದಿಲ್ಲವೇನೋ!

ನಿಜ, ಇನ್ನೂ ಮುಂದೆ ’ಆಶ್ಚರ್ಯ’ ಎಂದರೇನು ಅನ್ನುವಂಗೆ ಆದರೂ ಆಶ್ಚರ್ಯವಿಲ್ಲ !

ಸಿಂಧು sindhu said...

ಶ್ಯಾಮೂ,

ಒಳ್ಳೆಯ ಬರಹ ಕಣೇ.

ಆಶ್ಚರ್ಯದ ಬಗ್ಗೇನೇ ಆಶ್ಚರ್ಯ ಹುಟ್ಟಬಹುದು ವಿಕಾಸ ಹೇಳಿದಂಗೆ.

ನಂಗನ್ಸತ್ತೆ ಆಶ್ಚರ್ಯ ಅಪ್ಪ-ಅಮ್ಮಂಗೆ ಮತ್ತು ನೋಡೋವ್ರಿಗೆ ಮಾತ್ರ ಉಳಿಯತ್ತೆ ಅಂತ ಕಾಣತ್ತೆ. ಅದೂ ಇವ್ರಿಗೇನೂ ಆಶ್ಚರ್ಯವೇ ಆಗೋಲ್ವಲ್ಲ ಅನ್ನೋದ್ರ ಬಗ್ಗೆ.. :) ಕುತೂಹಲ ಮಕ್ಕಳ ಸಹಜಸ್ವಭಾವ. ನಮ್ಮ ಆತುರದಲ್ಲಿ ಅದನ್ನ ಮೆಟ್ಟಿ ಅವರನ್ನ ಮುಂದಕ್ಕೆ ಎಳ್ಕೊಂಡು ಹೋಗೋ ತಪ್ಪು ಮಾಡ್ತಿರೋದು ನಾವೆ.

ಪ್ರೀತಿಯಿಂದ
ಸಿಂಧು

ಸ್ಮಿತಾ said...

shyama , deeksha tumbane nenpadlu kane idella hodi.... Awlu keltidda prashnegalige uttara hudki helo ashtottige :)

Sikkidla :)

Miss those days very much :(

Sushrutha Dodderi said...

ನಾನು-ನನ್ನ ಗೆಳೆಯ ಹಳ್ಳಿಯಿಂದ ದಿಲ್ಲಿಗೆ ಬಂದಂತೆ ಮೊದಲ ಬಾರಿ ಬೆಂಗಳೂರಿಗೆ ಬಂದಿಳಿದ ದಿನ, ಮೆಜೆಸ್ಟಿಕ್ಕಿನಲ್ಲಿ ದಿಗಿಲಿನಿಂದ ಎಲ್ಲವನ್ನೂ ನೋಡುತ್ತಾ, ಪ್ಲಾಟ್‍ಫಾರ್ಮುಗಳನ್ನು ಹುಡುಕುತ್ತಾ ಓಡಾಡುತ್ತಿರಬೇಕಾದರೆ, ಆಕಾಶದಲ್ಲಿ -ಇಷ್ಟೇ ಹತ್ತಿರದಲ್ಲಿ- ವಿಮಾನವೊಂದು ಹೋಗುತ್ತಿರುವುದನ್ನು ಕಂಡು ನನ್ನ ಗೆಳೆಯ 'ಏಯ್, ವಿಮಾನ ನೋಡಲೇ!' ಅಂತ ಕೂಗಿಕೊಂಡದ್ದು, ನಾನೂ ಬೆರಗಾಗಿ ನೋಡಿದ್ದು, ಸುತ್ತ ನೆರೆದಿದ್ದ ಜನರೆಲ್ಲಾ 'ಇದ್ಯಾವ ಹಳ್ಳಿಮುಕ್ಕರಪ್ಪಾ' ಎಂಬಂತೆ ನಮ್ಮನ್ನೇ ನೋಡಿದ್ದು, ಅವಮಾನಗೊಂಡಂತೆ ನಾವು ತಲೆತಗ್ಗಿಸಿ ನಡೆದದ್ದು.... ನೆನಪಾಯ್ತು.

ನಾನೀಗ ತಲೆಯಿತ್ತಿ ವಿಮಾನ ನೋಡುವುದಿಲ್ಲ. ಮತ್ತೆ, ನನ್ನ ಆ ಗೆಳೆಯ ವಿಮಾನ ತಯಾರಿಕಾ ಸಂಸ್ಥೆ ಎಚ್‍.ಎ.ಎಲ್. ನಲ್ಲೇ ಕೆಲಸ ಮಾಡುತ್ತಿದ್ದಾನೆ!

Harisha - ಹರೀಶ said...

ಮಕ್ಕಳಿಗೆ ಏನು ಗೊತ್ತೋ ಅದನ್ನು ಬಿಟ್ಟು ಗೊತ್ತಿಲ್ಲದೆ ಇರೋ ವಿಷಯಗಳನ್ನು ಹೇಳಿದರೆ ಅವರ ಕುತೂಹಲವನ್ನು ಕೆರಳಿಸಬಹುದೇನೋ..

ಹಳ್ಳಿ ಮಕ್ಕಳಿಗೆ ವಿಮಾನ ಹೇಗೆ ಆಶ್ಚರ್ಯಕರ ಸಂಗತಿಯೋ ಹಾಗೆಯೇ ಪಟ್ಟಣಗಳಲ್ಲಿರುವ ಮಕ್ಕಳಿಗೆ ಒನಕೆ, ಕೆಂಡದ ಒಲೆಗಳೇ ವಿಚಿತ್ರವೆನಿಸುತ್ತವೆ. ಗುಡ್ಡ ಸುತ್ತಿ ನೇರಳೆ ಹಣ್ಣು, ಕೌಳಿ ಕಾಯಿ ಕಿತ್ತು ತಿನ್ನೋದು, ಪೇರಲೇ ಮರ ಹತ್ತೋದು ಇವೆಲ್ಲ ಬೆಂಗಳೂರಿನಲ್ಲಿ ಸಿಗುತ್ತದೆಯೇ?

Vijaya said...

Harish avaru heLirodu nija ...
nanna makkalige hande yalli neeru kaaysi snana maadtidvi anthano, illa TV nalli bhaanuvaara maathra adoo onde gante kaala disney nordu cartoon show bartittu anthano heLdre, sikkapatte aascharya aagutte :D :D :D :D.

ಶ್ಯಾಮಾ said...

ಶಾಂತಲಕ್ಕ,
ನೀನು ಹೇಳಿದ್ದು ಸರಿ.
"ನಮ್ಮ ಹಾಗೆ ಉಳಿದ ಆಟಿಕೆಗಳ ಜೊತೆ ಪರಿಸರದಲ್ಲೇ ಸುಲುಭವಾಗಿ ದೊರೆತ ವಸ್ತುಗಳಿಂದ ಕೈಯಾರೆ ತಯಾರಿಸಿದ ಆಟಿಕೆಗಳನ್ನಾಡುವ ಖುಷಿ ಈ ಮಕ್ಕಳಿಗೆ ಲಭ್ಯವೇ?"
ಬಹುಷಃ ಒಂದು ವೇಳೆ ಲಭ್ಯವಿದ್ರೂ ಅದೆಲ್ಲ ಈಗಿನವರಿಗೆ ರುಚಿಸುವುದಿಲ್ಲವೇನೋ, ಎಲ್ಲರೂ ಹಾಗೆ ಇಲ್ದಿದ್ರೂ ಬಹಪಾಲು ಮಕ್ಕಳು ಹಾಗೆಯೇ .
ನಂಗೆ ನನ್ನ ಅಜ್ಜನ ಮನೆಯಲ್ಲಿದ್ದಿದ್ದು ಒಂದು ಮರದ ಬಸವಣ್ಣನ ಆಟಿಕೆ ನೆನಪಾತು. ಅದು ನನ್ನ ಅಜ್ಜನ ಚಿಕ್ಕಮ್ಮ ಸಣ್ಣವಳಿದ್ದಾಗ ಮಾಡಿದ್ದಡ, ಅಷ್ಟು ಹಳೆಯದಾದ್ರು ನಾವೆಲ್ಲ ಅದಕ್ಕೆ ಒಂದು ದಾರ ಕಟ್ಟಿ ಎಳೆಯುತ್ತಿದ್ದಿದ್ದು ಈಗಲೂ ನಂಗೆ ನೆನಪಿದ್ದು. ಈಗ ಅದು ಯಾರಿಗೂ ಬೇಡವಾಗಿ ಅಟ್ಟ ಸೇರಿದ್ದು.
ಧನ್ಯವಾದ ಪ್ರತಿಕ್ರಿಯೆಗೆ.

ವಿಕಾಸ್ ,
ಅದೂ ನಿಜ,
ಧನ್ಯವಾದ ಪ್ರತಿಕ್ರಿಯೆಗೆ.

ಸಿಂಧು ಅಕ್ಕ,
ಹ್ಮ್ .. "ಕುತೂಹಲ ಮಕ್ಕಳ ಸಹಜಸ್ವಭಾವ. ನಮ್ಮ ಆತುರದಲ್ಲಿ ಅದನ್ನ ಮೆಟ್ಟಿ ಅವರನ್ನ ಮುಂದಕ್ಕೆ ಎಳ್ಕೊಂಡು ಹೋಗೋ ತಪ್ಪು ಮಾಡ್ತಿರೋದು ನಾವೆ."
ಮಕ್ಕಳ ಸಹಜ ಸ್ವಭಾವ , ಅವರಲ್ಲಿ ಕುತೂಹಲ ಹುಟ್ಟಿಸುವುದು, ಪ್ರಕೃತಿಯೊಂದಿಗೆ ಸಹಜವಾಗಿ ಬೆರೆಯುವುದು ಇವೆಲ್ಲದೂ ಮುಖ್ಯ ಅಂತ ಎಷ್ಟೋ ಜನ ಪಾಲಕರಿಗೆ ಅನ್ನಿಸುವುದೇ ಇಲ್ಲ ಕೇವಲ ಶಾಲೆಯಲ್ಲಿನ ಕಲಿಕೆ, ಎಲ್ಲದರಲ್ಲೂ ಮೊದಲಿಗರಾಗುವುದು, ಕಂಪ್ಯೂಟರ್ ಮತ್ತೊಂದು ಮಗದೊಂದುಗಳೇ ಎಲ್ಲವೂ ಆಗಿರುವಾಗ .

ಧನ್ಯವಾದ ಪ್ರತಿಕ್ರಿಯೆಗೆ.

ಸ್ಮಿತಾ,
ಹ್ಮ್ ಇದನ್ನು ಬರೆಯುವಾಗ ನಂಗೆ ಅವಳೇ ಕಣ್ಮುಂದೆ ಬರ್ತಾ ಇದ್ಲು , ಅವ್ಳು ಮಾತಾಡಿದ್ ಹಾಗೇ ಕೇಳ್ತಾ ಇತ್ತು .

ಸಿಕ್ಕಿಲ್ಲ ಇತ್ತೀಚಿಗೆ. ಸುಮಾರು ಒಂದುವರೆ ತಿಂಗಳ ಹಿಂದೆ ಸಿಕ್ಕಿದ್ಳು. ನನ್ನ ಕೈ ಹಿಡ್ಕೊಂಡು ದೇವಾಸ್ಥಾನದ ತುಂಬ ಓಡಾಡಿದಳು ಪಟ ಪಟನೆ ಮಾತಾಡ್ತಾ :)

Even I miss those days very much :(

ಶ್ಯಾಮಾ said...

ಸುಶ್ರುತ,
ನಾನು ಈಗಲೂ ನೋಡ್ತಿ :) , ನನ್ನ ಬಾಲ್ಯವನ್ನು ನೆನಪಿಸುವ ಕೆಲವು ವಿಷಯಗಳು ನಂಗೆ ಹಾಗೆಯೇ ಇಷ್ಟ .
ಧನ್ಯವಾದಗಳು ಪ್ರತಿಕ್ರಿಯೆಗೆ

ಹರೀಶ,
"ಮಕ್ಕಳಿಗೆ ಏನು ಗೊತ್ತೋ ಅದನ್ನು ಬಿಟ್ಟು ಗೊತ್ತಿಲ್ಲದೆ ಇರೋ ವಿಷಯಗಳನ್ನು ಹೇಳಿದರೆ ಅವರ ಕುತೂಹಲವನ್ನು ಕೆರಳಿಸಬಹುದೇನೋ" ಇರಬಹುದು.
ಆದರೆ ಈಗಿನ ಮಕ್ಕಳ ವಿಷಯದಲ್ಲಿ ಅದು ಭಲೇ ಕಷ್ಟ.
ಬಹುಪಾಲು ಮಕ್ಕಳಿಗೆ ಅವೆಲ್ಲದರ ಬಗ್ಗೆ ಹೇಳಿದಾಗ ಕುತೂಹಲ ಆಶ್ಚರ್ಯಕ್ಕಿಂತ ಉದಾಸೀನ ಭಾವನೆ ಬರುವುದೇ ಹೆಚ್ಚು. ಅದೆಲ್ಲ ಹಳೆಯ ಕಾಲದ್ದು ಈಗಿನ sophisticated ವಸ್ತುಗಳ ಎದುರು ಅವೆಲ್ಲ ಏನು ಅನ್ನೋ ಮನೋಭಾವನೆಯೇ ಜಾಸ್ತಿ .
ಇನ್ನು "ಅಯ್ಯೋ ನನ್ನ ಮಕ್ಳಿಗೆ ಗುಡ್ಡ ಗಿಡ್ಡ ಸುತ್ತಿ ಅಭ್ಯಾಸ ಇಲ್ಲೆ ಅಲ್ಲೆಲ್ಲಾ ಬಿಸ್ಲಲ್ಲಿ ಸುತ್ತಕ್ಕೆ ಕರ್ಕಂಡು ಹೋಗಡಿ" ಅಂತ ಹೇಳೋ ಅಪ್ಪ ಅಮ್ಮಂದಿರ ನಡುವೆ ಪಾಪ ಆ ಮಕ್ಳಿಗಾದ್ರು ಎಲ್ಲಿ ಗೊತ್ತಾಗವು ನೇರಳೆ ಹಣ್ಣು, ಕೌಳಿ ಕಾಯಿ ಕಿತ್ತು ತಿನ್ನೋದು, ಪೇರಲೇ ಮರ ಹತ್ತೋದು ಇವೆಲ್ಲ.
ಧನ್ಯವಾದಗಳು ಪ್ರತಿಕ್ರಿಯೆಗೆ.

ವಿಜಯಾ,
ನಿಮ್ಮ ಮಕ್ಕಳಲ್ಲಿ ಕುತೂಹಲ, ಆಶ್ಚರ್ಯ ಪಡುವ ಸ್ವಭಾವ ಇನ್ನೂ ಇದೆ, ಖುಷಿ. :)
ಮಕ್ಕಳನ್ನು ಹೇಗೆ ಬೆಳೆಸುತ್ತೇವೆ ಎನ್ನುವುದರ ಮೇಲೂ ಇವೆಲ್ಲ ಅವಲಂಬಿತವಾಗಿರಬಹುದು ಅಲ್ಲವೇ ?
ಧನ್ಯವಾದಗಳು ಪ್ರತಿಕ್ರಿಯೆಗೆ.